• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾವೆಂಬ ನಿಯಮ ಮತ್ತು ನತದೃಷ್ಟ ಅಶ್ವತ್ಥಾಮ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಜೇನುಗೂಡಿನಲ್ಲಿ ತುಂಬಿಕೊಂಡಿರುವ ದುಂಬಿಗಳಂತೆ ದಟ್ಟವಾದ ಮಹಾಭಾರತದ ಪಾತ್ರಗಳಲ್ಲಿ ಯಾವ ಪಾತ್ರ ನಿಮ್ಮ ಕರುಣೆ ಮತ್ತು ಸಹಾನುಭೂತಿಗಳನ್ನು ಹೆಚ್ಚಿಗೆ ಪಡೆಯುತ್ತದೆ ಎಂದರೆ ಒಬ್ಬೊಬ್ಬರು ಒಂದೊಂದು ಉತ್ತರವನ್ನು ಹೇಳಿಯಾರು. ಚಕ್ರವರ್ತಿಯಾಗುವ ಎಲ್ಲಾ ಅರ್ಹತೆಗಳಿದ್ದೂ ಸೂತಪುತ್ರನಾಗಿ ವಿಧೇಯ ಸೇವಕನಾಗಿ ಬದುಕಿ ಉಪ್ಪಿನ ಋಣಕ್ಕಾಗಿ ಗೆಳೆಯನ ಸ್ನೇಹಕ್ಕಾಗಿ ತನ್ನ ಪ್ರಾಣವನ್ನೇ ತೆತ್ತ ಕರ್ಣ ಬಹುಪಾಲು ಉತ್ತರಗಳ ಒಡೆಯನಾಗುತ್ತಾನೆ. ಐವರು ವೀರಾಧಿವೀರ ಗಂಡುಗಳ ಹೆಣ್ಣಾದರೂ ತುಂಬಿದ ಸಭೆಯಲ್ಲಿ ಹೀನಾಯವಾಗಿ ಅವಮಾನಕ್ಕೊಳಗಾದ ದ್ರೌಪದಿ ಖಂಡಿತವಾಗಿಯೂ ಹೆಂಗಳೆಯರ ಜನಪ್ರಿಯ ಉತ್ತರವಾಗುತ್ತಾಳೆ. ಮಾದ್ರಿ, ಕುಂತಿ, ಏಕಲವ್ಯ, ಅಭಿಮನ್ಯು, ಘಟೋತ್ಕಚ ಒಬ್ಬರೇ ಇಬ್ಬರೇ? ನಮ್ಮ ಕರುಣಾರಸವನ್ನು ಧಾರೆಯಾಗಿ ಹರಿಸಬಲ್ಲ ಪಾತ್ರಗಳು ಮಹಾಭಾರತದಲ್ಲಿ ಹೇರಳವಾಗಿ ಸೃಷ್ಟಿಯಾಗಿವೆ. ಆದರೆ ನನಗೆ ಒಂದು ಪಾತ್ರ ಮಾತ್ರ ಎಲ್ಲದಕ್ಕಿಂತಲೂ ಹೆಚ್ಚಾಗಿ ಹಿಮಗಡ್ಡೆಯನ್ನು ಅಂಗಿಯಾಳಗೆ ಹಾಕಿಕೊಂಡಂತೆ ತಣ್ಣನೆಯ ಕೊರೆತದ ನೋವನ್ನು ತರುತ್ತದೆ.

ಅದು ಅಶ್ವತ್ಥಾಮ.

