• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪೊಲೋ 13 : ಸೋಲಿನೆದೆಯಲ್ಲೊಂದು ಗೆಲುವಿನ ಹಾಡು, ಭಾಗ -2

By Staff
|
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
Dattathri_M_R@yahoo.com

(ಮುಂದುವರೆದ ಭಾಗ)

ಅಪೊಲೋ-13ರ ಕಮ್ಯಾಂಡರ್‌ 42 ವರ್ಷದ ಜಿಮ್‌ ಲೊವೆಲ್‌ನಿಗೆ ಇದು ಮೊದಲ ಅಂತರಿಕ್ಷಯಾನವಲ್ಲ. ಅದು ನಾಲ್ಕನೆಯದು ಅವನಿಗೆ. ಆದರೆ ಅವನ ಜೊತೆ ಇದ್ದ ಹೈಸ್‌ ಮತ್ತು ಸ್ವೆಗರ್ಟ್‌ರಿಗೆ ಮಾತ್ರ ಮೊದಲ ರೋಮಾಂಚಕ ಅಂತರಿಕ್ಷಯಾನ. ಸ್ವೆಗರ್ಟ್‌ ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಅವನನ್ನು ಬ್ಯಾಕ್‌ಅಪ್‌ ಪೈಲಟ್‌ ಎಂದು ಕುಳ್ಳಿರಿಸಲಾಗಿತ್ತು. ಆದರೆ ಆಯ್ಕೆಯಾಗಿದ್ದ ಒಬ್ಬ ಗಗನಯಾತ್ರಿಗೆ ಹೊರಡುವ ಹಿಂದಿನ ದಿನ ಜರ್ಮನ್‌ ಮೀಸಲ್ಸ್‌ ಬಂದಿರುವುದು ಖಾತ್ರಿಯಾದಾಗ ಅವನ ಬದಲಿಗೆ ಸ್ವೆಗರ್ಟ್‌ ಆಯ್ಕೆಯಾಗಿದ್ದ.

ಅಪೊಲೋ-13ರ ಗುರಿ ಚಂದ್ರನ ಮೇಲಿನ ಫ್ರಾ ಮೌರೋ ಕುಳಿಯಲ್ಲಿ ಇಳಿದು ಆ ಪ್ರದೇಶದ ರಚನೆಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಂಶೋಧನೆಗಾಗಿ ಕಲ್ಲು ಮಣ್ಣುಗಳನ್ನು ಭೂಮಿಗೆ ತರುವುದು. ಈ ಫ್ರಾ ಮೌರೋ ಕುಳಿಯಾದದ್ದು ಒಂದು ಉಲ್ಕೆಯ ಆಘಾತದಿಂದ. ಹಾಗಾಗಿ ಈ ಪ್ರದೇಶದ ಅಧ್ಯಯನ ನಮ್ಮ ಭೂಮಿಯ ಇತಿಹಾಸದ ಮೇಲೂ ಬೆಳಕು ಚೆಲ್ಲಬಹುದು ಎನ್ನುವುದು ವಿಜ್ಞಾನಿಗಳ ಅಂದಾಜು.

