• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೋಗವೋ? ವರವೋ?

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಆಲಿವರ್‌ ಸ್ಯಾಕ್ಸ್‌ ಒಬ್ಬ ಗ್ರಹಿಕೆ ನರಶಾಸ್ತ್ರಜ್ಞ (Cognitive Neurologist). ಗ್ರಹಿಕೆ ನರಶಾಸ್ತ್ರವೆಂದರೆ, ತಿಳುವಳಿಕೆ, ಇಂದ್ರಿಯಜ್ಞಾನ, ಕಲ್ಪನೆ, ತರ್ಕ ಮುಂತಾದ ಮೆದುಳಿಗೆ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ನರಶಾಸ್ತ್ರದ ಬೆಳಕಿನಲ್ಲಿ ಅಧ್ಯಯನ ಮಾಡುವ ಅಪರೂಪದ ವೈದ್ಯಕೀಯ ವಿಜ್ಞಾನ.

ಆದರೆ, ಈ ವೈದ್ಯರು ಖುದ್ದು ಅನೇಕ ಹೆಸರಿರುವ, ಹೆಸರಿಲ್ಲದ ಮನೋರೋಗಗಳಿಂದ ನರಳುವವರು. ಮೂವತ್ತು ವರ್ಷಗಳಿಂದ ವಾರಕ್ಕೆ ಎರಡು ಬಾರಿ ಮನೋವೈದ್ಯನಿಂದ ಚಿಕಿತ್ಸೆ ಪಡೆಯುತ್ತಿರುವವರು. ಕತ್ತಲೆಯಲ್ಲಿ ಒಬ್ಬರೇ ಇರಲು ಬಹಳ ಹೆದರುವವರು (Nyctophobia). ವರ್ತನೆಗಳೂ ಸಾಮಾನ್ಯ ಮನುಷ್ಯರಂತಲ್ಲ. ಪ್ರತಿ ದಿನ ಬೊಟಾನಿಕಲ್‌ ಗಾರ್ಡನ್‌ನಲ್ಲಿ ಕೆಲವು ಗಂಟೆ ಕಳೆಯುತ್ತಾರೆ. ವಾರದಲ್ಲಿ ಎರಡು ಬಾರಿ ಜೂ ಒಂದಕ್ಕೆ ಭೇಟಿಕೊಡುತ್ತಾರೆ. ಇಪ್ಪತ್ತೈದು ವರ್ಷಗಳಿಂದ ಯಾರೋ ವಿಧಿಸಿದ ಕಟ್ಟಪ್ಪಣೆ ಎನ್ನುವಂತೆ ಒಂದೇ ಬಗೆಯ ಸೀರಿಯಲ್‌ನ್ನು ಬೆಳಗ್ಗೆ ತಿಂಡಿಗೆ ಮತ್ತು ಬಾಳೆಹಣ್ಣಿನ ಜೊತೆಗೆ ಮೀನನ್ನು ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಿನ್ನುತ್ತಾರೆ, ಪ್ರತಿದಿನವೂ ಅದೇ ಉತ್ಸಾಹದಲ್ಲಿ , ಯಾವ ಬೇಸರವೂ ಇಲ್ಲದೆ. ಅವರಿಗೆ ಬೀಳುವ ಕನಸು ನೋಡಿ- ಕೆಮಿಷ್ಟ್ರಿಯ ಪೀರಿಯಾಡಿಕ್‌ ಟೇಬಲ್ಲಿನಲ್ಲಿ ಹಫ್‌ನಿಯಂ ಎನ್ನುವ ಧಾತುವಾಗಿ ಸುತ್ತಲೂ ಟ್ಯಾಂಟಲಮ್‌, ರೀನಿಯಮ್‌, ಇರಿಡಿಯಮ್‌, ಪ್ಲಾಟಿನಮ್‌, ಟಂಗ್‌ಸ್ಟನ್‌ನಂತಹ ತರಲೆ ಸ್ನೇಹಿತರೊಡನೆ ಪಾರ್ಟಿ ಮಾಡುತ್ತಿರುವ ಕನಸು! ನಿಮಗೆ ಯಾವತ್ತಾದರೂ ಬೆಂಚು ಕುರ್ಚಿ ಮೇಜಾದ ಕನಸು ಬಿದ್ದಿದೆಯೇ? ಹಫ್‌ನಿಯಂ ಎನ್ನುವ ಪಾಪದ ಲೋಹವಾಗುವ ಕನಸು ಕಾಣುವ ಆ ಮನಸ್ಸು ‘ಸಾಧಾರಣ’ ಮನಸ್ಸುಗಳಿಂದ ಎಷ್ಟು ತಿರುಚಿಹೋಗಿರಬೇಕು!

