ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾದಂಬರಿ ಪಿತಾಮಹ ಅನಕೃ ಹುಟ್ಟುಹಬ್ಬವಿಂದು

By * ಕಲ್ಯಾಣರಾಮನ್ ಚಂದ್ರಶೇಖರನ್
|
Google Oneindia Kannada News

A.N. Krishna Rao (1908-1971)
"ವಿಶ್ವ ಸಿಡಿದೊಡೆಯದಂತೆ ಕಾಪಾಡಬಲ್ಲುದು ಮಾನವೀಯತೆಯೊಂದೆ - ಕವಿ ಮಾನವೀಯತೆಯ ಪ್ರವಾದಿ" ಎಂಬ ಕರೆ ನೀಡಿ, ತಮ್ಮ ನಡೆ ನುಡಿ ಆಚಾರ ವಿಚಾರ ಕೃತಿ ಭಾಷಣಗಳೆಲ್ಲದರಲ್ಲೂ ಸಹಜಧರ್ಮ, ಮನುಷ್ಯತ್ವ ಮಾನವೀಯತೆಯನ್ನು ಎತ್ತಿ ಹಿಡಿದ ಕನ್ನಡ ಸಾಹಿತ್ಯ ಲೋಕದ ಸವ್ಯಸಾಚಿ, ಕಾದಂಬರಿ ಸಾರ್ವಭೌಮ 'ಅರಕಲಗೂಡು ನರಸಿಂಗರಾವ್ ಕೃಷ್ಣರಾವ್' ಕನ್ನಡ ಕುಲಕೋಟಿಗೆ ಅನಕೃ ಎಂದೇ ಚಿರಪರಿಚಿತರು. ಇದು ಅಚ್ಚ ಕನ್ನಡ ಕಾರ್ಯಕರ್ತರಾಗಿದ್ದ ಅನಕೃ ಅವರ ಪರಿಚಯಿಸುವ ಒಂದು ಕಿರು ಪ್ರಯತ್ನ ಮಾತ್ರ. ಸಮುದ್ರದಿಂದ ಒಂದು ಬೊಗಸೆ ನೀರು ಪಡೆದಂತೆ.

ಈ ಶತಮಾನದ ಪವಾಡಪುರುಷ : ಅನಕೃ (ಜನನ: ಕೋಲಾರ, ಮೇ 9, 1908, ಮರಣ: ಬೆಂಗಳೂರು, ಜುಲೈ 8, 1971) ಈ ಶತಮಾನದ ಕರ್ನಾಟಕದ ಪವಾಡಪುರುಷ. ಅವರು ರಚಿಸಿದ ಸಾಹಿತ್ಯ 80,000 ಪುಟಕ್ಕೂ ಮೇಲ್ಪಟ್ಟಿದ್ದು; ಮಾಡಿದ ಭಾಷಣಗಳು ಲೆಕ್ಕವಿಲ್ಲದಷ್ಟು; ಅವರಿಂದ ಪ್ರಭಾವಿತರಾದವರು, ಮುಂದೆ ಬಂದವರು ಅನೇಕರು; ಅವರ ಕನ್ನಡ ಸೇವೆ, ಕೃತಜ್ಞನಾದ ಕನ್ನಡಿಗ ಋಣ ತೀರಿಸಲಾರದಷ್ಟು. ಅನಕೃ ತಮ್ಮ ಜೀವಿತಾವಧಿಯಲ್ಲಿ ತಮ್ಮ ಪ್ರತಿಭೆ, ಸಾಹಿತ್ಯ, ಕನ್ನಡಪ್ರೇಮ, ಮಾತುಗಾರಿಕೆಗಳಿಂದ ಕನ್ನಡಿಗರ ಮೇಲೆ ಮೋಡಿ ಮಾಡಿದ್ದರು. 1930ರಿಂದ 1971ರವರೆಗೆ, ನಾಲ್ಕು ದಶಕಗಳ ಕಾಲ ಅನಕೃ ಕರ್ನಾಟಕದ ಸಾರಸ್ವತ ಮತ್ತು ಸಾಂಸ್ಕೃತಿಕ ಲೋಕದ ಅನಭಿಷಿಕ್ತ ದೊರೆಯಂತೆ ಜೀವಿಸಿದ್ದರು.

