• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತಮಾನದಾಚೆಯ ಸ್ನೇಹಿತನಿಗೊಂದು ಪತ್ರ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ನನ್ನ ಪ್ರೀತಿಯ ಮುತ್ತಜ್ಜ ,

ನಿಮ್ಮನ್ನು ನಾನು ಕಾಣಲಿಲ್ಲ. ನನ್ನ ಹುಟ್ಟಿಗೂ ನಿಮ್ಮ ಹುಟ್ಟಿಗೂ ಕನಿಷ್ಠ ನೂರು ವರ್ಷಗಳ ಅಂತರವಿರಬೇಕು. ನನ್ನ ಅಪ್ಪನ ಕಡೆಯಿಂದ ನಾನು ನನ್ನ ಅಜ್ಜನನ್ನೇ, ಅಂದರೆ ನಿಮ್ಮ ಮಗನನ್ನೇ ಕಾಣಲಿಲ್ಲ. ಅವರು ಈ ಲೋಕವನ್ನು ಬಿಟ್ಟಾಗ ನನಗೆ ಬಹುಶಃ ಮೂರೋ ನಾಲ್ಕೋ ವರ್ಷ. ಬೋರ್ಡಿನ ಮೇಲೆ ಬರೆದು ಅಳಿಸಿದ ಗೆರೆಯಂತೆ ಅಜ್ಜನ ಕುರಿತಾದ ನೆನಪೊಂದು ನನ್ನ ಸ್ಮೃತಿಪಟಲದಲ್ಲಿ ಈಗಲೂ ಜೀವಂತವಾಗಿದೆ, ಕ್ಷೀಣವಾದರೂ. Easy chairನಲ್ಲಿ ಕುಳಿತು ನನ್ನ ಕಡೆಗೇ ನೋಡುತ್ತಿರುವ ಅಜ್ಜ! ಯಾವುದಾದರೂ ದೊಡ್ಡ ಘಟನೆಯನ್ನು ಹೇಳಿ ಇದು ನೆನಪಿದೆ ನನಗೆ ಎಂದರೆ ಜನ ಸಮಜಾಯಿಷಿಯಾರು. ಅದೆಲ್ಲಾ ಬಿಟ್ಟು, ಬಿಳೀ ಕಾಟನ್‌ ಬನಿಯನ್‌ ಮತ್ತು ಕಚ್ಚೆಪಂಚೆ ತೊಟ್ಟ, ನುಣ್ಣಗಿನ ನೆತ್ತಿಯಲ್ಲಿ ಬಿಳಿಯ ಕೂದಲ ಜುಟ್ಟಿನ ಅಜ್ಜ ಈಜಿಚೇರಿನಲ್ಲಿ ಹಿತವಾಗಿ ಮಧ್ಯಾಹ್ನವನ್ನು ಅನುಭವಿಸುತ್ತಾ ಅಲ್ಲಿಯೇ ಸನಿಹದಲ್ಲಿ ಚಾಪೆಯ ಮೇಲೆ ಮಲಗಿದ್ದ ನನ್ನನ್ನು ನೋಡುತ್ತಿದ್ದರು ಎಂದರೆ ಯಾರು ತಾನೇ ಹೌದು ಇದು ನಡೆದದ್ದು ಎಂದು ಸಾಕ್ಷಿಯಾದಾರು?

