• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಳೇದೇವತೆಯರು ಕರಗಿಹೋದ ಕತೆ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

ಅದೊಂದು ಹಾಡು. ನಿಖರವಾಗಿ ಹೇಳಬೇಕೆಂದರೆ ಒಂದು ಜನಪದ.

ಜಾನಪದ ಗೀತೆ ಎಂದೊಡನೆ ಜೀವವಿಲ್ಲದ ಪದಗಳ ಹಾಡಿಗೆ ರಕ್ತ ಸಂಚಲನೆಯಾಗುತ್ತದೆ. ಮಾಂಸ ಮಜ್ಜೆಗಳು ತುಂಬಿಕೊಳ್ಳುತ್ತವೆ, ಸ್ನಾಯುಗಳು ಸೆಳೆದು ಜೀವಚ್ಚಲನೆಯನ್ನು ನೀಡುತ್ತವೆ, ಶ್ವಾಸಗಳು ಸಂಕುಚಿಸಿ ತಣ್ಣನೆಯ ಗಾಳಿಗೆ ಜೀವಶ್ಚೇತನದ ಬಿಸಿಯನ್ನು ತಾಗಿಸುತ್ತವೆ. ಜನಪದ ಅಂತದ್ದು.

ಹಾಗೆ, ಅಂತಹ ಜಾನಪದ ಇದು. ಬಹುಶಃ, ಕರುಳು ಕಲಕುವ ನಮ್ಮ ಜಾನಪದಗೀತೆ ಇದೆಯಲ್ಲಾ ಕೆರೆಗೆಹಾರವಾದ ಭಾಗೀರತಿಯ ಕತೆ, ಸುಮಾರು ಅದೇ ಸಮಯಕ್ಕೆ ಬರೆಸಿಕೊಂಡಿರಬೇಕು ಇದು. ಹೊಸದಾಗಿ ಕಟ್ಟಿದ ಕೆರೆಗೆ ನೀರು ಬಾರದೆ ಊರಿನ ಜೀವಿಗಳೆಲ್ಲಾ ಅಸೌಖ್ಯದಿಂದ ಬಳಲುವಾಗ ಮುತ್ತೈದೆ ಹೆಣ್ಣುಮಗಳೊಬ್ಬಳನ್ನು ಬಲಿಕೊಟ್ಟರೆ ಸುಭಿಕ್ಷವಾಗುತ್ತದೆ ಎನ್ನುವ ಭವಿಷ್ಯವಾಣಿಗೆ ಓಗೊಟ್ಟು ಊರಗೌಡನ ಸೊಸೆ ಭಾಗೀರತಿ ತನ್ನಿಚ್ಚೆಗೋ ಪರರಪೇಕ್ಷೆಗೋ ಅಥವಾ ಎರಡಕ್ಕೋ ತನ್ನನ್ನು ತಾನೇ ಆಹುತಿಸಿಕೊಳ್ಳುವ ದಾರುಣಕತೆಯಂತೆಯೇ ಇದು. ಜನಪದದ ಮುಗ್ಧ ಗಡಿಗೆಯಲ್ಲಿ ತುಂಬಿ ಬರುವ ನೋವಿನ ಕಡಲು ಇದು.

ಈ ಹಾಡು ನಾವಹೋ (ಇಂಗ್ಲೀಷ್‌ನಲ್ಲಿ ಬರೆಯುವಾಗ Navajo ಎಂದು ಬರೆಯುತ್ತಾರೆ) ಜನಾಂಗದ್ದು. ಇವರು ಅಮೆರಿಕಾದ ಮೂಲನಿವಾಸಿಗಳು.

