• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾಮಿ ವಿವೇಕಾನಂದರು ಕವಿಗಳೂ ಆಗಿದ್ದರು...!

By Staff
|

ಸ್ವಾಮಿ ವಿವೇಕಾನಂದರು ಕವಿಗಳೂ ಆಗಿದ್ದರು...!
ವಿವೇಕಾನಂದರು ಶ್ರೇಷ್ಠ ವಾಗ್ಮಿಯಷ್ಟೇ ಆಗಿರಲಿಲ್ಲ, ಒಳ್ಳೆಯ ಕವಿಯೂ ಆಗಿದ್ದರು ಎಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆದರೆ, ವಿವೇಕಾನಂದರು ಸಂಸ್ಕೃತ ಭೂಯಿಷ್ಠವಾದ ಬಂಗಾಳಿ ಕಾವ್ಯಕ್ಕೆ ಆಧುನಿಕ ಭಾಷೆಯ ಸೊಗಡನ್ನು ನೀಡಿದ ಮೊದಲಿಗರು ಎಂದು ಆಧುನಿಕ ವಿಮರ್ಶಕರು ಗುರುತಿಸಿದ್ದಾರೆ.

Dr. G.V. Kulkarni ಡಾ।‘ಜೀವಿ’ ಕುಲಕರ್ಣಿ, ಮುಂಬಯಿ
jeevi65@gmail.com

ವಿವೇಕಾನಂದರ ಕಾವ್ಯಪ್ರತಿಭೆಯ ಬಗ್ಗೆ, ಅವರಿಗೆ ಸಾಹಿತ್ಯದಲ್ಲಿ ಇದ್ದ ಒಲವಿನ ಬಗ್ಗೆ, ಬಹಳ ಕಡಿಮೆ ಜನರಿಗೆ ಗೊತ್ತಿದೆ. ಡಾ। ಎಚ್‌.ಎನ್‌.ಮುರಳೀಧರ ಅವರು ಬೆಂಗಳೂರಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಅವರು ಪ್ರತಿವಾರ ವಿವೇಕಾನಂದರ ಬಗ್ಗೆ ಉಪನ್ಯಾಸ ನೀಡಲು ಮೈಸೂರಿಗೆ ಹೋಗುತ್ತಾರೆ. ನನ್ನ ಮೈಸೂರು ಮಿತ್ರ ಕೆ.ಆರ್‌.ಮೋಹನ ಅವರು ನನಗೆ ಪ್ರೊ. ಮುರಳೀಧರರ ಪರಿಚಯ ಮಾಡಿಕೊಟ್ಟರು. ಮುರಳೀಧರ ಅವರು ತಾವು ಬರೆದ ಹಲವಾರು ಪುಸ್ತಕ ಕೊಟ್ಟರು. ಅದರಲ್ಲಿ ‘ವಿವೇಕಾನಂದ ಕವಿತಾವಳಿ’ ಕೂಡ ಒಂದಾಗಿತ್ತು. ವಿವೇಕಾನಂದರ ಬಗ್ಗೆ ಹೊಸ ವಿಷಯಗಳನ್ನು ಬರೆಯುವಾಗ ಅವರ ಕವಿತೆಗಳ ಬಗ್ಗೆ ಬರೆಯುವುದು ಔಚಿತ್ಯಪೂರ್ಣವೆನಿಸಿತು.

‘ವಿವೇಕಾನಂದ ಕವಿತಾವಳಿ’ಯಲ್ಲಿ ಸ್ವಾಮಿ ವಿವೇಕಾನಂದರ ಆಯ್ದ ಕವಿತೆಗಳ ಕನ್ನಡ ಅನುವಾದವನ್ನು ಪ್ರೊ. ಮುರಳೀಧರ ಅವರು ಒದಗಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ವಿವೇಕಾನಂದರ ‘ಸನ್ಯಾಸಿ ಗೀತೆ’ ಎಂಬ ಕವನ ಬಹಳ ಹಿಂದೆ ಅನುವಾದಿಸಿದ್ದರು. ಆದರೆ ವಿವೇಕಾನಂದರ ಹೆಚ್ಚಿನ ಮಹತ್ವದ ಕವಿತೆಗಳ ಕನ್ನಡ ಅನುವಾದ ಆಗಿರಲಿಲ್ಲ. ಈ ಕಿರಿಯ ಕವನ ಸಂಕಲನಕ್ಕೆ ಮುನ್ನುಡಿ ಬರೆದವರು, ‘ಬದುಕಲು ಕಲಿಯಿರಿ’ ಪುಸ್ತಕದ ಖ್ಯಾತಿಯ ಶ್ರೀ ಜಗದಾತ್ಮಾನಂದರು. ಅವರು ಹೀಗೆ ಹೇಳುತ್ತಾರೆ, ‘‘ನಮ್ಮ ದೇಶದಲ್ಲಿ ಸಂತ ಮಹಾತ್ಮರು ರಚಿಸಿದ ಶ್ರೇಷ್ಠ ಕಾವ್ಯದ ಪರಂಪರೆಯೇ ಇದೆ. ಶಂಕರಾಚಾರ್ಯರ ಭಕ್ತಿಗೀತೆಗಳು, ಅಲ್ಲಮ, ಬಸವಣ್ಣ, ಅಕ್ಕ ಮಹಾದೇವಿ ಮುಂತಾದ ಶರಣರ ವಚನಗಳು; ಕನಕ ಪುರಂದರದಾಸಾದಿ ದಾಸರ ಪದಗಳು, ಮೀರಾ, ಕಬೀರ, ತುಲಸೀದಾಸ, ತುಕಾರಾಮ, ಜ್ಞಾನೇಶ್ವರ ಮುಂತಾದವರ ಭಜನೆಯ ಹಾಡುಗಳು - ಹೀಗೆ ಅನುಭಾವಿ ಸಂತರ ಪಟ್ಟಿ ಸುದೀರ್ಘವಾಗಿದೆ.’’ ಎಂದು.

