ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡೆಂಬ ಮಿತ್ರನ ಬಳಿ

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಅಮೆರಿಕಾದ ಮಧ್ಯ-ಪೂರ್ವ ರಾಜ್ಯ ಕೆಂಟುಕಿಯ ರೈತನೊಬ್ಬನ ಹಾಡಿದು:

ನಡುರಾತ್ರಿಯಲ್ಲಿ ಸಂಕೋಲೆಗಳು ಬಿಗಿಯುತ್ತವೆ ಒಮ್ಮೊಮ್ಮೆ
ಮರಣದಂಡನೆಗೆ ಕಾದ ಖೈದಿಯಂತೆ
ಕೊಳ್ಳಿ ಉರಿಯಾಂದನ್ನು ತಲೆಯಾಳಗೆ ತುರುಕಿದಂತೆ
ನೆನ್ನೆ ಇಂದು ನಾಳೆಗಳ ಚಿಂತೆಗಳ ಕಂತೆ.

ನನ್ನವೇನು?
ಮಕ್ಕಳಿಗೇನು?
ಉಳಿಯಬಲ್ಲನೆ ನಾನು?
ಉಳಿಯಬಲ್ಲವೆ ಅವು?
ಸಾವಿರದೆಂಟು ಯೋಚನೆಗಳ ಕುಲುಮೆ ಈ ತಲೆ
ಯಾರೋ, ಗೊತ್ತುಗುರಿ ಇರದೆ ಗೀಚಿದ ಹಾಳೆ.

ಚಿಂತೆಗಳು ಈ ರೀತಿ ಚಿತೆ ಕಟ್ಟಿದಾಗೆಲ್ಲಾ
ಧಡಕ್ಕನೆ ಎದ್ದು ಕೂರುತ್ತೇನೆ
ಹೆದರಿ ನಡುಗಿರುತ್ತೇನೆ
ಬೆದರಿ ಬೆವರಿರುತ್ತೇನೆ
ಕಾಡೆಂಬ ಸ್ನೇಹಿತನ ಬಳಿ ಓಡುತ್ತೇನೆ.

ಮಿಣುಕು ಚುಕ್ಕಿಗಳೊಂದಿಗೆ ಎದೆ ತುಂಬ ಮಾತನಾಡುವ ಈ ಮರಗಳು
ನಾಳೆಯೇನು ಮುಂದಿನ ಕ್ಷಣವನ್ನೂ ಯೋಚಿಸುವುದಿಲ್ಲವಲ್ಲ ?
ಸಂತಾನವನ್ನು ರೆಕ್ಕೆಯಲ್ಲಿ ತಬ್ಬುವ ಈ ಕೊಕ್ಕರೆಗಳು
ಅವುಗಳ ಭವಿಷ್ಯವನ್ನೆಂದೂ ತಲೆಕೆಡಿಸಿಕೊಳ್ಳುವುದಿಲ್ಲವಲ್ಲ ?
ಕೊಳೆತದ್ದೋ ಹಳೆತದ್ದೋ ಕಾಯಾಂದು ಸಿಕ್ಕರೆ
ಈ ಅಳಿಲಿಗಿಂತಾ ಸುಖಿ ಬೇರಿಲ್ಲವಲ್ಲ ?
ಈ ಕಾಡುಕೊಳದ ನೀರಿಗೆ ಬೇಡದ ನಾಳೆ
ಈ ಹಸುರೆಲೆ ತರಗೆಲೆಗಳಿಗೆ ಬೇಡದ ನಾಳೆ
ಈ ಸ್ವರ್ಗದಿಂದೇರಿ ಬರುವ ನಕ್ಷತ್ರದ ಬೆಳಕಿಗೆ ಬೇಡದ ನಾಳೆ
ನನಗೇಕೆ ಬೇಕು ?

ನನ್ನ ಬೇಡಿಗಳೆಲ್ಲಾ ಕಳಚಿ ಬಿದ್ದಿರುತ್ತದೆ
ಮನಸ್ಸು ನೆಮ್ಮದಿಯಿಂದ ಮನೆಯ ದಾರಿ ಹಿಡಿಯುತ್ತದೆ.

