• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ನೂ ಓದದ ಪುಸ್ತಕದ ಹರುಷ ಮತ್ತೊಂದು ಹೊಸ ವರುಷ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಹೊಸವರ್ಷ ಒಂದು ಹೊಸ್ತಿಲು ದಾಟಿದೆ. ತಲೆದಿಂಬಿನ ಪಕ್ಕದಲ್ಲಿರುವ ಇನ್ನೂ ಓದದ ಪುಸ್ತಕದಂತೆ ಇದರ ಅಂತರಂಗವಿನ್ನೂ ನಿಗೂಢ. ಪುಸ್ತಕಕ್ಕೊಂದು ಹೆಸರಿರುವಂತೆ ವರ್ಷಕ್ಕೊಂದು ಅಂಕಿ. 2001, 2002, 2003, 2004, 2005..... ಅಂಕಿಗಳಿಗೆ ಅಂತ್ಯವಿಲ್ಲ. ಹಾಗೆಯೇ ವರ್ಷಗಳಿಗೂ. ಎಣಿಸುವ ನಾವು ಮಾತ್ರ ತತ್ಕಾಲದವರು. ನಮ್ಮದೇ ಬುದ್ಧಿ, ಕಲ್ಪನೆ, ವಿಜ್ಞಾನಗಳ ಚಾಪೆಯಲ್ಲಿ ಕಾಲವನ್ನು ಸುತ್ತಿಡುವವರು ನಾವು. ವಿಶ್ವೇಶ್ವರಯ್ಯನವರಂತೆ ಎ. ಎನ್‌. ಮೂರ್ತಿರಾಯರಂತೆ ನೂರು ಹೊಡೆದವರು ಅದೃಷ್ಟವಂತರು, ಎಪ್ಪತ್ತು, ಎಂಭತ್ತು ಬಾರಿಸಿದವರು ತುಂಬುಜೀವಿಗಳು, ಐವತ್ತಕ್ಕೇ ತಲೆಇಟ್ಟವರು ನತದೃಷ್ಟರು.

ಗಣನೆಯನ್ನು ಕಲಿತದ್ದು ನಮ್ಮ ಕುಲದ ಅತಿದೊಡ್ಡ ಸಾಹಸ. ಆದರೆ ಯಂತ್ರಗಳಿಗೆ ಗಣನೆಯನ್ನು ಕಲಿಸಿದ್ದು ಅದಕ್ಕೂ ಮೀರಿದ ಸಾಹಸ. ಇವತ್ತು ಯಂತ್ರಗಳು ನಮಗಿಂತಾ ಕೋಟಿ ಕೋಟಿ ಪಟ್ಟು ವೇಗದಲ್ಲಿ ಕೂಡಬಲ್ಲವು, ಗುಣಿಸಬಲ್ಲವು. ಒಂದೇ ಉಸುರಿನಲ್ಲಿ ಹೇಳಲಾಗದಷ್ಟು ದೊಡ್ಡ ಸಂಖ್ಯೆಗಳನ್ನು ಅಗಸರ ಚಾಡಿಯಲ್ಲಿ ಬಟ್ಟೆ ಹರವಿದಂತೆ ಉದ್ದಕ್ಕೂ ಹಾಸಿಕೊಂಡು ಮಿಲ್ಲಿಸೆಕಂಡ್‌ಗಳಲ್ಲಿ ಅವುಗಳ ಸ್ಕ್ವೈರ್‌ರೂಟ್‌ಗಳನ್ನು ತೆಗೆಯಬಲ್ಲವು. ಮನುಷ್ಯ ತಾನು ಮಾಡಬಲ್ಲ ಪ್ರತಿಯಾಂದು ಕೆಲಸವನ್ನೂ ಯಂತ್ರಭಾಷೆಗೆ ಅನುವಾದಿಸಿ ತನ್ನ ‘ಬದಲೀ ಸೃಷ್ಟಿ’ಯನ್ನು ರೂಪಿಸಿಕೊಳ್ಳುವುದರಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಲು ನೋಡುತ್ತಿದ್ದಾನೆ. ಇವತ್ತು ಸಾಫ್ಟ್‌ವೇರ್‌ ಇಂಜಿನಿಯರ್‌ಗಳ ಉದ್ಯೋಗ ವಿಶೇಷವಾಗುವುದು ಈ ಕಾರಣಕ್ಕೇನೇ.