Dr. Oliver Sacks, The Author of The Man Who Mistook His Wife for a Hatಇರಿ, ಇರಿ. ಇವರಿಗೆ ವರ್ಷಕ್ಕೆ ಹತ್ತು ಸಾವಿರ ಕಾಗದಗಳು ಬರುತ್ತವೆ ಸಹಾಯವನ್ನು ಬಯಸಿ. ಬಲು ಅಪರೂಪದ ವೈದ್ಯ ಇವರು. ಚಿಕಿತ್ಸೆಗಿಂತ ಹೆಚ್ಚಾಗಿ, ಗುಣವಾಗದ ರೋಗವನ್ನು ನಿಮಗೆ ನೀವೇ ಒಪ್ಪಿಕೊಳ್ಳುವುದು ಹೇಗೆ, ರೋಗಕ್ಕೇ ಹೊಂದಿಕೊಂಡು ‘ಸಂತೋಷ’ವಾಗಿ ಇರುವುದು ಹೇಗೆ, ಬಾಡಿಹೋದ ಮನಸ್ಸಿಗೆ ದೇಹವನ್ನೋ, ಬಾಡಿಹೋದ ದೇಹಕ್ಕೆ ಮನಸ್ಸನ್ನೋ ಒಂದೇ ಶೃತಿಗೆ ತಂದು ನಿಲ್ಲಿಸುವುದು ಹೇಗೆ ಎನ್ನುವಲ್ಲಿ ನಿಮಗೆ ಸಹಾಯ ಮಾಡುವವರು. ಅವರ ಮನಸ್ಸಿನಂತೆಯೇ ವರ್ತನೆಯಂತೆಯೇ ಅಸಂಪ್ರದಾಯಿಕವಾಗಿ ನಿಮ್ಮ ಬಾಳಿನ ನೆಮ್ಮದಿಯ ಗೆರೆಗಳನ್ನು ಹುಡುಕಿಕೊಡುವವರು.

ಡಾಕ್ಟರ್‌ ಆಲಿವರ್‌ ಸ್ಯಾಕ್ಸ್‌ರ ಕುತೂಹಲಭರಿತವಾದ ವೈದ್ಯಕೀಯ ಕಥೆಗಳ ಪುಸ್ತಕ The Man Who Mistook His Wife for a Hat. ಸಾಹಿತ್ಯದ ಯಾವ ಪ್ರಕಾರಕ್ಕೆ ಬರುತ್ತದೆಯೋ ಹೇಳುವುದು ಕಷ್ಟ. ಆತ್ಮಕತೆ, ಸ್ವಾನುಭವ, ಸಹಾನುಭೂತಿ, ವೈದ್ಯಕೀಯ, ಮಾನವೀಯತೆ ಎಲ್ಲವೂ ಮೇಳೈಸಿರುವ ಈ ಬರಹಗಳನ್ನು ಓದಿದ ಮೇಲೆ ಅನೇಕ ಭಯಾನಕ ರೋಗಗಳ ಮುಂದೆ ನಾವೆಷ್ಟು ಅಸಹಾಯಕರಾಗುತ್ತೇವೆ ಎಂದು ಮನಸ್ಸು ಮುದುಡುತ್ತದೆ. ಮೆದುಳೆಂಬ ನಮಗಿನ್ನೂ ಅರ್ಥವಾಗದ ವಿಚಿತ್ರಲೋಕದಲ್ಲಿ ಹುಯಿಲೆಬ್ಬಿಸುವ ಈ ರೋಗಗಳು ಹಾಗೂ ಈ ಬಿರುಗಾಳಿಯಲ್ಲಿ ತರಗೆಲೆಯಂತೆ ಕಂಗಾಲಾದ ಸಾಮಾನ್ಯ ಮನುಷ್ಯ, ಕಣ್ಣಂಚಿನಲ್ಲಿ ಮೂಡಿದ ಕಂಬನಿಯ ಹನಿಯಂತೆಯೇ ನೋವಿನ ಪ್ರತೀಕವಾಗುತ್ತಾರೆ. ವೈದ್ಯಕೀಯಕ್ಕಾಗಿಯೇ ಮದುವೆಯನ್ನೂ ಆಗದೆ ದಿನಕ್ಕೆ ಹದಿನಾರು ಗಂಟೆಗಳಂತೆ ಇಂತಹ ರೋಗಿಗಳಿಗಾಗಿ ದುಡಿಯುವ ಬದುಕುವ ಡಾ.ಆಲಿವರ್‌ ಸ್ಯಾಕ್ಸ್‌ ದೇವದೂತರಾಗುತ್ತಾರೆ.