Vivekananda‘‘ಸ್ವಾಮಿ ವಿವೇಕಾನಂದರು ವಿದ್ಯಾರ್ಥಿಯಾಗಿದ್ದಾಗಲೇ ಸಂಸ್ಕೃತ, ಬಂಗಾಳಿ ಮತ್ತು ಇಂಗ್ಲಿಷ್‌ ಭಾಷೆಗಳ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ವಿಶೇಷ ಪ್ರಭುತ್ವವನ್ನು ಸಾಧಿಸಿಕೊಂಡ ಮೇಧಾವಿಗಳಾಗಿದ್ದರು. ಕಾಳಿದಾಸ, ಮಿಲ್ಟನ್‌, ವರ್ಡ್ಸ್‌ವರ್ತ್‌ ಅವರ ಮೆಚ್ಚಿನ ಕವಿಗಳಾಗಿದ್ದರು. ಅವರ ಭಾವ ತೀವ್ರತೆ, ಭಾಷಾಪ್ರಭುತ್ವ, ಅಭಿವ್ಯಕ್ತಿಯ ಶಕ್ತಿ ಅಸಾಧಾರಣವಾದವು. ಅವರ ಬಂಗಾಳಿ ಗದ್ಯ ಬರವಣಿಗೆಯನ್ನು ವಿಶ್ವಕವಿ ರವೀಂದ್ರನಾಥ ಠಾಗೋರರೇ ‘ಅತ್ಯುತ್ತಮ ಬಂಗಾಳಿ ಗದ್ಯ ಮಾದರಿ’ ಎಂದು ಪ್ರಶಂಸಿಸಿದ್ದುಂಟು. ಸಂಸ್ಕೃತ ಭೂಯಿಷ್ಠವಾದ ಬಂಗಾಳಿ ಕಾವ್ಯಕ್ಕೆ ಆಧುನಿಕ ಭಾಷೆಯ ಸೊಗಡನ್ನು ನೀಡಿದ ಮೊದಲಿಗರು ಎಂದು ಅವರನ್ನು ಆಧುನಿಕ ವಿಮರ್ಶಕರು ಗುರುತಿಸಿದ್ದಾರೆ. ಹೀಗಾಗಿ ಕೇವಲ ಅಧ್ಯಾತ್ಮಿಕ ದೃಷ್ಟಿಯಿಂದಷ್ಟೇ ಅಲ್ಲ, ಉತ್ತಮ ಕಾವ್ಯಗುಣದಿಂದಲೂ ಈ ಭಾವಗೀತೆಗಳು ಸತ್ವಪೂರ್ಣ ಕೃತಿಗಳಾಗಿವೆ.’’ ಎಂದೂ ಮುನ್ನುಡಿಯಲ್ಲಿ ಹೇಳುತ್ತಾರೆ.

ಸ್ವಾಮಿ ವಿವೇಕಾನಂದರ ಸಮಗ್ರ ಕೃತಿಶ್ರೇಣಿಯ ವಿವಿಧ ಸಂಪುಟಗಳಿಂದ ಆಯ್ದ ಕವನಗಳನ್ನು ಒಂದೆಡೆ ತಂದು ಒಂದು ಕವನ ಸಂಗ್ರಹವನ್ನು, ‘ದೇವರ ಶೋಧನೆ ಮತ್ತು ಇತರ ಕವನಗಳು’(In Search of God and other Poems) ಹೆಸರಲ್ಲಿ ಪ್ರಕಟಿಸಲಾಗಿದೆ. ಇದನ್ನು ಕಲಕತ್ತೆಯ ಅದ್ವೈತಾಶ್ರಮದವರು 1993ರಲ್ಲಿ ಪ್ರಕಟಿಸಿದರು. ಈಗ ಅದರ ಆರನೆಯ ಆವೃತ್ತಿ ಪ್ರಕಟಗೊಂಡಿದೆ. ಅದರಲ್ಲಿ 23 ಇಂಗ್ಲಿಷ್‌ ಕವನಗಳು, ಒಂಬತ್ತು ಬಂಗಾಳಿ ಕವನಗಳು, ಐದು ಸಂಸ್ಕೃತ ರಚನೆಗಳು, ಒಂದು ಹಿಂದೀ ಗೀತೆಯ ಆಂಗ್ಲ ಅನುವಾದವಿದೆ.