Calculation of Time and New Yearನಮ್ಮ ನಿಮ್ಮಂತೆಯೇ ಕಂಪ್ಯೂಟರ್‌ಗಳೂ ಕೂಡ ಕಾಲಗಣನೆಯನ್ನು ಮಾಡುತ್ತವೆ. ನಮ್ಮಿಂದ ಕಲಿತದ್ದನ್ನು ಅತಿವಿನಯದಿಂದ ಅಚ್ಚುಕಟ್ಟಾಗಿ ಪಾಲಿಸುತ್ತಾ ಸಾವಿರಾರು ವರ್ಷಗಳ ಕ್ಯಾಲೆಂಡರ್‌ನ್ನು ನಿಮ್ಮ ಮುಂದಿಡಬಲ್ಲವು. ‘ಹೋದ ವರ್ಷ ಏನಾಯಿತು ಎಂದರೆ.....’ ಎಂದು ನಾವು ಮಾತನಾಡಿಕೊಳ್ಳುವಂತೆ ‘ಕ್ರಿ. ಶ. 950 ರಲ್ಲಿ ಕ್ರಿಸ್‌ಮಸ್‌ ಯಾವ ದಿನ ಬಂದಿತ್ತು ಎಂದರೆ..’ ಎಂದು ಹೇಳಬಲ್ಲವು. ನಿಮ್ಮ ಕಂಪ್ಯೂಟರಿನಲ್ಲಿ 1752 ನೇ ವರ್ಷ ಸೆಪ್ಟೆಂಬರ್‌ ತಿಂಗಳ ಕ್ಯಾಲೆಂಡರ್‌ ತೆರೆಯಿರಿ. ಅಲ್ಲಿ ಹತ್ತು ದಿನಗಳು ಮಿಸ್ಸಿಂಗ್‌ ಆಗಿವೆ! ಸೆಪ್ಟೆಂಬರ್‌ ಎರಡನೇ ತಾರೀಖು ಆದ ನಂತರ ಸೆಪ್ಟೆಂಬರ್‌ ಹದಿನಾಲ್ಕು ಬರುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಚಾಲನೆಯಲ್ಲಿದ್ದ ಗ್ರಗೋರಿಯನ್‌ ಕ್ಯಾಲೆಂಡರ್‌ನಲ್ಲಿ ಹುದುಗಿಹೋದ ಒಂದು ದೋಷವನ್ನು ಸರಿಪಡಿಸಲು ಕ್ಯಾಲೆಂಡರ್‌ನಿಂದ ಹತ್ತು ದಿನಗಳನ್ನು ಕಿತ್ತುಹಾಕಲಾಯಿತಂತೆ. ಸೆಪ್ಟೆಂಬರ್‌ ಎರಡರಂದು ಮಲಗಿದ ಜನರು ಎದ್ದದ್ದು ಸೆಪ್ಟೆಂಬರ್‌ ಹದಿನಾಲ್ಕರ ಬೆಳಗ್ಗೆ! ಆ ರೀತಿ ‘ಕಳೆದುಹೋದ’ ಹತ್ತು ದಿನಗಳಲ್ಲಿ ಮದುವೆಯನ್ನಿಟ್ಟುಕೊಂಡವರು ಜೀವನ ಪೂರ್ತಿ ಮದುವೆಯಾಗದೇ ಕಳೆದರೆ? ನನಗೆ ಗೊತ್ತಿಲ್ಲ. 1752 ರಲ್ಲಿ ನಾನು ಇರಲಿಲ್ಲ.

