ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿರೋ ತಮಿಳು ಪಕ್ಷಗಳ ನಿಯತ್ತು

By Staff
|
Google Oneindia Kannada News

J Jayalalithaಚುನಾವಣೆ ಹತ್ರಾ ಆಗ್ತಿರೋ ಹಾಗೆಲ್ಲಾ ಒಂದೊಂದು ರಾಜಕೀಯ ಪಕ್ಷದ ಮುಖವೂ ಹೊಸ ಹೊಸ ಮೇಕಪ್ಪಲ್ಲಿ ಕಂಗೊಳುಸ್ತಾ ಇರೋವಾಗ ಕರ್ನಾಟಕದಲ್ಲಿ ಕಾಲೂರಕ್ಕೆ ಪ್ರಯತ್ನ ಮಾಡ್ತಿರೋ ಅಣ್ಣಾಡಿಎಂಕೆ, ಡಿಎಂಕೆ ಪಕ್ಷಗಳು ಬಾಯಿಬಿಟ್ಟು "ತಮಿಳುನಾಡಿನ ಹಿತ ಕಾಪಾಡೋರಿಗೆ ಮಾತ್ರಾ ನಮ್ಮ ಬೆಂಬಲ, ನಮ್ಮ ಹೈಕಮಾಂಡು ಚೆನ್ನೈಲಿದೆ" ಅಂತಂದು ಬಣ್ಣಗೇಡಾದ್ವಲ್ಲಾ ಗುರು! ಅಂತೂ ಕರ್ನಾಟಕದಲ್ಲಿ ಯಾಕೆ ರಾಜಕೀಯ ಮಾಡಕ್ಕೆ ಬಂದಿದೀವಿ ಅಂತ ಇಲ್ಲಿರೋ ದ್ರಾವಿಡ ಕಳಗಗಳು ಇವತ್ತಾದ್ರೂ ಹೇಳ್ಕೋತಿರೋದು, ನಮ್ಮ ಜನರ ಕಣ್ತೆರಸಬೇಕು...
ಚೆನ್ನೈ ಹೈಕಮಾಂಡ್!

ಅಣ್ಣಾಡಿಎಂಕೆ ಪಕ್ಷದೋರು ಅಂತಾರೆ " ಕರ್ನಾಟಕದಲ್ಲಿ ಬಿಜೆಪಿ ಹೊಗೆನಕಲ್ಲಿನ ವಿಷಯದಲ್ಲಿ ಮಾತಾಡ್ತಾ ಇದಾರೆ, ಇವರ ನಿಲುವು ತಮಿಳುನಾಡಿನ ಹಿತಕ್ಕೆ ಮಾರಕ. ಹೀಗಾಗಿ ಕರ್ನಾಟಕದಲ್ಲಿರೋ ಏಐಡಿಎಂಕೆಗೆ ಬಿಜೆಪಿ ಜೊತೆ ಮೈತ್ರಿ ಬೇಕಾಗಿಲ್ಲ. ಆದ್ರೂ ನಮ್ಮ ಚೆನ್ನೈ ಹೈಕಮಾಂಡ್ ಹೇಳ್ದ ಹಾಗೆ ಕೇಳ್ತೀವಿ" ಅಂತಾ..


ಇನ್ನು ಕಳೆದ ಬಾರಿ ಕಾಂಗ್ರೆಸ್ ಜೊತೆಯಿದ್ದ ಕರ್ನಾಟಕ ರಾಜ್ಯ ದ್ರಾವಿಡ ಮುನ್ನೇತ್ರ ಕಳಗದ ಮುಖಂಡರು ನೇರವಾಗೇ ಬೆದರಿಕೆ ಹಾಕ್ತಾರೆ "ತಮಿಳರಿಗೆ ಪ್ರಾತಿನಿಧ್ಯ ಕೊಡದ ಯಾವ ರಾಜಕೀಯ ಪಕ್ಷಕ್ಕೂ ನಮ್ಮ ಬೆಂಬಲವಿಲ್ಲಾ... ಭಾಷಾ ಅಲ್ಪಸಂಖ್ಯಾತರಿಗೆ ವಿಶೇಷವಾದ ಪ್ರಾತಿನಿಧ್ಯ ಕೊಡಬೇಕು. ಇಲ್ಲದಿದ್ದರೆ ಇದು ಸಮಸ್ಯೆಗಳಿಗೆ ಕಾರಣವಾದೀತು" ಅಂತ. ಜೊತೇಲೆ ನಾವು ಚೆನ್ನೈಗೆ ವರದಿ ಕೊಡ್ತೀವಿ, ನಮ್ಮ ಹೈಕಮಾಂಡ್ ಹೇಳಿದ್ ಹಾಗೆ ಕೇಳ್ತೀವಿ ಅಂತಾರೆ.

