ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆಯಿಂದ ಹೆಚ್ಚೋದು ಬಾಂಧವ್ಯ ಅಲ್ಲ,ಅಸಮಾನತೆ

By Staff
|
Google Oneindia Kannada News


ಇವ್ರೊಬ್ರು ಬಾಕಿಯಾಗಿದ್ರು ಹಿಂದಿ ಹೇರಿಕೆಗೆ ಹಾಡಹಗಲಲ್ಲೇ ಪ್ರೋತ್ಸಾಹ ಕೊಡಕ್ಕೆ! ಕರ್ನಾಟಕದಲ್ಲಿ ಹಿಂದಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು, ರಾಜ್ಯ ಸರ್ಕಾರ ಅದಕ್ಕೆ ದುಡ್ಡು ಕೊಡುತ್ತೆ ಅಂತ ರಾಜ್ಯಪಾಲ ಶ್ರೀ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹೇಳಿರೋದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಹಿಂದಿಗೆ ಕೊಂಬಿದೆ ಅನ್ನೋದಾದರೆ ಕನ್ನಡಕ್ಕೆ ಚಿನ್ನದ ಕೊಂಬಿದೆ!

ಭಾರತದಲ್ಲಿ ಹಿಂದಿ ಭಾಷೆಯೊಂದರ ಪ್ರಸಾರಕ್ಕಾಗಿ ಮಾತ್ರ ಅಕಾಡಮಿ ಯಾಕೆ ಪ್ರಾರಂಭಿಸಬೇಕು? ಕನ್ನಡ, ತೆಲುಗು, ತಮಿಳು, ಮಲಯಾಳಂ ಅಕಾಡಮಿಗಳನ್ನು ಮದ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ, ಬಂಗಾಲ, ಅಸ್ಸಾಮದಲ್ಲಿ ಏಕೆ ತೆರೆಯಕೂಡದು? ಕೇವಲ ಹಿಂದಿಗೆ ಮಾತ್ರ ಪ್ರಾಧಾನ್ಯ ನೀಡೋದು ಎಷ್ಟು ಸಮಂಜಸ? ಹಿಂದಿಯೇತರ ರಾಜ್ಯಗಳು ಹಿಂದಿ ಪ್ರಸಾರ ಮಾಡಕ್ಕೆ ಅಕಾಡಮಿ ಸ್ಥಾಪಿಸಲು ಯಾಕೆ ಒಪ್ಪಿಕೋಬೇಕು? ಹಿಂದಿಯೇತರ ರಾಜ್ಯ ಸರ್ಕಾರಗಳ ಬೊಕ್ಕಸದಿಂದ ಹಣ-ಜಾಗ-ಸಮಯವನ್ನು ಯಾಕೆ ನೀಡಬೇಕು? ಹಿಂದಿ ಭಾಷಿಕರಿಗರಿಗೆ ಇಲ್ಲದ ತ್ರಿಭಾಷಾ ಸೂತ್ರ ಇತರರಿಗೆ ಮಾತ್ರ ಯಾಕೆ? ಹಿಂದೀಗೇನು ಕೊಂಬಿದೆಯಾ? ಭಾಷೆಯ ಇತಿಹಾಸ-ಸೊಗಡು-ಹರವು-ಸಾಹಿತ್ಯ-ಸಾಮರ್ಥ್ಯಗಳೇ ಕೊಂಬು ಅನ್ನೋದಾದ್ರೆ ಕನ್ನಡಕ್ಕಿರೋದು ಬೆಲೆಬಾಳೋ ಚಿನ್ನದ ಕೊಂಬು, ಹಿಂದೀಗಿರೋದು ಮೂರುಕಾಸಿನ ತಗಡಿನ ಕೊಂಬು! ಹೀಗಿರುವಾಗ ಹಿಂದಿ ಹೇರಿಕೆ ಒಪ್ಪಿಕೊಳ್ಳಕ್ಕೆ ಕನ್ನಡಿಗ ಏನು ಕಿವಿಮೇಲೆ ಹೂ ಮಡೀಕೊಂಡಿಲ್ಲ ಗುರು!