ಹಾಡಿನ ಈ ಹುಡುಗಿ, ಅತಿ ಬಿಳುಪೂ ಇಲ್ಲದ ಅತಿ ಕಪ್ಪೂ ಇಲ್ಲದ, ನಾವು ಭಾರತೀಯರಂತೆಯೇ ಕಂದು ಬಣ್ಣದ ಹುಡುಗಿ. ತನ್ನ ಮನೆಯ ಮುಂದೆ ನಿಂತು ಆಕಾಶದೆಡೆಗೆ ಮುಖ ಮಾಡಿದ್ದಾಳೆ - ಕಾತರ, ಬೇಸರ ಮತ್ತು ಆತಂಕಗಳಿಂದ. ನಾವಹೋಗಳ ಮನೆಯನ್ನು ‘ಮನೆ’ ಎಂದೇ ಕರೆಯಬೇಕೆ ಎನ್ನುವಲ್ಲಿ ನಾಗರಿಕ ಪ್ರಪಂಚಕ್ಕೆ ಭಿನ್ನಾಭಿಪ್ರಾಯಗಳಿವೆ. ನಾವಹೋಗಳು ‘ಹೋಗನ್‌’ ಎಂದು ಕರೆದುಕೊಳ್ಳುವ ಈ ಮನೆಗಳು ಒಂದು ರೀತಿಯಲ್ಲಿ ಗವಿಯಂತೆ ಮಣ್ಣಿನೊಳಗೆ ಕೊರೆದದ್ದು ಅಥವಾ ಹಾವಿನ ಹುತ್ತದಂತೆ ಮಣ್ಣುಪೇರಿಸಿ ಕಟ್ಟಿದ್ದು. ಹೋಗಲು ಒಂದು ದ್ವಾರ ಬಿಟ್ಟರೆ ಮತ್ತೇನೂ ಇರದು. ಅಂತಹ ಹೋಗನ್‌ನ ಮುಂದೆ ನಿಂತು ಈ ಹುಡುಗಿ ಆಕಾಶದಲ್ಲಿ ದಟ್ಟವಾಗುತ್ತಿರುವ ಮೋಡಗಳನ್ನೇ ನೋಡುತ್ತಿದ್ದಾಳೆ. ಎದುರು ಕಟ್ಟಲ್ಪಟ್ಟ ಕುದುರೆಯಾಂದು ಇವಳನ್ನು ದೈನ್ಯವಾಗಿ ನೋಡುತ್ತಿದೆ. ಆ ಕುದುರೆ ಒಬ್ಬ ಪೆಬ್ಲೊ ವೀರನಿಗೆ ಸೇರಿದ್ದು. ಪೆಬ್ಲೊಗಳೂ ಕೂಡ ನಾವಹೋಗಳಂತೆಯೇ ಕಾಡಿನಲ್ಲಿ ಅಂಡಲೆದು ದನಕರು ಕುರಿಗಳನ್ನು ಸಾಕಿ ತಮ್ಮದೇ ಸಂಸ್ಕೃತಿಯಲ್ಲಿ ಬದುಕುವ ಬುಡಕಟ್ಟು ಜನ. ನಾವಹೋಗಳಲ್ಲಿ ಸೂಕ್ತ ವರ ಸಿಕ್ಕದಿದ್ದಾಗ ಈ ಪೆಬ್ಲೊ ಜನಾಂಗದ ಹುಡುಗರಿಗೆ ಹೆಣ್ಣು ಕೊಡುತ್ತಾರೆ. ಅದಕ್ಕವರು ವಧುದಕ್ಷಿಣೆಯನ್ನು ಕೊಡಬೇಕು.

