ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನೇನೂ ಸರಿ, ಹಾನೇನೂ ಸರಿ

By Staff
|
Google Oneindia Kannada News

ಕನ್ನಡದ ನಿಜವಾದ ಸ್ವರೂಪ ಎಂತದ್ದು, ಕನ್ನಡವನ್ನು ಬೇರೆಬೇರೆ ಕಡೆಗಳಲ್ಲಿ ಕನ್ನಡಿಗರು ಹೇಗೆ ಉಲಿಯುತ್ತಾರೆ, ಅವುಗಳಲ್ಲಿ ಹೇಗೆ ಮೇಲು-ಕೀಳೆಂಬುದಿಲ್ಲ ಎಂದು ಡಾ. ಡಿ.ಎನ್. ಶಂಕರಬಟ್ಟರು ತಮ್ಮ ಹೊಚ್ಚ ಹೊಸ "ಮಾತಿನ ಒಳಗುಟ್ಟು" ಎಂಬ ಹೊತ್ತಿಗೆಯಲ್ಲಿ ತಿಳಿಸಿಕೊಟ್ಟಿದ್ದಾರೆ. ಕೆಲವು ಕನ್ನಡಿಗರಿಗೆ (ಅವರು ನಾಡು ನುಡಿಗಾಗಿ ಪ್ರಾಣವನ್ನು ಕೊಡುತ್ತಿದ್ದರೂ) ಹಕಾರ-ಅಕಾರದ ವ್ಯತ್ಯಾಸ "ಗೊತ್ತಿಲ್ಲ", ಆದ್ದರಿಂದ ಅವರಿಗೆ ಕನ್ನಡವೇ ಬರುವುದಿಲ್ಲ ಎಂದು ಹೇಳುವ ಮೂರ್ಖರಿಗೆ ಬಟ್ಟರ ಈ ಪಾಠ ಬಹುಮುಖ್ಯ. ಕನ್ನಡಿಗರು ಆಡಿದ್ದೇ ಕನ್ನಡ ಎಂಬ ಕನಿಷ್ಠ ತಿಳಿವಳಿಕೆಯೂ ಇಲ್ಲದ ಮೂರ್ಖರಿಗೆ ಈ ಪಾಠ ಬಹು ಮುಖ್ಯ. ಕನ್ನಡಿಗರು ಎಲ್ಲೇ ಇದ್ದರೂ ಯಾವ ಜಾತಿಯವರೇ ಆಗಿದ್ದರೂ ಅವರೆಲ್ಲ ಆಡುವುದು ಕನ್ನಡವೇ, ಎಲ್ಲವೂ ಪೂಜಾರ್ಹವೇ ಎಂದು ತಿಳಿಯದ ಮೂರ್ಖರಿಗೆ ಈ ಪಾಠ ಬಹುಮುಖ್ಯ:


ಹಕಾರದ ಗೆರೆ

ಒಂದು ಊರಿನಿಂದ ಇನ್ನೊಂದು ಊರಿಗೆ ಆಡುಗನ್ನಡದಲ್ಲಿ ತೋರಿಬರುವ ವ್ಯತ್ಯಾಸಗಳ ಹಿಂದೆ ಈ ರೀತಿ ಹಲವು ನಿಯಮಗಳಿವೆ ಮಾತ್ರವಲ್ಲ, ಅವುಗಳಿಗೊಂದು ನಿಶ್ಚಿತವಾದ ಹರವೂ ಇದೆ. ಉದಾಹರಣೆಗಾಗಿ, ಪದಗಳ ಮೊದಲಿಗೆ ಬರುವ ಹಕಾರ ಬಿದ್ದುಹೋಗುತ್ತದೆಯೆಂಬ ನಿಯಮವನ್ನು ಗಮನಿಸಬಹುದು.