ಕಾದಂಬರಿ, ಸಣ್ಣಕಥೆ, ನಾಟಕ, ಪತ್ರಿಕೋದ್ಯಮ, ಕಾವ್ಯ, ಸಂಗೀತ, ಚಲನಚಿತ್ರ ಹೀಗೆ ಎಲ್ಲಾ ಪ್ರಕಾರಗಳಲ್ಲಿ ತೊಡಗಿಸಿಕೊಂಡು, ಹುಟ್ಟು ಸೇನಾನಿ, ನಿಷ್ಕಪಟ ದಂಗೆಕೋರ, ಕ್ರಾಂತಿಕಾರಿ ಸಾಹಿತಿ, ಕನ್ನಡ ಕಾದಂಬರಿ ಪ್ರವರ್ತಕ, ಪ್ರಗತಿಶೀಲತೆಯ ಅಧ್ವರ್ಯು, ಹಲವು ಕಾಳಗಗಳ ಕಲಿ ಹೀಗೆ ಹಲವು ಬಿರುದಾಂಕಿತರಾಗಿ, ಒಟ್ಟು ಕನ್ನಡ ಸಂಸ್ಕೃತಿಯ ಪ್ರಚಾರಕರಾಗಿದ್ದ ಅನಕೃ ಅವರನ್ನು ಇಂದಿನ ಕನ್ನಡ ಪೀಳಿಗೆ ಬಹುವಾಗಿ ಗುರುತಿಸುವುದು ಕನ್ನಡ ಚಳವಳಿಯ ಪಿತಾಮಹರೆಂದೆ!

ಇಂದು ಏಕೀಕೃತ ಕರ್ನಾಟಕದ ಭಾವೈಕ್ಯಪಥದಲ್ಲಿ ಕನ್ನಡಿಗರು ಸಾಗುತ್ತಿದ್ದರೆ; ಅವರಲ್ಲಿ ಬಹುಕಾಲ ಸುಪ್ತವಾಗಿದ್ದ ಸ್ವಾಭಿಮಾನ ಜಾಗೃತವಾಗಿದ್ದರೆ; ಕನ್ನಡ ವಾಚಕರು ಅಗಣಿತವಾಗಿ ಬೆಳೆದಿದ್ದರೆ, ಕನ್ನಡ ಲೇಖಕರು ಗಣನೀಯವಾಗಿ ಹೆಚ್ಚಿದ್ದರೆ, ಕನ್ನಡ ನಾಡಿನ ಕರ್ನಾಟಕ ಸಂಗೀತಗಾರರು ನೆಮ್ಮದಿಯಿಂದಿದ್ದರೆ, ಕನ್ನಡ ಚಲನಚಿತ್ರ ಕಲಾವಿದರು ವೈಭವ ಜೀವನ ನಡೆಸುತ್ತಿದ್ದರೆ; ಒಟ್ಟಿನಲ್ಲಿ ಕನ್ನಡ ಕನ್ನಡಿಗರು ಭಾರತದ-ಅಷ್ಟೇಕೆ ಜಗತ್ತಿನ ದೃಷ್ಟಿಯಲ್ಲಿದ್ದರೆ ಇದಕ್ಕೆಲ್ಲ ಅನಕೃ ಬಹುಮಟ್ಟಿಗೆ ಕಾರಣರೆಂದರೆ ಅತ್ಯುಕ್ತಿಯಲ್ಲ.

