ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಮಫಲಕಗಳ ಕನ್ನಡೀಕರಣ:ಮಂತ್ರಕ್ಕಿಂತ ಉಗುಳೇ ಹೆಚ್ಚು!

By Staff
|
Google Oneindia Kannada News

ಬೆಂಗಳೂರಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಲಿ.. ಹೆಚ್ಚೂ-ಕಡಿಮೆ ಒಂದು ವರ್ಷದ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಆ ವರ್ಷದ ನವೆಂಬರ್ ಒಂದನೇ ತಾರೀಕಿನ ಒಳಗೆ ಬೆಂಗಳೂರಿನ ಎಲ್ಲ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಪೂರ್ತಿ ಅನುಷ್ಠಾನ ಆಗಬೇಕು ಅಂತ ಗಡುವು ಹಾಕಿತ್ತು. ಅವತ್ತು ಬುಸುಗುಟ್ಟಿದ್ದ ಆ ಹಾವು, ಇವತ್ತಿನ ತನಕ ಕಚ್ಚಿಲ್ಲ ಅನ್ನೋದೇ ಸ್ವಾರಸ್ಯ ಗುರು!

"ಕನ್ನಡ ಅಭಿವೃದ್ಧಿ ಪ್ರಾಧಿಕಾರ" ಬರೀ "ಕನ್ನಡ ವರದಿ ಪ್ರಾಧಿಕಾರ" ಆಗಿದ್ದರೆ ಸುಖವಿಲ್ಲ

ನಮ್ಮ ಸರ್ಕಾರ 1992ರ ಜುಲೈ 6ನೇ ತಾರೀಕು ಒಂದ್ ಆದೇಶ ಹೊರಡ್ಸೋ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರನ ಹುಟ್ ಹಾಕ್ತು. ಈ ಸಂಸ್ಥೆಯ ಉದ್ದೇಶಗಳೇನಪ್ಪಾ ಅಂದ್ರೆ [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ] -

  • ರಾಜ್ಯ ಸರ್ಕಾರದ ಭಾಷಾ ನೀತೀನ ಅನುಷ್ಠಾನಕ್ ತರಕ್ಕೆ ಕಾರ್ಯವಿಧಾನ ರೂಪಿಸಿ ಸಂಬಂಧಪಟ್ಟ ಇಲಾಖೆಗಳ ಮೂಲಕ ಜಾರಿಗೊಳಿಸಕ್ಕೆ ಕ್ರಮ ತೊಗೊಳ್ಳೋದು
  • ಕನ್ನಡವನ್ನ ಆಡಳಿತ ಭಾಷೆ ಮಾಡಕ್ಕಿರೋ ಅಡ್ಡಿ ಆತಂಕ ಗುರುತ್ಸಿ ಸರ್ಕಾರಕ್ಕೆ ಅದ್ನ ನಿವಾರ್ಸೋ ಸಲಹೆ ಕೊಡೋದು
  • ಕನ್ನಡ ಅನುಷ್ಠಾನ ಸರ್ಯಾಗಿ ಆಗಿಲ್ಲದಿದ್ದರೆ ಅಂಥೋರ ಮೇಲೆ ಕ್ರಮ ತೊಗೊಳ್ಳಿ ಅಂತ ಸರ್ಕಾರಕ್ಕೆ ವರದಿ ಕೊಡೋದು.
ಕ.ಅ.ಪ್ರಾ.ದ ವ್ಯಾಪ್ತಿಗೆ ಸರ್ಕಾರ ಮತ್ತದರ ಅಧೀನ ಸಂಸ್ಥೆಗಳು ಬರ್ತವೆ. ಕನ್ನಡ ಅನುಷ್ಠಾನಕ್ ಸಂಬಂಧಿಸಿದ ಹಾಗೆ ಕಾಲಕಾಲಕ್ಕೆ ಸರ್ಕಾರ ವಹಿಸೋ ಎಲ್ಲ ವಿಷ್ಯಗಳೂ ಬರ್ತವೆ. ಆದ್ರೆ ಈ ಪ್ರಾಧಿಕಾರಕ್ಕೆ ಸಲಹೆ, ವರದಿ ಕೊಡುವ ಅಧಿಕಾರವಿದೆಯೇ ಹೊರ್ತು ಕ್ರಮ ತೊಗೊಳ್ಳೋ ಅಧಿಕಾರ ಇಲ್ಲ ಗುರು! ಆದ್ದರಿಂದ ಪ್ರಾಧಿಕಾರ ಏನು ಬಡ್ಕೊಂಡ್ರೂ ಜನ ಹಾಡು-ಹಗಲಲ್ಲೇ ಅದನ್ನ ಉಲ್ಲಂಘನೆ ಮಾಡ್ತಾನೇ ಇರ್ತಾರೆ ಗುರು!

