• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜ್ಯೋತಿಷ್ಯಕ್ಕೆ ಘನತೆ ತಂದ ಎನ್‌.ಕೆ ಜೋಗಳೇಕರ್‌ಗೀಗ 75!

By Staff
|

ಜ್ಯೋತಿಷ್ಯಕ್ಕೆ ಘನತೆ ತಂದ ಎನ್‌.ಕೆ ಜೋಗಳೇಕರ್‌ಗೀಗ 75!

ಕರ್ನಾಟಕದ ಅತ್ಯಂತ ಜನಪ್ರಿಯ, ಅಭಿಜಾತ ಜ್ಯೋತಿಷಿ ನಾಗನಾಥ ಕಲ್ಲೋಪಂತ ಜೋಗಳೇಕರರಿಗೆ ಈಗ 75ರ ಸಂಭ್ರಮ (ಜನನ -ಜೂ.10, 1931). ಇಲ್ಲಿಯವರೆಗೆ 24 ಮಹತ್ವದ ಗ್ರಂಥ ರಚಿಸಿದ್ದಾರೆ. ಹಲವಾರು ಪ್ರಶಸ್ತಿಗಳನ್ನು, ಪುರಸ್ಕಾರಗಳನ್ನು ಪಡೆದಿದ್ದಾರೆ. ಬೆಂಗಳೂರಲ್ಲಿ ಇತ್ತೀಚೆಗೆ ನಡೆದ (ಮೇ.5) ‘ಕರ್ನಾಟಕ ರಾಜ್ಯ ಜ್ಯೋತಿಷ್ಯ ಮಹಾಸಮ್ಮೇಳನ’ದ ಅಧ್ಯಕ್ಷತೆಯ ಅಗ್ರಪೂಜೆ ಇವರಿಗೆ ಸಂದಿತ್ತು. ಇದು ಅವರ ಜೀವನದ ಮಹತ್ಸಾಧನೆಯನ್ನು ಗುರುತಿಸಿದ ಘನ ಗೌರವವೆಂದರೆ ಅತಿಶಯೋಕ್ತಿಯಲ್ಲ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
ಧಾರವಾಡವು ಹಳೆಯ ತಲೆಮಾರಿನ ಶಬ್ದಬ್ರಹ್ಮ ವರಕವಿ ಬೇಂದ್ರೆಯವರಿಗೆ ಮತ್ತು ನಾದಬ್ರಹ್ಮ ಪಂ. ಮಲ್ಲಿಕಾರ್ಜುನ ಮನ್ಸೂರರಿಗೆ ಕರ್ಮ ಭೂಮಿಯಾಗಿದ್ದಂತೆ ಇಂದು ಶ್ರಮಜೀವಿಗಳ ಮುಖಂಡ ಡಾ। ಕೆ.ಎಸ್‌.ಶರ್ಮಾ ಹಾಗೂ ಪ್ರಕಾಂಡ ಜ್ಯೋತಿಷಿ ಎನ್‌.ಕೆ ಜೋಗಳೇಕರ್‌ ಇಂಥವರಿಗೂ ಕರ್ಮಭೂಮಿಯಾಗಿದೆ. ಒಬ್ಬರ ಮಾತೃಭಾಷೆ ತೆಲುಗು ಆಗಿದ್ದರೆ ಇನ್ನೊಬ್ಬರದು ಮರಾಠಿ. ಆದರೆ ಇವರಿಬ್ಬರ ಮನದ ಭಾಷೆ ಕನ್ನಡವಾಗಿದೆ. ಜನರ ಸೇವೆಯೇ ಇವರ ಜೀವನದ ಗುರಿಯಾಗಿದೆ.