‘ಹೆಂಡತಿಯನ್ನು ತನ್ನ ಟೊಪ್ಪಿಗೆ ಎಂದು ತಿಳಿದ ಮನುಷ್ಯ’ ಬರಹದಲ್ಲಿ ಡಾಕ್ಟರ್‌ ಪಿ ಎನ್ನುವ ರೋಗಿಯ ಕಥೆ ಬರುತ್ತದೆ. ರೋಗಿಯ ಗುರುತನ್ನು (Identity) ಮುಚ್ಚುವುದಕ್ಕಾಗಿ ಆಲಿವರ್‌ ಸ್ಯಾಕ್ಸ್‌ ತಮ್ಮ ಈ ರೋಗಿಯನ್ನು ‘ಡಾಕ್ಟರ್‌ ಪಿ’ ಎನ್ನುತ್ತಾರೆ. ನಾವು ನಮ್ಮ ಸರಾಗ ಓದಿನ ಅನುಕೂಲಕ್ಕಾಗಿ ‘ಡಾಕ್ಟರ್‌ ಪೀಟರ್‌’ ಎನ್ನೋಣ. ಈ ಡಾ.ಪೀಟರ್‌ ಸಂಗೀತದ ಶಾಲೆಯಾಂದರಲ್ಲಿ ಅಧ್ಯಾಪಕರು. ಬಹಳ ಮೇಧಾವಿ ಎಂದು ಹೆಸರಾದವರು. ಮುಂಜಾವಿನಿಂದ ಬೈಗಿನ ತನಕ ಸಂಗೀತ ಮಾತ್ರ ಇವರ ಪ್ರಪಂಚ. ಈ ಡಾಕ್ಟರ್‌ ಪೀಟರ್‌ ಆಲಿವರ್‌ ಸ್ಯಾಕ್ಸ್‌ನ ಬಳಿ ಬಂದದ್ದು ಕೆಲವು ವಿಚಿತ್ರ ಸಮಸ್ಯೆಗಳಿಗಾಗಿ. ಎಷ್ಟೋ ದಿನಗಳಿಂದ ಇವರ ತರಗತಿಯಲ್ಲಿಯೇ ಇರುವ ವಿದ್ಯಾರ್ಥಿಯಾಬ್ಬ ಇವರ ಎದುರು ಬಂದು ನಿಂದರೆ ಡಾ.ಪೀಟರ್‌ರಿಗೆ ಅವನ ಗುರುತೇ ಸಿಕ್ಕುವುದಿಲ್ಲ. ಗುರುವಿನ ಈ ವರ್ತನೆಯಿಂದ ಕಂಗಾಲಾಗಿ ಆ ಶಿಷ್ಯ ಬಾಯಿಬಿಟ್ಟು ಧ್ವನಿ ಹೊರಡಿಸಿದೊಡನೆಯೇ ಡಾ. ಪೀಟರ್‌ರಿಗೆ ಶಿಷ್ಯನ ಪರಿಚಯ ಮರಳಿ ಮುಖ ಅರಳಿ ‘ಅರೆ ವಿಕ್ಟರ್‌! ಏನಪ್ಪಾ ಸಮಾಚಾರ’ ಎಂದು ಎಷ್ಟೋ ದಿನಗಳ ನಂತರ ನೋಡುತ್ತಿರುವಂತೆ ತಬ್ಬಿಕೊಳ್ಳುತ್ತಾರೆ. ಡಾ.ಪೀಟರ್‌ರಿಗೆ ಎಷ್ಟೇ ಪರಿಚಯಸ್ಥರು ಎದುರು ಬಂದರೂ ಮುಖಗಳನ್ನು ಗುರುತಿಸಲಾಗುವುದಿಲ್ಲ. ಬದಲಾಗಿ, ಎದುರು ಬಂದವರು ಒಂದೆರಡು ಮಾತುಗಳನ್ನಾಡಿದರೆ ಪಕ್ಕನೆ ಅವರ ಪರಿಚಯ ಮರಳುತ್ತದೆ. ಡಾ.ಪೀಟರ್‌ ರಸ್ತೆಯಲ್ಲಿ ಯಾವುದೋ ಹಾಡು ಗುನುಗುತ್ತಾ ನಡೆಯುತ್ತಿದ್ದವರು ಗಕ್ಕನೆ ನಿಲ್ಲುತ್ತಾರೆ. ಅರೆ, ಈ ಹುಡುಗ ಯಾಕೆ ಇಲ್ಲಿ ನಿಂತಿದ್ದಾನೆ ಎಂದು ತಮ್ಮ ಶಿಷ್ಯನ ತಲೆಯನ್ನು ಪ್ರೀತಿಯಿಂದ ಸವರುತ್ತಾರೆ. ಆದರೆ ಸುತ್ತಮುತ್ತಲ ಜನಕ್ಕೆ ಕಾಣುವುದು ಹೊಸದಾಗಿ ಪೈಂಟ್‌ ಬಳಿಸಿಕೊಂಡು ಪಳಪಳನೆ ಮಿಂಚುತ್ತಿರುವ ಪೋಸ್ಟ್‌ಬಾಕ್ಸ್‌ನ ತಲೆಯನ್ನು ಸವರುತ್ತಿರುವ ಡಾ.ಪೀಟರ್‌.

