ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒತ್ತಡ ಹೇರಿದರೆ ಹಿಂದಿ ಭಾಷೆ ಕಲಿಯಲಾರೆ'

By * ಆನಂದ್ ಜಿ, ಬನವಾಸಿ ಬಳಗ
|
Google Oneindia Kannada News

Do we want Hindi in Karnataka?
ಸೆಪ್ಟೆಂಬರ್ 14ನ್ನು ಭಾರತದ ಎಲ್ಲಾ ಕೇಂದ್ರ ಸರ್ಕಾರಿ ಕಛೇರಿಗಳಲ್ಲಿ ಹಿಂದೀ ದಿವಸ್ ಎಂದು ಆಚರಿಸಲಾಗುತ್ತದೆ. ಇತ್ತೀಚಿಗೆ ಇದು ಹಿಂದೀ ಸಪ್ತಾಹ್, ಹಿಂದೀ ಪಕ್ಷ ಎನ್ನುವ ಆಚರಣೆಗಳಾಗಿ ಜಾರಿಯಲ್ಲಿದೆ. 1949ರ ಇದೇ ದಿನದಂದು ಹಿಂದೀಯನ್ನು ಭಾರತ ದೇಶದ ಆಡಳಿತ ಭಾಷೆಯನ್ನಾಗಿ ಸಂವಿಧಾನ ಸಮಿತಿ ಒಪ್ಪಿಕೊಂಡ ನೆನಪಿಗಾಗಿ ಹಿಂದೀ ದಿವಸನ್ನು ಆಚರಿಸಲಾಗುತ್ತಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಅತಿಯಾಗಿ ಚರ್ಚೆಗೊಳಗಾದ ವಿಷಯಗಳಲ್ಲೊಂದು "ಭಾರತದ ಭಾಷಾನೀತಿ". ಸಂವಿಧಾನ ರಚಿಸುವಾಗ ಯಾವ ಭಾಷೆಯಲ್ಲಿ ಬರೆಯಬೇಕು ಎನ್ನುವುದರಿಂದ ಆರಂಭವಾದ ಈ ಚರ್ಚೆ ಭಾರತಕ್ಕೆ ಯಾವುದು ರಾಷ್ಟ್ರಭಾಷೆಯಾಗಬೇಕು ಎನ್ನುವವರೆಗೂ ಮುಂದುವರೆಯಿತು. ಭಾರತದ ಸಂವಿಧಾನವನ್ನು ರಚಿಸಿ, ಜಾರಿಗೆ ತರಲು ಸಂವಿಧಾನ ಸಮಿತಿಯನ್ನು (Constituent assembly) ರೂಪಿಸಲಾಯಿತು. ಇದರ ಅಧ್ಯಕ್ಷರಾಗಿ ಡಾ. ಬಾಬು ರಾಜೇಂದ್ರಪ್ರಸಾದ್ ನೇಮಕವಾದರು. ಡಾ. ಬಿ ಆರ್ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾದರು. ಡಿಸೆಂಬರ್ 11, 1946ರಂದು ಮೊದಲು ಸಭೆ ಸೇರಿದ ಸಮಿತಿಯು 1950ರ ಜನವರಿ, 26ರಂದು ಭಾರತದ ಸಂವಿಧಾನವು ಜಾರಿಯಾಗಿ, ನಂತರ ಮೊದಲ ಸಾರ್ವಜನಿಕ ಚುನಾವಣೆಗಳು ನಡೆದು ಹೊಸ ಸರ್ಕಾರ ರೂಪುಗೊಳ್ಳುವವರೆಗೂ ಅಸ್ತಿತ್ವದಲ್ಲಿತ್ತು. ಈ ಸಮಿತಿಯು ಹಿಂದೀಯನ್ನು ಭಾರತದ ರಾಷ್ಟ್ರಭಾಷೆಯಾಗಿಸಲು ಉತ್ಸುಕವಾಗಿತ್ತು. ಭಾರತಕ್ಕೆ ಹಿಂದೀಯನ್ನು ರಾಷ್ಟ್ರಭಾಷೆ ಮಾಡಬೇಕೆನ್ನುವ ಪ್ರಯತ್ನಗಳು ಆ ದಿನಗಳಲ್ಲಿ ನಡೆದರೂ ಹಿಂದೀಯೇತರ ಪ್ರದೇಶಗಳ ತೀವ್ರ ವಿರೋಧದ ಕಾರಣದಿಂದಾಗಿ ಸಾಧ್ಯವಾಗಲಿಲ್ಲ. ಸಂವಿಧಾನ ಸಮಿತಿಯಲ್ಲಿ/ ಅದಕ್ಕೆ ಮುನ್ನ ನಡೆದ ಚರ್ಚೆಗಳಲ್ಲಿ ಗಮನ ಸೆಳೆವ ಎರಡು ಹೇಳಿಕೆಗಳನ್ನು ನೋಡಿದರೆ ಹಿಂದೀ ಪರರ ಮತ್ತು ವಿರೋಧಿಗಳ ಮನಸ್ಥಿತಿ ಅರ್ಥವಾಗುತ್ತದೆ.