The Peace of Wild Things ಎನ್ನುವ ಈ ಕವಿತೆಯನ್ನು ಬರೆದವನು ವೆಂಡಲ್‌ ಬೆರ್ರಿ(Wendell Berry)ಎನ್ನುವ ರೈತ. ಒಂದು ರೀತಿಯಲ್ಲಿ ವಿಶಿಷ್ಟ ಬಗೆಯವನು. ಸಾವಯವಗಳನ್ನು ಬಳಸದೆಯೇ ಪ್ರಾಕೃತಿಕವಾಗಿ ವ್ಯವಸಾಯ ಮಾಡುತ್ತಾನೆ, ಆಧುನಿಕ ಯಂತ್ರೋಪಕರಣಗಳಿಲ್ಲದೆಯೇ ಬದುಕಿದ್ದಾನೆ, ಹದಿನೆಂಟನೇ ಶತಮಾನದಿಂದ ತನ್ನ ವಂಶಜರು ಬಾಳಿದ ಮನೆಯಲ್ಲೇ ಬದುಕುತ್ತಿದ್ದಾನೆ ಎಂದರೆ ಇವನ ಒಂದು ಮುಖದ ದರ್ಶನವಾದೀತು.

ಇನ್ನೊಂದು ಮುಖವಿದೆ ಇವನಿಗೆ. ನ್ಯೂಯಾರ್ಕ್‌ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿದ್ದವನು, ಕವಿ, ಲೇಖಕ, ಕಾದಂಬರಿಗಾರನಾಗಿ ಸುಮಾರು ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾನೆ, ಪ್ರಕೃತಿ ಮತ್ತು ಮಾನವನ ಸೂಕ್ಷ್ಮ ಸಂಬಂಧಗಳನ್ನು ಅಭ್ಯಾಸಿಸಲು ತನ್ನನ್ನು ತಾನೇ ಗಿನಿಪಿಗ್‌ ಮಾಡಿಕೊಂಡವ, ಈ ಶತಮಾನದ ಆಧುನಿಕತೆಯ ಅನೇಕ ಅರಿವಿಗೂ ಬಾರದ ದುಷ್ಪರಿಣಾಮಗಳನ್ನು ಅಭ್ಯಾಸಿಸುತ್ತಿರುವವ, ಪರಿಸರದ ಕಾಳಜಿ ಇರುವವರಿಂದ ‘ಗ್ರಾಮೀಣ ಅಮೆರಿಕದ ಪ್ರವಾದಿ’(Prophet of rural America)ಎಂದು ಕರೆಸಿಕೊಳ್ಳುವವ ಎಂದರೆ ಒಮ್ಮೆ ಅವಾಕ್ಕಾಗುತ್ತೇವೆ.

Wendell Berry, American poet, philosopher and farmerಕಾಡು ಹೇಗೆ ಇರಬೇಕೆಂದು ವೆಂಡಲ್‌ ಬೆರ್ರಿಗೆ ಗೊತ್ತು. ನಾಡು ಹೇಗಿರಬೇಕೆಂದೂ ಗೊತ್ತು. ಕಾಡಿನ-ನಾಡಿನ ಸಂಬಂಧವೂ ಗೊತ್ತು. ಹಾಗಾಗಿಯೇ ತಾನೇ ಒಂದಿಷ್ಟು ಜಾಗವನ್ನು ಕೊಂಡು ಅಲ್ಲೆಲ್ಲಾ ನಿಜವಾದ ಕಾಡನ್ನು ಹುಟ್ಟುಹಾಕುತ್ತಿದ್ದಾನೆ. ಈ ತರಹದ ಒಂದು ಕಾಡು ಹುಟ್ಟಲು ಇನ್ನೂರರಿಂದ ಮುನ್ನೂರು ವರ್ಷಗಳು ಬೇಕಂತೆ. ಅಲ್ಲಿಯ ತನಕ ದಯವಿಟ್ಟು ಇದರ ತಂಟೆಗೆ ಬರಬೇಡಿ ಎಂದು ಬೇಡಿಕೊಳ್ಳುತ್ತಿದ್ದಾನೆ.

