ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಬೇಕು, ಆದರೆ ಕಿವಿಯೇ ಬೇಕೆಂದಿಲ್ಲ

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

‘ನೆಲದ ಮೇಲೆ ಬಿದ್ದು ಕೊಳೆತುಹೋಗುತ್ತಿರುವ ಎಲೆಯಾಂದರ ಕೆಳಗೆ ನೋಡಿ’ ಮಹಾಜ್ಞಾನಿಯಾಬ್ಬ ಹೇಳಿದ. ‘ವಿಶ್ವವೇ ಅದರ ಕೆಳಗಿದೆ. ಇರುವೆಗಳು ನಗರಗಳನ್ನು ನಿರ್ಮಿಸಿಕೊಂಡಿರುತ್ತವೆ. ಕೊಳತೆಲೆಯ ರಂಧ್ರಗಳಿಂದ ಬರುವ ಸೂರ್ಯರಶ್ಮಿಯಡಿ ಆಟದ ಸ್ಟೇಡಿಯಂಗಳಿರುತ್ತವೆ. ಬಿಳಿಯ ಎಳ್ಳಿನಂತಹ ಕ್ರಿಮಿಗಳು ಹಗಲು ರಾತ್ರಿ ದುಡಿಯುತ್ತಿರುತ್ತವೆ. ಕೆಲವು ಕೀಟಗಳು ಗಡಿ ಒತ್ತರಣೆಗಾಗಿ ಯುದ್ಧ ಮಾಡುತ್ತಿರುತ್ತವೆ. ಇನ್ನು ಕೆಲವು ಎಲೆ ಕೆಳಗಿನ ‘ಮಾತೃಭೂಮಿ’ಗಾಗಿ ಕಾದಾಡಿ ತಮ್ಮ ಎಣಿಸಲಾರದಷ್ಟು ಪಾದಗಳನ್ನು ಮೇಲಿನ ಎಲೆ ಎಂಬ ಆಕಾಶದೆಡೆಗೆ ಚಾಚಿಕೊಂಡು ಮೃತವಾಗಿರುತ್ತವೆ. ನಮ್ಮ ಪ್ರಪಂಚದಲ್ಲಿ ಏನೇನು ಇದೆಯೋ ಎಲ್ಲವೂ ಅವಕ್ಕೂ ಇದೆ. ನಿಮ್ಮ ಬೂಟಿನಡಿಯ ಪ್ರಪಂಚವನ್ನು ಕಣ್ಣರಳಿಸಿ ನೋಡಿ. ನೆಲದಾಳಕ್ಕೆ ಇಳಿದಂತೆ ಮಿಲಿಮೀಟರ್‌ನಿಂದ ಮಿಲಿಮೀಟರ್‌ಗೆ ಒಂದೊಂದು ಲೋಕವೇ ಅಲ್ಲಿದೆ.’

ಎರೆಹುಳ ಅಲ್ಲಿ ಮೃಗರಾಜ. ಎರೆಹುಳವನ್ನು ಕಂಡೊಡನೆಯೇ ಅನೇಕ ಕ್ರಿಮಿಗಳು ಸಿಂಹ ಬೆನ್ನುಬಿದ್ದ ಜಿಂಕೆಯಂತೆಯೇ ಓಡುತ್ತವೆ. ಕಾನೂನು ಮಾಡುವವರು ಇದ್ದಾರೆ. ಕಾನೂನು ಪಾಲಿಸುವವರಿದ್ದಾರೆ. ಎಲ್ಲರೂ ಇದ್ದಾರೆ ಅಲ್ಲಿ. ಜಾರುವ ಸಣ್ಣ ಮರಳ ಕಣವೂ ದೊಡ್ಡ ಕಲ್ಲು ಬಂಡೆಯಾಗಬಹುದಾದ ಈ ಲೋಕವನ್ನು ನೋಡುವಾಗ ನಾವು ನಮ್ಮ ಉಸಿರನ್ನೂ ತಡೆಹಿಡಿದಿರಬೇಕಾಗುತ್ತದೆ, ಅವುಗಳ ಲೋಕದಲ್ಲಿ ಬಿರುಗಾಳಿ ಎಬ್ಬಿಸದಂತೆ ತಡೆಯಲು.

