ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟ್ಟೆ ಮತ್ತು ಕಣ್ಣನ್ನು ತಂಪು ಮಾಡೋದು ಹೇಗೆ?

By Staff
|
Google Oneindia Kannada News


ನೌಲಿ ಅಭ್ಯಾಸದಿಂದ ಜಠರಾಗ್ನಿಯು ಪ್ರದೀಪ್ತವಾಗುತ್ತದೆ. ಇದರಿಂದ ದೇಹದ ಪಚನಕ್ರಿಯೆಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ತ್ರಾಟಕದಿಂದ ನೇತ್ರದೋಷಗಳಿಗೆ ಪರಿಹಾರ ದೊರೆಯುತ್ತದೆ, ದಿವ್ಯ ದೃಷ್ಟಿ ಪ್ರಾಪ್ತವಾಗುತ್ತದೆ. ‘ಯೋಗವಿದ್ದಲ್ಲಿ ರೋಗವಿಲ್ಲ’ ಮಾಲಿಕೆಯ ಏಳನೇ ಭಾಗಕ್ಕೆ ಸ್ವಾಗತ.

Nauli demonstrationಶುದ್ಧಿಕ್ರಿಯಾ ವಿಧಾನಗಳಲ್ಲಿ ನಾಲ್ಕನೆಯದು‘ನೌಲಿ’ ಅಥವಾ ‘ಲೌಲಿಕೀ’ ಪಾತ್ರ ಹಿರಿದು. ಹಠಯೋಗ ಪ್ರದೀಪಿಕೆ ಇದನ್ನು ‘ನೌಲಿ’ ಎಂದು ಕರೆದರೆ, ಘೕರಂಡ ಸಂಹಿತಾದಲ್ಲಿ ಇದಕ್ಕೆ ‘ಲೌಲಿಕೀ’ ಎನ್ನುತ್ತಾರೆ.

‘‘ಅಮಂದವೇಗೇನ ತುಂದಂ ಭ್ರಾಮಯೇದುಭಪಾರ್ಶ್ವಯೋಃ ।
ಸರ್ವರೋಗನ್ನಿಹನ್ತೀಹ ದೇಹಾನಲ ವಿವರ್ದ್ಧನಮ್‌।।’’
(ಘೕರಂಡ ಸಂಹಿತಾ-52)

ನೌಲಿ ಎಂದರೆ ಹೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸಿ ಎಡಬಲಕ್ಕೆ ತಿರುಗಿಸಬೇಕು. ನೌಲಿ ಕ್ರಿಯೆಯಿಂದ ಎಲ್ಲ ರೋಗಗಳು ನಾಶಗೊಳ್ಳುತ್ತವೆ ಮತ್ತು ಜಠರಾಗ್ನಿಯು ಪ್ರದೀಪ್ತವಾಗುತ್ತದೆ. ಇದರಿಂದ ದೇಹದ ಪಚನಕ್ರಿಯೆಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ಅಹಾರ ಉತ್ತಮವಾಗಿ ಪಚನಗೊಂಡರೆ ದೇಹ ಸ್ವಾಸ್ಥ್ಯದ ಮೇಲೆ ಇದು ಒಳ್ಳೆಯ ಪರಿಣಾಮ ಬೀರುತ್ತದೆ. ಇದು ಪ್ರಾರಂಭದಲ್ಲಿ ಕಠಿಣವಾದ ಕ್ರಿಯೆಯಾಗಿ ಕಂಡರೂ ಮುಂದೆ ಅಭ್ಯಾಸವಾದ ಮೇಲೆ ಸುಲಭವಾಗುತ್ತದೆ. ಇದು ಅಗ್ನಿಸಾರದ ಪ್ರಕಾರವೇ ಆಗಿದೆ ಎನ್ನಬಹುದು.

ನೌಲಿ ಕ್ರಿಯೆ ಎಂದೊಡನೆ ಆಸ್ಥಾ ಟಿ.ವಿ. ಚಾನೆಲ್‌ ನೆನಪಾಗುತ್ತದೆ. ಅದರಲ್ಲಿ ಸ್ವಾಮಿ ರಾಮದೇವ ಅವರ ಚಿತ್ರ ಕಣ್ಣ ಮುಂದೆ ನಿಲ್ಲುತ್ತದೆ. ಅವರು ತಮ್ಮ ಹೊಟ್ಟೆಯನ್ನು ಒಳಗೆ ಎಳೆದುಕೊಂಡು ಅದರ ಸ್ನಾಯುಗಳನ್ನು ತಿರುಗಿಸುವುದನ್ನು ಕಂಡಾಗ, ‘ಈ ರೀತಿ ಮಾಡಲು ಸಾಧ್ಯವೇ?’ ಎಂದು ಅಚ್ಚರಿಯಾಗುತ್ತದೆ.

