• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಯದು ಮೊಳೆತಿತ್ತು ವರುಷಗಳ ಹಿಂದೆ, ಕನ್ಯೆಯ ಎದೆಯಲ್ಲಿ ಬೆಳಗಿನಿಬ್ಬನಿಯಂತೆ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
Dattathri_M_R@yahoo.com

ಆಧುನಿಕ ಬದುಕು ಬಹಳ ಸಂಕೀರ್ಣವಾದುದು. ಹೊಟ್ಟೆ ಮತ್ತು ಗೇಣು ಬಟ್ಟೆಯನ್ನು ಮೀರಿ ‘ಬೇಕು’ಗಳ ಸಾವಿರ ಚಾಚುಹಸ್ತಗಳು ನಮ್ಮ ಈ ಜೀವನ. ಅಗತ್ಯಗಳು ಇಷ್ಟಿರುವಾಗ, ದೈನಂದಿನ ಕಾರ್ಯ ಚಟುವಟಿಕೆಗಳು ಈ ಮುಗಿಯದ ಅಗತ್ಯಗಳ ಬೆನ್ನು ಹತ್ತುವುದರಲ್ಲೇ ಸೋತು ಸೊರಗುವಾಗ ಬಹಳಷ್ಟು ಜೀವಗಳಲ್ಲಿ ಸಹಜ ನಗು ಎನ್ನುವುದು ಮುಖದಿಂದ ಹೆಚ್ಚುಕಡಿಮೆ ಶಾಶ್ವತವಾಗಿಯೇ ಅಳಿಸಿ ಹೋಗಿರುತ್ತದೆ. ಬೇಸಿಗೆಯ ನಡು ಮಧ್ಯಾಹ್ನದಂತೆ ಎದೆ ಬದುಕಿನ ಧಗೆಯಲ್ಲಿ ಬೆಂದು ಹೋಗಿರುತ್ತದೆ. ಇದು ಬೇಕೇ ಬೇಡವೇ, ಹೀಗಾಗಬೇಕೆ ಇಲ್ಲವೇ ಅನ್ನುವುದೆಲ್ಲಾ ಬೇರೆಯೇ ವಿಚಾರ. ಬಹಳಷ್ಟು ಸಂದರ್ಭಗಳಲ್ಲಿ ಪರಿಸ್ಥಿತಿಯ ಕಾಲದ ಮತ್ತು ಸಮಾಜದ ದಾಸರು ನಾವು. ಮಂದೆಯಲ್ಲಿ ಒಂದಾಗಿದ್ದರೇ ನೋವು ಕಡಿಮೆ ನಮಗೆ. ಕಡಿಮೆಯಾಗದಿದ್ದರೂ ಕಡೆಯ ಪಕ್ಷ ಬೇರೆಯವರಿಗೆ ಆದದ್ದೇ ನನಗೂ ಆಗುತ್ತದೆ ಅಷ್ಟೆ ಎನ್ನುವ ಸಮೂಹದೊಂದಿಗಿನ ಬಾಳು ಸೃಷ್ಟಿಸುವ ಸಾಂತ್ವನವಿರುತ್ತದೆ. ನಮಗೆ ನಾವೇ ಸೃಷ್ಟಿಸಿಕೊಂಡ ಈ ರೀತಿಯ ಬಹುರೂಪಿಗಳಾದ ಧೈರ್ಯ, ಸ್ಥೈರ್ಯ ತೃಪ್ತಿ ಬಂಧನ ಬಿಡುಗಡೆ ನೋವು ನಲಿವು ಟೆನ್ಷನ್‌, ಡಿಪ್ರೆಷನ್‌ಗಳ ಚಿಪ್ಪುಗಳ ಮೇಲಿನ ಚಿಪ್ಪುಗಳ ಆಳದಲ್ಲಿ ಕಪ್ಪೆಚಿಪ್ಪಿನ ಹುಳುವಾಗಿ ಪ್ರಕೃತಿ ಕೊಟ್ಟ ಈ ಒಂದೇ ಒಂದು ಜೀವನವನ್ನು ಶಕ್ತಿಮೀರಿ ಎಳೆಯುವಾಗ ನಗೆ ಮಾಯವಾಗುವುದು ತೀರಾ ಸಹಜ.

