• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

ಅಮೆರಿಕಾದಲ್ಲಿ ‘ಸೈನ್ಸ್‌ ನ್ಯೂಸ್‌’ ಎನ್ನುವ ವಿಜ್ಞಾನಕ್ಕೆ ಸಂಬಂಧಿಸಿದ ವಾರಪತ್ರಿಕೆ ಇದೆ. ಸುಮಾರು 12ರಿಂದ 15 ಪುಟಗಳನ್ನು ಹೊಂದಿರುವ ಇದರ ಬೆಲೆ ಎಪ್ಪತ್ತೆೈದು ಸೆಂಟುಗಳು. ವಿಜ್ಞಾನವನ್ನು ಅತಿ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ಮುಟ್ಟಿಸಬೇಕು ಎನ್ನುವ ಆಶಯದ ಪ್ರತೀಕ ಈ ಪತ್ರಿಕೆ. ಓದಲೂ ಭಾರವೆನಿಸದಂತಹದ್ದು. ಬೆಳಗ್ಗೆ ಆಫೀಸಿಗಾಗಿ ಟ್ರೆೃನಿನಲ್ಲಿ ಹೋಗುವಾಗಲೋ, ಕಂಪನಿಯ ಲಾಬಿಯಲ್ಲಿ ಸ್ನೇಹಿತನಿಗಾಗಿ ಕಾಯಬೇಕಾದರೋ, ರಾತ್ರಿಯ ಊಟ ಮುಗಿದು ಹತ್ತು ಗಂಟೆಯ CNN ನ್ಯೂಸ್‌ಗಾಗಿ ಕಾಯುವಾಗಿನ ಸಂದಿ ಸಮಯದಲ್ಲೋ ಓದಿ ಮುಗಿಸಬಹುದಾದಂತದ್ದು. ಬಹಳ ಆಸಕ್ತಿಪೂರ್ಣವಾದ ಪತ್ರಿಕೆ ಕೂಡ.

ವಿಜ್ಞಾನವನ್ನು ಸಾಮಾನ್ಯರಿಗೆ ತಲುಪಿಸುವಂತಹ ಪತ್ರಿಕೆಗಳು ನಮ್ಮ ಕನ್ನಡದಲ್ಲಿ ಬರಲೇ ಇಲ್ಲ . ಆಧುನಿಕ ಬದುಕಿನಲ್ಲಿ ವಿಜ್ಞಾನ ಕೇವಲ ಅಕಡಮಿಕ್‌ ಓದಿನ ವಿಷಯ ಮಾತ್ರ ಅಲ್ಲ. ರಾಕೇಟ್‌ ವೇಗದಲ್ಲಿ ದೌಡಾಯಿಸುತ್ತಿರುವ ಸಮಸ್ತ ಸಂಶೋಧನೆಗಳನ್ನು ಅರಿತುಕೊಳ್ಳುವ ಸಾಹಸವಲ್ಲದಿದ್ದರೂ ಕೆಲವು ಸಾಮಾನ್ಯ ವಿಷಯಗಳ ಬಗ್ಗೆ ಪ್ರಾಥಮಿಕ ಜ್ಞಾನವನ್ನು ಹೊಂದಿರುವುದು ಸಾಮಾನ್ಯ ಗೃಹಿಣಿಯಿಂದ ಹಿಡಿದು ದೇಶವನ್ನಾಳುವ ರಾಜಕಾರಣಿಗಳ ತನಕ ಎಲ್ಲರಿಗೂ ಅವಶ್ಯ. ನಮಗರ್ಥವಾಗುವಂತೆ ಸರಳ ಸುಂದರ ಭಾಷೆಯಲ್ಲಿ ಬರೆಯಲ್ಪಟ್ಟ ವಿಜ್ಞಾನದ ಓದು ಇಂದಿನ ವಿದ್ಯಾವಂತ ಜನಾಂಗಕ್ಕೆ ಒಂದು ರಂಜನೆ ಕೂಡ. ಅದು ನಮ್ಮ ಮಾತೃಭಾಷೆಯಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ದೊರಕುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆ, ಅಲ್ಲವೆ?

