ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯೆಯಾದ ಪ್ರೊಗ್ರಾಮರ್‌ ಮತ್ತು ಹೆಣ ಎತ್ತುವವನಾದ ಬ್ಯಾಂಕರ್‌

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಭಾರತೀಯ ಸಿನೆಮಾಗಳಲ್ಲಿ ಕೆಲವು ಸಂಕೇತಗಳ ಬಳಕೆಗಳಿವೆ. ಅವುಗಳನ್ನು ಚಿತ್ರ ತೆಗೆಯುವವರೂ ಸಮರ್ಥಕವಾಗಿ ಉಪಯೋಗಿಸಿಕೊಳ್ಳುತ್ತಾರೆ ನೋಡುವವರೂ ಸಮರ್ಥವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಅಜ್ಜನ ಪಾತ್ರದಲ್ಲಿ ವಿಷ್ಣುವರ್ಧನ್‌ ಭಾವುಕನಾಗಿ ಆಕಾಶದೆಡೆಗೆ ಮುಖಮಾಡಿ ಎಡಗೈಯನ್ನು ಮೇಲೆತ್ತಿ ಏನನ್ನೋ ಯೋಚಿಸುತ್ತಿದ್ದಾನೆಂದರೆ ಒಂದು ‘ಫ್ಲಾಷ್‌ಬ್ಯಾಕ್‌’ ಶುರುವಾಯಿತು ಎಂದು ಅರ್ಥ. ಫ್ಲಾಷ್‌ಬ್ಯಾಕ್‌ಗಳು ಎಂತಹ ಹಳ್ಳಿ ಗಮಾರನಿಗೂ ಅಲ್ಲಿ ಗೊಂದಲವಾಗುವುದಿಲ್ಲ. ಸಿನಿಮಾ ತನ್ನದೇ ಭಾಷೆಯನ್ನು ಕಲಿಸಿ ಬಿಡುತ್ತದೆ. ಹಾಗೆಯೇ, ಹೀರೋ ಒಬ್ಬ ಹುಡುಗಿಯ ಸುತ್ತಮುತ್ತ ಓಡಾಡುತ್ತಾ ಅವಳ ಕೈ ಮೈನೆಲ್ಲಾ ಮುಟ್ಟಿದರೆ ಆಗ ಅವನಿಗೆ ಅವಳ ಮೇಲೆ ನಿರ್ವಾಚ್ಯವಾದ ‘ಲವ್‌’ ಬಂದಿದೆ ಎಂದರ್ಥ. ಅದೇ, ಕಟ್ಟುಮಸ್ತಾದ ಮೈಕಟ್ಟಿನ ಆದರೆ ‘ಸ್ಮಗ್ಲಿಂಗ್‌’ ಮಾಡಿ ಬದುಕುವ ವಿಲನ್‌ ಒಬ್ಬ ಹುಡುಗಿಯ ಸುತ್ತ ಮುತ್ತ ಸುಳಿದರೂ ಸಾಕು ನೋಡುವವನಿಗೆ ಕಾಣುವುದು ‘ವಿಕೃತ ಕಾಮ’ ಮಾತ್ರಾ. ಸಿನಿಮಾ ತೆಗೆಯುವವರಿಗೂ ಸಿನೆಮಾ ನೋಡುವವರಿಗೂ ಇದು ಒಂದು ರೀತಿಯಲ್ಲಿ ದಾಖಲಾಗದ ಅಗ್ರಿಮೆಂಟ್‌!