The fight against Death !ಇವನು ಜಗದ್ವಿಖ್ಯಾತ ಗುರುಗಳಾದ ದ್ರೋಣಾಚಾರ್ಯರ ಮಗ. ‘ಮಾಸ್ತರ್‌ರ ಮಕ್ಕಳು’ ಎನ್ನುವ ಲೇಖನದಲ್ಲಿ ಜಯಂತ ಕಾಯ್ಕಿಣಿಯವರು ‘ಸಮಾಜಶಾಸ್ತ್ರಜ್ಞರ ಯಾವ ವಿಂಗಡನೆಗೂ ಒಳಪಡದ ವಿಶಿಷ್ಟ ಮನುಜ ತಳಿ’ ಎನ್ನುತ್ತಾರೆ ಉಪಾದ್ಯಾಯರ ಮಕ್ಕಳನ್ನು ಕುರಿತು. ಅಂತವನು ಅಶ್ವತ್ಥಾಮ. ದ್ರೋಣಾಚಾರ್ಯರಂತಹ ಜ್ಞಾನಿಗಳೇ ತಮ್ಮೆಲ್ಲಾ ಕುರುಡು ಮಮತೆಯನ್ನು ಒಟ್ಟಾಗಿ ಧಾರೆ ಎರೆದಂತಹ ಮಗ. ಈ ಜ್ಞಾನಿ ತಂದೆಯ ಅತಿ ಮೋಹವೇ ಅಶ್ವತ್ಥಾಮನ ಎಲ್ಲಾ ಸಂಕಟಗಳಿಗೆ ಮೂಲವಾದದ್ದು. ಯಾರಾದರೂ ಹಿರಿಯರಿಗೆ ನಮಸ್ಕರಿಸಿದರೆ ‘ಚಿರಂಜೀವಿಯಾಗು’ ಎಂದು ಆಶೀರ್ವಾದ ಮಾಡುತ್ತಾರಲ್ಲಾ , ಆ ಆಶೀರ್ವಾದವನ್ನು ತಮ್ಮ ಮಗನಿಗೆ ನಿಜ ಮಾಡಿಬಿಟ್ಟರು ದ್ರೋಣಾಚಾರ್ಯರು. ತಾವು ಸಾಯುವವರೆಂದು ಗೊತ್ತಿದ್ದೂ, ತಮ್ಮ ಹೆಂಡತಿ ಸಂಸಾರ ಸುತ್ತಮುತ್ತಲ ಜೀವಜಗತ್ತು ತತ್ಕಾಲದ್ದು ಎಂದು ಗೊತ್ತಿದ್ದೂ ತಮ್ಮ ಮಗನಿಗೆ ಮಾತ್ರ ಚಿರಂಜೀವಿಯಾಗುವ ವರವನ್ನು ಕೇಳಿತಂದರು. ಹಾಗೇನಾದರೂ ಉಪಕರಿಸುವುದಾದರೆ ಅರ್ಜುನನನ್ನೂ ಮೀರುವ ಪರಾಕ್ರಮಿಯನ್ನಾಗಿ ಮಾಡಬಹುದಿತ್ತು ; ಧರ್ಮಜನನ್ನೂ ಮೀರುವ ಧರ್ಮಾತ್ಮನನ್ನಾಗಿಸಬಹುದಿತ್ತು ಅಥವಾ ತಮ್ಮನ್ನೂ ಮೀರುವ ದೊಡ್ಡ ಗುರುವನ್ನಾಗಿಸಬಹುದಿತ್ತು.

ಶಿಬಿರದಲ್ಲಿ ಹಾಯಾಗಿ ನಿದ್ರಿಸುತ್ತಿದ್ದ ಪಾಂಡವರ ಮಕ್ಕಳ ತಲೆಗಳನ್ನು ಅಶ್ವತ್ಥಾಮ ಕತ್ತರಿಸಿ ಮರಣಶಯ್ಯೆಯಲ್ಲಿದ್ದ ದುರ್ಯೋಧನನ ಮುಂದೆ ರಕ್ತಮಯವಾದ ರುಂಡಗಳನ್ನಿಟ್ಟಾಗ ರಕ್ತದ ಕಣಕಣದಲ್ಲೂ ಪಾಂಡವರ ಮೇಲೆ ಶತೃತ್ವವನ್ನೇ ತುಂಬಿಕೊಂಡಿದ್ದ ದುರ್ಯೋಧನನೇ ಮರುಗಿ ಇದೆಂತೆಹಾ ಹೊಲಸು ಕಾರ್ಯವೆಸಗಿದೆ ಎಂದು ಸಂಕಟಪಡುತ್ತಾನೆ. ತನ್ನ ಈ ಕೃತ್ಯಕ್ಕೆ ಕೃಷ್ಣನಿಂದ ಶಾಪಗ್ರಸ್ತನಾಗಿ ಪಾಪಪ್ರಜ್ಞೆಯಿಂದ ಭಯಭೀತನಾಗಿ ಒಬ್ಬೊಂಟಿಯಾಗಿ ಹಿಮಾಲಯದಲ್ಲಿ ಅಲೆಯುವಾಗ ತನ್ನ ಚಿರಂಜೀವಿತನಕ್ಕೆ ಹಾಗೂ ಅದನ್ನು ತಂದುಕೊಟ್ಟ ತನ್ನ ಪ್ರೀತಿಯ ಅಪ್ಪನಿಗೆ ಅಶ್ವತ್ಥಾಮ ಅದೆಷ್ಟು ಬಾರಿ ಹಿಡಿಶಾಪ ಹಾಕಿರಬಹುದು!