ಈ ರೀತಿಯಾಗಿ, ಮರಳಿನ ಮೇಲೆ ಮೂಡಿದ ಹಕ್ಕಿಯ ಹೆಜ್ಜೆಗಳಂತಹ ನೆನಪುಗಳ ಅಜ್ಜನಿಗೆ ಪತ್ರ ಬರೆಯುವುದ ಬಿಟ್ಟು ಯಾವ ನೆನಪನ್ನೂ ನನಗಾಗಿ ಬಿಟ್ಟುಹೋಗದ ನಿಮಗೇಕೆ ಬರೆಯುತ್ತಿದ್ದೇನೆ? ಗೊತ್ತಿಲ್ಲ. ಈ ಕೆಲವು ಸಾಲುಗಳಲ್ಲೇ ನನ್ನ ಜನಾಂಗದ ಮನೋಧರ್ಮದ ಒಂದು ಸಣ್ಣ ಎಳೆ ಸಿಕ್ಕಂತಾಗಿರಬೇಕು ನಿಮಗೆ! ನಮಗೆಲ್ಲದಕ್ಕೂ ಕಾರಣಬೇಕು! ಬಿದ್ದ ಕನಸಿಗೆ ಕಾರಣ ಬೇಕು, ಉಳಿದ ನೆನಪುಗಳಿಗೆ ಕಾರಣಬೇಕು, ಪತ್ರ ಬರೆಯಲು ‘ಬಲವಾದ’ ಕಾರಣಬೇಕು, ಜೀವನ ತಾನು ಮಲಗಿದ್ದೆಡೆಯಿಂದ ಒಂದಿಂಚು ಹೊರಳಲೂ ಲಾಜಿಕ್‌ಗಳ ಸರಮಾಲೆಗಳನ್ನೇ ಪೋಣಿಸಬೇಕು. ಹಾಗಾಗಿ, ಸುಮ್ಮನೆ ಒಂದು ಪತ್ರ ಬರೆಯುವುದೂ, ಅದೂ ಕಾಣದ ಎಂದೋ ಮರೆಯಾದ ಮನುಷ್ಯನಿಗೆ, ತಲೆ ಸರಿ ಇರುವವರ ಸಮಾಚಾರವಾಗುವುದಿಲ್ಲ.

ಆದರೂ ನಿಮಗೆ ಬರೆಯುತ್ತಿದ್ದೇನೆ. ‘ಏನು’, ‘ಏಕೆ’ಗಳನ್ನೆಲ್ಲಾ ಮೀರಿ. ಅಂಚೆ ಹಿಮ್ಮುಖವಾಗಿ ಹರಿದು ನೂರು ವರ್ಷಗಳಷ್ಟು ಹಿಂದೆ ಬಾಳಿದ ನಿಮಗೆ ಮುಟ್ಟುತ್ತದೆಯೇ ನನ್ನ ಈ ಸ್ವಗತ, ಮುಟ್ಟುತ್ತದೆಯೇ ನನ್ನ ರಗಳೆಗಳು, ಮುಟ್ಟುತ್ತದೆಯೇ ನನ್ನ ದಾರಿಕ್ರಮಣೆಯ ಒಂದೇ ತರಹದ ಶಬ್ದ ?

ನೋಡಿ, ಮತ್ತೆ ಮತ್ತೆ ಪ್ರಶ್ನೆಗಳು!