ಅದೇ ರೀತಿಯಲ್ಲಿ, ಯಾರಾದರೂ ಸುಮ್ಮಸುಮ್ಮನೆ ವಿಕಟನಗೆಯನ್ನು ಹೊಮ್ಮಿಸಲಾರಂಭಿಸಿದರೆ ಅವರಿಗೆ ‘ಎರಡು ಸುತ್ತು’ ಲೂಸ್‌ ಆಯಿತು ಎಂದರ್ಥ. ಮುಂದಿನ ದೃಶ್ಯ ಹುಚ್ಚಾಸ್ಪತ್ರೆಯದಿರುತ್ತದೆ. ಮನೆಗೆ ಬೆಂಕಿ ಬಿದ್ದು ಹೆಂಡತಿ ಮಕ್ಕಳು ಎಲ್ಲ ಸತ್ತು ಅಸಾಧ್ಯ ದುಃಖ ಆವರಿಸಿದಾಗ ಎಲೆಕ್ಟ್ರಿಕ್‌ ಸರ್ಜ್‌ ವೊಲ್ಟೇಜ್‌ನಂತೆ ಬಂದ ಡಿಪ್ರೆಶನ್‌ ಆ ಮನುಷ್ಯನನ್ನು ಅಕ್ಷರಶಃ ಹುಚ್ಚನನ್ನಾಗಿಸುತ್ತದೆ! ಅದನ್ನು ನಾವು ನಂಬಬೇಕು! ನಂಬುತ್ತೇವೆ ಕೂಡ. ನಾವು ನಂಬದಿದ್ದರೂ ಸಿನಿಮಾ ಭಾಷೆಯೇನೂ ಬದಲಾಗುವುದಿಲ್ಲ. ಹಾಗಾಗಿ, ನೀವು ನಂಬಿದರೂ ಅಷ್ಟೆ ನಂಬದಿದ್ದರೂ ಅಷ್ಟೆ. ದೇವರಿಗೆ ನೈವೇದ್ಯವಿಟ್ಟಂತೆ ಇದು. ಆತ ತಿಂದಾದರೂ ತಿನ್ನಲಿ ಬಿಟ್ಟಾದರೂ ಬಿಡಲಿ ಅದು ತಿಪ್ಪೆಗುಂಡಿ ಸೇರುವುದು ಸೇರುವುದೇ. ಎಷ್ಟಾದರೂ, ಸಿನಿಮಾದವರಿಗೆ ನೀವು ‘ಅಭಿಮಾನಿ ದೇವರು’ಗಳಲ್ಲವೆ?

Changing the thoughts, Changing Life!ಹುಚ್ಚು ತೋರಿಸಲು ಕನ್ನಡ ಸಿನೆಮಾಗಳಲ್ಲಿ ಇನ್ನೊಂದು ವಿಧಾನವಿದೆ. ತೆರೆಯ ಮೇಲೆ ಬಹಳ ಗ್ರಾಫಿಕ್‌ ಆಗಿ ತೋರಿಸಲ್ಪಟ್ಟ ಅತ್ಯಾಚಾರದಲ್ಲಿ ಜರ್ಜರಿತಳಾದ ನಾಯಕಿ ಎಚ್ಚರವಾದ ಮೇಲೆ ತಿರುಗುವ ಸೀಲಿಂಗ್‌ ಫ್ಯಾನ್‌ನ್ನೇ ದೃಷ್ಟಿಸುತ್ತ ‘ಯಾರು ನಾನು?’, ‘ಯಾರು ನೀವು?’, ‘ನಾನ್ಯಾಕೆ ಇಲ್ಲಿದ್ದೇನೆ?’ ಎಂದು ಸೀರಿಯಸ್ಸಾಗಿ ಅಸಂಬದ್ಧ ಮಾತುಗಳನ್ನು ಆಡುತ್ತಾಳೆ. ಆಗ, ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ - ಆ ಸ್ಮಗ್ಲರ್‌ - ದುಷ್ಟ - ದ್ರೋಹಿ - ಪಾಪಿ - ದಡಿಯ - ಫಟಿಂಗ - ಎಮ್ಮೆ ಚರ್ಮದ - ಬುದ್ಧಿರಹಿತ - ವಿಕೃತ ಮನಸ್ಸಿನ ವಿಲ್ಲನ್‌ನ ಅತ್ಯಾಚಾರದ ಸಮಯದಲ್ಲಿ ಆ ಶಾಕ್‌ಗೆ ಈಕೆಯ ತಲೆಯಿಂದ ಎರಡು ಸ್ಕೂೃಗಳು ಕಳಚಿಹೋದವು ಎಂದು.