ನಾವಹೋ ಹುಡುಗರೆಲ್ಲಾ ಯುದ್ಧಕ್ಕೆ ಹೋಗಿದ್ದಾರೆ ನೆಲವನ್ನು ಆಕ್ರಮಿಸಿಕೊಳ್ಳಲು ಬಂದ ವಿದೇಶೀಯರನ್ನು ಬಡಿದೋಡಿಸಲು. ಈ ಪೆಬ್ಲೊ ವೀರ ಬಂದಿದ್ದಾನೆ ಇದೇ ಸಮಯವನ್ನು ಸಾಧಿಸಿ ನಾವಹೋ ಹುಡುಗಿಯಾಬ್ಬಳನ್ನು ‘ಕೊಂಡು’ಹೋಗಲು. ಒಳಗೆ ತಂದೆಯಾಡನೆ ಅವನು ನಡೆಸುತ್ತಿರುವ ಸಂಭಾಷಣೆ ಈ ಹುಡುಗಿಗೆ ಕೇಳುತ್ತಿದೆ. ಕುರಿಗಳ ಹಿಂಡನ್ನೇ ಮನೆಯ ಮುಂದೆ ಸಾಲು ನಿಲ್ಲಿಸುತ್ತಾನಂತೆ. ಅವನೂರಲ್ಲಿ ಒಂದು ಹೋಗನ್‌ ಕಟ್ಟಿಕೊಂಡಿದ್ದಾನೆ. ಯುದ್ಧಕ್ಕೂ ಹೋಗಿ ಬಂದಿದ್ದೇನೆ ಎನ್ನುತ್ತಿದ್ದಾನೆ. ಅಪ್ಪ ಕುದುರೆ ಕೇಳುತ್ತಿದ್ದಾನೆ. ಕುದುರೆಗೆ ಬಹಳ ಬೆಲೆ. ತನ್ನ ಬಳಿಯಿರುವ ಒಂದೇ ಕುದುರೆಯನ್ನು ವಧುದಕ್ಷಿಣೆಯಾಗಿ ಕೊಡಲು ಈ ಹುಡುಗ ಒಪ್ಪುತ್ತಿಲ್ಲ. ಕುದುರೆ ಇಲ್ಲದೆಯೇ ಈ ಹುಡುಗನನ್ನು ಅಪ್ಪ ಕೊನೆಗೆ ಒಪ್ಪುತ್ತಾನೆಂದು ಈ ಹುಡುಗಿಗೆ ಗೊತ್ತು.

ಇವಳು ಹೊರಗೆ ನಿಂತು ಕಾಯುತ್ತಿರುವುದು ಇವಳ ಜೀವನದಲ್ಲಿ ಬೆಂಕಿಯಂತೆ ಬಂದು ಹೋದ ಆ ನಾವಹೋ ವೀರನನ್ನು.

ಬೇಸಿಗೆಯ ಸೂರ್ಯ ಹಬ್ಬ ಅದು. ನಾವಹೋಗಳ ಅತಿದೊಡ್ಡ ಹಬ್ಬ. ಗುಂಪುಗುಂಪಿನಲ್ಲಿ ಯುವಕ ಯುವತಿಯರು ಬೆಳಗಿನಿಂದ ರಾತ್ರಿಯತನಕ ಮೈಮರೆತು ನರ್ತಿಸುವ ಹಬ್ಬ. ಹೆಂಡದ ಹೊಳೆಯಲ್ಲಿ ತೇಲಾಡುವ ಹಬ್ಬ. ನಮ್ಮ ಕಾರ್ತಿಕೇಯನಂತೆಯೇ ಕ್ಷಣಾರ್ಧದಲ್ಲಿ ಮಿಂಚುಹಾಯಿಸಿ ಶತೃಗಳನ್ನು ಬೂದಿಮಾಡಬಲ್ಲ ನಯೇನೆಜರಾನಿ ವೀರದೇವರನ್ನು ಶಕ್ತಿಕೊಡು ಕಣ್ಣುಗಳಲ್ಲಿ ಬೆಂಕಿಯ ಕಿಡಿಗಳನ್ನು ಕೊಡು ಉರಿವ ಜ್ವಾಲೆಯ ಕೆನ್ನಾಲಿಗೆಯಂತಹ ತಾರುಣ್ಯವನ್ನು ಕೊಡು ಮತ್ತು ನಿನ್ನ ಕೈಯಲ್ಲಿರುವ ಮಿಂಚಿನಾಯುಧವನ್ನು ನಮಗೆ ಕೊಡು ಎಂದು ಕೇಳಿಕೊಳ್ಳುವ ಹಬ್ಬ. ನಾವಹೋಗಳಿಗೆ ಮಿಂಚು ಬಹಳ ಪವಿತ್ರವಾದದ್ದು. ಇದು ಕೆಟ್ಟವರನ್ನು ಸುಟ್ಟರೆ ಒಳ್ಳೆಯವರಿಗೆ ಕಾಮನಬಿಲ್ಲಾಗುತ್ತದಂತೆ.

