ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳ್ಳಿಹಬ್ಬದ ಸಂಚಿಕೆ : ಪ್ರಶ್ನೆ ತಿಳಿದರೆ ತಾನೇ ಉತ್ತರ !

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಸಮುದ್ರದ ತಟದಲ್ಲಿ ಮೆಲ್ಲಗೆ ನಡೆಯುತ್ತಿದ್ದೀರಿ. ಕುಕ್ಕರಿನಲ್ಲಿ ಬೆಂದ ಆಲೂಗೆಡ್ಡೆಯಂತೆ ಬೆಳಗಿನಿಂದ ಮನೆ ಆಫೀಸುಗಳಲ್ಲಿ ಕುದಿದುಹೋದ ನಿಮ್ಮ ಆತ್ಮವನ್ನು ಸಮುದ್ರದೆಡೆಯಿಂದ ಬೀಸುವ ತಂಗಾಳಿಯು ನಿಧಾನವಾಗಿ ವಿಶ್ರಾಂತಿಗೆ ತರುತ್ತಿದೆ. ಅರೆಬರೆ ಒದ್ದೆಯಾದ ಮರಳು ನೀವು ನಡೆದಂತೆಲ್ಲಾ ನಿಮ್ಮಿರುವಿಕೆಯ ದಾಖಲೆಯಂತೆ ಹೆಜ್ಜೆ ಊರಿಸಿಕೊಂಡು ಗುರುತು ಮೂಡಿಸಿಕೊಳ್ಳುತ್ತಿವೆ. ಮುಳುಗಿದ ಸೂರ್ಯನೊಂದಿಗೇ ಸಮುದ್ರದ ಎಳೆತನವೂ ನಿಧಾನವಾಗಿ ಕರಗಿದಂತೆ ಅಲೆಗಳು ಎತ್ತರ ಎತ್ತರಕ್ಕೆ ಏರುತ್ತಿವೆ. ತಿಳಿ ನೀಲಿ ದಟ್ಟವಾಗಿ ಕಪ್ಪಾಗಿ ಸಮುದ್ರ ಪ್ರತಿ ರಾತ್ರಿಯಂತೆಯೇ ಮತ್ತೂ ನಿಗೂಢತೆಯ ಹೊದ್ದಿಕೆಯನ್ನು ಹೊದ್ದು ತನ್ನಂತೆಯೇ ಕಪ್ಪಾದ ಗಗನದೊಂದಿಗೆ ಸ್ಪರ್ಧೆಗಿಳಿದು ಹೊಯ್ದಾಡುತ್ತದೆ. ಚಂದ್ರಮನಾಗಲೇ ಬಾನಿನ ಒಡೆಯನಾಗುತ್ತಿದ್ದಾನೆ.