ನನ್ನ ಆಫೀಸ್‌ನಲ್ಲಿಯೂ ಹೀಗೆಯೇ ಒಬ್ಬಳು ‘ನಾನ್ಯಾರು? ನಾನೇನು ಮಾಡುತ್ತಿದ್ದೇನೆ? ನಾನೇನು ಮಾಡಬೇಕಿತ್ತು?’ ಎಂದೆಲ್ಲಾ ಫಿಲಾಸಫಿಕಲ್‌ ಆಗಿ ಮಾತನಾಡಿದಳು. ಇಲ್ಲ, ಹೆದರುವ ಅವಶ್ಯಕತೆಯಿಲ್ಲ. ಅವಳಿಗೆ ಏನೂ ಆಗಿಲ್ಲ. ಕನ್ನಡ ಸಿನಿಮಾ ನೋಡುವುದು ಹೋಗಲಿ ‘ಕನ್ನಡ’ ಅನ್ನುವ ಪದವನ್ನೇ ಜೀವನದಲ್ಲಿ ಕೇಳಿಲ್ಲ ಅವಳು. ಹಾಗಾಗಿ ಕನ್ನಡ ಸಿನೆಮಾದವರ ಫಾರ್ಮುಲ ಅವಳ ಮೇಲೆ ಅನ್ವಯವಾಗುವುದಿಲ್ಲ. ಎರಡು ಸುತ್ತು ‘ಲೂಸ್‌’ ಆಗುವುದಿರಲಿ ಸದ್ಯ ಎರಡು ಸುತ್ತು ಹೆಚ್ಚಿನ ಬುದ್ಧಿ ಅವಳಿಗೆ. ನ್ಯೂ ಮೆಕ್ಸಿಕೋ ಪ್ರಾಂತ್ಯದ ಹುಡುಗಿ. ಬಹಳ ಚುರುಕುಮತಿಯ ಪ್ರೊಗ್ರಾಮರ್‌ ಎಂದು ಹೆಸರಾಗಿದ್ದವಳು. ನ್ಯೂ ಮೆಕ್ಸಿಕೋ ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಹಳೆಯ ಊರು ಆಲ್ಬಕರ್ಕಿಯ ಮೆಕ್ಸಿಕನ್‌ ಮೂಲದ ಜನರು ಫರಲಿಟೋಸ್‌ಗಳನ್ನು(ಹಣತೆಗಳು) ಹಚ್ಚಿ ನಮ್ಮ ದೀಪಾವಳಿಯಂತೆ ಕ್ರಿಸ್‌ಮಸ್‌ನ್ನು ಆಚರಿಸುವ ಬಗ್ಗೆ ಅವಳು ವಿವರಿಸುವಾಗ ನಾನು ಬಿಟ್ಟಬಾಯಿ ಮುಚ್ಚದೇ ಕೇಳಿದ್ದೆ. ಮುಂದೆ ನನ್ನ ಕುತೂಹಲಕ್ಕಾಗಿಯೇ ಫರಲಿಟೋಸ್‌ಗಳ ವರ್ಣಚಿತ್ರಗಳನ್ನು ಆಲ್ಬಕರ್ಕಿಯಿಂದ ಕ್ಯಾಲಿಫೋರ್ನಿಯಾದ ನನ್ನ ವಿಳಾಸಕ್ಕೆ ಅಂಚೆಯಲ್ಲಿ ಕಳುಹಿಸಿದ್ದಳು.

ಈಕೆ ಒಮ್ಮೆ ತನ್ನ ಸ್ನೇಹಿತೆಯಾಂದಿಗೆ ಒಬ್ಬ ಚೈನೀಸ್‌ ವೈದ್ಯರ ಬಳಿಗೆ ಹೋದಾಗ ಆ ಕುಳ್ಳಗಾತ್ರದ ಸಣ್ಣಕಣ್ಣಿನ ವೈದ್ಯ ಇವಳ ಮೇಲೆ ಅದೆಂತಹಾ ಪ್ರಭಾವವನ್ನು ಬೀರಿದ ಎಂದರೆ ಆ ಕೂಡಲೇ, ಚೈನೀಸ್‌ ವೈದ್ಯಕೀಯವನ್ನು ಕಲಿತು ವೈದ್ಯೆಯಾಗುವುದು ಮಾತ್ರವೇ ತನ್ನ ಜೀವನದ ಗುರಿ ಎಂದು ಅನ್ನಿಸಿಬಿಟ್ಟಿತು. ಚೀನೀ ವೈದ್ಯಕೀಯವನ್ನು ಹೇಳಿಕೊಡುವ ಕಾಲೇಜುಗಳನ್ನು ಕಂಡುಕೊಂಡು ಆ ಕಾಲೇಜುಗಳಿರುವ ಊರುಗಳಿಗೇ ಹೋಗಿ ನೆಲಸಿ ಬೆಳಗಿನ ಹೊತ್ತು ಮನೆಯಿಂದಲೇ ಕ್ಯಾಲಿಫೋರ್ನಿಯಾದ ಕಂಪನಿಗೆ ಕೆಲಸ ಮಾಡುತ್ತಾ ರಾತ್ರಿ ವೈದ್ಯಕೀಯವನ್ನು ಕಲಿತು ಕೆಲವು ವರ್ಷಗಳಲ್ಲಿ ವೈದ್ಯೆಯಾಗಿಯೇಬಿಟ್ಟಳು. ಚೀಣೀ ಹುಡುಗಿಯಲ್ಲ ಈಕೆ. ಕಕೇಷಿಯನ್‌ ಮೂಲದವಳು (ಅಮೆರಿಕನ್‌ ವೈಟ್‌). ಆದರೀಗ ತನ್ನದೇ ಕ್ಲಿನಿಕ್‌ ತೆರೆದುಕೊಂಡು ರೋಗಿಗಳಾಗಿ ಬರುವ ಬಹುತೇಕ ಚೀನೀಮೂಲದ ಜನರೊಂದಿಗೆ ಅವರ ಭಾಷೆಯಲ್ಲೇ ಮಾತನಾಡುತ್ತ ಚೀಣೀ ವೈದ್ಯಕೀಯದಲ್ಲಿ ನಿಪುಣೆಯಾಗಿದ್ದಾಳೆ. ತನ್ನ ಹಳೆಯ ಸಾಫ್ಟ್‌ವೇರ್‌ ಕೆಲಸವನ್ನು ಬಿಟ್ಟಳು ಎಂದು ಬೇರೆ ಹೇಳಬೇಕಾಗಿಲ್ಲ. ಕಂಪ್ಯೂಟರ್‌ ಪ್ರೊಗ್ರಾಮಿಂಗ್‌ನಲ್ಲಿ ಮಗ್ನಳಾಗಿದ್ದ ಹುಡುಗಿ ಸುಮ್ಮನೆ ನಾನ್ಯಾರು? ನಾನೆಲ್ಲಿದ್ದೇನೆ? ನಾನೇನು ಆಗಬೇಕಿತ್ತು? ಎಂದು ಕೇಳಿಕೊಂಡಿದ್ದಕ್ಕೆ ವೈದ್ಯೆಯಾಗಿ ಬಿಟ್ಟಳು, ಸುಲಭವಾಗಿ.

ಸುಲಭವಾಗಿಯೇ?

ಇತ್ತೀಚೆಗೆ ಸ್ಯಾನ್‌ ಫ್ರಾನ್ಸಿಸ್ಕೋ ಕ್ರಾನಿಕಲ್‌ ದಿನ ಪತ್ರಿಕೆಯಲ್ಲಿ ಒಂದು ಅಪೂರ್ವವಾದ ಸಂದರ್ಶನವನ್ನು ಓದಿದೆ. ಈ ಮನುಷ್ಯ ಒಬ್ಬ ಮಾರ್ಗೇಜ್‌ (mortgage) ಫೈನಾನ್ಸಿಂಗ್‌ ಬ್ಯಾಂಕರ್‌. ಇವನಿಗೊಬ್ಬ ಪೋಲಿಸ್‌ ಮಿತ್ರ.

ಒಂದು ಬೆಚ್ಚನೆಯ ಬೆಳಗ್ಗೆ ಈ ಬ್ಯಾಂಕರ್‌ ನಿಧಾನವಾಗಿ ನಡೆಯುತ್ತ ಯಾವ ಧಾವಂತವೂ ಇಲ್ಲದಂತೆ ತನ್ನ ಆಫೀಸಿಗೆ ಹೋಗುತ್ತಿರುವಾಗ ಅವನ ಈ ಪೋಲಿಸ್‌ ಮಿತ್ರ ಎದುರಾದ. ಒಬ್ಬರಿಗೊಬ್ಬರ ಕುಶಲದ ಮಾತುಗಳು ಮುಗಿದ ನಂತರ ಪೋಲೀಸ್‌ ಹೊರಡಲು ಅನುವಾದ. ಅವನು ಅವಾಂತರದಲ್ಲಿ ಎಲ್ಲಿಗೋ ಹೊರಟಂತಿತ್ತು. ಪೋಲಿಸ್‌ ಕೆಲಸವೇ ಹಾಗಲ್ಲವೆ? ಏನಪ್ಪ ಅದು ಅಂತಹ ಅರ್ಜೆಂಟ್‌ ಕೆಲಸ ಎಂದು ನಮ್ಮ ಈ ಬ್ಯಾಂಕರ್‌ ಕೇಳಿದ.

ಎರಡು ರಸ್ತೆಗಳಾಚೆಗೆ ಒಬ್ಬ ಮುದುಕ ಸತ್ತುಹೋಗಿದ್ದ. ಬೇರೆ ಪೋಲಿಸರು ಈಗಾಗಲೇ ಅಲ್ಲಿದ್ದಾರೆ. ಹೆಚ್ಚಿನ ನೆರವಿಗೆ ಇವನನ್ನು ಕರೆಸಿಕೊಳ್ಳುತ್ತಿದ್ದಾರೆ. ‘ಹೆಚ್ಚಿನ ನೆರವು’ ಎಂದರೆ ಈಗಿರುವ ಪೋಲಿಸರು ಮತ್ಯಾವುದೋ ಕೆಲಸದ ಮೇಲೆ ಬೇರೆ ಕಡೆಗೆ ಹೋಗುತ್ತಾರೆ. ಆ ಮುದುಕನ ಹೆಣಕ್ಕೆ ಒಂದು ಗತಿ ಕಾಣಿಸುವುದು ಈ ಪೇದೆಯ ಕೆಲಸ.

‘ನೋಡು, ಜೀವನದಲ್ಲಿ ಇದಕ್ಕಿಂತಾ ಕೆಟ್ಟ ಕೆಲಸ ಮತ್ತೊಂದಿಲ್ಲ. ಈ ಮುದುಕನಿಗೆ ಏನಾಯಿತೋ ಗೊತ್ತಿಲ್ಲ. ಒಂದು ವಾರದ ಹಿಂದೆ ಬಾತ್‌ಟಬ್‌ನಲ್ಲಿ ಮಲಗಿಕೊಂಡು ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ. ಆತನನ್ನು ವಿಚಾರಿಸುವವರೇ ಇಲ್ಲ ಎನ್ನಿಸುತ್ತದೆ. ಹೆಣಕೊಳೆತು ಅಕ್ಕಪಕ್ಕದ ಮನೆಗೆಲ್ಲಾ ವಾಸನೆ ಬಂದಾಗಲೇ ಗೊತ್ತಾದದ್ದು. ಈಗ ನಾನು ಅಲ್ಲಿ ಕಾವಲು ಕಾಯಬೇಕಾಗಿದೆ. ಕೊಳೆತ ಹೆಣವನ್ನು ಕ್ಲೀನ್‌ ಮಾಡುವ ಜನ ಸಿಗುವುದೇ ಕಷ್ಟ ಈ ಊರಿನಲ್ಲಿ’ ಎಂದು ಗೋಳು ತೋಡಿಕೊಂಡ.

