• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದುಕಿನಲ್ಲೊಂದು ಕ್ಷಣ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಜೋಯಿಸರು ಉರಿಗಣ್ಣಿನಿಂದ ಕೂಗಾಡುತ್ತಿದ್ದಾರೆ. ಇನ್ನು ಒಂದು ನಿಮಿಷಕ್ಕೆ ಮಹೂರ್ತ ಕಳೆದು ಹೋಗುತ್ತದೆ. ಅಷ್ಟರೊಳಗೆ ಧಾರೆಯಾಗಬೇಕು. ಜೋಲು ಮುಖದ ಹುಡುಗ ಬತ್ತಿದ ಕಣ್ಣಿನ ಹುಡುಗಿ ‘ಈಗೇನು ಮಾಡಬೇಕು’, ‘ಈ ಅರಳನ್ನು ಎಲ್ಲಿಗೆ ಹಾಕಬೇಕು’ ಎಂದು ಪೆದ್ದುಪೆದ್ದಾಗಿ ಕೇಳಿದ್ದೇ ಕೇಳುತ್ತಿವೆ. ಹುಡುಗನ ಅಪ್ಪ ಅಮ್ಮ ಅವರೊಳಗೇ ಗುಸಗುಸ ಪಿಸಪಿಸ ಮಾತನಾಡಿಕೊಳ್ಳುತ್ತಲೇ ಕಳೆಯುತ್ತಿದ್ದಾರೆ ಈ ಕಡೆಯ ಪರಿಯೇ ಇಲ್ಲದಂತೆ. ಹುಡುಗಿಯ ತಂದೆಗೆ ಮದುವೆಗೆ ಬಂದ ಲೋಕಲ್‌ ಎಂ.ಎಲ್‌.ಎಯನ್ನು ಆದರಿಸುವುದೇ ಆಗಿದೆ. ಮಹೂರ್ತ ಯಾರಿಗೆ ಬೇಕು? ಮಹೂರ್ತ ತಪ್ಪಿದರೆ ಏನು ಎಂದು ಗೊತ್ತೆ ಇವಕ್ಕೆ? ಕೂತ ಜಾಗದಲ್ಲೇ ಪರಗುಟ್ಟುತ್ತಾರೆ. ಸರೀ ಮಹೂರ್ತದಲ್ಲಿ ಮದುವೆಯಾಗಿಯೇ ಜೋಯಿಸರ ಮೊದಲ ಹೆಂಡತಿ ಹೆರಿಗೆಯಲ್ಲಿ ತೀರಿಕೊಂಡಳು. ಸರೀ ಮಹೂರ್ತದಲ್ಲಿ ಮದುವೆಯಾಗಿಯೇ ಜೋಯಿಸರ ಎರಡನೇ ಹೆಂಡತಿ, ಮದುವೆಯ ಹೊತ್ತಿನಲ್ಲಿ ಇಲ್ಲಿ ಹಸೆಮಣೆಯಲ್ಲಿರುವ ಹುಡುಗಿಯಂತೆಯೇ ಗುಬ್ಬಚ್ಚಿಯಂತಿದ್ದವಳು, ಮದುವೆಯಾಗಿ ಆರೇತಿಂಗಳೊಳಗೆ ಯಾವನನ್ನೋ ಜೊತೆಮಾಡಿಕೊಂಡು ಓಡಿಹೋದಳು. ಮಹೂರ್ತದೊಳಗೇ ಇಷ್ಟೆಲ್ಲಾ ಆಗುವಾಗ ಇನ್ನು ಮಹೂರ್ತ ತಪ್ಪಿಸಿಕೊಂಡು ಬಾಳುತ್ತವಾ ಇವು? ಗೂಬೆಮುಂಡೇವು.