Apollo-13 : The Successful failureಏಪ್ರಿಲ್‌ 11, 1970ರಂದು ಹ್ಯೂಸ್ಟನ್‌ನ ನಿಯಂತ್ರಣ ಕೇಂದ್ರದಸಮಯ ಮಧ್ಯಾಹ್ನ 1:13ಕ್ಕೆ ಫ್ಲೋರಿಡಾದ ಕೇಪ್‌ ಕೆನಾವರಲ್‌ನಿಂದ ಅಪೊಲೋ-13 ಆಕಾಶಕ್ಕೆ ನೆಗೆಯಿತು. ಸ್ಯಾಟ್ರನ್‌-5 ರಾಕೆಟ್‌ ಬಹಳ ಸುಸೂತ್ರವಾಗಿ ಗಗನ ನೌಕೆಯನ್ನು (ಅದರ ಹೆಸರು ಒಡಿಸ್ಸಿ), ಗಗನ ನೌಕೆಗೆ ಅಂಟಿಕೊಂಡ ಚಂದ್ರಯಾನ ನೌಕೆಯನ್ನು (ಅಕ್ವೇರಿಯಸ್‌) ಮತ್ತು ಅವೆರಡನ್ನು ಮಧ್ಯ ಹಿಡಿದಿಟ್ಟಿದ್ದ ಕಮ್ಯಾಂಡ್‌ ಮಾಡ್ಯೂಲ್‌ನ್ನು ಬಾಹ್ಯಾಕಾಶಕ್ಕೆ ಸೇರಿಸಿ ಚಂದ್ರನೆಡೆಯ ದೀರ್ಘ ಪಥದಲ್ಲಿ ಇರಿಸಿತು. ಚಂದ್ರನನ್ನು ತಲುಪಲು ಮೂರು ದಿನಗಳು ಬೇಕು. ಸುಮಾರು ಮೂರು ಲಕ್ಷ ಮೈಲಿಗಳಾಚೆ ಅವನು. ಅಪೊಲೋ-13 ಎರಡು ಲಕ್ಷ ಮೈಲಿಗಳಷ್ಟು ಪ್ರಯಾಣ ಮಾಡಿ ಆಗಿದೆ. ನೀಲಿ ಬಣ್ಣದ ಭೂಮಿಗ್ರಹ ಚಿಕ್ಕದಾಗಿ ಕಂಡು ಬಿಳೀ ಬಣ್ಣದ ಭೂ-ಉಪಗ್ರಹ ಚಂದ್ರ ಆಕಾಶದ ತುಂಬೆಲ್ಲಾ ಕಾಣುತ್ತಿದ್ದಾನೆ. ಕ್ಷಣ ಕ್ಷಣಕ್ಕೂ ನೌಕೆಯ ಮೇಲೆ ಭೂಮಿಯ ಗುರುತ್ವ ಕಡಿಮೆಯಾಗಿ ಚಂದ್ರನ ಹಿಡಿತ ಮೇಲೇರುತ್ತಿದೆ. ಇನ್ನೊಂದು ದಿನದ ಪ್ರಯಾಣದಲ್ಲಿ ಚಂದ್ರನನ್ನು ತಲುಪಿಯೇ ಬಿಡುತ್ತಾರೆ ಎನ್ನುವಾಗ ವಿಪರ್ಯಾಸ ಒಂದು ಅವರಿಗಾಗಿ ಕಾದಿತ್ತು. ಎರಡರಲ್ಲಿ ಒಂದು ಆಮ್ಲಜನಕದ ಸಂಗ್ರಹ (ಆಕ್ಸಿಜನ್‌ ಟ್ಯಾಂಕ್‌) ಒಡೆದು ನೋಡುನೋಡುತ್ತಿದ್ದಂತೆಯೇ ನಿರ್ಯಾತಕ್ಕೆ ಸೋರಿಹೋಗಿ ಗಾಳಿಯಿರದ ಜಾಗದಲ್ಲಿ ಚದುರಿಹೋಗಲೂ ಆಗದೆ ಬಾಹ್ಯಾಕಾಶದಲ್ಲಿ ಬಿಳೀಬಣ್ಣದ ಮೋಡವಾಗಿ ಹೋಯಿತು. ಟ್ಯಾಂಕಿನ ಸಿಡಿದ ಭಾಗಗಳು ಚದುರಿ ದೂರ ಬೀಳಲು ಭೂಮಿಯ ಗುರುತ್ವ ಬಲವಿಲ್ಲದೆ ನೌಕೆಯ ಸುತ್ತಾ ಹರಡಿಕೊಂಡು ನೌಕೆಯ ಸುತ್ತಾ ಸುತ್ತುತ್ತ ಅದರ ವೇಗದಲ್ಲೆ ಅದರ ಜೊತೆಗೇ ಧಾವಿಸತೊಡಗಿದವು. ಹಳೇ ಮನೆಯನ್ನು ಕೆಡವಿದಂತೆ ಹುಟ್ಟಿದ ಧೂಳಿನ ಕಣಗಳ ರಾಶಿ: ಉದ್ದಕ್ಕೂ ದಾರಿ ಮಾಡಿದಂತೆ ಸೋರಿಹೋಗುತ್ತಿರುವ ಜೀವ ವಾಯು: ಎಲ್ಲದರ ನಡುವೆ ಕಂಗಾಲಾಗಿ ಜೀವಹಿಡಿದು ಕುಳಿತ ಮೂವರು ಮನುಷ್ಯರು!