ಪ್ರಸ್ತುತ ಕವನ ಸಂಗ್ರಹದಲ್ಲಿ ಪ್ರೊ. ಮುರಳೀಧರರು 30 ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನುಬಂಧದಲ್ಲಿ ಬೇರೆಯವರು ಅನುವಾದಿಸಿದ ನಾಲ್ಕು ಪದ್ಯಗಳನ್ನು ಕೊಟ್ಟಿದ್ದಾರೆ. ಅದರಲ್ಲಿ ಕುವೆಂಪು ಅವರು ಅನುವಾದಿಸಿದ ‘ಸನ್ಯಾಸಿಗೀತೆ’ ಕೂಡ ಇದೆ. ಇಲ್ಲಿ ಎಲ್ಲಕ್ಕಿಂತ ಮಹತ್ವದ ವಿಷಯವನ್ನು ಪ್ರೊ.ಮುರಳೀಧರ ಅವರು ಒದಗಿಸಿದ್ದಾರೆ. ಕೆಲವು ಪದ್ಯಗಳಿಗೆ ಅವುಗಳ ಸಂದರ್ಭ ಸೂಚಿ ಇಲ್ಲದಿದ್ದರೆ ಅರ್ಥವಾಗುವುದೇ ಕಠಿಣ. ಸಾಂದರ್ಭಿಕ (ಸುದೀರ್ಘ) ಟಿಪ್ಪಣಿ ಒದಗಿಸಿ ಮಹದುಪಕಾರ ಮಾಡಿದ್ದಾರೆ.

ಮೊದಲನೆಯ ಪದ್ಯ ‘ಶ್ರೀ ರಾಮಕೃಷ್ಣ ಸ್ತೋತ್ರ’. ವಿವೇಕಾನಂದರ ಜೀವನದ ಪ್ರವಾಹವನ್ನೇ ಬದಲಿಸಿಬಿಟ್ಟವರು ಶ್ರೀ ರಾಮಕೃಷ್ಣ ಪರಮಹಂಸರು. ಅವರ ಸ್ತುತಿಯ ಪದ್ಯವನ್ನು ಅನುವಾದಿಸುವಾಗ ಪ್ರೊ. ಮುರಳೀಧರರು ಕವಿ ಪಂಜೆಯವರ ಒಂದು ಪದ್ಯದ ಧಾಟಿಯನ್ನು ಅನುಸರಿಸಿದ್ದಾರೆ.

ರಾಮಕೃಷ್ಣ ಸ್ತೋತ್ರ

ಯಾರ ಪ್ರೇಮದ ಪರಮಪೂರವು ಹೀನರೆದೆಗೂ ಹರಿಯಿತೊ,
ಯಾವ ಲೋಕಾತೀತ-ಮಹಿಮನ ಕರುಣೆ ಲೋಕಕೆ ದುಡಿಯಿತೋ,
ಯಾವನಪ್ರತಿ-ಮಹಿಮನೊ ಮೇಣ್‌ ಮಾತೆ ಸೀತೆಯ ನಾಥನೋ,
ಯಾರು ಸೀತೆಯ ಭಕುತಿಯಿಂದಲಿ ಜ್ಞಾನದೇಹದಿ ವ್ಯಾಪ್ತನೊ;
ಯಾರು ಮಧುತರ ಶಾಂತಿಗೀತೆಯ ಯುದ್ಧರಂಗದಿ ಮೊಳಗುತ
ಪ್ರಳಯಶಬ್ದವ ಸ್ತಬ್ಧಗೊಳಿಸುತ ಸಿಂಹಗರ್ಜನೆ ಮಾಡುತ
ಮೋಹತಿಮಿರವನಿಲ್ಲಗೈಯುತ ಕೃಷ್ಣರೂಪದಿ ನಿಂದನೋ
ಅವನೆ ಇಂದಿಗೆ ರಾಮಕೃಷ್ಣನ ಹೆಸರೊಳೆಸೆಯುತಲಿರುವನು !

***

ಪ್ರೊ. ಮುರಳೀಧರ ಅವರು ಸ್ವಾಮಿ ವಿವೇಕಾನಂದರ ಪದ್ಯಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರೇರಣೆಯನ್ನು ಪಡೆದದ್ದು ಬೆಳಗಾವಿಯ ರಾಮಕೃಷ್ಣ ಮಿಶನ್‌ನ ಅಧ್ಯಕ್ಷ ಸ್ವಾಮಿ ಪುರುಷೋತ್ತಮಾನಂದ ಅವರಿಂದ. ಅವರು ಸ್ವಾಮಿ ವಿವೇಕಾನಂದರ ಸಮಗ್ರ ಜೀವನವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸುವಾಗ ಪ್ರೊ.ಮುರಳೀಧರರಿಂದ ಕೆಲವು ಪದ್ಯಗಳನ್ನು ಅನುವಾದ ಮಾಡಿಸಿದರು. ಮುಂದೆ ಮುರಳೀಧರರು ಹೆಚ್ಚಿನ ಕವಿತೆಗಳನ್ನು ಅನುವಾದಿಸಿ ‘ವಿವೇಕಾನಂದ ಕವಿತಾವಳಿ’ ಎಂಬ ಪುಸ್ತಕದ ರೂಪ ನೀಡಿದರು.

