• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದುಕೆಂಬ ನಿರಂತರ ಹೋರಾಟ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ನಾಸಾದ ಒಬ್ಬ ವಿಜ್ಞಾನಿಯನ್ನು ಬೇರೆ ಗ್ರಹಗಳಲ್ಲಿ ಜೀವಿಗಳಿವೆಯೇ ಎಂಬುದನ್ನು ಹೇಗೆ ಊಹೆ ಮಾಡಬಹುದು ಎನ್ನುವ ಪ್ರಶ್ನೆಯನ್ನು ಪತ್ರಕರ್ತನೊಬ್ಬ ಕೇಳಿದಾಗ ಆ ವಿಜ್ಞಾನಿಯು ನೀಡಿದ ಉತ್ತರ ಬಹಳ ಲಾಜಿಕಲ್‌ ಆಗಿತ್ತು :

‘ಜೀವಿಗಳಿವೆಯೇ ಎಂದು ಕೇಳುವ ಮುನ್ನ ಜೀವಿಗಳು ಹೇಗೆ ಉದಯಿಸಲು ಸಾಧ್ಯ ಎಂದು ಕೇಳಿಕೊಳ್ಳಬೇಕು. ಮಿಂಚಿನ ವಿದ್ಯುತ್ತಿನಲ್ಲಿ ಅಣುವೊಂದು ಜೀವ ರಸಾಯನ ಕ್ರಿಯೆಗೆ ಒಳಪಟ್ಟು ಜೀವಕೋಶವಾಯಿತು ಎನ್ನುವ ಥಿಯರಿಯಿಂದ ಹಿಡಿದು ಜೀವ ವಿಕಾಸನ ಮತ್ತು ಹೊಂದಾಣಿಕೆಗಳನ್ನು ವಿವರಿಸುವ ಯಾವ ವಿಚಾರ ಮಂಡನೆಯೇ ಆಗಲಿ ಹೀಗಾಯಿತು ಎನ್ನುತ್ತವೆಯೇ ಹೊರತು ಹಾಗೇಕಾಯಿತು ಎನ್ನುವುದನ್ನು ಹೇಳುವುದಿಲ್ಲ. ಭೂಮಿಯ ಮೇಲೆ ಜೀವಿಗಳ ಉಗಮವೇ ನಮಗಿನ್ನೂ ಒಂದು ಒಗಟು. ಈ ಒಗಟನ್ನು ನಾವು ಬಿಡಿಸುವ ತನಕ, ಅಂದರೆ, ಜೀವಿಗಳು ಏಕೆ ಮತ್ತು ಹೇಗೆ ಒಂದು ಆಕಾಶಕಾಯದಲ್ಲಿ (ಉದಾಹರಣೆಗೆ ಭೂಮಿಯಲ್ಲಿ) ಉದಯಿಸುತ್ತವೆ ಎನ್ನುವುದನ್ನು ನಾವು ಬಿಡಿಸುವ ತನಕ ಬೇರೆ ಆಕಾಶಕಾಯಗಳಲ್ಲಿ ಜೀವಿಗಳಿವೆಯೇ ಎನ್ನುವುದನ್ನು ನಾವು ಹೇಳಲು ಸಾಧ್ಯವಿಲ್ಲ. ಹಾಗೆ ಬಿಡಿಸಿದರೂ ನಾವು ಒಂದು ಪಾಸಿಬಿಲಿಟಿಗೆ ಉತ್ತರ ಕಂಡುಕೊಂಡಹಾಗಾಯಿತು ಅಷ್ಟೆ. ನಮಗರಿವಿಲ್ಲದ ಸಾವಿರ ವಿಧಾನಗಳಲ್ಲಿ ಜೀವಿಗಳು ಮೂಡಬಹುದಲ್ಲ ! ಇವೆಲ್ಲಾ ಸಾಧ್ಯತೆಗಳ ಒಂದು ಸಾಮಾನ್ಯ ಗುಣಧರ್ಮವನ್ನು ಕಂಡು ಹಿಡಿಯುವ ತನಕ ಇದು ಪ್ರಶ್ನೆಯಾಗಿಯೇ ಉಳಿದಿರುತ್ತದೆ. ಅದಕ್ಕಿಂತಾ ಮೊದಲು ಅಂದರೆ, ಆ ಪ್ರಶ್ನೆಯನ್ನು ಬಿಡಿಸಿದ ಬೇರೇ ಗ್ರಹವಾಸಿಗಳೇ ನಮ್ಮನ್ನು ಗುರುತಿಸಿ ಸಂಪರ್ಕಿಸಬೇಕು ಅಷ್ಟೆ’.