ಆದರೂ, ಮಾಯಾವಿ ಭಗವಂತ ತೀರಾ ಅನ್ಯಾಯವಾಗಲು ಬಿಡುವುದಿಲ್ಲ. ಯಾವುದೋ ಒಂದೊಂದು ಅಮೃತ ಘಳಿಗೆಯಲ್ಲಿ ಮನಸ್ಸು ಎಲ್ಲಾ ಪದರಗಳನ್ನು ಸೀಳಿಕೊಂಡು ದಿಢೀರನೆ ವಿದ್ಯುತ್‌ ಸಂಚಾರವಾದಂತೆ ಜಾಗೃತವಾಗಿಬಿಡುತ್ತದೆ. ಆ ಕ್ಷಣದಲ್ಲಿ ಎಲ್ಲವನ್ನೂ ಮರೆತು ಆನಂದವನ್ನು ಪಡೆಯುತ್ತದೆ. ನಿರಾಯಾಸವಾಗಿ ತನ್ನೆಲ್ಲಾ ಚಿಪ್ಪುಗಳನ್ನು ಕೊಡವಿಕೊಂಡು ಕಾಡಿನಲ್ಲಿ ಓಡುವ ಚಿರತೆಯಂತೆ ವೇಗವನ್ನು ಪಡೆದುಕೊಳ್ಳುತ್ತದೆ. ಆಕಾಶದೆಡೆಗೆ ತಲೆ ಎತ್ತಿದೊಡನೆಯೇ ಸುಂದರವಾದ ಕಾಮನಬಿಲ್ಲು ಕಂಡರೆ, ಮುಸ್ಸಂಜೆಯ ಹಳ್ಳಿಯ ರಸ್ತೆಯಲ್ಲಿ ದಾಪುಗಾಲು ಹಾಕುತ್ತಿದ್ದಾಗ ಬಳಿಯಲ್ಲೇ ಸರಕ್ಕನೆ ಒಂದು ಜಿಂಕೆಮರಿ ಓಡಿಹೋದರೆ, ನಯಾಗರವೋ ಅಬ್ಬಿಯೋ ಜೋಗದಂತದ್ದೋ ಜಲಪಾತದ ಮುಂದೆ ನಿಂತರೆ, ಒಳ್ಳೆಯ ಪೈಂಟಿಂಗ್‌ನ್ನು ನೋಡಿದರೆ, ಒಳ್ಳೆಯ ಹಾಡನ್ನು ಕೇಳಿದರೆ, ನಿಮ್ಮನ್ನು ನೋಡಿ ಮಗುವೊಂದು ಮುಗುಳುನಕ್ಕರೆ ....

Where are you looking at? you are the divineಮಗುವಿನ ಮುಗ್ಧ ನೋಟಕ್ಕೆ ಸ್ಪರ್ಷಕ್ಕೆ ನಗುವಿಗೆ ಸೋಲದ ಹೃದಯವಿಲ್ಲ. ದೇಹ ಮನಸ್ಸುಗಳು ಎಷ್ಟೇ ಒತ್ತಡದಿಂದ ಬಾಗಿದ್ದರೂ ಮಗುವೊಂದು ನಿಮ್ಮೊಡನೆ ನಕ್ಕರೆ ಆ ಕ್ಷಣಕ್ಕೆ ಹಗುರಾಗಿ ಹೋಗುತ್ತೀರಿ. ಎಂತಹಾ ರಕ್ಕಸನನ್ನೂ ಕ್ಷಣಾರ್ಧದಲ್ಲಿ ಮನುಷ್ಯನನ್ನಾಗಿಸಬಲ್ಲ ದೇವಸ್ವರೂಪಿಗಳು ಮಕ್ಕಳು. ಹೌದು, ದೇವಲೋಕದವೇ ಇವು. ಯಾಕೆಂದರೆ ಈ ಲೋಕದ ಯಾವ ಗುಣಲಕ್ಷಣಗಳಿಗೂ ಯಾವ ವ್ಯವಹಾರಗಳಿಗೂ ಒಳಪಟ್ಟಂತೆ ಕಾಣುವುದಿಲ್ಲ ಇವು. ಇವುಗಳ ನಡೆ ಬೇರೆ, ನುಡಿ ಬೇರೆ, ಭಾವಲೋಕವೆ ಬೇರೆಬೇರೆ. ಇಂತಹ ಮಾಯಾವಿಗಳ ಸಾನಿಧ್ಯದಲ್ಲಿ ಲೋಕಸಂಕಟದಿಂದ ಕುಂದಿಹೋದ ನಾವೂ ಸ್ಪರ್ಷಮಣಿಯನ್ನು ತಗುಲಿಸಿಕೊಂಡ ಲೋಹದಂತೆ ಚಿನ್ನವಾಗುತ್ತೇವೆ.