‘‘ತಮ್ಮನ್ನು ಒಬ್ಬ ಕವಿಯಾಗಿ ಗುರುತಿಸಿಕೊಳ್ಳುವ ಅಥವಾ ತಮ್ಮ ರಚನೆಗಳನ್ನು ಕಾವ್ಯ ಸಿದ್ಧಿಯ ಹಿನ್ನೆಲೆಯಲ್ಲಿ ಗುರುತಿಸಬೇಕೆಂಬ ಯಾವುದೇ ಉದ್ದೇಶ ಸ್ವಾಮೀಜಿಯವರಿಗೆ ಇರಲಿಲ್ಲ ಎಂಬುದು ಸುಸ್ಪಷ್ಟ’’ ಎನ್ನುತ್ತಾರೆ ಮುರಳೀಧರ. ಸ್ವಾಮಿಗಳು ಕವನ ರಚಿಸಲು ಒಂದು ಕಾರಣ ಇಂಗ್ಲಿಷ್‌ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಅವರು ಪಡೆದ ಪ್ರಾವೀಣ್ಯವಾಗಿದ್ದರೆ, ಇನ್ನೊಂದು ಕಾರಣ ಅವರು ಓದಿದ ಬಂಗಾಲಿಯ ಉತ್ತಮ ಕಾವ್ಯಗಳ ಪ್ರಭಾವವಾಗಿತ್ತು.

ಹದಿನಾರನೆಯ ಶತಮಾನದ ಕವಿಕಂಕಣ ಮುಕುಂದರಾಮ ಹಾಗೂ ಹತ್ತೊಂಬತ್ತನೆಯ ಶತಮಾನದ ಮೈಕಲ್‌ ಮಧುಸೂದನ ದತ್ತ (‘ಮೇಘನಾದ ವಧ’ ಕಾವ್ಯದ ಕರ್ತೃ) ಇವರ ಕಾವ್ಯಗಳ ಪ್ರಭಾವವೂ ಆಗಿತ್ತು. ಇಂಗ್ಲಿಷ್‌ ಮಹಾಕವಿಗಳಾದ ಮಿಲ್ಟನ್‌ ಮತ್ತ್‌ ವರ್ಡ್ಸ್‌ವರ್ತ್‌ ಇವರ ನೆಚ್ಚಿನ ಕವಿಗಳಾಗಿದ್ದರು. ಆ ಕಾಲದಲ್ಲಿ ಕವಿಗಳು ಕವಿತೆ ಬರೆಯುವಾಗ ಕೃತಕ ಭಾಷೆಯನ್ನು ಬಳಸುತ್ತಿದ್ದರು. ಸ್ವಾಮಿ ವಿವೇಕಾನಂದರು ಆಡುನುಡಿಯಲ್ಲಿ, ಸರಳ ಭಾಷೆಯಲ್ಲಿ ಕವಿತೆ ರಚಿಸಿದರು. ರವೀಂದ್ರನಾಥ ಠಾಕೂರ ಹಾಗೂ ಪ್ರಥಮನಾಥ ಚೌಧರಿ ಅವರಿಂದ ಪ್ರಾರಂಭವಾದ ಆಡುನುಡಿಯ ಪರವಾದ ಕಾವ್ಯದ ಚಳವಳಿಯ ಮೂಲ ಸ್ವಾಮಿ ವಿವೇಕಾನಂದರಲ್ಲಿ ದೊರೆಯುತ್ತದೆ ಎಂದು ಕೆಲವು ವಿಮರ್ಶಕರ ಅಭಿಪ್ರಾಯವಿದೆಯಂತೆ.

‘ಈಶಾನ್ವೇಷಣೆ’ ಎಂಬ ಪದ್ಯ ‘ಇನ್‌ ಸರ್ಚ್‌ ಆಫ್‌ ಗಾಡ್‌’ (In Search of God)ಎಂಬ ಕವಿತೆಯ ಅನುವಾದ. ಪ್ರೊ.ರೈಟ್‌ ಎಂಬುವವರು ಸಮ್ಮೇಲನದ ಅಧ್ಯಕ್ಷರಿಗೆ ಬರೆದ ಪತ್ರದಿಂದಾಗಿ ವಿವೇಕಾನಂದರಿಗೆ ವಿಶ್ವ ಧರ್ಮ ಸಮ್ಮೇಲನದಲ್ಲಿ ಭಾಗವಹಿಸಲು ಅವಕಾಶ ದೊರೆತಿತ್ತು. ಪ್ರೊ. ರೈಟ್‌ ಅವರಿಗೆ ಸ್ವಾಮಿ ವಿವೇಕಾನಂದರು ಕೃತಜ್ಞತೆ ವ್ಯಕ್ತಪಡಿಸಿ ಒಂದು ಪತ್ರ ಬರೆದಿದ್ದರು. ಆ ಪತ್ರದಲ್ಲಿ ಈ ಪದ್ಯವಿದೆ. ತಾವು ಸತ್ಯಾನ್ವೇಷಣೆಯಲ್ಲಿ ತೊಳಲಾಡುತ್ತಿದ್ದಾಗ ಶ್ರೀ ರಾಮಕೃಷ್ಣರನ್ನು ಕಂಡರು, ಆಗ ತಮ್ಮ ಅನ್ವೇಷಣೆಗೆ ಸಾರ್ಥಕತೆ ಬಂತು ಎಂಬ ಭಾವ ಈ ಸುದೀರ್ಘ ಕವನದಲ್ಲಿದೆ.

