ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶೀಯರು ಯೋಗ ಕಲಿಸುವ ದುರ್ದಿನ ಬಾರದಿರಲಿ!

By Staff
|
Google Oneindia Kannada News

ವಿದೇಶೀಯರು ಯೋಗ ಕಲಿಸುವ ದುರ್ದಿನ ಬಾರದಿರಲಿ!
ಇದೇ ಪ್ರಶ್ನೆಯನ್ನು ನಾನು ಡಲ್ಲಾಸ್‌ನಲ್ಲಿ, ವಾಶಿಂಗಟನ್‌ನಲ್ಲಿ, ಕೆಲಿಫೋರ್ನಿಯದಲ್ಲಿ, ಚಿಕ್ಯಾಗೋದಲ್ಲಿ ಅಥವ ಟೋರಂಟೋದಲ್ಲಿ ಕೇಳಿದ್ದರೆ ಕನಿಷ್ಠ ಅರ್ಧದಷ್ಟಾದರೂ ಜನ ಕೈ ಮೇಲೆತ್ತುತ್ತಿದ್ದರು. ನಾವೆಲ್ಲ ಭಾರತೀಯರು. ಜಗತ್ತಿಗೇ ಯೋಗ ಕಲಿಸಿದ ನಾಡಿನವರು. ದೀಪದ ಕೆಳಗೇ ಕತ್ತಲೆ ಇದೆಯಲ್ಲಾ...!!??

ಡಾ।'ಜೀವಿ’ ಕುಲಕರ್ಣಿ, ಮುಂಬಯಿ
[email protected]

ಬೀದರದಲ್ಲಿ 'ಒಂದು ದಿನದ ಯೋಗ ಶಿಬಿರ’ ಅರ್ಥಾತ್‌ 'ಯೋಗ ಸಾಕ್ಷರತಾ ಅಭಿಯಾನ’ ಮುಗಿಸಿ ಹೊಸಮುಖಗಳೊಂದಿಗೆ ಚರ್ಚೆಯಲ್ಲಿ ಮುಳುಗಿದಾಗ ನನಗೊಂದು ಅಚ್ಚರಿಯೇ ಕಾದಿತ್ತು. ನ್ಯಾಶನಲ್‌ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಅವರಿಂದ ನನಗೊಂದು ಫೋನಕಾಲ್‌ ಬಂತು.

''ನಾನು ಪ್ರಿನ್ಸಿಪಾಲ್‌ ಫೂರ್ಣಿಮಾ ಮಾತಾಡುತ್ತೇನೆ. ನಿನ್ನೆ ಬೇಂದ್ರೆಯವರ ಬಗ್ಗೆ ಆದ ನಿಮ್ಮ ಭಾಷಣ ಕೇಳಿದೆ, ಬಹಳೇ ಪ್ರಭಾವಿತಳಾದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೂ ತಮ್ಮ ಭಾಷಣದ ಲಾಭ ದೊರೆಯಾಬೇಕೆಂದು ನನ್ನ ಇಚ್ಛೆಯಾಗಿದೆ. ತಮಗೆ, ನಮ್ಮ ಕಾಲೇಜಿಗೆ, ಹತ್ತು ಗಂಟೆಗೆ ಬರಲು ಬಿಡುವು ಇದೆಯೇ?’’ ಎಂದು ಕೇಳಿದರು.

ನಾನು ಇದೆ ಎಂದೆ ಅಲ್ಲಿಗೆ ಹೋಗಲು ಒಪ್ಪಿದೆ. ''ಆದರೆ ನನಗೆ ಹನ್ನೆರಡು ಗಂಟೆಗೆ ಡಾ। ಹೆಬ್ಬಾಳೆಯವರ ಕಾಲೇಜಿಗೆ ಹೋಗಬೇಕಾಗಿದೆ. ತಾವು ನನ್ನನ್ನು 11-30 ಕ್ಕೆ ಫ್ರೀಮಾಡಬೇಕು.’’ ಎಂದೆ. ''ಸರಿ’’ ಎಂದರು. 9-30ಕ್ಕೆ ಸ್ವತಃ ಪೂರ್ಣಿಮಾ ಅವರೆ ನನ್ನನ್ನು ಕರೆದುಕೊಂಡು ಹೋಗಲು ಬಂದರು. ಮಾರ್ಗದಲ್ಲಿ ತಮ್ಮ ಕಾಲೇಜಿನ ಪರಿಚಯ ಮಾಡಿಕೊಟ್ಟರು.

