ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೀಯೇತರರಿಗೆ ವಾಕರಿಕೆ ತಂದ ಹಿಂದೀ ಹೇರಿಕೆ

By * ಆನಂದ್ ಜಿ, ಬನವಾಸಿ ಬಳಗ
|
Google Oneindia Kannada News

ಇದೀಗ ಅರವತ್ತು ವರ್ಷಗಳ ನಂತರ, ಭಾರತದ ಭಾಷಾನೀತಿಯಿಂದಾಗಿ ಇಂದು ಹಿಂದೀಯೇತರ ನಾಡುಗಳ ಜನರ ಬದುಕಿನ ಮೇಲಾಗಿರುವ ಪರಿಣಾಮಗಳನ್ನು ಪರಾಮರ್ಶಿಸಿದಾಗ, ಹಿಂದೀಯನ್ನು ಭಾರತದ ಆಡಳಿತ ಭಾಷೆಯನ್ನಾಗಿಸಲು ಹೇಳಲಾದ ಯಾವ ಉದ್ದೇಶವನ್ನೂ ಈಡೆರಿಸಿಕೊಳ್ಳಲು ಆಗಿಲ್ಲದಿರುವುದು ಕಾಣುತ್ತದೆ. ತನ್ನದೇ ಏಕಸ್ವಾಮ್ಯ ಇದ್ದ ಕಾರಣದಿಂದಾಗಿ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಹಿಂದೀ ಪ್ರಚಾರಕ್ಕೆ ಕೇಂದ್ರ ಸರ್ಕಾರವು ಬಳಸಿ ಹಿಂದೀಯೇತರರಿಗೆ ತಮ್ಮ ತಾಯ್ನುಡಿಯಲ್ಲಿಯೇ ಮನರಂಜನೆ ಸಿಗದಂತೆ ಮಾಡಿ ಹಿಂದೀ ಚಿತ್ರಗಳಿಗೆ ಮಾರುಕಟ್ಟೆ ಕಟ್ಟಿಕೊಟ್ಟಿತು. ಇದರ ಪರಿಣಾಮವಾಗಿ ಒಂದೊಮ್ಮೆ ಸಮೃದ್ಧವಾಗಿದ್ದ ಮರಾಠಿ, ಪಂಜಾಬಿ, ಗುಜರಾತಿ ಮೊದಲಾದ ಚಿತ್ರರಂಗಗಳು ತತ್ತರಿಸುವಂತಾಯಿತು.

ಇನ್ನು ಕೇಂದ್ರ ಸರ್ಕಾರಿ ನೌಕರಿಯ ಅವಕಾಶಗಳಿಗೆ ಬಂದಲ್ಲಿ ಭಾರತೀಯ ರೈಲ್ವೇಯೂ ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಸಂಸ್ಥೆಗಳೂ ಹಿಂದೀಯೇತರರಿಗೆ ಹಿಂದೀ ಹೇರುವ ಸಾಧನಗಳಾದವು. ಬ್ಯಾಂಕುಗಳಲ್ಲಿ ಕೆಲಸ ಬೇಕೆಂದರೆ ಎಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಹಿಂದೀ ಎಂದು ಬರೆದಿರಬೇಕು ಅನ್ನಲಾಯಿತು. ರೈಲ್ವೇಯ ಡಿ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸಲು ಹಿಂದೀಯಲ್ಲೇ ಬರೆಯಬೇಕು ಎನ್ನಲಾಯಿತು. ಭೂಸೇನಾ ನೇಮಕಾತಿಗೆ ಬರುವ ಅಭ್ಯರ್ಥಿಗಳ ಜನನ ಪ್ರಮಾಣಪತ್ರಗಳು ಕನ್ನಡದಲ್ಲಿವೆ, ಹಿಂದೀ/ ಇಂಗ್ಲಿಷುಗಳಲ್ಲಿಲ್ಲ ಎಂದು ವಾಪಸ್ಸು ಕಳಿಸಿದ ಘಟನೆಗಳೂ ನಡೆದವು. ತ್ರಿಭಾಷಾಸೂತ್ರದ ಮೂಲಕ ಕನ್ನಡದ ಮಕ್ಕಳ ಕಲಿಕೆಯಲ್ಲೂ ಹಿಂದೀಯನ್ನು ಕಡ್ಡಾಯ ಮಾಡಲಾಯಿತು. ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತಾಡಬೇಕಾದರೆ ಸಭಾಧ್ಯಕ್ಷರ ಅನುಮತಿ ಪಡೆಯಬೇಕೆನ್ನಲಾಯಿತು. ನಮ್ಮ ರಾಜ್ಯದ ಹೈಕೋರ್ಟಿನ ಭಾಷೆ ಹಿಂದೀ/ ಇಂಗ್ಲೀಷ್ ಎನ್ನಲಾಯಿತು. ಇಂದು ಕರ್ನಾಟಕದಲ್ಲೇ ಕನ್ನಡದಲ್ಲಿ ತೀರ್ಪು ಕೊಡುವ ನ್ಯಾಯಾಧೀಶರುಗಳನ್ನು ಸನ್ಮಾನಿಸಬೇಕಾದ ದುಸ್ಥಿತಿಗೆ ಈ ಭಾಷಾನೀತಿಯೇ ಪರೋಕ್ಷವಾಗಿ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಇದರ ಪರಿಣಾಮವಾಗಿ ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಬರೀ ಬಾಯಿಮಾತಿಗೆ ಮಾತ್ರಾ ಎನ್ನುವುದು ಗೋಚರವಾಗುತ್ತಿದೆ. ಏಕೆಂದರೆ ಭಾರತದ ಭಾಷಾನೀತಿಯು ನೀಡುತ್ತಿರುವ ಸಂದೇಶವೇನೆಂದರೆ ನಿಮ್ಮ ನಿಮ್ಮ ಭಾಷೆಗಳನ್ನು ನಿಮ್ಮ ಮನೆಯಲ್ಲಿಟ್ಟುಕೊಳ್ಳಿ, ಬೀದಿಗೆ ಬಂದರೆ ಹಿಂದೀಯಲ್ಲಿ ವ್ಯವಹರಿಸಿ ಎನ್ನುವುದಾಗಿದೆ. ಹಿಂದೀ ಭಾಷೆಗೆ ಭಾರತದ ಕೇಂದ್ರಸರ್ಕಾರದ ಆಡಳಿತ ಭಾಷೆ ಎಂದು ನೀಡಿರುವ ಪಟ್ಟವು ಇಡೀ ಭಾರತದ ಭೌಗೋಳಿಕ ಅಸಮಾನತೆಗೆ, ಹಿಂದೀಯೇತರರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವುದಕ್ಕೆ ಕಾರಣವಾಗಿದೆ ಎನ್ನುವುದನ್ನು ಕಣ್ತೆರೆದು ನೋಡಿ ಅರಿಯಬೇಕಾಗಿದೆ. ಇದಿಷ್ಟೇ ಅಲ್ಲದೆ ಈ ಎಲ್ಲಾ ನಡೆಯುತ್ತಿರುವುದು ಜನಸಂಖ್ಯಾ ಸ್ಫೋಟದಿಂದ ನರಳುತ್ತಿರುವ ಹಿಂದೀ ಪ್ರದೇಶದ ಜನರನ್ನು (ಬಿಹಾರ್ 1102, ಉತ್ತರಪ್ರದೇಶ 828 ಜನ/ ಚ.ಕಿ) ಕರ್ನಾಟಕದಂತಹ ಜನಸಂಖ್ಯೆ ಕಡಿಮೆಯಿರುವ ನಾಡುಗಳಿಗೆ (319 ಜನ/ಚ.