‘‘ಬೆಟ್ಟಗುಡ್ಡಗಳಲ್ಲಿ, ಪರ್ವತದ ತಪ್ಪಲಲಿ,
ಗುಡಿಮಸೀದಿಗಳಲ್ಲಿ, ಚರ್ಚುಗಳಲಿ,
ವೇದಶಾಸ್ತ್ರಗಳಲ್ಲಿ ಬೈಬಲು ಕುರಾನಿನಲಿ
ನಿನ್ನನರಸುತ ನೊಂದೆ ವಿಫಲತೆಯಲಿ.’’
ಹೀಗೆ ದೇವರನ್ನು ಅರಸುತ್ತ ಹೊರಟಾಗ,
‘‘ಕ್ಷಣವೊಂದು ಯುಗವಾಗಿ ಬರಿಯ ಕಹಿಗೋಳಿನಲಿ
ವರುಷವೆನಿತೋ ಉರುಳಿ ಸಾಗುತಿತ್ತು;
ಕಡೆಗೊಂದು ದಿನದಲ್ಲಿ ಅಳಲುಗಳ ಮಧ್ಯದಲಿ
ಯಾರೊ ಕರೆವಂತೆನ್ನ ಕೇಳಿಸಿತ್ತು:’’

ಆಗ ‘ನನ್ನ ಮಗು, ಓ ಕಂದ’ ಎಂಬ ಮೃದು ನುಡಿ ಇವರ ಬೆಂದ ಕರುಳಿಗೆ ತಂಪನೆರೆಯಿತಂತೆ. ಆ ಪರಮಧ್ವನಿಯು ‘ಎದೆಯ ಬಾಗಿಲ ತೆರೆದು ಬೆಳಕು ಚೆಲ್ಲಿ,’ತ್ತು. ಆಗ ಗುರುವಿನ ನುಡಿ ಕೇಳುತ್ತದೆ.

‘‘ನಾ ನಿನ್ನ ಬಳಿಯಲ್ಲೆ, ನಿತ್ಯವೂ ಇರುತಿರುವೆ’
ಎಂಬ ಸವಿನುಡಿಯ ನೀನುಸಿರುತಿರುವೆ;
ನೀನೆನ್ನ ಜೊತೆಗಿರಲು ಎದೆಗೆ ಬಲ ತುಂಬುವುದು,
ನೂರು ಸಾವಿಗು ನಾನು ಅಂಜದಿರುವೆ.’’

ಇಲ್ಲಿ ತಮ್ಮ ಗುರುವಿನ ಬಗ್ಗೆ ಇರುವ ಅಗಾಧ ಶ್ರದ್ಧೆ ವ್ಯಕ್ತವಾಗುವದು.

‘ಜೀವಂತ ಭಗವಂತ’ ಎಂಬ ಪದ್ಯ ‘ದಿ ಲಿವಿಂಗ್‌ ಗಾಡ್‌’ (The Living God)ಪದ್ಯದ ಅನುವಾದ. ಇದನ್ನು ವಿವೇಕಾನಂದರು 1897 ಜುಲೈ 9ರಂದು ತಮ್ಮ ಅಮೇರಿಕನ್‌ ಸ್ನೇಹಿತನಿಗೆ ಬರೆದ ಪತ್ರದಲ್ಲಿತ್ತು. ನಮ್ಮೊಳಗೇ ದೇವರು ಇರುವಾಗ ನಾವು ಮೂರ್ತಿಗಳಲ್ಲಿ ದೇವರನ್ನು ಅರಸುವ ಕಾರಣವಿಲ್ಲ ಎಂಬ ಭಾವ ಇಲ್ಲಿ ಸತ್ವಯುತವಾಗಿ ಮೂಡಿಬಂದಿದೆ.

‘‘ಯಾರು ನಿನ್ನೊಳಹೊರಗ ತುಂಬುತ
ದುಡಿವೆಲ್ಲ ಕೈಯಾಗಿರುವನೋ
ನಡೆವೆಲ್ಲ ಕಾಲಾಗಿರುವನೋ
ಎಲ್ಲರೊಡಲಾಗಿರುವನೋ
ಅವನನಾರಾಧಿಸುತ ಮುರಿದಿಡು
ಮಿಕ್ಕ ಮೂರ್ತಿಗಳೆಲ್ಲವ.’’