ಹಿಂದಿ ಗೊತ್ತಿದ್ದರೇ ದೇಶಪ್ರೇಮ ಅನ್ನೋದು ಸುಳ್ಳು

ಠಾಕೂರ್ ಅವರು "ಇಡೀ ಭಾರತದಲ್ಲಿ ಹಿಂದಿಯನ್ನು ಬಳಸಿದರೆ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಸಾಧ್ಯ" ಅನ್ಕೊಂಡಿರೋದು ಆಧಾರವಿಲ್ಲದ ಬೊಗಳೆ. ಬಾಯಲ್ಲಿ "ವಿವಿಧತೆಯಲ್ಲಿ ಏಕತೆ" ಅಂತ ಹೇಳಿಕೊಂಡು ಕೈಯಲ್ಲಿ ಹಿಂದಿ-ಹೇರಿಕೆ ಮಾಡೋರು ಹೇಳಿಕೊಟ್ಟಿದ್ದನ್ನೇ ಉರು ಹೊಡೆದು ಹೇಳಿದಹಾಗಿದೆ ಇವರ ಮಾತು! ಯಾವನಿಗೆ ಬೇಕಾಗಿದೆ ಹೊಸದೊಂದು ಉಪಯೋಗವಿಲ್ಲದ ಭಾಷೆಯ ಕಲಿಕೆ? ಕನ್ನಡಕ್ಕೆ ಒಂದು ಚೂರೂ ಸಂಬಂಧವಿಲ್ಲದ ಹೊಸದೊಂದು ಭಾಷೆ ಕಲಿಯಬೇಕು, ಕಲಿತರೆ ಮಾತ್ರ ನಿಜವಾದ ದೇಶಪ್ರೇಮಿಯಾಗುವುದು ಅಂತೇನಾದರೂ ಹೇಳಿದರೆ "ಹೋಗ್ರೀ ಸ್ವಾಮಿ! ನಿಮ್ಮ ದೇಶಪ್ರೇಮ ನೀವೇ ಇಟ್ಟುಕೊಂಡು ಉಪ್ಪಿನಕಾಯಿ ಹಾಕ್ಕೊಳಿ! ನನ್ನ ಜೀವನ ನಡೆದುಕೊಂಡು ಹೋದರೆ ಸಾಕಾಗಿದೆ" ಎಂದಾನು!

ಹಿಂದಿ ಹೇರಿಕೆ ಅಸಮಾನತೆಯನ್ನು ಮೆತ್ತಗೆ ಒಪ್ಪಿಕೊಳ್ಳೋಹಾಗೆ ಮಾಡುವ ಕೆಲಸ

ಭಾರತ ಬಹುಭಾಷಾ ರಾಜ್ಯಗಳ ಒಕ್ಕೂಟ. ಹೆಚ್ಚು-ಕಡಿಮೆ ಭಾರತದ ಎಲ್ಲಾ ಭಾಷೆಗಳೂ ಹಿಂದಿಗಿಂತ ವೈಭವಯುತವಾದ, ಶಕ್ತಿ ಸಂಪನ್ನವಾದ, ಧಾರಣಶಕ್ತಿಯುಳ್ಳ, ಸರ್ವ ಸಾಮರ್ಥ್ಯವನ್ನು ಹೊಂದಿರುವ ಇತಿಹಾಸವುಳ್ಳವುಗಳಾಗಿವೆ, ವರ್ತಮಾನಗಳನ್ನುಳವುಗಳಾಗಿವೆ, ಭವಿಷ್ಯಗಳನ್ನುಳ್ಳವುಗಳಾಗಬೇಕಿವೆ. ಕನ್ನಡನಾಡಿನಲ್ಲಿ ಹಿಂದಿಯ ಅವಶ್ಯಕತೆ ಯಾವನಿಗೂ ಇಲ್ಲ ಅನ್ನೋ ಸಾಮಾನ್ಯಜ್ಞಾನವಾದರೂ ನಮ್ಮನ್ನ ಆಳೋರಿಗೆ ಬೇಡವಾ ಗುರು? ಕಣ್ಣು ಬಿಟ್ಟು ನೋಡಿದರೆ ಇದು ಕಾಣಿಸದೆ ಇಲ್ಲ. ಕಣ್ಣು ಬಿಡದೆ ಹಿಂದಿ ಹೇರಿಕೆ ಮೂಲಕ ಅಸಮಾನತೆಯೇ ಸರಿ ಅನ್ನೋದನ್ನ ನಮಗೆ ಒಪ್ಪಿಸೋದಕ್ಕೆ ಹೊರಟಿರೋದು ಸರಿಯಲ್ಲ ಗುರು! ಇದರಿಂದ ಹಿಂದಿ ತಾಯ್ನುಡಿಯೋರು ಯಾವತ್ತೂ ಹಿಂದಿಯೇತರ ತಾಯ್ನುಡಿಯೋರಿಗಿಂತ ಹೆಚ್ಚು ಸೌಲತ್ತುಗಳ್ನ ಪಡ್ಕೋತಾರೆ, ಹೆಚ್ಚು ಹೆಚ್ಚು ಸಂಬಳ ಪಡ್ಕೋತಾರೆ, ಹೆಚ್ಚು ಹೆಚ್ಚು ಹುದ್ದೆಗಳಿಗೆ ತುಂಬ್ಕೋತಾರೆ...ನಿಧಾನಕ್ಕೆ ಹೆಚ್ಚು ಹೆಚ್ಚು ಮಕ್ಕಳ್ನ ಹೆರ್ತಾರೆ...