ಕನ್ನಡ ನಾಮಫಲಕ ಮತ್ತು ಸರಕಾರದ ಆದೇಶ

24-ಎ, ನಾಮಫಲಕ ಪ್ರದರ್ಶನ ಅನ್ನೋ ಒಂದು ಆದೇಶದಲ್ಲಿ ದಿನಾಂಕ 11.01.1985ರಲ್ಲಿ ಕರ್ನಾಟಕದಲ್ಲಿ ಇರೋ ಎಲ್ಲ ವಾಣಿಜ್ಯ ಮತ್ತು ವ್ಯವಹಾರ ಸಂಸ್ಥೆಗಳ ನಾಮಫಲಕ ಕನ್ನಡದಲ್ಲೇ ಇರಬೇಕು, ಅಕಸ್ಮಾತ್ ಬೇರೆ ಭಾಷೆ ಬಳ್ಸೋ ಪ್ರಮೇಯ ಇದ್ದಲ್ಲಿ ಮೊದಲು ದೊಡ್ಡದಾಗಿ ಕನ್ನಡದಲ್ಲಿ, ಅದರ ಕೆಳಗೆ ಇತರೆ ಭಾಷೇಲಿ ಬರೀಬೇಕು ಅನ್ನುತ್ತೆ ಆ ಆದೇಶ. ಇದನ್ನ ಜಾರಿಗೆ ತರಬೇಕು ಅನ್ನೋ ದೃಷ್ಟಿಯಿಂದಲೇ ಕ.ಅ.ಪ್ರಾ.ದ ಅಧ್ಯಕ್ಷರು ಅಂಥ ಒಂದು ಹೇಳಿಕೆ ಕೊಟ್ಟಿರೋದು. ತಮಾಷೆ ಅಂದ್ರೆ ಇದಕ್ಕೆ ತಪ್ಪಿದರೆ ತೆರಬೇಕಾದ ದಂಡ ಬರೀ 50 ರೂಪಾಯಿ (1985ರಲ್ಲಿ)! [ಆಧಾರ: ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿತ 'ಕನ್ನಡ-ಕನ್ನಡಿಗ-ಕರ್ನಾಟಕ' ಹೊತ್ತಿಗೆ]

ಪ್ರಾಧಿಕಾರ ಹೇಳಿದ್ದು ನಿಜಕ್ಕೂ ಜಾರಿಗೆ ಬರಬೇಕಾದರೆ ಏನೇನಾಗಬೇಕು?

ನಿಜವಾಗ್ಲೂ ಈ ಆದೇಶ ಸರಿಯಾಗಿ ಜಾರಿಯಾಗಬೇಕಾದ್ರೆ ಎರಡು ಕೆಲಸ ಆಗಬೇಕು ಗುರು! ಮೊದಲನೇದು ನಗರ ಪಾಲಿಕೆಗಳಿಗೆ, ವಿಧಾನ ಸಭೆಯಲ್ಲಿನ ಶಾಸಕಾಂಗಕ್ಕೆ ಇಂಥಾ ವಿಷಯದಲ್ಲಿ ಕ್ರಮ ತೊಗೊಳ್ಳೋ, ಕಾನೂನು ಮಾಡೊ ಅಧಿಕಾರ ಇದೆ ಗುರು! ಇಲ್ಲೆಲ್ಲಾ ಕನ್ನಡದ ಬಗ್ಗೆ ಕಾಳಜಿಯಿರೋ ಜನ ಕುಂತ್ರೆ ಕೆಲ್ಸ ಸಲೀಸು. ಹಾಗೆ ಕೂರೋ ಹಾಗ್ ಮಾಡೊ ಶಕ್ತಿ ಇರೋದೂ ಕೂಡಾ ನಮಗೇನೆ.

