ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಸದ ಅಜ್ಜನ ಕೋಡುಬಳೆ ಗಣಿತ

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ನನಗೆ ಸುಮಾರು ನಾಲ್ಕೈದು ವರ್ಷಗಳಾಗಿದ್ದಾಗ ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದ ನನ್ನ ತಂದೆಗೆ ವರ್ಗಾವಣೆಯಾಗಿ ಚಿಕ್ಕಮಗಳೂರಿನ ಹತ್ತಿರದ ಕಳಸ ಎನ್ನುವ ಊರಿಗೆ ಬಂದೆವು. ಕಳಸದ ಹತ್ತಿರದ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ ಪ್ರಖ್ಯಾತವಾದ ಮೇಲೆ ಈಗ ಬಹಳಷ್ಟು ಜನಕ್ಕೆ ಕಳಸ ಎನ್ನುವ ಊರಿನ ಬಗ್ಗೆ ಗೊತ್ತಿದೆ. ನಾವಿದ್ದ ಆ ಸಮಯದಲ್ಲಿ ಹೊರನಾಡಿನ ದೇವಸ್ಥಾನ ಧರ್ಮಸ್ಥಳದ ದೇವಸ್ಥಾನದಂತೆ ಪ್ರಸಿದ್ಧಿಯನ್ನು ಪಡೆದಿರಲಿಲ್ಲ. ದಟ್ಟ ಅರಣ್ಯದ ನಡುವೆ ಗುಬ್ಬಚ್ಚಿ ಗೂಡಿನಂತೆ ಅಡಗಿಹೋದ, ಹಲ್ಲು ಮೂಡುವ ಮುನ್ನ ಹಸುಗೂಸು ಅತ್ತಂತೆ ಅವಿಚ್ಛಿನ್ನವಾಗಿ ಸುರಿಯುವ ಮಳೆಯ ಟಿಪಿಕಲ್‌ ಮಲೆನಾಡ ಊರು ಕಳಸವಾಗಿತ್ತು. ಮಲೆನಾಡಿನ ಜಿಗುಟು ಮಳೆ ನಗರಗಳಿಂದ ಊರು ನೋಡಲು ಬರುವವರಿಗೆ ಬೋರ್‌ ಹೊಡೆಸುತ್ತದೆ. ಆದರೆ ಹೊಂದಿಕೊಂಡವರಿಗೆ ಸಂಗೀತದಂತಿರುತ್ತದೆ. ಯಾವತ್ತೂ ನನಗೆ ಮಳೆ ಎಂದರೆ ಬಹಳ ಇಷ್ಟ. ಕಿಟಕಿಯ ಬಳಿ ಕುಳಿತು ಗಂಟೆಗಟ್ಟಲೆ ಬೇಕಾದರೆ ಆ ಸೌಂದರ್ಯವನ್ನು ಸವಿಯುತ್ತೇನೆ. ಮಳೆಯನ್ನು ಮೈಮೇಲೆ ಹಾಕಿಕೊಳ್ಳಲೆಂದೇ ಅನೇಕ ಭಾರಿ ನಿಧಾನವಾಗಿ ತೋಯುತ್ತಾ ತಲೆಕೂದಲು ಮೂಗಿನ ತುದಿ ಗಲ್ಲದಿಂದೆಲ್ಲಾ ನೀರಿನ ಹನಿಗಳು ಸರಪಣಿಗಳಾಗಿ ಕೆಳಗೆ ಇಳಿಯುವುದನ್ನು ಹಿತವಾಗಿ ಅನುಭವಿಸುತ್ತಾ ಮಳೆಗೆ ಬಯಲಲ್ಲಿ ಮಲಗಿದ ಎಮ್ಮೆಯಂತೆ ಸುಖಪಡುವುದಿತ್ತು. ಮನೆಗೆ ಬಂದೊಡನೆಯೇ ಅಮ್ಮ ಸಂಕಟಪಟ್ಟು ‘ಯಾಕೋ ಮಗು, ಯಾವುದಾದರೂ ಸೂರಿನಡಿ ನಿಂತು ಬರಬಾರದಾಗಿತ್ತೇನೋ’ ಎಂದು ಒಂದು ಟವಲ್ಲಿನಿಂದ ನನ್ನ ತಲೆಯನ್ನು ಚೆನ್ನಾಗಿ ಒರೆಸುವಾಗ ಬಹುಶಃ ಆಕೆಗೂ ತಿಳಿದಿತ್ತು ಇದು ಎಮ್ಮೆಯ ಮೇಲೆ (ಕೋಣನ ಮೇಲೆ ಎನ್ನುವುದು ಹೆಚ್ಚು ಸಮಂಜಸವೇನೋ) ಮಳೆ ಹುಯ್ಯುವ ಪ್ರೀತಿಯ ಪರಿ ಎಂದು.