ಇನ್ನು ಬಿಜೆಪಿ ಜೊತೆ ಮೈತ್ರಿ ಬಗ್ಗೆ ಮಾತಾಡ್ತೀನಿ ಅನ್ನೋ ಜಯಲಲಿತಮ್ಮನೋರು ರಾಜ್ಯದಲ್ಲಿರೋ ನಾಯಕರಿಗೆ "ಮಾತುಕತೆಯೆಲ್ಲಾ ನಿಮ್ ಜೊತೆ ಅಲ್ಲಾ, ದಿಲ್ಲಿ ಹೈಕಮಾಂಡ್ ಜೊತೆ" ಅನ್ನೋದ್ನ ಗುಜರಾತಿನ ಮೋದಿ ಜೊತೆ ಚರ್ಚೆ ಮಾಡೋದ್ರ ಮೂಲಕ ತೋರ್ಸಿಕೊಡ್ತಾರೆ.

ಚುನಾವಣಾ ಮೈತ್ರಿ ಭಾಜಪ ಜೊತೆ ಯಾಕೆ ಬೇಡ ಗೊತ್ತಾ?

ಅಣ್ಣಾಡಿಎಂಕೆ ಪಕ್ಷದ ಕರ್ನಾಟಕದ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಕೃಷ್ಣರಾಜುರವರು ಅಂತಾರೆ "ಕರ್ನಾಟಕದಲ್ಲಿ ನಾವೇನೋ ಬಿಜೆಪಿ ಜೊತೆ ಕೈ ಜೋಡ್ಸಮಾ ಅಂತಲೇ ಇದ್ವಿ, ಆದ್ರೆ ಅವ್ರು ಈಗ ಹೊಗೆನಕಲ್ ವಿಷ್ಯದಲ್ಲಿ ಪರವಾಗಿ, ಕರ್ನಾಟಕದ ಪರವಾಗಿ ದನಿ ಎತ್ಬುಟ್ರು. ಅದಕ್ಕೇ ಅವ್ರು ಜೊತೆ ಮೈತ್ರಿ ಬೇಡ ಅನ್ನೋದು ಕರ್ನಾಟಕ ರಾಜ್ಯದ ಅಣ್ಣಾಡಿಎಂಕೆಯ ಅಭಿಪ್ರಾಯ ಅಂದಿದಾರೆ. ಏನ್ ಗುರು! ಇಂಥೋರೆಲ್ಲಾ ಇಡೀ ಕರ್ನಾಟಕದ ತಮಿಳರ ಪ್ರತಿನಿಧಿಗಳು ಆಗಿಬಿಟ್ರೆ, ಕರ್ನಾಟಕದ ತಮಿಳರೆಲ್ಲಾ ಇವ್ರ್ ಥರಾ ಆಗ್ಬಿಟ್ರೆ ಇವ್ರೆಲ್ಲಾ ಆಗ ನಮ್ಮ ಪಾಲಿಗೆ ಸೆರಗಲ್ಲಿ ಕಟ್ಕೊಳೋ ಕೆಂಡ ಆಗೋದ್ರಲ್ಲಿ ಯಾವ ಸಂಶಯಾನೂ ಇಲ್ಲಾ.


ಈ ಕಳಗಗಳ ನಿಯತ್ತು ಯಾರ ಕಡೆಗಿದೆ? ಗುರು!

ತಕ್ಕಳ್ಳಪ್ಪಾ... ಅಂತೂ ಇಂತೂ ಈ ಕಳಗಗಳು ಅನ್ನ ಕೊಡ್ತಿರೋ ಮಣ್ಣಿನ ಬಗ್ಗೆ ತಮಗೆಷ್ಟು ನಿಯತ್ತಿದೆ ಅಂತಾ ತೋರ್ಸೇ ಬಿಟ್ವಲ್ಲಾ! ಕನ್ನಡನಾಡಲ್ಲಿ ಅನ್ನ ಬಟ್ಟೆ ಅರಸ್ಕೊಂಡು ಹೊಟ್ಟೆಪಾಡಿಗ್ ವಲಸೆ ಬಂದಿರೋರು ಇಲ್ಲಿ ನೆಲಜಲ, ಜನರ ಪರವಾಗಿರಬೇಕು, ಇಲ್ಲಿನ ಮುಖ್ಯವಾಹಿನೀಲಿ ಬೆರೀಬೇಕು ಅನ್ನೋದನ್ನೇ ಈ ಪಕ್ಷಗಳು ಮರುತ್ವಲ್ಲಾ ಗುರು? ನೂರಾರು ವರ್ಷಗಳ ಹಿಂದೆ ಬಂದಿರೋ ಬೇರೆ ಭಾಷೆಯೋರು ಇಲ್ಲಿ ಕೂತು ತಮ್ಮ ಬದ್ಧತೇನ ಅವರ ತವರಿನ ಬಗ್ಗೆ ಇಟ್ಕೊಂಡು, ಅದರ ಬಗ್ಗೆ ಇಲ್ಲೇ ರಾಜಕೀಯ ಮಾಡ್ತೀವಿ ಅನ್ನೋದು ಎಷ್ಟು ಸರಿ ಗುರು?