ಒಡೆದು ಹೋದ ಆಕ್ಸಿಜನ್‌ನ ಟ್ಯಾಂಕಿಗೆ ಎಲ್ಲವೂ ಗಂಟು ಹಾಕಿಕೊಂಡಿದ್ದವು. ಇದ್ದ ಮತ್ತೊಂದು ಆಕ್ಸಿಜನ್‌ ಟ್ಯಾಂಕ್‌ ಕೂಡ ನಿಧಾನವಾಗಿ ಸೋರಿಹೋಗತೊಡಗಿತು. ಕೆಲವೇ ನಿಮಿಷಗಳಲ್ಲಿ ಈ ಆಕ್ಸಿಜನ್‌ ಟ್ಯಾಂಕುಗಳಿಗೆ ಹೊಂದಿಕೊಂಡಂತಿದ್ದ ನೌಕೆಗೆ ವಿದ್ಯುತ್‌ ಸರಬರಾಜು ಮಾಡುತ್ತಿದ್ದ ಮೂರು ಫ್ಯೂಯಲ್‌ ಸೆಲ್‌ಗಳಲ್ಲಿ ಎರಡು ಸಂಪೂರ್ಣವಾಗಿ ಸತ್ತು ಹೋದವು. ಏನೇ ಲೆಕ್ಕಹಾಕಿದರೂ ಇನ್ನು ಕೆಲವು ಗಂಟೆಗಳು ಅಷ್ಟೆ. ಭೂಮಿ ತಲುಪಲು ನಾಲ್ಕು ದಿನಗಳು ಬೇಕು! ಮಂಜುಗುಡ್ಡೆಗೆ ಬಡಿದು ಸಮುದ್ರದಲ್ಲಿ ಮುಳುಗಿಹೋಯಿತಲ್ಲ ಟೈಟಾನಿಕ್‌ನ ಕಥೆಯೇ ಇದು: ಆದರೆ ಚಂದ್ರನ ಸಮೀಪದಲ್ಲಿ.

ಭೂಮಿಯ ಮೇಲಿನ ಮಿಷನ್‌ ಕಂಟ್ರೋಲ್‌ನ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ದಿಢೀರನೆ ಬದಲಾದ ಪರಿಸ್ಥಿತಿಯಿಂದ ಅವಾಕ್ಕಾಗಿದ್ದು ನಿಜ, ಆದರೆ ಧೃತಿಗೆಡಲಿಲ್ಲ. ಅಪೊಲೋ-13ರ ಫ್ಲೈಟ್‌ ಡೈರೆಕ್ಟರ್‌ ಆಗಿದ್ದ ಯುಜಿನ್‌ ಕ್ರಾಂಗ್ಸ್‌ ಅಷ್ಟು ಸುಲಭದಲ್ಲಿ ಸೋಲುಪ್ಪುವ ಆಸಾಮಿಯಲ್ಲ. ಕ್ರಾಂಗ್ಸ್‌ ಆಕ್ಷಣದಲ್ಲಿ ಯಾನ ನಿಯಂತ್ರಣಾಧಿಕಾರಿಯಾಗಿದ್ದ ಕ್ರಿಸ್‌ ಕ್ರಾಫ್ಟ್‌ನಿಗೆ ಮಾಡಿದ ಟೆಲಿಫೋನ್‌ ಕರೆ ಆತ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದ ರೀತಿಯನ್ನು ತಿಳಿಸುತ್ತದೆ. ಕ್ರಿಸ್‌ ಕ್ರಾಫ್ಟ್‌ನ ಹೆಂಡತಿ ಆ ದೂರವಾಣಿ ಕರೆಯನ್ನು ಸ್ವೀಕರಿಸಿದಳಂತೆ. ‘ಕ್ರಿಸ್‌ ನೊಂದಿಗೆ ಮಾತನಾಡಬೇಕಿತ್ತು’ ಕ್ರಾಂಗ್ಸ್‌ನ ಅಧಿಕಾರಯುತ ಧ್ವನಿ. ‘ಅವರು ಸ್ನಾನ ಮಾಡುತ್ತಿದ್ದಾರೆ. ಶವರ್‌ನಿಂದ ಹೊರಗೆ ಬಂದೊಡನೆಯೇ ನಿಮಗೆ ಕಾಲ್‌ ಮಾಡುವಂತೆ ಹೇಳುತ್ತೇನೆ’ ಎಂದಳು ಕ್ರಿಸ್‌ ಕ್ರಾಫ್ಟ್‌ನ ಹೆಂಡತಿ. ‘ಒಂದು ಕ್ಷಣ ಕೂಡ ವ್ಯರ್ಥ ಮಾಡುವಂತಿಲ್ಲ. ದಯವಿಟ್ಟು ತಕ್ಷಣವೇ ಕರೆಯಿರಿ’ ಎಂದಾಗ ಒದ್ದೆ ಮೈಯ ವಸ್ತ್ರವಿಹೀನನಾದ ಕ್ರಿಸ್‌ ಕ್ರಾಫ್ಟ್‌ ಛಳಿಗೆ ನಡುಗುತ್ತಾ ಬಂದು ಕಾಲ್‌ ರಿಸೀವ್‌ ಮಾಡಿದನಂತೆ!