ಸಾವು ತೀರಾ ಕೆಟ್ಟದ್ದೇನಲ್ಲ.

ಹ್ಯೂಮನ್‌ ಜಿನೋಮ್‌ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವ ವಿಜ್ಞಾನಿಯಾಬ್ಬರು ವರ್ತಮಾನ ಪತ್ರಿಕೆಯ ಸಂದರ್ಶನವೊಂದರಲ್ಲಿ ‘ಮೂವತ್ತು ಸಾವಿರ ಜೀನ್ಸ್‌ಗಳನ್ನು ಪತ್ತೆ ಮಾಡಿ ಅವುಗಳ ಮ್ಯಾಪಿಂಗ್‌ನ್ನು ಬರೆದಿದ್ದೇವೆ. ನಮಗೆದುರಾಗುವ ಜನ ಸಾಮಾನ್ಯರ ಸಾಮಾನ್ಯ ಪ್ರಶ್ನೆ ಎಂದರೆ, ಅವೆಲ್ಲಾ ಸರಿ, ನಮ್ಮ ಆಯಸ್ಸನ್ನು ನಿರ್ಧರಿಸುವ ಜೀನ್‌ ಯಾವುದು? ಸದಾ ಹರಯವಂತರಾಗಿಯೇ ಇರಲು ಸಾಧ್ಯವಿಲ್ಲವೇ ಎಂದು’ ಹಾಸ್ಯದಲ್ಲಿ ಹೇಳಿದ್ದರು. ಅವರು ಹೇಳಿದ್ದು ಬಹುಪಾಲು ನಿಜ. ಮನುಷ್ಯ ಸಾವನ್ನು ತನ್ನ ಒಂದು ಗಣನೀಯವಾದ ಮಿತಿ ಎಂದು ತಿಳಿದು ಅದನ್ನು ತನ್ನ ಅಂಕೆಯಾಳಗೆ ಇಟ್ಟುಕೊಳ್ಳಲು ಸದಾ ಕನಸು ಕಂಡಿದ್ದಾನೆ. ಅಮೃತವೆಂಬ ಫ್ಯಾಂಟಸಿ ಹುಟ್ಟಿದ್ದೇ ಈ ಕನಸಿನಿಂದ. ಅಮೃತ ಹುಟ್ಟಿದ ಬಗೆಯೂ ಎಷ್ಟೊಂದು ರಂಜನೀಯವಾದ ಕಲ್ಪನೆಯಾಗಿದೆ ನೋಡಿ. ಒಂದು ಬೆಟ್ಟಕ್ಕೆ ಹಾವನ್ನು ಸುತ್ತಿ ಸಮುದ್ರವನ್ನು ಕಡೆದರು ಎಂದು ಪ್ರಾಥಮಿಕ ವಿಜ್ಞಾನವನ್ನು ಓದುವ ನಿಮ್ಮ ಮಗನಿಗೋ ಮಗಳಿಗೋ ಹೇಳಿ ನೋಡಿ! ಯಾಕೆ ಏನೇನೋ ಮಾತನಾಡುತ್ತಿದ್ದೀಯಾ ಅಪ್ಪಾ/ಅಮ್ಮಾ ? ರಾತ್ರಿ ಸರಿಯಾಗಿ ನಿದ್ರೆ ಮಾಡಲಿಲ್ಲವಾ ಎಂದು ಕೇಳುತ್ತಾರೆ ಗಾಬರಿಯಾಗಿ. ಇರಲಿ, ಸಮುದ್ರ ಕಡೆದು ಅಮೃತ ಬಂದಾಗ ದೇವತೆಗಳು ಎನ್ನುವ ತೆಳ್ಳನೆಯ ಬೆಳ್ಳನೆಯ ಸುಂದರವಾದ ಧಣಿಗಳು ಕಪ್ಪಗೆ ದಪ್ಪಗೆ ಕೋರೆಹಲ್ಲಿನ ರಾಕ್ಷಸರು ಎನ್ನುವ ವಿಕೃತ ಪ್ರಾಣಿಗಳಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸಿದರು ನೋಡಿ. ಅಮೃತಕ್ಕೂ ಎಲಿಜಬಿಲಿಟಿ ಬೇಕು ಅಲ್ಲವಾ? ಯಾರ್ಯಾರಿಗೋ ಕೊಡಲಾಗುತ್ತದಾ? ಜೀವ ಒತ್ತೆ ಇಟ್ಟು ಚಿನ್ನದ ಗಣಿಯಲ್ಲಿ ಕೆಲಸ ಮಾಡುವ ನೌಕರರು ಚಿನ್ನಕ್ಕೆ ಆಸೆ ಪಡಲಾಗುತ್ತದಾ?

