ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪೊಲೋ-13 : ಸೋಲಿನೆದೆಯಲ್ಲೊಂದು ಗೆಲುವಿನ ಹಾಡು

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ನಿಮ್ಮ ಪಯಣ ಪ್ರಾರಂಭವಾಗಿ ಸುಮಾರು ಎರಡೂವರೆ ದಿನಗಳಾಗಿವೆ. ಭೂಮಿಯ ಗುರುತ್ವವನ್ನು ದಾಟಿ ಊರ್ಧ್ವಮುಖವಾಗಿ ಹೊರಟು ಗಂಟೆಗೆ ಮೂರುಸಾವಿರ ಮೈಲುಗಳಂತೆ ನಿಮ್ಮ ಗಗನನೌಕೆ ಯಾವ ಚಿಂತೆಯೂ ಇಲ್ಲದೆ ಸರಾಗವಾಗಿ ಚಂದ್ರನೆಡೆಗೆ ದೌಡಾಯಿಸುತ್ತಿದೆ. ಬಿಟ್ಟು ಬಂದ ಹಾದಿಯನ್ನು ಉಲ್ಲಾಸ ತುಂಬಿದ ತೀವ್ರತೆಯಿಂದ ಕಿಟಕಿಯಲ್ಲಿ ನೋಡುತ್ತೀರ. ನೀಲಿ ಬಣ್ಣದ ವಸುಂಧರೆ ಸುಂದರಿಯರಲ್ಲಿ ಸುಂದರಿಯಾಗಿ ಕಂಡು ಕಣ್ತುಂಬಿ ನಿಮ್ಮನ್ನು ಬೀಳ್ಕೊಟ್ಟ ನಿಮ್ಮ ಪತ್ನಿಯನ್ನೋ ಪ್ರಿಯತಮೆಯನ್ನೋ ನೆನಪಿಸಿದರೆ ಮಗದೊಮ್ಮೆ ಹಾಲೂಡಿಸುತ್ತಿರುವ ಹೆಣ್ಣಂತೆ ಕಂಡು ನಿಮ್ಮ ತಾಯಿಯಂತೆ ಕಾಣುತ್ತಾಳೆ. ಅವರೆಲ್ಲಾ ಕಾಯುತ್ತಿದ್ದಾರೆ ಅಲ್ಲಿ ಆ ನೀಲಿ ಭೂಮಿಯಲ್ಲಿ ನಿಮಗಾಗಿ. ನೀವೋ, ಈ ಕ್ಷಣಕ್ಕಾಗಿ, ಈ ಮಹೂರ್ತಕ್ಕಾಗಿ ಭೂಮಿತಾಯಿಯನ್ನು ಇಷ್ಟುದೂರದಲ್ಲಿ ಈ ರೀತಿ ನೋಡುವುದಕ್ಕಾಗಿಯೇ ಹಗಲು ರಾತ್ರಿ ಕನಸುಕಂಡು ಕಂಡ ಕನಸುಗಳ ಹಿಂದೆಯೇ ಬೆಂಬಿಡದಂತೆ ಹಗಲು ರಾತ್ರಿ ದುಡಿದು ಎಲ್ಲಾ ಪರಿಣಿತಿಗಳನ್ನೂ ಪಳಗಿಸಿಕೊಂಡು ಆಸ್ಟ್ರೋನಾಟ್‌ ಆಗಿ ಈ ನೌಕೆಯನ್ನೇರಿದ್ದೀರಿ. ಇನ್ನೊಂದು ದಿನದಲ್ಲಿ ನಿಮ್ಮ ಗಗನನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಲಿದೆ. ಜೇಡರ ಹುಳುವಿನಂತೆ ಕೈ ಕಾಲು ಚಾಚಿಕೊಂಡು ನಿಮ್ಮ ನೌಕೆಗೆ ಅಂಟಿಕೊಂಡು ನಿಮ್ಮೊಡನೆಯೇ ಬರುತ್ತಿರುವ ಚಂದ್ರಯಾನ ನೌಕೆಗೆ ನುಸುಳಿ ಅದನ್ನು ಮಾತೃನೌಕೆಯಿಂದ ಬೇರ್ಪಡಿಸಿ ಚಂದ್ರನ ನೆಲದೆಡೆಗೆ ತಿರುಗಿಸಿದರೆ ನೇರವಾಗಿ ಚಂದಾಮಾಮನ ಅಂಕುಡೊಂಕಿನ ಮೈಮೇಲೇ ಇಳಿದುಬಿಡುತ್ತೀರಿ. ಮೈಮನಗಳ ಪುಳಕದಲ್ಲಿ ಶಶಾಂಕನ ಮೇಲೆ ಓಡಾಡುವಿರಿ. ವಿಜ್ಞಾನ ಪುಳಕಿತವಾಗುತ್ತದೆ. ನಿಮ್ಮನ್ನು ಕಳುಹಿಸಿದ ಸಂಸ್ಥೆ ಪುಳಕಿತವಾಗುತ್ತದೆ. ಇಂದು ನಿಮ್ಮ ಹೆಜ್ಜೆ ಊರಿಸಿಕೊಳ್ಳುವ ಉನ್ಮೀಲಿತ ಚಂದ್ರನನ್ನು ಮುಂದೆಂದೋ ಹುಣ್ಣಿಮೆಯ ದಿನ ಮನೆಯ ಮುಂದಿನ ಬೆಟ್ಟದ ಮೇಲೆ ನಿಂತು ನೋಡಿದರೆ ನಿಮ್ಮ ಕಣ್ಣುಗಳು ತುಂಬಿಬರುತ್ತವೆ.