ನಾವರಿಯದ ನಗರಗಳು ಇವು. ನಾವರಿಯದ ಹಳ್ಳಿಗಳು, ನಾವರಿಯದ ಲೋಕಗಳು. ಮಣ್ಣನ್ನೇ ಕೊರೆದು ಕೋಣೆಕೋಣೆಗಳನ್ನಾಗಿ ಮಾಡುವ ಸಿವಿಲ್‌ ತಂತ್ರಜ್ಞಾನ. ಎಂಜಲನ್ನೇ ಬಲೆಯನ್ನಾಗಿ ಮಾಡಿ ವೃತ್ತದೊಳಗೊಂದು ವೃತ್ತವನ್ನು ಹೆಣೆಯುವ ಅಪೂರ್ವ ವಿಜ್ಞಾನ. ಹೆದ್ದಾರಿಯ ಮೇಲೆ ಒಂದರ ಹಿಂದೊಂದು ಟ್ರಕ್‌ಗಳು ಹೋದಂತೆ ಸಾಲು ಸಾಲಿನ ಇರುವೆಗಳು ರಸ್ತೆಜ್ಞಾನ.

ನಮ್ಮ ಲೋಕವೇ ಇದು ಅಥವಾ ನಮ್ಮ ಲೋಕವೂ ಇದೇ ರೀತಿ. ಪ್ರಾಣಿಪಕ್ಷಿಗಳನ್ನೆಲ್ಲಾ ಉಚ್ಛಾಟಿಸಿ ಮಾನವಲೋಕವನ್ನು ನಿರ್ಮಿಸಿಕೊಂಡಾಕ್ಷಣಕ್ಕೆ ಅವೆಲ್ಲಾ ಮರೆಯಾಗಿಯೇ ಬಿಟ್ಟವು ಎಂದು ಭ್ರಮಿಸಿಬಿಟ್ಟಿರಾ? ನರಿಯಂತೆ ಸತ್ತು ಕೊಳೆತವನೆದೆಯಿಂದಲೂ ಬಗೆದು ಲಂಚಕೀಳುವವರು ಮನುಷ್ಯರು ಹೇಗಾಗುತ್ತಾರೆ? ಎದುರುಬಿದ್ದುವರನ್ನೆಲ್ಲಾ ಕೊಂದು ಮುಂದೆ ಹೋಗುವವರು ಕಾಡಿನ ಧರ್ಮವನ್ನೆಲ್ಲಿ ಬಿಟ್ಟಿದ್ದಾರೆ ? ಆನೆ ಹುಲಿ ಕರಡಿ ಎರೆಹುಳ ಇರುವೆ ಎಲ್ಲಾ ಇದೆ ಇಲ್ಲೂ. ನಿಮ್ಮ ಕಂಪನಿಯ CEOನನ್ನು ಯಾವತ್ತಾದರೂ ಭೇಟಿಯಾಗಿದ್ದೀರಾ ? ನಿಮಗಿಂತಲೂ ಕುಳ್ಳಗಿರಬಹುದು ಅವನು, ನಿಮಗಿಂತಲೂ ತೆಳ್ಳಗೆ. ನೀವು ಯುವಕರಾದರೆ ಅವನು ಮುದುಕ. ಆದರೆ, ಅವನೆದುರು ನೀವು ಭೂಕಂಪನವಾದಂತೆ ನಡುಗುತ್ತೀರಿ. ಅವನು ಶೇಕ್‌ಹ್ಯಾಂಡ್‌ ಮಾಡಲು ಕೈ ಮುಂದೆ ಚಾಚಿದರೆ ಬಲಿಯ ತಲೆಯ ಮೇಲಿನ ವಾಮನನ ಪಾದದಂತೆ ಪ್ರಪಂಚಕ್ಕೆ ಅದು ವಿಸ್ತರಿಸಿಕೊಂಡಿರುವಂತೆ ಅನ್ನಿಸುತ್ತದೆ. ಮಾತನಾಡಲು ಶಬ್ದಗಳೇ ಹೊರಡದೆ ತೊದಲುತ್ತೀರಿ. ನಿಮ್ಮ ಬದುಕು ಕೊಬ್ಬರಿಮಿಠಾಯಿಯಂತೆ ಅವನ ಕೈನಲ್ಲಿದೆ. ಐದೂವರೆ ಅಡಿಗಳ ಅವನು ಆನೆಯಂತೆ ನಿಂತಿದ್ದರೆ ಆರೂಕಾಲು ಅಡಿಯ ನೀವು ಇರುವೆಯಂತೆ ತಲೆಬಾಗಿಸಿಕೊಂಡು ಜೀವ ಉಳಿಸಿಕೊಳ್ಳುವ ದಾರಿಯನ್ನು ಹೃದಯವಿದ್ರಾವಕವಾಗಿ ಹುಡುಕುತ್ತಿರುತ್ತೀರಿ. ಬೆಂಗಳೂರು, ನ್ಯೂಯಾರ್ಕ್‌, ಸ್ಯಾನ್‌ಫ್ರಾನ್ಸಿಸ್ಕೋಗಳಲ್ಲೆಲ್ಲಾ ಆನೆಗಳಿಲ್ಲ ಎಂದವರ್ಯಾರು?