ವೆಂಡಲ್‌ ಬೆರ್ರಿಯ ಈ ಕಾಡು ಬೆಳೆಸುವ ಸಾಹಸದ ಜೊತೆಗೆ ಥಾಮಸ್‌ ಬೆರ್ರಿ ಎನ್ನುವ ತೊಂಭತ್ತು ವರ್ಷದ ಕ್ರಿಶ್ಚಿಯನ್‌ ಪಾದ್ರಿ ನೆನಪಾಗುತ್ತಾನೆ. ಬೌದ್ಧತತ್ವಗಳು ಮತ್ತು ಸಂಸ್ಕೃತದಲ್ಲಿಯೂ ಮಹಾನ್‌ ವಿದ್ವಾಂಸನಾದ ಈತ ಧರ್ಮ ಮತ್ತು ಪರಿಸರ ಚಳುವಳಿಯ ನಡುವೆ ಒಂದು ರೀತಿಯಲ್ಲಿ ಇಂಟೆಲೆಕ್ಚುಅಲ್‌ ಬ್ರಿಡ್ಜ್‌ ಆಗಿದ್ದಾನೆ. ಉತ್ತರ ಅಲಬಾಮದ ಅಪಲೇಚಿಯನ್‌ ಪರ್ವತಶ್ರೇಣಿಯ ಹತ್ತಿರದ ಇವನ ಮನೆಯ ಮುಂದಿನ ಸಣ್ಣಕಾಡೇ ಇವನಿಗೆ ಸಂಶೋಧನಾ ವಸ್ತು. ಆ ಕಾಡಿನಲ್ಲಿ ಅಳಿಲೊಂದು ಸತ್ತರೂ ಥಾಮಸ್‌ ಅದರ ಮುಂದಿರುತ್ತಾನೆ. ‘ಈ ಸಣ್ಣಕಾಡು ನಮ್ಮ ಭವಿಷ್ಯವಾಣಿ. ಒಳ್ಳೆಯ ಅರ್ಥಶಾಸ್ತ್ರ ತನಗೆ ತಾನೇ ಮಾರ್ಪಾಡು ಹೊಂದಿ ಇದನ್ನು ರಕ್ಷಿಸಬೇಕು; ಒಳ್ಳೆಯ ವಿಜ್ಞಾನ ಈ ಕಾಡಿನ ಜಗತ್ತಿನ ತಿಳಿನೀರಲ್ಲಿ ಅಲೆಗಳನ್ನು ಮೂಡಿಸದೆಯೇ ಅದನ್ನು ಅರ್ಥಮಾಡಿಕೊಳ್ಳಬೇಕು; ಒಳ್ಳೆಯ ಧರ್ಮಶಾಸ್ತ್ರ ಈ ಸಣ್ಣಕಾಡಿನ ಮೂಲಕ ಪ್ರಕೃತಿ ನೀಡುವ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ವಾಹಕವಾಗಬೇಕು. ಹಾಗಾದಾಗ ಮಾತ್ರ ನಾವು ಅಭಿವೃದ್ಧಿಯ ಪಥದಲ್ಲಿದ್ದೇವೆ ಎಂದರ್ಥ’.

Best Friend!ನಗರಗಳ ಸಾಂದ್ರೀಕರಣದ ಈ ದಿನಗಳಲ್ಲಿ ಕಾಡಿನ ಸಂಪರ್ಕವಿಲ್ಲದೆಯೇ ನಾವು ಕಳೆದುಕೊಂಡದ್ದೇನು ಎಂದು ಪಟ್ಟಿಮಾಡುವುದು ಬಹಳ ಸಂಕೀರ್ಣವಾದ ವಿಚಾರ. ಶುದ್ಧಗಾಳಿ, ಸರಿ ಸಮಯದಲ್ಲಿ ಮಳೆ, ವನ್ಯಜೀವಿಗಳಿಂದ ಸಮತೋಲನ ಮುಂತಾದವು ಎದ್ದು ಕಾಣುವವಾದರೂ ಇನ್ನೂ ಸಾವಿರಾರು ಪರಿಣಾಮಗಳು ವೆಂಡಲ್‌ ಬೆರ್ರಿಯಂತವರ ಪುಸ್ತಕಗಳನ್ನು ತುಂಬಿಸುತ್ತವೆ. ಆತನಂತೂ ಅಮೆರಿಕಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನದಿಂದ ಹಿಡಿದು ಬಾಲ ಖೈದಿಗಳು ಮತ್ತು ಯುದ್ಧಗಳ ತನಕ ಪ್ರತಿಯಾಂದು ಸಾಮಾಜಿಕ ರೋಗಗಳೂ ಹೇಗೆ ವನನಾಶದೊಂದಿಗೆ ತಳುಕುಹಾಕಿಕೊಂಡಿವೆ ಎನ್ನುವುದನ್ನು ಎಳೆಎಳೆಯಾಗಿ ಬಿಡಿಸುತ್ತಾನೆ.