ಮೊದಮೊದಲು ಲಘು ತಮಾಷೆಯಾಗಿದ್ದುದು ಆಮೇಲೆ ಆಮೇಲೆ ಇರ್ರಿಟೇಷನ್‌ ಆಗಿ ಕೊನೆಗೆ ಬಹುದೊಡ್ಡ ಸಮಸ್ಯೆಯೇ ಆದಾಗ ಡಾ. ಪೀಟರ್‌ ಕಣ್ಣಿನ ಡಾಕ್ಟರ್‌ ಬಳಿ ಹೋದರು. ಅವರ ಕಣ್ಣು ಮತ್ತು ದೃಷ್ಟಿಯನ್ನು ಪರೀಕ್ಷಿಸಿದ ನೇತ್ರ ವೈದ್ಯರು ನಿಮ್ಮ ಕಣ್ಣುಗಳು ಸರಿಯಾಗಿ ಕೆಲಸ ಮಾಡುತ್ತಿವೆ. ಆದರೆ ಕಣ್ಣು ಕೊಟ್ಟಿದ್ದನ್ನು ಅರ್ಥೈಸುವ ‘ಮೆದುಳಿನ ದೃಷ್ಟಿ’ ಹಾಳಾಗಿಹೋಗಿದೆ ಎಂದು ನರಶಾಸ್ತ್ರಜ್ಞ ಡಾ. ಆಲಿವರ್‌ ಸ್ಯಾಕ್ಸ್‌ ಬಳಿ ಕಳುಹಿಸಿದರು. ಈ ತರಹದ ಚಾಲೆಂಜಿಂಗ್‌ ಆಗಿರುವ ಹೊಸ ಅಸೈನ್‌ಮೆಂಟ್ಸ್‌ ಸಿಕ್ಕರೆ ಡಾ.ಸ್ಯಾಕ್ಸ್‌ ಬಲು ಉತ್ಸಾಹಿ.

ಡಾ. ಪೀಟರ್‌ ಮೇಧಾವಿ ಎನ್ನುವುದು ಆಲಿವರ್‌ ಸ್ಯಾಕ್ಸ್‌ರಿಗೆ ಮೊದಲ ಭೇಟಿಯಲ್ಲೇ ತಿಳಿಯಿತು. ಶುದ್ಧವಾಗಿ ನಿರರ್ಗಳವಾಗಿ ಮಾತನಾಡಬಲ್ಲ ಮನುಷ್ಯ. ಯಾವ ವಿಷಯವನ್ನೂ ತನ್ನ ತರ್ಕಗಳೊಡನೆ ಹೊಸದಾಗಿ ಇಡಬಲ್ಲವ. ಸಾಧಾರಣ ಮನುಷ್ಯನಿಗಿಂತಾ ಹೆಚ್ಚಿನ ಕಲ್ಪನಾಶಕ್ತಿಯನ್ನು ಉಳ್ಳವ. ಆದರೆ ಒಂದು ವಿಚಿತ್ರ!