ಇಂಥ ಕ್ರಿಯೆ ಬಾಲ್ಯದಿಂದಲೇ ಕಲಿಯಬೇಕು. ಇದರಿಂದ ಜಠರಾಗ್ನಿ ಪ್ರದೀಪ್ತಗೊಳ್ಳುತ್ತದೆ. ಇದು ಅಗ್ನಿಸಾರವೆಂಬ ಕ್ರಿಯೆಯ ಮುಂದುವರಿದ ಆವಿಷ್ಕಾರ. ಅಗ್ನಿಸಾರದಲ್ಲಿ ಉಸಿರು ಬಿಟ್ಟು ಹೊಟ್ಟೆಯನ್ನು ಹಿಂದೆ ಸರಿಸಿ (ಬೆನ್ನಿಗೆ ತಾಗುವಂತೆ) ವೇಗದಿಂದ ಸಮಸ್ಥಿತಿಗೆ ತರುವ ವ್ಯಾಯಾಮ. ಇದನ್ನು ಕುಳಿತುಕೊಂಡು ಕೂಡ ಮಾಡಬಹುದು. ಇದರಿಂದ ಜಠರಾಗ್ನಿ ಪ್ರದೀಪ್ತಗೊಳ್ಳುತ್ತದೆ.

ನೌಲಿಯಿಂದ ಜಠರಾಗ್ನಿಯಾಂದಿಗೆ ಇಡಿ ದೇಹದಲ್ಲಿ ಅಗ್ನಿಯು ಹೆಚ್ಚುತ್ತದೆ. ಆದ್ದರಿಂದ ‘ದೇಹಾನಲ ವಿವರ್ದ್ಧನಮ್‌’ ಎಂದು ಹೇಳಿದ್ದಾರೆ. ಇದನ್ನು ಮಾಡುವ ವಿಧಾನ , ಉತ್ಕಟಾಸನದಲ್ಲಿ ( ಕಾಲು ಅಗಲ ಮಾಡಿ, ಬೆನ್ನು ಬಾಗಿಸಿ, ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು) ನಿಂತು ಹೊಟ್ಟೆಯ ಸ್ನಾಯುಗಳನ್ನು ಎಡಕ್ಕೆ, ಮಧ್ಯಕ್ಕೆ, ಬಲಕ್ಕೆ ತಿರುಗಿಸುವುದು. ಅಗ್ನಿಸಾರ, ಉಡಿಯಾನ ಬಂಧ ಪ್ರಯೋಗಿಸಿದ ಮೇಲೆ ನೌಲಿಯನ್ನು ಮಾಡಬೇಕು.

ಇದರಲ್ಲಿ ನಾಲ್ಕು ಪ್ರಕಾರಗಳಿವೆ. ಸಾಮಾನ್ಯ ಅಥವಾ ಮಧ್ಯಮ ನೌಲಿ, ವಾಮ ನೌಲಿ, ದಕ್ಷಿಣ ನೌಲಿ, ಭ್ರಮರ ನೌಲಿ ಅಥವಾ ಕೇವಲ ನೌಲಿ. ನೌಲಿ ಬಹಳ ಲಾಭಕರ. ಇದನ್ನು ಮಾಡುವ ಮೊದಲು ಉಡಿಯಾನ ಬಂಧ ಮಾಡಿ ಹೊಟ್ಟೆಯನ್ನು ಬೆನ್ನಿಗೆ ಹಚ್ಚುವುದು ಅವಶ್ಯ. ನೌಲಿಯನ್ನು ಮಾಡುವಾಗ ಶ್ವಾಸವನ್ನು ಪೂರ್ತಿಯಾಗಿ ಹೊರಗೆ ಬಿಡಬೇಕು. ಇದರಿಂದ ಬೇಗ ದಣಿವಾಗುತ್ತದೆ. ಸ್ವಲ್ಪ ವಿಶ್ರಮಿಸಿ, ನಂತರ ಪ್ರಯತ್ನಿಸಬೇಕು. ಇದಕ್ಕೆ ಗುರುಗಳ ಮಾರ್ಗದರ್ಶನ ಬೇಕಾಗುತ್ತದೆ.