ಎಲ್ಲೋ ಬಾಹ್ಯಾಕಾಶದಲ್ಲಿ ಸಿಕ್ಕಿಹೋದ ಆ ಮೂವರನ್ನು ಯಾವ ರೀತಿ ಭೂಮಿಗೆ ವಾಪಸ್ಸು ತರಬಹುದು ಎಂದು ಉಪಾಯಗಳ ಮೇಲೆ ಉಪಾಯಗಳನ್ನು ನಾಸಾ ಹೆಣೆಯಿತು. ಎಲ್ಲವೂ ಸರಿಯಾಗಿದ್ದು ಚಂದ್ರನ ಕಕ್ಷೆಯಲ್ಲಿದ್ದರೆ ಅಲ್ಲಿಂದ ಚಂದ್ರನ ಮೇಲೆ ಇಳಿಯಲು ಚಂದ್ರಯಾನ ನೌಕೆ (Lunar Module) ಇತ್ತಲ್ಲ , ಅದನ್ನು ಲೈಫ್‌ ಬೋಟ್‌ ಆಗಿ ಬಳಸಿ ವಾಪಸ್ಸು ಬರಬಾರದೇಕೆ ಎಂದು ಯೋಚಿಸಿತು.

ಮೂವರು ಗಗನಯಾತ್ರಿಗಳು ತಮ್ಮ ಮಾತೃನೌಕೆಯನ್ನು ತ್ಯಜಿಸಿ ಚಂದ್ರಯಾನ ನೌಕೆಯಾಳಗೆ ಸೇರಿಕೊಂಡರು. ಈ ಚಂದ್ರಯಾನ ನೌಕೆಯೋ, ಕೇವಲ ಇಬ್ಬರನ್ನು ಕೆಲವು ಗಂಟೆಗಳ ತನಕ ಚಂದ್ರನ ಕಕ್ಷೆಯಿಂದ ಚಂದ್ರನ ನೆಲದ ಮೇಲೆ ಇಳಿಸಿ ವಾಪಸ್ಸು ಕಕ್ಷೆಗೆ ತರಲು ತಯಾರಾದದ್ದು. ಈಗ ಮೂವರನ್ನು ನಾಲ್ಕುದಿನಗಳ ಕಾಲ ಹೊತ್ತು ಭೂಮಿ ತಲುಪುವ ಜವಾಬ್ದಾರಿ ಅದಕ್ಕೆ! ಲೂನಾ ಮೊಪೆಡ್‌ನಲ್ಲಿ ಬೆಂಗಳೂರಿಂದ ಮುಂಬಯಿಗೆ ಹೊರಟಂತೆ!