Clarks Nutcrackerಈ ‘ಸೈನ್ಸ್‌ ನ್ಯೂಸ್‌’ ಪತ್ರಿಕೆಯನ್ನು ಓದುವುದೇ ಒಂದು ಚೆಂದ. ಹೊಸ ಸಂಶೋಧನೆಗಳ ಚುಟುಕು ವಿವರಗಳ ಜೊತೆಗೆ ಸುಮಾರು 2 ಅಥವಾ 3 ಪುಟಗಳ ಒಂದು ಆಸಕ್ತಿದಾಯಕವಾದ ಅಗ್ರ ಲೇಖನವಿರುತ್ತದೆ. ಇತ್ತೀಚೆಗೆ ಹೀಗೆಯೇ ಒಂದು ಬಿಡುವಿನ ಸಮಯದಲ್ಲಿ ಓದಿದ ಸೈನ್ಸ್‌ ನ್ಯೂಸ್‌ನ ಒಂದು ಲೇಖನ ನನ್ನ ಆಸಕ್ತಿಯನ್ನು ಕೆರಳಿಸಿದ್ದರಿಂದ ಅದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಲಕ್ಷಣದಲ್ಲಿ ನಮ್ಮ ಗುಬ್ಬಿಯನ್ನು ಹೋಲುವ ಆದರೆ ಉದ್ದ ಕೊಕ್ಕಿನ ಮತ್ತು ಗಾತ್ರದಲ್ಲಿ ಪಾರಿವಾಳಗಳಷ್ಟಿರುವ ಕ್ಲಾರ್ಕ್ಸ್‌ ನಟ್‌ಕ್ರಾಕರ್‌ (Clarks Nutcracker - Nucifraga Columbiana) ಎನ್ನುವ ಕ್ಯಾಲಿಫೋರ್ನಿಯಾ, ಉತ್ತರ ಮೆಕ್ಸಿಕೋ ಮತ್ತು ಅಲಸ್ಕ ಪ್ರದೇಶಗಳಲ್ಲಿ ನೆಲಸಿರುವ ತೆಳು ಕಂದು ಬಣ್ಣದ ಹಕ್ಕಿಯ ಆಹಾರ ‘ಹುದುಗಿಸಿಡುವ’ ಕಲೆಯ ಬಗೆಯ ಲೇಖನವದು. ಸಿಯಾರ ಪರ್ವತ ಶ್ರೇಣಿಗೆ ವಸಂತಮಾಸವು ಬಂದು ಗಿಡ ಮರಗಳೆಲ್ಲಾ ಚಿಗುರೊಡೆದು ಬೇಸಿಗೆ ಜೋರುಗೊಳ್ಳುವ ಹೊತ್ತಿಗೆ ಹಣ್ಣು ಕಾಯಿಗಳ ಸುಗ್ಗಿ ಆರಂಭವಾಗುತ್ತದಲ್ಲ ಆಗ ಈ ಹಕ್ಕಿ ಆಯ್ದು ಆಯ್ದು ಬಹಳ ದಿನ ಬರುವಂತಹ ಗಟ್ಟಿ ಚಿಪ್ಪಿನ ಕಾಯಿಗಳನ್ನು (ಬಾದಾಮಿಯಂತಹ ಕಾಯಿಗಳನ್ನು) ನೆಲದಲ್ಲಿ ಹುದುಗಿಸಿಡಲಾರಂಭಿಸುತ್ತದೆ. ಆಶ್ಚರ್ಯ ಇದಲ್ಲ , ಏಕೆಂದರೆ ಪ್ರತಿಹಕ್ಕಿಯೂ ತನ್ನ ಚಳಿಗಾಲದ ದಿನಕ್ಕೆ ಏನೋ ಒಂದು ಆಹಾರದ ವ್ಯವಸ್ಥೆಯನ್ನು ಮಾಡಿಯೇ ತೀರುತ್ತದೆ. ಆದರೆ ಕ್ಲಾರ್ಕ್ಸ್‌ ನಟ್‌ಕ್ರಾಕರ್‌ನ ವಿಶೇಷವೆಂದರೆ ಇದು ಸುಮಾರು 33,000 ಬೀಜಗಳನ್ನು ಸುಮಾರು 2,500 ಜಾಗಗಳಲ್ಲಿ ಗುಪ್ತವಾಗಿ ಹುದುಗಿಸಿಡುತ್ತದೆ! ಈ ಹುದುಗು ತಾಣಗಳು ಇದರ ಗೂಡಿನಿಂದ ಇಪ್ಪತ್ತೆೈದು ಕಿಲೋಮೀಟರ್‌ ತ್ರಿಜ್ಯ(radius)ದಲ್ಲಿ ಎಲ್ಲಿ ಬೇಕಾದರೂ ಇರುತ್ತವೆ! ನಿವೃತ್ತ ಸರಕಾರಿ ಉಪಾಧ್ಯಾಯರೊಬ್ಬರು ನಿಧಾನವಾಗಿ ನಡೆದುಕೊಂಡು ಬ್ಯಾಂಕಿಗೆ ಹೋಗಿ ಪೆನ್ಷನ್‌ ಹಣವನ್ನು ಹಿಂಪಡೆದು ಬಂದಂತೆ ಈ ಹಕ್ಕಿ ಚಳಿಗಾಲದಲ್ಲಿ ತನ್ನ ಈ ಮುಚ್ಚುತಾಣಗಳಿಂದ ಆಹಾರವನ್ನು ಪಡೆಯುತ್ತದೆ. ಹುದುಗಿಸಿಟ್ಟ ಹದಿಮೂರು ತಿಂಗಳ ನಂತರವೂ ಬೇಕಾದಾಗ ಮಣ್ಣು ಕೆದಕಿ ಅಡಗಿಸಿಟ್ಟಿದ್ದನ್ನು ಹೊರತೆಗೆದು ಸುಖ ಭೋಜನವನ್ನು ಕಾಣುವ ಈ ಹಕ್ಕಿ ಈ ತರಹ ತಾನು ಅಡಗಿಸಿಟ್ಟಿದ್ದರಲ್ಲಿ ಮೂರನೇ ಎರಡು ಭಾಗವನ್ನು ತಾನೇ ಅನುಭವಿಸುತ್ತದೆ. ಇದು ಲೇಖನದ ಸಾರಾಂಶ.