Apollo-13 : The Successful failureಅಷ್ಟೆಲ್ಲಕ್ಕೆ ಇನ್ನೂ ಒಂದು ದಿನ ಪ್ರಯಾಣ ಮಾಡಬೇಕು. ಭೂಮಿಯಿಂದ ಈಗಾಗಲೇ ಎರಡು ಲಕ್ಷ ಮೈಲಿಗಳಷ್ಟು ಬಂದಿದ್ದೀರಿ. ಎಲ್ಲಾ ಸರಿ, ಎಲ್ಲಾ ಚೆನ್ನ ಎನ್ನುವಷ್ಟರಲ್ಲಿ, ಯಾರೋ ಹಿಡಿದು ಅಲ್ಲಾಡಿಸಿದಂತೆ ಕಂಪಿಸುತ್ತದೆ ನಿಮ್ಮ ನೌಕೆ! ನಿರ್ವಾತದಲ್ಲಿ ಶಬ್ದವಿಲ್ಲದಿರುವುದಾದರಿಂದ ಹೊರಗೆ ನಡೆದದ್ದೇನೆಂದು ತಿಳಿಯುವುದಿಲ್ಲ. ಭೂಮಿಯ ನಿಮ್ಮ ಕಂಟ್ರೋಲ್‌ ರೂಮಿಗೆ ಹೇಳುತ್ತೀರಿ ಏನೋ ತೊಂದರೆ ಎಂದು. ಅವರೂ ಉಸಿರು ಬಿಗಿ ಹಿಡಿದು ಎಲ್ಲವನ್ನೂ ಪರೀಕ್ಷಿಸಿ ಏನೂ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ಏನಾಗಿದೆ ಎಂದು ಹುಡುಕುತ್ತಾ ಹುಡುಕುತ್ತಾ ಕಿಟಕಿಯಿಂದ ನಿಮ್ಮ ನೌಕೆಯ ಬಲಭಾಗವನ್ನು ನೋಡುತ್ತೀರಿ. ನಿಮ್ಮ ನೌಕೆಯ ಆಕ್ಸಿಜನ್‌ ಟ್ಯಾಂಕ್‌ ಯಾವುದೋ ಯುದ್ಧದಲ್ಲಿ ಬಾಂಬ್‌ ಆಘಾತಕ್ಕೆ ನೇರವಾಗಿ ಒಳಗಾದಂತೆ ಸಿಡಿದುಹೋಗಿದೆ. ಅದು ಬಿಟ್ಟರೆ ಉಳಿದ ಮತ್ತೊಂದು ಟ್ಯಾಂಕ್‌ನಿಂದಲೂ ಆಮ್ಲಜನಕ ನಿಮ್ಮ ನೌಕೆಯ ಹಿಂದೆಯೇ ಗುರುತಿಗೆ ಗೆರೆ ಎಳೆದಂತೆ ಸೋರಿಹೋಗುತ್ತಿದೆ! ಭೂಮಿಗೆ ವಾಪಸ್ಸು ಹೋಗಲು ಇನ್ನೂ ನಾಲ್ಕು ದಿನ ಬೇಕು. ಇದೋ, ಇನ್ನೂ ನಾಲ್ಕು ಗಂಟೆಯೂ ಬರುವಂತಿಲ್ಲ. ಆಮ್ಲಜನಕ ಮತ್ತು ಜಲಜನಕವನ್ನು ಬೆರೆಸಿ ನೀರುಮಾಡಿಕೊಳ್ಳಬೇಕು. ಅವುಗಳಿಂದಲೇ ವಿದ್ಯುತ್‌ ತಯ್ಯಾರಿಸಿಕೊಳ್ಳಬೇಕು. ಇನ್ನು ಕೆಲವು ಗಂಟೆಗಳಲ್ಲಿ ನಿಮಗೆ ನೀರು ನಿಲ್ಲುತ್ತದೆ. ಸ್ವಲ್ಪ ಹೊತ್ತಿನಲ್ಲೇ ಪವರ್‌ ಸೆಲ್‌ಗಳೆಲ್ಲಾ ನಿತ್ರಾಣವಾಗಿ ನಿಮ್ಮ ನೌಕೆಯು ವಿದ್ಯುತ್‌ ರಹಿತವಾಗುತ್ತದೆ. ಅಂತರಿಕ್ಷದ ಗಾಡಾಂಧಕಾರದಲ್ಲಿ ಕರಗಿಹೋಗಲು ನಿಮ್ಮ ನೌಕೆ ಹವಣಿಸುತ್ತಿದೆ. ದುಃಖ ಭಯ ಸ್ವಾನುಕಂಪ ಅಭದ್ರತೆಗಳಿಂದ ಭೂಗೋಳದ ಕಡೆ ನೋಡುತ್ತೀರಿ. ಆಕೆ ಎರಡು ಲಕ್ಷ ಮೈಲಿಗಳಾಚೆ ಇದ್ದಾಳೆ!