''ನಮ್ಮದು ಜ್ಯೂನಿಯರ್‌ ಕಾಲೇಜು ಮಾತ್ರ. 200 ವಿಜ್ಞಾನದ ವಿದ್ಯಾರ್ಥಿಗಳು ಇದ್ದಾರೆ. ತಾವು ಬೇಂದ್ರೆಯವರ ಕಾವ್ಯದ ಬಗ್ಗೆ, ಮತ್ತೆ ಯೋಗದ ಮಹತ್ವದ ಬಗ್ಗೆ ಮಾತಾಡಿರಿ’’ ಎಂದು ವಿನಂತಿಸಿದರು. ಪ್ರಾರಂಭದ ಸ್ವಾಗತ, ಪೀಠಿಕೆಯ ನಂತರ ನನ್ನ ಬಳಿ 80 ನಿಮಿಷ ಇದ್ದವು. ನಲವತ್ತು ನಿಮಿಷ ಬೇಂದ್ರೆಯವರ ಬಗ್ಗೆ ಮಾತನಾಡಿ, ನಂತರ ನಲವತ್ತು ನಿಮಿಷ ಯೋಗಾಭ್ಯಾಸದ ಮಹತ್ವದ ಬಗ್ಗೆ ಮಾತಾಡಿದೆ. ಕೊನೆಗೆ 'ಜಲನೇತಿ’ಯ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದೆ.

yoga

ಪ್ರೇಕ್ಷಕರಲ್ಲಿ ಯಾರಿಗಾದರೂ ಸೈನಸ್‌ ಬಾಧೆ ಇದ್ದರೆ, ಶೀತದಿಂದ ಮೂಗು ಕಟ್ಟಿದ್ದರೆ ಮುಂದೆ ಬರಲು ಕರೆದೆ. ಒಬ್ಬ ವಿದ್ಯಾರ್ಥಿನಿ ಮುಂದೆ ಬಂದಳು. ಅವಳಿಗೆ ಕಲಿಸಿದೆ. ಅವಳಿಗೆ ತತ್‌ಕ್ಷಣ ಉಪಶಮನ ದೊರೆತಿತ್ತು. ಅವರೆಲ್ಲ ಮೊದಲ ಸಲ ಶುದ್ಧಿಕ್ರಿಯೆ ನೋಡಿದ್ದರು. ನೆರೆದ ವಿದ್ಯಾರ್ಥಿಗಳಿಗೆ ಹರ್ಷವಾಯಿತು.

ಅಲ್ಲಿಂದ ಕರ್ನಾಟಕ ಕಾಲೇಜಿಗೆ ಬಂದೆವು. ಡಾ। ಜಗನಾಥ ಹೆಬ್ಬಾಳೆಯವರು ನಮ್ಮ ದಾರಿ ಕಾಯುತ್ತಿದ್ದರು. ''ನಮ್ಮಲ್ಲಿ 30 ಜನ ಪಿ.ಜಿ. ವಿದ್ಯಾರ್ಥಿಗಳು ಇದ್ದಾರೆ. ಇದರಲ್ಲಿ ಎಂ.ಎ., ಎಂ.ಫಿಲ್‌., ಹಾಗೂ ಪಿ.ಎಚ್‌.ಡಿ., ಪೋಸ್ಟಡಾಕ್ಟರಲ್‌ ರಿಸರ್ಚ್‌ ಸ್ಕಾಲರ್ಸ್‌ ಇದ್ದಾರೆ. ಅವರನ್ನು ಉದ್ದೇಶಿಸಿ ಒಂದು ಗಂಟೆ ಯೋಗದ ಬಗ್ಗೆ ಅಥವಾ ನಿಮಗೆ ಇಷ್ಟವಾದ ವಿಷಯ ಆರಿಸಿ ಮಾತಾಡಬೇಕು. ಸಂಜೆ 4-30 ಕ್ಕೆ ನಮ್ಮ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳನ್ನುದ್ದೇಶಿಸಿ ಯೋಗದ ಮಹತ್ವದ ಬಗ್ಗೆ ಮಾತಾಡಬೇಕು. ನಮ್ಮ ಅಧ್ಯಕ್ಷರು ನಿಮ್ಮ ಭಾಷಣ ಕೇಳಲು ಬರಲಿದ್ದಾರೆ.’’ ಎಂದು ಹೇಳಿದರು.

