ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಒಪ್ಪಿದ್ದಕ್ಕೇ ಮುಂಬಯಿ ಮಟಾಷ್!

By Staff
|
Google Oneindia Kannada News

Gate Way for Hindi!!ಉತ್ತರ ಪ್ರದೇಶ ರಾಜ್ಯ ಸ್ಥಾಪನೆ ದಿವಸಾನ ಅಲ್ಲಿಗಿಂತ ಇಲ್ಲೇ ಜೋರಾಗ್ ಆಚರ್ಸೋ ಅಗತ್ಯ ಇಲ್ಲ ಅನ್ನೋ ಹೇಳಿಕೆಯಿಂದ ಶುರುವಾದದ್ದು, ಮುಂಬೈ ಮರಾಠಿಗಳದ್ದಲ್ಲ, ಎಲ್ರುದ್ದು ಅನ್ನೋಗಂಟ ಬಂತಲ್ಲಪ್ಪ ಶಿವಾ. ಮಹಾರಾಷ್ಟ್ರದಲ್ಲೇ ಮರಾಠಿಗನಿಗೆ ಎಂಥಾ ಕೆಟ್ಟ ಗತಿ ಬಂತಲ್ಲಪ್ಪೋ.. ಅಯ್ಯೋ ಪಾಪ ಅನ್ನುಸ್ತಿದೆ. ಹಿಂದಿ ಅನ್ನೋ ಮಹಾಮಾರೀನ ಮನೆದೇವತೆ ಮಾಡ್ಕೊಂಡು ತಲೆಮೇಲೆ ಹೊತ್ಕೊಂಡು ಮೆರೆಸಿದ್ದಕ್ಕೆ ಸಿಕ್ತಲ್ಲಪ್ಪಾ ದೊಡ್ ಬಹುಮಾನ. ಕಂಡ ಕಂಡವರನ್ನೆಲ್ಲಾ ಬಾ ಅಣ್ಣಾ, ಬಾ ತಮ್ಮಾ, ಇದು ಭಾರತ ದೇಶದ ಹೆಬ್ಬಾಗ್ಲು, ಇಲ್ಲೇ ಇರೋದು ಗೇಟ್ ವೇ ಆಫ್ ಇಂಡಿಯಾ, ಇಲ್ಲಿ ಯಾರು ಎಲ್ಲಿಂದಾನಾ ಬಂದು ಬದುಕ್ಬೋದು ಅಂತ ಬಂದೋರ್ನೆಲ್ಲಾ ಕಣ್ಮುಚ್ಕೊಂಡ್ ಕರ್ಕೊಂಡಿದ್ದಕ್ಕೆ ಸರಿಯಾಗ್ ಬಿತ್ತಲ್ಲ ಬಗುಣಿ ಗೂಟ.

ಮನೆ ಹೊಕ್ಕಿದ್ದೇ ಮನರಂಜನೆ ರೂಪದಲ್ಲಿ...

ಈ ಹಿಂದಿ ಭಾಷೆನ ಒಪ್ಕೊಳೊ ಹಾಗ್ ಮಾಡಕ್ ಇರೊ ಸುಲಭದ ಸೀ ಮೆತ್ತಿರೋ ಮಾತ್ರೆ ಅಂದ್ರೆ ಮನರಂಜನೆ. ಮುಂಬೈಯಲ್ಲಿ ಹಿಂದಿ ಸಿನಿಮಾಗಳ ಭರಾಟೆ ಏನು? ಇರೋ ನೂರರಲ್ಲಿ ತೊಂಬತ್ತೈದು ಟಾಕೀಸ್ನಲ್ಲಿ ಹಿಂದಿ ಫಿಲಂಗಳದ್ದೇ ಮೆರೆದಾಟ. ಇದ್ರು ಜೊತೆಗೆ ಇಡೀ ಹಿಂದಿ ಚಿತ್ರರಂಗಕ್ಕೇ ನೆಲೆ ಕೊಡ್ತಲ್ಲಾ ಮುಂಬೈ. ನಮ್ಗೂ ಏನಾರ ಚೂರುಪಾರು ಹೊಟ್ಟೆಪಾಡು ನಡ್ಯತ್ತೆ ಅಂತ ಮರಾಠಿಗರು ಅಂದ್ಕೊಂಡ್ರೇನೋ! ಚಿತ್ರರಂಗಾನೂ ಎಲ್ಲೋ ನಾಕು ಜನಕ್ಕೆ ಅನ್ನ ಕೊಡ್ತೇನೋ, ಆದ್ರೆ ಇಡೀ ಮುಂಬೈನ ಬಟ್ಟೆ ಅಲ್ಲ ಆತ್ಮದ ಸಮೇತ ಬದಲಾಯ್ಸಿಬಿಡ್ತು. ಬರ್ತಾ ಬರ್ತಾ ಇರೋ ಬರೋ ಕೆಲ್ಸಗಳೆಲ್ಲಾ ವಲಸಿಗರ ಪಾಲಾಯ್ತು.