The wonderful world of Antsಅವೆಲ್ಲಾ ಇರಲಿ. ಮತ್ತೆ ಈ ಪಾದ ಕೆಳಗಿನ ಲೋಕಕ್ಕೇ ಬರೋಣ. ಈ ರೀತಿ ಮಿಲಿಮೀಟರ್‌ ಕೆಳಗಿನ ಕೊಳೆತ ಮಣ್ಣಿನಲ್ಲಿ ಅರಳಿದ ಲೋಕಕ್ಕೆ ಮೇಲೊಂದು ಕಾರು ಬಸ್ಸು ಟ್ರಕ್ಕು ಟ್ರೈನುಗಳ, ಡೆಮಾಕ್ರಸಿ ಹಿಪಾಕ್ರಸಿಗಳ ಹಸಿ ಹಸಿ ಸಮಾಜ ವ್ಯವಸ್ಥೆಯ, ಸಾಯುವ ತನಕ ದುಡಿದು ಮನೆ ಕಟ್ಟಿಸಿಕೊಳ್ಳುವ, ಬೇರೆಯವರನ್ನೂ ಕೊಂದು ತನ್ನನ್ನು ತಾನೇ ಕೊಂದುಕೊಳ್ಳುವ, ಎದುರು ಎರಡು ಆದರೆ ಬುರುಡೆಯಾಳಗೆ ಸಾವಿರ ದೃಷ್ಟಿಯ ಮನುಷ್ಯಲೋಕವಿದೆ ಎಂದು ಗೊತ್ತಿದೆಯೇ? ಅವುಗಳದ್ದು ಅದೆಷ್ಟು isolated ಆದ ಅಭದ್ರತೆಯಿಂದ ಕೂಡಿದ ಕರುಣಾಜನಕವಾದ ಲೋಕ ಎಂದು ಅಂದುಕೊಳ್ಳುವ ಮೊದಲು ಅವುಗಳ ಸ್ಥಾನದಲ್ಲಿ ನಮ್ಮ ಲೋಕವನ್ನಿಟ್ಟು ನೋಡಿ. ‘ಮತ್ಯಾರಿಗೋ’ ನಮ್ಮದೂ ಕ್ರಿಮಿಕೀಟಗಳ ಪುಟಾಣಿ ಅಭದ್ರ ಲೋಕದಂತೆ ಕಾಣುತ್ತಿರಬಹುದು ಅಲ್ಲವೇ ? ‘ಅವರ್ಯಾರೋ’ ಬೂಟುಕಾಲುಗಳನ್ನು ಮೇಲಿಟ್ಟರೆ ನಮ್ಮ ನಗರಗಳು ಅಪ್ಪಚ್ಚಿಯಾಗಬಹುದು. ಅವರ ಉಸಿರಾಟಕ್ಕೆ ನಮ್ಮ ಸಮುದ್ರಗಳು ಉಕ್ಕೇರಬಹುದು. ಪ್ರಳಯವಾಗಿ ನಾವು ‘ಕ್ರಿಮಿ’ಗಳೆಲ್ಲಾ ಸಾಯಬಹುದು. ಕೆಳಗಿನ ಲೋಕಕ್ಕೆ ನಮ್ಮ ಲೋಕ ಗೊತ್ತಿಲ್ಲ, ನಮ್ಮ ಲೋಕಕ್ಕೆ ಮೇಲಿನ ಲೋಕ ಗೊತ್ತಿಲ್ಲ . ಗೊತ್ತಿಲ್ಲದಿರುವುದೇ ಸಹಜ ಬದುಕಿಗೆ ಒಳ್ಳೆಯದು ಅಥವಾ ಗೊತ್ತಾಗದಂತೆ ಇರುವುದೇ ಸಹಜ ಬದುಕಿನ ಗುಣಚರ್ಯೆ ಇರಬಹುದು.