ಹೇಗೆ ದೇವತೆಗಳು ಅಮೃತವನ್ನು ಕುಡಿದು ಅಮರರಾಗಿ ದೇವಲೋಕವೆನ್ನುವ ಕೊರತೆಯಿಲ್ಲದ ನಾಡಿನಲ್ಲಿ ಸುರಾಪಾನ ಮಾಡುತ್ತಾ ಅಪ್ಸರೆಯರೊಂದಿಗೆ ಕೊನೆಯಿಲ್ಲದಂತೆ ನಲಿಯುತ್ತಲೇ ಇದ್ದಾರೋ, ಇತ್ತ ಭೂಲೋಕದಲ್ಲಿ ರೋಗರುಜಿನ ಮುಪ್ಪು ಸಾವುಗಳಿಂದ ಜರ್ಝರಿತರಾದ ಮನುಷ್ಯರು ಆಕಾಶದೆಡೆಗೆ (ಅಲ್ಲಿ ದೇವಲೋಕವಿದೆ ಎಂದು ಬಗೆದು) ಮುಖಮಾಡಿ ‘ಮೃತ್ಯೋರ್ಮಾ ಅಮೃತಂಗಮಯ’ ಎಂದು ಬೇಡಿಕೊಳ್ಳುತ್ತಲೇ ಇದ್ದಾರೆ. ಚಿರಂಜೀವಿಗಳಾಗಿಬಿಡಬೇಕು. ಕಬ್ಬಿಣ ತಾಮ್ರಗಳಂತಹ ಲೋಹಗಳನ್ನು ಚಿನ್ನವಾಗಿಸಬೇಕು ಎಂದು ರಸಶಾಸ್ತ್ರ ಹೇಗೆ ಸಾವಿರಾರು ವರ್ಷ ಹೆಣಗಾಡಿತೋ ಹಾಗೆಯೇ ಸಾವಿರಾರು ವರ್ಷಗಳಿಂದ ವೈದ್ಯ ವಿಜ್ಞಾನ ಅಮೃತದ ಆವಿಷ್ಕಾರಕ್ಕೆ ತನ್ನ ಸಾಮರ್ಥ್ಯವನ್ನು ಬಹುಪಾಲು ಗುಟ್ಟಾಗಿ ಅನೇಕಬಾರಿ ಬಹಿರಂಗವಾಗಿ ಸುರಿದಿದೆ. ಈಗ ಕೆಲವು ದಶಕಗಳಲ್ಲಿ ಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದ ರಭಸದಲ್ಲಿ ಚಿರಂಜೀವಿಗಳಾಗಲು ಹಂಬಲಿಸುವವರಿಗೆ ಬಡಿಯಲು ಒಂದು ಬಾಗಿಲು ಸಿಕ್ಕಿದೆ.