ಬಹಳ ಪ್ರಾಮಾಣಿಕವಾದ ಮತ್ತು ನೇರವಾದ ಉತ್ತರವದು. ದೇವರು ಇದ್ದಾನೆಯೋ ಇಲ್ಲವೋ ಎಂದು ನಾವು ಮೂರ್ತಿರಾಯರನ್ನು ಕೆಣಕುತ್ತಿದ್ದಂತೆಯೇ ಜೀವ ವಿಕಾಸದ ಮೂಲವೇನು ಎಂದು ಕೇಳಿ ಒಬ್ಬ ವಿಜ್ಞಾನಿ ನರಳುವಂತೆ ಮಾಡಬಹುದು. ಪ್ರಶ್ನೆ ಮೂಲಕ್ಕೆ ಸರಿದಂತೆಲ್ಲಾ ವಿಜ್ಞಾನ, ಫಿಲಾಸಫಿ, ಧರ್ಮಶಾಸ್ತ್ರಗಳೆಲ್ಲಾ ಬೆರಕೆ ಹಿಟ್ಟಿನಂತೆ ಒಂದರೊಳಗೊಂದು ಸೇರಿ ಮುದ್ದೆಯಾಗಿ ಹೋಗುತ್ತವೆ. ಪ್ರಳಯವಾಗುವಾಗ ಆಲದ ಎಲೆಯ ಮೇಲೆ ಕಾಲ್ಬೆರಳು ಚೀಪುತ್ತಾ ಮಲಗಿದ ಕೃಷ್ಣನ ಕಥೆಯಾಗಲೀ, ಏಳುದಿನಗಳಲ್ಲಿ ವಿಶ್ವವನ್ನು ಸೃಷ್ಟಿಸಿದ ಬೈಬಲ್ಲಿನ ಕಥೆಯಾಗಲೀ ಅಥವಾ ತನ್ನದೇ ಮಾರ್ಗದಲ್ಲಿ ನಡೆದುಹೋದ ಘಟನಾವಳಿಗಳನ್ನು ಪುನಃಸ್ಮರಣೆ ಮಾಡಲು ಯತ್ನಿಸುವ ವಿಜ್ಞಾನವಾಗಲೀ ತಾನು ನೀಡುವ ಬೆಳಕಿನ ಸುತ್ತಾ ಗವ್ವನೆ ತುಂಬಿರುವ ಸಾವಿರಪಾಲು ಕತ್ತಲೆಯ ಅರಿವಿನಿಂದಲೇ ಮಂಕಾಗುತ್ತವೆ. ಧರ್ಮಶಾಸ್ತ್ರಗಳು ಕೊನೆಗೆ ಕೈಚೆಲ್ಲಿ ‘ಎಲ್ಲಾ ಅವನಿಂದಲೇ’ ಎನ್ನುವ ಸಾರ್ವತ್ರಿಕವಾದ ಮತ್ತು ಪ್ರಶ್ನಾತೀತವಾದ ಉತ್ತರವನ್ನು ಕೊಟ್ಟು ‘ಬೆಟ್ಟದ ಮುಂದಿನ ಹುಲ್ಲಿನ ಕಡ್ಡಿ ನೀನು’ ಎನ್ನುವ ಭಯಪೂರಿತ ಅಗಾಧತೆಯ ಕಲ್ಪನೆಯಲ್ಲಿ ಮುಂದಿನ ಪ್ರಶ್ನೆಗಳಿಗೆ ಅರ್ಥವಿಲ್ಲದಂತೆ ಮಾಡುತ್ತವೆ. ಕುತೂಹಲಕ್ಕಿಂತ ನಂಬಿಕೆಗೆ ಹೆಚ್ಚಿನ ಮೌಲ್ಯವನ್ನು ನೀಡುವ ಧರ್ಮಶಾಸ್ತ್ರಗಳಿಗೆ ಅದು ಅಗತ್ಯ ಕೂಡ. ಆದರೆ ವಿಜ್ಞಾನ ಹಾಗೆ ಮಾಡಲೊಲ್ಲದು. ಹಾಗೆ ಮಾಡುವುದು ವಿಜ್ಞಾನದ ಮೂಲಭೂತ ನಿಯಮಗಳ ಉಲ್ಲಂಘನೆಯಾದಂತೆ. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎನ್ನುವುದು ಅಪರಾಧವಲ್ಲ ಅಲ್ಲಿ. ಹಾಗಾಗಿಯೇ, ‘ದೇವರು ಇದ್ದಾನೆಯೋ ಇಲ್ಲವೋ’ ಎಂದು ನಮ್ಮನ್ನು ಯಾರಾದರೂ ಕೇಳಿದರೆ ನಾವು ಬಹಳಷ್ಟು ಮಂದಿ ಪ್ರಾಜ್ಞರಂತೆ ‘ಇದೆ’, ‘ಇಲ್ಲ’ ಎನ್ನುವ ಉತ್ತರವನ್ನು ಆರಿಸಿಕೊಳ್ಳುತ್ತೇವೆ, ನೆನ್ನೆ ರಾತ್ರಿ ಕನಸಿನಲ್ಲಿ ಆ ದೇವರೇ ಬಂದು confirm ಮಾಡಿದ ಎನ್ನುವಂತೆ. ಅದೇ, ಐನ್‌ಸ್ಟೈನ್‌ನಂತಹ ವಿಜ್ಞಾನಿಗಳು ವಿನೀತರಾಗಿ ‘ನನಗೆ ಗೊತ್ತಿಲ್ಲ’ ಎನ್ನುತ್ತಾರೆ. ಇಷ್ಟವಿದ್ದರೆ ಮಂದಿರ, ಚರ್ಚ್‌ಗಳಿಗೂ ಹೋಗುತ್ತಾರೆ. ಮನೆಯಲ್ಲಿ ನೆಮ್ಮದಿಯಿಂದ ಸತ್ಯನಾರಾಯಣ ಪೂಜೆಯನ್ನು ಬೇಕಾದರೂ ಮಾಡುತ್ತಾರೆ. ಇಷ್ಟವಿಲ್ಲದಿದ್ದರೆ ಎಲ್ಲಾ ಮರೆತು ಹಾಯಾಗಿ ಬೀಚಿನಲ್ಲಿ ಕುಳಿತು ಎದ್ದು ಬರುತ್ತಾರೆ. ಆದರೆ ಬೇರೆಯವರನ್ನು ಪ್ರಶ್ನಿಸುವುದಿಲ್ಲ. ಜ್ಞಾನಿಗಳ ವೈಖರಿಯೇ ಅದು. ಮೂರ್ತಿರಾಯರು ಎಲ್ಲಿಯೂ ‘ನೀವೇಕೆ ದೇವರನ್ನು ನಂಬುವಿರಿ’ ಎಂದು ಪ್ರಶ್ನಿಸಲಿಲ್ಲ.

