• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಪಾಲಭಾತಿ : ಮೆದುಳಿಗೆ ಹೊಳಪು, ಬುದ್ದಿಗೆ ಚುರುಕು

By Staff
|


ಕಮ್ಮಾರನು ತನ್ನ ಲೋಹವನ್ನು ಕಾಯಿಸಲು ತಿದಿಯಿಂದ (ಚರ್ಮದ ಉಪಕರಣದಿಂದ) ಹೇಗೆ ಹವೆಯನ್ನು ತುಂಬುತ್ತಾನೋ ಹಾಗೆ ವೇಗವಾಗಿ ಶ್ವಾಸವನ್ನು ಬಿಡುವದು ಕಪಾಲಭಾತಿ. ಈ ರೀತಿಯ ಕ್ರಿಯೆಯಿಂದ ನಮ್ಮ ಮೆದುಳಿನ ಮುಂಭಾಗ ಹೊಳೆಯುತ್ತದೆ. ಬುದ್ಧಿಶಕ್ತಿ ಪ್ರಖರಗೊಳ್ಳುತ್ತದೆ. ‘ಯೋಗವಿದ್ದಲ್ಲಿ ರೋಗವಿಲ್ಲ’ ಮಾಲಿಕೆಯ 8ನೇ ಭಾಗಕ್ಕೆ ಸ್ವಾಗತ.

  • ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
    jeevi65@gmail.com
GV Kulkarni showing how to do Kapalabhati Pranayamaಆರನೆಯ ಮತ್ತು ಮಹತ್ವದ ಶುದ್ಧಿಕ್ರಿಯೆ ಅಂದರೆ ‘ಕಪಾಲಭಾತಿ’. ಮುಖ್ಯವಾದ ಶುದ್ಧಿಕ್ರಿಯೆಗಳನ್ನು, ವಿಶೇಷವಾಗಿ ಕಪಾಲಭಾತಿಯನ್ನು, ನಾವು ಹಠಯೋಗಿ ನಿಕಂ ಗುರೂಜಿಯವರ ಮಾರ್ಗದರ್ಶನದಲ್ಲಿ, ‘ಅಂಬಿಕಾ ಯೋಗಕುಟೀರ’ದಲ್ಲಿ ಕಲಿತಿದ್ದೇವೆ. ಸೂರ್ಯನಾಡಿಯನ್ನು ಮುಚ್ಚಿ ಚಂದ್ರನಾಡಿಯಿಂದ(ಎಡ ಮೂಗಿನ ಹೊರಳೆಯಿಂದ)ಜೋರಾಗಿ ಉಸಿರನ್ನು ಬಿಟ್ಟು ಅದೇ ಹೊರಳೆಯಿಂದ ಉಸಿರು 54 ಸಲ ತೆಗೆದುಕೊಳ್ಳುತ್ತೇವೆ. ಹಾಗೆಯೇ ಚಂದ್ರನಾಡಿ ಮುಚ್ಚಿ ಸೂರ್ಯನಾಡಿಯಿಂದ (ಮೂಗಿನ ಬಲ ಹೊರಳೆಯಿಂದ) ಇದೇ ಕ್ರಿಯೆಯನ್ನು 54 ಸಲ ಮಾಡುತ್ತೇವೆ. ಎರಡೂ ಹೊರಳೆಗಳಿಂದ 108 ಸಲ ಮಾಡುತ್ತೇವೆ.