ಗಗನಕಾಯಗಳ ನಿರಂತರ ಚಲನೆಯಂತೆ ನೀವು ನಡೆಯುತ್ತಲೇ ಇದ್ದೀರಿ. ಈ ನಡೆತದ ಸಹಮಿಡಿತದಲ್ಲಿ ನಿದ್ರಿಸಿದ ಮಗುವಿನಂತೆ ಶಾಂತವಾದ ಮನಸ್ಸಿನ ಈ ಸ್ಥಿತಿಯನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಲು ನೀವು ತಯ್ಯಾರಿಲ್ಲ. ಜನ ನಿಬಿಡತೆಯನ್ನು ದಾಟಿ ಯಾವುದೋ ಕಾಲವಾಗಿದೆ. ಕೋಟಿ ಬಗೆಯ ಜಲಚರಗಳು ಹುದುಗಿಹೋದ ಸಮುದ್ರರಾಜನ ಭೋರ್ಗರೆತ ಒಂದನ್ನು ಬಿಟ್ಟರೆ ಮತ್ತೇನೂ ಅಲ್ಲಿ ಕೇಳುತ್ತಿಲ್ಲ . ಏರ್‌ ಷೋನ ಏರೋಪ್ಲೇನುಗಳಂತೆ ಗುಂಪುಗುಂಪಾಗಿ ಒಂದಕ್ಕೊಂದು ಸಮದೂರದಲ್ಲಿ ಒಂದೇ ವೇಗದಲ್ಲಿ ಹಾರುವ ಹಕ್ಕಿಗಳು ನಿಮ್ಮಂತೆಯೇ ಬೆಳಗಿನಿಂದಲೂ ಸೊರಗಿ ಯಾರ್ಯಾರಿಂದಲೋ ಬೈಯ್ಯಿಸಿಕೊಂಡು ಈಗ ನಿಮ್ಮಷ್ಟೇ ಹಿತವನ್ನು ಅನುಭವಿಸುತ್ತಾ ಮರಳಿಗೂಡಿಗೆ ತೆರಳುತ್ತಿವೆ. ಗುಂಪು ನಕ್ಷತ್ರಗಳಂತೆ ನಿಮ್ಮ ನೆತ್ತಿಯ ನೇರಕ್ಕೆ ಸಾಗುವ ಅವು ನಿಮ್ಮಂತೆಯೇ ಮೌನವಾಗಿವೆ. ಒಟ್ಟಿನಲ್ಲಿ, ವಾತಾವರಣ ನಿಮಗೆ ಹಿತಕರವಾಗಿದೆ. ಎಷ್ಟು ಹಣ ಸುರಿದರೂ ಸಿಗದ ಶಾಂತಿಯದು.

Difficulties in the Transfer of Information between Languagesಕಪ್ಪೆಚಿಪ್ಪುಗಳು ಅವಶೇಷವಾಗುಳಿದ ಆ ದಾರಿಯಲ್ಲಿ ರಕ್ತ ಮಾಂಸದ, ಗಾಳಿಯನ್ನು ಉಸಿರಾಡುವ ಯಾವ ಪ್ರಾಣಿಯೂ ಇಲ್ಲ ಎಂದು ನಿಮಗೆ ದೃಢವಾಗುವ ಮಹೂರ್ತದಲ್ಲಿಯೇ ಧುತ್ತನೆ ಇವರಿಬ್ಬರೂ ಎದುರಾಗುತ್ತಾರೆ. ನಿಮ್ಮ ಮನಃಶಾಂತಿಗೆ ಒಲಿದ ಗಂಧರ್ವರಂತೆ. ಎಲ್ಲೋ ಬದಿಯಿಂದ ಸಮುದ್ರದೆಡೆಗೆ ಓಡುವಂತೆ ಕಂಡರೂ ಅವರು ಓಡಿ ಬರುತ್ತಿರುವುದು ನಿಮ್ಮೆಡೆಗೇ. ನಿಮ್ಮ ಮನಃಶಾಂತಿಗೆ ಕಿಂಚಿತ್‌ ಭಂಗವಾಗುತ್ತದೆ. ಮನಸ್ಸು ಧ್ಯಾನ ಮುದ್ರೆಯಿಂದ ಎಚ್ಚರಗೊಳ್ಳುತ್ತದೆ. ನೀವು ಅವರೆಡೆಗೆ ಕಣ್ಣರಳಿಸಿ ನೋಡುತ್ತೀರಿ.