ಏನು ಮಾಡುತ್ತೀರಿ ನೀವು?

ಸೈನ್ಸ್‌ ಫಿಕ್ಷನ್‌ ಬರೆಯುತ್ತಿಲ್ಲ ನಾನು. ಇದು ನಡೆದದ್ದು. ಅಪೊಲೋ 13 ರಲ್ಲಿ ಆದದ್ದು ಇದೇ.

***

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಫ್ಲೋರಿಡಾ ರಾಜ್ಯದ ಆರ್ಲೆಂಡೊ ನಗರದರ್ಶನ ಅಪೂರ್ಣ ಎನ್ನಿಸಿಕೊಳ್ಳುವುದು ನೀವು ಸಮೀಪದ ಕೆನಡಿ ಸ್ಪೇಸ್‌ ಸೆಂಟರನ್ನು ನೋಡದಿದ್ದರೆ. ಆರ್ಲೆಂಡೋದಲ್ಲಿರುವ ಡಿಸ್ನಿ ಮ್ಯಾಜಿಕ್‌ ಕಿಂಗ್‌ಡಮ್‌, ಯುನಿವರ್ಸಲ್‌ ಸ್ಟೂಡಿಯೋಸ್‌, ಸೀವರ್ಲ್ಡ್‌ ಮುಂತಾದವು ನಾಸಾದ (NASA) ಈ ಕೆನಡಿ ಸ್ಪೇಸ್‌ ಸೆಂಟರನ್ನು ಮರೆ ಮಾಡಿಬಿಡುತ್ತವೆ ತಮ್ಮ ಅಬ್ಬರದಿಂದ. ನೀವು ಅದೃಷ್ಟಶಾಲಿಗಳಾಗಿದ್ದು ಭೇಟಿ ನೀಡುವ ದಿನ ನಾಸಾ ಯಾವುದಾದರೂ ಉಡಾವಣೆಯನ್ನು ಹಮ್ಮಿಕೊಂಡಿದ್ದರೆ ನೀವು ಅದನ್ನೂ ನೋಡಬಹುದು. ಆದರೆ ಒಂದು ಮಾತು. ನೀವಿಲ್ಲಿ ಭೇಟಿಕೊಡುವುದು ಪ್ರೇಕ್ಷಣೆಗಾಗಿ ಸಿದ್ಧಪಡಿಸಿದ ಕೆಲವು ಜಾಗಗಳಿಗೆ ಮಾತ್ರ. ಸುರಕ್ಷತೆಯ ದೃಷ್ಟಿಯಿಂದ ಬಹುತೇಕ ವಿಭಾಗಗಳಿಗೆ ಪ್ರವೇಶ ನಿಷಿದ್ಧವಿರುತ್ತದೆ.