ಕಾಡಿನಿಂದಲೇ ಬಂದವರು ನಾವು. ಅಲ್ಲಿಗೆ ಕಾಡು ನಮಗೆ ತವರು ಮನೆ. ಆದರೆ ಶತಮಾನಗಳಿಂದ ಈ ತವರುಮನೆಯ ಸಂಪರ್ಕವನ್ನು ಕಡಿದುಕೊಂಡುಬಿಟ್ಟಿದ್ದೇವೆ. ನಾವು ಕಾಡನ್ನು ಮರೆತಂತೆಯೇ ಕಾಡು ನಮ್ಮನ್ನು ಮರೆತಿದೆ. ತನ್ನ ಪಟ್ಟಿಯಿಂದ ನಮ್ಮ ಹೆಸರನ್ನು ಹೊಡೆದುಹಾಕಿದೆ. ಈ ಮರೆತ ಗೆಳೆಯನೊಂದಿಗೆ ಮತ್ತೆ ಸ್ನೇಹವನ್ನು ಏರ್ಪಡಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಎಷ್ಟೋ ವರ್ಷಗಳ ನಂತರ ಭೇಟಿಯಾದ ಸಂಕೋಚದ ಬಾಲ್ಯ ಸ್ನೇಹಿತನಂತೆ ಈ ಕಾಡೆಂಬ ಸ್ನೇಹಿತನೂ ದೂರ ಕುಳಿತಿದ್ದಾನೆ ಮುದುರಿಕೊಂಡು. ನೀವೇನಾದರೂ ಕಾಡನ್ನು ಪ್ರವೇಶಿಸಿದರೆ ಗುಬ್ಬಚ್ಚಿಯಿಂದ ಹಿಡಿದು ಪ್ರತಿ ಪ್ರಾಣಿ ಪಕ್ಷಿಗಳೂ ನಿಮ್ಮನ್ನು ಆಶ್ಚರ್ಯದಿಂದ ನೋಡುತ್ತವೆ. ಮರಗಿಡಗಳು ತಮ್ಮಲ್ಲೇ ಮುದುರಿ ಜಾಗ ಬಿಡುತ್ತವೆ, ಹೊರಟು ಹೋಗಿ ಬಿಡು ಎನ್ನುವಂತೆ. ಪ್ರತಿ ಜೊತೆ ಕಣ್ಣುಗಳೂ ಬೆದರಿ ನಿಂತಿರುತ್ತವೆ, ಯಾವ ವಿಪತ್ತನ್ನು ತಂದಿದ್ದಾನೋ ಇವನು ಎಂದು. ‘ಸರಿ, ನೋಡಿಯಾಯಿತಲ್ಲ, ಇನ್ನು ಹೊರಡು’ ಎಂದು ಅವ್ಯಕ್ತವಾಗಿ ಚೀರುತ್ತವೆ.