Your one moment please..ಅದೇ ಕ್ಷಣದಲ್ಲಿ, ಹೈಟಿಯಿಂದ ದೋಣಿಯಲ್ಲಿ ಬಂದ ತಂದೆ ಮಗ ದೋಣಿಯಿಂದ ಸಮುದ್ರದ ನೀರಿಗೆ ಹಾರಿಕೊಂಡು ಫ್ಲಾರಿಡಾದ ನೆಲವನ್ನು ತಲುಪಲು ಹೊಂಚುಹಾಕುತ್ತಿದ್ದಾರೆ. ರಾತ್ರಿ ಎರಡೂವರೆ! ದೂರದಲ್ಲಿ ಮಯಾಮಿಯ ಅಂಚಿನಿಂದ ದೊಡ್ಡದೊಡ್ಡ ಸರ್ಚ್‌ಲೈಟುಗಳು ಎತ್ತರವಾದ ಗೋಪುರಗಳ ಮೇಲಿಂದ ಸಮುದ್ರದ ಮೇಲಕ್ಕೆ ಬೆಳಕುಚೆಲ್ಲುತ್ತಿವೆ. ಚೆಲ್ಲಿದ ಬೆಳಕು ಯಾವ ಮೋಸವನ್ನೂ ಮಾಡದಂತೆ ಇವರ ಮೇಲೂ ಅಷ್ಟು ಸುರಿಸುತ್ತದೆ. ಇವತ್ತು ಬೆಳಕು ಬೇಕಿಲ್ಲ ಅವರಿಗೆ. ಕೋಸ್ಟಲ್‌ ಗಾರ್ಡ್‌ಗಳನ್ನು ತಪ್ಪಿಸಿಕೊಂಡು ನೆಲದ ಮೇಲೆ ಹೆಜ್ಜೆ ಇಡಬೇಕು. ಆಮೇಲೆ ಪರವಾಗಿಲ್ಲ. ಡ್ರೈ ಫೂಟ್‌ ವೆಟ್‌ ಫ್ರೂಟ್‌ ಪಾಲಸಿಯಂತೆ (ಅಂದರೆ, ನೀರಿನ ಮೇಲಿದ್ದಾಗ ಹಿಡಿದರೆ ಮರಳಿ ತಮ್ಮ ದೇಶಕ್ಕೆ ಹೋಗಬೇಕು, ನೆಲದ ಮೇಲಿದ್ದಾಗ ಹಿಡಿದರೆ ನಿರಾಶ್ರಿತರಾಗಿ ಅಮೆರಿಕಾದಲ್ಲಿಯೇ ಉಳಿಯಬಹುದು) ಒಮ್ಮೆ ನೆಲ ಮುಟ್ಟಿದವರನ್ನು ಮತ್ತೆ ವಾಪಸ್ಸು ಕಳಿಸುವಂತಿಲ್ಲ. ಅದು ಬರೀ ಕ್ಯೂಬನ್‌ರಿಗೆ ಮಾತ್ರವೋ ಹೈಟಿಯವರಿಗೂ ಅನ್ವಯಿಸುತ್ತದೋ ಇಬ್ಬರಿಗೂ ಗೊತ್ತಿಲ್ಲ. ಸಿಕ್ಕಿಹಾಕಿಕೊಳ್ಳದಿದ್ದರೆ ಓಡಿಹೋಗುವುದು ಸಿಕ್ಕಿಹಾಕಿಕೊಂಡರೆ ಕ್ಯೂಬನ್ನರು ಎಂದು ತೋರಿಸಿಕೊಳ್ಳಲು ಹರುಕು ಮುರುಕು ಸ್ಪಾನಿಷ್‌ ಕಲಿತು ಬಂದಿದ್ದಾರೆ. ಆ ಅವೇಳೆಯ ಸಮುದ್ರದ ನೀರಿನ ಕೊರೆತಕ್ಕೆ ಮಗ ಗಡಗಡ ನಡುಗುತ್ತಿದ್ದಾನೆ. ನನಗೆ ತಡೆಯಲಾಗುತ್ತಲೇ ಇಲ್ಲ ಅಪ್ಪ, ಸತ್ತು ಹೊಗುತ್ತೇನೋ ಏನೋ ಎನ್ನುತ್ತಿದ್ದಾನೆ. ಅಪ್ಪ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದಾನೆ - ಇನ್ನು ಒಂದೇ ಕ್ಷಣ ಹೋಗಿ ಬಿಡೋಣ. ಅಗೋ ಅಲ್ಲೊಬ್ಬ ಗಸ್ತು ತಿರುಗುತ್ತಿದ್ದಾನಲ್ಲ ಸಮುದ್ರ ತನ್ನದೇ ಎನ್ನುವಂತೆ, ಅವನೊಬ್ಬ ತೊಲಗಲಿ. ಒಂದೇ ಕ್ಷಣ.