ನಮಗೆ ವಿನೀತ ಭಾವನೆಯನ್ನು ತರಲು ಬರೀ ಎರಡು ಜ್ಞಾನಶಾಖೆಗಳು ಸಾಕು. ಒಂದು ಕಾಸ್ಮಾಲಜಿ (ಖಗೋಳಶಾಸ್ತ್ರ) ಮತ್ತೊಂದು ಬಯಾಲಜಿ (ಜೀವಶಾಸ್ತ್ರ). ರಾತ್ರಿ ಊಟವಾದ ನಂತರ ನಿಮ್ಮ ಮನೆಯ ತಾರಸಿಯಲ್ಲಿ ನಿಂತು ಆಕಾಶದೆಡೆಗೆ ತಲೆ ಎತ್ತಿ ನೋಡಿ! ಆ ಕೋಟಿಕೋಟಿ ಕಾಯಗಳ ನಡುವೆ ನೀವು, ನಿಮ್ಮ ಸಂಸಾರ, ನಿಮ್ಮ ಕೆಲಸ, ನಿಮ್ಮ ಬ್ಯಾಂಕ್‌ ಅಕೌಂಟು, ನಿಮ್ಮ ಈ ಮನೆ, ಈ ಊರು ಕೊನೆಗೆ ಈ ಭೂಮಂಡಲ ಕೂಡ ಮೈಕ್ರೋಸ್ಕೋಪಿನಡಿಯಲ್ಲಿ ಹುಡುಕಿದರೂ ಕಾಣಸಿಗದ ಸಣ್ಣ ಅಣುವಿನಂತೆ ಕುಬ್ಜವಾಗಿ ಹೋಗುವುದಿಲ್ಲವೇ? ಕಣ್ಣಿಗೆ ಕಾಣುವವು ಇಷ್ಟು, ಇನ್ನು ಕಾಣದವು ಇನ್ನೆಷ್ಟೋ! ಆ ನಕ್ಷತ್ರಗಳನ್ನು ಸುತ್ತುವ ಗ್ರಹಗಳು, ಆ ಗ್ರಹಗಳನ್ನು ಸುತ್ತುವ ಉಪಗ್ರಹಗಳು, ಆ ಉಪಗ್ರಹಗಳನ್ನು ಆವರಿಸಿರುವ ಉಲ್ಕೆಗಳು....ಅಬ್ಬಬ್ಬಾ! ನಮ್ಮ ಸೌರವ್ಯೂಹದಲ್ಲೇ, ಬಲಭೀಮನಂತೆ ಕಾಣುವ ಗುರುಗ್ರಹ ಎನ್ನುವ ಫುಟ್‌ಬಾಲ್‌ನೊಳಗೆ ಒಂದು ಸಾವಿರ ಭೂಮಿ ಎನ್ನುವ ಗೋಲಿಗಳನ್ನು ತುಂಬಬಹುದಂತೆ! ಅಲ್ಲಿಗೆ ನಾನು, ನನ್ನದು, ನನ್ನತನ ಎನ್ನುವುದೆಲ್ಲಾ ಈಗಿತ್ತು, ಈಗಿಲ್ಲ ಎನ್ನುವ ಹಾಗೆ ಜ್ವಾಲೆ ತಾಗಿಸಿಕೊಂಡ ಕರ್ಪೂರದಂತೆ ಕರಗಿಹೋಗುತ್ತದೆ.

ಅದು ಒಂದು ರೀತಿಯಲ್ಲಿ ಆಗ ತಾನೇ ಕಣ್ಣು ಬಿಟ್ಟ ಮಗುವಿನಂತೆ ದೊಡ್ಡ ದೊಡ್ಡ ಆಕಾರಗಳನ್ನು ನೋಡಿ ಹೆದರಿಕೊಳ್ಳುವ ವಿಚಾರವಾದರೆ ಜೀವಶಾಸ್ತ್ರವನ್ನು ಗಮನಿಸಿ. ಮಂಜುಗಟ್ಟಿದ ಗ್ರಹದಲ್ಲಿ ಭೀಕರ ಬಿರುಗಾಳಿ ಮಳೆಯನ್ನು ಎದುರಿಸಿ ಮೂರೂವರೆ ಬಿಲಿಯನ್‌ ವರ್ಷಗಳ ಹಿಂದೆ ಅಣುವೊಂದು ಮಿಂಚಿನ ವಿದ್ಯುತ್ತಿಗಾಗಿ ಶಬರಿಯಂತೆ ಕಾದಿತ್ತು ಎನ್ನುವುದನ್ನು ಊಹಿಸಿಕೊಂಡರೇ ನಮ್ಮ ಪ್ರಾರಂಭದ ಅಭದ್ರತೆಯ ಅರಿವಾಗುತ್ತದೆ. ಏನು ಬೇಕಾದರೂ ಆಗಬಹುದಿತ್ತು ಆಗ. ಒಂಟಿಕೋಶ ಎರಡಾಗದೇ ಸತ್ತು ಹೋಗಬಹುದಿತ್ತು. ಸುಮಾರು ಮೂರೂವರೆ ಬಿಲಿಯನ್‌ ವರ್ಷಗಳಿಂದ ಬರೀ ಬ್ಯಾಕ್ಟೀರಿಯಾದಂತಹ ಒಂಟಿಕೋಶ ಜೀವಿಗಳ ರಾಜ್ಯವಾಗಿ ಇದ್ದಂತೆಯೇ ಇದ್ದದ್ದು ಸುಮಾರು ನಾನೂರು ಮಿಲಿಯನ್‌ ವರ್ಷಗಳ ಹಿಂದೆ ದಿಢೀರನೆ ಏನೋ ಮರೆತದ್ದು ನೆನಪಾದಂತೆ ಕೋಟಿ ಕೋಟಿ ಪ್ರಾಣಿ ಸಸ್ಯ ಸಂಕುಲಗಳಾಗಿ ಪ್ರವರ್ಧಿಸದಿದ್ದರೆ ನಾವಿಂದು ಇರುತ್ತಿರಲಿಲ್ಲ. ಕಡಲಿನಲ್ಲಿ ಉಳಿದ ಮೀನುಗಳಂತೆಯೇ ತಿಂದುಂಡು ಆರಾಮವಾಗಿದ್ದ ಮೀನಿನ ಪ್ರಬೇಧ ಒಂದು ಇದ್ದಕ್ಕಿದ್ದಂತೆಯೇ ಬೆನ್ನಿನ ಮೂಳೆಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿ ಹಾಗೆ ಪ್ರಾರಂಭವಾದದ್ದನ್ನು ರಕ್ಷಿಸಿಕೊಳ್ಳಲು ತನಗೆ ತಾನೇ ಮಾರ್ಪಾಡಾಗದಿದ್ದಿದ್ದರೆ ಇಂದು ಕಶೇರುಕಗಳೇ (ಬೆನ್ನಿನ ಮೂಳೆಯ ಜೀವಿಗಳು, ನಮ್ಮನ್ನೂ ಸೇರಿ) ಇರುತ್ತಿರಲಿಲ್ಲ. ಅರವತ್ತೈದು ಮಿಲಿಯನ್‌ ವರ್ಷಗಳ ಹಿಂದೆ ಬಂದು ಬಿದ್ದ ಆಕಾಶಕಾಯವೊಂದು ಡೈನೋಸರ್‌ಗಳನ್ನು ವಿನಾಶಮಾಡಿದಂತೆ ಇನ್ನೂ ಕೆಲವು ಜೀವಜಂತುಗಳನ್ನು ಧ್ವಂಸಗೊಳಿಸಿದ್ದರೆ ಇವತ್ತು ಭೂಮಿ ನಿರ್ಜೀವಿಯಾಗಿರುತ್ತಿತ್ತು. ನೀರು, ಕಾರ್ಬನ್‌ ಡೈ ಆಕ್ಸೈಡ್‌, ಮಿಥೇನ್‌ ಮತ್ತು ಹೈಡ್ರೋಜನ್‌ ಸಯನೈಡ್‌ಗಳು ಸೇರಿ ಅಮಿನೋ ಆಮ್ಲ ಮತ್ತು ಸಕ್ಕರೆಯ ಸೃಷ್ಟಿಯಾಗದಿದ್ದಿದ್ದರೆ ನಮಗೆ ಆಹಾರವೇ ಹುಟ್ಟುತ್ತಿರಲಿಲ್ಲ. ನಮ್ಮ ಸಂತಾನೋತ್ಪತ್ತಿಯೇ ಆಗುತ್ತಿರಲಿಲ್ಲ. ಹಳ್ಳಿಯ ಮನೆಯಲ್ಲಿ ಅಟ್ಟಕ್ಕೆ ಹಾಕಿದ ಹಗ್ಗದ ಏಣಿಯಂತೆ ಕಾಣುವ RNA,DNAಗಳ ರಚನೆಯಾಗದಿದ್ದರೆ ಸೃಷ್ಟಿಯ ಅಂದಿನ ತನಕದ ವ್ಯವಹಾರವೆಲ್ಲಾ ಮುಂದಿನ ಸಂತತಿಗೆ ಹರಿಯದೆ ನಮ್ಮ ಸಂತಾನವೆಲ್ಲಾ ಮಿಂಚಿಗೆ ಕಾದ ಅಣುವಿನಂತೆಯೇ ‘ಹಿಂದಿಲ್ಲದೇ, ಮುಂದಿಲ್ಲದೇ’ ಮಂಕಾಗಿ ಬಿದ್ದಿರುತ್ತಿತ್ತು. ಏನೆಲ್ಲಾ ಆಗಬಹುದುತ್ತು ನೋಡಿ! ಎದುರಿನ ಸಾವಿರ ದಾರಿಗಳಲ್ಲಿ ಬೇರೆ ಯಾವ ದಾರಿಯನ್ನು ಆರಿಸಿಕೊಂಡಿದ್ದರೂ ಬೇರೆ ಏನೋ ಆಗಿಹೋಗುತ್ತಿತ್ತು ಎನ್ನುವಲ್ಲಿಯೇ ನಮ್ಮ ‘ಲಾಟರಿ ಟಿಕೇಟಿನ ಅದೃಷ್ಟ’ ಎದ್ದು ಕಾಣುವುದಿಲ್ಲವೇ? ಹಾಗೆಯೇ ನಮ್ಮ ಅಸಹಾಯಕತೆ ಕೂಡ.

ಆ ಅಸಹಾಯಕತೆಯ ನಡುವೆಯೂ ನಾವು ನಮ್ಮ ಉಳಿವಿಗಾಗಿ ಹೋರಾಡುತ್ತೇವೆ. ಪ್ರಕೃತಿಯ ಈ ವೈಚಿತ್ರ್ಯಪೂರ್ಣ ಆಟವನ್ನು ನೋಡಿ. ತಾನೇ ಬರೆದು ತಾನೇ ಅಳಿಸಬಲ್ಲದಾದರೂ ಬರೆದು ಅಳಿಸುವ ನಡುವೆ ಉಳಿಯುವ ಭಾರವನ್ನು ನಮಗೇ ಹೊರಿಸುತ್ತದೆ. ಬೇಕಾದಾಗ ಬಾಲ ಬೆಳೆಸಿಕೊಳ್ಳುತ್ತೇವೆ, ಬೇಕಾದಾಗ ಎರಡು ಕಾಲುಗಳಲ್ಲಿ ನಡೆಯುತ್ತೇವೆ, ಬೇಕಾದಾಗ ರೆಕ್ಕೆ ಮೂಡಿಸಿಕೊಂಡು ಬಾನಾಡಿಗಳಾಗುತ್ತೇವೆ, ಬೇಕಾದಾಗ ನೀರಲ್ಲಿ ಉಸಿರಾಡಿ ಬದುಕುತ್ತೇವೆ. ನಿರಂತರವಾಗಿ ಹೋರಾಡುತ್ತೇವೆ. ಹೋರಾಡಲೇ ಬೇಕು! ಹಾಗೆ ಹೋರಾಡದವು ನಿರ್ದಾಕ್ಷಿಣ್ಯವಾಗಿ ಕಣ್ಮರೆಯಾಗುತ್ತವೆ, ಡೈನೋಸರ್‌ಗಳಾದಂತೆ. ಉಳಿವಿಗಾಗಿ ಮಾರ್ಪಾಡಾಗುತ್ತಲೇ ಇರಬೇಕು.

