ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೀಚಿದ್ದಕ್ಕೆ ಹೆಬ್ಬೆಟ್ಟೊತ್ತುವ ಕರ್ನಾಟಕ ಗುಲಾಮರು!

By Staff
|
Google Oneindia Kannada News

Arun jaitleyಮೊನ್ನೆ ಕರ್ನಾಟಕದಾಗೆ ವಿಧಾನ ಸಭಾ ಚುನಾವಣೆ ಅಂತಿದ್ ಹಾಗೇ ಭಾರತದ ರಾಷ್ಟ್ರೀಯ ಪಕ್ಷಗಳ ಬಾಲಂಗೋಚಿಗಳಾದ ಕರ್ನಾಟಕದ ಶಾಖೆಗಳು ಅಂದ್ರೆ ಅಂಗಗಳು ನಡ್ಕೊಂಡಿದ್ ನೋಡಿ ತಾಯಿ ರಾಜರಾಜೇಶ್ವರಿ ಧನ್ಯಳಾದಳು ಕಣ್ರಪ್ಪಾ!

ಅರುಣ್ ಜೇಟ್ಲಿಯ ಮುಂದೆ ಮಂಡಿಯೂರಿದ ಭಾಜಪ ಮುಖಂಡರು!

ಕರ್ನಾಟಕದಲ್ಲಿ ಚುನಾವಣೆ ತಂತ್ರ ರೂಪ್ಸೋ ಜವಾಬ್ದಾರೀನ ಭಾರತೀಯ ಜನತಾ ಪಕ್ಷದೋರು ಅರುಣ್ ಜೇಟ್ಲಿ ಅವರಿಗೆ ಒಪ್ಸಿರೋ ಸುದ್ದಿ ಬಂದಿದೆ ಗುರು! ಜೊತೆಗೆ ಗುಜರಾತಿನ ನರೇಂದ್ರ ಮೋದಿಯೋರು ಕೂಡಾ ಚುನಾವಣಾ ಪ್ರಚಾರಾನ ಒಂಥರಾ ಶುರು ಹಚ್ಕಂಡವ್ರೆ. ಅಲ್ಲಾ, ಯಡಿಯೂರಪ್ಪ, ಅನಂತ್ ಕುಮಾರು, ಈಶ್ವರಪ್ಪ ಮುಂತಾದ ಘನಂದಾರಿ ನಾಯಕರಿಗೆಲ್ಲಾ ಈ ತಂತ್ರಗಾರಿಕೆ ಕೆಲ್ಸ ಗೊತ್ತಿಲ್ವಾ? ಇದಕ್ಕೆ ದಿಲ್ಲಿಯೋರು ನೇಮಕ ಮಾಡ್ದೋರೆ ಯಾಕಾಗಬೇಕು ಅಂತಾ? ಇದ್ರ ಮಧ್ಯೆ ನಿಮ್ ಜೊತೆ ಏನ್ ಮಾತು? ಆಡೋದಾದ್ರೆ ರಾಷ್ಟ್ರೀಯ ನಾಯಕರ ಜೊತೆ ಆಡ್ತೀವಿ ಅಂತ ನಮ್ಮ ಜೊತೆ ಹೊಂದಾಣಿಕೆ ಮಾಡ್ಕೊಳೀ ಅಂತಾ ಅರುಣ್ ಜೇಟ್ಲಿ ಮುಂದೆ ಸಂಯುಕ್ತ ಜನತಾ ದಳದೋರು ಅಳ್ತಾ ಇರೋ ಸುದ್ದೀನೂ ಬಂತು ಗುರು! ಅಲ್ಲಾ, ರಾಜ್ಯದೊಳಗಡೆ ಒಬ್ಬ ಯೋಗ್ಯ ನಾಯಕನೂ ಇಲ್ಲಾ ಅಂದ್ರೆ ನಾಳೆ ಇವ್ರು ನಮ್ ನಾಡುನ್ನ ಹೇಗೆ ಅಳ್ತಾರೆ? ಇವ್ರು ಪ್ರತಿಯೊಂದಕ್ಕೂ ದಿಲ್ಲಿ ಕಡೆ ಮುಖ ಮಾಡಿ ನಿಲ್ಲೋದು ಖಂಡಿತಾ ಗುರು.