ಅದೇ ಕ್ಷಣದಲ್ಲಿ, ಇವನು ಮಲಗಿದ್ದಾನೆ ಆಪರೇಷನ್‌ ಥಿಯೇಟರಿನ ಕಣ್ಣು ಕೋರೈಸುವ ಬೆಳಕನ್ನು ಎದುರಿಸುತ್ತಾ. ತಲೆ ಬಾಯಿ ಎಲ್ಲವನ್ನೂ ವಸ್ತ್ರದಲ್ಲಿ ಮುಚ್ಚಿಕೊಂಡ ದಾದಿಯರು ಮತ್ತು ವೈದ್ಯರು ಇವನನ್ನೇ ನೋಡುತ್ತಿದ್ದಾರೆ. ಯಾವ ಕ್ಷಣಕ್ಕಾದರೂ ಬಾಗಿಲು ತಳ್ಳಿಕೊಂಡು ಮುಖ್ಯ ಸರ್ಜನ್‌ ಒಳಗೆ ಬರಬಹುದು. ಬಂದ ತಕ್ಷಣವೇ ಆಪರೇಷನ್‌ ಶುರುವಾಗುತ್ತದೆ. ಸುತ್ತ ನಿಂತವರನ್ನು ಪಿಳಪಿಳನೆ ನೋಡುತ್ತಾನೆ. ದಾದಿಯಾಬ್ಬಳು ಮುಗುಳು ನಕ್ಕು ಹಗುರಾಗಿಸಲು ನೋಡುತ್ತಾಳೆ. ಬಾಯಿಗೆ ಕಟ್ಟಿದ ಬಟ್ಟೆಯಡಿಯಿಂದ ಅವಳ ನಗು ಇವನಿಗೆ ಕಾಣುವುದಿಲ್ಲ. ಇನ್ನೂ ನಲವತ್ತೂ ಆಗಿಲ್ಲ ಅವನಿಗೆ. ಪ್ರೆೃವೇಟ್‌ ಶಾಲೆಯಾಂದರಲ್ಲಿ ಗಣಿತದ ಟೀಚರ್‌. ಸಣ್ಣತಲೆ ನೋವಾಗಿ ಪ್ರಾರಂಭವಾದದ್ದು ತಲೆತಿರುಗಿನಲ್ಲಿ ಮುಂದುವರೆದದ್ದು ಈಗ ಗೆಡ್ಡೆಯಾಗಿ ತಲೆಯನ್ನು ಹೊಕ್ಕಿದೆ. ಬ್ರೈನ್‌ ಟ್ಯೂಮರ್‌! ತೆಗೆಯದಿದ್ದರೆ ಸಾವು ಖಚಿತ. ತೆಗೆಯಬೇಕಾದರೂ ಬಹುಶಃ ... ತೆಗೆದ ಮೇಲೂ ಎಚ್ಚರವಾಗುವ ಹೊತ್ತಿಗೇ ಪಾರ್ಶ್ವವಾಯು ಬಡಿಯುವ ಸಾಧ್ಯತೆ ಶೇಕಡ ಮೂವತ್ತು. ಎಲ್ಲಾ ಗೊತ್ತಿದೆ ಅವನಿಗೆ. ಇನ್ನು ಯಾವ ಕ್ಷಣದಲ್ಲಾದರೂ ಸರ್ಜನ್‌ ಬಾಗಿಲು ದೂಡಿ ಬರುತ್ತಾನೆ. ರಕ್ತಕ್ಕೆ ಅನಸ್ತೇಷಿಯಾವನ್ನು ಚುಚ್ಚುತ್ತಾರೆ. ಅಷ್ಟೆ . ಟಿಬೇಟಿಯನ್ನರಲ್ಲಿ ಒಂದು ಗಾದೆಯಿದೆ - ಕಣ್ಣು ಮುಚ್ಚಿ ಮಲಗಿದ ಮೇಲೆ ನಾಳೆ ಎಚ್ಚರವಾಗಬಹುದು ಅಥವಾ ಮುಂದಿನ ಜನ್ಮದಲ್ಲಿ. ಕಣ್ಣುಮುಚ್ಚುವುದಕ್ಕೆ ಇನ್ನೊಂದೇ ಕ್ಷಣ...