1752 ರ ನಿಗೂಢತೆಯನ್ನು ಯಾಕೆ ಹೇಳಿದೆ ಎಂದರೆ ಕಾಲಗಣನೆಯನ್ನು ನಾವು ಎಷ್ಟೇ ರೀತಿಯಲ್ಲಿ ‘ವೈಜ್ಞಾನಿಕ’ವೆಂದು ಸಾರಿಕೊಂಡರೂ ಅದರಲ್ಲಿ ಸೇರಿಹೋಗಿರಬಹುದಾದ ಅನೇಕ ಅಂಶಗಳು ಶುದ್ಧವಾಗಿ ನಮ್ಮ ಕಲ್ಪನೆಯಿಂದಲೇ ಮೂಡಿರುತ್ತವೆ. ನಮ್ಮ ಕಾಲಗಣನೆ ಎಂದರೆ ಭೂಮಿಯ ಚಲನೆ ಎನ್ನುವ ಶುದ್ಧ ತರ್ಕದಲ್ಲಿಯೂ ಕೂಡ ಸೆಕಂಡ್‌ಗಳು ಒಂದಕ್ಕೊಂದು ಕಾಲಮಿತಿಯಲ್ಲಿ ಸಮವಾಗಿರುವುದಿಲ್ಲವಂತೆ. (Cesium-133 atom). ಬಿಡಿಸಿ ಹೇಳಬೇಕೆಂದರೆ ಕೆಲವು ಸೆಕಂಡ್‌ಗಳು ಪುಟ್ಟವು, ಕೆಲವು ದೊಡ್ಡವು). ಹಾಗಾಗಿ, ಸೆಕಂಡ್‌ಗಳ ಅಸಮತೋಲನವನ್ನು ಸರಿಪಡಿಸಲು ಸೆಜಿಯಮ್‌ (ಅಣುವಿನ ಆವರ್ತನೆಯನ್ನು ಮಾಪನವಾಗಿ ತೆಗೆದುಕೊಂಡು ಸೆಜಿಯಮ್‌ ಅಣು 9,192,631,770 ಸಲ ಆವರ್ತಿಸಲು ತೆಗೆದುಕೊಳ್ಳುವ ಸಮಯವನ್ನು ‘ಒಂದು ಸೆಕಂಡ್‌’ ಎಂದು ಕರೆಯಲಾಯಿತು!

ಅಂದರೆ, ಭೂಮಿಯ, ಸೂರ್ಯನ ಚಲನೆಗೆ ಅನುಗುಣವಾಗಿ ಕಾಲವನ್ನು ಮಾತನಾಡುವ ನಾವು (ಉದಾಹರಣೆಗೆ- ಚಳಿಗಾಲ, ಬೇಸಿಗೆ ಕಾಲ) ಅದನ್ನು ಅಳೆಯುವಲ್ಲಿ ಖಗೋಳಶಾಸ್ತ್ರದಿಂದ ಹೊರತಾಗಿ ಅಣುವೊಂದು ಒಂಭತ್ತು ಶತಕೋಟಿ ಬಾರಿ ತಲೆ ಅಲ್ಲಾಡಿಸುವ ಗಣನೆಯ ಮೇಲೆ ವಾಲಿಕೊಳ್ಳುತ್ತೇವೆ. ಈ ರೀತಿ ‘ಅಣುವಿನ ಸೆಕಂಡ್‌’ಗೂ ‘ಭೂಮಿಯ ಸೆಕಂಡ್‌’ಗೂ ಬರುವ ವ್ಯತ್ಯಾಸದಿಂದ ಮುಂದೆ ದೂರದ ಭವಿಷ್ಯದಲ್ಲಿ ಡಿಸೆಂಬರ್‌ನಲ್ಲಿ ದಟ್ಟ ಬೇಸಿಗೆ ಮತ್ತು ಮೇ ತಿಂಗಳಲ್ಲಿ ಕಡು ಚಳಿಗಾಲ ಬರುತ್ತದೆಯೇ? ಆಗ ಮತ್ತೆ ನಾವು ನಮ್ಮ ಪಂಚಾಂಗವನ್ನು ಸರಿಪಡಿಸಿಕೊಳ್ಳಲು ಒಂದಷ್ಟು ದಿನಗಳನ್ನೋ ತಿಂಗಳುಗಳನ್ನೋ ಮಾಯ ಮಾಡಬೇಕೋ? ಗೊತ್ತಿಲ್ಲ.