ರಾಹುಲ್ ಗಾಂಧಿ ಎದ್ರು ಕೈ ಹೊಸೆಯುವ ಕಾಂಗ್ರೆಸ್ಸಿನ ಮಹಾನಾಯಕರು!

ಚುನಾವಣೆ ಅಂತಿದ್ ಹಾಗೆ ಶುರುವಾದ "ಡಿಸ್ಕವರಿ ಆಫ್ ಇಂಡಿಯಾ" ಜಾತ್ರೆ ನೋಡ್ಬೇಕಿತ್ತು. ರಾಹುಲ್ ಗಾಂಧಿ ವಯಸ್ಸಿಗಿಂತ ಹೆಚ್ಚಿನ ರಾಜಕೀಯ ಅನುಭವ ಇರೋ ಕೃಷ್ಣ, ಖರ್ಗೆ, ಧರಂಸಿಂಗ್, ಎಂ.ಪಿ.ಪ್ರಕಾಶ್, ಸಿದ್ದರಾಮಣ್ಣ ಎಲ್ಲ ಹೆಂಗ್ ಹಿಂದೆ ಮುಂದೆ ಸಾಮಂತರುಗಳ ಅಲೀತಿದ್ರೂ ಅನ್ನೋದ್ನ ನೋಡುದ್ರೆ ಸ್ವಾಭಿಮಾನ, ಆತ್ಮಗೌರವ, ನಾಯಕತ್ವ ಅನ್ನೋ ಪದಗಳಿಗೆ ಹೊಸಾ ಅರ್ಥ ಬರೀಬೇಕು ಅನ್ನುಸ್ಬುಡ್ತು ಗುರು. ಕರ್ನಾಟಕದಾಗಿನ ಸಮಸ್ಯೆಗಳ್ನ ರಾಹುಲ್ ಮುಂದೆ ಇಟ್ಟು ದಾರಿ ತೋರ್ಸಿ ಅಂತ ಬೇಡ್ಕೊತಾ ಇದ್ದುದ್ನ ನೋಡಿ, ಜೀವ ತಂಪಾಯ್ತು ಗುರು. ಜೊತೆಗೆ, ಯುವ ಕಾಂಗ್ರೆಸ್ಸಿನೋರು ಯುವಕರಿಗೇ ಅವಕಾಶ ಕೊಡಿ ಅಂತಾ ರಾಹುಲ್ ಗಾಂಧಿಗೆ ದುಂಬಾಲು ಬಿದ್ದ ಇನ್ನೊಂದು ಸುದ್ದಿ ಬಂತು ಗುರು!

ಅಮರಸಿಂಗ್ ಅಪ್ಪಣೆಗೆ ಕಾದ ಸಮಾಜವಾದಿಯ ಬಂಗಾರಪ್ಪ!

ಕರ್ನಾಟಕದಲ್ಲಿ ಜಾತ್ಯಾತೀತ ಜನತಾ ದಳದೋರ ಜೊತೆ ಹೊಂದಾಣಿಕೆ ಮಾಡ್ಕೊಬೇಕು ಅಂತಾ ನಮ್ಮ ಸಾರೆಕೊಪ್ಪದ ಬಂಗಾರಪ್ಪನವರಿಗೆ ಅನ್ಸುದ್ರೆ ಪಾಪ ಅವ್ರು ದಿಲ್ಲೀಗೆ ಹತ್ರದಲ್ಲಿರೋ ಅಮರ್ ಸಿಂಗ್ ಮೂಲಕ ಮಾತಾಡ್ತಾರೆ. ಉತ್ತರ ಪ್ರದೇಶದ ಪ್ರಾದೇಶಿಕ ಪಕ್ಷದ ರಾಜಕಾರಣಿ ಅಮರ್ ಸಿಂಗ್ ದಿಲ್ಲೀಲಿ ದ್ಯಾವೇಗೌಡ್ರ ಜೊತೆ ಮಾತುಕತೆ ನಡ್ಸಿದ ಸುದ್ದೀನು ಬಂತು ಗುರು! ಮಾತುಕತೆ ಏನಾಯ್ತೋ? ಹೊಂದಾಣಿಕೆ ಮಾಡ್ಕೋಬೇಕೋ? ಬ್ಯಾಡ್ವೋ? ಅಂತನ್ನೋ ಚಿಕ್ಕ ತೀರ್ಮಾನ ಕೂಡ ತೊಗಳ್ಳಕ್ ಆಗದ ಬಂಗಾರಪ್ಪನವ್ರು ನಾಳೆ ಗದ್ದುಗೆ ಹಿಡುದ್ರೆ "ಅಣ್ಣಾ! ಕರ್ನಾಟಕದ ಈ ವರ್ಷದ ಬಜೆಟ್ ಇದು, ಇದುನ್ ಒಸಿ ಮಂಡುಸ್ಲಾ?" ಅಂತಾ ಉತ್ತರದೋರ್ ಮುಂದೆ ಪ್ರಶ್ನೆ ಇಟ್ಟಾರು...