ಕಳಸದಲ್ಲಿದ್ದಾಗ ಮಳೆಯಲ್ಲಿ ನೆನೆಯುತ್ತಿರಲಿಲ್ಲ ನಾನು. ಆ ‘ಸಾಹಸ’ಕ್ಕೆ ಬಹಳ ಚಿಕ್ಕವನಾಗಿದ್ದೆ. ಒಂದು ದೊಡ್ಡ ಕೊಡೆಯನ್ನು ಬಿಚ್ಚಿಕೊಂಡು ಅಪ್ಪನ ಪಕ್ಕದಲ್ಲೇ ಹೆಜ್ಜೆಹಾಕುತ್ತಾ ಒಂದು ತುದಿಯಲ್ಲಿ ಕಳಸೇಶ್ವರ ದೇವಸ್ಥಾನದ ಮೆಟ್ಟಿಲುಗಳನ್ನು ಜಾಗರೂಕನಾಗಿ ಇಳಿದು ರಸ್ತೆಯಲ್ಲಿ ಹೆಮ್ಮೆಯಿಂದ ಸುತ್ತಾ ನೋಡುತ್ತಾ ಅಪ್ಪನ ಶಾಲೆಯಿದ್ದ ಇನ್ನೊಂದು ತುದಿಯ ತನಕ ‘ವಾಕಿಂಗ್‌’ ಮಾಡುತ್ತಿದ್ದೆ. ಈಗ ದೊಡ್ಡವನಾದ ಮೇಲೆ ಹೊರನಾಡಿಗೆ ಹೋಗುವ ಸಲುವಾಗಿ ಅನೇಕ ಸಲ ಕಳಸಕ್ಕೆ ಹೋಗಿದ್ದೇನೆ. ಬದಲಾದ ಊರು, ಬದಲಾದ ರಸ್ತೆಗಳು, ಕಡಿಮೆಯಾದ ಮಳೆ ಇವು ಯಾವುವೂ ಮನಸ್ಸಿನಲ್ಲಿ ನಿಲ್ಲದೆ ಕಳಸ ಎಂದರೆ ನನಗೆ ಆವತ್ತಿನ ಬಿಂಬಗಳೇ ಕಣ್ಣಿಗೆ ಕಟ್ಟುತ್ತವೆ.

Memories of my school daysನನ್ನಮ್ಮ ಆ ವೇಳೆಗಾಗಲೇ ನನಗೆ ಕನ್ನಡದ ಅಕ್ಷರಮಾಲೆಯನ್ನು ಕಲಿಸಿ ಸಣ್ಣಪುಟ್ಟ ಪದರಚನೆಗಳನ್ನು ಬರೆಸುತ್ತಿದ್ದಳು. ಅಡುಗೆಮನೆಯ ಒಂದು ದೊಡ್ಡ ಮರದ ಮಣೆ ಆಗ ನನಗೆ ಬರೆಯುವ ‘ಬ್ಲ್ಯಾಕ್‌ ಬೋರ್ಡ್‌’ ಆಗಿತ್ತು. ಆ ಮಣೆಯ ಭರ್ತೀ ಬರೆದರೆ ಬಹುಮಾನವಾಗಿ ಹತ್ತು ಪೈಸೆಯನ್ನು ಕೊಟ್ಟು ಮನೆ ಎದುರಿನ ಅಂಗಡಿಯಲ್ಲಿ ಬಾಳೇಹಣ್ಣು ತಂದು ತಿನ್ನಲು ಹೇಳುತ್ತಿದ್ದಳು. ಅವಳು ಕೊಟ್ಟ ದುಡ್ಡಿಗೆ ನಾನು ಬಾಳೆಹಣ್ಣು ತರುತ್ತಿರಲಿಲ್ಲ, ಬದಲಾಗಿ ನಿಂಬೆಹುಳಿ ರುಚಿಯ ಪೆಪ್ಪರ್‌ಮಿಂಟ್‌ ತಂದು ತಿನ್ನುತ್ತಿದ್ದೆ!