ನಿಮಗೇನನ್ನು ಹೇಳಬೇಕೋ ಗೊತ್ತಾಗುತ್ತಿಲ್ಲ ನನಗೆ. ಹೋಗಲಿ, ನೀವೇ ಹೇಳಿ, ನಮ್ಮ ಕಾಲದ ಏನನ್ನು ತಿಳಿಯುವ ಆಸೆ ನಿಮಗೆ? ನಿಮ್ಮ ಕಾಲವನ್ನು ನೋಡಿದವನು ನಾನಲ್ಲ. ಆದರೂ ಅಲ್ಲಲ್ಲಿ ಅಷ್ಟಷ್ಟು ಓದಿಕೊಂಡಿರುವುದನ್ನು ಸೇರಿಸಿ ಹೇಳಬಲ್ಲೆ , ನಿಮ್ಮದ್ದಕ್ಕಿಂತಾ ‘ನಮ್ಮ ಕಾಲ’ ಬಹಳ ಬದಲಾಗಿದೆ. ಹಾಕುವ ಬಟ್ಟೆಗಳಲ್ಲಿ , ಬೀರುವ ನೋಟಗಳಲ್ಲಿ , ತಿನ್ನುವ ಆಹಾರದಲ್ಲಿ , ಬೆರೆಯುವ ಸ್ನೇಹಿತರಲ್ಲಿ , ಓದುವ ಪುಸ್ತಕಗಳಲ್ಲಿ , ಕೇಳುವ ಹಾಡುಗಳಲ್ಲಿ ಎಲ್ಲಾ ಅಂದರೆ ಎಲ್ಲದರಲ್ಲಿ ಬದಲಾಗಿದ್ದೇವೆ. ನಿಮ್ಮ ಕಾಲದ ಹಾಗೆ ಮನೆಯಲ್ಲೇ ಹುಟ್ಟಿ ಮನೆಯಲ್ಲೇ ಸಾಯುವುದಿಲ್ಲ ನಾವು. ಆಸ್ಪತ್ರೆಯಲ್ಲಿ ಹುಟ್ಟಿ ಆಸ್ಪತ್ರೆಯಲ್ಲಿ ಸಾಯುತ್ತೇವೆ. ಅಷ್ಟು ದೂರದೂರದ್ದು ಯಾಕೆ? ಅಪ್ಪ ಅಮ್ಮ ಅಣ್ಣ ತಮ್ಮ ಚಿಕ್ಕಪ್ಪ ದೊಡ್ಡಪ್ಪ ಭಾವ ಬೀಗ ಷಡ್ಕ ಎಲ್ಲರೂ ಬದಲಾಗಿದ್ದಾರೆ. ಎಲ್ಲಾ ಸಂಬಂಧಗಳೂ ಬದಲಾಗಿವೆ. ಎಷ್ಟು ಬದಲಾಗಿದೆ ಅಂದರೆ.... ನೀವೇ ಬಂದು ನೋಡಿದರೆ ಒಳ್ಳೆಯದು, ಯಾಕೆಂದರೆ ಅಷ್ಟೊಂದನ್ನು ನಾನು ಬರೆಯಲಾರೆ. ನೀವು ಬಂದರೆ ಹೇಗಿರುತ್ತದೆ? ಮಾರ್ಗನ್‌ ಫ್ರೀಮನ್‌ನ Shawshank Redemption ಎಂಬ ಸಿನೆಮಾದಲ್ಲಿ ಜೀವಾವಧಿಯ ಶಿಕ್ಷೆಗೆ ಗುರಿಯಾಗಿ ಐವತ್ತೋ ಅರವತ್ತೋ ವರ್ಷಗಳನ್ನು ಜೈಲಿನ ನಾಲ್ಕುಗೋಡೆಗಳ ನಡುವೆಯೇ ಕಳೆದ ಒಬ್ಬ ಮುದುಕನನ್ನು ಬಿಡುಗಡೆ ಮಾಡಲಾಗುತ್ತದೆ. ಅವನು ಹೊರಗೆ ಬಂದು ರಸ್ತೆಯನ್ನು ನೋಡಿದೊಡನೆಯೇ ನಿಬ್ಬೆರಗಾಗುತ್ತಾನೆ. ‘ನಾನು ಚಿಕ್ಕವನಿದ್ದಾಗ ಕೆಲವು ಕಾರುಗಳಿದ್ದವು. ಈಗ ಭೂಮಿಯ ತುಂಬಾ ಬರೀ ಕಾರುಗಳದ್ದೇ ರಾಜ್ಯಭಾರ’ ಎಂದು ನಿಟ್ಟುಸಿರು ಬಿಡುತ್ತಾನೆ. ಹಾಗೆಯೇ, ನೀವೂ ಈಗ ನಾನಿರುವ ಜಾಗಕ್ಕೆ ಬಂದು ನಿಂತರೆ ಖಂಡಿತಾ ಆಶ್ಚರ್ಯದಿಂದ ಕೇಳುತ್ತೀರಿ - ‘ಏನಿದು?? ಭೂಮಿಯ ಮೇಲಿನ ಲೋಹವನ್ನೆಲ್ಲಾ ಕಾಯಿಸಿ ಕಾರು ಸ್ಕೂಟರು ಮಾಡಿಕೊಂಡರೋ ಹೇಗೆ?’. ಇಲ್ಲಾ , ಮುಗಿಸಿಲ್ಲ , ಇನ್ನೂ ಸ್ವಲ್ಪ ಲೋಹಗಳು ಉಳಿದಿವೆ, ಮಿಸೈಲು ರಾಕೇಟು ಬಾಂಬುಗಳಿಗೆ.