ಕಲೀಬೇಕಾದ್ ಪಾಠ!

ಕನ್ನಡದೋರು ಈ ಪಕ್ಷಗಳ ನಾಡವಿರೋಧಿ ನಿಲುವನ್ನು ಗುರುತಿಸಬೇಕು ಮತ್ತು ಎಚ್ಚೆತ್ಕೋಬೇಕು. ಯಾವ ರಾಜಕೀಯ ಪಕ್ಷಗಳು ಇವ್ರು ಜೊತೆ ಮೈತ್ರಿ ಮಾಡ್ಕೋತಾರೋ ಅವ್ರಿಗೆ ಮತ ಕೊಡಲ್ಲಾ ಅಂತ ನಿರ್ಧಾರ ಮಾಡ್ಕೊಂಡು, ಆಯಾ ಪಕ್ಷದೋರು ಮತ ಕೇಳಕ್ ಬಂದ್ರೆ ಮುಖದ್ ಮೇಲೆ ಹೊಡದಂಗೆ ಹೇಳಬೇಕು.

ನಮ್ಮ ನಾಡಲ್ಲಿರೋ ವಲಸಿಗ್ರು ಮೊದಲು ಮುಖ್ಯವಾಹಿನೀಲಿ ಬೆರೆಯಬೇಕು. ಯಾವುದೋ ನಾಕು ತಲೆಮಾರಿನ ಹಿಂದಿನೋರು ತಮಿಳ್ರಾಗಿದ್ರೂ ಅಂತಾ ತಮ್ಮನ್ನು ಹಾಗೇ ತಿಳ್ಕೊಂಡು ಬರೀ ತಮಿಳು ಸಿನಿಮಾ, ತಮಿಳು ರಾಜಕೀಯ ಪಕ್ಷಗಳು ಅಂತ ಅಂದಂದುಕೊಂಡೇ ತಮ್ಮ ನಿಯತ್ತನ್ನು ಆ ನಾಡಿಗೆ ಮೀಸಲಾಗಿಸಬಾರ್ದು. ತಮ್ಮ ನಿಯತ್ತನ್ನು ಅನ್ನ, ಬದುಕು ಕೊಡ್ತಿರೋ ನಾಡಿಗೆ ತೋರುಸ್ಬೇಕು. ಆಗ ಕನ್ನಡದೋರ ವಿಶ್ವಾಸಾನು ಗಳುಸ್ಕೋಬೌದು. ಕನ್ನಡದವ್ರಾಗೂ ಇರಬೌದು. ಮುಖ್ಯವಾಗಿ ಮನೆಮುರಿಯೋ ಕಳಗಗಳಿಗೆ ಮತ ಕೊಡ್ಲೇಬಾರ್ದು.

ಇನ್ನು ಕರ್ನಾಟಕದಲ್ಲಿರೋ ಮಹಾ ರಾಜಕೀಯ ಪಕ್ಷಗಳು ಇಂಥಾ ಪಕ್ಷಗಳ ಜೊತೆ ಯಾವ ತೆರನಾದ ಮೈತ್ರಿಗೂ ಮುಂದಾಗಬಾರ್ದು. ಯಾವ ಪಕ್ಷದ ಜೊತೆನೂ ಮೈತ್ರಿ ಮಾಡ್ಕೊಳ್ಳೋಕೆ ಮುಂದಾಗಕ್ಕೂ ಮೊದಲು ತಮ್ಮ ತತ್ವ ಸಿದ್ಧಾಂತಗಳನ್ನು ಕನ್ನಡ-ಕನ್ನಡಿಗ-ಕರ್ನಾಟಕಗಳನ್ನು ಕೇಂದ್ರವಾಗಿಸಿಕೋ ಬೇಕು. ಅಲ್ವಾ ಗುರು?

(ಸ್ನೇಹಸೇತು: ಏನ್ಗುರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X