ಮನೆಯಲ್ಲಿದ್ದ ನನ್ನ ಅಕ್ಕಂದಿರನ್ನೆಲ್ಲಾ ಗೋಳಾಡಿಸಿ ಚೇಷ್ಟೆ ಮಾಡುತ್ತಿದ್ದೆ ಎಂದೋ ಅಥವಾ ಕಲಿತದ್ದು ಸಾಲದು ಇನ್ನೂ ಬೇಗನೆ ಕಲಿಯಲಿ ಎಂದೋ ಒಟ್ಟಿನಲ್ಲಿ ನನ್ನ ತಂದೆ ನನ್ನನ್ನು ಮುಂದಿನ ಬೀದಿಯಲ್ಲಿದ್ದ ಒಬ್ಬ ಮುದುಕರ ಹತ್ತಿರ ಪಾಠಕ್ಕೆ ಗೊತ್ತು ಮಾಡಿದರು. ನನಗಿಷ್ಟವಿರಲಿಲ್ಲ. ಹರಕೆಯ ಕುರಿಯಂತೆ ನನ್ನ ಅಪ್ಪನೊಂದಿಗೆ ಅವರ ಮನೆಗೆ ಹೊರಟೆ. ಕಂಬಕಂಬಗಳಿರುವ ಮನೆಯ ನೆಲದ ಭರ್ತಿ ಹೆಂಚಿನಿಂದ ಬೀಳುವ ನೆರಳು ಬೆಳಕಿನ ಕೋಲುಗಳು. ವಿಶಾಲವಾದ ಒಳಕೋಣೆಯ ಮೂಲೆಯಲ್ಲಿ ಕುರ್ಚಿಯ ಮೇಲೆ ಈ ‘ಮೇಷ್ಟ್ರು ಅಜ್ಜ’ ಕುಳಿತಿತ್ತು. ಬತ್ತಿಹೋದ ತೆಳ್ಳಗಿನ ದೇಹದ ಎದೆಗೂಡನ್ನು ವಿಚಿತ್ರವಾದ ಆಕಾರದ, ಜೇಬುಗಳುಳ್ಳ ದೊಗಲೆ ಕಾಟನ್‌ ಬನಿಯನ್ನು ಮುಚ್ಚಿತ್ತು. ಬಿಳಿಯ ಪಂಚೆಯ ಮೇಲೆಲ್ಲಾ ಹಿತ್ತಲಿನ ಮಣ್ಣಿನ ಕರೆಗಳು. ಬಿಳೀಮೀಸೆ ಬೊಚ್ಚುಬಾಯಿ ಬೋಳುತಲೆ ಅಗಲ ಕುಂಕುಮದ ಅಜ್ಜ ನನ್ನನ್ನು ನೋಡಿ ನಕ್ಕರೆ ನನಗೆ ಅದೊಂದು ಯಾವುದೋ ಗ್ರಹದಿಂದ ಇದೀಗ ತಾನೇ ಇಳಿದುಬಂದ ಪರಲೋಕ ಜೀವಿಯಂತೆ ಕಂಡು ನನ್ನಪ್ಪನಿಗೆ ಮತ್ತೂ ಆತುಕೊಂಡೆ. ಅಜ್ಜನ ಮುಂದೆ ವಿಧೇಯ ವಿದ್ಯಾರ್ಥಿಗಳಾಗಿ ಆಗಲೇ ಒಬ್ಬ ಹುಡುಗ ಮತ್ತು ಹುಡುಗಿ ಕುಳಿತಿದ್ದರು.

‘ಹೆಸರೇನಂದ್ರಿ?’ ಎಂದು ಅಪ್ಪನನ್ನು ಮತ್ತೊಮ್ಮೆ ಕೇಳಿಕೊಂಡು ‘ದತ್ತಣ್ಣಾ, ಇಲ್ಲಿ ಬಾರಪ್ಪ’ ಎಂದು ಅಜ್ಜ ಕರೆಯಿತು. ನಾನು ಹೋಗಲಿಲ್ಲ. ಒಂದು ಸಣ್ಣ ಸ್ಲೇಟು ಬಳಪ ಹಿಡಿದು ತಾನೇ ಬಂದು ಚಾಪೆಯ ಮೇಲೆ ನನ್ನ ಪಕ್ಕ ಕುಳಿತುಕೊಂಡಿತು. ‘ಇ ಬರೆಯುಕ್ಕೆ ಬರುತ್ತಾ ನಿನಗೆ, ಬರಿ ನೋಡೋಣ’. ಬರೆದೆ. ನಾನು ಬರೆದ ‘ಇ’ಯನ್ನು ಅಜ್ಜ ಇಲಿ ಮಾಡಿತು. ಚಣ್ಣನೆ ಬಾಲ ನಿಮಿರಿಕೊಂಡು ಓಡಿ ಹೋಗಲು ತಯ್ಯಾರಿರುವ ಇಲಿ! ಎಂಟು ಬರೆಯಲು ಹೇಳಿತು. ಬರೆದೆ. ನಾ ಬರೆದ ಎಂಟು ಕೈ ಕಾಲು ಮೀಸೆ ಎಲ್ಲಾ ಬರಿಸಿಕೊಂಡು ಸಕ್ಕರೆ ಕದ್ದು ಬಿರಬಿರನೆ ಓಡುವ ಕಟ್ಟಿರುವೆಯಾಯಿತು. ನನಗೆ ನಗು ತಡೆಯಲಾಗಲಿಲ್ಲ. ಬಿದ್ದು ಬಿದ್ದು ನಕ್ಕೆ. ನಾನು ನಕ್ಕಿದ್ದು ಕಂಡು ಅಜ್ಜ ಮನಸಾರೆ ನಕ್ಕಿತು. ಅವತ್ತಿನಿಂದ ಅಜ್ಜನ ‘ಟ್ಯೂಷನ್‌’ ಶುರುವಾಯಿತು ನನಗೆ!