ಪ್ರಾಣಾಯಮ ಮಾಡುವ ಮೊದಲು ದೇಹ ಶುದ್ಧವಾಗಿರಬೇಕು. ದೇಹ ಅಶುದ್ಧವಾಗಿದ್ದರೆ, ಪ್ರಾಣಾಯಾಮದ ಲಾಭ ದೊರೆಯುವುದಿಲ್ಲ. ಮೊದಲು ಶೋಧನ ಮಾಡಬೇಕು (ಶುದ್ಧಗೊಳಿಸಬೇಕು), ನಂತರ ದೇಹಕ್ಕೆ ದೃಢತೆ ಬರುತ್ತದೆ. ಅದರಿಂದ ಸ್ಥೈರ್ಯ ಬರುತ್ತದೆ, ಧೈರ್ಯ ತಂತಾನೇ ಬರುತ್ತದೆ. ನಂತರ ಲಾಘವ, ಪ್ರತ್ಯಕ್ಷ ಹಾಗೂ ನಿರ್ಲಿಪ್ತ ಸ್ಥಿತಿಗಳು ಬರುತ್ತವೆ.

ಪ್ರಾಣಾಯಮದಲ್ಲಿ ಉಸಿರನ್ನು ಒಳಗೆ ಹಿಡಿಯುವುದಕ್ಕೆ ‘ಅಂತರ್‌ ಕುಂಭಕ’ ಎನ್ನುತ್ತಾರೆ. ಹೊರಗೆ ಉಸುರು ಹಿಡಿಯುವುದಕ್ಕೆ ‘ಬಾಹ್ಯ ಕುಂಭಕ’ ಅನ್ನುತ್ತಾರೆ. ಉಸಿರನ್ನು ಹಿಡಿಯುವುದೆಂದರೆ ಹುಲಿಯನ್ನು ಕಟ್ಟಿಹಾಕಿದಂತೆ. ಕಟ್ಟು ಸ್ವಲ್ಪ ಸಡಿಲಾದರೆ, ಅದು ಮಾರಕವಾಗುತ್ತದೆ, ಕಟ್ಟಿದವನನ್ನೇ ತಿಂದುಬಿಡುತ್ತದೆ. ಹಿಂದೆ ಪ್ರಾಣಾಯಮವನ್ನು ಎಲ್ಲರಿಗೆ ಕಲಿಸುತ್ತಿರಲಿಲ್ಲ. ಆಸನಗಳಲ್ಲಿ ಚೆನ್ನಾಗಿ ಪಳಗಿದ ಮೇಲೆ, ಒಂದೆರಡು ವರ್ಷಗಳ ತರುವಾಯ ಪ್ರಾಣಾಯಾಮದ ಪಾಠ ಹೇಳುತ್ತಿದ್ದರು. ಈಗ ಒಂದೇ ವಾರದಲ್ಲಿ ಪ್ರಾಣಾಯಮ ಹೇಳಿಕೊಡುತ್ತಾರೆ.

ಪ್ರಾಣಾಯಮದಲ್ಲಿ ಇರುವ ಅಪಾಯದ ಕುಂಭಕವನ್ನೇ ತೆಗೆದು ಹಾಕಿದ್ದಾರೆ. ಇಂದು ಜನ ಸಾಮಾನ್ಯರಿಗಾಗಿ ಸ್ವಾಮಿ ರಾಮದೇವರು ಪ್ರಸ್ತುತ ಪಡಿಸಿದ ಏಳು ಪ್ರಾಣಾಯಾಮಗಳಲ್ಲಿ ಐದು ಮಾತ್ರ ಪ್ರಾಣಾಯಮಗಳು. ಹಾಗೆ ನೋಡಿದರೆ ಕಪಾಲಭಾತಿ ಶುದ್ಧಿಕ್ರಿಯೆ ಮಾತ್ರ. ಪ್ರಾಣಾಯಮದ ಪೂರ್ವದಲ್ಲಿ ಮಾಡಲೇಬೇಕಾದ ಕ್ರಿಯೆ. ಅದಕ್ಕೆ ಪ್ರಾಣಾಯಾಮದ ದರ್ಜೆ ಕೊಟ್ಟಿದ್ದಾರೆ. ಓಂಕಾರವನ್ನೂ ಪ್ರಾಣಾಯಾಮವೆಂದು ಕರೆದಿದ್ದಾರೆ.(ಪ್ರಾಣಾಯಾಮದಲ್ಲಿ ಓಂಕಾರವನ್ನು ಸೇರಿಸಿದ್ದನ್ನು ನಾನು ಕೇಳಿಲ್ಲ.)