ನೆಲದ ಕೆಳಗಿನ ಲೋಕ ಮೇಲಿನ ಲೋಕದ ಚಿಂತೆ ಇಲ್ಲದೇ ಬದುಕುತ್ತದೆ ಎಂದದ್ದು ಅವಸರದ ಮಾತಾಯಿತೇನೋ. ನಾವೂ ಆಗಾಗ ‘ಯಾರಾದರೂ ಕೇಳುತ್ತಿದ್ದೀರಾ....ಕ್ಷೀರಪಥದ ಸೂರ್ಯ ನಕ್ಷತ್ರದ ಮೂರನೆಯ ಗ್ರಹವಾದ ಪೃಥ್ವಿಯ ವಾಸಿಗಳಾದ ನಾವು ಹೆಮ್ಮೆಯಿಂದ ನಿಮ್ಮನ್ನು ಸಂಪರ್ಕಿಸಲು ಬಯಸುತ್ತಿದ್ದೇವೆ...’ ಎಂದು ವಿಶ್ವಕ್ಕೆಲ್ಲಾ ರೇಡಿಯೋ ಸಂದೇಶದ ಡಂಗೂರವನ್ನು ಸಾರುತ್ತಿದ್ದೇವಲ್ಲಾ , ಯಾರಾದರೂ ಕೇಳಿದರೆ ‘ಪರವಾಗಿಲ್ಲವೇ, ಇವರೇನು ತೀರಾ ದಡ್ಡರಲ್ಲ’ ಎಂದು ಅಂದುಕೊಳ್ಳಲಿ ಎಂದು, ಹಾಗೆಯೇ ಚಂದ್ರನ ಮೇಲೆ ಅಮೆರಿಕಾದ ಬರೆಬರೆ ಮತ್ತು ಚುಕ್ಕಿಗಳ ರಾಷ್ಟ್ರಧ್ವಜವನ್ನು ನೆಟ್ಟು ಬಂದಿದ್ದೀವಲ್ಲಾ ಯಾರಾದರೂ ‘ಸೆಲ್ಯೂಟ್‌’ ಮಾಡಲಿ ಎಂದು, ರಾಮ ರಾಬರ್ಟ್‌ ರವಿ ರೇಚಲ್‌ ಎಂದು ಮಿಲಿಯನ್‌ಗಟ್ಟಲೆ ಹೆಸರುಗಳನ್ನು ವೆಬ್‌ಸೈಟ್‌ ಒಂದರಲ್ಲಿ ಅಪ್‌ಡೇಟ್‌ ಮಾಡಿಸಿ ಅಷ್ಟನ್ನೂ ಸಿಡಿಯಲ್ಲಿಟ್ಟು ಮಂಗಳಕ್ಕೆ ಸಾಗಿಸಿದ್ದೇವಲ್ಲಾ , ಓದಿಕೊಂಡವರು ನಮ್ಮ ಹೆಸರು ಹಿಡಿದೇ ಕೂಗಲಿ ಎಂದು ... ಯಾಕೆ? ಯಾಕೆ ಮಾಡಿದೆವು? ಗೊತ್ತಿಲ್ಲದ ಲೋಕವನ್ನು ಸಂಪರ್ಕಿಸಲು ತಾನೇ?