ಮುಂದಿನ ದಿನಗಳಲ್ಲಿ ಕೂಡಿ ಕಳೆಯುವ ಲೆಕ್ಕ ನಮಗೆ.

‘ಏಯ್‌ ಮಂಜಕ್ಕ, ಒಳಗೆ ಹೋಗಿ ಅಜ್ಜ ಕೇಳ್ತಿದೆ, ಎಂಟು ಕೋಡ್ಬಳೆ ಬೇಕಂತೆ ಅಂತ ಕೇಳಿ ಇಸ್ಕೋಂಡ್‌ ಬಾ ಅಜ್ಜಿ ಹತ್ರ’ ಮಂಜುಳ ಹೊರಟಳು. ‘ಅಜ್ಜೀನ ಮುಟ್ಟೀಯ ಮತ್ತೆ, ಮಡೀಲಿ ಇರ್ತಾಳೆ’.

ಮಂಜುಳ ಎಂಟು ಕೋಡುಬಳೆ ತಂದಳು, ‘ಎಂಟನ್ನೂ ದತ್ತಣ್ಣಂಗೆ ಕೊಡು’. ನನ್ನ ಮುಖ ಅರಳಿತು. ಮಂಜುಳಳ ಮುಖ ಬಾಡಿತು.

‘ಈಗ ದತ್ತಣ್ಣನ ಹತ್ತಿರ ಎಷ್ಟು ಕೋಡ್ಬಳೆ ಇದೆ?’

‘ಎಂಟು’

‘ದತ್ತಣ್ಣಾ, ಮಂಜಕ್ಕಂಗೆ ಎರಡು ಕೊಡ್ಬಳೆ ಕೊಡು. ಪಾಪ ತಂದವಳೇ ಅವಳಲ್ವಾ’

ಮಂಜುಳನ ಮುಖ ಅರಳಿತು. ‘ಈಗ ದತ್ತಣ್ಣನ ಹತ್ತಿರ ಎಷ್ಟು ಕೋಡ್ಬಳೆ ಇದೆ?’

‘ಆರು’

‘ನಾಗಣ್ಣಂಗೆ ಎರಡು ಕೊಡು’. ಕೊಟ್ಟೆ. ಮಂಕಾಗಿದ್ದ ನಾಗರಾಜ ಖುಷಿಯಾದ.

‘ಈಗ ದತ್ತಣ್ಣನ ಹತ್ತಿರ ಎಷ್ಟು ಕೋಡ್ಬಳೆ ಇದೆ?’

‘ನಾಲ್ಕು’

‘ದತ್ತಣ್ಣಾ, ಆ ನಾಲ್ಕೂ ಕೋಡ್ಬಳೆ ನನಗೆ ಕೊಡು’. ಕೊಟ್ಟೆ. ‘ಈಗೆಷ್ಟಿದೆ?’

‘ಸೊನ್ನೆ’

ನಾನು ಅಳುವುದೊಂದು ಬಾಕಿ. ಅಜ್ಜ ಬೊಚ್ಚು ಬಾಯಲ್ಲಿ ದೇವಸ್ಥಾನದ ಗಂಟೆ ಅಲ್ಲಾಡಿಸಿದಂತೆ ನಕ್ಕಿತು. ‘ಹೋಕಳ್ಲಿ, ಅವನೂ ಲೆಕ್ಕ ಚೆನ್ನಾಗಿ ಮಾಡಿದನೆ. ಅವನಿಗೂ ಎರಡು ಕೋಡ್ಬಳೆ’ ಎಂದು ಎರಡು ಕೋಡುಬಳೆ ನನ್ನ ಕೈಗಿಟ್ಟಮೇಲೆ ನಾನು ಗೆಲುವಾದೆ.