ಹೆದರಬೇಡಿ. ಸ್ಟೀವನ್‌ ಹಾಕಿಂಗ್‌ನಂತೆ ಸ್ಪೇಸ್‌ ಟೈಮ್‌ ಅನಾಲಿಸಿಸ್‌ ಮಾಡುತ್ತಿಲ್ಲ ನಾನು. ಕಾಲಗಣನೆಯ ವಿಚಾರವಾಗಿ ಈ ವಿಷಯಗಳನ್ನು ಹೇಳಿದೆನಷ್ಟೇ. ಸ್ಟೀವನ್‌ ಹಾಕಿಂಗ್‌ನ ಮಾತುಗಳಲ್ಲಿ ಹೇಳುವುದಾದರೆ ನಾವು ದೂರ, ತೂಕ ಮುಂತಾದವುಗಳಿಗಿಂತ ಕಾಲವನ್ನೇ ಬಹಳ ವೈಜ್ಞಾನಿಕವಾಗಿ ಅಳೆಯುತ್ತೇವೆ. ಯಾವುದೋ ರಾಜನ ಕಾಲಿನ ಅಳತೆಯನ್ನು ತೆಗೆದುಕೊಂಡು ಅದನ್ನು ‘ಅಡಿ’ ಎಂದು ಕರೆಯುವುದಕ್ಕಿಂತಾ ಕಾಲದ ಅಳತೆ ಬಹಳ ಮಟ್ಟಿಗೆ ಲಾಜಿಕಲ್‌ ಆಗಿದೆ. ಮೇಲಾಗಿ, ಉದ್ದಳತೆಗೆ ನಾವು ಬಳಸುವ ಮಾಪನಗಳು ನಾವು ಕಾಲವನ್ನು ಅಳೆಯುವಷ್ಟು ನಿಖರವಾಗಿ ಅಳೆಯುವುದಿಲ್ಲ. ಹಾಗಾಗಿ ಕಾಲವನ್ನು ಉಪಯೋಗಿಸಿ ದೂರವನ್ನು ಹೇಳುವುದು ವಿಜ್ಞಾನಿಗಳಿಗೆ ಬಹಳ ಪ್ರಿಯವಾದದ್ದು. ಜ್ಯೋತಿವರ್ಷ (Light Year) ಬಂದದ್ದೇ ಹಾಗೆ. ಒಂದು ಮೀಟರ್‌ ಎಂದೊಡನೆ ನಮಗೆ ದರ್ಜಿಯ ಟೇಪ್‌ ನೆನಪಿಗೆ ಬಂದರೆ ಭೌತವಿಜ್ಞಾನಿಗಳಿಗೆ ಬೆಳಕು 0.000000003335640952 ಸೆಕಂಡಿನಲ್ಲಿ ಕ್ರಮಿಸುವ ದೂರವನ್ನು ಕಲ್ಪನೆಗೆ ತರುತ್ತದೆ! ಹೀಗೆ ನಿಲ್ಲದ ಕಾಲವನ್ನು ಅಳೆಯಲು ನೋಡುತ್ತೇವೆ. ಡಿಜಿಟಲ್‌ ಅಂಕೆಗಳಲ್ಲಾದರೂ ಸರಿ, ಡಣ್‌ ಡಣ್‌ ಎಂದು ಗಂಟೆಗೊಮ್ಮೆ ಬಾರಿಸುವ ಅಜ್ಜನ ಕಾಲದ ಗಡಿಯಾರದಲ್ಲಾದರೂ ಸರಿ, ಮರಳು ತುಂಬಿಟ್ಟು ಅದು ಜಾರಿದಾಗ ನಿಮಿಷವೆನ್ನುವ hourglass ಆದರೂ ಸರಿ, ಜಂತರ್‌ ಮಂತರ್‌ನಲ್ಲಾದರೂ ಸರಿ, ಸ್ಟೋನ್‌ಹೆಂಜ್‌ನಲ್ಲಾದರೂ ಸರಿ, ನಮಗೆ ತೋಚಿದಂತೆ ಕಾಲಕ್ಕೆ ಮೀಟರ್‌ನ್ನು ಹಿಡಿದು ‘ಇದು ನಮ್ಮ ಕಾಲ’ ಅದು ‘ಪುರಾತನ ಕಾಲ’ ಎನ್ನುತ್ತೇವೆ. ಕೋಟಿ ಕೋಟಿ ವರ್ಷಗಳ ಈ ಮಣ್ಣಿನ ಮೇಲೆ ನಿಂತು ಬರೀ ಇನ್ನೂರು ವರ್ಷಗಳ ಹಿಂದಿನ ಮೊಸರಿನ ಮಡಕೆ antique ಎಂದು ಪಟ್ಟ ಹೊತ್ತು ನಮ್ಮ ಕಣ್ಣನ್ನು ಸೆಳೆಯುತ್ತದೆ. ಟಿಪ್ಪು ಸುಲ್ತಾನನನ್ನೇ ಜೀವಂತ ನೋಡಿದ ಇನ್ನೂ ಬದುಕಿರುವ ಅರಳಿಮರಕ್ಕಿಂತಾ ಟಿಪ್ಪುವಿನ ಖಡ್ಗ ಅತಿ ಬೆಲೆಬಾಳುವ ವಸ್ತುವಾಗುತ್ತದೆ. ಕೋಟ್ಯಾಂತರ ರುಪಾಯಿಗಳಿಗೆ ಹರಾಜಾಗುತ್ತದೆ. ಯಾವುದು ಹಳೆಯದು ಯಾವುದು ಹೊಸದು ಎನ್ನುವುದು ಗೊಂದಲಮಯವಾಗುತ್ತದೆ. ಹಳೆಯದು ಎನ್ನುವ ಅತಿ ಪುರಾತನ ನಾಗರೀಕತೆ ಕೂಡ ನಾಲ್ಕೈದು ಸಾವಿರ ವರ್ಷಗಳನ್ನು ದಾಟುವುದಿಲ್ಲ.

ಕಾಲದ ಮಹಿಮೆಯೇ ಹಾಗೆ. ಇನ್ನೂ ಓದದ ಪುಸ್ತಕದ ಬರದಲ್ಲಿ ಓದಿದ ಪುಸ್ತಕಗಳು ಗುಂಪುಗುಂಪಾಗಿ ಅಟ್ಟದ ಮೂಲೆಯನ್ನು ಸೇರುತ್ತವೆ. ಹೊಸವರ್ಷ ಹಳೆಯವರ್ಷಗಳನ್ನು ಮತ್ತೂ ಹಳೆಯದಾಗಿಸುತ್ತದೆ. ರೇಡಿಯೋಗಳೇ ಹಳೆಯದಾಗಿ ಪಳಿಯುಳಿಕೆಗಳ ಪಟ್ಟಿ ಸೇರುವ ತರಾತುರಿಯಲ್ಲಿರುವಾಗ ತಾನು ಮೊದಲ ಬಾರಿಗೆ ರೇಡಿಯೋ ಕೇಳಿದ ಸಡಗರವನ್ನು ಹಾಗೂ ಅದಕ್ಕಾಗಿ ಐದು ಮೈಲಿ ನಡೆದು ಪಕ್ಕದ ಹಳ್ಳಿಗೆ ಹೋದದ್ದನ್ನು ನನ್ನ ಅಜ್ಜಿ ಬಹಳ ಸಂಭ್ರಮದಿಂದ ವಿವರಿಸುತ್ತಿದ್ದಳು. ಕೇವಲ ಇಪ್ಪತ್ತೈದು ವರ್ಷಗಳ ಹಿಂದೆಯಷ್ಟೇ ಕರೆಂಟಿನ ಹೇಳಹೆಸರಿಲ್ಲದಿದ್ದ, ಬುಡ್ಡಿಯ ಬೆಳಕಲ್ಲಿ ಸಕಲವನ್ನೂ ಮುಗಿಸಿ ಸಂಜೆ ಏಳುಗಂಟೆಗೆಲ್ಲ ಎಲ್ಲಾ ದೀಪಗಳನ್ನು ಆರಿಸಿ ಮಿಣಿಮಿಣಿ ಬೆಳಗುವ ಒಂದು ಸಣ್ಣ ಹಣತೆಯಾಂದಿಗೆ ನಿದ್ರಾಲೋಕವನ್ನು ಸೇರುತ್ತಿದ್ದ ನನ್ನ ಅಜ್ಜಿಯ ಊರಿನಲ್ಲಿ ಇಂದು ರಾತ್ರಿ ಹನ್ನೊಂದರವರೆಗೆ ಮುದುಕರು ಮಕ್ಕಳೆಲ್ಲಾ ಸೇರಿ ಟಿವಿ ನೋಡುತ್ತಾರೆ. ‘ನಮ್ಮ ಈಗಿನ ಹುಡುಗರಿಗೆ ಆ ಬುಡ್ಡಿಯ ಬೆಳಕಿನ ದಿನಗಳು ನೆನಪಿನಲ್ಲೂ ಉಳಿದಿಲ್ಲ’ ಎಂದು ನನ್ನ ಸೋದರಮಾವ ನಕ್ಕಿದ್ದ.