ಡಾ.ಪೀಟರ್‌ ನಿಮ್ಮನ್ನು ಗಮನಿಸುತ್ತಾರೆ. ‘ನಮ್ಮ ನಿಮ್ಮಂತೆಯೇ’ ಮಾತುಕತೆಗಳಲ್ಲಿ ಕಣ್ಣು ಭಾಗವಹಿಸುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅವರ ಕಣ್ಣು ನಿಮ್ಮ ಮೂಗಿನ ಮೇಲೋ, ಕಿವಿಯಂಚನ್ನೋ, ತಲೆಕೂದಲನ್ನೋ ಅಥವಾ ನಿಮ್ಮ ಬೆನ್ನ ಹಿಂದಿನ ಗೋಡೆಯ ಮೇಲಿನ ಪೋಸ್ಟರನ್ನೋ ನೋಡುತ್ತಿರುತ್ತದೆ. ಕಣ್ಣು ಮಾತುಕತೆಯಲ್ಲಿ ಭಾಗವಹಿಸಿದಂತೆ ಮಾಡಿ ಎಲ್ಲೋ ಕಳೆದುಹೋಗಿರುತ್ತದೆ. ನಿಜವಾಗಿಯೂ ಸಂಭಾಷಣೆಯ ಸಾರಥ್ಯವನ್ನು ವಹಿಸುವುದು ಅವರ ಕಿವಿಗಳೇ!

ವೈದ್ಯರ ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ಡಾ.ಪೀಟರ್‌ ಮನೆಗೆ ತೆರಳಲು ಎದ್ದು ನಿಂತರು. ತಮ್ಮ ಟೊಪ್ಪಿಗೆಗಾಗಿ ಕೈ ಚಾಚಿದರು. ಪಕ್ಕದಲ್ಲಿ ನಿಂತಿದ್ದ ಅವರ ಹೆಂಡತಿಯ ತಲೆ ಸಿಕ್ಕಿತು. ಇದೇನು ಹ್ಯಾಟ್‌ ಸಿಕ್ಕಿಹಾಕಿಕೊಂಡಿದೆಯಲ್ಲಾ ಎಂದು ಹೆಂಡತಿಯ ತಲೆಯನ್ನೇ ಬಲವಾಗಿ ಎಳೆದರು. ಆಕೆ ಪಾಪ! ಸುಮ್ಮನೆ ಮಂಕಾಗಿ ನಿಂತಿದ್ದರು. ಡಾ. ಆಲಿವರ್‌ ಸ್ಯಾಕ್ಸ್‌ರಿಗೆ ಸಮಸ್ಯೆ ಮತ್ತಷ್ಟು ಜಟಿಲವಾಯಿತು.

ತಮ್ಮ ಹೊಸರೋಗಿಯನ್ನು ಪರೀಕ್ಷಿಸಿಲು ಡಾ. ಸ್ಯಾಕ್ಸ್‌ ಪೀಟರ್‌ರ ಮನೆಗೇ ಹೋದರು. ಡಾ. ಪೀಟರ್‌ರ ಒತ್ತಾಯದ ಮೇರೆಗೆ ಅವರ ಹಳೇ ಪಿಯಾನೋವನ್ನು ನುಡಿಸುವ ಸೌಭಾಗ್ಯ ಆಲಿವರ್‌ ಸ್ಯಾಕ್ಸ್‌ರಿಗೆ ಬಂತು. ಪಿಯಾನೋದಿಂದ ಪರಿಚಿತ ಹಾಡು ಹೊರಟೊಡನೆಯೇ ಡಾ.ಪೀಟರ್‌ ಭಾವುಕರಾಗಿಬಿಟ್ಟರು. ಹಾಡಿನ ಒಂದೊಂದು ಎಳೆಯನ್ನೂ ಪೂರ್ಣಮನಸ್ಸಿನಿಂದ ಉತ್ಕಟರಾಗಿ ಅನುಭವಿಸುತ್ತಾ ತಾವೂ ಧ್ವನಿಗೂಡಿಸಿದರು. ಪಿಯಾನೋ ಶ್ರುತಿಯಾಂದಿಗೆ ಡಾ.ಪೀಟರ್‌ ಧ್ವನಿ ಎಷ್ಟು ಸಮಾಗಮಿಸಿತೆಂದರೆ ಆ ಅದ್ಭುತ ಸಂಗೀತಕ್ಕೆ ಪಿಯಾನೋ ನುಡಿಸುತ್ತಿದ್ದ ಡಾ.ಸ್ಯಾಕ್ಸ್‌ರೇ ನಿಬ್ಬೆರಗಾಗಿ ಹೋದರು.