ನಮ್ಮ ಬ್ಯಾಂಕರ್‌ ಮಾರ್ಗಯ್ಯ ಒಂದು ಕ್ಷಣ ಏನನ್ನೋ ಯೋಚನೆ ಮಾಡುತ್ತಾ ನಿಂತು ನಂತರ ‘ನಾನೂ ಬರಲೆ ನಿನ್ನ ಜೊತೆ. ನಿನಗೆ ಏನೂ ಅಭ್ಯಂತರವಿಲ್ಲದಿದ್ದರೆ’ ಎಂದ.

ಪೋಲಿಸ್‌ ಮಿತ್ರನಿಗೆ ಇದು ವಿಚಿತ್ರವಾಗಿ ಕಂಡಿತು. ಕೊಳೆತ ಹೆಣದ ಮನೆಗೆ ಕೆಲಸವಿಲ್ಲದೇ ಬರುವ ಮೂರ್ಖ ಯಾರು? ಆದರೂ ಆ ಸತ್ತ ಮುದುಕನ ಮನೆಯಲ್ಲಿ ಜೊತೆಗೆ ಈ ಸ್ನೇಹಿತನಿದ್ದರೆ ಹರಟೆ ಹೊಡೆಯಬಹುದು ತೊಂದರೆ ಏನೂ ಇಲ್ಲವಲ್ಲ ಎಂದು ಸರಿ ಬಾ ಅದಕ್ಕೇನಂತೆ ಎಂದ.

ಬ್ಯಾಂಕರ್‌ ಬಹಳ ಉತ್ಸಾಹದಲ್ಲಿ ತನ್ನ ಪೋಲಿಸ್‌ ಮಿತ್ರನೊಂದಿಗೆ ನಡೆದ. ಕೊಳೆತ ಹೆಣದ ಕೆಟ್ಟ ವಾಸನೆಗೆ ಪೋಲಿಸ್‌ ಹೊರಗೆ ನಿಂತರೆ ಇವನು ಮಾತ್ರ ಒಳಗೆ ಹೋಗಿ ಹೆಣವಿದ್ದ ಜಾಗವನ್ನು ಇಂಚು ಇಂಚಿಗೆ ಪರಿಶೀಲಿಸಿದ. ಹೆಣವಿದ್ದ ಜಾಗವನ್ನು ಶುದ್ಧ ಮಾಡಲು ಬಂದವರೊಡನೆ ಎಷ್ಟೋ ದಿನಗಳ ಪರಿಚಯ ಎನ್ನುವಂತೆ ಹರಟೆ ಹೊಡೆದ. ಅವರಂತೆಯೇ ಮಾಸ್ಕ್‌ ಹಾಕಿಕೊಂಡು ಅವರು ತಂದ ಕ್ಲೀನಿಂಗ್‌ ಲಿಕ್ವಿಡ್‌ಗಳನ್ನೆಲ್ಲಾ ಉಪಯೋಗಿಸಿ ಅವರೊಂದಿಗೇ ಆ ಬಾತ್‌ಟಬ್‌ನ್ನು ಶುದ್ಧಗೊಳಿಸಿದ. ಜೇಬಿನಿಂದ ತನ್ನ ಪಾಮ್‌ ಪೈಲಟ್‌ ತೆಗೆದು ಅವರು ಉಪಯೋಗಿಸುವ ರಸಾಯನಿಕಗಳ ಹೆಸರನ್ನೆಲ್ಲಾ ಪಟ್ಟಿಮಾಡಿಕೊಂಡ.