ಅನಕೃ ಎಂಬ ಆ ಮೂರಕ್ಷರ ಕನ್ನಡಿಗರ ಬೀಜಮಂತ್ರ. ಕನ್ನಡ, ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಗಳ ಮೇಲೆ ಅಭಿಯೋಗ ನಡೆದಾಗಲೆಲ್ಲ ಸೂಕ್ತ ಉತ್ತರಕ್ಕಾಗಿ, ಇಡೀ ಕನ್ನಡನಾಡು ಅನಕೃ ಅವರ ಪ್ರತಿಕ್ರಿಯೆಗಾಗಿ ಎದುರುನೋಡುತ್ತಿತ್ತು. ಕನ್ನಡ ಹಾಗು ಕರ್ನಾಟಕಗಳ ಶ್ರೇಷ್ಠ ವಕ್ತಾರರಾಗಿದ್ದ ಕೃಷ್ಣರಾಯರು ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ, ಕರ್ನಾಟಕದ ಸಂಸ್ಕೃತಿಯೊಂದಿಗೆ ಪ್ರೇಮದ ತಾದ್ಯಾತ್ಮ್ಯ ಹೊಂದಿ ಹಾಲಿನಲ್ಲಿ ಸಕ್ಕರೆ ಬೆರೆತಂಥ ಸಮೀಕರಣ ಸಾಧಿಸಿದ್ದರು.

ಕನ್ನಡತನದ ಅಳಿವು-ಉಳಿವಿಗಾಗಿ ಜಾತಿ-ಮತ-ಧರ್ಮ-ದೇವರನ್ನು ತೊರೆದು ಕನ್ನಡತ್ವವನ್ನು ಅಪ್ಪಿ ಹಿಡಿಯಲು ಅಂದೇ ಕರೆನೀಡಿದ್ದವರು ಅನಕೃ. ಅವರ ಅಚ್ಚ ಕನ್ನಡ ಪ್ರೇಮ ಅನೇಕ ಸಲ ಅವರ ಸ್ವಂತ ಅಣ್ಣನನ್ನೂ ಒಳಗೊಂಡಂತೆ ತಮ್ಮ ಸಮಕಾಲೀನ ಕನ್ನಡ ದಿಗ್ಗಜರನ್ನು ಎದುರು ಹಾಕಿಕೊಳ್ಳುವಂತೆ ಮಾಡಿತ್ತು.