ಚಂದ್ರಯಾನ ನೌಕೆಯಲ್ಲಿ ಆಕ್ಸಿಜನ್‌ಗೆ ಕೊರತೆ ಇರಲಿಲ್ಲ. ಆದರೆ ಬ್ಯಾಟರಿಗಳನ್ನು ಉಳಿಸಿಕೊಳ್ಳಲು ವಿದ್ಯುತ್‌ ಅತಿ ಮಿತವಾಗಿ ಖರ್ಚು ಮಾಡಬೇಕಿತ್ತು. ಎಂಟು ಗಂಟೆಯ ಲೆಕ್ಕಾಚಾರದಲ್ಲಿ ತೆಗೆದುಕೊಂಡು ಹೋದ ನೀರಿನಲ್ಲಿ ನಾಲ್ಕು ದಿನ ಮಾಡಿಕೊಳ್ಳಬೇಕಿತ್ತು. ನೀರನ್ನು ಉಳಿಸಲು ದಿನಕ್ಕೆ ತಲಾ ಒಂದು ಗ್ಲಾಸ್‌ ನೀರಿನಲ್ಲಿ ಮೂವರೂ ಬದುಕಿದರು. ಡಿಹೈಡ್ರೇಟ್‌ ಆಗಿ ದೇಹದ ಸ್ವಾಸ್ಥ್ಯ ಗಂಭೀರವಾಗಿ ಹಾಳಾಯಿತು. ಆಹಾರವನ್ನು ತಿಂದರೆ ನೀರು ಕುಡಿಯಬೇಕಾದೀತೆಂದು ಆಹಾರವನ್ನು ಅತಿಮಿತವಾಗಿ ತೆಗೆದುಕೊಳ್ಳುವಂತಾಯಿತು. ವಿದ್ಯುತ್‌ನ್ನು ಉಳಿಸಲು ಶಾಖೋತ್ಪನ್ನ ಉಪಕರಣಗಳನ್ನು ನಿಲ್ಲಿಸುವುದು ಅವಶ್ಯವಾದುದರಿಂದ ಬಾಹ್ಯಾಕಾಶದ ಆ ಚಳಿಗೆ ನಿದ್ರಿಸುವುದು ಅಸಾಧ್ಯದ ಮಾತಾಯಿತು. ನೀರಿಲ್ಲ , ಆಹಾರವಿಲ್ಲ , ನಿದ್ರೆಯಿಲ್ಲ , ಜೊತೆಗೆ ತಲೆಮೇಲೆ ಸಾವಿನ ದಟ್ಟ ನೆರಳು.

ಚಂದ್ರನ ಗುರುತ್ವಾಕರ್ಷಣೆಯನ್ನು ಉಪಾಯವಾಗಿ ಬಳಸಿಕೊಂಡು ನೌಕೆಯನ್ನು ಭೂಮಿಯೆಡೆಗೆ ತಿರುಗಿಸಿಕೊಂಡರು. ಭೂಮಿಯೆಡೆಗೆ ಪಯಣ ಮಾಡುವ ಪಥವನ್ನು (Trajectory) ಕಂಡು ಹಿಡಿಯುವ ಉಪಕರಣಗಳ್ಯಾವುವೂ ಚಂದ್ರಯಾನ ನೌಕೆಯಲ್ಲಿರಲಿಲ್ಲ. ನಕ್ಷತ್ರಗಳನ್ನು ಉಪಯೋಗಿಸಿ ನಿಖರ ಪಥವನ್ನು ಲೆಕ್ಕ ಹಾಕಿಕೊಳ್ಳೋಣವೆಂದು ನೋಡಿದರೆ ನೌಕೆಯ ಸುತ್ತಾ ಸಿಡಿದುಹೋದ ಟ್ಯಾಂಕಿನ ಲೋಹರಾಶಿ. ಕೊನೆಗೆ ಮಿಷನ್‌ ಕಮ್ಯಾಂಡರ್‌ ಜಿಮ್‌ ಲೊವೆಲ್‌ ಸೂರ್ಯನನ್ನೇ ಬಳಸಿಕೊಂಡು ಕಿಟಕಿಯಲ್ಲಿ ಭೂಗ್ರಹವನ್ನು ಸ್ಥಿರವಾಗಿ ಹಿಡಿದು ತನ್ನ ದಿಕ್ಕನ್ನು ಕಂಡುಹಿಡಿದುಕೊಂಡ.

