ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪುಸ್ತಕ ಓದುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ!

By Staff
|
Google Oneindia Kannada News

ನಾಡಿನ ಹಿರಿಯ ಸಾಹಿತಿಗಳು,ಸಂಶೋಧಕರು ಮತ್ತು ಚಿಂತಕರು ಆದ ಡಾ.ಎಂ.ಚಿದಾನಂದಮೂರ್ತಿಯವರು ನಮ್ಮ ಕನ್ನಡ ನಾಡಿನ ವಿಸ್ತಾರ, ಸಂಸ್ಕೃತಿಯ ವ್ಯಾಪ್ತಿ, ಎರಡು ಸಾವಿರ ವರ್ಷಗಳ ಇತಿಹಾಸ, ರಾಜಕೀಯ ಮತ್ತು ಸಾಂಸ್ಕೃತಿಕ ಚರಿತ್ರೆಗಳನ್ನು "ಕನ್ನಡ ಸಂಸ್ಕೃತಿ : ನಮ್ಮ ಹೆಮ್ಮೆ " ಎಂಬ ಕಿರು ಗ್ರಂಥದ ಮೂಲಕ ಸಂಕ್ಷಿಪ್ತವಾಗಿ, ಆದರೆ ಸಮಗ್ರವಾಗಿ ಪರಿಚಯ ಮಾಡಿಕೊಟ್ಟಿದ್ದಾರೆ.

Chidanandamurthyಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ನಿಜವಾದ ಅರಿವು ಮತ್ತು ಸ್ವಾಭಿಮಾನವನ್ನು ಮೂಡಿಸಿ ಜಾಗೃತಗೊಳಿಸುವ ಸಲುವಾಗಿ, 1987ರಲ್ಲಿ ಮೊದಲು ಪ್ರಕಾಶಗೊಂಡ ಈ ಪುಸ್ತಕ, ಇತ್ತೀಚೆಗೆ ಪರಿಷ್ಕೃತ ಮುದ್ರಣ ಕಂಡಿದೆ. ಸುಮಾರು ಐವತ್ತೈದು ಸಾವಿರ ಪುಸ್ತಕಗಳಿಗೂ ಮೀರಿದ ಮಾರಾಟದ ದಾಖಲೆ ಹೊಂದಿರುವುದು ಈ ಪುಸ್ತಕದ ವೈಶಿಷ್ಟ್ಯ. ಅಷ್ಟೇ ಅಲ್ಲದೆ ಇದು ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು ಭಾಷೆಗಳಿಗೂ ಅನುವಾದಗೊಂಡಿರುವ ಜನಪ್ರಿಯ ಕೃತಿಯಾಗಿದೆ.

ಸ್ವಾಭಿಮಾನ ಮತ್ತು ಸಮನ್ವಯಗಳ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವ ಮೂಲಕ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಕದಂಬರಿಂದ ಉಗಮವಾದ ಕರ್ನಾಟಕ ಸಂಸ್ಕೃತಿ, ಬಾದಾಮಿ ಚಾಲುಕ್ಯರ ಆಳ್ವಿಕೆ, ಹ್ಯುಯೆನ್ ತ್ಸಾಂಗ್ ರಂತ ವಿದೇಶಿ ಪ್ರವಾಸಿಗರು ಅಂದು ಕನ್ನಡ ನಾಡಿನ ವೈಭವವನ್ನು ತಮ್ಮ ದಾಖಲೆಗಳಲ್ಲಿ ಹಿಡಿದಿಟ್ಟಿರುವ ಮಾತುಗಳು, ಇದಕ್ಕೆ ಸಾಕ್ಷ್ಯ ನುಡಿಯುವ ಸಮಕಾಲೀನ ಶಾಸನಾಧಾರಗಳ ವಿವರಗಳಿವೆ.