ಹೊಟ್ಟೆ ಬಟ್ಟೆ ಕಿತ್ಕೊಂಡ ವಲಸೆ!

ಹಿಂಗ್ ಶುರು ಹಚ್ಕೊಂಡ್ ಕಥೆ ಕೊನೆಗ್ ಎಲ್ಲಿಗಪ್ಪಾ ಬಂತು ಅಂದ್ರೆ ಮುಂಬೈಯಲ್ಲಿ ಯಾವೊಂದು ಉದ್ದಿಮೆ ತೊಗೊಂಡ್ರೂ ಅದ್ರಲ್ಲಿ ಬೇರೆಭಾಷೆಯವ್ನೇ ಯಜಮಾನ, ಬೇರೆಭಾಷೆಯವ್ನೇ ಕೆಲಸಗಾರ. ಉದ್ದಿಮೆ, ಉದ್ಯೋಗಗಳ ಮೇಲೆ ಹಿಡ್ತ ಕಳ್ಕೊಂಡ್ ಮೇಲೆ ಇನ್ನೇನಪ್ಪಾ ಬಾಕಿ ಉಳೀತು. ಹೋಗ್ಲಿ ವಲಸೆ ಬಂದೋವ್ರಾದ್ರೂ ಮರಾಠಿ ಕಲ್ಯೋಹಾಗ್ ಮಾಡಿದ್ದಿದ್ರೆ ಇನ್ನೊಂದಿಷ್ಟು ಮರಾಠಿ ಜನಕ್ಕೆ ಬದುಕ್ನ ಕಟ್ಕೊಳಕ್ ಆಗ್ತಿತ್ತಲ್ವಾ? ಹಾಗಾಗ್ಲಿಲ್ವೇ? ಒಟ್ನಲ್ಲಿ ಎರೆಹುಳು ಆಸೆಗೆ ಗಾಳಕ್ ಬಿದ್ದ ಮೀನಂಗಾಯ್ತು ಮುಂಬೈಯಲ್ಲಿ ಮರಾಠಿಗರ ಬದುಕು. ಇವ್ರ ಹಿತ ಕಾಪಾಡೊಕ್ಕೆ ಅಂತಲೇ ಪ್ರಜಾಪ್ರಭುತ್ವಾ ಇಲ್ವಾ, ಜನಪ್ರತಿನಿಧಿಗಳಿಲ್ವಾ ಅಂತೀರಾ?