ಈ ಕಾಲ ಕೆಳಗಿನ ಲೋಕವಾಸಿಗಳೂ ಮಾತನಾಡುತ್ತವೆ. ಅದೂ ನಮ್ಮೊಡನೆಯೇ! ನಮ್ಮ ಭಾಷೆ ವಿಶ್ವದಲ್ಲಿ ಮತ್ಯಾರಿಗೆ ಕೇಳದಂತೆ ಅವುಗಳ ಕೂಗೂ ನಮಗೆ ಅರ್ಥವಾಗುತ್ತಿಲ್ಲ. ಕೇಳಲು ಕಿವಿ ಸಾಕೆ? ಖಂಡಿತಾ ಇಲ್ಲ. ಕಿವಿಯಾಂದರಿಂದಲೇ ಕೇಳುವುದೇ? ಅದೂ ಇಲ್ಲ. ಆನೆಗಳು ಕಾಲಿನಿಂದಲೂ ‘ಕೇಳಿಸಿ’ಕೊಳ್ಳುತ್ತವಂತೆ. ಒಂದು ಆನೆ ಇನ್ನೊಂದು ಆನೆಯಾಂದಿಗೆ ಮೈಲಿಗಟ್ಟಲೆ ದೂರದವರೆಗೂ ಕಾಲಿನಲ್ಲೇ ಭೂಕಂಪನಗಳನ್ನು ಹೊರಡಿಸಿ ಸಂಭಾಷಿಸುತ್ತದೆಯಂತೆ. ಕೇಳಿಸಿಕೊಳ್ಳುವ ಆನೆ ಕಾಲಿನಿಂದಲೇ ‘ಕೇಳಿಸಿ’ಕೊಳ್ಳುತ್ತದೆ (ಅಥವಾ ಸರಿಯಾದ ಪದ ‘ಗ್ರಹಿಸುತ್ತದೆ’). ಈಗ ಅಪಾಯ ಎನ್ನಲು ಒಂದು ಬಗೆಯ ಕಂಪನ, ಬೆದೆಗೆ ಬಂದ ಸಂಗಾತಿಯನ್ನು ಹುಡುಕಲು ಒಂದು ಬಗೆಯ ಕಂಪನ, ಇಲ್ಲಿ ನೀರಿದೆ ಎನ್ನಲು ಮತ್ತೊಂದು ಬಗೆಯದು. ಬಹುಶಃ ಈ ರೀತಿಯ ಭೂಕಂಪನ ಗ್ರಹಿಕೆ ಎಲ್ಲಾ ಪ್ರಾಣಿಗಳಿಗೂ ಇರುತ್ತದೆ. ಅದಕ್ಕೇ ಇರಬೇಕು ಹುಲಿಯಾಂದು ಎಷ್ಟೇ ಹೊಂಚುಹಾಕಿ ತೆವಳಿದರೂ ಜಿಂಕೆಯ ಹಿಂಡಿಗೆ ಅದು ತಿಳಿದು ಹೋಗುತ್ತದೆ.

ಈ ಗ್ರಹಿಕೆಯ ನರಗಳು ಆನೆಗಿಂತಲೂ ದಟ್ಟವಾಗಿ ನಮಗಿವೆಯಂತೆ. ಆದರೆ ಲೆದರ್‌ ಬೂಟಿನ ಸೋಲ್‌ಗೆ ಬೇರೆ ಯಾವ ‘ಸೋಲ್‌’ ತಾನೆ ಸಂಪರ್ಕವನ್ನು ಸಾಧಿಸೀತು ? ಕೆಲವು ಹೆಂಗಸರ ಹೈ ಹೀಲ್ಡ್‌ ಚಪ್ಪಲಿಗಳಂತೂ ಅದ್ಭುತವನ್ನೇ ಸಾಧಿಸಿ ಆಕೆಯನ್ನು ಒಂಟಿ ಬಿಂದುವಿನಲ್ಲಿ ಭೂಮಿಯ ಮೇಲೆ ನಿಲ್ಲಿಸಿರುತ್ತವೆ. ಯಃಕಶ್ಚಿತ್‌ ಆ ಬಿಂದುವನ್ನು ಮರೆತರೆ ಆ ಸುಂದರಿ ಗಗನ ಸಂಚಾರಿ! ಇನ್ನು ಈ ಬಡಪಾಯಿ ಕೀಟಗಳು ಅದು ಹೇಗೆ ಆಕೆಗೆ ಗುಟ್ಟನ್ನು ಹೇಳಿಯಾವು?