ಎರಡನೇ ಕೆಲಸ ಅಂದರೆ ಗ್ರಾಹಕನೇ ದೇವ್ರು ಅನ್ನೋ ಅಸ್ತ್ರಾನ ನಾವೂ ನೀವೂ ಸರಿಯಾಗ್ ಬಳಸಿ ಕನ್ನಡದಲ್ಲೇ ಸೇವೆ ಕೊಡಿ ಅಂತಾ ಒತ್ತಾಯಿಸ್ಬೇಕು. ಕನ್ನಡದಲ್ಲಿ ವ್ಯವಹರಿಸ್ದೆ ಇದ್ರೆ, ಕನ್ನಡ ನಾಮಫಲಕ ಹಾಕ್ದೆ ಇದ್ರೆ ನಿಮ್ಮ ಅಂಗಡೀಗೆ ಬರಲ್ಲ ಅನ್ನೋ ಸಂದೇಶ ಕೊಡ್ಬೇಕು. ಹೋದಲ್ಲೆಲ್ಲಾ ಕನ್ನಡದಲ್ಲೇ ಮಾತಾಡಬೇಕು.

ಸರಿಯಾದ್ ಅಧಿಕಾರ ಕೊಡ್ದೆ ಒಂದಲ್ಲ ನೂರು ಪ್ರಾಧಿಕಾರಗಳನ್ನು ಹುಟ್ ಹಾಕುದ್ರೂ ಪರಿಣಾಮಕಾರಿಯಾಗಿ ಕನ್ನಡ ಅನುಷ್ಠಾನ ಸಾಧ್ಯಾನಾ ಗುರೂ? ಈ ನಾಮಫಲಕದ ಒಂದು ಸಣ್ಣ ನಿಯಮ ಅನುಷ್ಠಾನ ಮಾಡಕ್ಕೆ ಅಂಗಡಿ-ಮುಂಗಟ್ಟುಗಳಿಗೆ ಪರವಾನಿಗೆ ಕೊಡೋ ಮಹಾನಗರ ಪಾಲಿಕೆ, ಕನ್ನಡತನ ಕಾಪಾಡಕ್ಕೇ ಇರೋ ಕನ್ನಡ ಸಂಸ್ಕೃತಿ ಇಲಾಖೆ, ಸಂಸ್ಕೃತಿ ಸಚಿವರು, ನಮ್ಮನ್ನಳೋ ಸರ್ಕಾರಗಳು, ಎಲ್ಲಕ್ಕಿಂತ ಹೆಚ್ಚಿನದಾಗಿ ನಾವೂ ನೀವೂ ಒಟ್ಟಾಗಿ ಸೇರುದ್ರೆ ಸಾಧ್ಯ ಆಗಲ್ಲ ಅಂತೀರಾ?

ಮುಂದಿನ ಮಹಾನಗರ ಪಾಲಿಕೆ ಚುನಾವಣೆ: ಒಂದು ಒಳ್ಳೇ ಅವಕಾಶ

ಈಗ ಒಂದು ಸುಲಭದ ಅವಕಾಶ ನಮ್ಗೆ ಒದಗಿ ಬಂದಿದೆ. ಇನ್ನೇನು ಸಧ್ಯದಲ್ಲೇ ಮಹಾನಗರ ಪಾಲಿಕೆ ಚುನಾವಣೆಗಳು ನಡ್ಯೋದ್ರಲ್ಲಿವೆ. ನಮ್ಮ ರಾಜಕೀಯ ಪಕ್ಷಗಳು ಇಂಥಾ ಒಂದು ಕನ್ನಡ ಅನುಷ್ಠಾನದ ಭರವಸೇನ ತಮ್ಮ ಪ್ರಣಾಳಿಕೇಲಿ ಸೇರಿಸಬೇಕು ಅಂತ ಒತ್ತಾಯ್ಸೋಣ. ಯಾರು ಕನ್ನಡದ ಹಿತ ಕಾಪಾಡಕ್ಕೆ ಬದ್ಧರಾಗಿರ್ತಾರೋ ಅಂಥೋರಿಗೇ ನಮ್ಮ ಮತ ಹಾಕೋಣ. ಬರೀ ಉಗುಳೇ ಆಯಿತಲ್ಲ, ಮಂತ್ರ ಎಲ್ಲಿ ಅಂತ ಕೇಳೋಣ! ಏನ್ ಗುರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X