ದಿಗ್ಗಜರೊಡನೆಯೇ ಜಟಾಪಟಿ : ಕನ್ನಡ ಪ್ರೇಮಿಯಾಗಿದ್ದ ಶ್ರೀ ರಂ.ರಾ.ದಿವಾಕರರವರು 1939ರಲ್ಲಿ, ಬಳ್ಳಾರಿಯಲ್ಲಿ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಮತ್ತು ಧೀಕ್ಷೆ ತೊಡುವ ಬದಲು ಹಿಂದಿ ಮೋಹಕ್ಕೆ ಬಲಿಯಾಗಿ, ಹಿಂದಿ ಪ್ರಚಾರವನ್ನು ಶುರುವಿಟ್ಟುಕೊಂಡರು. ಅಂದಿನ ಸರ್ಕಾರದ ಮೊರೆಹೊಕ್ಕು, ದೇಶದಲ್ಲೆಲ್ಲಾ ಸಂಚರಿಸಿ ಹಿಂದಿ ಪ್ರಚಾರ ಮಾಡುವುದನ್ನು ತಮ್ಮ ಧ್ಯೇಯ ಮಾಡಿಕೊಂಡರು. ಇದು ಸಾಹಿತ್ಯ ಪರಿಷತ್ ನಿಂದ ಆಗಬೇಕಾಗಿದ್ದ ಕನ್ನಡದ ಕೆಲಸವನ್ನು ಕುಂಠಿತಗೊಳಿಸಿತ್ತು. ಅಂದು ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅನಕೃ ಈ ಕುರಿತು ದಿವಾಕರರ ನಿಲುವನ್ನು ಖಂಡಿಸಿ ಕನ್ನಡ ನುಡಿಯಲ್ಲಿ ಲೇಖನವನ್ನು ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಬಿ.ಎಂ.ಶ್ರೀ. ಅವರು ಅನಕೃ, ದಿವಾಕರರ ಕ್ಷಮೆ ಕೇಳಿ ಕನ್ನಡ ನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟು ಹಿಡಿದಾಗ ಅನಕೃ ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತು ಹೊರನಡೆದಿದ್ದರು. ಅನಕೃಗೆ ಆಗ ಕೇವಲ 30 ವರ್ಷ. ಅಂದಿನಿಂದ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು ಅನಕೃ ತಮ್ಮ "ನನ್ನನ್ನು ನಾನೇ ಕಂಡೆ" ಎಂಬ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಆಣ್ಣನನ್ನು ಎದುರು ಹಾಕಿಕೊಂಡ ತಮ್ಮ : ಅನಕೃ ನೇತೃತ್ವದಲ್ಲಿ ಕನ್ನಡ ಚಳವಳಿ ಎಷ್ಟೊಂದು ವ್ಯಾಪಕವಾಗಿ ಹಬ್ಬಿತೆನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಕನ್ನಡಕ್ಕೆ ಸಂಬಂಧಪಟ್ಟ ಯಾವ ಕ್ಷೇತ್ರವನ್ನೂ ತಮ್ಮ ಚಳವಳಿಯಿಂದ ಬಿಡಲಿಲ್ಲ. ಆಗ ಬೆಂಗಳೂರಿನ ಕೋಟೆ ಮೈದಾನದಲ್ಲಿ ನಡೆಯುತ್ತಿದ್ದ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಹೆಸರುವಾಸಿ. ಆದರೆ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಚಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು. ಇಂಥ ದಿನ ಕೋಟೆ ಮೈದಾನದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮೀ ಕಚೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆ ಕಾಹಿದ ಅನಕೃ ನೇತೃತ್ವದ ದಂಡು ಪ್ರತಿಭಟನೆಯ ದನಿ ಮೊಳಗಿಸಿಯೇಬಿಟ್ಟಿತು. 'ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು' ಎಂದು ಅನಕೃ ಪಟ್ಟು ಹಿಡಿದರು. ಮಂಡಳಿಯೂ ಇದಕ್ಕೆ ಅಸ್ತು ಎಂದಿತು. ಅಂದಹಾಗೆ ಅನಕೃ ಹೀಗೆ ಸಿಡಿದೆದ್ದಾಗ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಎ.ಎನ್.ರಾಮರಾವ್. ಇವರು ಅನಕೃ ಅವರ ಸ್ವಂತ ಅಣ್ಣ! ಕನ್ನಡದ ವಿಚಾರದಲ್ಲಿ ಅನಕೃ ಯಾವ ರಾಜಿಗೂ ಸಿದ್ಧರಿರಲಿಲ್ಲ ಎನ್ನಲು ಇಷ್ಟು ಸಾಕು. ಈ ಸಂದರ್ಭದಲ್ಲೇ ಅನಕೃ ಅವರು ಕನ್ನಡ ಚಳವಳಿ ಸಂಯುಕ್ತ ರಂಗದ ಮಿತ್ರರ ಹೆಸರಿನಲ್ಲಿ ಕನ್ನಡ ಬಾರದವರಿಗೂ ಹಾಗು ಹೊರ ನಾಡವರಿಗೂ ನಮ್ಮ ಚಳವಳಿಯ ಧ್ಯೇಯೋದ್ದೇಶಗಳು ಪೂರ್ಣ ಮನವರಿಕೆಯಾಗಲೆಂದೇ ಇಂಗ್ಲಿಷ್‌ನಲ್ಲೊಂದು ಭಿತ್ತಿಪತ್ರ ಹೊರಡಿಸಿದರು.