ಆ ದಿನ ಸಂಜೆಯಾಳಗಾಗಿ ಕ್ರೈಂ ಸೀನ್‌ ಕ್ಲೀನರ್ಸ್‌ ಎನ್ನುವ ಕಂಪನಿಯಾಂದು ರಿಜಿಸ್ಟರ್‌ ಆಯಿತು. ಕೊಲೆ, ಆತ್ಮಹತ್ಯೆ, ಅಪಘಾತದ ಸ್ಥಳಗಳನ್ನು ಶುದ್ಧಗೊಳಿಸುವ ಕಂಪನಿ! ಬರೀ ಹೆಣಬಿದ್ದ ಜಾಗಗಳಷ್ಟೇ ಅಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಖಾಸಗೀ ಜಾಗಗಳಲ್ಲಿ ವಾಂತಿ, ಬೇಧಿ, ಸತ್ತ ನಾಯಿ, ನಿದ್ರೆಗೆಟ್ಟ ಡ್ರೈವರ್‌ಗಳು ಸಾವಿರಾರು ಮೈಲಿ ಓಡಿಸಿಕೊಂಡು ಹೋಗುವ ಟ್ರಾನ್ಸ್‌ಪೋರ್ಟೇಷನ್‌ ಟ್ರಕ್‌ಗಳು ಉದುರಿಸಿಕೊಂಡು ಹೋದ ಕೊಳೆತ ತರಕಾರಿ; ಕೊನೆಗೆ, ನಿಮ್ಮ ಮನೆಯ ನೆಲ ಮಾಳಿಗೆಯಲ್ಲಿ ಸತ್ತ ಇಲಿಯನ್ನು ಎತ್ತಲೂ ಕೂಡ ನೀವು ಇವನನ್ನು ಕರೆಸಬಹುದು. ‘ಹದ್ದು ಕುಕ್ಕಿದ್ದನ್ನು ಶುದ್ಧಗೊಳಿಸಲು ನಾವು ಬದ್ಧ’ ಎನ್ನುವ ಜಾಹಿರಾತುಗಳು.

ಹೇಳಿ ಕೇಳಿ ಬ್ಯಾಂಕರ್‌ ಆಗಿದ್ದವನು. ಎಷ್ಟು ಹಣ ತೊಡಗಿಸಬೇಕು, ತೊಡಗಿಸಿದ ಹಣವನ್ನು ಹೇಗೆ ವಿನಿಯೋಗಿಸಬೇಕು ಎಲ್ಲಿಂದ ಸಾಲ ತರಬೇಕು ಎನ್ನುವುದೆಲ್ಲ ರಕ್ತದಲ್ಲಿಳಿದಿತ್ತು. ‘ವ್ಯಾಪಾರ’ ಜೋರಾಗಿಯೇ ಶುರುವಾಯಿತು. ದಿನಕ್ಕೆ ಹದಿನೆಂಟು ಗಂಟೆಗಳ ಕೆಲಸ. ಪುರುಸೊತ್ತು ಸಿಕ್ಕಾಗಲೆಲ್ಲಾ ದೇವಸ್ಥಾನಕ್ಕೆ ಹೋಗುವಂತೆ ಮಾರ್ಚುವರಿಗಳಿಗೆ ಹೋಗಿ ಅಲ್ಲಿಗೆ ಹೆಣಗಳನ್ನು ಟ್ರಾನ್ಸ್‌ಪೋರ್ಟ್‌ ಮಾಡುವವರೊಂದಿಗೆ, ಅಲ್ಲಿಗೆ ಬರುವ ಡಿಟೆಕ್ಟಿವ್‌ಗಳೊಂದಿಗೆ, ಹೆಣ ಸಂಸ್ಕಾರ ಮಾಡುವ ಕೆಲಸಗಾರರೊಂದಿಗೆ ತನ್ನ ಬ್ಯುಸಿನೆಸ್‌ ಕಾರ್ಡ್‌ನ್ನು ಕೊಡುತ್ತಾ ದಿನದ ಯಾವ ಹೊತ್ತಿನಲ್ಲಾದರೂ ವಾರದ ಯಾವ ದಿನವಾದರೂ ಅಗತ್ಯಬಿದ್ದರೆ ನನ್ನನ್ನು ಕರೆಯಿರಿ ಎನ್ನುತ್ತಿದ್ದ.