ಕಮ್ಮಾರರು ಕಬ್ಬಿಣ ಕಾಸುವಾಗ ಬೆಂಕಿಯನ್ನು ಪ್ರಜ್ವಲಿಸಲು ಬಳಸುವ ತಿದಿಯಂತೆ (ಚರ್ಮದ ಉಪಕರಣದಂತೆ) ನಮ್ಮ ಕ್ರಿಯೆ ಇರುತ್ತದೆ. ಉಸಿರು ಹೊರಗೆ ಹಾಕುವಾಗ ಬಲದ ಪ್ರಯೋಗವಿರುತ್ತದೆ, ಉಸಿರು ಒಳಗೆ ಎಳೆಯುವಾಗ ಬಹಳ ಸುಲಭವಾಗಿ ಆಯಾಸವಿಲ್ಲದ ಗತಿ ಇರುತ್ತದೆ. ಉಸಿರು ನೇರವಾಗಿ ಹೊಟ್ಟೆಗೆ ಹೋಗುತ್ತದೆ. ಇದರಿಂದ ಹೊಟ್ಟೆಗೆ ವ್ಯಾಯಾಮವಾಗುತ್ತದೆ. ಪ್ರಾಣಯಾಮ ಮಾಡುವ ಮೊದಲು ಇದನ್ನು ಕಡ್ಡಾಯವಾಗಿ ಮಾಡಬೇಕು ಎಂದು ನಮ್ಮ ಗುರುಗಳು ಹೇಳುತ್ತಿದ್ದರು.

ಈ ದಿನಗಳಲ್ಲಿ ಸ್ವಾಮಿ ರಾಮದೇವ ಅವರು ಕಪಾಲಭಾತಿಯನ್ನು ಹೆಚ್ಚು ಪ್ರಚುರಗೊಳಿಸಿದ್ದಾರೆ. ಜನಸಾಮಾನ್ಯರಿಗಾಗಿ ಅವರು ರೂಪಿಸಿದ ಏಳು ಪ್ರಾಣಾಯಮಾಮಗಳಲ್ಲಿ ಕಪಾಲಭಾತಿಯನ್ನೂ ಪ್ರಾಣಾಯಾಮವೆಂದೇ ಮಾಡಿಸುತ್ತಾರೆ. ಅವರು ಎರಡೂ ಮೂಗಿನ ಹೊರಳೆಗಳಿಂದ 500 ರಿಂದ 2000 ಕ್ಕೂ ಹೆಚ್ಚು ಸಲ ಮಾಡಿಸುತ್ತಾರೆ. ಇದರಿಂದ ಹೊಟ್ಟೆ, ಕರುಳು, ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳಿಂದ ಉಪಶಮನ ದೊರೆಯುತ್ತದೆ ಎನ್ನುತ್ತಾರೆ. ಇದರಿಂದ ಸಾಧಕರಿಗೆ ಬಹಳ ಲಾಭವಾಗಿದೆ.

ಆಯುರ್ವೇದದ ಪ್ರಕಾರ ಮನುಷ್ಯ ಶರೀರದಲ್ಲಿ 3 ರೀತಿಯ ದೋಷಗಳು ಇರುತ್ತವೆ. ಅವು ವಾತ ಪಿತ್ತ ಮತ್ತು ಕಫ. (‘‘ವಾತ ಹೆಚ್ಚಾಗಿದ್ದರೆ ಕೊಬ್ಬು ಮಬ್ಬು । ಪಿತ್ತ ಪ್ರಬಲವಿದ್ದರೆ ಕೋಪ ತಾಪ । ಕಫ ಅಧಿಕವಿದ್ದರೆ ಕೆಮ್ಮು ದಮ್ಮು’’ -‘ಜೀವಿ’, ‘‘ದಶಪದಿ’’ ಪು.26.) ಇವು (ವಾತ-ಪಿತ್ತ-ಕಫ) ಇರಬಾರದು ಎಂದೇನಿಲ್ಲ. ಹೆಚ್ಚಾದರೆ ರೋಗದ ಆವಿರ್ಭಾವವಾಗುತ್ತದೆ. ಇವು ಸಂತುಲಿತ ಪ್ರಮಾಣದಲ್ಲಿ ಇರಬೇಕು. ಪ್ರಕಾಂಡ ಆಯುರ್ವೇದ ಪಂಡಿತ ಬಾಲಾಜಿ ತಾಂಬೆಯವರು ಲೋಣಾವಳಾದ ಬಳಿಯಿರುವ ತಮ್ಮ ಆಯುರ್ವೇದ ಕೇಂದ್ರಕ್ಕೆ ‘ಆತ್ಮಸಂತುಲನಗ್ರಾಮ’ ಎಂದು ಹೆಸರಿಟ್ಟಿದ್ದರ ಔಚಿತ್ಯವನ್ನು ಇಲ್ಲಿ ನೆನೆಯಬಹುದು. ಪಿತ್ತದ ವಿಕಾರಗಳಿಗೆ ಕಪಾಲಭಾತಿ ರಾಮಬಾಣದಂತೆ ಕೆಲಸ ಮಾಡುತ್ತದೆ ಎನ್ನಲಾಗುತ್ತದೆ.

‘‘ವಾತಕ್ರಮೇಣ ವ್ಯುತ್ಕೃಮೇಣ ಶೀತ್ಕೃಮೇಣ ವಿಶೇಷತಃ ।
ಬಾಲಭಾತಿಂ ತ್ರಿಧಾಕುರ್ಯಾತ್ಕಫದೋಷಂ ನಿವಾರಯೇತ್‌ ।।
(ಘೕರಂಡ ಸಂಹಿತಾ-55)

ಕಪಾಲಭಾತಿಯಲ್ಲಿ ಮೂರು ಪ್ರಕಾರಗಳ ಉಲ್ಲೇಖ ಇಲ್ಲಿ ಬಂದಿದೆ.

1) ವಾತಕ್ರಮ ಕಪಾಲಭಾತಿ,
2) ವ್ಯುತ್ಕೃಮ ಕಪಾಲಭಾತಿ,
3) ಶೀತ್ಕೃಮ ಕಪಾಲಭಾತಿ.

ಇದರ ಬಗ್ಗೆ ವ್ಯಾಖ್ಯಾನಿಸುತ್ತ ಸ್ವಾಮಿ ನಿರಂಜನಾನಂದ ಸರಸ್ವತಿಯವರು, ‘ಕಪಾಲಭಾತಿ ಕ್ರಿಯೆ ವಾಸ್ತವವಾಗಿ ಪ್ರಾಣಯಾಮದ ಕ್ರಿಯೆಯಾಗಿದೆ ಮತ್ತು ಈ ಕ್ರಿಯೆಯನ್ನು ಪ್ರಾಣಾಯಾಮದ ಸಂದರ್ಭದಲ್ಲಿಯೇ ತಿಳಿಯುವುದು ಅವಶ್ಯ’ ಎನ್ನುತ್ತಾರೆ. ಪ್ರಾಣಯಾಮ ಮಾಡುವ ಮೊದಲು ಜಲನೇತಿ ಹಾಗೂ ಕಪಾಲಭಾತಿ ಮಾಡುವುದು ಅವಶ್ಯವೆಂದು ನಮ್ಮ ಗುರುಗಳು ಹೇಳುತ್ತಿದ್ದರು.

ಘೕರಂಡ ಸಂಹಿತಾದಲ್ಲಿರುವ ವಿವರಗಳನ್ನು ಓದಿದ ಮೇಲೆ ಇದರ ಮಹತ್ವದ ಹೆಚ್ಚಿನ ಅರಿವು ಉಂಟಾಯಿತು. ಒಂದು ಮಾತು ನಿಜ ಪ್ರಾಣಾಯಾಮದ ಬುನಾದಿ ಕಪಾಲಭಾತಿ ಕ್ರಿಯೆಯಲ್ಲಿದೆ. ಯೋಗಾಸನ ಮತ್ತು ಪ್ರಾಣಾಯಾಮ ಮಾಡುವ ಮೊದಲು ಶುದ್ಧಿಕ್ರಿಯೆ ಅರ್ಥಾತ್‌ ‘ಷಟ್ಕರ್ಮ’ದ ಪ್ರಯೋಗ ಅವಶ್ಯ ಮಾಡಬೇಕು. ಇದರಿಂದ ಶರೀರ ಶುದ್ಧವಾಗುತ್ತದೆ, ಜೊತೆಗೆ ಮಾನಸಿಕ ಏಕಾಗ್ರತೆಯೂ ಪ್ರಾಪ್ತವಾಗುತ್ತದೆ. ಪ್ರಾಣಾಯಾಮದಲ್ಲಿಯೂ ಅನೇಕ ಪ್ರಕಾರಗಳಿವೆ. ಇವುಗಳನ್ನು ವಿವರಿಸುವ ಶಾಖೆಗಳೂ ಇವೆ. ಕೆಲವರು ಪೂರಕಕ್ಕೆ ಮಹತ್ವ ಕೊಟ್ಟರೆ, ಕೆಲವರು ರೇಚಕಕ್ಕೆ ಮಹತ್ವ ಕೊಡುತ್ತಾರೆ. ಇನ್ನು ಕೆಲವರು ಕುಂಭಕಕ್ಕೆ ಮಹತ್ವ ಕೊಡುತ್ತಾರೆ.