ಅವರು ನಿಮ್ಮೆಡೆಗೆ ಓಡಿ ಬಂದಂತೆಲ್ಲಾ ನಿಮಗೆ ಅವರ ಆಕೃತಿ ಸ್ಪಷ್ಟವಾಗುತ್ತದೆ. ಆ ಹೆಂಗಸು ಐದು ಅಡಿಯೂ ಇಲ್ಲ ಎಂದು ನಿಮ್ಮ ಇಂಜನಿಯರ್‌ ಮೆದುಳು ಹೇಳುತ್ತದೆ. ಆಕೆ ಹಾಕಿಕೊಂಡಿದ್ದ ಬಿಗಿದಾದ ಸ್ವೆಟರ್‌ ಕತ್ತಲೆಯಲ್ಲಿ ದೂರದಿಂದ ಕಪ್ಪಾಗಿ ಕಂಡದ್ದು ಈಗ ಅರೆಮರೆ ದೃಷ್ಟಿಯಲ್ಲೂ ಸ್ಪಷ್ಟವಾಗಿ ಹಸುರಾಗಿ ಕಾಣುತ್ತಿದೆ. ಬಾತುಕೋಳಿಯ ಬೆನ್ನಿನ ಮೇಲಿನ ಪುಕ್ಕದಷ್ಟು ಬೆಳ್ಳಗಾದ ಆಕೆಯ ತಲೆಗೂದಲು, ಓಡುವಾಗ ಕುಂಟುವ ಕಾಲು ನಿಮಗೆ ಸ್ಪಷ್ಟವಾಗಿ ಆಕೆಯ ವೃದ್ಧಾಪ್ಯದ ವಯಸ್ಸನ್ನು ಸಾರಿ ಹೇಳುತ್ತಿವೆ. ನೀವು ಬಹಳ ಬುದ್ಧಿವಂತರು. ಅವೆಲ್ಲವನ್ನೂ ಬಹಳ ಖಚಿತತೆಯಿಂದಲೇ ಊಹೆ ಮಾಡಬಲ್ಲಿರಿ. ಆಕೆಯಾಂದಿಗೆ ಸುಮಾರು ಐದು-ಆರು ವರ್ಷಗಳ ಒಂದು ಸಣ್ಣ ಹುಡುಗಿ ಇದೆ. ಅಜ್ಜಿಗೇ ಸಣ್ಣ ಕಣ್ಣು ಎಂದರೆ ಈಕೆ ಅಜ್ಜಿಯ ಮೊಮ್ಮಗಳಿಗೆ, ಅವಳು ಮೊಮ್ಮಗಳಿರಬಹುದು ಎಂದು ನಿಮ್ಮ ಊಹೆ, ಇನ್ನೂ ಸಣ್ಣ ಕಣ್ಣು ! ಎಳೇ ಹುಣಸೇ ಬಿತ್ತದಷ್ಟು ಸಣ್ಣ. ಚೀಣೀ ಜನ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನೀವಿರುವ ಈ ವಿದೇಶೀ ನೆಲದಲ್ಲಿ ನಿಮ್ಮಂತೆಯೇ ವಿದೇಶಿಗರಾಗಿ ಅವರೂ ಇದ್ದಾರೆ, ನಿಮಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ.

ಬೆಚ್ಚಿ ಬೀಳುವಂತೆ ನಿಮ್ಮ ಮುಂದೆ ನಿಂತಿದ್ದಾರೆ ಇವರು. ಭಯ ಗಾಬರಿ ಆತಂಕಗಳಿಂದ ಅಜ್ಜಿಯ ಮುಖ ಕಂಗೆಟ್ಟು ಹೋಗಿದೆ. ಚಿಕ್ಕ ಹುಡುಗಿ ಬಾಯ್ತೆರೆದು ಜೋರಾಗಿ ಅಳುತ್ತಿದೆ. ಪ್ರಶ್ನಾರ್ಥಕವಾಗಿ ನೀವು ಅವರ ಮುಖ ನೋಡುತ್ತೀರಿ. ನಿಮ್ಮ ಮನಸ್ಸೀಗ ಭಾವ ಧ್ಯಾನ ಭಕ್ತಿ ಎಲ್ಲದರಿಂದಲೂ ಹೊರ ಬಂದು ಕಾಯಿಕಳ್ಳನಿಗಾಗಿ ಮೈಯೆಲ್ಲಾ ಕಣ್ಣಾಗಿ ರಾತ್ರಿ ಕಾವಲು ಕುಳಿತ ತೋಟದೊಡೆಯನಂತೆ ಅಜ್ಜಿಯ ಪ್ರಶ್ನೆಗಾಗಿ ಕಾಯುತ್ತಿದೆ.