ಅಷ್ಟೇ. ಇವತ್ತು ಆತನ ಕಛೇರಿಗಳು ಅಮೆರಿಕಾದ ಹದಿನೆಂಟು ರಾಜ್ಯಗಳಲ್ಲಿವೆ. ಪ್ರಸೂತಿ ವೈದ್ಯೆಯಂತೆ ಈತನೂ ದಿನದ ಯಾವ ಹೊತ್ತಿಗೆ ಕರೆದರೂ ಹಾಜರಿರಿತ್ತಾನೆ. ಇವತ್ತು ಕೋಟ್ಯಾಧಿಪತಿ ಆತ. ‘ಇದಕ್ಕಿಂತಾ ಎಷ್ಟೋ ಪಟ್ಟು ಹಣವನ್ನು ದುಡಿಯಬಲ್ಲ ಉದ್ಯೋಗರಂಗಗಳಲ್ಲಿದ್ದೆ. ಆದರೆ, ಹಣದ ಮಾತು ಹಾಗಿರಲಿ, ಜನರಿಗೆ ಯಾವುದೇ ಕಷ್ಟಕಾಲದಲ್ಲಿ ಸಹಾಯವನ್ನು ಒದಗಿಸುವ ಭಾಗ್ಯ ಅಲ್ಲೆಲ್ಲೂ ನನಗಿರಲಿಲ್ಲ. ಅಂತಹ ಸಂದರ್ಭಕ್ಕಾಗಿ ನನ್ನ ಮನಸ್ಸು ದಿನರಾತ್ರಿ ತುಡಿಯುತ್ತಿತ್ತು. ಈಗ ಬಹಳ ನೆಮ್ಮದಿಯಿಂದ ಇದ್ದೇನೆ’ ಎನ್ನುತ್ತಾನೆ.

ಒಬ್ಬಳು ಸಾಫ್ಟ್‌ವೇರ್‌ ಇಂಜಿನಿಯರ್‌ ಚೈನೀಸ್‌ ವೈದ್ಯೆಯಾದರೆ ಒಬ್ಬ ಮಾರ್ಗೇಜ್‌ ಫೈನಾನ್ಸಿಂಗ್‌ ಬ್ಯಾಂಕರ್‌ ಹೆಣ ಎತ್ತುವವನಾದ. ಬಹಳ ದಿನಗಳಿಂದ ಹಾಕಿಕೊಂಡಿದ್ದ ಕ್ಯಾಪ್‌ ಬೇಜಾರಾಯಿತು ಎಂಬ ಯೋಚನೆ ಬಂದೊಡನೆಯೇ ಅದನ್ನು ಅಲ್ಲೇ ಎಸೆದು ಅಂಗಡಿಯ ಮುಂದೆ ನೇತು ಹಾಕಿದ್ದ ಬಣ್ಣಬಣ್ಣದ ಟೊಪ್ಪಿಗೆಯನ್ನು ಕೊಂಡು ಹಾಕಿಕೊಂಡಷ್ಟು ಸುಲಭವಾಗಿ ಇವರು ತಮ್ಮ ಉದ್ಯೋಗಗಳನ್ನು ಬದಲಿಸಿಬಿಟ್ಟರು.

ಹಿಡಿದ ಉದ್ಯೋಗವನ್ನು ಮರದ ತುದಿಯಲ್ಲಿ ಹಿಡಿದ ಕೊಂಬೆಯಂತೆ ಗಟ್ಟಿಯಾಗಿ ಕಪಿಮುಷ್ಟಿಯಲ್ಲಿ ಹಿಡಿಯುವ ಜನರ ನಡುವೆ, ಹೋದ ಉದ್ಯೋಗಕ್ಕಾಗಿ ಆತ್ಮಹತ್ಯೆಮಾಡಿಕೊಳ್ಳುವ ಪುಕ್ಕಲಿಗರ ನಡುವೆ ಇವರೆಷ್ಟು ಧೈರ್ಯವಂತರಾಗಿ ಕಾಣುತ್ತಾರೆ!

ಅದೆಲ್ಲಿಂದ ಬಂತು ಇವರಿಗೆ ಅಷ್ಟೊಂದು ಧೈರ್ಯ? ‘ನಾನೇನು ಮಾಡಬೇಕು ಈ ಜೀವನದಲ್ಲಿ ?’ ಎಂದು ಕೇಳಿಕೊಂಡ ಪ್ರಶ್ನೆಯಿಂದಲೇ?

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X