ನಾನು ಪಿ.ಜಿ.ವಿದ್ಯಾರ್ಥಿಗಳನ್ನು ಉದ್ದೇಶಿಸಿ ಕ್ಲಾಸ್‌ರೂಮಿನಲ್ಲಿ ಮಾತಾನಾಡುವಾಗ ಹೇಳಿದೆ, ''ನಿಮ್ಮ ಗುರುಗಳು ಯೋಗದ ಬಗ್ಗೆ ಮಾತಾಡಲು ಹೇಳಿದ್ದಾರೆ. ನಿಮ್ಮ ಸಂಸ್ಥೆಯಲ್ಲೇ 4-30ಕ್ಕೆ ಆ ವಿಚಾರದಲ್ಲಿ ಸಭಾಗೃಹದಲ್ಲಿ ಮಾತಾಡುವವನಿದ್ದೇನೆ. ನೀವೆಲ್ಲ ಯೋಗದ ವಿಷಯ ತಿಳಿದುಕೊಳ್ಳಲು ಅಲ್ಲಿಗೆ ಬನ್ನಿರಿ. ನಾನು ಈಗ 'ಬೇಂದ್ರೆ-ಗೋಕಾಕ-ಮಧುರಚೆನ್ನರ ಬಗ್ಗೆ - ಕನ್ನಡ ನವೋದಯದ ತ್ರಿಮೂರ್ತಿಗಳ ಬಗ್ಗೆ’ ಮಾತಾಡುತ್ತೇನೆ.’’ ಎಂದು ಪೀಠಿಕೆ ಹಾಕಿ ನನ್ನ ನೆಚ್ಚಿನ ವಿಷಯದ ಬಗ್ಗೆ ಮಾತಾಡಿದೆ. ಭಾಷಣ ಮುಗಿದ ಮೇಲೆ ಡಾ। ಹೆಬ್ಬಾಳೆಯವರ ಮನೆಗೆ ಹೋಗಿ ಅವರ ಆತಿಥ್ಯ ಸ್ವೀಕರಿಸಿದೆ. ನಿರ್ಮಾಣದ ಹಂತದಲ್ಲಿರುವ ಅವರ ಹೊಸ ಮನೆ ನೋಡಿ, 'ಇದು ಮಹಾಮನೆಯಾಗಲಿ, ಇಲ್ಲಿ ನಿತ್ಯ ದಾಸೋಹ ನಡೆಯಲಿ’ ಎಂದು ಹಾರೈಸಿದೆ.

ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ, ಬೀದರದ ಗಣ್ಯ ಸಮಾಜ ಸೇವಕರೂ, ನ್ಯಾಯವಾದಿಗಳೂ ಆದ ಚೆನ್ನಬಸಪ್ಪ ಹಾಲಹಳ್ಳಿಯವರು ನನ್ನನ್ನು ಬಹಳ ಆತ್ಮೀಯವಾಗಿ ಕಂಡರು. ಅವರ ಅಧ್ಯಕ್ಷತೆಯಲ್ಲಿ ನನ್ನ ಭಾಷಣವಿತ್ತು.