ಈ ಹಕ್ಕಿಯ ವಂಶಜರೋ ಎನ್ನುವಂತೆ ನಮ್ಮಲ್ಲಿಯೂ ಹುದುಗಿಸಿಡುವ ಗುಣವಿದೆ. ಜನ್ಮ ತಳೆಯುತ್ತಲೇ ಬಿಗಿ ಹಿಡಿದ ಮುಷ್ಟಿಯಲ್ಲಿ ಆಶಯಗಳ ದೊಡ್ಡ ಮೂಟೆಯೇ ಅಣುರೂಪದಲ್ಲಿರುತ್ತದೆ. ಅಂಬೆಗಾಲಿಡುವ ಹೊತ್ತಿಗಾಗಲೇ ಝಣ್‌ ಝಣ್‌ ಎನ್ನುವ ಗಿಲಗಿಚ್ಚಿಯಿಂದ ಹಿಡಿದು ಟಿವಿ ಸ್ಟಾಂಡಿನ ಮೇಲೆ ತಲೆ ಅದುರಿಸುತ್ತಾ ನಿಲ್ಲುವ ರಾಜ ರಾಣಿಯರ ಗೊಂಬೆಗಳ ತನಕ ಮುಂದೆ ಮುಂದೆ ತೆವಳಿಸುತ್ತಾ ವಿಸ್ಮಯಗಳ ಭಂಡಾರವನ್ನೇ ಹೊತ್ತು ಕೈಚಾಚುವಂತೆ ಮಾಡುತ್ತವೆ. ಮುಂದೆ, ನಿಂತು ನಡೆದು ಓಡಿಯಾಡಿದಾಗಲೆಲ್ಲಾ ಭೂಮಿತಾಯಿ ಅಕ್ಕರೆಯ ಕೆಸರನ್ನು ಪಾದದಿಂದ ಹಿಡಿದು ಮೈಕೈಗೆಲ್ಲಾ ಬಳಿದು ನಮ್ಮ ‘ಮಣ್ಣಿನ ಕಣ್ಣು’ ತೆರೆಯುವಂತೆ ಮಾಡುತ್ತಾಳೆ.

ಅಲ್ಲಿಂದ ಹುದುಗಿಸಿಡಲು ಪ್ರಾರಂಭಿಸುತ್ತೇವೆ. ಹುಡುಕಿದ್ದು ಕಳೆಯದಂತೆ, ಸಿಕ್ಕಿದ್ದು ಕಣ್ಮರೆಯಾಗದಂತೆ, ಹಿಡಿದಿದ್ದು ಕೈ ಜಾರದಂತೆ, ಕಡಲಡಿಯಿಂದ ತಂದ ಮುತ್ತೊಂದನ್ನು ಮನೆಯ ಮಾಡಿನಲ್ಲಿ ಅಡಗಿಸಿಟ್ಟಂತೆ. ಇಂದಲ್ಲದಿದ್ದರೆ ನಾಳೆಗಾದರೂ ಇರಲಿ ಮುಂದೆಂದಿಗೋ ಇರಲಿ ಸಾಯುವ ದಿನಕ್ಕಿರಲಿ.