ನಿರೀಕ್ಷಿಸಿದಂತೆಯೇ, ತನ್ನ ಅದುರುವ ತುಟಿಗಳಿಂದ ಗಾಬರಿ ಬೀಳುವ ದನಿಯಲ್ಲಿ ವಿಶ್ವದ ಅತಂತ್ರತೆಯನ್ನೆಲ್ಲಾ ತನ್ನ ಶಬ್ದಗಳಲ್ಲಿ ತುಂಬಿಕೊಂಡ ಅಜ್ಜಿ ನಿಮ್ಮನ್ನು ಕೇಳುತ್ತಿದೆ. ಹಠದಲ್ಲಿದ್ದ ಮೊಮ್ಮಗಳು ತೆರೆದ ಬಾಯನ್ನು ತೆರೆದಂತೆಯೇ ಇಟ್ಟು ನಿಮ್ಮ ಬಾಯಿಂದ ಹೊರಡುವ ಅಮೃತವಾಕ್ಯಕ್ಕಾಗಿ, ಅಚಾನಕ್‌ ಆಗಿ ಎದುರುಬಂದ ದೇವರ ಮಾತಿನ ವರಕ್ಕಾಗಿ ಉಸಿರೂ ಆಡದಂತೆ ಸ್ತಬ್ಧವಾಗಿದೆ. ಅಷ್ಟು ಕತ್ತಲೆಯಲ್ಲೂ ಹೊಳೆಯುವ ನಾಲ್ಕು ಹುಣಸೇಬಿತ್ತದ ಕಣ್ಣುಗಳು ಒತ್ತಡದಲ್ಲಿ ಮತ್ತೂ ಸಣ್ಣಗಾಗಿ ನಿಮ್ಮ ಉತ್ತರಕ್ಕಾಗಿಯೇ ಕಾಯುತ್ತಿವೆ.

ಉತ್ತರ ಏನು ಬಂತು ಮಣ್ಣು. ಅವರು ಏನು ಕೇಳುತ್ತಿದ್ದಾರೆ ಎಂದೇ ನಿಮಗೆ ಅರ್ಥವಾಗುವುದಿಲ್ಲ. ಮಂಗಳಾರತಿಗೆ ಜಾಂಗಟೆ ಹೊಡೆದಂತೆ ಕೇಳುವ ಅದ್ಯಾವ ಭಾಷೆ ಎಂದೇ ತಿಳಿಯುವುದಿಲ್ಲ. ಚೈನೀಸ್‌, ಜಪಾನೀಸ್‌, ಕೊರಿಯನ್‌, ವಿಯಾಟ್ನಾಮೀಸ್‌...ಯಾವುದು? ನಿಮ್ಮ ಬುದ್ಧಿವಂತಿಕೆಯನ್ನೆಲ್ಲಾ ಉಪಯೋಗಿಸುತ್ತೀರಿ. ಉರುಟು ಮೂಗಿನ, ಸಣ್ಣ ಕಣ್ಣ, ದುಂಡುಮುಖಗಳನ್ನು ಅಳೆದೇ ಚೀನೀಯರು ಯಾರು, ಜಪಾನೀಯರು ಯಾರು ಎಂದು ಗುರುತಿಸಬಲ್ಲೆ ಎನ್ನುವ ನಿಮ್ಮ ಅಹಂಕಾರ ಟುಸ್ಸೆಂದ ಪಟಾಕಿಯಂತೆಯೇ ಮುದುಡಿ ಕುಳಿತು ನಗೆಪಾಟಲಾಗುತ್ತದೆ. ಏನು ಸಹಾಯ ಬೇಕು ನನ್ನಿಂದ ಎಂದು ಇಂಗ್ಲಿಷ್‌ನಲ್ಲಿ ಕೇಳುತ್ತೀರ. ನಿಮ್ಮೆಡೆಗೇ ನೋಡುತ್ತಾ ಅಜ್ಜಿ ಮತ್ತೆ ಜಾಂಗಟೆಯ ಶಬ್ದ ಮಾಡುತ್ತದೆ. ನಿಮ್ಮಿಂದ ಸಹಾಯ ದೊರೆಯುವುದಿಲ್ಲ ಎಂದು ಅಂದಾಜು ಬಂದೊಡನೆಯೇ ಪುಟ್ಟಹುಡುಗಿಯ ಬಾಯಿಗೆ ಮತ್ತೆ ಕರೆಂಟು ಹರಿಯುತ್ತದೆ. ಆ ಕ್ಷಣಕ್ಕೆ ಆ ಹುಡುಗಿಯ ಅಳು ಬಹಳ ವಿಕಾರವಾಗಿ ಕೇಳುತ್ತದೆ.