ನಾಗರಾಜ ಇನ್ನೇನು ಕೋಡುಬಳೆಯನ್ನು ಬಾಯಿಗಿಡುವವನಿದ್ದ. ‘ತಡೆಯೋ ನಾಗಣ್ಣ’ ಎಂದು ಅಜ್ಜ ಕೂಗಿ ‘ನಿನ್ನ ಸ್ಲೇಟಿನ ಮೇಲೆ ಎರಡು ಕೋಡ್ಬಳೆ ಇಟ್ಟು ಎಂಟು ಮಾಡೋ ನೋಡಣ’. ನಾಗರಾಜ ಮಾಡಿದ. ‘ಅದನ್ನು ಹದಿನೆಂಟು ಮಾಡೊಕ್ಕೆ ಏನು ಮಾಡ್ಬೇಕು?’, ‘ಪಕ್ಕದಲ್ಲಿ ಒಂದು ಬರೀಬೇಕು’. ‘ಬರೀ ಮತ್ತೆ’. ನಾಗರಾಜ ಒಂದು ಬರೆದ. ‘ಛೀ ಛೀ ಇದೇನೋ! ಗಿಡ್ಡಕ್ಕೆ ದಪ್ಪಕ್ಕೆ ಮೋಟುದ್ದದ ಒಂದು ಬರೀತಿಯಲೋ, ಒಳ್ಳೆ, ಚಡ್ಡಿ ಒಳಗಿನ ಕುಮ್ಮಣ್ಣಿತರ ಕಾಣುತ್ತಲೋ. ಒಂದು ಬರದ್ರೆ ಗರಿಕೆ ಹುಲ್ಲುಕಡ್ಡಿ ತರ ಇರ್ಬೇಕು ಕಣೋ ತೆಳ್ಳಕ್ಕೆ ಉದ್ದಕ್ಕೆ’.

ಆವತ್ತಿನಿಂದ ಸ್ನಾನ ಮಾಡುವಾಗೆಲ್ಲಾ ಹುಡುಗರಿಗೆ (ಇಬ್ಬರಿಗೆ) ಒಂದನ್ನು ಹೇಗೆ ತಪ್ಪಾಗಿ ಬರೆಯಬಾರದು ಎಂದು ಜ್ಞಾಪಕವಾಗುತ್ತಿತ್ತು.

ಹೀಗೆ ಹಬ್ಬದ ಹೋಳಿಗೆ, ಕೋಡುಬಳೆ, ಚಕ್ಕುಲಿ, ಚಪ್ಪರದ ಮಲ್ಲಿಗೆ, ಸಾಲಿನ ಇರುವೆ, ಕೊಚ್ಚೆಯ ಹೆಜ್ಜೆ, ಬೇಲಿಯ ತುಂಬೇಹೂವುಗಳಲ್ಲಿ ನಮಗೆ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳೆಲ್ಲಾ ಸಿಕ್ಕಿತು.

ನನ್ನ ತಂದೆಗೆ ಕಳಸದಿಂದ ಚಿಕ್ಕಮಗಳೂರಿಗೆ ವರ್ಗವಾಯಿತು. ಅಜ್ಜನಿಗೆ ಹೇಳಿ ಬರಲು ನಾನು, ನನ್ನ ತಂದೆ ಹೋಗಿದ್ದೆವು. ನನ್ನ ತಂದೆ ಅಜ್ಜನಿಗೆ ಕಾಲುಮುಟ್ಟಿ ನಮಸ್ಕಾರ ಮಾಡಿ ನನಗೂ ಮಾಡುವಂತೆ ಹೇಳಿದರು. ಅಜ್ಜ ಪ್ರೀತಿಯಿಂದ ನನ್ನ ತಲೆ ಸವರಿ ‘ದತ್ತಣ್ಣಾ, ಚೆನ್ನಾಗಿ ವಿದ್ಯ ಕಲಿಯಪ್ಪ’ ಎಂದಿತು.