ಅಮ್ಮನ ಪ್ರೀತಿ ಹೀಗೆ ತನುವಾದ ನದಿನೀರಿನ ಹರಿವಿನ ಮೆತ್ತನೆಯ ಮಣ್ಣಿನಲ್ಲಿ ಭದ್ರವಾಗಿ ಅಡಗಿರುತ್ತದೆ. ಯಾವತ್ತು ಬೇಕಾದರೂ ಓಡಿ ಮೇಲಿನ ಮಣ್ಣನ್ನು ಸರಿಸಿ ತಬ್ಬಿದಂತೆ ಎರಡೂ ಕೈಗಳನ್ನು ಒಳಸೇರಿಸಿದರೆ ಎದೆಗೊತ್ತಿ ಹಾಲು ಕುಡಿಸುತ್ತಿದ್ದವಳು ಅದೇ ಪರಿಯಲ್ಲಿ ಸಿಕ್ಕಿಬಿಡಬೇಕು ಹಾಗೆ. ಅಪ್ಪನ ಪ್ರೀತಿ ಒಂದು ಗುಂಡಿಯಲ್ಲಿ ; ಆಪತ್ಕಾಲಕ್ಕೆ ಅಳುತ್ತಳುತ್ತಲೇ ಒಣಗಿದ ಚಕ್ಕೆಯಿಂದ ಬಗೆದರೆ ‘ಬಂದೇ ಮಗನೇ’ ಎಂದು ಚಿಕ್ಕವನಿದ್ದಾಗ ಜ್ವರದ ತಾಪದಲ್ಲಿ ಕನವರಿಸಿಕೊಳ್ಳುತ್ತಾ ಮಲಗಿದ್ದವನ ಬಳಿಯಲ್ಲಿ ರಾತ್ರಿಯೆಲ್ಲಾ ಕುಳಿತಿದ್ದ ಅಪ್ಪ ಅದೇ ಕಾಳಜಿ ಪ್ರೀತಿಯಿಂದ ಓಡಿಬರುತ್ತಾನೆ ಎನ್ನುವಂತೆ. ಸುತ್ತಲಿನ ಇಪ್ಪತ್ತೆೈದು ಕಿಲೋಮೀಟರುಗಳಲ್ಲಿ ಎಲ್ಲೆಂದರಲ್ಲಿ ಸ್ನೇಹಿತರು ಹುದುಗಿ ಹೋಗುತ್ತಾರೆ. ಗೋಲಿಯಾಟದಲ್ಲಿ ಸೋತು ಪಣಕ್ಕಿಟ್ಟಿದ್ದನ್ನು ಕೊಡದೆ ಗುದ್ದಾಡಿದವನೊಬ್ಬ, ಮನೆಯಿಂದ ಕದ್ದು ಜೋನೆಹಿಡಿದ ಬೆಲ್ಲವನ್ನು ಜೇಬಿನಲ್ಲಿರಿಸಿ ಹಂಚಿ ತಿಂದವ, ಕೆರೆಯಲ್ಲಿ ಮುಳುಗಿಸಿ ಈಜು ಕಲಿಸಿದವ, ಇಬ್ರಾಹಿಂ ಸಾಬರ ಸೈಕಲ್‌ ಶಾಪಿನಲ್ಲಿ ಕುಳ್ಳನೆಯ ಸೈಕಲ್‌ನ್ನು ಬಾಡಿಗೆಗೆ ತಂದು ಬೆಳಗ್ಗಿನಿಂದ ಮಧ್ಯಾಹ್ನದತನಕ ಏದುಸಿರು ಬಿಡುತ್ತ ಪೂರ್ತಿಸಿಗದ ಪೆಡ್ಲ್‌ಗಳನ್ನು ಅರ್ಧಕ್ಕೇ ತುಳಿದು ‘ಡಬ್ಬಲ್‌’ ಮಾಡಿದವ, ಎಸ್‌.ಎಸ್‌.ಎಲ್‌.ಸಿಯಲ್ಲಿ ತಾನು ಫೇಲ್‌ ಆದರೂ ತುಂಬಿದ ಕಣ್ಣುಗಳಲ್ಲೇ ನಿಮ್ಮ ಜಯಕ್ಕೆ ಸಂತಸ ಪಟ್ಟವ, ಕೆಮಿಸ್ಟ್ರಿಲ್ಯಾಬಿನಲ್ಲಿ ಹಿಂಟ್ಸ್‌ ಕೊಡಲಿಲ್ಲವೆಂದು ಮುಖ ಊದಿಸಿಕೊಂಡವ, ಜೊತೆಯಲ್ಲಿ ಸಿಗರೇಟು ಸೇದಿದವ, ಪೋಲಿಜೋಕುಗಳ ಸರಮಾಲೆಯನ್ನೇ ಕಟ್ಟಿದವ. ಎಲ್ಲೆಲ್ಲಿ ಯಾರನ್ನು ಯಾವಾಗ ಹುದುಗಿಸಿಟ್ಟಿದ್ದೇವೆಂದು ನೆನಪಿನಲ್ಲಿ ಉಳಿಯದಿದ್ದರೂ ಹುದುಗಿಸಿಡಲೇಬೇಕು. ಇವತ್ತಿಗಲ್ಲ ನಾಳೆಗೆ, ನಾಳೆಗಲ್ಲ ನಾಡಿದ್ದಿಗೆ.