ನಮಗೂ ಈ ಅನಾದಿ ಕಾಲದ ಸ್ನೇಹಿತನ ಹೆಗಲ ಮೇಲೆ ಕೈ ಇಡುವುದು ಸುಲಭದ ಮಾತಲ್ಲ. ವೆಂಡಲ್‌ ಬೆರ್ರಿ ತಾನು ಕೆಲವು ದಿನ ಕಾಡೊಂದರಲ್ಲಿ ಕಳೆದ ಬಗೆಯನ್ನು ಬರೆಯುತ್ತಾ ಕಾಡಿನ ಆ ದಿವ್ಯ ಮೌನ ತನ್ನ ಮಾತನಾಡುವ ಶಕ್ತಿ ಮತ್ತು ಕೊನೆಗೆ ಯೋಚಿಸುವ ಶಕ್ತಿಯನ್ನೂ ಕೊಂದುಬಿಡುತ್ತದೇನೋ ಎಂದು ಹೆದರಿಕೆಯಾಗಿತ್ತು ಎನ್ನುತ್ತಾನೆ. ನಗರಗಳಲ್ಲಿನ ಟ್ರಾಫಿಕ್‌ ಸದ್ದಿಗೆ ನಮ್ಮ ಮನೋಜಗತ್ತು ಎಷ್ಟು ಹೊಂದಿಕೊಂಡಿರುತ್ತದೆ ಎಂದರೆ ಅದಿಲ್ಲದಿದ್ದರೆ ನಮ್ಮ ಚೇತನದ ಮೂಲವೇ ನಶಿಸಿ ಹೋಯಿತೇನೋ ಎಂದು ನರಳುತ್ತೇವೆ. ನಾಳಿನ ಆಸೆಯಲ್ಲಿ ಇವತ್ತನ್ನು ಮರೆಸುವ ನಾಗರೀಕತೆಯ ಅವಿಭಾಜ್ಯ ಅಂಗವಾಗಿ ಹೋಗಿರುತ್ತೇವೆ. ಗಾಣದೆತ್ತಿನಂತೆ ದುಡಿಯದಿದ್ದರೆ ಆಕಾಶವೇ ಕಳಚಿ ಬೀಳುತ್ತದೆ ನಮ್ಮ ಮೇಲೆ. ಒತ್ತಡವಿಲ್ಲದೇ ಬದುಕಿದರೆ ತಿಂದ ಅನ್ನ ಅರಗುವುದಿಲ್ಲ. ಕಾಡಿನ ನಿಯಮಾವಳಿಗಳೇ ಬೇರೆ. ಕ್ರೌರ್ಯವಿದೆ ಅಲ್ಲೂ, ಆದರೆ ಮೋಸವಿಲ್ಲ. ಮೊದಲ ದಿನ ಕಾಡಿನಲ್ಲಿ ವೆಂಡಲ್‌ ಬೆರ್ರಿ ಚಡಪಡಿಸಿ ಹೋದನಂತೆ. ರಾತ್ರಿಯೆಲ್ಲಾ ನಿದ್ರೆಯಿಲ್ಲದೇ ಕಳೆದನಂತೆ. ಯಾವ ಪ್ರಾಣಿ ಟೆಂಟಿನೊಳಗೆ ನುಗ್ಗುತ್ತದೋ ಎನ್ನುವ ಭಯ! ನಾಗರಿಕ ಪ್ರಪಂಚದಲ್ಲಿ ಡಕಾಯಿತರಿಗೆ ಹೆದರಿದಂತೆ.

ಆದರೆ ಹಾಗೇನೂ ಆಗಲಿಲ್ಲ. ಯಾವ ಪ್ರಾಣಿ ಪಕ್ಷಿಯೂ ಅವನಿಗೆ ತೊಂದರೆ ಕೊಡಲಿಲ್ಲ. ಕ್ರಮೇಣ ಕಾಡು ಅವನ ಮೇಲಿನ ಅನುಮಾನವನ್ನು ಬಿಟ್ಟಿತು. ವೆಂಡಲ್‌ ಬೆರ್ರಿ ಕಾಡಿನ ಮೇಲಿನ ಹೆದರಿಕೆಗಳನ್ನು ಬಿಟ್ಟ. ಕಾರಿನಲ್ಲಿ ಎಂಭತ್ತು ಮೈಲಿ ವೇಗವಾಗಿ ಹೋಗುವಾಗ ಕಾಣುತ್ತಿದ್ದ ಕಾಡೇ ಬೇರೆ, ಈಗ ಆ ಕಾಡಿನೊಳಗೆ ಒಂದಾಗಿ ಕುಳಿತಾಗ ಕಾಣುವ ಕಾಡೇ ಬೇರೆ, ಕಾಣುವ ಹೂವೇ ಬೇರೆ, ಕಾಣುವ ಅಳಿಲುಗಳೇ ಬೇರೆ, ಕಾಣುವ ರೆಂಬೆಕೊಂಬೆಗಳ ಹಸುರೆಲೆಗಳ ಮರಗಳೇ ಬೇರೆ. ಕಾಡು ಈಗ ಸ್ನೇಹಿತ ಅವನಿಗೆ. ‘ಹೆದರಿ ನಡುಗಿದಾಗ ಬೆದರಿ ಬೆವರಿದಾಗ’ ಕೈಹಿಡಿದು ಸಂತೈಸುವ ಸ್ನೇಹಿತ.