ಎಷ್ಟರಮಟ್ಟಿಗೆ ವಿದ್ಯ ಕಲಿತೆನೋ, ಪರೀಕ್ಷೆಗಳನ್ನಂತೂ ಪಾಸು ಮಾಡಿದೆ. ಸಾಸಿವೆ ಹಾಕಿದರೆ ಸಿಡಿಯುವಂತಹಾ ಮುಖದ ಮೇಷ್ಟ್ರುಗಳು ಸೂತ್ರ ಪ್ರಮೇಯಗಳನ್ನು ಬರೆಯುವಾಗ ಮದ್ದು ತುಂಬಿಸಿದ ತುಪಾಕಿಯಂತೆ ಅಲ್ಲಾಡದೇ ಕುಳಿತವರಲ್ಲಿ ನಾನೂ ಒಬ್ಬನಾಗಿದ್ದೆ. ಯಾವ ಉಪಾಧ್ಯಾಯರೂ ‘ದತ್ತಣ್ಣಾ, ನಾಗಣ್ಣಾ’ ಎಂದು ಅಕ್ಕರೆಯಿಂದ ಕರೆಯಲಿಲ್ಲ. ಫೆಬ್ರವರಿ 29ರಂದು ಹುಟ್ಟಿದರೆ ಆ ಮನುಷ್ಯ 400 ವರ್ಷ ಬಾಳುತ್ತಾನೆಯೇ ಎಂದು ತಮಾಷೆ ಮಾಡಲಿಲ್ಲ. ಗಣಪತಿ ನಿದ್ದೆ ಮಾಡಿದರೆ ಅವನ ಕೈನಲ್ಲಿರುವ ಮೋದಕವನ್ನು ಹೊಂಚುಹಾಕಿ ಅವನ ಬಳಿಯೇ ಕುಳಿತಿರುವ ಇಲಿಮರಿ ತಿನ್ನುವುದಿಲ್ಲವೇ ಎಂದು ಚೇಷ್ಟೆ ಮಾಡಲಿಲ್ಲ. ಆರ್ಕಿಮಿಡೀಸ್‌ನ ತತ್ವವನ್ನು ನಿರ್ಭಾವುಕರಾಗಿ ಹೇಳುವಾಗ ಅವನು ‘ಯುರೇಕಾ, ಯುರೇಕಾ’ ಎಂದು ಕಂಡು ಹಿಡಿದ ಖುಷಿಯಲ್ಲಿ ಮೈಮರೆತು ಊರನ್ನೆಲ್ಲಾ ಬೆತ್ತಲೆಯಾಗಿ ಸುತ್ತುವಾಗ ಆ ಊರಿನ ಜನಕ್ಕೆಲ್ಲಾ ಹೇಗೆ ತಪ್ಪಾಗಿ ಒಂದು ಬರೆಯಬಾರದು ಎಂದು ಗೊತ್ತಾಯಿತು ಎಂದು ಹೇಳಿ ನಗಿಸಲಿಲ್ಲ. ಪರೀಕ್ಷೆ! ಪರೀಕ್ಷೆ! ಕೆಂಡದ ಮೇಲೆ ಹಾಯುವ ಭಕ್ತರಂತೆ ಓಡಿಸಿಬಿಟ್ಟರು.

ಕಾಲೇಜು, ಯೂನಿವರ್ಸಿಟಿಯ ಮೆಟ್ಟಿಲು ಹತ್ತಿದ ಮೇಲೆ ಅಲ್ಲಿ ಮತ್ತೊಂದು ರೀತಿಯ ಕುದುರೆ ಸವಾರಿ. ಕೆಲವು ಪ್ರೊಫೆಸರ್‌ಗಳಂತೂ ವಿದ್ಯಾರ್ಥಿಗಳನ್ನು ಯಾವುದೋ ರೌರವ ನರಕಕ್ಕೆ ಹೋಗಲು ತಯಾರಾಗಿ ನಿಂತಿರುವ ಪಾಪಿಗಳ ಗಣಗಳೆಂಬಂತೆ ಕಂಡರು. ಕೆಲವರು ಬೋರ್ಡಿನ ಕಡೆ ತಿರುಗಿ ಸಣ್ಣನೆಯ ಅಕ್ಷರದಲ್ಲಿ ಕೊರೆಯಲಾರಂಭಿಸಿದರೆ ಬೋರ್ಡಿಗೆ ತೂತ ಬಿದ್ದರೂ ತಿರುಗಿ ನಿಲ್ಲುತ್ತಿರಲಿಲ್ಲ. ಹುಡುಗರ ಕ್ರಿಕೇಟ್‌ ಕಾಮೆಂಟರಿ ಮುಗಿದು ತೆಂಡೂಲ್ಕರ್‌ ಕುಂಬ್ಳೆ ವಾಸಿಂ ಅಕ್ರಂರೆಲ್ಲಾ ಸುಸ್ತಾಗಿ ಮನೆಗೆ ಹೋದಮೇಲೂ, ಹುಡುಗಿಯರು ಹತ್ತತ್ತು ಬಾರಿ ಚುಕ್ಕಿ ಆಟ ಆಡಿ ನೋಟ್‌ಬುಕ್‌ಗಳನ್ನೆಲ್ಲಾ ಮುಗಿಸಿದ ಮೇಲೂ ಬೋರ್ಡಿಗೆ ತೂತ ಮಾಡುವ ಮರಕುಟಿಗ ಕೆಲಸ ಮುಗಿಯುತ್ತಿರಲಿಲ್ಲ. ಅವೇ ಫಾರ್ಮುಲಾಗಳು, ಥಿಯರಿಗಳು, ಈಕ್ವೇಷನ್‌ಗಳು. ಉರು ಹೊಡೆದೂ, ಹೊಡೆದೂ ..... ಮೈತುರಿಸಿಕೊಳ್ಳಲು ಪುರುಸೊತ್ತಿಲ್ಲದಂತೆ ಪರೀಕ್ಷೆ ಪರೀಕ್ಷೆ ಪರೀಕ್ಷೆ. ‘ಸರ್‌, ಪರೀಕ್ಷೆ ನಂತರ ಏನು?’. ಸೂಜಿಯನ್ನು ಕೈಗಿತ್ತು ಪರ್ವತದಂತೆ ಧುತ್ತನೆ ಎದುರು ನಿಲ್ಲುವ ಜೀವನವನ್ನು ಇನ್ನು ನೀನು ಕೊರೆಯಬಹುದು ಎನ್ನುತ್ತಾರೆ. ಥೇಟ್‌ ಅವರಾದಂತೆಯೇ.