ಮ-ಮ-ಮ ಮರೆತು ದಿಕ್ಕು ತಪ್ಪಿದೋರು

ಗುರು, ದೊಡ್ದೊಡ್ಡ ರಾಷ್ಟ್ರೀಯ ಪಕ್ಷಗಳ ಹಣೆಬರಾ ಗೊತ್ತಿರೋದೆ ಬೇರೆ ಏನಾರ ಯೋಳು ಅಂತೀರೇನೋ. ಅಲ್ಲಾ ಮಾರಾಷ್ಟ್ರದಾಗೆ ಒಂದು ಶಿವಸೇನಾ , ಒಂದು ಎಂ.ಎನ್.ಎಸ್ಸು, ಒಂದು ಎನ್.ಸಿ.ಪಿ ಅನ್ನೋ ಪಕ್ಷಗಳು ಬದ್ಕವಲ್ಲಾ ಅಂತೀರೇನೋ? ಭಾಳಾ ಹಿಂದೆ ಅಂದ್ರೆ 1960ರ ದಶಕದಲ್ಲಿ ಮುಂಬೈನ ಕೇಂದ್ರಾಡಳಿತ ಪ್ರದೇಶ ಅಂತ ಮಾಡಕ್ ಹೊರ್ಟಾಗ ಎಚ್ಚೆತ್ತ ಮರಾಠಿ ಸ್ವಾಭಿಮಾನದ ಅಲೆಯಲ್ಲಿ ತೇಲ್ಕೊಂಡು ಬಂದು 1966ರಲ್ಲಿ ಹುಟ್ಕೊಂಡು ಅಮ್ಚಿ ಮುಂಬೈ ಅಂತ ಗರ್ಜನೆ ಮಾಡಕ್ ಶುರು ಹಚ್ಕೊಂಡ ಪಕ್ಷ ಶಿವಸೇನೆ.

ಆದ್ರೆ ಮರಾಠಿ-ಮರಾಠಿಗ- ಮಹಾರಾಷ್ಟ್ರ ಅನ್ನೋದ್ನ ಕೇಂದ್ರವಾಗಿ ಇಟ್ಕೊಳದ್ನ ಅದ್ಯಾಕೋ ಮರ್ತೇ ಬುಟ್ಟು ಇನ್ಯಾವ್ಯಾದ್ರ ಸುತ್ತಾನೋ ಗಿರಕಿ ಹೊಡ್ಕೊಂಡು ದಿಕ್ಕು ತಪ್ಪೋಯ್ತು ಅನ್ನಂಗ್ ಆಗದೆ ಗುರು. ಬೇರೆ ಪ್ರಾದೇಶಿಕ ಪಕ್ಷಗಳ್ದೂ ಇದೇ ಕಥೆ. ಇಡೀ ಮಾರಾಷ್ಟ್ರಾನ ಮರಾಠಿ - ಮರಾಠಿಗ- ಮಹಾರಾಷ್ಟ್ರದ ಹೆಸರಲ್ಲಿ ಒಗ್ಗೂಡ್ಸೋದ್ರಲ್ಲಿ ಎಲ್ಲವೂ ಎಡುವುದ್ವು ಗುರು. ಇದ್ದ ಅವಕಾಶಗಳ್ನ ಕೈಬಿಟ್ಟು ಈಗ ಉಗ್ರವಾಗಿ ನಡ್ಕೊಂಡು ಕೈಲಾಗದವ್ನು ಮೈ ಪರಚ್ಕೊಂಡಂಗೆ ಆಡ್ತಿರೋದು ನೋಡುದ್ರೆ ತಮ್ಮ ಜನರ ಬದುಕನ್ನು ಹಸನು ಮಾಡ್ಕೊಳೋ ಒಳ್ಳೇ ಅವಕಾಶಾನ ಮರಾಠಿ ಜನ ಕಳ್ಕೊಂಡ್ರೇನೋ ಅನ್ಸುತ್ತೆ ಗುರು.

ವಲಸೆ ಬಂದೋನ್ನ ಮುಖ್ಯವಾಹಿನಿಗೆ ಸೇರುಸ್ಕೊಬೇಕು!

ಮರಾಠಿ ಜನರಾದ್ರೂ ಏನ್ ಮಾಡುದ್ರು. ಹಿಂದೀನಾ ಅದ್ಯಾಕೋ ರಾಷ್ಟ್ರಭಾಷೆ ಅಂತ ಒಪ್ಕೊಂಡೇ ಬುಡೋದಾ? ಮುಂಬೈನಲ್ಲಿ ಯಾವ ಅಂಗಡಿ ಮುಂಗಟ್ಟು, ಸಿನಿಮಾ ನಾಟಕ ಎಲ್ಗಾನಾ ಓಗಿ, ಹಿಂದಿ ಒಂದೇ ನಡ್ಯದು. ಯಾವಾನಾದ್ರೂ ಮರಾಠಿ ಬಾಯ್ಬುಟ್ರೆ ಒಳ್ಳೇ ಹಳ್ಳಿ ಗುಗ್ಗೂನ ನೋಡೋ ಅಂಗ್ ನೋಡ್ತಾರೆ. ಇದ್ಯಾಕಪ್ಪಾ ಇಂಗೆ ಅಂದ್ರೆ, ಬಂದೌರ್ಗೆಲ್ಲಾ ಅನುಕೂಲ ಆಗ್ಲಿ ಆಂತ ವಲಸಿಗರ ಭಾಷೇಲೆ ಯವಾರ ಮಾಡಕ್ ಶುರು ಅಚ್ಕಂಡಿದ್ದು.