ಬೆರಗು ಎಲ್ಲರಿಗೂ ಇದ್ದದ್ದೇ. ಆದರೆ ಭಾವಜೀವಿಗಳು ಹೆಚ್ಚು ನರಳುತ್ತಾರೆ. ಮಗುವಿನ ನಗುವನ್ನು ಕಂಡು ಸುಖಿಸದ ಜೀವಿಗಳಿಲ್ಲ. ಆದರೆ ಕವಿಗಳು ಮಾತ್ರ ಈ ಅಂತಃಕರಣದ ಮಾತುಗಳಿಗೆ ಹೊರಲೋಕದ ಪದಗಳನ್ನು ತೊಡಿಸಿ ಅಲಂಕರಿಸಿ ಸುಖಿಸುತ್ತಾರೆ. ಆಕರ್ಷಣೆ, ದೇಹಗಳ ಸಂಯೋಗ ಮತ್ತು ಇಂದ್ರಿಯಗಳ ಉತ್ಕರ್ಷದ ಫಲವಾಗಿ ಈ ಲೋಕಕ್ಕಿಳಿದ ಮಗು ತಾನಿನ್ನೂ ಮರೆತಿರದ ತನ್ನ ದೇವಲೋಕದ ಚಹರೆಯಿಂದ ನಮ್ಮ ಮನಸ್ಸನ್ನು ಸೂರೆಗೊಳ್ಳುವ ಪರಿಯನ್ನು ಹಾಡಿನಲ್ಲಿ ಹಿಡಿದಿಡಬಲ್ಲ ಅದೃಷ್ಟವಂತರು ಈ ಕವಿಗಳು.

ರವೀಂದ್ರನಾಥ ಟಾಗೋರರ ‘ಗೀತಾಂಜಲಿ’ಯಲ್ಲಿನ ಒಂದು ಪದ್ಯ ಮಗುವಿನ ಸೌಂದರ್ಯವನ್ನು ಹಿಡಿದಿಡುವ ಪರಿಯಲ್ಲಿ ಮತ್ಯಾವ ಕವಿತೆಯನ್ನೂ ನಾನು ಓದಿದಂತಿಲ್ಲ. ‘ಟಾಗೋರರ ಈ ಕವಿತೆಗಳನ್ನು ಓದುತ್ತಿದ್ದಂತೆಯೇ ನನಗರಿವಿಲ್ಲದಂತೆಯೇ ಭಾವೋತ್ಕರ್ಷದಿಂದ ಕಣ್ಣುಗಳು ಹನಿಗೂಡುತ್ತಿದ್ದವು, ಯಾರಿಗೂ ಕಾಣದಂತೆ ಒರೆಸಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ಟಾಗೋರರ ಗೀತಾಂಜಲಿ ಇಂಗ್ಲಿಷ್‌ ಅನುವಾದಕ್ಕೆ ಮುನ್ನುಡಿಯನ್ನು ಬರೆದಿರುವ ಹೆಸರಾಂತ ಇಂಗ್ಲಿಷ್‌ ಕವಿ ಡಬ್ಲ್ಯೂ. ಬಿ. ಯೇಟ್ಸ್‌. ಮಗುವಿನ ಸೌಂದರ್ಯವನ್ನು ಚಿತ್ರಿಸುವ ಟಾಗೋರರ ಈ ಕವಿತೆ ಕೂಡಾ ಅಂತಹ ಆಳವಾದ ಭಾವಲೋಕದಿಂದ ಹುಟ್ಟಿದ್ದೇ.

ಎಳೆಕಂದನ ಅರಳು
ತಿಳಿಹಾಲ ಕಣ್ಗಳಿಗೆ ಸಿಹಿಯ ಮುತ್ತನ್ನಿತ್ತು
ಚುಕ್ಕಿಗಳ ಚಂದ್ರಮನ ತೆರೆದ ಲೋಕಕ್ಕಿಳಿಸಿದ ಈ ನಿದ್ರೆ
ಅದೆಲ್ಲಿತ್ತು ಈವರೆಗೆ ಗೊತ್ತೆ ನಿನಗೆ?

ಯಕ್ಷಲೋಕದ ದಟ್ಟ ಹಸಿರುಬನಗಳ ಮೇಲೆ
ಮಿಂಚುಹುಳಗಳ ನೆಳಲುಬೆಳಕಿನಾಟಕೆ ನಕ್ಕು
ಬಲುಹಿತದ ಮಂದಾನಿಲಕೆ ದುಂಡು ಮುಖವಿಕ್ಕು
ಹೂ ಮೊಗ್ಗುಗಳ ನಗುವಿನ ಅಲೆಅಲೆ
ಕಂದಮ್ಮನ ಕಣ್ಣಿನೊಳಗಿನ ಈ ನಿದ್ರೆಯ ಬಲೆ.

