ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರೇನು ತೋಟದಪ್ಪನ ಧರ್ಮಛತ್ರಾನಾ?

By Super
|
Google Oneindia Kannada News

ನಮ್ಮ ರಾಜ್ಯಕ್ಕೆ ಪ್ಲಾಸ್ಟಿಕ್ ಕೊಡ ಮತ್ತು ಹಳೆ ಚಾಪೆ ಸುತ್ಗೊಂಡು ರೈಲು ಹತ್ಗೊಂಡು ಬಂದೋರಿಗೆಲ್ಲ ಆಸ್ತಿ ಪಾಸ್ತಿ ಹಕ್ಕು ಬುಕ್ಕು ಅಂತ ಕೊಡ್ತಾ ಹೋದ್ರೆ ಕೊನೆಗೆ ಇದು ಎಲ್ಲಿಗೆ ಮುಟ್ಟುತ್ತೇಂತ ಯೋಚ್ನೇನಾದ್ರೂ ಮಾಡಿದಿರಾ ಗುರುಗಳೆ? ಮಾಡ್ಬೇಕು ಮಾಡ್ಬೇಕು.

ಬೆಂಗ್ಳೂರೇನು ತೋಟದಪ್ಪನ ಧರ್ಮಛತ್ರಾನಾ? (ಚಿತ್ರ ಕೃಪೆ : ದಿ ಹಿಂದೂ)ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ಘೋಷಣೆ ಆದ ಮೇಲೆ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡ್ತಿವೆ. ಜನತಾದಳ(ಜಾ) ದೋರು ಸ್ಲಮ್ ಜನಗಳಿಗೆ ಹಕ್ಕುಸ್ವಾಮ್ಯ ಪತ್ರ ಕೊಡ್ತೀವಿ ಅಂತಿದಾರಲ್ಲಾ, ಈ ಭರವಸೆ ಈಡೇರ್ಸೋ ಭರದಲ್ಲಿ ಬೇರೆ ಬೇರೆ ರಾಜ್ಯಗಳಿಂದ ವಲಸೆ/ಗುಳೆ ಬಂದಿರೋರ್ಗೆ ಹಕ್ಕುಸ್ವಾಮ್ಯ ಕೊಡೋದು ಎಷ್ಟು ಸರಿ? ಇದು ಅನಿಯಂತ್ರಿತ ವಲಸೆಗೆ ಉತ್ತೇಜನ ಕೊಟ್ಟ ಹಾಗಾಗುತ್ತೆ ಅಷ್ಟೆ.

ರಾಜ್ಯಸರ್ಕಾರಕ್ಕೆ ಇರಬೇಕಾದ ಬಡಜನ ಪರವಾದ ಕಾಳಜಿ ಕರ್ನಾಟಕದ ಬೇರೆಬೇರೆ ಜಾಗಗಳಿಂದ ಹೊಟ್ಟೆಪಾಡಿಗೆ ಬರೋ ಕನ್ನಡಿಗರ ಕುರಿತಾಗಿದ್ರೆ ಸಾಕು. ಕನ್ನಡಿಗನೋ ಅಲ್ಲವೋ ಅಂತ ನೋಡ್ದೆ ಮಾಡ್ದೆ ಬಂದೋರಿಗೆಲ್ಲಾ "ಅತಿಥಿದೇವೋ ಭವ" ಅನ್ತಾ ಕೂತಿದ್ರೆ, ನಾವು ಉದ್ಧಾರ ಆದ್ವಿ, ಅದಾಯ್ತು!

ಈಗಾಗ್ಲೆ ಬೆಂಗಳೂರಿನ ಜನಸಂಖ್ಯೇಲಿ 10% ಜನ ಇರೋದು ಕೊಳಚೆ ಪ್ರದೇಶದಲ್ಲಿ. ಬೆಂಗಳೂರಿನ ಇಂಥ ಕೊಳೆಗೇರಿಗಳ ತುಂಬ ವಾಸ ಮಾಡೊ ಹೆಚ್ಚಿನ ಜನ ಎರಡಕ್ಷರ ಕನ್ನಡ ಬರದೇ ಇರೋ ವಲಸಿಗರು. 2004ರಲ್ಲೇ ದಿ ಹಿಂದು ವರದಿ ಮಾಡಿದ ಪ್ರಕಾರ:

The city has been a hub for workers from Tamil Nadu, Andhra Pradesh and North Karnataka for decades now. But the last five years have seen a sea-change in the composition of the incoming populace. In addition to migrants from neighbouring areas, the city is increasingly becoming home-away-from-home for migrants from northern states of Orissa, Bihar, Rajasthan, Gujarat, Uttar Pradesh and Madhya Pradhesh as well.