ನನಗೆ ಅವರೆಲ್ಲರ ಮೇಲೆ ಗೌರವವಿದೆ. ಅವರುಗಳಿಂದಲೇ ನಾನು ಇಂದು ನನ್ನ ಅನ್ನವನ್ನು ಸಂಪಾದಿಸುತ್ತಿದ್ದೇನೆ. ಸ್ಕೂಲು, ಕಾಲೇಜುಗಳಲ್ಲಿ ಇಷ್ಟು ಪಾಠ ಮಾಡಲೇಬೇಕು, ಅಷ್ಟೂ ವಿದ್ಯಾರ್ಥಿಗಳು ಪಾಸಾಗಲೇಬೇಕೆಂಬ ಒತ್ತಡದಲ್ಲಿ ನಿರುಪಾಯರು ಅವರು. ಆದರೂ, ಶಿಕ್ಷಣದ ಉದ್ಧೇಶ ಬರೀ ಹೊಟ್ಟೆಪಾಡನ್ನು ಮಾತ್ರಾ ನೋಡಿಕೊಳ್ಳುವಂತೆ ಮಾಡುವುದೇ? ಜ್ಞಾನವೆಂಬ ಗರ್ಭಗುಡಿಯ ದೇವತೆಗಿಂತಲೂ ಹೊರಗೆ ಕಾವಲುನಿಂತ ಪರೀಕ್ಷೆ ಎನ್ನುವ ಭೂತರಾಯನಿಗೇ ನಮ್ಮ ಬಹುಪಾಲು ಆರಾಧನೆ ಸಲ್ಲುತ್ತದಲ್ಲ ಎನ್ನುವ ಕೊರಗಿನಿಂದ ಈ ಮಾತನ್ನು ಹೇಳುತ್ತಿದ್ದೇನೆ. ಎಲ್ಲಾ ಶಿಕ್ಷಕರೂ ಹಾಗೆಯೇ ಎನ್ನುವುದು ಮಹಾಪರಾಧವಾದೀತು. ಶಿಕ್ಷಣದ ಮೂಲ ಉದ್ದೇಶವನ್ನು ಧ್ಯಾನದಲ್ಲಿಟ್ಟುಕೊಂಡು ತಾವಿರುವ ವ್ಯವಸ್ಥೆಯನ್ನು ಮೀರಿ ಬೋಧಿಸುವ ಶಿಕ್ಷಕರೂ ಇದ್ದಾರೆ. ಆದರೆ ಅವರ ಸಂಖ್ಯೆ ಕಡಿಮೆ.