ಆ ಹಬ್ಬದಲ್ಲಿ ಕಂಡವನು ಇವನು. ಗರುಡನ ಗರಿಯನ್ನು ತಲೆಗೆ ಸಿಕ್ಕಿಸಿಕೊಂಡವನು. ಸ್ವತಃ ನಯೇನೆಜರಾನಿಯಂತೆ ಪ್ರಕಾಶಮಾನವಾಗಿದ್ದವನು. ಅವನ ಎತ್ತರ, ವಿಶಾಲ ಮೈಕಟ್ಟು, ತುಂಟನಗು, ಮತ್ತು ಬರಿಸುವಂತಹಾ ನೃತ್ಯ.... ಯಾವ ಹೆಣ್ಣು ತಾನೇ ಮರುಳಾಗದು ಅವನಿಗೆ? ತನ್ನೆಡೆಗೇ ನೋಡುತ್ತಿರುವ ಅರಳಿದ ಮಲ್ಲಿಗೆಯ ಕಣ್ಣುಗಳ ಈ ಹುಡುಗಿಯೆಡೆಗೆ ನೋಡಿ ಎರಡು ಬಾರಿ ಮುಗುಳ್ನಕ್ಕ. ಇವಳೋ, ಚೂರುಚೂರೇ ಮೇಣದ ಬತ್ತಿಯಂತೆ ಕರಗಿಹೋದಳು. ಅನಾಮತ್ತಾಗಿ ನುಗ್ಗಿ ಬಂದವನು ಅವಳ ಕೈ ಹಿಡಿದೆಳೆದು ತನ್ನ ಗುಂಪಿಗೆ ಸೇರಿಸಿಕೊಂಡುಬಿಟ್ಟ. ಒಲಿದ ಮನುಷ್ಯನೊಂದಿಗೆ ಸಂಜೆಯ ತನಕ ಮೈಮರೆತ ಹಾಡು.

ಕೈ ಕೈ ಹಿಡಿದು ಕಾಡುಮೇಡನ್ನೆಲ್ಲಾ ಓಡಿದರು. ನದಿಯಲ್ಲಿ ಈಜಿದರು. ಅವಳನ್ನು ಕುದುರೆಯ ಮೇಲೆ ಕೂರಿಸಿಕೊಂಡು ಗಾಳಿಯ ವೇಗದಲ್ಲಿ ಪರ್ವತವೇರಿದ.

ಪೂರ್ವದಿಂದ ‘ಸ್ತ್ರೀ ಮೇಘ’ಗಳು ಮತ್ತು ಪಶ್ಚಿಮದಿಂದ ‘ಪುರುಷ ಮೋಡಗಳು’ ತೇಲಿಬರುತ್ತಿವೆ. ನಾವಹೋಗಳಿಗೆ ಮೋಡಗಳೂ ದೇವರೇ. ಬೆಳ್ಳಿಯ ಬಣ್ಣವನ್ನು ಹೊತ್ತು ನೀಲಿ ಆಕಾಶದಲ್ಲಿ ಶಾಂತವಾಗಿ ತೇಲಿಬರುವ ಮೋಡಗಳು ಅವರಿಗೆ ಸ್ತ್ರೀ ಮೋಡಗಳು. ನಯೇನೆಜರಾನಿಯಂತೆ ಗುಡುಗು ಮಿಂಚು ಬಿರುಗಾಳಿಗಳೊಂದಿಗೆ ಆರ್ಭಟಿಸಿ ಬರುವ ಕಪ್ಪು ಮೋಡಗಳು ಪುರುಷ ಮೇಘಗಳು. ಪೂರ್ವದಿಂದ ಸ್ತ್ರೀ ಮೇಘಗಳು ಪಶ್ಚಿಮದಿಂದ ಪುರುಷ ಮೇಘಗಳು ಪವಿತ್ರವಾದ ಜೂನಿ ಪರ್ವತದ ಮೇಲೆ ಕೂಡಿ ಧೋ ಎಂದು ಮಳೆಯನ್ನು ಸುರಿಸಿ ತಂಪಾಗುತ್ತವೆ. ಭೂಮಿಯಲ್ಲಿ ಹಸುರಿನ ಸಂತಾನವನ್ನು ಮೂಡಿಸುತ್ತವೆ. ಬಳ್ಳಿಗಳಲ್ಲಿ ಮೊಗ್ಗುಗಳೇಳುತ್ತವೆ, ಪೈರು ತೆನೆಕಟ್ಟುತ್ತದೆ. ಮರ, ಗಿಡ, ಚಿಗುರು, ಕಾಯಿ ಹಣ್ಣುಗಳು ಬಣ್ಣ ಮಾಗಿಸಿಕೊಳ್ಳುತ್ತವೆ.