ಅದು ಏನೇ ಇರಲಿ, ಇದರಿಂದ ಬಹಳ ಜನರಿಗೆ ಲಾಭವಾಗಿದೆ. ಚಿಕ್ಕ ಮಕ್ಕಳು ಕೂಡ ಈಗ ಪ್ರಾಣಾಯಾಮ ಮಾಡುತ್ತಿದ್ದಾರೆ. ಇದು ಕೇವಲ ಪ್ರಾರಂಭ. ಹೆಚ್ಚಿನ ಪ್ರತಿ ಸಾಧಿಸಬೇಕಾದರೆ ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಕುಂಭಕ ಸಹಿತ ಪ್ರಾಣಾಯಾಮದ ಅಭ್ಯಾಸ ಮಾಡಬೇಕು. ಭಾರತದ, ವಿದೇಶದ, ಸರ್ವಧರ್ಮದ ಕೋಟಿ ಕೋಟಿ ಜನತೆಯ ಲಕ್ಷ್ಯವನ್ನು ಯೋಗದ ಕಡೆಗೆ ಎಳೆದ ಶ್ರೇಯಸ್ಸು ಸ್ವಾಮಿ ರಾಮದೇವ ಅವರಿಗೆ ಇದೆ. ಮಡಿವಂತರು ಏನೇ ಅನ್ನಲಿ, ಅವರು ಮಾಡಿದ್ದು ಒಂದು ದೊಡ್ಡ ಕ್ರಾಂತಿ ಎಂಬುವುದರಲ್ಲಿ ಸಂದೇಹವಿಲ್ಲ.

ನೌಲಿ ಮಾಡುವಾಗ ಹೊಟ್ಟೆಯಲ್ಲಿ ನೋವಾದರೆ, ಅಸುಖದ ಭಾವನೆ ಬಂದರೆ, ಅದನ್ನು ಕೂಡಲೇ ನಿಲ್ಲಿಸಬೇಕು. ಈ ನಿಯಮ ಯಾವುದೇ ಆಸನಕ್ಕೂ ಅನ್ವಯಿಸುತ್ತದೆ, ಯಾವುದೇ ಶುದ್ಧಿಕ್ರಿಯೆಗೂ ಅನ್ವಯಿಸುತ್ತದೆ. ಯೋಗಾಭ್ಯಾಸವನ್ನು ಗುರುಗಳ ಮಾರ್ಗದರ್ಶನದಲ್ಲಿ ಮಾಡುವುದೇ ಒಳ್ಳೆಯದು. ಲೇಖನ ನೋಡಿ, ಪುಸ್ತಕ ನೋಡಿ, ಸಿ.ಡಿ. ನೋಡಿ ಸಾಹಸ ಮಾಡಬಾರದು. ಇವುಗಳಲ್ಲಿ ಒಂದು ಲಾಭವಿದೆ. ಗುರುಗಳಲ್ಲಿ ಕಲಿತ ಮೇಲೆ ಅಭ್ಯಾಸ ಮಾಡುವಾಗ ಕೆಲವು ಹೆಜ್ಜೆಗಳು ಮರೆತಿದ್ದರೆ ಸಿ.ಡಿ. ಹಾಗೂ ಪುಸ್ತಕಗಳು ಸಹಕಾರಿಯಾಗುತ್ತವೆ. ಮಹತ್ವದ ಮಾತೆಂದರೆ ಹೈ ಬ್ಲಡ್‌ ಪ್ರೆಶರ್‌ ಇರುವವರು, ಅಲ್ಸರ್‌ ಇರುವವರು. ಕರುಳಿನಲ್ಲಿ ನೋವು ಇರುವವರು ಈ ಕ್ರಿಯೆಗಳನ್ನು ಮಾಡಬಾರದು.

ನೌಲಿಕ್ರಿಯೆಯಿಂದ ದೇಹದಲ್ಲಿ ಪ್ರಾಣಶಕ್ತಿಯ ಸಂಚಾರವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಶಕ್ತಿಗಳು ಉತ್ತೇಜಿತಗೊಳ್ಳುತ್ತವೆ. ಇದರಿಂದ ಹೊಟ್ಟೆಗೆ ಒಳ್ಳೆಯ ವ್ಯಾಯಾಮ ಆಗುತ್ತದೆ, ಮಸಾಜು ದೊರೆಯುತ್ತದೆ. ನೇತಿ, ಧೌತಿ, ಬಸ್ತಿಗಳಿಂದ, ನೀರು ಹಾಗೂ ವಾಯುವಿನ ಮುಖಾಂತರ ದೊಡ್ಡ ಮತ್ತು ಸಣ್ಣ ಕರುಳುಗಳು ಸ್ವಚ್ಛವಾಗುತ್ತವೆ. ನೌಲಿ, ತ್ರಾಟಕ ಮತ್ತು ಕಪಾಲಭಾತಿಗಳಿಂದ ದೇಹಕ್ಕೆ ಶಕ್ತಿ ಚೈತನ್ಯ ಲಭಿಸುತ್ತದೆ. ನೌಲಿ ಮಾಡಲು ಸಾಧ್ಯವಾಗದವರು ಅಗ್ನಿಸಾರ ಕ್ರಿಯೆಯಿಂದ ತೃಪ್ತರಾಗಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X