ನಮ್ಮನ್ನಷ್ಟೆ ಮರೆತಿದೆ; ‘ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ’ ಎಂದು ಹೂ ಬಳ್ಳಿ ಮರಗಳ ನವನವೀನತೆಯನ್ನು ನೋಡಿ ವರಕವಿ ಬೇಂದ್ರೆಯವರು ಸನತಕುಮಾರನನ್ನು ಪ್ರಶ್ನಿಸಿದರೂ ಅವರಿಗೂ ಗೊತ್ತಿತ್ತು ನವನವೀನತೆ ನಮಗೂ ಇದೆ ಎಂದು. ಇಲ್ಲದಿದ್ದರೆ ಹೇಳಿ, ಮಿಂಚಿನಂತೆ ಬಂದೆರಗುವ ಆಪ್ತೇಷ್ಟರ ಸಾವುನೋವುಗಳನ್ನು ಅರಗಿಸಿಕೊಳ್ಳಲು ಸಾಧ್ಯವಿತ್ತೇ?

ವರ್ಷಗಳನ್ನು ಹೇಗೆಯೇ ಎಣಿಸಿ ‘ಹೊಸವರ್ಷ’ ಎಂದೊಡನೆಯೇ ಹೊಸಬಟ್ಟೆಯ ಪೊಟ್ಟಣವನ್ನು ಬಿಚ್ಚುವಂತೆ ಉಲ್ಲಾಸವನ್ನು ತರುತ್ತದೆ. ಹೆಜ್ಜೆ ಊರಿಸಿಕೊಳ್ಳದ ಹಿಮದ ರಾಶಿಯಂತೆ ಕಣ್ಣುಕೋರೈಸುತ್ತದೆ. ಚಂದ್ರನ ಬೆಳಕಲ್ಲಿ ಹಾಲುಚೆಲ್ಲುವ ಅಮೃತಶಿಲೆಯ ತಾಜ್‌ಮಹಲ್‌ನಂತೆ ತಂಪಾಗಿರುತ್ತದೆ.

ಹೊಸವರ್ಷ ಯಾವುದಿರಲಿ-ಕ್ರಿಸ್ತನ ಲೆಕ್ಕಾಚಾರದ ಜನವರಿ ಒಂದಿರಲಿ, ಹಿಂದುಗಳ ಯುಗಾದಿ ಇರಲಿ, ಯಹೂದಿಗಳ ರೋಷ್‌ ಹಶನ್ಹವಾಗಿರಲಿ, ಚೀನಿಯರ ಮಂಗ ಹಾವು ಡ್ರಾಗನ್‌ಗಳ ಚಿತ್ರಗಳ ನವವರ್ಷದ ಕ್ಯಾಲೆಂಡರ್‌ ಒಂದು ತೂಗುಹಾಕಿಕೊಳ್ಳಲಿ, ಯಾರಾದರೂ ‘ಹೊಸವರ್ಷದ ಶುಭಾಶಯಗಳು’ ಎಂದಾಗ ಆ ಕ್ಷಣದಲ್ಲಿ ಅಂತಃಕರಣದಿಂದ ಹೂವಿನಂತೆ ಮೃದುವಾಗಿ ಬಂದ ಮಾನವೀಯತೆ ಜೀವದ ಸಕಲ ಸಂಕೀರ್ಣತೆಗಳನ್ನು ಮರೆಸಿ ಮೆರೆಯುತ್ತದೆ ಎನ್ನುವಲ್ಲಿ ಯಾವ ಸಂದೇಹವೂ ಇಲ್ಲ , ಅಲ್ಲವೇ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more