ನಮಗೇಕೆ ಮುಪ್ಪು ಬರುತ್ತದೆ ಎನ್ನುವುದನ್ನು ಜೀವಶಾಸ್ತ್ರ ಸುಲಭವಾಗಿ ಹೇಳುತ್ತದೆ, ಅದನ್ನು ನಿಲ್ಲಿಸುವುದು ಹೇಗೆ ಎನ್ನುವ ಉತ್ತರ ಗೊತ್ತಿಲ್ಲದಿದ್ದರೂ ಕೂಡ. ಮರ ಒಂದರಲ್ಲಿ ಹಿಮಗಾಲದಲ್ಲಿ ಎಲೆಗಳು ಉದುರಿ ವಸಂತಕ್ಕೆ ಮತ್ತೆ ಚಿಗುರುಗಳು ಮೂಡುತ್ತವಲ್ಲಾ ಹಾಗೆಯೇ ನಮ್ಮ ದೇಹ ಕೂಡ. ನಮ್ಮ ಜೀವಕೋಶಗಳು ತಮಗೆ ತಾವೇ ಸತ್ತು ಬರುವ ಹೊಸಕೋಶಗಳಿಗೆ ಜಾಗ ಮಾಡಿಕೊಡುತ್ತವೆ. ಇದು ನಿರಂತರವಾದ ಕ್ರಿಯೆ. ಜೀವಕೋಶಗಳು ಹೇಗೆ ಒಂದಿದ್ದದ್ದು ಎರಡಾಗಿ, ಎರಡು ನಾಲ್ಕಾಗಿ, ಸಾವಿರವಾಗಿ ನಮ್ಮ ಅಂಗಾಂಗಗಳನ್ನೆಲ್ಲಾ ರಚಿಸಿ ಸಂರಕ್ಷಿಸಿ ನಮ್ಮ ಚೇತನವನ್ನು ಜತನಗೊಳಿಸುತ್ತದೆಯೋ ಹಾಗೆಯೇ ಜೀವಕೋಶಗಳ ಸಾವೂ ಕೂಡ ನಮ್ಮ ಬೆಳವಣಿಗೆಗೆ ಅತ್ಯಗತ್ಯ. ಒಂದು ರೀತಿಯಲ್ಲಿ ಯಾರೋ ಪ್ರೀ-ಪ್ರೋಗ್ರಾಂ ಮಾಡಿಟ್ಟಂತೆ ಈ ಜೀವಕೋಶಗಳು ತಮ್ಮ ಸರದಿ ಬಂದಾಗ ಅಥವಾ ದೇಹದ ಒಟ್ಟಾರೆ ಬೆಳವಣಿಗೆಗೆ ಪೂರಕ ಎನಿಸಿದಾಗ ತಮಗೆ ತಾವೇ ಆತ್ಮಹತ್ಯೆ ಮಾಡಿಕೊಳ್ಳುತ್ತವೆ. ಭ್ರೂಣವು ಐದನೇ ತಿಂಗಳಲ್ಲಿರುವಾಗ ಅದರ ಹಸ್ತಗಳು ದುಂಡನೆಯ ತಟ್ಟೆಯಂತೆ ಸಪಾಟಾಗಿದ್ದು ಮುಂದೆ ಕೆಲವೇ ವಾರಗಳಲ್ಲಿ ನಡುವಿನ ಜೀವಕೋಶಗಳು ಬಲು ಕ್ರಮವಾಗಿ ಸತ್ತು ಸಂದಿಗಳನ್ನು ಮಾಡಿ ಬೆರಳುಗಳನ್ನು ನಿರ್ಮಿಸುತ್ತವೆ. ಈ ರೀತಿಯಾಗಿ ತಮ್ಮ ಭವಿಷ್ಯವನ್ನು ಬರೆದಿಟ್ಟಂತೆ ಜೀವಕೋಶಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಜೀವಶಾಸ್ತ್ರದಲ್ಲಿ ‘ಅಪಟೋಸಿಸ್‌’’ (Apoptosis) ಎನ್ನುತ್ತಾರೆ. ರಾಬರ್ಟ್‌ ಹೊರ್‌ವಿಟ್ಸ್‌ ಎನ್ನುವ ಎಮ್‌.ಐ.ಟಿ.ಯ ಗಣಿತಶಾಸ್ತ್ರಜ್ಞ ‘ಬೇಜಾರಾಗುತ್ತಿದೆ, ಏನಾದರೂ ಬೇರೆ ಮಾಡಬೇಕು’ ಎಂದು ಜೀವಶಾಸ್ತ್ರವನ್ನು ಓದಿ ಕಂಡುಹಿಡಿದದ್ದು ಇದು! ಅವನ ಈ ಆವಿಷ್ಕಾರಕ್ಕೆ 2002ರಲ್ಲಿ ನೋಬಲ್‌ ಕೂಡ ಬಂತು. ಆದರೂ, ನಮಗೆ ಪ್ರೋಗ್ರಾಮ್ಡ್‌ ರೀತಿಯಲ್ಲಿ ಜೀವಕೋಶಗಳು ಸಾಯುತ್ತವೆ ಎನ್ನುವುದು ತಿಳಿದಿದೆಯೇ ಹೊರತು ಜೀವಕೋಶಗಳ ಒಳಗೆ ನಡೆಯುವ ಅನೇಕ ಆಂತರಿಕ ಚಟುವಟಿಕೆಗಳು ಮತ್ತು ಹೇಗೆ ಈ ಜೀವಕೋಶಗಳು ‘ಈ ಕ್ಷಣವೇ ನನ್ನ ಅಂತಿಮ ಕಾಲ’ ಎಂದು ತಮ್ಮ ಚಟುವಟಿಕೆಗಳನ್ನೆಲ್ಲಾ ನಿಲ್ಲಿಸಿ ಜೈನ ತೀರ್ಥಂಕರರಂತೆ ಸಾವನ್ನು ಅಪ್ಪುತ್ತವೆ ಎನ್ನುವುದು ಇನ್ನೂ ತಿಳಿದಿಲ್ಲ.

ಜೀವಕೋಶಗಳನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಸುಲಭದ್ದಾಗಿ ಕಾಣುವುದಿಲ್ಲ. ಭೂಮಿಯ ಮೇಲಿನ ಜೀವರಚನೆಯಲ್ಲಿ ಇಟ್ಟಿಗೆಯಂತೆ ಉಪಯೋಗಿಸಲ್ಪಟ್ಟಿರುವ ಈ ಜೀವಕೋಶಗಳು ಎಷ್ಟು ಸಂಕೀರ್ಣವಾಗಿರುತ್ತವೆ ಎನ್ನುವುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅತಿ ಸರಳವಾದ ಈಸ್ಟ್‌ ಜೀವಕೋಶ ಒಂದನ್ನು ಒಡೆದರೆ ಅದರಲ್ಲಿರುವ ಬಿಡಿಭಾಗಗಳು ಬೋಯಿಂಗ್‌ 777 ಜೆಟ್‌ನ ಬಿಡಿಭಾಗಗಳಿಗೆ ಸಮವಂತೆ! ಮಾನವ ಜೀವಕೋಶಕ್ಕೆ ಹೋಲಿಸಿದರೆ ಈಸ್ಟ್‌ನ ಜೀವಕೋಶ ಅತಿ ಸರಳ. ಇನ್ನು ನಮ್ಮ ಕೋಶಗಳ ಸಂಕೀರ್ಣತೆಯನ್ನು ಊಹಿಸಿ!

ಹೀಗೆ, ನಮ್ಮ ಮನುಷ್ಯಲೋಕದಂತೆಯೇ ನಮ್ಮ ದೇಹದೊಳಗೂ ಕೂಡ ಕೋಶಗಳು ಹುಟ್ಟಿ ಬೆಳೆದು ಮಕ್ಕಳು ಮರಿ ಮಾಡಿ ಸಾವನ್ನು ಕಾಣುತ್ತವೆ. ಹಳೆಯ ಕೋಶಗಳು ಕಣ್ಮರೆಯಾಗುತ್ತಿರುತ್ತವೆ. ಅಂತೆಯೇ ಕೋಶ ವಿಭಜನೆಯ ಮೂಲಕ ಹೊಸ ಕೋಶಗಳು ಜನ್ಮತಾಳುತ್ತಿರುತ್ತವೆ. ಈ ಕೋಶ ವಿಭಜನೆಯಲ್ಲಿ ಒಂದು ಗುಟ್ಟಿದೆ. ಜೀವಕೋಶಗಳಲ್ಲಿ ಸುತ್ತಿದ ಹಗ್ಗದ ಸಿಂಬಿಯಂತಿರುವ ವರ್ಣತಂತುಗಳ (Chromosome) ತುದಿಗೆ ಟಿಲೊಮಿರ್‌ (Telomere) ಎನ್ನುವ ಕವಚದ ರಕ್ಷಣೆಯಿರುತ್ತದೆ. ಪ್ರತಿಸಲ ಜೀವಕೋಶವೊಂದು ವಿಭಜಿತವಾದಾಗ ಈ ಟಿಲೊಮಿರ್‌ ಗಿಡ್ಡವಾಗುತ್ತಾ ಹೋಗುತ್ತದೆ. ಬಹುಶಃ ಈ ಟಿಲೊಮಿರ್‌ನ ಉದ್ದಕ್ಕೂ ಜೀವಕೋಶಗಳ ವಿಭಜನೆಗೂ ಮಹತ್ವದ ಸಂಬಂಧವಿದೆ. ಸುಮಾರು ಎಂಭತ್ತು ವಿಭಜನೆಗಳಾದ ನಂತರ ಈ ಟಿಲೊಮಿರ್‌ ಅದೆಷ್ಟು ಗಿಡ್ಡವಾಗುತ್ತದೆ ಎಂದರೆ ಕ್ರೋಮೋಸೋಮ್‌ಗಳ ರಕ್ಷಣೆ ಸಾಧ್ಯವಾಗುವುದಿಲ್ಲ. ಅಲ್ಲಿಗೆ ಜೀವಕೋಶಗಳು ವಿಭಜನೆಗೊಳ್ಳುವುದನ್ನು ನಿಲ್ಲಿಸುತ್ತವೆ. ಅಂದರೆ, ಹೊಸಕೋಶಗಳು ಹುಟ್ಟಲಾರವು ಮತ್ತು ಇನ್ನು ಏನಿದ್ದರೂ ಹಳೆಯ ಕೋಶಗಳದ್ದಷ್ಟೇ ವಿಚಾರ. ಈ ಕೋಶಗಳೂ ತಮ್ಮ ಸರದಿ ಬಂದಾಗ ಮರುಮಾತಾಡದೆ ಪ್ರಾಣ ಅರ್ಪಿಸುತ್ತವೆ. ಆ ಸ್ಥಿತಿಯಲ್ಲಿ ನಮ್ಮ ದೇಹದ ಜೀವಕೋಶಗಳ ಸಂಖ್ಯೆಯೇ ಕಡಿಮೆಯಾಗುತ್ತದೆ. ಇರುವ ಕೋಶಗಳೇ ಕಷ್ಟಪಟ್ಟು ಕೆಲಸ ಮಾಡುವಂತಾಗುತ್ತದೆ. ಚರ್ಮ ಸುಕ್ಕಾಗುತ್ತದೆ, ಕಣ್ಣು ಕಿವಿ ಮಂದವಾಗುತ್ತದೆ, ಬೆನ್ನು ಗೂನಾಗುತ್ತದೆ, ಶ್ವಾಸ ನಿಧಾನವಾಗುತ್ತದೆ, ಮೂಳೆ ಸವೆಯುತ್ತದೆ.

ನಾವು ಮುದುಕರಾಗುತ್ತೇವೆ.

ದೇಹದ ಪರಿಸ್ಥಿತಿ ಮತ್ತೂ ವಿಕೋಪಕ್ಕೆ ಹೋದಾಗ ನಮಗೆ ಸಾವು ಬರುತ್ತದೆ.

ಜೀವ ವಿಕಸನದ ಚಕ್ರ ಇದು. ನಮ್ಮ ಹಿಂದಿನ ತಲೆಮಾರಿಗೆ ಆದದ್ದೂ ಇದೇ, ನಮಗಾಗುವುದೂ ಇದೇ, ನಮ್ಮ ಮುಂದಿನ ಸಂತತಿಗೆ ಆಗುವುದೂ ಇದೇ- ವಿಜ್ಞಾನ ಮೃತ್ಯುವನ್ನು ಗೆಲ್ಲುವ ಬಗೆಯನ್ನು ಕಂಡುಹಿಡಿಯದಿದ್ದರೆ. ಆಂತರಿಕವಾಗಿ ತನ್ನ ಸಂರಚನೆಯಲ್ಲಿ ಎಷ್ಟೇ ಕ್ಲಿಷ್ಟವಾಗಿದ್ದರೂ ಜೀವಚಕ್ರದ ಈ ವಿಧಿ ಎಷ್ಟು ಸರಳ ನೋಡಿ. ರಾಜಾಧಿರಾಜರಾಗಿರಿ, ಮಹಾನ್‌ ವ್ಯಕ್ತಿಗಳಾಗಿರಿ, ಚಲನಚಿತ್ರ ನಟರಾಗಿರಿ, ಮಿಸ್‌ ಯೂನಿವರ್ಸ್‌ ಆಗಿರಿ ಅಥವಾ ಕಾಡಲ್ಲಿ ಅಲೆಯುವ ದಂತಚೋರರಾಗಿರಿ, ಮುಪ್ಪು ಮತ್ತು ಸಾವುಗಳು ಯಾವ ಭೇದವೂ ಇಲ್ಲದಂತೆ ನಿಮ್ಮನ್ನು ಆವರಿಸಿಕೊಳ್ಳುತ್ತವೆ. ನಿಮಗೆ ಸಮಾಜದ ಜಂಜಾಟದಿಂದ ಮುಕ್ತಿ ಕೊಡುತ್ತವೆ ಹಾಗೆಯೇ ಸಮಾಜಕ್ಕೆ ನಿಮ್ಮಿಂದಲೂ ಬಿಡುಗಡೆಯನ್ನು ನೀಡುತ್ತವೆ. ಲೋಕನಿಯಮವಿದು. ಪ್ರಕೃತಿ ನಮಗೆ ನೀಡಿರುವ ಮಹಾನ್‌ ಕೊಡುಗೆಯಿದು.