ಪಿಯಾನೋ ಕೊಟ್ಟ ಸಂತೋಷವನ್ನು ಮುಂದಿನ ಪರೀಕ್ಷೆಗಳು ಕಿತ್ತುಕೊಂಡವು. ಗೋಡೆಯ ಮೇಲೆ ನೇತುಹಾಕಿತ್ತು ಆ ಸುಂದರ ಸಂಸಾರದ, ಕಚೇರಿ ನಡೆಸುತ್ತಿರುವ ಪೀಟರ್‌ರ, ತಮ್ಮ ಪ್ರತಿಭಾವಂತ ವಿದ್ಯಾರ್ಥಿಗಳೊಡನೆಯ ಫೋಟೋಗಳನ್ನು ತೋರಿಸಿದಾಗ ಡಾ.ಪೀಟರ್‌ಗೆ ಅವುಗಳಲ್ಲಿ ಯಾರನ್ನೂ ಗುರುತಿಸಲಾಗಲಿಲ್ಲ ! ಹೆಂಡತಿಯನ್ನು ಕೂಡ. ಕೊನೆಗೆ ತಮ್ಮನ್ನು ತಾವೇ!

ಮುಂದಿನ ತಮ್ಮ ಭೇಟಿಯ ವೇಳೆಗೆ ಡಾ.ಸ್ಯಾಕ್ಸ್‌ ಪೀಟರ್‌ಗೆ ಒಂದು ಸುಂದರವಾದ ಆಗ ತಾನೇ ಅರಳಿರುವಂತಹ ಗುಲಾಬಿಯನ್ನು ಕೊಟ್ಟರು. ಡಾ. ಪೀಟರ್‌ ಗುಲಾಬಿಯನ್ನು ಎರಡು ಕ್ಷಣ ಅಚ್ಚರಿಯಿಂದ ನೋಡಿದರು.

‘ಇದೇನಿದು?’

‘ಏನಿರಬಹುದು ಅದು?’

‘ಸಮತಟ್ಟಿಲ್ಲದ ಮೃದು ಮೈನ ಈ ವಸ್ತು ಯಾವುದಪ್ಪಾ ...’

‘ಅದರ ವಾಸನೆಯನ್ನು ನೋಡಿ’

ಕೆಮಿಷ್ಟ್ರಿ ಲ್ಯಾಬಿನಲ್ಲಿನ ವಿದ್ಯಾರ್ಥಿಯಂತೆ ಡಾ. ಪೀಟರ್‌ ಹೂವನ್ನು ಮೂಸಿ ನೋಡಿ ‘ಆಹಾ! ಈಗ ತಾನೇ ಅರಳಿರುವ ರೋಸ್‌ ಇದು’ ಎಂದರು.

ದೃಷ್ಟಿಯಾಂದನ್ನು ಬಿಟ್ಟು ಉಳಿದೆಲ್ಲಾ ಇಂದ್ರಿಯಗಳೂ ಕೆಲಸ ಮಾಡುತ್ತಿವೆ ಇವರಿಗೆ.