ಆ ಸಂಜೆ ಅವನು ಮತ್ತು ಅವಳು ಹಾಗೆಯೇ ಕೂಡಿದರು ಅವನ ಹೋಗನ್‌ನಲ್ಲಿ. ಮಳೆಯ ದೇವತೆಗಳಂತೆಯೇ. ಅವನು ತನ್ನ ತೋಳಿನಲ್ಲಿದ್ದ ‘ದುಃಸ್ವಪ್ನ ಬಂಧನ’ವನ್ನು ಅವಳಿಗೆ ಕಟ್ಟಿದ. ಅದಿದ್ದರೆ ಕೆಟ್ಟಸ್ವಪ್ನಗಳು ಕಾಡುವುದಿಲ್ಲವಂತೆ. ಭಯವೆನ್ನುವುದು ಸೋಕುವುದೂ ಇಲ್ಲವಂತೆ. ಮಹಾವೀರರ ತೋಳನ್ನು ಮಾತ್ರ ಬಂಧಿಸುವಂತಹದ್ದು ಅದು.

ಯುದ್ಧ ಮುಗಿದೊಡನೆಯೇ ಬೆಂಕಿ, ಮಿಂಚು, ಮಳೆಗಳ ದಿವ್ಯದಲ್ಲಿ ಮದುವೆಯಾಗುತ್ತೇನೆ ಎಂದ. ಕುದುರೆ ಏರಿ ಕತ್ತಿ ಹಿಡಿದು ಸುಂಟರಗಾಳಿಯಂತೆ ನಡೆದುಬಿಟ್ಟ.

ಈ ಹುಡುಗಿ ಕಾಯುತ್ತಿದ್ದಾಳೆ ಅವನನ್ನು. ಮಳೆಗೆ ಕಾಯುವ ಕಾಡುಮರದಂತೆ ಆಕಾಶದೆಡೆಗೇ ಮುಖ ಮಾಡಿ. ಕಾಯುತ್ತಾಳೆ ಕಪ್ಪುಮೋಡಗಳನ್ನು.

ನಾವಹೋಗಳು ಹೀನಾಯವಾಗಿ ತಮ್ಮ ಯುದ್ಧಗಳನ್ನು ಸೋತರು. ಮದ್ದು ಗುಂಡು ಫಿರಂಗಿಗಳ ಅಮೆರಿಕ ಸಂಯುಕ್ತ ಸಂಸ್ಥಾನದ ಸೈನ್ಯದ ಮುಂದೆ ಗರುಡನ ಗರಿಯ ಯುವಕರು ಇರುವೆಗಳಂತೆ ಸತ್ತರು. ನಾವಹೋ ಎಂದರೆ ‘ಭೂಮಿತಾಯಿಯ ಮಕ್ಕಳು’ ಎಂದರ್ಥ. ಮಣ್ಣಿನ ಮಕ್ಕಳು ಮಣ್ಣಾಗಿ ಹೋದರು. ಫಿರಂಗಿಗಳಲ್ಲಿ ಸಿಡಿಯುವ ಬೆಂಕಿಗೆ ಮುದ್ದೆಯಾಗಿ ಹೋದರು. ಸೆರೆಸಿಕ್ಕ ಎಂಟುಸಾವಿರ ಯುವಕರನ್ನು ಕೈ ಕಟ್ಟಿ ಬಟ್ಟಿ ಬಿಚ್ಚಿ ಮುನ್ನೂರು ಮೈಲಿಗಳಷ್ಟು ದೂರ ಮೆರವಣಿಗೆ ಮಾಡಲಾಯಿತು. ನಾಡು, ನುಡಿ, ಕೆಚ್ಚೆದೆ, ಅಭಿಮಾನಗಳ ಸಂಕೇತದಂತಿದ್ದ ನಾವಹೋಗಳು ಏನೂ ಇಲ್ಲದಂತಾದರು. ಬದುಕುಳಿದವರು ಗುಲಾಮರಾದರು.