ಅದೇ ಕ್ಷಣದಲ್ಲಿ, ಇವಳೊಬ್ಬಳು ನರಳುತ್ತಿದ್ದಾಳೆ ತನ್ನ ಪೊಟರೆಯಲ್ಲಿ. ಆರು ಮಹಲಿನ ಆ ಇಡೀ ಬಿಲ್ಡಿಂಗ್‌ ಕುಸಿದುಬಿದ್ದಿದೆ. ಎಂದಿನಂತೆಯೇ ಲವಲವಿಕೆಯ ದಿನವಾಗಿತ್ತು ಅವಳು ಆಫೀಸಿಗೆ ಬಂದಾಗ. ಅದೇ ಕೆಲಸ, ಅದೇ ಮ್ಯಾನೇಜರ್‌, ಅದೇ ಬಡ್ತಿ, ಅದೇ ಬೋನಸ್‌, ಎಲ್ಲವೂ ಸುಸೂತ್ರ. ಎಲ್ಲಾ ಸುಸೂತ್ರಗಳಿಗೆ ಬೇಸತ್ತು ಅಂದು ಭೂಮಿತಾಯಿ ಸ್ವಲ್ಪ ಹೊರಳಿದಳು. ಕಿಟಕಿ ಗಡಗಡ ನಡುಗಿತು, ಬಾಗಿಲು ಸುಯ್ಯೆಂದು ಮುಚ್ಚುವ ಬಿಚ್ಚುವ ಆಟ ಆಡಿತು. ಕುರ್ಚಿ ಟೇಬಲ್ಲು ಜೋಡಿಸಿಟ್ಟ ಪುಸ್ತಕಗಳು ಎಲ್ಲವೂ ತತ್ತರಿಸಿದವು. ನೆಲ ಅದುರಿದ ಮೇಲೆ ಅದುರದೇ ಉಳಿದದ್ದು ಯಾವುದು? ‘ಅರ್ಥ್‌ಕ್ವೇಕ್‌! ಬೇಗ ಹೊರಗೆ ಓಡಿ’ ಎಂದು ಯಾರೋ ಕೂಗಿದರು. ಗಾಬರಿಯಿಂದ ಇವಳು ಮೇಲೆದ್ದಳು ತನ್ನ ಕುರ್ಚಿಯಿಂದ. ಅಷ್ಟೇ ನೆನಪು ಅವಳಿಗೆ. ಬಿಲ್ಡಿಂಗೇ ಕುಸಿದುಬೀಳುತ್ತಿದೆ ಎಂದು ಅರಿವಾಗುವ ಮುನ್ನವೇ ಅಂಧಕಾರದಲ್ಲಿದ್ದಳು ಅವಳು. ಇಟ್ಟಿಗೆ ಮಣ್ಣು ಗೋಡೆಯ ರಾಶಿ ರಾಶಿ ದೂಳಿನ ನಡುವೆ ಒಂದು ಪೊಟರೆಯಲ್ಲಿ ಅವಳು ನರಳುತ್ತಿದ್ದಾಳೆ. ಮೇಲಿನ ತೊಲೆಯಾಂದು (beam)ಅಡ್ಡಡ್ಡ ಬಿದ್ದು ಪೂರ್ತಿ ಬೀಳದೆ ನಿಂತು ಈ ಪೊಟರೆಯಾಗಿದೆ. ಇವಳು ಅದು ಹೇಗೋ ಅದರೊಳಗೆ ಸೇರಿಕೊಂಡಿದ್ದಾಳೆ. ದೇಹವನ್ನು ಅಲ್ಲಾಡಿಸಲಾಗದಷ್ಟು ಇಕ್ಕಟ್ಟು ಅಲ್ಲಿ. ಕಣ್ಣಿದ್ದರೂ ಇಲ್ಲದಿದ್ದರೂ ಒಂದೇ, ಅಂತಹ ಅಂಧಕಾರ. ಹಗಲು ರಾತ್ರಿ ಒಂದೂ ತಿಳಿಯದ ಪರಿಸ್ಥಿತಿ. ಒಂದೊಂದು ಸೆಕಂಡೂ ಒಂದೊಂದು ಯುಗದಂತೆ ಕಳೆಯುತ್ತಿದೆ ಅವಳಿಗೆ. ಕೂಗಿ ಕೂಗಿ ಗಂಟಲು ಸತ್ತು ಹೋಗಿದೆ. ಮೇಲೆ ಬಿದ್ದ ರಾಶಿ ರಾಶಿಯನ್ನು ದಾಟಿ ಹೊರಗೆ ಗೋಳಿಡುವ ಮತ್ತು ಮಣ್ಣು ಕೆದಕಿ ಬದುಕುಳಿದವರನ್ನು ಹುಡುಕುತ್ತಿರುವವರನ್ನು ಅವಳ ಕ್ಷೀಣ ಸ್ವರ ಹೇಗೆ ತಲುಪೀತು? ಎಷ್ಟು ದಿನ ಕಳೆಯಿತೋ, ಎಷ್ಟು ರಾತ್ರಿಯೋ ಒಂದೂ ತಿಳಿಯದು. ಕೈ ಚಾಚಿದರೆ ಅಡ್ಡಡ್ಡ ಬಿದ್ದ ತೊಲೆ ಸಿಗುತ್ತದೆ. ಯಾವ ಕ್ಷಣಕ್ಕಾದರೂ ಬೀಳಬಹುದು ಅದು. ಕ್ಷಣಕ್ಷಣಕ್ಕೂ ದೇಹ ನಿತ್ರಾಣವಾಗುತ್ತಿದೆ. ಪ್ರಜ್ಞೆ ಕಣ್ಣಾಮುಚ್ಚಾಲೆಯಾಡುತ್ತಿದೆ. ಮೇಲೆತ್ತುವವರಾದರೂ ಹೇಗೆ ಎತ್ತಿಯಾರು? ಯೋಚಿಸುತ್ತಾಳೆ. ಮರ ಮಣ್ಣು ಕಬ್ಬಿಣಗಳ ಮೇಲಿನ ರಾಶಿರಾಶಿಯನ್ನು ಒಂದು ಕಡೆಯಿಂದ ತೆರವು ಮಾಡುತ್ತಾ ಎಕ್ಸ್‌ಕವೇಟರಿನ ಉದ್ದನೆಯ ಕೈ ಇವಳ ಮತ್ತು ತೊಲೆಯ ನಡುವಿನಿಂದ ತೂರಿ ಅಡ್ಡಡ್ಡವಾದ ತೊಲೆಯನ್ನು ಮೇಲೆತ್ತಿ ಹಿಡಿದರೆ ಆಗ ಮಾತ್ರ.... ಅದೊಂದೇ ಸಾಧ್ಯತೆ. ಆದರೆ ಹಾಗೆಲ್ಲಾ ಮಾಡಲು ಹೊರಗಿನವರಿಗೆ ನಾನಿಲ್ಲಿದ್ದೇನೆಂದು ಗೊತ್ತಿರಬೇಕು. ಅದಿಲ್ಲದೆ ಏನು ಸರಿಸಿದರೂ ಸಾವು ಖಚಿತ. ಗೊತ್ತಿದೆಯೇ ಅವರಿಗೆ? ಕಣ್ಣು ಮುಚ್ಚುತ್ತಾಳೆ. ಕಣ್ಣೀರು ಕೂಡ ಸುರಿಯಲೊಲ್ಲದು, ದೇಹ ಅಷ್ಟು ಒಣಗಟ್ಟಿದೆ. ದೂರದಲ್ಲಿ ಎಕ್ಸ್‌ಕವೇಟರ್‌ನ ಶಬ್ಧ ಕೇಳುತ್ತಿದೆ! ಯಾವ ಕ್ಷಣದಲ್ಲಾದರೂ ಅವರು............