ನಿಮಗೆ ಅರ್ಥ ಮಾಡಿಸಲೆಂದು ಆ ಅಜ್ಜಿ ಬೇರೆ ರೀತಿಯಲ್ಲಿ ಬೇರೆ ಬೇರೆ ಶಬ್ದಗಳಲ್ಲಿ ಏನೇನೋ ಕೇಳುತ್ತದೆ. ಕೇಳಿದ್ದನ್ನೇ ಕೇಳುತ್ತದೆ. ಕೈ ಮೈ ಕಣ್ಣುಗಳಲ್ಲೆಲ್ಲಾ ಏನೇನೋ ಸನ್ನೆ ಮಾಡಿ ತನ್ನ ಪ್ರಶ್ನೆಯನ್ನು ನಿಮ್ಮ ಮೆದುಳಿಗೆ ತುಂಬಲು ನೋಡುತ್ತದೆ. ಉಹುಃ, ನಿಮಗೆ ಮಹಾಮಂಗಳಾರತಿಯ ಜಾಂಗಟೆಯಲ್ಲದೆ ಮತ್ತೇನೂ ಕೇಳುವುದಿಲ್ಲ. ಮತ್ತೆ ಮತ್ತೆ ನೀವು ಇಂಗ್ಲಿಷ್‌ನಲ್ಲಿ ಕೇಳುತ್ತೀರ. ನಿಮ್ಮ ಮಾತುಗಳು ಶಂಖಧ್ವನಿಯಂತೆ ಆಕೆಯ ಕಿವಿಯಲ್ಲಿ ನರಳುತ್ತವೆ. ಅಸಹಾಯಕರಾಗಿ ಆ ಚಿಕ್ಕ ಹುಡುಗಿಯೆಡೆಗೆ ನೋಡುತ್ತೀರಾ. ಆಕೆಯಂತೆಯೇ ಬಾಯಿತೆರೆದು ಅಳೋಣ ಎಂದು ಅನ್ನಿಸುತ್ತದೆ ನಿಮಗೆ.