ಜೋಗಳೇಕರರದು ಬಹುಮುಖದ ಪ್ರತಿಭೆ. ಸ್ವಾಭಿಮಾನಿಗಳಾಗಿ, ಸ್ವಯಂಸೇವಕರಾಗಿ ಬೆಳೆದರು. ಬಾಲ್ಯದಿಂದಲೂ ದೇಶಾಭಿಮಾನಿಗಳು. ಇಂದಿಗೂ ಖಾದಿ ವಸ್ತ್ರ ತೊಡುತ್ತಾರೆ. ಜೀವನದಲ್ಲಿ ಶಿಸ್ತು ಪಾಲಿಸುತ್ತಾರೆ. ಅವರ ದಿನಚರಿ ವೇಳಾಪತ್ರಿಕೆಯನ್ನು ಅನುಸರಿಸುತ್ತದೆ. ಅವರಷ್ಟು ಕಠೋರವಾಗಿ ಶಿಸ್ತು ಪಾಲಿಸುವವರು ಈ ಕಾಲದಲ್ಲಿ ವಿರಳ ಎಂದೇ ಹೇಳಬೇಕು.

N.K.Joglekarಜ್ಯೋತಿಷ್ಯವಿದ್ಯೆ ಇವರ ವಂಶಪಂಪರೆಯಲ್ಲಿ ಹರಿದು ಬಂದ ವಿದ್ಯೆ. ದುಃಖಿತರ ಸೇವೆಗಾಗಿಯೇ ತಮ್ಮ ವಿದ್ಯೆ ಬಳಸಿದವರಿವರು. ಈ ವಿದ್ಯೆಯನ್ನು ಎಂದೂ ವ್ಯಾಪಾರದಂತೆ ಬಳಸಿದವರಲ್ಲ. ಬಾಲ ಜ್ಯೋತಿಷಿಯಾಗಿ ಕೋ. ಚೆನ್ನಬಸಪ್ಪನವರು (1950ರ ದಶಕದಲ್ಲಿ) ಬಳ್ಳಾರಿಯಿಂದ ಹೊರಡಿಸುತ್ತಿದ್ದ ‘ರೈತ’ ಪತ್ರಿಕೆಯಲ್ಲೇ ಅಂಕಣ ಲೇಖನ ಇವರು ಪ್ರಾರಂಭಿಸಿದ್ದರು.

ಕರ್ನಾಟಕ ಕಾಲೇಜು ಸೇರಿದಾಗ ಇವರ ಇಂಗ್ಲಿಷ್‌ ಪ್ರೊಫೆಸರರು (ಅರ್ಮಾಂಡೋ ಮೆನೆಜಿಸ್‌) ಶೇಕ್ಸಪಿಯರನ ಹ್ಯಾಮ್ಲೆಟ್‌ ಕಲಿಸುವಾಗ ದೊರೆ ಹ್ಯಾಮ್ಲೆಟ್‌ನ ಭೂತದ ಬಗ್ಗೆ ಮಾತಾಡುತ್ತ, ಇದೆಲ್ಲ ಸುಳ್ಳು; ಭೂತ ಯಾರಾದರೂ ಕಂಡಿದ್ದಾರೆಯೇ? ಎಂದಾಗ ವಿದ್ಯಾರ್ಥಿಯಾಬ್ಬ ಎದ್ದು ನಿಂತು, ‘ನಾನು ಕಂಡಿದ್ದೇನೆ. ನಿಮಗೆ ನೋಡಬೇಕೇ? ನನ್ನೊಡನೆ ಶ್ಮಶಾನಕ್ಕೆ ಬನ್ನಿ’ ಎಂದಿದ್ದ. ಅವನೇ ಬಾಲಜ್ಯೋತಿಷಿ ಕುಮಾರ ನಾಗನಾಥ.

ಸಂಗೀತಗಾರರ ಜಾತಕ ಅಭ್ಯಾಸಮಾಡುತ್ತ ಶಾಸ್ತ್ರೀಯ ಸಂಗೀತವನ್ನೇ ಅಭ್ಯಾಸ ಮಾಡಿದ ಸಾಹಸಿ ಇವರು. ಆರೋಗ್ಯ ಜ್ಯೋತಿಷ್ಯ ಪುಸ್ತಕ ಬರೆಯಲು ಐದು ವರ್ಷ ಆಯುರ್ವೇದ ಕಾಲೇಜು ಸೇರಿದರು. ಅತ್ಯಧಿಕ ಸಂಖ್ಯೆಯಲ್ಲಿ ಕನ್ನಡದಲ್ಲಿ ಪುಸ್ತಕ ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಯಾಚಿತ ವೃತ್ತಿ, ಅಖಂಡ ಬ್ರಹ್ಮಚರ್ಯ, ಮಂತ್ರಸಿದ್ಧಿ, ವಾಕ್‌ಸಿದ್ಧಿ ಇವು ಇವರ ಸಾತ್ವಿಕ ಜೀವನಕ್ಕೆ ಇರುವ ಚತುರ್ಮುಖಗಳು. ಇವರ ಮಾರ್ಗದರ್ಶನದಿಂದ ಯಶಸ್ಸು ಪಡೆದ ಒಬ್ಬ ಉದ್ಯಮಿ ಇವರ ಹುಟ್ಟು ಹಬ್ಬದ ದಿನ ಇವರಿಗೆ ಒಂದು ಹೊಸ ಕಾರನ್ನು ಕಾಣಿಕೆಯಾಗಿ ಕೊಡಲು ಬಂದಾಗ, ‘ಇದನ್ನು ತೆಗೆದುಕೊಂಡು ನಾನೇನು ಮಾಡಲಿ? ನನಗಿದು ಬೇಡ!’ ಎಂದಿದ್ದರಿವರು.

ಈ ಇಳಿವಯಸ್ಸಿನಲ್ಲೂ ಅವರು ‘ಗೃಹ ದರ್ಶನ’ವೆಂಬ ಬೃಹತ್‌ ಗ್ರಂಥದ ರಚನೆಯಲ್ಲಿ ತೊಡಗಿದ್ದಾರೆ. ಅದರ ಮೊದಲನೆಯ ಸಂಪುಟ ಸೆಪ್ಟೆಂಬರ್‌ ಮೂವತ್ತರಂದು ಬಿಡುಗಡೆಗೊಳ್ಳಲಿದೆ. ಕಳೆದ ನೂರು ವರ್ಷಗಳಲ್ಲಿ ನಾಲ್ಕು, ಐದು, ಆರು, ಏಳು ಮತ್ತು ಎಂಟು ಗ್ರಹಗಳು ಒಂದೇ ಮನೆಯಲ್ಲಿ ಯಾವಾಗ ಬಂದವು ಎಂಬುದನ್ನು ಸಂಶೋಧಿಸಿ ಅವುಗಳು ಜನಜೀವನದ ಮೇಲೆ ಮಾಡಿದ ಪರಿಣಾಮದ ಬಗ್ಗೆ ಬರೆಯುತ್ತಿದ್ದಾರೆ. ಇದು ಅವರ ಮೇರು ಕೃತಿಯಾಗಲಿದೆ.

ಬೆಂಗಳೂರಲ್ಲಿ ನಡೆದ ‘ಕರ್ನಾಟಕ ರಾಜ್ಯ ಜ್ಯೋತಿಷ್ಯ ಮಹಾ ಸಮ್ಮೇಳನ’ದ ಇವರ ಅಧ್ಯಕ್ಷೀಯ ಭಾಷಣ ಬಹಳೇ ಮಹತ್ವಪೂರ್ಣವಾಗಿದೆ. ಅದರ ವಿಷಯ: ‘ಜ್ಯೋತಿಷ್ಯ ಶಾಸ್ತ್ರ: ಅಂದು-ಇಂದು-ಮುಂದು’. ಅದರಲ್ಲಿಯ ಕೆಲವು ಆಯ್ದ ವಿಚಾರಗಳನ್ನು ಇಲ್ಲಿ ನಿರೂಪಿಸುವೆ.