ಅದೇ ಕ್ಷಣದಲ್ಲಿ, ಇವನೊಬ್ಬನ ದೇಹ ಹೆಚ್ಚು ಕಡಿಮೆ ಗಾಳಿಯಲ್ಲಿ ತೇಲುತ್ತಿದೆ. ಜನ ಎಲ್ಲಾ ದಿಕ್ಕುಗಳಿಂದಲೂ ಒತ್ತುತ್ತಿದ್ದಾರೆ. ಮೈಯಿ ಬೆವರಿಳಿದು ತತ್ತರಿಸಿ ಹೋಗುತ್ತಿದೆ. ಮೊದಲಿಂದ ಲೈನಿನಲ್ಲಿದ್ದವರೋ, ಈಗ ತೂರಿಕೊಂಡವರೋ ತಿಳಿಯದೆ ಅವಾಚ್ಯವಾಗಿ ಬಯ್ಯುತ್ತಾ ಪೋಲಿಸ್‌ ಪೇದೆಗಳು ಸಿಕ್ಕಸಿಕ್ಕಲ್ಲಿಗೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಹಾಗೆ ಬೀಸಿದ ಒಂದು ಹೊಡೆತ ಇವನ ತೊಡೆಗೂ ಬಿದ್ದು ಬಾಸುಂಡೆ ಎದ್ದಿದೆ. ಅದು ಲೆಕ್ಕಕ್ಕಿಲ್ಲ ಇವನಿಗೆ. ಇವತ್ತೇ ಟಿಕೇಟುಕೊಂಡು ಮೊದಲಿನ ಷೋನಲ್ಲಿಯೇ ‘ಮೆಗಾಸ್ಟಾರ್‌’ ಚಿರಂಜೀವಿಯನ್ನು ನೋಡಬೇಕು. ಕೈಯಲ್ಲಿ ಮೊದಲೇ ಅಜ್ಜಿಗುಜ್ಜಿಯಾದ ನೋಟುಗಳು ಬೆವರಿನ ಸ್ನಾನವನ್ನೂ ಮಾಡಿ ಪವಿತ್ರವಾಗಿವೆ. ಯಾವ ಕ್ಷಣದಲ್ಲಾದರೂ ಇಲಿ ಬಿಲದಂತಹ ಆ ಸಣ್ಣನೆಯ ಕಿಟಕಿ ‘ಟಪ್‌’ ಎಂದು ತೆಗೆದುಕೊಂಡು ‘ಚೇಂಜ್‌ ಹಿಡ್ಕೊಂಡು ಬರೋಕೆ ಆಗಲ್ವ ನಿನಗೆ’ ಎಂದು ಬೈಯ್ಯುವ ಅಮೃತ ಸ್ವರ ಕೇಳಬಹುದು. ಜನರ ನುಗ್ಗಾಟದ ಒತ್ತಡಕ್ಕೆ ಒಮ್ಮೆ ತಲೆತಿರುಗಿದಂತಾಗುತ್ತದೆ. ಮರುಕ್ಷಣವೇ ಸಾವರಿಸಿಕೊಳ್ಳುತ್ತಾನೆ. ಕಿವಿಯನ್ನು ಧ್ಯಾನದಲ್ಲಿಟ್ಟು ಕಿಟಕಿಯಾಚೆಯ ಕ್ರಿಯೆಗಳನ್ನು ಗ್ರಹಿಸಲು ನೋಡುತ್ತಾನೆ. ಈಗ ಬಂದಿರಬಹುದು ಅವರು. ತಮ್ಮ ಖುರ್ಚಿಯನ್ನು ಸರಿಮಾಡಿಕೊಳ್ಳುತ್ತಿರಬಹುದು. ಟಿಕೇಟ್‌ ಬುಕ್ಕುಗಳನ್ನು ಎಣಿಸುತ್ತಿರಬಹುದು. ಇನ್ನು ಯಾವ ಕ್ಷಣಕ್ಕಾದರೂ ಕಿಟಕಿ ತೆರೆದು.....