ಪರೀಕ್ಷೆಗಳೆಲ್ಲಾ ಮುಗಿದ ಮೇಲೆ ಶ್ರೀಮತಿ ಪೀಟರ್‌ ಇಬ್ಬರನ್ನೂ ಡೈನಿಂಗ್‌ ಟೇಬಲ್ಲಿಗೆ ಕರೆದರು. ಅಲ್ಲಿ ಆಗತಾನೇ ಮಾಡಲ್ಪಟ್ಟ ಕೇಕ್‌ಗಳು ಅವರಿಗಾಗಿ ಕಾದಿದ್ದವು. ಡಾ.ಪೀಟರ್‌ ಹಾಡೊಂದನ್ನು ಗುನುಗುಟ್ಟುತ್ತಾ ಉತ್ಸಾಹದಲ್ಲಿ ಕೇಕ್‌ನ ಸ್ವಾದವನ್ನು ಅನುಭವಿಸಲಾರಂಭಿಸಿದರು. ಕಣ್ಣು ಮುಚ್ಚಿ ಹಾಡು ಮತ್ತು ಕೇಕ್‌ ಒಂದೇ ಎನ್ನುವಂತೆ ಅವರದೇ ಲೋಕದಲ್ಲಿ ಮಗ್ನರಾಗಿದ್ದರು. ಆಗ ಹೊರಗೆ ಬಾಗಿಲ ಮೇಲೆ ಯಾರೋ ಡಬಡಬ ಬಡಿದ ಶಬ್ದವಾಯಿತು. ಡಾ.ಪೀಟರ್‌ ಲೋಕಕ್ಕೆ ಭಂಗವಾಯಿತು. ಗರಬಡಿದವರಂತೆ ಕುಳಿತುಬಿಟ್ಟರು ಏನೂ ಮಾಡಲು ತಿಳಿಯದೆ. ಇಷ್ಟು ಹೊತ್ತು ಅನುಭವಿಸಿದ್ದ ಸ್ವಾದದ ಯಾವ ಕುರುಹೂ ಅವರ ಮುಖದ ಮೇಲೆ ಇರಲಿಲ್ಲ. ಸುಮ್ಮನೆ ಕಲ್ಲಾಗಿ ಯಾವ ಅರಿವೂ ಇಲ್ಲದಂತೆ ನಿಶ್ಚಲವಾಗಿ ಕುಳಿತ ಮನುಷ್ಯ. ಶ್ರೀಮತಿ ಪೀಟರ್‌ ಲೋಟಕ್ಕೆ ಕಾಫಿಯನ್ನು ಬಗ್ಗಿಸಿದೊಡನೆಯೇ ಅದರ ಸುವಾಸನೆ ಅವರ ಮೂಗಿಗೆ ಬಡಿದೊಡನೆಯೇ ಡಾ.ಪೀಟರ್‌ಗೆ ಶಾಪವಿಮೋಚನೆಯಾಗಿ ಮರಳಿ ತಮ್ಮ ಹಾಡಿನ ಗುನುಗು, ಕೇಕ್‌ ಮತ್ತು ಕಾಫಿಯ ಲೋಕಕ್ಕೆ ಬಂದರು!

ಡಾ.ಸ್ಯಾಕ್ಸ್‌ರಿಗೆ ತಿಳಿದ ವಿಷಯವೆಂದರೆ ಹಾಡಿನ ಗುನುಗಿದ್ದರೆ ತಮ್ಮ ದೃಷ್ಟಿಯನ್ನು ಅರ್ಥೈಸದ ಮೆದುಳಿನೊಂದಿಗೂ ಡಾ. ಪೀಟರ್‌ ಕೆಲಸ ಮಾಡಬಲ್ಲರು. ಹಾಡು ಹೇಳಿಕೊಳ್ಳುತ್ತಾ ಊಟ ಮಾಡಬಲ್ಲರು. ಹಾಡು ಹೇಳಿಕೊಳ್ಳುತ್ತಾ ಸ್ನಾನ ಮಾಡಬಲ್ಲರು. ಹಾಡುಹೇಳಿಕೊಳ್ಳುತ್ತಾ ತಲೆ ಬಾಚಿಕೊಳ್ಳಬಲ್ಲರು, ಹಾಡು ಹೇಳಿಕೊಳ್ಳುತ್ತಾ ತಮ್ಮ ಜೀವರಥವನ್ನು ಎಳೆಯಬಲ್ಲರು. ದೃಷ್ಟಿಯಲ್ಲಿ ಕಳೆದುಕೊಂಡದನ್ನು ಅವರ ಮೆದುಳು ನಾಲಿಗೆಯಲ್ಲಿ, ಗಂಟಲ ಉಬ್ಬಿನಿಂದ ಹೊರಟು ನಾಲಿಗೆಯ ತುದಿಯಲ್ಲಿ ಹೊರಳುವ ಪದಗಳಲ್ಲಿ, ಪದಗಳ ಗುನುಗಿನಲ್ಲಿ, ಪ್ರಾಸದಲ್ಲಿ, ರಾಗದಲ್ಲಿ ಪಡೆದುಕೊಳ್ಳುತ್ತದೆ. ದೃಷ್ಟಿಯಲ್ಲಿ, ಫ್ಯಾಕ್ಟರಿಯಲ್ಲಿ ತಯ್ಯಾರಾದ ರೋಬಾಟುಗಳಂತೆ ಒಂದೇ ತರಹ ಕೆಲಸ ಮಾಡುವ ಕೋಟಿ ಕೋಟಿ ಜನರ ಮುಂದೆ ಡಾ.ಪೀಟರ್‌ ತೀರಾ ಅಲ್ಪಸಂಖ್ಯಾತ. ಹೊರಗಿನ ಪ್ರಪಂಚದ ‘ದೃಷ್ಟಿ’ಗೆ ಡಾ.ಪೀಟರ್‌ದು ಒಂದು ರೋಗ! ಆದರೆ ಖುದ್ದು ಡಾ.ಪೀಟರ್‌ಗೆ ಅವರದು ರೋಗವಲ್ಲ. ಕಂಬಳಿಹುಳುವಾಗಿದ್ದು ಕೋಶ ಸೇರಿದ್ದು ಚಿಟ್ಟೆಯಾಗಿ ಹೊರಹಾರಿದಷ್ಟೇ ನೈಸರ್ಗಿಕವಾಗಿ ಡಾ.ಪೀಟರ್‌ ತಮ್ಮ ಕಣ್ಣನ್ನು ನಾಲಿಗೆಗೆ, ದೃಶ್ಯವನ್ನು ರಾಗಗಳಿಗೆ ಬದಲಿಸಿಕೊಂಡವರು. ರೋಗವೆನ್ನುವಿರಾದರೆ ಅದು ರೋಗ. ಆದರೆ ಡಾ.ಸ್ಯಾಕ್ಸ್‌ರಿಗೆ.....