ಪ್ರಾಣಾಯಮ ಎಂದರೆ ಉಸಿರಾಟದ ನಿಯಂತ್ರಣ. ‘ಪೂರಕ’ ಎಂದರೆ ಉಸಿರೆಳೆಯುವುದು, ‘ರೇಚಕ’ ಎಂದರೆ ಉಸಿರು ಬಿಡುವುದು, ‘ಕುಂಭಕ’ ಎಂದರೆ ಉಸಿರನ್ನು ಹಿಡಿದಿಡುವುದು. ಕುಂಭಕದಲ್ಲಿ ಎರಡು ಪ್ರಕಾರ. ‘ಅಂತರ್‌ ಕುಂಭಕ’ (ಉಸಿರು ಒಳಗೆ ಎಳೆದಾಗ ಅದರ ಬಂಧನ) ಮತ್ತು ‘ಬಾಹ್ಯ ಕುಂಭಕ’ (ಉಸಿರು ಹೊರಗೆ ಬಿಟ್ಟಾಗ ಅದರ ಬಂಧನ). ಕುಂಭಕ ಸಹಿತ ಪ್ರಾಣಾಯಮ ಮಾಡಿದರೆ ಹಲವಾರು ಸಿದ್ಧಿಗಳಿವೆ. ಆದರೆ ಅದರಲ್ಲಿ ಏನಾದರೂ ತಪ್ಪಾದರೆ ವಿಪರೀತ ಪರಿಣಾಮಗಳು ಸಂಭವಿಸುತ್ತವೆ.

ನಾವು ಪ್ರಾಣಾಯಾಮ ಕಲಿಯುವಾಗ, ನಮ್ಮ ಗುರುಗಳು, ಎಲ್ಲರಿಗೂ ಪ್ರಾಣಾಯಾಮ ಹೇಳಿಕೊಡುತ್ತಿರಲಿಲ್ಲ. ಅದಕ್ಕಾಗಿ ಕೆಲವರನ್ನೇ ಆಯ್ಕೆ ಮಾಡಲಾಗುತ್ತಿತ್ತು. ಆಸನಗಳ ಅಭ್ಯಾಸದ ನಂತರ ಒಂದೆರಡು ವರುಷ ತಡೆಯಬೇಕಾಗುತ್ತಿತ್ತು. ಆದರೆ ಇಂದು ಸ್ವಾಮಿ ರಾಮದೇವ ಅವರು ಮೊದಲನೆಯ ದಿನವೇ ಪ್ರಾಣಯಾಮ ಹೇಳಿಕೊಡಲು ಪ್ರಾರಂಭಿಸುತ್ತಾರೆ, ಮಕ್ಕಳಿಗೆ ಕೂಡಾ ಕಲಿಸುತ್ತಾರೆ. ಇದಕ್ಕೆ ಕಾರಣ ಅವರು (ಸಾಮಾನ್ಯ ಸಾಧಕರಿಗಾಗಿ) ಪ್ರಾಣಾಯಾಮವನ್ನು ಸುಲಭಗೊಳಿಸಿದ್ದಾರೆ. ಕುಂಭಕವನ್ನು ತೆಗೆದುಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more