ನಯೇನೆಜರಾನಿಯಂತೆ ಕಂಗೊಳಿಸುತ್ತಿದ್ದ ಆ ವೀರ ಯುವಕ ಏನಾದನೋ ಗೊತ್ತಿಲ್ಲ. ಅದ್ಯಾವುದನ್ನೂ ಆ ಜಾನಪದಗೀತೆ ಹೇಳುವುದಿಲ್ಲ. ಅವನು ಸತ್ತನೋ ಅಥವಾ ಸೆರೆಸಿಕ್ಕು ಅವಮಾನದಲ್ಲಿ ತಲೆತಗ್ಗಿಸಿ ಮುನ್ನೂರು ಮೈಲು ಬರೀಮೈನಲ್ಲಿ ನಡೆದನೋ ಗೊತ್ತಿಲ್ಲ. ಬಿರುಗಾಳಿಯಂತಹ ಅವನ ಕುದುರೆ ಏನಾಯಿತೋ? ನಾವಹೋಗಳಲ್ಲಿ ವೀರನೊಬ್ಬ ಮರಣಿಸಿದರೆ ಅವನ ಕುದುರೆಯನ್ನು ಕೊಂದು ಅವನ ಗೋರಿಯ ಮೇಲೆ ಹೂಳುತ್ತಾರಂತೆ. ವೀರನೊಬ್ಬನಿಗೆ ಸಲ್ಲಿಸುವ ಗೌರವ ಅದು. ಮಳೆ ಬರುವ ಮುನ್ನ ಹಾರುವ ಗರುಡರಂತೆ ತಾವು ಎಂದು ಬಗೆದವರು ಮಳೆಹುಳಗಳಂತೆ ಉರುಳಿದರೆ ಗೌರವರಕ್ಷೆಗಾದರೂ ಉಳಿದವರ್ಯಾರು?

ಆ ಹುಡುಗಿ ಏನಾದಳೋ? ಆ ಹುಡುಗನನ್ನೇ ಕಾದು ಪ್ರಾಣಬಿಟ್ಟಳೋ ಅಥವಾ ಪೆಬ್ಲೊ ಹುಡುಗನನ್ನು ಮದುವೆಯಾದಳೋ? ಹುಡುಗ ಕಟ್ಟಿದ ‘ದುಃಸ್ವಪ್ನ ಬಂಧನ’ ಅವಳನ್ನು ಭಯಂಕರ ಸ್ವಪ್ನಗಳಿಂದ ಮಧ್ಯರಾತ್ರಿ ಬೆಚ್ಚಿಬೀಳದಂತೆ ರಕ್ಷಿಸಿತೋ ಅಥವಾ ಕಳೆದುಹೋದ ಸಂಸ್ಕೃತಿಯಂತೆಯೇ ಮರೆತ ನಂಬಿಕೆಗಳಂತೆಯೇ ಶ್ರದ್ಧೆ ತಪ್ಪಿದ ಆಚರಣೆಗಳಂತೆಯೇ ತಾನೂ ಒಂದು ಸಾಧಾರಣ ತಾಯಿತವಾಗಿ ಚಕ್ಕೆಯ ತುಂಡನ್ನು ಬಂಧಿಸಿಟ್ಟ ಬರೀ ಕರಿಯ ದಾರವಾಗಿ ಅವಳು ಹೊಳೆಯಲ್ಲಿ ಮೀಯುವಾಗ ಎಂದೋ ಕಳಚಿ ನಿಶ್ಯಬ್ದವಾಗಿ ತೇಲಿಹೋಯಿತೋ ಮತ್ತೆಲ್ಲಾ ನಿರ್ಜೀವ ವಸ್ತುಗಳಂತೆಯೇ...

ಹೇಳುವವರು ಯಾರು ?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more