ಆಲಿವರ್‌ ಸ್ಯಾಕ್ಸ್‌ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಡಾ.ಪೀಟರ್‌ರನ್ನು ತಬ್ಬಿಕೊಂಡು ಹೇಳಿದರು - ‘ನಿಮಗೆ ಇದೊಂದು ವರ’.

‘ಭಗವಂತನ ಅದ್ಭುತ ಸೃಷ್ಟಿ ನೀವು. ಸಮಸ್ತ ಲೋಕವೂ ಪದಗಳನ್ನು ಕೇಳಬಲ್ಲುದಾದರೆ ನೀವು ಪದಗಳನ್ನು ಕಾಣಬಲ್ಲಿರಿ. ಇಷ್ಟು ದಿನ ನಿಮಗೆ ಅನ್ನ ಉಣಿಸಿದ್ದಷ್ಟೇ ಅಲ್ಲ, ಸಂಗೀತ ನಿಮ್ಮ ಎದೆಯ ಬಡಿತವನ್ನೂ ತಾನೇ ನಡೆಸುತ್ತಿದೆ. ನಿಮ್ಮ ಶ್ವಾಸದ ಪ್ರತಿಕ್ಷಣದಲ್ಲೂ ಗಾಳಿಯಂತೆಯೇ ಹಾಸುಹೊಕ್ಕಾಗಿದೆ. ಇಷ್ಟುದಿನವೂ ತಾಯಿಯ ಗರ್ಭದಲ್ಲಿ ಬೆಚ್ಚಗುಳಿದ ಮಗುವಿನಂತೆ ಸಂಗೀತದ ಉದರದಲ್ಲಿ ಸುರಕ್ಷಿತವಾಗಿರುವ ನಿಮ್ಮನ್ನು ನಾನು ಹೇಗೆ ಬೇರೆ ಮಾಡಲಿ? ಬೇರೆ ಮಾಡಿ ಸಾಧಿಸುವುದಾದರೂ ಏನು? ಹೀಗೆಯೇ ನಡೆಯಲಿ ಬಿಡಿ. ಬಹಳ ಅದೃಷ್ಟವಂತರು ನೀವು’.

ತಮ್ಮ ಸಾವಿನ ತನಕ ಡಾ.ಪೀಟರ್‌ ಹಾಗೆಯೇ ಬದುಕಿದರಂತೆ.

ರೋಗವನ್ನು ಗುಣಪಡಿಸಲು ಬಂದ ವೈದ್ಯನೊಬ್ಬ ಕೊನೆಯಲ್ಲಿ ಅದು ರೋಗವಲ್ಲ ವರ ಎನ್ನಬೇಕಾದರೆ ಆತನಲ್ಲಿ ಎಂತಹ ಜೀವನ ದಾರ್ಶನಿಕತೆ ಇರಬೇಕು!

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more