ಎಳೆಕಂದನ ಜೇನು
ತುಟಿಗಳಲಿ ಅರಳಿದ
ಮಕರಂದಕೂ ಸವಿ ಈ ನಗು
ಅದೆಲ್ಲಿತ್ತು ಈವರೆಗೆ ಗೊತ್ತೆ ನಿನಗೆ?

ಬಾನಿನಷ್ಟಗಲಕ್ಕೂ ನಗುಮುಖವೆ ತಾನಾದ
ಪೂರ್ಣಚಂದ್ರನ ಎದೆಯಿಂದ ಹೊರಟೊಂದು ಕಿರಣ
ಹುರುಪಿನಲಿ ತೇಲುತಿಹ ಬೆಳ್ಳಿಮೋಡಕೆ ತಗುಲಿ
ಕೋರೈಸುತಿದೆ ತಾನಾಗಿ ಬೆಳ್ಮುಗಿಲಿನಲಿ ಆಭರಣ
ಜಾರಿತಲ್ಲಿಂದ ಅದು ಕಂದನ ತುಟಿಯ ಹೊಕ್ಕಿರಬಾರದೇಕೆ?
ಮಗುವಿನೆಳೆ ಅಧರಕ್ಕಿಂತಾ ಬೇಕೇ ಬೇರೆ ತಾಣ ಅದಕೆ?

ಎಳೆಕಂದನ ಬೆಣ್ಣೆ ಮೈಯಲ್ಲಿ
ಅಡಗಿರುವ ಮಾಧುರ್ಯ
ಮೃದುವಲ್ಲಿ ಮೃದುವದು ಹೂವಿನೆಸಳು
ಹೀಗಿರಲು ಸಾಧ್ಯವೇ! ಮನಸು ಬೆರಗಾಗುತಿದೆ
ಅದೆಲ್ಲಿತ್ತು ಈವರೆಗೆ ಗೊತ್ತೆ ನಿನಗೆ?

ಪ್ರೀತಿಯದು ಮೊಳೆತಿತ್ತು ವರುಷಗಳ ಹಿಂದೆ
ಕನ್ಯೆಯ ಎದೆಯಲ್ಲಿ ಬೆಳಗಿನಿಬ್ಬನಿಯಂತೆ
ಪ್ರೀತಿಯದೇ ಹರಿದಿದೆ ಅವಳ ಕಂದಮ್ಮನಿಗೆ ಇಂದು
ಎಳೆಮೈಯ ರೂಪದಲಿ ಅದೇ ಬಿಂದು.

ತರುಣಿಯ ಎದೆಯಲ್ಲಿ ಬೆಳೆದ ಪ್ರೀತಿಯ ವ್ಯಕ್ತರೂಪವೇ ಮಗುವಿನ ಎಳಸುತನ ಎನ್ನುವ ಒಂದು ಹೋಲಿಕೆ ಟಾಗೋರರ ಈ ಕವಿತೆಯನ್ನು ಸಾಧಾರಣ ಅಲಂಕಾರಗಳ ಪದ್ಯದಿಂದ ಒಂದು ಉದಾತ್ತತೆಗೆ ಮೇಲೆತ್ತಿಬಿಡುತ್ತದೆ. ಮಗುವಿನ ನಲ್ಮೆಯನ್ನು ನಾವು ಯಾವ ಅಲಂಕಾರದಿಂದಲೂ ಹಿಡಿದಿಡಲಾರೆವು. ಯಾವ ಪದಪುಂಜಗಳಿಂದಲೂ ಅಳೆದಿಡಲಾರೆವು. ಎಳೆಯ ಜೀವಗಳೆಲ್ಲಾ ಹೀಗೇನೇ. ಹಸುವಿನ ಕರುವಿನ ಕಣ್ಣಿನ ಹೊಳಪನ್ನು ನೋಡಿದ್ದೀರಾ? ಅದು ತನ್ನ ಅಮ್ಮನ ಸುತ್ತಾ ನೆಗೆದಾಡುವ ಪರಿಯನ್ನು ಕಂಡಿದ್ದೀರಾ? ಈಗತಾನೆ ತೇಲುವುದನ್ನು ಕಲಿಯಲು ನೀರಿಗಿಳಿದ ಬಾತುಕೋಳಿಯ ಮರಿಯನ್ನು ಗಮನಿಸಿದ್ದೀರಾ? ಜಿಂಕೆಯ ಮರಿ, ಮೊಲದ ಮರಿ ಕಡೆಗೆ ನಾವು ಕುರೂಪದ ಸ್ವರೂಪವೆಂದು ಮೂದಲಿಸುವ ಕತ್ತೆಯ ಎಳೆಯ ಕಂದಮ್ಮ ಕೂಡ ಪ್ರಕೃತಿಯ ಸೌಂದರ್ಯ ಮತ್ತು ಮುಗ್ಧತೆಗಳನ್ನು ಹೇಗೆ ಎರಕ ಹುಯ್ಯಿಸಿಕೊಂಡಿರುತ್ತವೆ ಎಂದರೆ ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸರಿಯಲು ಸಾಧ್ಯವೇ ಆಗುವುದಿಲ್ಲ.

ಮಲಗಿದ್ದಲಿಂದಲೇ ನಿದ್ರೆಯಲ್ಲಿ ನಗುವ ಮಗು ಹೊಟ್ಟೆಯ ಮೇಲೆ ಈಜುವುದನ್ನು ಕಲಿಯುತ್ತದೆ, ಅಂಬೆಗಾಲಿಡುತ್ತದೆ, ಅಮ್ಮನ ಮಂಡಿ ಹಿಡಿದು ನಿಲ್ಲುತ್ತದೆ, ತೊಡರು ಹೆಜ್ಜೆಗಳನ್ನಿಡುತ್ತದೆ, ಮೂಡಿದ ಎರಡು ಹಲ್ಲುಗಳನ್ನು ತೋರಿಸಿಕೊಂಡು ನಗುತ್ತದೆ, ಪಲ್ಟಿ ಹೊಡೆಯುತ್ತದೆ, ಗಿರಿಗಿಟ್ಟಲೆಯಾಡುತ್ತದೆ, ತೊದಲು ತೊದಲು ಮಾತುಗಳಲ್ಲಿ ಮನೆಯ ಮೌನವನ್ನು ಕಲಕುತ್ತದೆ. ಹಿತ್ತಲು ಬಾಗಿಲಿನಿಂದ ಮುಂಬಾಗಿಲ ತನಕ ಬಿರುಗಾಳಿಯಂತೆ ಓಡಾಡುತ್ತಲೇ ದೊಡ್ಡದಾಗಿಬಿಡುತ್ತದೆ.

ಇದ್ದೀತು ಏಸುದಿನ, ಈ ಮಧುರ ನವನೀತ
ಮುಗ್ಧಮನಸು!
ಬಾಳ ಬಿಸಿಗೆ ಕರಗಿ ನೀರಾದೀತು, ಈ
ಮಧುರ ಕನಸು

ಎನ್ನುತ್ತಾರೆ ಕವಿ ಜಿ.ಎಸ್‌.ಶಿವರುದ್ರಪ್ಪನವರು. ಹಾಗೆ ಮಗು ಈ ಲೋಕದ ಬಿಸಿಗೆ ಚೂರು ಚೂರೇ ಕರಗಿಹೋಗುತ್ತದೆ. ಕ್ರಮೇಣ ಮಗು ಒಂದು ಮಾಯವಾಗಿ ಸಮಾಜ ಕಟ್ಟಿದ ಮಣ್ಣಿನ ಗೊಂಬೆಯಾಂದು ಆ ಜಾಗದಲ್ಲಿರುತ್ತದೆ.

ಮಗು ಸಂಪೂರ್ಣ ಕರಗಿ ಹೋಗುತ್ತದೆಯೇ?

ಇಲ್ಲ. ಮೋಂಬತ್ತಿಯ ದೀಪದ ಕೊನೆಯಲ್ಲಿ ಉಳಿಯುವ ಕರಕಲಿನ ಬತ್ತಿಯಂತೆ ನಮ್ಮ ನಿಮ್ಮಲ್ಲಿ ಎಲ್ಲೋ ಒಂದು ಕಡೆ ಆ ಮಗು ಅಡಗಿರುತ್ತದೆ, ಸಣ್ಣದಾಗಿ. ಎಂದೋ ಬಿದ್ದ ಕನಸಿನ ಮಸುಕು ನೆನಪಾಗಿ. ದೇವಲೋಕದೊಂದಿಗೆ ನಮ್ಮನ್ನು ಕೂಡಿಸುವ ಕಂಡೂಕಾಣದ ಸಣ್ಣನೆಯ ದಾರವಾಗಿ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more