ಮಯ್ಸೂರು ಜಿಲ್ಲೆಯ ಹುಣಸೂರಿನಲ್ಲಿ ಹಕ್ಕಿ ಎಂದು ಹೇಳುವುದಕ್ಕೆ ನಂಜನಗೂಡಿನಲ್ಲಿ ಅಕ್ಕಿ ಎನ್ನುತ್ತಾರೆ; ಹುಣಸೂರಿನ ಹಾಲು ನಂಜನಗೂಡಿನಲ್ಲಿ ಆಲು ಎಂದಾಗುತ್ತದೆ; ಹಂಬು ಪದ ಅಂಬು ಎಂದಾಗುತ್ತದೆ, ಹಾವು ಪದ ಆವು ಎಂದಾಗುತ್ತದೆ. ಪದಗಳ ಮೊದಲಿಗೆ ಬರುವ ಹಕಾರಗಳೆಲ್ಲ ನಂಜನಗೂಡಿನ ಕನ್ನದದಲ್ಲಿ ಬಿದ್ದುಹೋಗಿವೆ ಮತ್ತು ಹುಣಸೂರಿನ ಕನ್ನಡದಲ್ಲಿ ಬದಲಾಗದೆ ಉಳಿದಿವೆ ಎಂಬ ನಿಯಮ ಈ ವ್ಯತ್ಯಾಸದ ಹಿಂದೆ ಅಡಗಿದೆ.

ಹಕಾರ ಬಿದ್ದುಹೋಗುವ ಈ ಮಾರ್ಪಾಡಿಗೆ ಒಂದು ನಿಶ್ಚಿತವಾದ ಹರವೂ ಇದೆ. ಹುಣಸೂರು, ಕೆ.ಆರ್. ನಗರ ಮತ್ತು ಪಿರ್ಯಾಪಟ್ಟಣಗಳಲ್ಲಿ ಪದಗಳ ಮೊದಲಿಗೆ ಬರುವ ಹಕಾರವನ್ನು ಜನರು ಸರಿಯಾಗಿಯೇ ಉಚ್ಚರಿಸುತ್ತಾರೆ. ಹುಣಸೂರು ಬಿಟ್ಟು ಹೆಗ್ಗಡದೇವನ ಕೋಟೆಗೆ ಹೋದೆವಾದರೆ, ಅಲ್ಲಿ ಇಂತಹ ಹಕಾರಗಳೆಲ್ಲ ಬಿದ್ದುಹೋಗಿರುವುದನ್ನು ಕಾಣಬಹುದು. ಮುಂದೆ ಗುಂಡ್ಲುಪೇಟೆ, ಚಾಮರಾಜನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಲ ಮೊದಲಾದ ಕಡೆಗಳಲ್ಲೂ ಹಕಾರ ಹೀಗೆ ಬಿದ್ದುಹೋಗಿರುವುದನ್ನು ಕಾಣಬಹುದು.

ಈ ರೀತಿ ಪದಗಳ ಮೊದಲಿನ ಹಕಾರ ಎಲ್ಲೆಲ್ಲ ಬಿದ್ದುಹೋಗಿದೆ ಮತ್ತು ಎಲ್ಲೆಲ್ಲ ಬಿದ್ದುಹೋಗಿಲ್ಲ ಎಂಬುದನ್ನು ಹಳ್ಳಿಯಿಂದ ಹಳ್ಳಿಗೆ ಸುತ್ತಾಡಿ ತಿಳಿದುಕೊಂಡು ಬಂದೆವಾದರೆ, ಮಯ್ಸೂರಿನ ನಕಾಶೆಯಲ್ಲಿ ಒಂದು "ಹಕಾರದ ಗೆರೆ" ಯನ್ನು ಎಳೆಯಲು ಸಾದ್ಯವಾದೀತು. ಈ ಗೆರೆ ನಂಜನಗೂಡು ಮತ್ತು ಹುಣಸೂರುಗಳ ನಡುವೆ ಹೆಗ್ಗಡದೇವನ ಕೋಟೆಯ ಪಡುವಕ್ಕಾಗಿ ಹಾಯ್ದೇತು.

ಈ ಗೆರೆ ಮಯ್ಸೂರು ಜಿಲ್ಲೆಯನ್ನು ಮಾತ್ರವಲ್ಲ, ಇಡೀ ಕರ್ನಾಟಕವನ್ನೇ ಎರಡು ತುಂಡುಗಳಾಗಿ ಒಡೆಯುತ್ತಿದೆಯೆಂದು ತೋರುತ್ತದೆ. ಯಾಕೆಂದರೆ ಗುಲ್ಬರ್ಗ ಮತ್ತು ಶಾಬಾದ್ ಗಳ ನಡುವೆಯೂ ಇಂತಹದೇ ಹಕಾರ ಬಿದ್ದುಹೋಗುವ ಮತ್ತು ಹೋಗದಿರುವ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಆದರೆ ನಿಜಕ್ಕೂ ಈ ಎರಡು ತುದಿಗಳ ನಡುವಿನ ಜಿಲ್ಲೆಗಳನ್ನು ಈ ಹಕಾರದ ಗೆರೆ ಉದ್ದಕ್ಕೂ ಕತ್ತರಿಸುತ್ತಾ ಸಾಗುತ್ತದೆಯೇ ಎಂಬುದನ್ನು ತಿಳಿಯಲು ಮಂಡ್ಯ, ಹಾಸನ, ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲೆಲ್ಲ ಸುತ್ತಾಡಿ ಅಲ್ಲಿನ ಜನರ ಮಾತನ್ನು ಕೇಳಿನೋಡಬೇಕು. ಈ ಕೆಲಸವಿನ್ನೂ ನಡೆದಿಲ್ಲ.