ವಿವಿಧತೆ ಅಳಿಸಿಹಾಕಕ್ಕೆ ಹೋದರೆ ಏಕತೇನೂ ಹೋದೀತು!

ತಮಿಳುನಾಡು, ದೇಶದ ಆಗ್ನೇಯ ರಾಜ್ಯಗಳ ಬಹುತೇಕ ಭಾಗಗಳು, ಕೇರಳ, ಆಂಧ್ರ, ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಬಂಗಾಳದ ಒಳಪ್ರದೇಶಗಳಲ್ಲಿ ನಾವು ವ್ಯವಹರಿಸಬೇಕೆಂದರೆ ಅಲ್ಲಿಯ ಭಾಷೆಗಳಲ್ಲಿ ವ್ಯವಹರಿಸೋದೇ ಸರಿ ಅಂತ ಮನಗಾಣಬೇಕಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ಬಂಗಾಳ, ಅಸ್ಸಾಮ ಹೀಗೆ ಪ್ರಾಂತೀಯ ವೈಶಿಷ್ಟ್ಯವನ್ನುಳಿಸ್ಕೊಂಡ ಒಟ್ಟು ಶಕ್ತಿಯೇ ಭಾರತದ ಭಾವೈಕ್ಯತೆಗೆ ಕಾರಣ. ಈ ಎಲ್ಲವನ್ನು ಮನ್ನಿಸಿ, ಉಳಿಸಿ, ಬೆಳಸಿಕೊಂಡು ಮುನ್ನಡೆಯುವುದೇ ಭಾರತದಂತಹ ಹಲವು ಪ್ರಾಂತ್ಯಗಳ-ಹಲವು ಸಂಸ್ಕೃತಿಗಳ, ಹಲವು ರಾಜ್ಯಗಳ ಒಕ್ಕೂಟದ ಒಗ್ಗಟ್ಟಿಗೆ ಕ್ಷೇಮ. ವಿವಿಧತೆ ಅಳಿಸಿಹಾಕೋ ಪ್ರಯತ್ನಗಳೆಲ್ಲ ಏಕತೆ ಅಳಿಸಿಹಾಕೋ ಪ್ರಯತ್ನಗಳೇ. ಹಿಂದಿ ಹೇರಿಕೆ ಮೂಲಕ ಕೃತಕವಾಗಿ ಏಕತೆ ತರಕ್ಕೆ ಹೊರಡೋ ಮೂರ್ಖತನ ಕೈಬಿಡೋದೇ ನಮ್ಮ ಒಕ್ಕೂಟ ವ್ಯವಸ್ಥೆಯ ಆರೋಗ್ಯಕ್ಕೆ ಒಳ್ಳೇದು ಗುರು!

(ಸ್ನೇಹ ಸೇತು: ಏನ್ಗುರು?)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X