ದೇವರು ಸರ್ವವ್ಯಾಪ್ತ. ಮೇಲೆ, ಕೆಳಗೆ, ಪಾಪಿಯಲ್ಲಿ, ಸಂತನಲ್ಲಿ, ದೇವನಲ್ಲಿ, ಕೀಟದಲ್ಲಿ ಎಲ್ಲೆಡೆ ಭಗವಂತನಿದ್ದಾನೆ. ಅವನನ್ನು ಆರಾಧಿಸು ಎಂದು ಕರೆಯುತ್ತಾರೆ. ‘ದೇವರ ಪ್ರತಿಬಿಂಬ ಜಗದಲ್ಲೆಲ್ಲ ತುಂಬಿರುವಾಗ, ಅವನ ಬೆಳಗಿಗೆ ನಾವು ಕುರುಡರಾಗಿರುತ್ತೇವೆ, ಭ್ರಾಂತರಾಗಿ ನೆರಳುಗಳ ಹಿಂದೋಡುತ್ತೇವೆ.’ ಎಂಬ ಭಾವ ಈ ಕವನದಲ್ಲಿದೆ.

‘ಸುಪ್ತ ದೈವರು’ ಎಂಬ ಪದ್ಯ, ಸ್ವಾಮೀಜಿಯವರು ಕಾಶ್ಮೀರದಲ್ಲಿದ್ದಾಗ ಬರೆದ ‘ಏಂಜೆಲ್ಸ್‌ ಅನವೇರ್ಸ್‌’ (Angels Unawares)ಎಂಬ ಇಂಗ್ಲಿಷ್‌ ಪದ್ಯದ ಅನುವಾದ. ಪ್ರತಿಯಾಬ್ಬ ವ್ಯಕ್ತಿಯ ಪ್ರಗತಿಗೂ ಅವನಿಗೇ ವಿಶಿಷ್ಟವಾದ ನಿಯಮಗಳಿರುತ್ತವೆ. ಈ ನಿಯಮಗಳ ಸಾಧಾರಣೀಕರಣ ಅವೈಜ್ಞಾನಿಕ ಎನ್ನುತ್ತಾರೆ ಸ್ವಾಮೀಜಿ. ಒಂದು ಸಂಗತಿ ಒಬ್ಬನ ಬೆಳವಣಿಗೆಗೆ ಪೂರಕವಾದರೆ, ಅದೇ ಇನ್ನೊಬ್ಬನಿಗೆ ಮಾರಕವಾಗಬಹುದು.

ಈ ಪದ್ಯದಲ್ಲಿ ಮೂರು ಬಗೆಯ ವ್ಯಕ್ತಿಗಳನ್ನು ಚಿತ್ರಿಸುತ್ತಾರೆ. 1) ದುಃಖ-ಸಂತಾಪದಲ್ಲಿ ಮುಳುಗಿದ ವ್ಯಕ್ತಿ. ಒಂದು ಕಿರಣ ಅವನ ಜೀವನದಲ್ಲಿ ಪರಿವರ್ತನೆಯನ್ನು ತರುತ್ತದೆ. ಇತರರು ಅದಕ್ಕೆ ಮೌಢ್ಯವೆಂದು ಕರೆದರೂ, ಆ ಮೌಢ್ಯವೇ ಧನ್ಯತೆಯನ್ನು ತಂದಿರುತ್ತದೆ. (‘ಓ, ಮೌಢ್ಯವೇ, ಧನ್ಯ ಧನ್ಯ ನೀನು!’). 2) ಭೋಗದ ಉನ್ಮಾದದಲ್ಲಿ ಮುಳುಗಿದ ವ್ಯಕ್ತಿಗೆ ದೈವವು ನೋವು-ಸಂಕಟಗಳ ರೂಪದಲ್ಲಿ ಬರುತ್ತದೆ. ನೋವು-ಸಂಕಟದಿಂದ ಅವನ ಐಶ್ವರ್ಯ, ಅಧಿಕಾರ ಮಂಗಮಾಯ ಆಗುತ್ತದೆ, ಸಂಕಟವೇ ಅವನಿಗೆ ಧನ್ಯತೆ ತರುತ್ತದೆ. (‘ಸಂಕಟವೆ ನೀನಿಂದು ಧನ್ಯ, ಧನ್ಯ’) 3) ಮೂರನೆಯವ ನಿಷ್ಕಿೃಯತೆಯಲ್ಲಿ ಸಜ್ಜನಿಕೆಯನ್ನು ಪಡೆದಿರುವ ವ್ಯಕ್ತಿ. ಇವನು ಎಲ್ಲದರಲ್ಲಿಯೂ ದೋಷವನ್ನು ಕಾಣುತ್ತಾನೆ. ದೈವ ಈತನಿಗೆ ಅಧಃಪತನದ ರೂಪದಲ್ಲಿ ಬರುತ್ತದೆ. ತಾನೇ ಜಾರಿಬಿದ್ದಾಗ ಈತ ಕ್ರಿಯಾತ್ಮಕನಾಗುತ್ತಾನೆ. ಅವನ ಅಧಃಪತನದ ಕ್ಷಣವೇ ಧನ್ಯತೆಯ ಮೂಲವಾಗುತ್ತದೆ. (‘ಓ, ಅಧಃಪತನವೇ, ಧನ್ಯ ನೀನು!’). ಆದ್ದರಿಂದ ಯಾವುದೇ (ಘಟನೆ) ತನ್ನಷ್ಟಕ್ಕೆ ವರವೂ ಅಲ್ಲ, ಶಾಪವೂ ಅಲ್ಲ. ಅದು ವ್ಯಕ್ತಿಯ ವಿಕಾಸಕ್ಕೆ ಮಾಡುವ ಪರಿಣಾಮ ಮುಖ್ಯ ಎಂಬ ದರ್ಶನ ಈ ಕವನದಲ್ಲಿದೆ.