ಕನ್ನಡದ ಆಡುನ್ನುಡಿಗಳನ್ನು ಕತ್ತರಿಸುವ ಹಾಗೆ ಈ ಹಕಾರದ ಗೆರೆಗೆ ಬೇರೆಯೂ ಕೆಲವು ಕಟ್ಟುಗಳಿವೆ. ಉದಾಹರಣೆಗಾಗಿ, ಮಯ್ಸೂರು ಜಿಲ್ಲೆಯ ಬ್ರಾಹ್ಮಣರ ಆಡುನುಡಿಯಲ್ಲಿ ಈ ಹಕಾರ ಎಲ್ಲಿಯೂ (ನಂಜನಗೂಡು, ಕೊಳ್ಳೇಗಾಲ, ಚಾಮರಾಜಪುರ, ತಿ.ನರಸೀಪುರ ಮೊದಲಾದ ಕಡೆಗಳಲ್ಲೂ) ಬಿದ್ದುಹೋಗಿಲ್ಲ. ಹಾಗಾಗಿ ಈ ಹಕಾರದ ಗೆರೆ ಮಯ್ಸೂರು ಜ್ಜಿಲ್ಲೆಯನ್ನು ಉದ್ದಕ್ಕೆ ಮಾತ್ರವಲ್ಲದೆ ನೆಟ್ಟಗೂ ಕತ್ತರಿಸುತ್ತದೆಯೆಂದು ಹೇಳಬೇಕಾಗುತ್ತದೆ.

ಈ ರೀತಿ ಒಂದೇ ಹಳ್ಳಿಯಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಆಡುಮಾತಿನಲ್ಲಿ ಕಾಣಿಸುವ ವ್ಯತ್ಯಾಸಗಳೂ ಬೇರೆ ಬೇರೆ ಊರುಗಳ ನಡುವೆ ಕಾಣಿಸುವ ವ್ಯತ್ಯಾಸಗಳಷ್ಟೇ ನಿಯಮಬದ್ದವಾಗಿವೆ. ಇದಕ್ಕೆ ಇನ್ನೊಂದು ಉದಾಹರಣೆಯಾಗಿ ನಂಜನಗೂಡಿನ ಒಕ್ಕಲಿಗರ ಮತ್ತು ಆದಿಕರ್ನಾಟಕರ ಮಾತುಗಳನ್ನು ಹೋಲಿಸಿ ನೋಡಬಹುದು. ಒಕ್ಕಲಿಗರು ಮನೆ ಎನ್ನುವುದಕ್ಕೆ ಆದಿಕರ್ನಾಟಕರು ಮನ ಎನ್ನುತ್ತಾರೆ. ಅಣೆ (ಹಣೆ)ಗೆ ಅಣ ಎನ್ನುತ್ತಾರೆ, ತಲೆಗೆ ತಲ ಎನ್ನುತ್ತಾರೆ, ಅತ್ತೆಗೆ ಅತ್ತ ಎನ್ನುತ್ತಾರೆ. ಹೆಸರುಗಳ ಕೊನೆಯಲ್ಲಿ ಬರುವ ಎಕಾರಗಳೆಲ್ಲ ಆದಿಕರ್ನಾಟಕರ ಮಾತಿನಲ್ಲಿ ಅಕಾರವಾಗಿ ಬದಲಾಗಿವೆ ಎಂಬುದೇ ಈ ವ್ಯತ್ಯಾಸದ ಹಿಂದಿರುವ ನಿಯಮ.