ಮುಂದೆ ಹೃದಯವನ್ನು ಹಂಚಿಕೊಂಡವಳು ಇಲ್ಲೆಲ್ಲೋ ಒಂದು ಗಿಂಡಿಯನ್ನೂ ಹಂಚಿಕೊಳ್ಳುತ್ತಾಳೆ. ಅವಳಿಗೆ ಹೇಳಬೇಕಾದದ್ದು ಅವಳಿಂದ ಕೇಳಬೇಕಾದದ್ದು ಬೆಳದಿಂಗಳ ರಾತ್ರಿಯ ಬಯಲಲ್ಲಿ ಕೈ ಸವರಬೇಕಾದದ್ದು ನಾಳೆಗೆ ನಾಡಿದ್ದಿಗೆ ಇನ್ಯಾವತ್ತಿಗೋ. ರಕ್ತವನ್ನು ಹಂಚಿಕೊಂಡು ನಗುವನ್ನು ತಂದ ಚಿಳ್ಳೆಪಿಳ್ಳೆಗಳೆಲ್ಲಾ ದೊಡ್ಡ ದೊಡ್ಡ ಕನಸಿನ ಗಂಟುಗಳನ್ನೇ ಹುದುಗಿಸಿ ಬಿಡುತ್ತವೆ. ಥೇಟ್‌ ಕ್ಲಾರ್ಕ್ಸ್‌ ನಟ್‌ಕ್ರಾಕರ್‌ನಂತೆಯೇ ನಾವೂ ಮೂವತ್ತಮೂರು ಸಾವಿರ ಬೀಜಗಳನ್ನು ಎರಡು ಸಾವಿರದ ಐನೂರು ಜಾಗಗಳಲ್ಲಿ ಹುದುಗಿಸಿ ಚಳಿಗಾಲದಲ್ಲಿ ಬೆಚ್ಚನೆಯ ಗೂಡಿನ ಹಿತದಲ್ಲಿ ಅನುಭವಿಸುವ ಕನಸು ಕಾಣುತ್ತೇವೆ.