ಮಗಳ ಬಾಣಂತನಕ್ಕೆ ಬಂದಿರಬಹುದು. ಮಗನನ್ನು ನೋಡಿ ಹೋಗಲು ಬಂದಿರಬಹುದು. ತಂಗಿಯ ಮನೆಗೆ ಬಂದಿರಬಹುದು.... ಏನೇನೋ ತನ್ನದೇ ಕಾರಣಗಳಿಗೆ ಬಂದಿರಬಹುದು. ಗೋಪುರದಂತಹ ಚೀನೀ ಮನೆಯನ್ನು ಬಿಟ್ಟು ಇಲ್ಲಿ ಮಗನ ಏಳನೇ ಫ್ಲೋರಿನ ಅಪಾರ್ಟ್‌ಮೆಂಟ್‌ಲ್ಲಿ ಬೆಳಗಿನಿಂದ ಸೆಖೆಯಲ್ಲಿ ಬೆಂದು ಈಗ ಮೊಮ್ಮಗಳೊಂದಿಗೆ ಇಲ್ಲಿಗೆ ಬಂದು ಕಳೆದುಹೋಗಿದ್ದಾಳಾ? ಏನು ಹೇಳುವುದು? ಎಲ್ಲಿಗೆ ಕರೆದುಕೊಂಡು ಹೋಗುವುದು? ಅವಳ ಸಂಕಷ್ಟವೇನೆಂದು ತಿಳಿಯದೇ ಪರಿಹಾರ ಎಲ್ಲಿಂದ? ಸಹಾಯಕ್ಕಾಗಿ ಸುತ್ತ ಮುತ್ತ ನೋಡುತ್ತೀರಿ. ಕತ್ತಲು ಮತ್ತು ಸಮುದ್ರದ ಭೋರ್ಗರೆತ ಬಿಟ್ಟು ಮತ್ತೇನೂ ಇಲ್ಲ ಅಲ್ಲಿ. ಈ ಅಜ್ಜಿಯಂತೆಯೇ ಸಣ್ಣ ಕಣ್ಣಿನ ನಿಮ್ಮ ಚೀನೀ ಸಹೋದ್ಯೋಗಿಯನ್ನು ಕರೆಯಲು ಸೆಲ್‌ಫೋನ್‌ ಹುಡುಕುತ್ತೀರಿ. ಎಲ್ಲಿದೆ ಅದೂ? ಮನಃಶಾಂತಿಗಾಗಿ ನೀವು ಅದನ್ನೂ ಮನೆಯಲ್ಲೇ ಬಿಟ್ಟು ಬಂದಿದ್ದೀರಲ್ಲಾ ? ಅಜ್ಜಿ ಏನನ್ನೂ ಮಾತನಾಡುವುದಿಲ್ಲ. ಮೊಮ್ಮಗಳನ್ನು ಎಳೆದುಕೊಂಡು ದುಡುದುಡು ಕತ್ತಲೆಯಲ್ಲಿ ಕಣ್ಮರೆಯಾಗುತ್ತದೆ. ಬಂದಷ್ಟೇ ರೀತಿಯಲ್ಲಿ ನಿಗೂಢವಾಗಿ, ತಾನು ಕೇಳಿದ ಪ್ರಶ್ನೆಯಷ್ಟೇ ಗಾಢವಾಗಿ, ಗುಪ್ತವಾಗಿ, ಅರ್ಥವೇ ಆಗದಂತೆ.

ಅಸಹಾಯಕರಾಗಿ ನಿಲ್ಲುತ್ತೀರಿ ನೀವು. ಕಾಲ ಕೆಳಗಿನ ಕಪ್ಪೆಚಿಪ್ಪಿನಷ್ಟೇ ನಿರ್ಜೀವಿಯಾಗುತ್ತೀರಿ. ಅರ್ಥವಾಗದ ಪ್ರಶ್ನೆಯಾಂದು, ಅರ್ಥವಾಗದ ಭಾಷೆಯಾಂದು, ಅರ್ಥವಾಗದ ಅಸಹಾಯಕತೆಯಾಂದು, ಅರ್ಥವಾಗದ ಕಾರಣದ ಮಗುವಿನ ಅಳುವೊಂದು ನಿಮ್ಮನ್ನು ಸಂಪೂರ್ಣವಾಗಿ ಭಾದಿಸುತ್ತದೆ. ಅರ್ಥವಾಗದ ರೀತಿಯಲ್ಲಿ ಪರಕೀಯರಾಗುತ್ತೀರಿ.

ನಿಮ್ಮ ಮನಸ್ಸು ಮತ್ತೆ ಶಾಂತಿಯನ್ನು ಕಳೆದುಕೊಳ್ಳುತ್ತದೆ. ತರ್ಕವಿಲ್ಲದೇ, ಭಾಷೆಯಿಲ್ಲದೇ, ಅರ್ಥವಿಲ್ಲದೇ ಶಾಂತಿಯನ್ನು ಪಡೆದುಕೊಳ್ಳುವ ಕಳೆದುಕೊಳ್ಳುವ ನಿಮ್ಮದೇ ಮನಸ್ಸಿನ ವ್ಯವಹಾರವೇ ನಿಮಗೆ ಅರ್ಥವಾಗುವುದಿಲ್ಲ. ಇನ್ನು ಚೀನೀ ಅಜ್ಜಿಯ ಪ್ರಶ್ನೆ ಎಲ್ಲಿಂದ ಬಂತು ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X