''ನಾನು ನಿಮಗೆ ಮೂರು ಪ್ರಶ್ನೆ ಕೇಳುತ್ತೇನೆ, ಉತ್ತರ ಗೊತ್ತಿದ್ದವರು ನಿಮ್ಮ ಕೈ ಮೇಲೆತ್ತಿರಿ. 1) ಯೋಗಭ್ಯಾಸ ಆರಂಭಿಸುವ ಮೊದಲು ದೇಹವನ್ನು ಶುದ್ಧಿಗೊಳಿಸುವ ಆರು ಶುದ್ಧಿಕ್ರಿಯೆಗಳಿವೆ ಅವುಗಳಲ್ಲಿ ಒಂದಾದರೂ ನಿಮಗೆ ಗೊತ್ತಿದೆಯೇ? 2) ಯಾವುದಾದರು ಒಂದು ಆಸನ ಹಾಕಲು ನಿಮಗೆ ಬರುತ್ತಿದೆಯೇ? 3) ಎಂಟು ಮಹತ್ವದ ಪ್ರಣಾಯಾಮಗಳಿವೆ, ಅದರಲ್ಲಿ ಒಂದಾದರೂ ನಿಮಗೆ ಗೊತ್ತಿದೆಯೇ? ಅದರ ಹೆಸರೇನು?’’.

ಇಡೀ ಸಭಾಗೃಹ ಒಬ್ಬರೂ ಕೈಮೇಲೆ ಎತ್ತಲಿಲ್ಲ. ''ಇದೇ ಪ್ರಶ್ನೆಯನ್ನು ನಾನು ಡಲ್ಲಾಸ್‌ನಲ್ಲಿ, ವಾಶಿಂಗಟನ್‌ನಲ್ಲಿ, ಕೆಲಿಫೋರ್ನಿಯದಲ್ಲಿ, ಚಿಕ್ಯಾಗೋದಲ್ಲಿ ಅಥವ ಟೋರಂಟೋದಲ್ಲಿ ಕೇಳಿದ್ದರೆ ಕನಿಷ್ಠ ಅರ್ಧದಷ್ಟಾದರೂ ಜನ ಕೈ ಮೇಲೆತ್ತುತ್ತಿದ್ದರು. ನಾವೆಲ್ಲ ಭಾರತೀಯರು. ಜಗತ್ತಿಗೇ ಯೋಗ ಕಲಿಸಿದ ನಾಡಿನವರು. ದೀಪದ ಕೆಳಗೇ ಕತ್ತಲೆ ಇದೆಯಲ್ಲಾ.’’ ಎಂದೆ.

''ನಾನು ಮುಂಬೈಯಲ್ಲಿ ನಾಲ್ಕು ದಶಕಗಳಕಾಲ ಪ್ರಾಧ್ಯಾಪಕನಾಗಿದ್ದೆ. ನನ್ನ ಭಾಷೆಯಲ್ಲಿ ಹೇಳುವೆ. ಯೋಗ ವಿಷಯದಲ್ಲಿ ನಿಮಗೆಲ್ಲರಿಗೂ 'ಶೂನ್ಯ’ ಅಂಕಗಳು ದೊರೆಯುತ್ತವೆ. ನೀವು ಪಾಸಾಗಬೇಕಾದರೆ ಕನಿಷ್ಠ 30 ಅಂಕಗಳನ್ನು ಗಳಿಸಬೇಕು. ಒಂದರ್ಥದಿಂದ ನೀವು 'ಯೋಗ-ನಿರಕ್ಷರಿಗಳು’. ನೀವೆಲ್ಲ ಸಾಕ್ಷರಾಗಬೇಕು. ಯೋಗವಿದ್ದಲ್ಲಿ ರೋಗವಿಲ್ಲಾ ಎಂಬುದನ್ನು ಅರಿಯಬೇಕು. ಅದಕ್ಕಾಗಿ ನಾಡಿನಾದ್ಯಂತ ಶಿಬಿರ ನಡೆಸಲು ಸಿದ್ಧತೆ ನಡೆಸಿದ್ದೇನೆ. ಅದಕ್ಕೆ ಪುಸ್ತಕಬೇಕು, ಸಲಕರಣೆ ಬೇಕು, ಕಲಿಸಲು ಸ್ವಯಂಸೇವಕರ ತಂಡ ಬೇಕು.’’ ಎಂದು ಹೇಳುತ್ತ ನನ್ನ ವಿಚಾರಗಳನ್ನು ಮಂಡಿಸಿದೆ.