ಹಿಂದೆ ‘ನ್ಯಾಷನಲ್‌ ಜಿಯಾಗ್ರಫಿಕ್‌’ನಲ್ಲಿ ಪ್ರಕಟವಾಗಿದ್ದ ಈ ಸ್ವಾರಸ್ಯ ಕಥೆಯನ್ನು ಕೇಳಿ. ನೋಡಲು ಒಂದೇ ತರಹ ಇರುವ ಒಂದು ಸಿಹಿಯಾದ ಮತ್ತೊಂದು ಕಹಿಯಾದ ಚಿಟ್ಟೆಗಳ ಪ್ರಬೇಧಗಳಿವೆಯಂತೆ. ಹಕ್ಕಿಗಳಿಗೆ ಸ್ವಾಭಾವಿಕವಾಗಿ ಸಿಹಿಯಾದ ಚಿಟ್ಟೆಗಳನ್ನು ತಿನ್ನುವುದೆಂದರೆ ಇಷ್ಟ. ಆದರೆ ಸಿಹಿ ಯಾವುದು ಕಹಿ ಯಾವುದು ತಿಳಿಯದೆ ಬಾಯಿಗೆ ಹಾಕಿಕೊಂಡು ರುಚಿ ನೋಡಿ ಸಿಹಿಯಾಗಿದ್ದರೆ ನುಂಗಿ ಕಹಿಯಾಗಿದ್ದರೆ ಉಗಿಯುತ್ತವಂತೆ. ಹಾಗೆ ಕಹಿಯಾದ ಚಿಟ್ಟೆಯನ್ನೇನಾದರೂ ರುಚಿ ನೋಡಿದರೆ ಅದು ಅದರ ಸ್ಮರಣೆಯಲ್ಲಿ ಇರುವ ತನಕ ಆ ರೀತಿ ಕಾಣುವ ಚಿಟ್ಟೆಗಳನ್ನೇ ತಿನ್ನುವುದಿಲ್ಲ. ಹಾಗಾಗಿ ಕಹಿಯಾದ ಚಿಟ್ಟೆಯಂತೆ ಕಾಣುವುದು ಸಿಹಿ ಚಿಟ್ಟೆಗೆ ಜೀವ ಉಳಿಸಿಕೊಳ್ಳುವ ಉಪಾಯ. ಆದರೆ, ಹಕ್ಕಿಯ ಬಾಯನ್ನು ಹೊಕ್ಕು ಉಗಿಸಿಕೊಳ್ಳುವುದು ಕಹಿ ಚಿಟ್ಟೆಗೆ ಅಷ್ಟೇನೂ ಹಿತಕರವಾದುದಲ್ಲ. ಬಹಳಷ್ಟು ಬಾರಿ ಅದರ ಜೀವವೇ ಹೋಗುತ್ತದೆ ಅಥವಾ ಅಂಗವಿಹೀನವಾಗುತ್ತದೆ. ಹಾಗಾಗಿ ಸಿಹಿಯಾದ ಚಿಟ್ಟೆಗಳಿಂದ ಬೇರೆಯಾಗಲು ಹಾಗೂ ಅದರ ಮೂಲಕ ಸಿಹಿ ಚಿಟ್ಟೆ ಯಾವುದು ಕಹಿ ಚಿಟ್ಟೆ ಯಾವುದು ಎನ್ನುವುದನ್ನು ಹಕ್ಕಿಗಳು ಸುಲಭವಾಗಿ ಗುರುತಿಸುವಂತೆ ಮಾಡಲು ತಮ್ಮ ರೂಪ ಮತ್ತು ಬಣ್ಣಗಳನ್ನು ಈ ಕಹಿ ಚಿಟ್ಟೆಗಳು ಕಾಲಕ್ರಮೇಣ ಬದಲಿಸಿಕೊಳ್ಳುತ್ತವಂತೆ. ಈಗ ಹಕ್ಕಿಗಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ ಯಾವುದು ಸಿಹಿ ಯಾವುದು ಕಹಿ ಎಂದು. ಆದರೆ ಸಿಹಿ ಚಿಟ್ಟೆಗಳಿಗೆ ಬಂತಲ್ಲ ಫಜೀತಿ! ಈಗ ಅವು ಹಕ್ಕಿಗಳಿಗೆ ಸುಲಭದ ತುತ್ತು. ನಿಸರ್ಗ ಅಷ್ಟು ಸರಳವಲ್ಲ. ಈ ಸಿಹಿ ಚಿಟ್ಟೆಗಳು ಪ್ರಕೃತಿಯಿಂದ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮತ್ತೆ ಕಹಿ ಚಿಟ್ಟೆಗಳಂತೆ ಕಾಣಲಾರಂಭಿಸುತ್ತವೆ. ಕಹಿ ಚಿಟ್ಟೆ ತನ್ನ ಉಳಿವಿಗಾಗಿ ಪದೇಪದೇ ಬದಲಾಗುತ್ತದೆ. ಸಿಹಿ ಚಿಟ್ಟೆ ತನ್ನ ಉಳಿವಿಗಾಗಿ ಮತ್ತೆ ಮತ್ತೆ ಕಹಿ ಚಿಟ್ಟೆಯಂತಾಗುತ್ತದೆ. ಹೇಗಿದೆ ನೋಡಿ ಜೀವ ವಿಕಸನದ ಜೂಟಾಟ!