ಅಲ್ಲದೆ,ಕವಿಯೂ-ಕ್ಷಾತ್ರ ಪರಂಪರೆಯುಳ್ಳವನಾಗಿದ್ದ ಪಂಪ, ಸ್ವಾಭಿಮಾನದ ವಚನಕಾರರು, ನಮ್ಮ ರಾಜ ಮನೆತನದವರು ಹೇಗೆ ಸರ್ವ ಧರ್ಮೀಯರಾಗಿದ್ರು ಎಂಬ ಮಾಹಿತಿ ಇದೆ. ಸಂತರು-ಕವಿ-ಕಲಾವಿದರ ಪೋಷಣೆ, ಅವರಲ್ಲಿ ಪ್ರೇರೇಪಣೆಗೊಂಡ ನಾಡು-ನುಡಿಗಳ ಬಗೆಗಿನ ಪ್ರೇಮ, ಅದರಿಂದುಂಟಾದ ಭಾಷೆ-ಸಾಹಿತ್ಯದ ಬೆಳವಣಿಗೆ, ಕರ್ನಾಟಕ ಸಂಗೀತದ ಸೊಗಡು, ನಮ್ಮ ನೃತ್ಯ, ಚಿತ್ರಕಲೆ ಮತ್ತು ವಾಸ್ತು ಶಿಲ್ಪಗಳು ಸಾರುವ ಸೊಗಸು, ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಒಗ್ಗೂಡಿಸಲು ಆಲೂರು ವೆಂಕಟರಾಯರ ಏಕೀಕರಣ ಚಳವಳಿ, ಹೀಗೆ ಇನ್ನೂ ಹಲವಾರು ಕುತೂಹಲಕರ-ಆಸಕ್ತಿಯುತ ವಿಷಯಗಳನ್ನು ಪುಸ್ತಕದಲ್ಲಿ ನಮ್ಮ ಕಣ್ಣು ಮುಂದೆ ತೆರೆದಿಟ್ಟು, ಚಿದಾನಂದಮೂರ್ತಿ ಹೃದಯವನ್ನು ತುಂಬಿಸುತ್ತಾರೆ.

ಪುಸ್ತಕದಲ್ಲಿ ಮೂರ್ತಿಯವರು ಕನ್ನಡಿಗರ ಜಾಗೃತಿಯನ್ನು ಬಡಿದೆಬ್ಬಿಸಿದ್ದಾರೆ. ಭಾರತ ಸಂಸ್ಕೃತಿಯೆಂದರೇನೆಂದು ಅಮೂಲ್ಯವಾದ ಮತ್ತು ಮಹತ್ವಪೂರ್ಣವಾದ ಮಾತುಗಳನ್ನು ಅವರು ದಾಖಲಿಸಿದ್ದಾರೆ.

"ಕೆಲವರಿಗೆ ಕರ್ನಾಟಕವನ್ನು ಪ್ರೀತಿಸುವುದು ಸಂಕುಚಿತ ದೃಷ್ಟಿಯೆನಿಸಿದೆ. ಅವರಿಗೆ ಭಾರತ ಮಾತ್ರ ಮುಖ್ಯ: ರಾಷ್ಟ್ರಪ್ರೇಮವೊಂದೆ ದೇಶಪ್ರೇಮ, ಅಂತಹವರಿಗೆ ಕರ್ನಾಟಕ ಪ್ರೇಮ ಎಂಬ ಮಾತು ಅರ್ಥ ಹೀನ. ಕನ್ನಡ ನಾಡು- ನುಡಿಯನ್ನು ಮೆರೆಸುವುದು ಅವರಿಗೆ ರಾಷ್ಟ್ರದ್ರೋಹವಾಗಿ ಕಂಡಿದೆ. ಆದರೆ ವಾಸ್ತವವಾಗಿ ಭಾರತೀಯ ಸಂಸ್ಕೃತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ, ತಮಿಳು, ತೆಲುಗು, ಮಹಾರಾಷ್ಟ್ರ ಇವೇ ಮೊದಲಾದ ಸದೃಶವೂ, ಭಿನ್ನವೂ ಆದ ಸಂಸ್ಕೃತಿಗಳ ಸಮೂಹರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ.ಭಾರತದ ಒಂದೊಂದು ಪ್ರಾಂತಕ್ಕೂ ಇರುವ ವಿಶಿಷ್ಟ ಜೀವನ ವಿಧಾನವನ್ನು ಗುರುತಿಸುವುದು, ಆ ಸಂಸ್ಕೃತಿಯನ್ನು ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆ ಮತ್ತು ಕಾಪಾಡಿದಂತೆ."

ಜಾಗೃತನಾಗಬೇಕಿರುವ ಕನ್ನಡಿಗ : ಅಧುನಿಕ ಕರ್ನಾಟಕದ ಸ್ಥಿತಿಗತಿಗಳನ್ನು ವಿಶ್ಲೇಷಿಸುತ್ತ, ಅದರ ಸಮಸ್ಯೆಗಳನ್ನು ಮೆಲಕು ಹಾಕುತ್ತ, ನಮ್ಮ ನೆಲ-ಜಲ-ಗಡಿ-ಬದುಕುನ್ನು ಹಸನು ಮಾಡಿಕೊಳ್ಳದೆ, ನಮ್ಮ ಭಾಷೆ-ಸಂಸ್ಕೃತಿಯ ಗಟ್ಟಿತನವನ್ನು ಉಳಿಸಿ ಕಾಪಾಡಿಕೊಳ್ಳದೆ ಸ್ವಾಭಿಮಾನವನ್ನು ಕಳೆದುಕೊಂಡು ನಿರಭಿಮಾನಿಯಾಗಿರುವ ಕನ್ನಡಿಗನು ಇಂದು ಜಾಗೃತನಾಗಬೇಕಾಗಿರುವ ವಿಷಯವನ್ನು ಮೂರ್ತಿಯವರು ಈ ಪುಸ್ತಕದಲ್ಲಿ ಪ್ರಸ್ತಾಪಿಸುತ್ತಾರೆ.

ಚಿಕ್ಕ ಹುಲಿಮರಿಯೊಂದು ಕುರುಬನ ಕೈಗೆ ಸಿಕ್ಕು ಅದು ಕುರಿಗಳ ಜತೆ ಹುಲ್ಲು ತಿಂದು ಮ್ಯಾ ಮ್ಯಾ ಎಂದು ಅರಚುತ್ತ ಬೆಳೆಯುತ್ತದೆ. ಒಮ್ಮೆ ದೊಡ್ಡ ಹುಲಿಯೊಂದು ಅಟ್ಟಿಸಿಕೊಂಡು ಬಂದಾಗ ಉಳಿದ ಕುರಿಗಳಂತೆ ಅದೂ ಹೆದರಿ ಓಡುತ್ತದೆ. ಅಚ್ಚರಿಗೊಂಡ ದೊಡ್ಡ ಹುಲಿ, ಮರಿ ಹುಲಿಯನ್ನು ಹಿಡಿದು ಒಂದು ಕೊಳದಲ್ಲಿ ಅದರ ಮುಖವನ್ನು ತೋರಿಸಿ ಅದು ಸಹ ಹುಲಿ ಮರಿಯೇ ಎಂದು ಹೇಳಿ ಅದಕ್ಕೆ ಗರ್ಜಿಸುವುದನ್ನು ಪರಿಚಯಿಸುತ್ತದೆ. ಸ್ವಸ್ವರೂಪ ಜ್ಞಾನವನ್ನು ಪಡೆವ ಹುಲಿ ಮರಿ ಮುಂದೊಂದು ದಿನ ವನರಾಜನಾಗಿ ಮೆರೆಯುತ್ತದೆ ಎಂಬ ಉದಾಹರಣೆಯ ಮೂಲಕ ಹುಲಿತನವನ್ನು ಮರೆತ ಕನ್ನಡಿಗರಿಗೆ, ಈ ನಾಡು ನಿಮಗೆ ಸುಲಭವಾಗಿ ದಕ್ಕಿದ್ದಲ್ಲ, ನಿಮ್ಮ ಹಿರಿಯರ ತ್ಯಾಗ-ಬಲಿದಾನಗಳಿಂದ ಬೆಳೆದ ಈ ನಾಡಿನಲ್ಲಿ ಇಂದು ನೀವು ಇಲಿಗಳಾಗಿದ್ದೀರಿ. ನೀವು ಸಹ ವೀರರು, ನಿಜವಾದ ಹುಲಿಗಳು, ನಿಮ್ಮ ಸ್ವಸ್ವರೂಪವನ್ನು ಅರಿಯಿರಿ ನೈಜ ಹುಲಿ ಕನ್ನಡಿಗರಾಗಿ ಎಂಬ ವಿಚಾರಪೂರ್ವಕವಾದ ಕರೆ ನೀಡಿದ್ದಾರೆ.

ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತ ಓದುಗರೊಬ್ಬರು ಹೇಳುತ್ತಾರೆ : ಆಂಗ್ಲ ಮೋಹದಲ್ಲಿ , ಆತ್ಮ ವಿಸ್ಮೃತಿಯಲ್ಲಿರುವ ನಮ್ಮ ಯುವ ಜನಾಂಗಕ್ಕೆ ಇಂತಹ ಪುಸ್ತಕವೊಂದರ ಅಗತ್ಯ ತುಂಬ ಇತ್ತು. ಅಧ್ಯಾಪಕ ಮಿತ್ರರು ತಮ್ಮ ವಿದ್ಯಾರ್ಥಿಗಳಿಗೆ ಈ ಪುಸ್ತಕವನ್ನು ಓದಲು ಸೂಚಿಸಬೇಕು.

ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು -56002 ವತಿಯಿಂದ ಪ್ರಕಟವಾದ ಮತ್ತು ಇಲ್ಲಿ ದೊರಕುವ ಈ ಪುಸ್ತಕವನ್ನು ಕೊಂಡು ಓದಿ, ಸಮಸ್ತ ಕನ್ನಡಿಗರಿಗೂ ಪರಿಚಯಿಸಿ. ಹೊಸ ಕನ್ನಡ ನಾಡಿನ ಅಭ್ಯುದಯಕ್ಕಾಗಿ ಕಂಕಣಬದ್ಧರಾಗಿ!

(ಸ್ನೇಹಸೇತು :ಏನ್ ಗುರು ?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X