ಪ್ರಖರ ಹಿಂದೀವಾದಿ, ಆರ್.ವಿ. ಧುಲೇಕರ್ ಅವರು 10ನೇ ಡಿಸೆಂಬರ್ 1946ರಲ್ಲಿ 'ಹಿಂದಿಯನ್ನು ತಿಳಿಯದ ಯಾವೊಬ್ಬನಿಗೂ ಭಾರತದಲ್ಲಿ ಬದುಕುವ ಹಕ್ಕಿಲ್ಲ. ಭಾರತದ ಸಂಸತ್ತಿನಲ್ಲಿ ಭಾಗವಹಿಸುವ ಹಕ್ಕಿಲ್ಲ. ಅಂಥವರು ಭಾರತ ಬಿಟ್ಟು ತೊಲಗಲಿ" ಎನ್ನುವ ಹೇಳಿಕೆಯನ್ನು ನೀಡಿದರು. ಇದೊಂದು ಹೇಳಿಕೆ ಹಿಂದೀ ಪರವಾದವರ ಮನಸ್ಥಿತಿಯನ್ನು, ಹಿಂದೀಯೇತರರ ಬಗೆಗಿನ ಅಸಹನೆಯನ್ನೂ ತೋರುತ್ತದೆ. ಇದಕ್ಕುತ್ತರವಾಗಿ ಟಿ. ಟಿ ಕೃಷ್ಣಮಾಚಾರಿಯವರು “ಹಿಂದಿಯನ್ನು ನಾನು ಕಲಿಯಲಾರೆ. ಏಕೆಂದರೆ ಹಾಗೆ ಕಲಿಯಿರಿ ಎನ್ನುವ ಮೂಲಕ ನನ್ನ ಮೇಲೆ ನಾನಾ ಕಟ್ಟುಪಾಡುಗಳನ್ನು ಹೇರಲಾಗುತ್ತದೆ. ದೇಶ ಒಡೆಯಬೇಕೆನ್ನುವ ಕೂಗಿಗೆ ನಾವೂ ದನಿಗೂಡಿಸುವಂತೆ ನಿಮ್ಮ ಒತ್ತಾಯದ ನಡವಳಿಕೆ ಇರದಿರಲಿ. ನನ್ನ ಪ್ರೀತಿಯ ಉತ್ತರಪ್ರದೇಶದ ಮಿತ್ರರೇ, ನಿಮಗೆ ಒಗ್ಗೂಡಿದ ಭಾರತ ಬೇಕೋ? ಅಥವಾ ಹಿಂದೀಭಾರತ ಬೇಕೋ ತೀರ್ಮಾನಿಸಿ"ಎಂಬ ಹೇಳಿಕೆ ನೀಡಿದರು.

ಕೊನೆಗೆ ಎರಡೂ ಪಂಗಡಗಳ ನಡುವೆ 1949ರಲ್ಲಿ "ಅಯ್ಯಂಗಾರ್ - ಮುನ್ಶಿ ರಾಜಿ ಒಪ್ಪಂದ"ವುಂಟಾಗಿ ಹಿಂದೀಯನ್ನು ರಾಷ್ಟ್ರಭಾಷೆಯನ್ನಾಗಿಸದೆ ಆಡಳಿತ ಭಾಷೆಯನ್ನಾಗಿಸುವ ಪ್ರಯತ್ನಗಳಾದವು. ಭಾರತದ ಸಂವಿಧಾನದಲ್ಲಿ ಆಡಳಿತ ಭಾಷೆಯಾಗಿ ಹಿಂದೀ ಸ್ಥಾಪಿತವಾದ ದಿನ ಸೆಪ್ಟೆಂಬರ್ 14, 1949ರಂದು. ಹಾಗಾಗಿ ಪ್ರತಿವರ್ಷ ಸೆಪ್ಟೆಂಬರ್ 14ನ್ನು ಭಾರತದ ಎಲ್ಲಾ ಕೇಂದ್ರಸರ್ಕಾರಿ ಕಛೇರಿಗಳಲ್ಲಿ ಹಿಂದೀ ದಿವಸ್ ಎಂದು ಆಚರಿಸುವ ಪರಿಪಾಠ ಆರಂಭವಾಯಿತು.

English summary
A look back on why September 14 is observed as Hindi Day in India. Anand G of Banavasi Balaga says celebration of Hindi Diwas in India is black spot on Democracy. He also says, the language should not be thrust on anyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X