ದೇವರು ಮಹಾ ಮೋಸಗಾರ. ಕ್ಲಾರ್ಕ್ಸ್‌ ನಟ್‌ಕ್ರಾಕರ್‌ಗೆ ಎಲ್ಲೆಲ್ಲಿ ಅಡಗಿಸಿದ್ದೀಯಾ ಎಂದು ಎಕ್ಸೆಲ್‌ ಸ್ಪ್ರೆಡ್‌ಶೀಟಿನಲ್ಲಿ ದುಂಡನೆಯ ಅಕ್ಷರದ ಪ್ರಿಂಟ್‌ಔಟ್‌ ಕೊಟ್ಟಿರುತ್ತಾನೆ. ನಮಗಾದರೋ, ಧೂಳು ಹಿಡಿದು ಜರ್ಜರಿತವಾದ ಫ್ಲಾಪಿಯನ್ನು ಕೊಟ್ಟು ಪ್ರಯತ್ನಿಸಿ ನೋಡು ಎಂದು ಕಿರುಗಣ್ಣಿನಲ್ಲಿ ನಗುತ್ತಾನೆ. ಪ್ರತಿಸಲಕ್ಕೂ ‘ಡಿಸ್ಕ್‌ ಎರರ್‌’ ಬರುತ್ತದೆ ನಮಗೆ. ಇಲ್ಲೇ ಅಲ್ಲವೆ ಈ ಮರದ ಕೆಳಗೇ ಅಲ್ಲವೇ ಆ ಬಾಲ್ಯದ ಸ್ನೇಹಿತನನ್ನು ಅಡಗಿಸಿದ್ದುದು ಎಂದು ಗೆಬರಾಡಿದರೆ ಅಲ್ಲೆಲ್ಲಿದ್ದಾನೆ ಚಡ್ಡಿ ದೋಸ್ತ್‌ ? ಹೃದಯ ಒಮ್ಮೆ ಏನಕ್ಕೋ ಮರೆತು ಬಡಿತ ನಿಲ್ಲಿಸಿ ಕುಸಿದು ಬೀಳುವಂತೆ ಮಾಡಿ ಆಸ್ಪತ್ರೆ ಸೇರಿಸಿ ಸರ್ಜರಿ ಮಾಡಿಸಿಕೊಂಡು ಹಾಸಿಗೆಯಲ್ಲಿ ಮಲಗಿದ್ದವನಿಗೆ ಅಮ್ಮನ ನೆನಪು ತುಂಬಿ ಬಂದು ಅದೇ ನದಿ ಹರವಿನ ಮೆತ್ತನೆಯ ಮಣ್ಣನ್ನು ಗೂರಾಡಿದರೆ ಸಿಕ್ಕಿದ್ದು ಹುದುಗಿಸಿಟ್ಟ ದಿನದಂತೆ ಇರದೆ ಫ್ರಿಡ್ಜಿನಿಂದ ಬಿಸಿಲಿಗೆ ಹೊರಬಿದ್ದ ಐಸ್‌ಕ್ರೀಮಿನಂತೆ ನೀರು ನೀರು! ಎಷ್ಟೇ ಕೂಗಿಕೊಂಡರೂ ಅಪ್ಪ ತನ್ನ ಹುದುಗಿನ ಆಳದಿಂದ ಎದ್ದು ಬರಲಾರನಲ್ಲ ? ಸ್ನೇಹಿತರೋ, ಹುದುಗಿಸಿಟ್ಟಿದ್ದೆಲ್ಲೋ ಹುದುಗಿಸಿಟ್ಟಿದ್ದು ಯಾರನ್ನೋ ಉಳಿದವರ್ಯಾರೋ ಕಳೆದವರ್ಯಾರೋ ...

ಕೆಲವೊಮ್ಮೆ, ಕೆಲವು ಬಗೆಯ ಹಕ್ಕಿಗಳು ಈ ಕ್ಲಾರ್ಕ್ಸ್‌ ನಟ್‌ಕ್ರಾಕರ್‌ನ್ನು ಗೊತ್ತಾಗದಂತೆ ಅನುಸರಿಸಿಕೊಂಡು ಹೋಗಿ ಅದು ಮುಚ್ಚಿಟ್ಟ ಜಾಗವನ್ನು ತಿಳಿದುಕೊಂಡು ಅದಕ್ಕಿಂತಲೂ ಮೊದಲು ಆ ಕಾಳನ್ನು ಅಪಹರಿಸುತ್ತವೆಯಂತೆ.

ಕನಸಿನಲ್ಲೆಲ್ಲೋ ಕಂಡ ಆ ವ್ಯಕ್ತಿಯನ್ನು ಹುಡುಕುತ್ತೇವೆ ನಾವು. ಇಲ್ಲೇ ಇಲ್ಲೇ ಈ ಬಳ್ಳಿಗಳ ಸಂದಿಯ ಕೊಟರಿನಲ್ಲಿಯೇ, ಎಂದೋ ತೇವದಿಂದಿದ್ದು ಇಂದು ಬಾಣಲಿಯಾಳಗಿನ ರವೆಯಂತೆ ಬಿಸಿಯಾದ ಈ ಬಿರಿಸು ಮರಳಿನಲ್ಲಿಯೇ. ಇಲ್ಲೇ ಎಲ್ಲೋ ... ಎಲ್ಲಿ ಈಗೆಲ್ಲಿ ಅವನು?

ಎದ್ದು ಓಡಿ ಹೋದನೆ ?

ಬೇರೆ ಯಾರೋ ಅಪಹರಿಸಿದರೆ ?

ನಾನು ಅಡಗಿಸಿದ್ದೇ ಸುಳ್ಳೋ ?

ಎಲ್ಲಿ ಅವನು?

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more