''ಯೋಗೇನ ಚಿತ್ತಸ್ಯ ಪದೇನ ವಾಚಾ । ಮಲಶ್ಶರೀರಸ್ಯ ಚ ವೈದ್ಯಕೇನ । ಯೋಪಾಕರೋತ್ತಂ ಪ್ರವರಂ ಮುನೀನಾಂ । ಪಾತಂಜಲಿಂ ಪ್ರಾಂಜಲಿಮಾನತೋಸ್ಮಿ।।’’ ಯೋಗ ಎಂದೊಡನೆ ನಾವು ಮುನಿಪುಂಗವ ಪತಂಜಲಿಯನ್ನು ನೆನೆಯಬೇಕು. ನಮ್ಮ ದೇಶದಲ್ಲಿ ಧರ್ಮ ಮತ್ತು ವಿಜ್ಞಾನ ಬೆರೆತುಬಿಟ್ಟಿವೆ. ಇದನ್ನು ಮಹರ್ಷ ಶ್ರೀ ಅರವಿಂದರು ಚೆನ್ನಾಗಿ ವಿವರಿಸಿದ್ದಾರೆ. ನಾವು ಧರ್ಮ ಬಿಟ್ಟಾಗ ವಿಜ್ಞಾನದಿಂದಲೂ ವಂಚಿತರಾದೆವು.

ವ್ಯಾಕರಣ ಒಂದು ಶಾಸ್ತ್ರ. ಪಾಣಿನಿಗೆ ಶಿವನು ತನ್ನ ಕೈಯ ಡಮರು ಬಾರಿಸಿ ಕಲಿಸಿದ. ನಾಟ್ಯವೂ ಶಾಸ್ತ್ರ. ಅದನ್ನು ಶಿವನೇ ಕಲಿಸಿದ. ಯೋಗಾಭ್ಯಾಸಕ್ಕೂ ಮೂಲಗುರು ಶಿವ. ಅವನು ಪಾರ್ವತಿಗೆ 64 ಆಸನಗಳನ್ನು ಕಲಿಸಿದ. ಪತಂಜಲಿ ಯಾರು ಗೊತ್ತೇ? ಇವನೊಬ್ಬ ಮಹಾಮುನಿ. ಒಬ್ಬ ಋಷಿ ಸಂತಾನ ಪಡೆಯಲು ದಿನಾಲೂ ಸೂರ್ಯನಲ್ಲಿ ಪ್ರಾರ್ಥಿಸುತ್ತಿದ್ದ. ಅವನು ಸೂರ್ಯನಿಗೆ ಅರ್ಘ್ಯ ಕೊಡುವಾಗ ಅವನ ಅಂಜಲಿಯಲ್ಲಿ ಚಿಕ್ಕ ಹಾವು ಬಿತ್ತು. ಅದನ್ನು ಕಮಂಡಲದಲ್ಲಿ ಹಾಕಿ ಮನೆಗೆ ತಂದು ಮಗುವಿನಂತೆ ಬೆಳಸಲು ನಿಶ್ಚಯಿಸಿದ.

ಮನೆಯಲ್ಲಿ ಅದು ಮಗುವೇ ಆಗಿಬಿಟ್ಟಿತು. ಅದಕ್ಕೆ ಯಾವ ಹೆಸರಿಟ್ಟ ಗೊತ್ತೇ? 'ಪತಂಜಲಿ’. ಇದರ ಅರ್ಥ 'ಬೊಗಸೆಯಲ್ಲಿ ಬಿದ್ದವ’ ಎಂದಾಗುತ್ತದೆ. (ಪತ=ಬಿದ್ದವ, ಅಂಜಲಿ=ಬೊಗಸೆ). ಅವನು ಶೇಷಾಂಶಸಂಭೂತನಾಗಿದ್ದ. ಪತಂಜಲಿಯು ಚಿತ್ತದ ಮಲವನ್ನು (ಜಾಡ್ಯವನ್ನು) ಹೋಗಲಾಡಿಸಲು 'ಯೋಗಸೂತ್ರ’ ಬರೆದ, ದೇಹದ ಮಲವನ್ನು (ರೋಗವನ್ನು) ಹೋಗಲಾಡಿಸಲು ಆಯುರ್ವೇದ ಗ್ರಂಥ ಬರೆದ, ಮಾತಿನಲ್ಲಿಯ ಮಲವನ್ನು (ಅಶುದ್ಧಿಯನ್ನು) ಹೋಗಲಾಡಿಸಲು ವ್ಯಾಕರಣ ಗ್ರಂಥ ಬರೆದ. ಅದಕ್ಕೆಂದೇ ನಾವು 'ಪತಂಜಲಿಯನ್ನು ಪ್ರಾಂಜಲ ಮನದಿಂದ ಪ್ರತಿನಿತ್ಯ ವಂದಿಸಬೇಕು.’

ಯೋಗಭ್ಯಾಸ ಇದು ಧಾರ್ಮಿಕ ಆಚರಣೆಯಲ್ಲ. ಯಾರಾದರೂ ಇದನ್ನು ಕಲಿಯಬಹುದು. ವಿದೇಶೀಯರು ಬಂದು ಯೋಗ ಕಲಿಸುವ ದುರ್ದಿನ ನಾವು ಕಾಣದೆ ಇರೋಣ. ಇಡೀ ಜಗತ್ತನ್ನೇ ನಿಬ್ಬೆರಗುಗೊಳಿಸಿದ ಯೋಗಾಭ್ಯಾಸವನ್ನು ದಿನನಿತ್ಯ ಅನುಷ್ಠಾನಕ್ಕೆ ತರೋಣ. 'ನಿಮ್ಮಲ್ಲಿ ಆಸಕ್ತಿ ಇದ್ದರೆ, ನಮ್ಮಲ್ಲಿ (ಕಲಿಸಲು) ಸಮಯವಿದೆ’ಎಂದು ಇಂಗ್ಲಿಷಿನಲ್ಲಿ ಹೇಳುತ್ತಾರೆ. (ಇಫ್‌ ಯು ಹ್ಯಾವ್‌ ಇನ್‌ಕ್ಲಿನೇಶನ್‌, ವಿ ಹ್ಯಾವ್‌ ಟೈಮ್‌). ನೀವು ಕಲಿಯಲು ಸಿದ್ಧರಿದ್ದರೆ ನಾವು ಕಲಿಸಲು ಸದಾ ಸಿದ್ಧರು, ಬದ್ಧರು.’’ ಎಂದು ಮುಂತಾಗಿ ಹೇಳಿದೆ.

ಚೆನ್ನಬಸಪ್ಪ ಹಾಲಹಳ್ಳಿಯವರು ಅಧ್ಯಕ್ಷೀಯ ಭಾಷಣದಲ್ಲಿ, ''ನಮ್ಮ ಮುಖ್ಯ ಅತಿಥಿಗಳು ಎಪ್ಪತರ ಅಂಚಿನಲ್ಲಿಯೂ ಇಪ್ಪತ್ತರ ಉತ್ಸಾಹ ತೋರಿದ್ದಾರೆ. ಅವರ ಮಾರ್ಗದರ್ಶನದ ಲಾಭ ನಾವು ಪಡೆಯಬೇಕು’’ಎಂದರು.