ಈ ಭಾಷಣದಲ್ಲಿ ಮೂರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿ, ಅವುಗಳ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ. 1) ಜ್ಯೋತಿಷ್ಯಶಾಸ್ತ್ರದ ದರ್ಶನ, 2) ಜ್ಯೋತಿಷ್ಯವು ಶಾಸ್ತ್ರವೇ ಎಂದು ಎತ್ತಲಾದ ಆಕ್ಷೇಪಣೆಗಳಿಗೆ ಉತ್ತರ, 3) ಜ್ಯೋತಿಷ್ಯಶಾಸ್ತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸ್ತ್ರಜ್ಞರು ನಿರ್ವಹಿಸಬೇಕಾದ ಕರ್ತವ್ಯ.

ಜ್ಯೋತಿಷ್ಯ ಶಾಸ್ತ್ರದ ಉಗಮದ ಬಗ್ಗೆ ಹೇಳುತ್ತ, ‘ಗ್ರೋಲಿಯರ್‌ ಇಂಟರ್‌ನ್ಯಾಶನಲ್‌ ಎನ್‌ಸೈಕ್ಲೋಪಿಡಿಯಾ’ ಉದ್ಧರಿಸುತ್ತಾರೆ. ‘‘ಜ್ಯೋತಿಷ್ಯ ಶಾಸ್ತ್ರವು ಖಗೋಲಾತ್ಮಕ ಆಗುಹೋಗುಗಳನ್ನು ಬಳಸಿಕೊಂಡು, ತಾತ್ವಕ ವ್ಯವಸ್ಥೆಯ ಆಧಾರದ ಮೇಲೆ ಭೂ ಹಾಗೂ ಮಾನವ ಘಟನೆಗಳ ಭವಿಷ್ಯವನ್ನು ನುಡಿಯುವ ಶಾಸ್ತ್ರವಾಗಿದೆ.’’

‘‘ಪ್ರಾಚೀನ ಕಾಲದಲ್ಲಿ ಆಕಾಶದೆಡೆ ವೀಕ್ಷಿಸಿ ಜ್ಯೋತಿಷಿಗಳು ಭವಿಷ್ಯ ನುಡಿಯುತಿದ್ದರು. ಇದರಲ್ಲಿ ಪ್ರೌಢಿಮೆ ಪಡೆದ ನಂತರ ಸೂರ್ಯ, ಚಂದ್ರ ಹಾಗೂ ಇತರ ಗ್ರಹಗಳ ಪರಿಣಾಮವನ್ನು ವೀಕ್ಷಿಸಿ ಭವಿಷ್ಯ ನುಡಿಯತೊಡಗಿದರು. ನಂತರ ಖಗೋಲಶಾಸ್ತ್ರವು ಬಾಹ್ಯಾಕಾಶದಲ್ಲಿಯ ಗ್ರಹಗಳ ಗುಣಧರ್ಮ ಹಾಗೂ ಅವುಗಳ ಸ್ಥಾನ, ಸ್ಥಿತಿ-ಗತಿಗಳ ಕುರಿತಾದ ಸ್ಪಷ್ಟತೆ ಒಳಮೂಡಲಾರಂಭಿಸಿತು. ಗ್ರಹಗಳು ಹವಾಮಾನ, ಮಳೆ, ಬೆಳೆ, ದೇಶದ ಜನತೆಯ ಭವಿಷ್ಯದ ಮೇಲೆ ಯಾವ ಪರಿಣಾಮ ಬೀರುತ್ತವೆ ಮುಂತಾದ ಅಧ್ಯಯನ ಜ್ಯೋತಿಷ್ಯಶಾಸ್ತ್ರ ನಡೆಸಿತು. ವ್ಯಕ್ತಿಗಳ ಭವಿಷ್ಯ ನುಡಿಯತೊಡಗಿತು. ಗ್ರೋಲಿಯರ್‌ ವಿಶ್ವಕೋಶದ ಪ್ರಕಾರ ಜ್ಯೋತಿಷ್ಯಶಾಸ್ತ್ರದ ಉಗಮ ಬ್ಯಾಬಿಲೋನಿಯಾದಲ್ಲಾಯಿತು. ಅಲ್ಲಿಂದ ಮುಂದೆ ಚೀನ, ಭಾರತ ಹಾಗೂ ಪಶ್ಚಿಮ ರಾಷ್ಟ್ರಗಳಿಗೆ ಹಬ್ಬಿತು. ಜ್ಯೋತಿಷ್ಯ ಶಾಸ್ತ್ರದ ತತ್ವಗಳನ್ನು ಅಳವಡಿಸಿ ರಚಿಸಿದ ಅತ್ಯಂತ ಹಳೆಯ ಜಾತಕ ಪತ್ತೆಯಾದದ್ದು ಕ್ರಿ.ಪೂ. 409ರಲ್ಲಿ’’ ಎಂದರು.