ಜೊತೆಗೆ ಮರಾಠಿ ಏನಿದ್ರೂ ಮನೆ ಒಳ್ಗೆ, ಬೀದಿಗ್ ಬಂದ್ರೆ ಹಿಂದಿ ಅಂತ ಲೆವೆಲ್ ತೋರುಸ್ಕೊಳಕ್ ಹೋಗಿದ್ದು. ತಕ್ಕಳಪ್ಪಾ, ಒಂದಪಾ ಹಿಂದಿನಾ ಒಪ್ಕಂಡ್ ಒಳಿಕ್ ಬುಟ್ಟಿದ್ದೇ ಬುಟ್ಟಿದ್ದು ವಲಸೇ ತಡ್ಯಕ್ ಆಯ್ತದಾ? ಭಾಷೆ ಒಪ್ಕೊಂಡೋರು ಆ ಭಾಷಿಕರನ್ನೂ ಒಪ್ಕಂಡಂಗೆ ಅಲ್ವಾ? ಬಂದವ್ರ ಜೊತೆ ಹಿಂದೀಲೆ ಮಾತಾಡ್ತಿದ್ರೆ ಇನ್ನು ಒಳಿಕ್ ಬಂದವ್ರಾದ್ರು ಎಂಗೆ ಮುಕ್ಯವಾಹಿನಿ ಸೇರ್ಕತಾರೆ? ಮುಂಬೈಯಲ್ಲಿ ಹಿಂದಿ ನಡೀತದೆ, ಅಲ್ಲಿಗೇ ಹೋಗಮಾ ಅಂತ ನುಗ್ಗುದ್ರು ನೋಡಿ ಜನ, ವಲಸಿಗರ ಸಂಕ್ಯೆ ಎದ್ವಾ ತದ್ವಾ ಏರ್ಬುಡ್ತು. ಇದಾಗ್ತಿದ್ ಹಂಗೇ ತಮ್ದೇ ಮುಖ್ಯವಾಹಿನಿ ಅನ್ನಕ್ ಶುರು ಹಚ್ಕಂಡ್ರು. ಮಾತಾಡುದ್ರೆ ಇದು ಭಾರತ ದೇಶ, ಇಲ್ಲಿ ಯಾರ್ ಎಲ್ಲಿಗ್ ಬೇಕಾರ್ ಹೋಗ್ ಬದುಕ್ಬೋದು ಅನ್ನಕ್ ಶುರು ಹಚ್ಕೊಂಡ್ರು. ಅಲ್ಲಾ ಗುರು, "ಯಾರು ಬೇಕಾದ್ರು ಮುಂಬೈಗೆ ಬಂದ್ ಬದುಕೋದು ಎಲ್ಲಾ ಭಾಷೆಯೋರ ಹಕ್ಕಾದರೆ, ಮುಂಬೈಗೆ ಬರೋರು ನಮ್ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳಿಗೆ ಧಕ್ಕೆ ತರ್ದೆ ಬದುಕೋದು ನಿಮ್ಮ ಕರ್ತವ್ಯ ಅಲ್ವಾ?" ಅಂತ ಬುದ್ಧಿಜೀವಿ, ನಾಯಕ, ರಾಜಕಾರಣಿ ಅನ್ನುಸ್ಕೊಂಡಿರೋ ಯಾವ್ ಬಡ್ಡೀಹೈದ್ನೂ ದನಿ ಎತ್ತುತಿಲ್ವಲ್ಲಾ ಅಂತ.

ಇನ್ನಾದ್ರೂ ಕಣ್ ಬುಟ್ಟಾರಾ?