ಮಂಗಳವಾರ (5-9-06) ಮಧ್ಯಾಹ್ನ 12-35ಕ್ಕೆ ಲಿಂಕ್‌ ಎಕ್ಸ್‌ಪ್ರೆಸ್‌ ಹಿಡಿದು ರಾಯಚೂರಿಗೆ ಹೋಗಬೇಕಿತ್ತು. ಮುಂಜಾನೆ ಯೋಗಾಭ್ಯಾಸಕ್ಕೆ ಮತ್ತೆ ಹೊಸ ಜನ ಬಂದಿದ್ದರು. ಅದರಲ್ಲಿ ಹಿಂದೂ ಪತ್ರಿಕೆಯ ಪ್ರತಿನಿಧಿ ಋಷಿಕೇಶ ಬಹದ್ದೂರ್‌ ದೇಸಾಯಿಯವರು ಒಬ್ಬರಾಗಿದ್ದರು. ಅವರ ಜೊತೆಗೆ ನಿವೃತ್ತರಾದ ಅವರ ತಂದೆಯವರೂ ಬಂದಿದ್ದರು. ಏಳು ದಿನಗಳ ಶಿಬಿರದ ಪುಸ್ತಿಕೆ,(ಅಮೆರಿಕೆಯಲ್ಲಿದ್ದಾಗ ಬಳಸಲು ಸಿದ್ಧಪಡಿಸಿದ, ವೆಬ್‌-ಸೈಟ್‌ ಮೂಲಕ ಪ್ರಸಿದ್ಧಿ ಪಡೆದ 'ಯೋಗ ಶಿಬಿರ’ವೆಂಬ ಆಂಗ್ಲಪುಸ್ತಿಕೆ), ಆಡಿಯೋ ಟೇಪು ಅವರಿಗೆ ಕೊಟ್ಟಿದ್ದೆ.

ಒಂದು ದಿನದ ಶಿಬಿರದಲ್ಲಿ ಶವಾಸನ ಸೇರಿಸಲು ನಿಶ್ಚಯಿಸಿದೆ. ಉತ್ತಾನಂ ಶವಾದ್‌ ಭೂಮೌ ಶಯಾನಂ ತತ್‌ ಶಯಾಸನಮ್‌ । ಶವಾಸನಂ ಶ್ರಾಂತಿಹರಂ ಚಿತ್ತ ವಿಶ್ರಾಂತಿಕಾರಕಮ್‌।। (ಹಠಯೋಗ ಪ್ರದೀಪಿಕಾ) ಇದನ್ನು ವಿವರಿಸಿ, ಶವಾಸನ ಅಂದರೆ ಬರಿ ಮಲಗುವುದಲ್ಲಿ. ಅದರಲ್ಲಿ ಕೆಲ ಕ್ರಿಯೆಗಳಿವೆ, ಅದು ಚಿತ್ತಕ್ಕೆ ಶಾಂತಿಕರವೂ, ದೇಹಕ್ಕೆ ವಿಶ್ರಾಂತಿಕರವೂ ಆದ ಆಸನ. ಇದಕ್ಕೆ ಯೋಗನಿದ್ರಾ ಎಂದೂ ಕರೆಯುತ್ತಾರೆ. ನಿದ್ರಾಹೀನತೆಯಿಂದ ಬಳಲುವವರಿಗೆ ಇದು ಒಳ್ಳೆಯದು.

ಋಷೀಕೇಶ ಅವರು ನನ್ನ 'ಯೋಗ ಸಾಕ್ಷರತಾ ಅಭಿಯಾನ’ದ ಬಗ್ಗೆ ಬಹಳ ಆಸಕ್ತಿ ವಹಿಸಿದರು. ಬೇಗನೇ ಇಂಗ್ಲಿಷಿನಲ್ಲಿ ಹಾಗೂ ಕನ್ನಡದಲ್ಲಿ ಪುಸ್ತಿಕೆ ಸಿದ್ಧಪಡಿಸಲು, ಮೊದಲ ಪ್ರಯೋಗಕ್ಕೆ ತಮ್ಮ ಜಿಲ್ಲೆಯನ್ನು ಆಯ್ಕೆಮಾಡಲು ಹೇಳಿದರು. ತಮ್ಮ ಸಂಪೂರ್ಣ ಸಹಕಾರದ ಆಶ್ವಾಸನೆ ನೀಡಿದರು.