ನೀವು ನೋಡುವ ಒಂದು ಆಕರ್ಷಣೆ ಅಪಲೋ ಯಾನಗಳಿಗೆ ಸಂಬಂಧಿಸಿದ್ದು. ಅರವತ್ತರ ದಶಕದಲ್ಲಿ ಅಮೆರಿಕಾದ ಜನಪ್ರಿಯ ಅಧ್ಯಕ್ಷರಾಗಿದ್ದ ಆಕರ್ಷಕ ವ್ಯಕ್ತಿತ್ವ, ಸೌಂದರ್ಯ, ಸದೃಢತೆಯ ಜಾನ್‌ ಕೆನಡಿ ಪ್ರತಿಸ್ಪರ್ಧಿಗಳಾದ ರಷ್ಯನ್ನರ ಅಂತರಿಕ್ಷ ಸಾಹಸಗಳಿಗೆ ಬೆಚ್ಚಿಬಿದ್ದು ‘ಈ ದಶಕದ ಕೊನೆಯಾಳಗೆ ಒಬ್ಬ ಅಮೆರಿಕನ್‌ ಚಂದ್ರನ ಮೇಲೆ ಕಾಲೂರುತ್ತಾನೆ’ ಎನ್ನುವ ಸಾರ್ವಜನಿಕ ಘೋಷಣೆಯ ಒತ್ತಡದಲ್ಲಿ ಪ್ರಾರಂಭವಾದ ಪ್ರಯೋಗಗಳು ಅಪೊಲೋ ಯಾನಗಳು. ಕೆನಡಿ ಸ್ಪೇಸ್‌ ಸೆಂಟರಿನ ಈ ಅಪೊಲೋ ಪ್ರದರ್ಶನದಲ್ಲಿ ಅಪಲೋ 1 ರಿಂದ ಹಿಡಿದು ಅಪಲೋ 17 ರ ತನಕದ ಎಲ್ಲಾ ಯಾನಗಳ ಸಂಪೂರ್ಣ ಮಾಹಿತಿ ಇದೆ. ಅಪಲೋ 11 ಮೊಟ್ಟಮೊದಲನೆಯದಾಗಿ ಮನುಷ್ಯನ ಹೆಜ್ಜೆಯನ್ನು ಚಂದ್ರನ ಮೇಲೆ ಊರಿಸಿದ್ದು. ಈ ಅಂತರಿಕ್ಷಯಾನಗಳನ್ನು ನಿಜವಾಗಿಸಿದ ಸ್ಯಾಟ್ರನ್‌-5 ರಾಕೇಟ್‌ನ ನಿಜಗಾತ್ರದ ಮಾಡೆಲ್‌ ಕೂಡ ಇಲ್ಲಿದೆ.

ಚಂದ್ರಯಾನದ ಬಗ್ಗೆ ಹೇಳುವಾಗ ನಾಸಾಕ್ಕೆ ಸಹಜವಾಗಿಯೇ ಹೆಮ್ಮೆ. ವಿಜ್ಞಾನ ಮತ್ತು ತಂತ್ರಜ್ಞಾನದ ಅಳವಡಿಕೆಯ ಮನುಕುಲದ ಸಾಧನೆಗಳಲ್ಲಿ ಪರಮೋಚ್ಛವಾದ ಕೆಲವೇ ಕೆಲವುಗಳಲ್ಲಿ ಈ ಬಾಹ್ಯಾಕಾಶ ಸಾಹಸಗಳೂ ಒಂದು ಎಂದು ಯೋಚಿಸಿಕೊಂಡರೆ ನಾಸಾದ ಹೆಮ್ಮೆಯ ಸ್ವಾಭಾವಿಕತೆ ನಮಗೆ ಅರ್ಥವಾದೀತು. ಈ ಸಾಧನೆಗಳನ್ನು ಹಂತಹಂತವಾಗಿ ವಿವರಿಸುವಾಗ ಅಪೊಲೋ 1 ರಲ್ಲಿ ಉಡಾವಣೆಗೆ ಮುನ್ನವೇ ಅಪಘಾತದಲ್ಲಿ ಸತ್ತ ಮೂವರು ಗಗನಯಾತ್ರಿಗಳನ್ನು ನಾಸಾ ಮರೆಯುವುದಿಲ್ಲ. ಹಾಗೆಯೇ ತನ್ನ ನಿಶ್ಚಿತ ಉದ್ದೇಶಗಳನ್ನು ಸಂಪೂರ್ಣಗೊಳಿಸುವಲ್ಲಿ ಸ್ಪಷ್ಟವಾಗಿ ವಿಫಲಗೊಂಡ ಅಪೊಲೋ-13ರ ಬಗ್ಗೆ ಹೇಳುವಾಗ ನಾಸಾ ಇದನ್ನು Successful failure ಎನ್ನುತ್ತದೆ, ತನ್ನ ಹೆಮ್ಮೆಯಿಂದ ಉಬ್ಬಿದ ದನಿಯನ್ನು ಯಾವರೀತಿಯಲ್ಲೂ ಕುಗ್ಗಿಸದೆ.

ಅಪೊಲೋ-13 ವಿಫಲತೆಯಲ್ಲಿ ಸಫಲವಾಯಿತು ತನ್ನ ಯಾವ ಧ್ಯೇಯಗಳನ್ನು ಈಡೇರಿಸದೆಯೂ! ಏಕೆಂದರೆ...............

(ಮುಂದಿನ ಅಂಕಣದಲ್ಲಿ ಮುಂದುವರೆಯುವುದು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X