***

ಒಂದು ಸೆಕಂಡಿಗೆ ಚಂದ್ರನ ಮುಖದಿಂದ ಪ್ರತಿಫಲಿತವಾದ ಬೆಳಕು ಭೂಮಿಯೆಡೆಗೆ ಮುಕ್ಕಾಲು ದೂರ ಕ್ರಮಿಸುತ್ತದೆ. ಸೂರ್ಯ ಭಗವಾನ್‌ ತನ್ನ ಸಂಸಾರ ಸಮೇತ ಒಂದು ಸೆಕಂಡಿನಲ್ಲಿ 216 ಕಿಲೋಮೀಟರುಗಳಷ್ಟು ದೂರ ಚಲಿಸಿರುತ್ತಾನೆ. ಒಂದು ಸೆಕಂಡಿಗೆ ಭೂಮಿತಾಯಿ ತನ್ನ ಕಕ್ಷೆಯಲ್ಲಿ 29.8 ಕಿಲೋಮೀಟರುಗಳನ್ನು ಕ್ರಮಿಸುತ್ತಾಳೆ. ಈ ತರಹದ 141,912,000,000,000,000 ಸೆಕಂಡುಗಳನ್ನು ವಸುಂಧರೆ ಈಗಾಗಲೇ ಕಳೆದಿದ್ದಾಳೆ. ಒಬ್ಬ ವ್ಯಕ್ತಿ ನೂರು ವರ್ಷ ಬದುಕುತ್ತಾನೆ ಎಂದು ಅಂದಾಜು ಮಾಡಿಕೊಂಡರೂ ಅವನು/ಅವಳು ಹಂಚಿಕೊಳ್ಳುವುದು ಭೂಮಿತಾಯಿಯ 0.000000002 ಶೇಕಡ ಆಯಸ್ಸನ್ನು ಮಾತ್ರಾ. ಆಕಾಶದಲ್ಲಿ ಕ್ಷಣಾರ್ಧದಲ್ಲಿ ಫಳಕ್ಕನೆ ಹೊಳೆದು ಮಾಯವಾಗುವ ಮಿಂಚೂ ಕೂಡ ನಮ್ಮ ಆಯಸ್ಸಿನಲ್ಲಿ ಇದಕ್ಕಿಂತಾ ಹೆಚ್ಚು ಬಾಳುತ್ತದೆ.

ಆದರೂ, ಆ ಮಿಂಚಿನಂತೆ ಮಾಯವಾಗುವ ‘ಈಗಿತ್ತು, ಈಗಿಲ್ಲ’ದ ಬದುಕಿನಲ್ಲೂ, ಆಸ್ಪತ್ರೆಯಲ್ಲಿ ಮಲಗಿದ್ದಾಗ, ಎಲ್ಲೋ ಸಿಕ್ಕಿ ಸಹಾಯಕ್ಕಾಗಿ ಆರ್ತನಾದಿಸುವಾಗ, ಆಸ್ಟ್ರೋನಾಟ್‌ ಆಗಿ ಕುಳಿತು ಕ್ಷಣ ಗಣನೆಯನ್ನು (countdown) ಕಾಯುವಾಗ, ಉಸಿರು ಬಿಗಿಹಿಡಿದು ಪ್ರಶ್ನೆಪತ್ರಿಕೆಯನ್ನು ಎದುರುನೋಡುವಾಗ, ಟೆಸ್ಟ್‌ಟ್ಯೂಬಿನಲ್ಲಿ ಎರಡು ದ್ರವಗಳನ್ನು ಬೆರೆಸಿ ರಸಾಯನ ಕ್ರಿಯೆಯನ್ನು ನಿರೀಕ್ಷಿಸುವಾಗ .... ಆ ಕ್ಷಣ ಎಷ್ಟು ಮಹತ್ವದ್ದಾಗಿರುತ್ತದೆ!

ಕೆಲವು ಬಾರಿ ಕ್ಷಣಗಳು ಯುಗಕ್ಕಿಂತಾ ಹಿರಿದಾಗಿ ಬೆಳೆಯುತ್ತವೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more