ಉತ್ತರ ಕರ್ನಾಟಕದಿಂದ ಬಂದೋರಿಗೆ ನೆಲೆ ಮಾಡ್ಕೊಡೋದ್ರಲ್ಲಿ ತಪ್ಪೇನಿಲ್ಲ, ಆದ್ರೆ ತಮಿಳ್ನಾಡು, ಆಂಧ್ರ, ಒರಿಸ್ಸಾ, ಬಿಹಾರು, ರಾಜಸ್ತಾನು, ಗುಜರಾತು, ಉತ್ತರಪ್ರದೇಶ, ಮಧ್ಯಪ್ರದೇಶ - ಇಲ್ಲಿಂದ ಬಂದೋರ್ನೆಲ್ಲಾ ತಲೇಮೇಲೆ ಕೂಡಿಸಿಕೊಳಕ್ಕೆ ನಾವೇನು ಕಿವಿಮೇಲೆ ಹೂವು ಮಡೀಕೊಂಡಿದೀವಾ? "ಬಡವ್ರು ಅಂದ ಮೇಲೆ ಎಲ್ಲರೂ ಒಂದೇ" ಅಂತ ಕನಿಕರ ಪಡೋ ಮಂದಿ ಅರ್ಥ ಮಾಡ್ಕೋಬೇಕಾದ್ದು ಏನಪ್ಪಾ ಅಂದ್ರೆ - ನಮ್ಮೂರಿಗೆ, ಬೇಕು ಅಂದ್ರೆ ನಮಗೆ ಅನುಕೂಲವಾಗೋ ವಲಸೆ ಮಾಡ್ಕೊಳ್ಳೋಣ, ಪರ್ವಾಗಿಲ್ಲ. ಯಾವುದೋ ವಿಶೇಷ ಜ್ಞಾನ, ಪರಿಣಿತಿ ಹೊಂದಿರೋ ಒಬ್ಬ ತಂತ್ರಜ್ಞನ್ನ ನಮ್ಮ ಏಳಿಗೇಗೆ ಅನುಕೂಲ ಆಗುತ್ತೆ ಅಂತ ಒಳಗೆ ಬಿಟ್ಕೊಳ್ಳೋದ್ರಲ್ಲಿ ತಪ್ಪಿಲ್ಲ ಗುರು. ಆದ್ರೆ ಜಗತ್ತಿನ ಬಡವ್ರೆಲ್ಲಾ ಒಂದೇ ಅಂತ ಬೇರೆ ರಾಜ್ಯಗಳ ನಿರಾಶ್ರಿತರಿಗೆ ನೆಲೆ ಕೊಡಕ್ ಹೋದ್ರೆ ಇಡೀ ಕರ್ನಾಟಕವೇ ಭಾರತದ ಸ್ಲಮ್ಮಾಗಿ ಹೋಗತ್ತೆ ಅಷ್ಟೆ! ಇದರಿಂದ ನಮ್ಮ ಜನರ ಬದುಕು ಅರಳೋ ಬದ್ಲು ನರಳುತ್ತೆ. ಬೆಂಗಳೂರಂತಾ ಊರುಗಳು ತೋಟದಪ್ಪನ ಧರ್ಮಛತ್ರ ಆಗತ್ವೆ, ಅಷ್ಟೆ!

ಅಲ್ಲಾ, ಹೀಗ್ ಬೇರ್ ಬೇರೇ ರಾಜ್ಯದಿಂದ ಹೊಟ್ಟೆಪಾಡಿಗೆ ಬರೋ ಜನ್ರಿಗೆಲ್ಲಾ ಹಕ್ಕುಸ್ವಾಮ್ಯ ಕೊಟ್ರೆ ನಾಳೆ ಇವ್ರೆಲ್ಲಾ ಪಡಿತರ ಚೀಟಿ ತೊಗೋಬೋದು, ಗುರುತಿನ ಚೀಟಿ ಪಡ್ಕೋಬೋದು, ಮತದಾನ ಮಾಡ್ಬೋದು, ಚುನಾವಣೆಗೆ ನಿಲ್ಬೋದು, ನಾಳೆ ನಮ್ನೇ ಆಳ್ಬೋದು, ಹೇಗ್ ಆಳಬೇಕು ಅನ್ನೋ ಕಾನೂನೂ ಮಾಡ್ಬೋದು...ಇವೆಲ್ಲಾ ಬೇಕಾ ಗುರು? ಇಂಥೋರು ಹೆಚ್ತಾ ಹೋದ್ರೆ ಇವರಿಂದ ಕನ್ನಡ ಮೂಲೆಗುಂಪಾಗೋಲ್ವಾ? ಇದು ನಮಗೆ ಬೇಕಾ?

ಅಲ್ಲಾ, ತಮ್ಮದು ಪ್ರಾದೇಶಿಕ ಪಕ್ಷ ಅಂತ ಮಾತಾಡೊ ಮಣ್ಣಿನ ಮಕ್ಕಳ ಪಕ್ಷವೇ ಹೀಗ್ ಆಡುದ್ರೆ, ಇನ್ನು ಹುಸಿ ರಾಷ್ಟ್ರೀಯತೆಯಲ್ಲಿ ಮುಳುಗೋಗಿರೋ ಕಾಂಗ್ರೆಸ್ಸು, ಭಾಜಪ ಗಳು ಇನ್ನೆಂಗೆಂಗ್ ಆಡ್ಬೋದು, ನಂ ನಾಡ್ನ ಹೆಂಗೆಂಗ್ ಕಟ್ಟಬಹುದು ಅಂತ ಆತಂಕ ಆಗಲ್ವಾ ಗುರು? ಸ್ಪಲ್ಪ ನೀನೂನೂವೆ ತಲೆಕೆಡಿಸ್ಕೊ ಗುರುವೆ?

(ಸ್ನೇಹಸೇತು : ಏನ್ಗುರು ಕಾಫಿ ಆಯ್ತಾ? )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X