ಏಪ್ರಿಲ್‌ ಹದಿನೇಳು 1970 ಮಧ್ಯಾನ್ಹ ಹನ್ನೆರಡು ಏಳಕ್ಕೆ ಅರೆಜೀವಿಗಳಾಗಿದ್ದ ಮೂವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಪೆಸಿಫಿಕ್‌ ಸಮುದ್ರದ ನೀರನ್ನು ಮುಟ್ಟಿತು. ಯಾವ ಜೀವ ನಷ್ಟವಾಗಲಿಲ್ಲ. ಮೂವರೂ ತೀರಾ ನಿತ್ರಾಣವಾಗಿದ್ದರು. ಅದರಲ್ಲೂ ಹೈಸ್‌ ಎರಡುವಾರಗಳ ತನಕ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಟ ನಡೆಸಿ ಆ ಮೇಲೆ ಗುಣವಾದ.

ನಾಸಾ ಎಂದೂ ಅಪೊಲೋ-13ನ್ನು ವಿಫಲಯಾನ ಎಂದು ಕರೆಯಲಿಲ್ಲ. ಏಕೆಂದರೆ ಈ ಯಾನದಲ್ಲಿ ಅದು ಕಲಿತದ್ದು ಉಳಿದ ಯಾವ ಮನುಷ್ಯ ಸಹಿತ/ರಹಿತ ಯಾನಗಳಿಂದಲೂ ಅದು ಕಲಿಯಲಿಲ್ಲ. ದಿಢೀರ್‌ ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿಗಳಲ್ಲಿ ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ/ಬದಲಿಸುವ ತನ್ನ ಪ್ರವೃತ್ತಿಯನ್ನು ಈ ಯಾನದಲ್ಲಿ ಪರೀಕ್ಷೆಗೆ ಒಳಪಡಿಸಿತ್ತು.

ಎಲ್ಲದಕ್ಕಿಂತಲೂ ಮುಖ್ಯವಾಗಿ, ಯಾನ ವಿಫಲವಾಗಿ ಹಣ ನದಿಯ ನೀರಂತೆ ಪೋಲಾಗಿ ಹೋದರೂ, ಆಗಬಹುದಾಗಿದ್ದ ಜೀವನಷ್ಟಗಳನ್ನು ತಪ್ಪಿಸುವಂತಾದರೆ ಅದಕ್ಕಿಂತಾ ಸಾಧನೆ ಮತ್ತೇನಿಲ್ಲ ಎನ್ನುವುದನ್ನು ದೃಢವಾಗಿ ನಂಬಿ ಹಾಗೆಯೇ ನಡೆಯಿತು.

ಕೆಲವರು ಈ ಯಾನಕ್ಕೆ ‘13’ ಎಂದು ಇಡುವುದು ಬೇಡ ಎಂದರಂತೆ. ಏಕೆಂದರೆ 13 ದುರಾದೃಷ್ಟ ಸಂಖ್ಯೆ ಎನ್ನುವ ನಂಬಿಕೆ. ಯಾನ ಪ್ರಾರಂಭವಾದದ್ದು 13:13ಕ್ಕೆ. ಯಾನಕ್ಕೆ ಅಪಘಾತವಾದದ್ದು ಏಪ್ರಿಲ್‌ 13 ರಂದು.

ಆದರೆ ಜೀವಗಳು ಉಳಿಯಿತಲ್ಲ , ಅದಕ್ಕಿಂತಾ ಮಿಗಿಲಾದ ಅದೃಷ್ಟ ಬೇರೆ ಇದೆಯೇ?

ಮೊದಲರ್ಧ : ಸೋಲಿನೆದೆಯಲ್ಲೊಂದು ಗೆಲುವಿನ ಹಾಡು

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+1353354
CONG+09090
OTH09898

Arunachal Pradesh

PartyLWT
BJP23436
JDU077
OTH11112

Sikkim

PartyWT
SKM1717
SDF1515
OTH00

Odisha

PartyWT
BJD112112
BJP2323
OTH1111

Andhra Pradesh

PartyLWT
YSRCP0151151
TDP02323
OTH011

LOST

Adinarayana Reddy - TDP
Kadapa
LOST
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more