ಇಷ್ಟೊಂದು ಯೋಚಿಸಿದರೆ ನೆಲದ ಮೇಲೆ ಹೆಜ್ಜೆ ಇಡುವುದೇ ಕಷ್ಟವಾದೀತು ಎಂದಿರಾ? As Good As It Gets ಸಿನೆಮಾದಲ್ಲಿ ಲೇಖಕನ ಪಾತ್ರದಲ್ಲಿ ಜಾಕ್‌ ನಿಕಲ್‌ಸನ್‌ ಯಾರನ್ನೂ ಸ್ಪರ್ಶಿಸದಂತೆ ನ್ಯೂಯಾರ್ಕ್‌ ನಗರದ ರಸ್ತೆಗಳಲ್ಲಿ ಓಡಾಡುವ ಸಾಹಸ ಮಾಡುತ್ತಾನಲ್ಲಾ , ಹಾಗಾ? ಆ ಸಿನೆಮಾದಲ್ಲಿ ಅದು ಅವನಿಗೊಂದು ರೋಗ. ನಮಗೆ ಆ ರೋಗ ಬೇಡ. ಹೆಜ್ಜೆ ಇಡಿ ಪರವಾಗಿಲ್ಲ. ನೂರು ಇರುವೆಗಳು ಸತ್ತರೂ ಕೆಳಗಿನ ಆ ಅದ್ಭುತ ಲೋಕದಲ್ಲಿ ನಿಮ್ಮ ಪಾದಗಳೂ ಊರಲಿ. ಚಪ್ಪಲಿಯಿಲ್ಲದ ಬರಿಗಾಲಾದರೆ ಬಹಳ ಸಂತೋಷ. ನಿಮ್ಮ ಕಾಲ ಮೇಲೆಲ್ಲಾ ಹರಿದು ಮುಲುಗುಟ್ಟಿಸುತ್ತಲೇ ಕೆಲವು ಕೀಟಗಳು ನಿಮ್ಮೊಂದಿಗೆ ಸಂಭಾಷಿಸಬಹುದು. ನಿಮ್ಮ ಕಾಲಿನ ಕಿವಿಗಳು ಅದನ್ನು ‘ಕೇಳಲೂ’ ಬಹುದು. ಕೆಲವು ಪಡ್ಡೆ ಗೊದ್ದಗಳು ನಿಮ್ಮನ್ನು ಅವ್ಯಾಚ್ಯವಾಗಿ ಬಯ್ಯಬಹುದು. ಕೆಲವು ಕಚ್ಚಲೂಬಹುದು. ಕ್ಷಮಿಸಿಬಿಡಿ ಅವುಗಳನ್ನು, ಚಪ್ಪಲಿ ಹಾಕಿಕೊಂಡು ಕಿವಿ ಮುಚ್ಚಿಕೊಳ್ಳುವುದಕ್ಕೆ ಪ್ರಾಯಶ್ಚಿತ್ತವಿದೆಂದು.

ಕೆಲವು ಕೀಟಗಳು ಮೊಣಕಾಲು ಮಂಡಿಯನ್ನೇರಿ ನಿಮ್ಮ ತೊಡೆ ಹೊಟ್ಟೆಯ ಮೇಲೆಲ್ಲಾ ಪರ್ವತಾರೋಹಣ ಮಾಡಬಹುದು. ಕಲ್ಲಿನಂತೆ ಕಿವುಡಾಗಿ ನಿಂತ ನಿಮ್ಮ ‘ಕಿವಿಗಳನ್ನು’ ಹುಡುಕುವ ಸಾಹಸ ಅದಿರಬಹುದು. ಅವುಗಳಿಗೆ ಹುಡುಕಲು ಬಿಡಿ. ನಿಮ್ಮ ಕಿವಿಯನ್ನು ಹುಡುಕುವ ಈ ‘ಡಾಕ್ಟರು’ಗಳಿಗಾಗಿ ನಿಮ್ಮ ಬಟ್ಟೆಯನ್ನೂ ಕಿತ್ತೆಸೆಯಿರಿ.

ತಡೆಯಿರಿ ಮತ್ತೆ ...

ಬೆತ್ತಲಾದವರನ್ನು ‘ನಾಗರಿಕ’ ಪ್ರಪಂಚ ಬಹಿಷ್ಕರಿಸುತ್ತದಲ್ಲಾ ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X