ಹೀಗೆ ಉಳಿದಿದ್ದೇವೆ ನಾವು. ಉಳಿಯಲಿಕ್ಕಾಗಿ ಬದಲಾಗುತ್ತಾ, ಬದಲಾಗಿದ್ದಕ್ಕಾಗಿ ಜೀವವನ್ನು ಒಗ್ಗಿಸಿಕೊಳ್ಳುತ್ತಾ, ಜೀವವನ್ನು ಒಗ್ಗಿಸಿಕೊಂಡಿದ್ದಕ್ಕಾಗಿ ಬದಲಾಗುತ್ತಾ... ಅನೇಕ ಮಿಲಿಯನ್‌ ವರ್ಷಗಳಿಂದ. ಅರಿವಿಲ್ಲದೆಯೇ ಭೀಕರ ಯುದ್ಧದಲ್ಲಿ ಪಾಲ್ಗೊಂಡಿದ್ದೇವೆ. ಕಣ್ಣುಮುಚ್ಚಿ ಕ್ಷಣ ವಿರಮಿಸಿದರೂ ಬಲಿಪೀಠಕ್ಕೆ ಹೊರಳಿ ಹೇಳಹೆಸರಿಲ್ಲದಂತಾಗುತ್ತೇವೆ. ಜೀವನದ ಈ ಹೋರಾಟದ ಮುಂದೆ ನಮಗೆ ನಾವೇ ಹುಟ್ಟು ಹಾಕಿಕೊಂಡ ಅನುದಿನದ ತಾಪತ್ರಯಗಳು ಬಹಳ ಸಿಲ್ಲಿಯಾಗಿ ಕಾಣುತ್ತವೆ ಅಲ್ಲವೇ? ಹಾಗೇನೂ ಆಗಬೇಕಿಲ್ಲ. ಜೀವನ ರೂಪುಗೊಂಡಿರುವುದೇ ಹೀಗೆ. ಆಕಾಶಾತ್‌ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ (ಆಕಾಶದಿಂದ ಉದುರುವ ಹನಿ ನೀರೆಲ್ಲಾ ಕೊನೆಗೆ ಸೇರುವುದು ಸಾಗರವನ್ನೇ) ಎನ್ನುವಂತೆ ಪ್ರತಿ ಹೋರಾಟವೂ ಒಂದಲ್ಲಾ ಒಂದು ಕಾರಣವಾಗಿ ಬದುಕಿನ ಈ ಅಂತಿಮ ಹೋರಾಟದ ಭಾಗವೇ ಆಗಿರುತ್ತದೆ. ಅದರ ಒಟ್ಟು ಸ್ವರೂಪದ ತಿಳುವಳಿಕೆ ನಮಗಿರುವುದಿಲ್ಲ ಅಷ್ಟೆ.

ಉಸಿರಿರುವ ತನಕ ಜೀವನ, ಜೀವನ ಇರುವ ತನಕ ಹೋರಾಟ. ನಮ್ಮ ಸಂಸ್ಕೃತದಂತೆಯೇ ಪ್ರಾಚೀನವಾದ ಲ್ಯಾಟಿನ್‌ ಭಾಷೆಯಲ್ಲಿ ಒಂದು ಜನಪ್ರಿಯ ಮಾತಿದೆ - ‘ಡಮ್‌ ಸ್ಪೈರೋ ಸ್ಪೆರೊ’. ಅರ್ಥಾತ್‌-ಎಲ್ಲಿಯ ತನಕ ಉಸಿರಿರುತ್ತದೆಯೋ ಅಲ್ಲಿಯ ತನಕ ಭರವಸೆಯಿರುತ್ತದೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more