ನೀವು ಎಲ್ಲೇ ಇರಿ; ಬೆಂಗಳೂರೋ, ಮುಂಬಯಿಯೋ, ಸ್ಯಾನ್‌ಫ್ರಾನ್ಸಿಸ್ಕೋವೋ, ನ್ಯೂಯಾರ್ಕೋ, ಲಂಡನ್ನೋ ... ಕೊನೆಯ ಪಕ್ಷ ವರ್ಷಕ್ಕೆ ಒಂದು ಬಾರಿಯಾದರೂ ಈ ಜನಾರಣ್ಯಗಳಿಂದ ಮುಕ್ತರಾಗಿ ಹತ್ತಿರದ ವನಾರಣ್ಯ ಒಂದಕ್ಕೆ ಭೇಟಿ ಕೊಡಿ. ವರ್ಷಕ್ಕೆ ಒಮ್ಮೆಯಾದರೂ ಟ್ರಾಫಿಕ್‌ನ ಹೊರತಾದದ್ದನ್ನು ಮನಸ್ಸು ಕೇಳಲಿ. ನಾಳೆಯ ಚಿಂತೆ ಇಲ್ಲದೆ ಇವತ್ತಿನ ಜೀವನವನ್ನು ಬದುಕು ಸವಿಯಲಿ. ತವರುಮನೆಗೆ ಭೇಟಿಕೊಟ್ಟ ಹೆಣ್ಣು ಮಗಳು ಅಮ್ಮನೊಂದಿಗೆ ಹರಟುವಂತೆ ನೀವೆಲ್ಲವನ್ನೂ ಈ ಸ್ನೇಹಿತನೊಂದಿಗೆ ಹರಟಬಹುದು. ಪ್ರಮೋಷನ್‌ ಸಿಗದೇ ಇದ್ದುದು, ಮಗಳಿಗೆ ಮದುವೆಯಾಗದಿರುವುದು, ಮನೆ ತೊರೆದ ಮಗ, ಏರುವ ರಕ್ತದೊತ್ತಡ, ಹಿಂಡುವ ಡಯಾಬಿಟೀಸ್‌ ಎಲ್ಲವನ್ನೂ ತೋಡಿಕೊಳ್ಳಬಹುದು. ಕಾಡೆಂಬ ಸ್ನೇಹಿತ ಎಲ್ಲವನ್ನೂ ಸಹನೆಯಿಂದ ಕೇಳಿ ಒಮ್ಮೆ ನಿಮ್ಮ ಅಂಗೈಯನ್ನು ಹಿತವಾಗಿ ಒತ್ತುತ್ತಾನೆ. ಆ ದೇವದೂತನ ಮಾಯಾವಿ ಸ್ಪರ್ಷಕ್ಕೆ ಮೈ ಮನಗಳ ಬೇಡಿಗಳೆಲ್ಲಾ ಔಷಧಕ್ಕೆ ಸತ್ತ ಕ್ರಿಮಿಗಳಂತೆ ಕಳಚಿಬಿದ್ದು ಇದ್ದಕ್ಕಿದ್ದಂತೆಯೇ ಬಿಡುಗಡೆಯ ಸುಖ ಕಾಣುತ್ತದೆ.

ಎಲ್ಲದಕ್ಕಿಂತಾ ಮಿಗಿಲಾಗಿ, ಮತ್ತೆ ಮತ್ತೆ ಮನುಷ್ಯರಾಗಿ ಹಿಂತಿರುಗಬಹುದು.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X