‘‘ಕ್ರಿ.ಶ.ಏಳನೆಯ ಶತಮಾನದಲ್ಲಿ ಖಗೋಳಶಾಸ್ತ್ರಜ್ಞ ಟಾಲೆಮಿ ತನ್ನ ಕೃತಿ ‘ಟೇವಾ ಬಿಬ್ಟೋಸ್‌’ದಲ್ಲಿ ಜ್ಯೋತಿಷ್ಯಶಾಸ್ತ್ರವನ್ನು ಸಮರ್ಥಿಸಿಕೊಂಡಿದ್ದ. ನಂತರ ಹನ್ನೆರಡನೆಯ ಶತಮಾನದಲ್ಲಿ, ಪಶ್ಚಿಮ ಯುರೋಪಿನಲ್ಲಿ, ಜ್ಯೋತಿಷ್ಯಶಾಸ್ತ್ರದ ಪ್ರಭಾವ ಹೆಚ್ಚತೊಡಗಿತು. ಆದರೆ ಹದಿನೇಳನೆಯ ಶತಮಾನದ ವೇಳೆಗೆ ಜ್ಯೋತಿಷ್ಯವು ಶಾಸ್ತ್ರವಲ್ಲ ಎಂಬ ಅಪಸ್ವರ ಬುದ್ಧಿಜೀವಿಗಳಲ್ಲಿ ಕೇಳಬರತೊಡಗಿತು.

ಕ್ರೈಸ್ತ ಧರ್ಮದ ವಿರೋಧಿ ಸೂತ್ರಗಳನ್ನು ಜ್ಯೋತಿಷ್ಯಶಾಸ್ತ್ರ ಹೊಂದಿರುವುದರಿಂದ ಈ ಬಣಗಳಿಂದಲೂ ವಿರೋಧ ಪ್ರಾರಂಭವಾಯಿತು. ರವಿಯನ್ನು ಕೇಂದ್ರವಾಗಿ ಹೊಂದಿದ ವಿಶ್ವವು, ಗ್ರಹಗಳನ್ನು ಭೂಮಿಯ ಮೇಲೆ ಬದಲಾವಣೆಗಳನ್ನು ತರಲು ಸೃಷ್ಟಿಸಲಾಯಿತೆ ಎಂಬ ಅಂಶ ಸಂಶಯಕ್ಕೆ ಎಡೆಕೊಟ್ಟಿತು.

ಅನೇಕ ಶತಮಾನಗಳಿಂದ ಟೀಕಾಕಾರರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಕೆಲವು ಶತಮಾನಗಳಲ್ಲಿ ಜ್ಯೋತಿಷ್ಯಶಾಸ್ತ್ರದ ಜನಪ್ರಿಯತೆ ಹೆಚ್ಚಾಗಿತ್ತು, ಕೆಲಕಾಲ ಕುಗ್ಗಿತ್ತು. ಆದರೂ ಒಟ್ಟಿನಲ್ಲಿ ಉಗಮದಿಂದ ಇಲ್ಲಿಯವರೆಗೆ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ.’’ ಎಂಬುದು ಜೋಗಳೇಕರ್‌ ಅಭಿಪ್ರಾಯ.

(ಮುಂದುವರೆಯುವುದು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more