ನಮಗೆ ಅಮೃತ ಬೇಕಿಲ್ಲ. ದೇವರು ನಮಗೆ ನೀಡಿರುವ ಆಯಸ್ಸು ಯಾವ ಸಾಧನೆಗೂ ಕಡಿಮೆಯಲ್ಲ. ‘ಸಿಟಿ ಆಫ್‌ ಏಂಜಲ್ಸ್‌’ ಸಿನೆಮಾದಲ್ಲಿ ದೇವದೂತನಾಗಿದ್ದ ನಿಕೊಲಸ್‌ ಕೇಜ್‌ ಒಬ್ಬ ಹುಡುಗಿಗಾಗಿ; ಅವಳ ದೇಹ ಮತ್ತು ಮನಸ್ಸುಗಳಿಗಾಗಿ; ತನ್ನ ಚಿರಂಜೀವಿತನ ಮತ್ತು ಚಿರಯೌವನವನ್ನು ತ್ಯಜಿಸಿ ‘ನೂರೆಂಟು ಜಂಜಾಟಗಳ’ ಮನುಷ್ಯನಾಗಿ ಬಾಳುತ್ತಾನೆ. ಹಾಗೆ ದೇವಲೋಕವನ್ನೂ ಸೆಳೆಯುವ ಅದ್ಭುತಗಳು ನಮ್ಮ ಲೋಕದಲ್ಲಿಯೇ ಇವೆ. ರಸಮಯವಾದ ನಮ್ಮ ಜೀವನವೂ ಕ್ಷಣದಿಂದ ಕ್ಷಣಕ್ಕೆ ಆಸಕ್ತಿಪೂರ್ಣವಾಗಿಯೇ ಹೋಗುತ್ತದೆ. ಮುಪ್ಪು ಮತ್ತು ಸಾವುಗಳೂ ಈ ಪಯಣದ ಅವಿಭಾಜ್ಯ ಗಡಿಗಳು. ಎಷ್ಟು ದಿನ ಅಪ್ಸರೆಯರ ನೃತ್ಯ ನೋಡೀರಿ? ಎಷ್ಟು ದಿನ ಸುರಾಪಾನ ಮಾಡೀರಿ? ದೇವತೆಗಳಿಗೂ ಬೇಸರವಾಗಿ ಮತ್ತೆ ಸಮುದ್ರವನ್ನು ಕಡೆದು ಈ ಬಾರಿ ಕಳಸದಲ್ಲಿ ಮೃತ್ಯುವನ್ನು ತಂದಿರುತ್ತಾರೆ ತಮ್ಮ ಸಾವಿರಾರು ವರ್ಷಗಳ ಏಕತಾನತೆಯ ಜೀವನವನ್ನು ಕೊನೆಗೊಳಿಸಿಕೊಳ್ಳಲು. ಆ ಕತೆ ನಮಗೆ ಗೊತ್ತಿಲ್ಲ ಅಷ್ಟೆ.

ದೂರದಲ್ಲೆಲ್ಲೋ ಬೆಟ್ಟದ ಮೇಲಿಂದ ಅಶ್ವತ್ಥಾಮ ಆಸೆಯಿಂದ ನಮ್ಮನ್ನೇ ನೋಡುತ್ತಿದ್ದಾನೆ, ಎಷ್ಟೊಂದು ಅದೃಷ್ಟವಂತರು ಎಂದು. ಆ ಅದೃಷ್ಟವನ್ನು ಉಳಿಸಿಕೊಳ್ಳೋಣ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X