‘ಜುಲೈ ನಾಲ್ಕನೇ ದಿನಕ್ಕೆ’ ಎಂಬ ಪದ್ಯ, ‘ಟು ದ ಫೋರ್ತ್‌ ಜುಲೈ’ (To the Fourth July)ಎಂಬ ಆಂಗ್ಲ ಪದ್ಯದ ಅನುವಾದ. ಜುಲೈ ನಾಲ್ಕು, ಅಮೇರಿಕೆಯ ಸ್ವಾತಂತ್ರ್ಯ ದಿನ. ಸ್ವಾಮೀಜಿ ಆ ದಿನವನ್ನು ತಮ್ಮ ಅಮೇರಿಕನ್‌ ಶಿಷ್ಯರೊಂದಿಗೆ ಆಚರಿಸಿದಾಗ ಓದಿದ ಕವಿತೆ ಇದು (1898). ಈ ಪದ್ಯ ಎರಡು ನೆಲೆಯಲ್ಲಿದೆ. ಇದು ಅಮೇರಿಕೆಯ ಸ್ವಾತಂತ್ರ್ಯದ ಒಂದು ನೆಲೆ. ಇನ್ನೊಂದು ನೆಲೆಯಲ್ಲಿ ತ್ಯಾಗ-ಸಂಘರ್ಷಗಳ ಮೂಲಕ ಮುಕ್ತಿ ಪಥದೆಡೆ ನಡೆಯುವ ಆತ್ಮದ ಸ್ವಾತಂತ್ರ್ಯದ್ದು. ಸ್ವಾಮಿ ವಿವೇಕಾನಂದರು ಪಾರ್ಥಿವ ದೇಹ ತ್ಯಜಿಸಿ ಜೀವನ್ಮುಕ್ತಿ ಪಡೆದ ದಿನ ಜುಲೈ ನಾಲ್ಕು (1902). ಆದ್ದರಿಂದ ಈ ಕವನಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ವಿವರಗಳನ್ನು ಸ್ವಾಮಿ ಪುರುಷೋತ್ತಮಾನಂದರು ‘ವಿಶ್ವಮಾನವ ವಿವೇಕಾನಂದ’ ಪುಸ್ತಕದಲ್ಲಿ ಬರೆಯುತ್ತಾರೆ.

‘ಓವೋ, ಬೆಳಕಿನ ಪ್ರಭುವೆ / ಸ್ವಾಗತವು ನಿನಗೆ; ನೀನಿಂದು ಮುಕ್ತಿಯನು ಪಸರಿಸಿರುವೆ’ ಈ ಸಾಲುಗಳು ಅಮೇರಿಕೆಯ ಸ್ವಾತಂತ್ರ್ಯ ತಂದ ದೇವತೆಗೆ ಅನ್ವಯಿಸಿವೆ -

‘‘ಕೊನೆಗೊಂದು ದಿನ ಬಂತು, ಕೆಲಸ ಹಣ್ಣಾಯಿತು,
ತ್ಯಾಗ ಪೂಜೆಗಳೆಲ್ಲಾ ಪೂರ್ಣವಾಯ್ತು.
ಅಂದು, ಕರುಣಾನಿಧಿಯೆ, ಮೇಲೆದ್ದು ನಿಂತು ನೀ
ಮುಕ್ತಿ ಪ್ರಭೆಯನು ಸುರಿದೆ ಜಗದ ಮೇಲೆ!’’

ಈ ಪದ್ಯದ ಕೊನೆಯ ಸಾಲುಗಳು ಹೀಗಿವೆ:

‘‘ನಡೆ ಮುಂದೆ ಓ ಪ್ರಭುವೆ, ತಡೆಯದಲೆ ನಡೆಮುಂದೆ,
ನಾಡದೆಲ್ಲವು ಬೆಳಕ ಪ್ರತಿಫಲಿಸುವರೆಗೂ,
ನಿನ್ನ ಬೆಳಕದು ಜಗವ ತಬ್ಬುವರೆಗೂ,
ಜನವೆಲ್ಲ ತಲೆಯೆತ್ತಿ, ಸಂಕೋಲೆಗಳ ಕಡಿದು
ಸಂತಸದಿ ಮರುಜೀವ ಪಡೆವ ವರೆಗೂ!’’

ಇಲ್ಲಿಯ ‘ಮರುಜೀವ’ ಶಬ್ದ ಜೀವನ್ಮುಕ್ತಿಯನ್ನು ಸೂಚಿಸುತ್ತಿದೆ.

‘ಅನುಬಂಧ’ದಲ್ಲಿ ವಿವೇಕಾನಂದರ ಪ್ರಸಿದ್ಧ ಗೀತವಿದೆ. ಅದು ‘ಸನ್ಯಾಸಿಗೀತೆ’. ಇದನ್ನು ರಾಷ್ಟ್ರಕವಿ ಕುವೆಂಪು ಅವರು ಅನುವಾದಿಸಿದ್ದಾರೆ.