ಈ ದಿನ 'ಶಿಕ್ಷಕರ ದಿನಾಚರಣೆ’ ಡಿ.ಎಡ್‌.ಕಾಲೇಜಿನಲ್ಲಿತ್ತು. ಅಲ್ಲಿ ಕೂಡ ನನ್ನನ್ನೇ ಮುಖ್ಯ ಅತಿಥಿಯೆಂದು ಆಮಂತ್ರಿಸಿದ್ದರು. ಅಧ್ಯಕ್ಷತೆ ವಹಿಸಿದ ಚೆನ್ನಬಸಪ್ಪನವರು ಲಾ ಕಾಲೇಜಿನ ಕಾರ್ಯಕ್ರಮ ಮುಗಿಸಿ ಬಂದರು. ನನಗೆ ಮಾತಾಡಲು ಅರ್ಧ ಗಂಟೆ ಮಾತ್ರ ಇತ್ತು. ಹೆಚ್ಚು ಮಾತಾಡಿದ್ದರೆ ನನಗೆ ಟ್ರೇನ್‌ ತಪ್ಪಿಸಿಕೊಳ್ಳಬೇಕಾಗುತ್ತಿತ್ತು.

ನಾನು ಡಾ। ಸರ್ವಪಲ್ಲಿ ರಾಧಕೃಷ್ಣ ಅವರು ಎಂಥ ಮಹಾನ್‌ ಶಿಕ್ಷರಾಗಿದ್ದರು ಎಂಬ ಬಗ್ಗೆ ಮಾತಾಡಿದೆ. ಅವರ ಭಾಷಣ ಆಕ್ಸ್‌ಫರ್ಡ್‌ನಲ್ಲಿದ್ದಾಗ ಥೇಮ್ಸ್‌ನದಿಯಲ್ಲಿ ಬೋಟ್‌-ರೇಸ್‌ ಇತ್ತು. ಆ ರೇಸ್‌ ಬಿಟ್ಟು ಜನ ಇವರ ಭಾಷಣಕ್ಕೆ ಬಂದ ಐತಿಹಾಸಿಕ ಘಟನೆಯ ಬಗ್ಗೆ ಹೇಳಿದೆ.

ಗುರುವಿನ ಮಹತ್ವದ ಬಗ್ಗೆ ಹೇಳುವಾಗ ಮತ್ತೆ ಬೇಂದ್ರೆಯವರು ನೆನಪಾದರು. ಅವರು ಆದರ್ಶ ಶಿಕ್ಷಕರಾಗಿದ್ದರು. ಅವರು ಸದಾ ಉದ್ಧರಿರಿಸುತ್ತಿದ್ದ ಸರ್ವಜ್ಞನ ವಚನ ವಿಶ್ಲೇಷಿಸಲು ಮರೆಯಲಿಲ್ಲ. '' ಎತ್ತಾಗಿ, ತೊತ್ತಾಗಿ, ಹಿತ್ತಲದ ಮರವಾಗಿ । ಮತ್ತೆ ಕೆರವಾಗಿ । ಗುರುವಿನ । ಹತ್ತರಿರು ಎಂದ ಸರ್ವಜ್ಞ।।’’

ನನ್ನ ಭಾಷಣ ಮುಗಿದಾಗ 12 ಗಂಟೆ. ಅಲ್ಲಿಂದ ಕರ್ನಾಟಕ ಸಂಘದ ರೂಮಿಗೆ ಬಂದು, ಲಗೇಜ್‌ ಪಡೆದು, ಸ್ಟೇಶನ್‌ ತಲುಪಿದಾಗ 12-30. ನಮ್ಮ ಟ್ರೇನು ಎರಡನೆಯ ಪ್ಲ್ಯಾಟ್‌ಫಾರ್ಮ್‌ ಮೇಲೆ ನಿಂತಿತ್ತು. ದೇವೇಂದ್ರ ಅವರ ಸಹಾಯದಿಂದ ನಮ್ಮ ಕಂಪಾರ್ಟಮೆಂಟ್‌ ಹುಡುಕಿ ಸೀಟಿನಲ್ಲಿ ಕುಳಿತೆ. ಟ್ರೇನ ಹೊರಟಿತು. ಬೀದರ್‌ ಪ್ರಯಾಣ ಹೆಕ್‌ಟಿಕ್‌ ಆಗಿತ್ತು. ಆದರೆ ಅದು ನೀಡಿದ ಮನಸ್ಸಿನ ಸಂತೃಪ್ತಿಗೆ ಸಾಟಿ ಇರಲಿಲ್ಲ.

English summary
Bendre and Yoga lectures in Bidar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X