ಕೀ) ವಲಸೆ ಮಾಡಿಸಲು ಭಾರತದ ಭಾಷಾನೀತಿ ನೀರೆರೆಯುತ್ತಿರುವುದು ಕಾಣುತ್ತಿದೆ. ಆ ಮೂಲಕ ಅನೇಕ ಹಿಂದೀಯೇತರ ಪ್ರದೇಶಗಳ ಜನಲಕ್ಷಣವನ್ನು ಬದಲಾಯಿಸುವ, ಅನೇಕ ಸಂಸ್ಕೃತಿಗಳನ್ನು ಮಣ್ಣುಗೂಡಿಸುವ ಪ್ರಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ಒಂದೆಡೆ ಭಾರತದೇಶದಲ್ಲಿ ಪ್ರತಿಯೊಬ್ಬ ನಾಗರೀಕನೂ ಸಮಾನ. ದೊರೆ ಆಳು ಎನ್ನುವ ಬೇಧವಿಲ್ಲದೆ ಎಲ್ಲರಿಗೂ ಸಮಾನ ಹಕ್ಕುಗಳಿವೆ ಅನ್ನುವ ಭಾರತವು ಮತ್ತೊಂದೆಡೆ ಹಿಂದೀಭಾಷೆಯ ಜನರಿಗೆ ದೇಶದ ಯಾವಮೂಲೆಗೆ ಹೋದರೂ ತೊಂದರೆಯಾಗದಂತಹ ವ್ಯವಸ್ಥೆಯನ್ನು ಕಟ್ಟಿಕೊಡಲು ಪಣತೊಟ್ಟಿರುವುದು ವೈರುಧ್ಯವೆನ್ನಿಸುತ್ತದೆ. ಕನ್ನಡನಾಡಿಗೆ ವಲಸೆ ಬಂದ ಹಿಂದೀಯವನಿಗೆ ಇಲ್ಲಿನ ಮೆಟ್ರೋ ರೈಲಿನಲ್ಲಿ, ರೈಲು, ಬಸ್ಸುಗಳಲ್ಲಿ, ವಿಮಾನ ನಿಲ್ದಾಣದಲ್ಲಿ, ಪೋಸ್ಟ್‌ಆಫೀಸ್, ಪಾಸ್‌ಪೋರ್ಟ್ ಕಛೇರಿಯೇ ಮೊದಲಾದ ಕಡೆಗಳಲ್ಲಿ ಹಿಂದೀಯಲ್ಲಿಯೇ ಎಲ್ಲಾ ಸೇವೆಯ ಸೌಕರ್ಯಗಳನ್ನೂ ಕಾಯ್ದೆ ಕಾನೂನುಗಳ ಮೂಲಕ ಒದಗಿಸಿಕೊಡುತ್ತದೆ. ಭಾರತೀಯರೆಲ್ಲಾ ಒಂದೇ ಎನ್ನುವ, ಸಮಾನತೆಯೇ ಜೀವಾಳ ಎನ್ನುವ, ವೈವಿಧ್ಯತೆಯಲ್ಲಿ ಏಕತೆ ಎನ್ನುವ ಭಾರತಸರ್ಕಾರವು ಕನ್ನಡದವರಿಗೆ ನವದೆಹಲಿಯ ಮೆಟ್ರೋ ರೈಲಿನಲ್ಲಿ, ಕೊಲ್ಕೊತ್ತಾದ ಪೋಸ್ಟ್‌ಆಫೀಸಿನಲ್ಲಿ, ಮುಂಬೈಯ ಪಾಸ್‌ಪೋರ್ಟ್ ಕಛೇರಿಯಲ್ಲಿ ಕನ್ನಡದಲ್ಲಿ ಸೇವೆ ಒದಗಿಸುತ್ತದೇನು?

English summary
A look back on why September 14 is observed as Hindi Day in India. Anand G of Banavasi Balaga says celebration of Hindi Diwas in India is black spot on Democracy. He also says, the language should not be thrust on anyone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X