ನಿನ್ನ ಸ್ವಂತದ್ದು ಮಧ್ಯೆ ತೂರಿಸಬೇಡ : ಒಮ್ಮೆ ಕನ್ನಡದ ಆಸ್ತಿ ಮಾಸ್ತಿಯವರೊಡನೆ ಅನಕೃ ಪರಿಷತ್ತಿನ ಕೆಲಸವೊಂದರ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಂದು ಸರ್ಕಾರದಲ್ಲಿ ಹೆಸರು ಮಾಡಿದ್ದ ನಿಷ್ಠಾವಂತ ಅಧಿಕಾರಿ ಎ.ಸಿ.ದೇವೇಗೌಡ ಸಹ ಪ್ರಯಾಣಿಕರಾಗಿದ್ದರು. ಹಾಗೆಯೇ ಮಾತನಾಡುತ್ತ ಪ್ರಯಾಣಿಸುತ್ತಿದ್ದಾಗ, ಮಾಸ್ತಿಯವರು ಗೌಡರನ್ನು ತಮ್ಮ ಸ್ವಂತ ಪತ್ರಿಕೆ 'ಜೀವನ'ಕ್ಕೆ ಚಂದಾದಾರರಾಗಬೇಕೆಂದರು. ಆಗ ಅನಕೃ, ಮಾಸ್ತಿಯವರನ್ನು ಕುರಿತು ಹೇಳಿದ್ದು ಹೀಗೆ 'ಈಗ ನಾವು ಹೊರಟಿರುವುದು ಪರಿಷತ್ತಿನ ಕೆಲಸಕ್ಕೆ ಹೊರತು ನಮ್ಮ ಸ್ವಂತ ಕೆಲಸಕ್ಕಲ್ಲ. ಈಗ ನಾವು ಮಾಡಬೇಕಾಗಿರುವುದು ಪರಿಷತ್ತಿಗೆ ಸದಸ್ಯರನ್ನು ಕೂಡಿಸುವ ಕೆಲಸ ಮಾತ್ರ. ಅಂದು ಗೌಡರು ನಾನು 'ಜೀವನ'ಕ್ಕೂ ಚಂದಾದಾರನಾಗುತ್ತೇನೆ ಮತ್ತು ಪರಿಷತ್ತಿಗೂ ಸದಸ್ಯನಾಗುತ್ತೇನೆ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು (ಪುಟ 303, "ಬರಹಗಾರನ ಬದುಕು", ಅನಕೃ).

"ನನಗಿರುವುದು ಒಂದೇ ಕನ್ನಡ!" : ಅನಕೃ ಪದೇ ಪದೇ ಒಂದು ವಿಷಯ ಪ್ರಸ್ತಾಪಿಸುತ್ತಿದ್ದರು: "ನನ್ನಂತಹವರು ಕನ್ನಡಕ್ಕೆ ಅನೇಕರಿದ್ದಾರೆ. ಆದರೆ ನನಗಿರುವುದು ಒಂದೇ ಕನ್ನಡ". ಈ ಮಾತುಗಳನ್ನ ಕನ್ನಡಿಗರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆ ನೆನಸ್ಕೊಂಡು, ಕನ್ನಡದ ಏಳಿಗೆಗೆ ಕಿರುಬೆರಳನ್ನಾದ್ರೂ ಎತ್ತಿದ್ರೆನೇ ಕನ್ನಡಕ್ಕಾಗಿ ಜೀವವನ್ನೇ ಮುಡಿಪಾಗಿಟ್ಟಿದ್ದ ಅನಕೃ ಅವರ ಕನ್ನಡ ಪರ ಕಾಳಜಿಗೆ ಸಾರ್ಥಕತೆ ಸಿಗೋದಲ್ವ ಗುರು! [ಸ್ನೇಹಸೇತು : ಏನ್ ಗುರು?]

English summary
Today is Arakalagudu Narasigarao Krishna Rao - popularly known as ANaKru's birthday. The king of novels Anakru was the pioneer of progressive movement in Karnataka. Here is an article by Enguru Kannada blog in the memory of the legendary Kannada novelist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X