ಇಡೀ ಸಮಸ್ಯೆ ಮೂಲ ಇರೋದು ಮುಂಬೈನಲ್ಲಿ ಇವತ್ತಿರೋ ಪರಭಾಷಿಕರ ಪ್ರಾಬಲ್ಯ. ಇದುಕ್ ಕಾರಣ ವಲಸೆ, ವಲಸೆಗೆ ಪ್ರೇರಣೆ ನೀಡಿದ್ದೆ ಮುಂಬೈ ಜನ ಹಿಂದೀನ ಒಪ್ಕೊಂಡು ತಲೆಮೇಲೆ ಕೂರುಸ್ಕೊಂಡಿದ್ದು. ಇವತ್ಗೂ ಮರಾಠಿ ಜನ್ರು ಹಿಂದಿ ಅನ್ನೋದು ಏನು? ಅದ್ರ ಕಿತಾಪತಿ ಏನು? ಅನ್ನೋದ್ನ ಸರ್ಯಾಗಿ ಗುರುತ್ಸಕ್ ಆಗ್ದೆ ಎಲ್ಲೆಲ್ಲೋ ತಡಕಾಡ್ತಾ ಇದಾರೆ. ಹಿಂದೀನ ಒಳಿಗ್ ಬುಟ್ಕೊಂಡು ವಿಶೇಷವಾಗಿ ಮುಂಬೈಯಲ್ಲಿ ತಮ್ಮ ಭಾಷೆನ ಬಲಿ ಕೊಟ್ರು, ತಮ್ಮ ಸಿನಿಮಾ ಇಂಡಸ್ಟ್ರಿ ಬಲಿ ಕೊಟ್ರು, ತಮ್ಮ ಮಕ್ಳುಗಳ ಕೆಲ್ಸದ ಅವಕಾಶಾನ ಬಲಿ ಕೊಟ್ರು... ಈಗ ಸಮಾಜವಾದಿ ತರದ ಉತ್ತರಪ್ರದೇಶದ ಪಾರ್ಟಿ ಮುಂಬೈಯಲ್ಲೇ ದೊಡ್ ದೊಡ್ ಮೆರವಣಿಗೆ ಸಭೆ ಮಾಡಿ "ಮುಂಬೈ ಯಾರಪ್ಪಂದೂ ಅಲ್ಲ. ಉತ್ತರ ಭಾರತದವ್ರಿಗೆ ಇಲ್ಲಿ ಬದುಕೋ ಹಕ್ಕಿದೆ" ಯಾರಾನಾ ಉತ್ತರದವ್ರ್ ಸುದ್ದಿಗ್ ಬಂದ್ರೆ ಉಸಾರ್ ಅಂತ ಬೆದರಿಕೆ ಹಾಕೋ ಮಟ್ಟಕ್ ಬಂದವ್ರೆ. ಇನ್ನು ವಲಸಿಗರ ವೋಟ್ ಮೇಲೆ ಕಣ್ ಮಡ್ಗಿ ಭಾಜಪ, ಕಾಂಗ್ರೆಸ್ಸು ಕೂಡಾ ಎಗರಾಡ್ತಿವೆ. ಮರಾಠಿಗರು ತಮಗ್ ಬಂದಿರೋ ಆಪತ್ತಿನ ಮೂಲ ಹಿಂದಿ ಭಾಷೆನ ಒಪ್ಕೊಂಡಿರೋದು ಅಂತ ಎಷ್ಟು ಬೇಗ ಅರ್ಥ ಮಾಡ್ಕೊಂಡ್ರೆ ಅವ್ರಿಗೂ, ಭಾರತಕ್ಕೂ ಅಷ್ಟೋ ಇಷ್ಟೋ ಒಳ್ಳೇದು ಆಗ್ಬೋದು.

ಇನ್ನೇನಪ್ಪಾ, ನಮ್ ಕನ್ನಡದೋರ್ಗೆ ನಾವೆಂಗ್ ಇರ್ಬೇಕು ಅಂತಾ ಇನ್ನೂ ಬಾಯ್ ಬುಟ್ ಯೋಳ್ಬೇಕಾ?

( ಸ್ನೇಹ ಸೇತು:ಏನ್ ಗುರು ?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X