ಗಣಿತ ವಿಶ್ವಭಾಷೆ. ನಮ್ಮ ಜೀವನಕ್ಕೆ ಅತಿ ಹತ್ತಿರವಾಗಿದ್ದುಕೊಂಡು ಪ್ರತಿಯಾಂದು ಕ್ರಿಯಾಪ್ರಕ್ರಿಯೆಗಳನ್ನೂ ಮಾತನಾಡುವ ಭಾಷೆಯಿದು. ಜೀವಕೋಶಗಳ ಹುಟ್ಟುಸಾವಿನಿಂದ ಹಿಡಿದು ಗುರುಗ್ರಹಕ್ಕೆ ಅಪ್ಪಳಿಸಿ ಸಾಯುವ ಉಲ್ಕೆಗಳ ತನಕ, ಅರಳುವ ಹೂವಿನಿಂದ ಹಿಡಿದು ಬೆಳೆಯುವ ಕೂದಲಿನ ತನಕ, ಪ್ರತಿಯಾಂದನ್ನೂ ಪ್ರಕೃತಿಯ ಭಾಷೆಯಿಂದ ನಮ್ಮ ಭಾಷೆಗೆ ತರ್ಜುಮೆ ಮಾಡಿಕೊಳ್ಳಲು ಗಣಿತ ಬೇಕು. ಆರ್ಯಭಟನಿಂದ ಹಿಡಿದು ಐನ್‌ಸ್ಟೈನ್‌ನ ತನಕ ಮಾಡಿದ್ದು ಇದನ್ನೇ, ಪ್ರಕೃತಿಯನ್ನು ನಮ್ಮ ಗಣಿತದ ಭಾಷೆಯಲ್ಲಿ ಮಾತನಾಡಿಸುವುದು. ಸೂತ್ರ ಮತ್ತು ಪ್ರಮೇಯಗಳೆಲ್ಲಾ ಈ ಪ್ರಕೃತಿಯ ಭಾಷೆಯ ವಾಕ್ಯಗಳು. ಹೀಗಿರುವಾಗ ಗಣಿತವನ್ನು ನಿರ್ಭಾವುಕರಾಗಿ ಬೋಧಿಸಲು ಸಾಧ್ಯವೇ?

ದೂರದಲ್ಲೆಲ್ಲೋ ದೊಡ್ಡ ಎಲೆಕ್ಟ್ರಾನಿಕ್‌ ಬಿಲ್‌ಬೋರ್ಡ್‌ ಒಂದು ಕಾಣುತ್ತಿದೆ. ಹನ್ನೆರಡು, ಹದಿನೆಂಟು ಎಂದೆಲ್ಲಾ ಅಂಕಿಗಳು ಅದರ ಮೇಲೆ ಚೆಲ್ಲಾಟವಾಡುತ್ತಿವೆ. ಯಾವುದೋ ಬ್ಯಾಂಕಿನದೋ ಅಥವಾ ಅಂಗಡಿಯದೋ ಇರಬಹುದು. ಬೇರೆ ಏನೂ ನನ್ನನ್ನು ಸೆಳೆಯುತ್ತಿಲ್ಲ ಈ ಅಂಕಿಗಳನ್ನು ಬಿಟ್ಟು. ಬಯಲೊಂದರಲ್ಲಿ ಚಿಣ್ಣರು ಕೇಕೆಹಾಕಿ ನಲಿದಂತೆ ಬಣ್ಣಬಣ್ಣದ ಈ ಅಂಕಿಗಳು ತಮ್ಮ ಲೋಕದಲ್ಲಿ ವಿಹರಿಸುತ್ತಿವೆ. ಕಳಸದ ಅಜ್ಜ ಈ ಬಿಲ್‌ಬೋರ್ಡಿನ ಡಿಜಿಟಲ್‌ ಅಂಕಿಗಳನ್ನು ನೋಡಿದ್ದರೆ ಏನು ಹೇಳುತ್ತಿತ್ತು ಎಂದು ಯೋಚಿಸುತ್ತೇನೆ. ‘ಏನೋ ದತ್ತಣ್ಣಾ, ಒಳ್ಳೆ ನುಚ್ಚಿನುಂಡೆಗಳನ್ನೆಲ್ಲಾ ಜೋಡ್ಸಿ ಅಂಕಿ ಮಾಡ್ತಾರಲ್ಲೋ ಇವರು’ ಎಂದು ಬೆಳ್ಳಿಯ ಮೀಸೆಗಳನ್ನು ಕುಣಿಸುತ್ತಾ ಬೊಚ್ಚುಬಾಯಿಂದ ತಿಳಿಗೊಳದಲ್ಲಿ ಮೂಡುವ ಅಲೆಗಳಂತೆ ನಗುತ್ತಿತ್ತೇನೋ.

ಕಳಸದ ಅಜ್ಜನ ಆತ್ಮಕ್ಕೆ ಶಾಂತಿ ಸಿಗಲಿ. ಪಠ್ಯ ಮತ್ತು ಪರೀಕ್ಷೆಗಳಿಗೆ ಹೊರತಾಗಿ ಯೋಚಿಸಬಲ್ಲ ಶಿಕ್ಷಕರ ಎದೆ ಸದಾ ಹಸಿರಾಗಿರಲಿ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X