ಆಡುನುಡಿಗಳ ನಡುವೆ ಕಾಣಿಸುವ ಇಂತಹ ವ್ಯತ್ಯಾಸಗಳಿಗೆ ಈ ರೀತಿ ಊರಿನ ಮತ್ತು ಜಾತಿಯ ಕಟ್ಟುಗಳು ಮಾತ್ರವಲ್ಲದೆ ಸಮಯದ ಕಟ್ಟೂ ಇದೆಯೆಂದು ಹೇಳಬಹುದು. ಯಾಕೆಂದರೆ ಎರಡೂ ಬೇರೆ ಬೇರೆ ಸಮಯಗಳಲ್ಲಿ ಬಳಕೆಯಲ್ಲಿದ್ದ ಆಡುನುಡಿಗಳ ನಡುವಿರುವ ವ್ಯತ್ಯಾಸಗಳ ಹಿಂದೆಯೂ ಮೇಲೆ ವಿವರಿಸಿದಂತಹ ನಿಯಮಗಳೇ ಕಾಣಿಸುತ್ತವೆ.

ಉದಾಹರಣೆಗಾಗಿ ಹಳೆಗನ್ನಡದ ಪಾಲ್ ಪದ ಹೊಸಗನ್ನಡದಲ್ಲಿ ಹಾಲು ಎಂಬುದಾಗಿ ಕಾಣಿಸುತ್ತದೆ; ಪಣ್ ಪದ ಹಣ್ಣು ಎಂಬುದಾಗಿ, ಪಲ್ ಪದ ಹಲ್ಲು ಎಂಬುದಾಗಿ ಮತ್ತು ಪುಲ್ ಪದ ಹುಲ್ಲು ಎಂಬುದಾಗಿ ಕಾಣಿಸುತ್ತದೆ. ಹಳೆಗನ್ನಡದ ಪದಗಳ ಮೊದಲಿಗಿದ್ದ ಪಕಾರಗಳೆಲ್ಲವೂ ಈ ರೀತಿ ಹೊಸಗನ್ನಡದಲ್ಲಿ ಹಕಾರಗಳಾಗಿ ಕಾಣಿಸಿಕೊಳ್ಳುತ್ತವೆ. ಹಳೆಗನ್ನಡ ಮತ್ತು ಹೊಸಗನ್ನಡಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಈ ನಿಯಮ ಮಯ್ಸೂರಿನ ಆಡುನುಡಿಗಳ ನಡುವಿನ ವ್ಯತ್ಯಾಸವೊಂದನ್ನು ವಿವರಿಸುವ ಹಕಾರದ ನಿಅಯದ ಹಾಗೆಯೇ ಇದೆ.


ಅಂದಹಾಗೆ ಬಟ್ಟರು ತಮ್ಮನ್ನು ತಾವು "ಭಟ್ಟರು" ಎಂದು ಕರೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ, ಏಕೆಂದರೆ ಬೇರೆಲ್ಲ ಕನ್ನಡಿಗರಂತೆ ಅವರ ನಾಲಿಗೆಯಲ್ಲೂ ಮಹಾಪ್ರಾಣ ಹೊರಳುವುದಿಲ್ಲ. ಹಾಗೆಯೇ ಮೇಲಿನ ಬರಹವನ್ನೂ ಅವರು ತಮ್ಮ "ಹೊಸ" ಬರಹದಲ್ಲಿ ಬರೆದಿದ್ದಾರೆ (ಮಹಾಪ್ರಾಣಗಳಿಲ್ಲ, "ಷ" ಬದಲು "ಶ", ಐ ಬದಲು ಅಯ್, ಔ ಬದಲು ಅವ್, ಹೀಗೆ). ಯೂನಿಕೋಡಿಗೆ ಬಟ್ಟರ ಹೊಸ ಬರಹ ಅಷ್ಟು ಚೆನ್ನಾಗಿ ಬಾರದ ಕಾರಣ ನಾವು ಅದನ್ನು ಬರೆಯುವಾಗ ಅಲ್ಲ್ಲಲ್ಲಿ ತಪ್ಪುಗಳಾಗಿವೆ.

(ಸ್ನೇಹಸೇತು : ಏನ್‌ಗುರು?)

ಪೂರಕ ಓದಿಗೆ
ನಿಂದಕರಿರಬೇಕು ಅಂದಿಯತರಅ ನಿಂದಕರಿರಬೇಕು
ಕನ್ನಡದ ಪೂಜಾರೀನೂ ಯಾಮಾರ್ಸಿರೋ ಹಿಂದಿ ಭೂತ!
ಕನ್ನಡ ಮಾಧ್ಯಮ ಬರೀ ಹಳ್ಳೀ ಹೈಕ್ಳಿಗಷ್ಟೇನಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X