ಕಣ್ ಕಣ್ ಬಿಡ್ತಿರೋ ಜಾತ್ಯಾತೀತ ಜನತಾದಳದೋರು!

ಇಷ್ಟೆಲ್ಲಾ ನಡೀತಾ ಇರ್ಬೇಕಾದ್ರೆ ಅಲ್ಲಿ ಅಪ್ಪ ದ್ಯಾವೇಗೌಡ್ರು ದಿಲ್ಲೀಲಿ ನಮ್ಮದೂ ರಾಷ್ಟ್ರೀಯ ಪಕ್ಷ ಅಂತಾ ಕಿರುಲ್ತಿದ್ರೆ ಮಗಾ ಕುಮಾರಣ್ಣ ಇಲ್ಲಿ... ನಮ್ಮದು ಪ್ರಾದೇಶಿಕ ಪಕ್ಷಾ ಅಂತಾ ಇದಾರೆ. ಒಂದ್ಸರ್ತಿ ಕನ್ನಡ ನಮ್ಮ ಉಸ್ರು ಅನ್ನೋರು ಇನ್ನೊಂದು ಕಡೆ ನಿಪ್ಪಾಣಿ ಸಭೇಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಅಂತಾ ನಿರ್ಣಯ ತೊಗೋತಾರೆ. ನಾವು ಕನ್ನಡದೋರು ಅಂದ್ಕೊಂಡೆ ತಮ್ಮ ಪಕ್ಷದ ವತಿಯಿಂದ ವಿಧಾನ ಸಭಾ ಕ್ಷೇತ್ರಗಳ್ನ ತಮಿಳ್ರಿಗೆ, ತೆಲುಗ್ರಿಗೆ ಕೊಟ್ಕೊಂಡು ಬರ್ತಿದಾರೆ.
ಇಂತಿರ್ಪ ಕನ್ನಡ ನಾಡ ರಾಜಕಾರಣದ ಕುರಿದೊಡ್ಡೀಲಿ...

ಕವಿ ನಿಸಾರ್ ಅಹಮದ್ ಅವರ ಕುರಿಗಳು ಕವಿತೆ ಇವ್ರುನ್ ನೋಡೇ ಬರ್ದಿರೋ ಹಾಗಿದೆ!

ನಮ್ಮ ಕಾಯ್ವ ಕುರುಬರೂ...
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನ್ನು ಒತ್ತುವವರು

ದಿಲ್ಲಿನಾಗೆ ಕೂತಿರೋ ಶಾನುಭೋಗರು ಗೀಚಿದ್ದಕ್ಕೆ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಸಹಿ ಹಾಕ್ಕೊಂಡ್ ಕೂತಿರೋದ್ನ ನೋಡ್ತಿರೋ ನಾವು? ಮಂದೆಯಲಿ ಸ್ವಂತತೆ ಮರೆತು ತಲೆ ತಗ್ಗಿಸಿ ನಡು ಬಗ್ಗಿಸಿ, ದನಿ ಕುಗ್ಗಿಸಿ ಅಂಡಲೆಯುವ ನಾವೂ ನೀವೂ ಅವರೂ ಇವರೂ ಕುರಿಗಳೂ ಸಾರ್ ಕುರಿಗಳು... ನಾವು ಕುರಿಗಳು! ಏನಂತೀರಾ ಗುರು?
(ಸ್ನೇಹಸೇತುವೆ: ಏನ್ಗುರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X