‘‘ಏಳು, ಮೇಲೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!’’

ಕೊನೆಗೆ ‘ಓಂ! ತತ್‌! ಸತ್‌! ಓಂ!’ ಎಂಬ ಸಾಲು ಪಲ್ಲವಿಯಂತೆ ಬಂದಿದೆ. ಇದರ ಹೆಸರು ‘ಸನ್ಯಾಸಿಗೀತೆ’ ಆಗಿದ್ದರು ಇದಲ್ಲಿ ಉಕ್ಕಿ ಹರಿಯುತ್ತಿರುವುದು ರಾಷ್ಟ್ರಪ್ರೇಮ.

‘‘ಕುಟ್ಟಿ ಪುಡಿಪುಡಿ ಮಾಡು ಮಾಯೆಯು ಕಟ್ಟಿ ಬಿಗಿದಿಹ ಹಗ್ಗವ;
ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!
ಮುದ್ದಿಸಲಿ ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು;
ಕಬ್ಬಿಣವೋ? ಕಾಂಚನವೋ? ಕಟ್ಟಿದ ಕಣ್ಣಿ ಕಣ್ಣಿಯೆ ನಿತ್ಯವು.’’

ಇಲ್ಲಿಯ ಮೂಲದ ರಭಸವನ್ನು ಉತ್ಕಟತೆಯನ್ನು ಕುವೆಂಪು ಅವರು ಕನ್ನಡಕ್ಕೆ ತಂದಿದ್ದಾರೆ. ಇದು ಅನುವಾದದಂತೆ ಕಾಣುವುದಿಲ್ಲ. ಕನ್ನಡದ ಮೂಲ ಕಾವ್ಯದಷ್ಟೇ ಸತ್ವಯುತವಾಗಿದೆ.

ನಮ್ಮ ರಾಷ್ಟ್ರೀಯ ನೇತಾರರಲ್ಲಿ ರಾಷ್ಟ್ರಭಕ್ತಿಯಾಂದಿಗೆ ಅಧ್ಯಾತ್ಮ-ಚಿಂತನೆ ಅವಿಚ್ಛಿನ್ನವಾಗಿ ಬೆರೆತಿತ್ತು. ಗಾಂಧೀಜಿ ರಾಜಕಾರಣಿಗಳಾಗಿದ್ದರೂ ಅವರು ‘ಅನಾಸಕ್ತ ಯೋಗಿ’ಯೂ ಆಗಿದ್ದರು. ಅವರ ‘ಗೀತಾ ಪ್ರವಚನ’ ಅನಾಸಕ್ತಯೋಗವನ್ನೇ ಸಾರುತ್ತದೆ.

ಮಹರ್ಷಿ ಶ್ರೀಅರವಿಂದರು, ಕ್ರಾಂತಿಯ ಕಿಡಿಯನ್ನು ಹೊತ್ತಿಸಿ ತರುಣರಿಗೆ ಮಾರ್ಗದರ್ಶನ ಮಾಡಿದರು. ಹಿಂದೂ ಸಂಸ್ಕೃತಿಯನ್ನು ಮಂಡಿಸಿ ‘ಫೌಂಡೇಶನ್ಸ್‌ (ಡಿಫೆನ್ಸ್‌) ಆಫ್‌ ಇಂಡಿಯನ್‌ ಕಲ್ಚರ್‌’ ಎಂಬ ಅದ್ಭುತ ಪುಸ್ತಕವನ್ನು ಬರೆದರು. ವಿವೇಕಾನಂದರು ಒಂದು ರೀತಿಯಲ್ಲಿ ಬಾಪೂಜಿಗೆ, ಶ್ರೀಅರವಿಂದರಿಗೆ ಗುರುಸ್ಥಾನದಲ್ಲಿದ್ದರು. ಇಂತಹ ಮಹಾಮಹಿಮರ ಅಭ್ಯಾಸ ಇಂದಿನ ತರುಣರಿಗೆ ಅವಶ್ಯಕ. ಪಾಶ್ಚಾತ್ಯ ಸಂಸ್ಕೃತಿಯ ಮೋಹಕ್ಕೊಳಗಾಗಿ ನಾವು ನಮ್ಮದನ್ನು ಕಳೆದುಕೊಳ್ಳುತ್ತೇವೆ ಎಂಬ ಭಯ ಆವರಿಸಿದಾಗ ಸ್ವಾಮಿ ವಿವೇಕಾನಂದರ ಸಮಗ್ರ ಸಾಹಿತ್ಯದ ಅಭ್ಯಾಸ ತರುಣರಿಗೆ ಅವಶ್ಯಕವಾಗಿದೆ.

***

(‘ವಿವೇಕಾನಂದ ಕವಿತಾವಳಿ’- ಪ್ರೊ. ಮುರಳೀಧರ, ಪು.88, (ಬೆಲೆ : ರೂ36/-), ವಿವೇಕಹಂಸ ಪ್ರಕಾಶನ, 3 ನೆಯ ಕ್ರಾಸ್‌, ಶ್ರೀನಿವಾಸನಗರ, ಬೆಂಗಳೂರು-50.)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more