ನಿಮ್ಮ ಕಾಲದಲ್ಲಿ ವೇಗವನ್ನು ಹೆಚ್ಚಿಸಿಕೊಳ್ಳಲಾರಂಭಿಸಿದ ವಿಜ್ಞಾನ ನಮ್ಮ ಕಾಲದಲ್ಲಿ ರಾಕೇಟಿಗಿಂತಲೂ ವೇಗವಾಗಿ ಓಡುತ್ತಿದೆ. ಬರೀ ತಾನೇ ಓಡುತ್ತಿಲ್ಲ, ಜೊತೆಗೆ ನಮ್ಮನ್ನೂ ವಲಸೆ ಹೊರಟ ಕಾಡೆಮ್ಮೆಗಳಂತೆ (Bison) ಒಂದೇ ಉಸಿರಿನಲ್ಲಿ ಓಡಿಸುತ್ತಿದೆ. ನಾವು ಓಡುತ್ತಲೇ ಇದ್ದೇವೆ. ಓಡಲೇಬೇಕು ಎಲ್ಲರೂ. ನೀವೀಗ ಇದ್ದರೂ ಕೂಡ. ಓಡದವರಿಗೆ ಹಿಮಾಲಯವಷ್ಟೇ ಗತಿ. ಓಡಿ ಓಡಿ ಆ ಓಟದಲ್ಲಿಯೇ ಸುಖವನ್ನು ಕಾಣಲು ನೋಡುತ್ತಿದ್ದೇವೆ. ಇನ್ನೇನು ಮಾಡಬೇಕು ನಾವು? ಬೆಳಗ್ಗೆ ಎಂಟರಿಂದ ರಾತ್ರಿ ಎಂಟರತನಕ ದುಡಿಯುವ ಬದುಕಿನಲ್ಲಿ ‘ಸುಖ’ಕ್ಕೋಸ್ಕರ ಎಲ್ಲಿ ಸಮಯವನ್ನು ತೆಗೆದಿಡೋಣ? ಕಾಡೆಮ್ಮೆಗಳಷ್ಟು ಅದೃಷ್ಟವಂತರಲ್ಲ ನಾವು. ಅದು ಬರೀ ದೇಹ ಮತ್ತು ಪ್ರಾಣಗಳನ್ನು ಗಟ್ಟಿಹಿಡಿದು ಓಡುತ್ತದೆ. ನಾವಿಲ್ಲಿ ಓಡುತ್ತಿದ್ದೇವೆ ನಮ್ಮ ರ್ಯಾಂಗ್ಲರ್‌ ಜೀನ್ಸ್‌ ಪ್ಯಾಂಟಿನೊಡನೆ, ನಮ್ಮ ಸೋನಿ ವೈಡ್‌ ಸ್ಕಿೃೕನ್‌ ಟಿವಿಯಾಡನೆ, ಕಂಪ್ಯೂಟರ್‌ನಂತೆಯೇ ಕೆಲಸ ಮಾಡಿ ಫೋಟೋ ಕೂಡ ತೆಗೆಯಬಲ್ಲ ನಮ್ಮ ಸೆಲ್‌ಫೋನ್‌ಗಳೊಡನೆ, ನೀರಿನ ಮೇಲೆ ತೇಲಿದಷ್ಟು ಹಿತಕರವಾಗಿ ರಸ್ತೆಯ ಮೇಲೆ ಓಡಬಲ್ಲ ಮರ್ಸಿಡಿಸ್‌ ಕಾರುಗಳೊಡನೆ, ನೂರು ಹೊಟ್ಟೆಗಳನ್ನು ತುಂಬಿಸುವಷ್ಟನ್ನು ಒಬ್ಬನಿಗೇ ನೀಡಬಲ್ಲ ಉದ್ಯೋಗಗಳೊಡನೆ, ಉಳಿದೂ ಉಳಿಯದಂತಿರುವ ನಂಬಿದರೂ ನಂಬದಂತಿರುವ - ಪದೇಪದೇ ಬೆನ್ನುತಟ್ಟಿ ‘ಗಂಡುಸಾದರೆ ನಿನ್ನ ಬಲಿಕೊಡುವೆ ಏನು’ ಎಂದು ಕೇಳುತ್ತಿರುವ ಧರ್ಮಗಳೊಡನೆ, ಬಲೂನಿನಂತೆ ಉಬ್ಬುತ್ತಾ ಉಬ್ಬುತ್ತಾ ಯಾವ ಕ್ಷಣಕ್ಕಾದರೂ ‘ಡಮ್‌’ ಎಂದು ಒಡೆಯಲು ಹಾತೊರೆಯುತ್ತಿರುವ ನಗರಗಳೊಡನೆ... ಇಷ್ಟೊಂದು ಮೂಟೆಗಳನ್ನು ಬೆನ್ನಮೇಲೆ ಹೊತ್ತು ಅಗಸರ ಕತ್ತೆಗಿಂತಲೂ ನಿಸ್ಸಾರ ಮುಖದಲ್ಲಿ, ರಕ್ತ ಸ್ರವಿಸುತ್ತಾ ಮುಂದೆಮುಂದೆ(?) ಮಂದೆಯ ಜೊತೆ ತೆವಳಲು ನೋಡುವ ನಿಮ್ಮ ಈ ಮರಿಮಗನ ಕಲ್ಪನೆ ಇತ್ತೇ ನಿಮಗೆ?

ನೀವು ನೆಮ್ಮದಿಯ ಕಡಲಿನಲ್ಲಿ ತೇಲುತ್ತಿದ್ದೀರಿ, ನಾನು ಮಾತ್ರ ಕಷ್ಟಪಡುತ್ತಿದ್ದೇನೆ ಅನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದೇನೆಯೇ ನಾನು?? ಕ್ಷಮಿಸಿ, ಖಂಡಿತಾ ಇಲ್ಲ. ನಿಮ್ಮ ಕಷ್ಟಗಳನ್ನೂ ಕೇಳಿದ್ದೇನೆ, ನಿಮ್ಮ ಸುಖಗಳನ್ನೂ ಊಹಿಸಿಕೊಂಡಿದ್ದೇನೆ. ನಮ್ಮ ನಿಮ್ಮ ಕಷ್ಟ ಸುಖಗಳು ಬೇರೆಬೇರೆ ಅಷ್ಟೆ. ನನ್ನ ಕೆಲವು ಕಷ್ಟಗಳು ಹೇಗೆ ನಿಮಗೆ ಅರ್ಥವೇ ಆಗುವುದಿಲ್ಲವೋ ಹಾಗೆಯೇ ನಿಮ್ಮ ಕೆಲವು ಕಷ್ಟಗಳನ್ನು ಎಷ್ಟು ಸಾರಿ ಯಾವ ಕೋನಗಳಲ್ಲಿ ಗ್ರಹಿಸಲು ಹೋದರೂ ನಿಮ್ಮ ಸ್ಥಾನದಲ್ಲಿ ನಿಂತು ಯೋಚಿಸುವ ಶಕ್ತಿ ಮತ್ತು ತಿಳುವಳಿಕೆಗಳೇ ನನಗೆ ಬರುವುದಿಲ್ಲ. ಹುಟ್ಟಿದ ಹದಿನಾಲ್ಕು ಮಕ್ಕಳಲ್ಲಿ ಆರು ಸತ್ತರೆ ಅದು ಹೇಗೆ ತಡೆದುಕೊಳ್ಳುತ್ತಿದ್ದಿರಿ ನೀವು? ಭತ್ತದ ಗದ್ದೆಯ ದಿಬ್ಬದ ಮೇಲೋ ಕಣದಲ್ಲಿ ಒಡ್ಡಿದ ಹುಲ್ಲುಗುಪ್ಪೆಗೆ ಆತುಕೊಂಡೋ ಹಿತ್ತಲ ತೋಟದ ಸಂಪಿಗೆ ಮರಕ್ಕೋ ಹಲಸಿನ ಮರಕ್ಕೋ ಒರಗಿ ಅಳುತ್ತಿದ್ದಿರಾ? ಪ್ಲೇಗು ಬಡಿದು ಊರಿಗೆ ಊರೇ ಸ್ಮಶಾಣವಾಗುತ್ತಿದ್ದಾಗ ನಿಮಗಿಂತಲೂ ಎತ್ತರಕ್ಕೆ ಬೆಳೆದುನಿಂತ ಮಕ್ಕಳು ಮೈಮೇಲೆಲ್ಲಾ ಗೆಡ್ಡೆ ಬರಿಸಿಕೊಂಡು ಪ್ಲೇಗಿನ ಜ್ವರಕ್ಕೆ ಬೆಂದು ಸಾಯುವ ಮೊದಲು, ಊರಿನ ಹೊರಗಿನ ಬಯಲಿನ ಟೆಂಟುಗಳಲ್ಲಿ ಚಳಿಗೆ ನಿಧಾನವಾಗಿ ಹೆಪ್ಪುಗಟ್ಟುತ್ತಾ ನಿಮ್ಮ ಮುಖನೋಡಿ ಏನೇನೋ ತೊದಲುತ್ತಿದ್ದರೆ ಎಷ್ಟು ನರಳಿರಬಹುದು ನೀವು? ನಿಮ್ಮ ಕಣ್ಣೀರನ್ನು ಒರೆಸಿ ನಿಮ್ಮ ಶಲ್ಯ ಎಷ್ಟು ತೋಯ್ದಿರಬಹುದು.

ಅವೆಲ್ಲವನ್ನೂ ಈಜಿದಿರಿ ನೀವು! ಎದುರು ಬಂದ ಅಲೆಗಳಿಂದ ದಬ್ಬಿಸಿಕೊಂಡಿರಿ, ಹಿಂದಿನಿಂದ ಬಂದ ಅಲೆಗಳಿಂದ ನೂಕಿಸಿಕೊಂಡಿರಿ. ಈಜುವುದಷ್ಟೇ ನನ್ನ ಕೆಲಸ ಎಂದು ಈಜಿದಿರಿ. ನಾನೂ ಈಜುತ್ತೇನೆ. ನಾನೂ ದಡ ಮುಟ್ಟುವವನೇ, ಮೂಟೆಗಳನ್ನು ಹೊತ್ತಾದರೂ ಸರಿ ಮೂಟೆಗಳನ್ನು ಎಸೆದರೂ ಸರಿ. ಜೀವನ ಎತ್ತಿಹಾಕಿ ಓಡಿಸುತ್ತಿರುವ ಈ ರಸ್ತೆಗೆ ನಾನು ಹೊಸಬನಲ್ಲ , ನೀವೂ ಹೊಸಬರಾಗಿರಲಿಲ್ಲ. ತಲೆ ಎತ್ತಿ ನೋಡಿದರೆ ಮಿನುಗುತ್ತದಲ್ಲಾ ಕೋಟಿಕೋಟಿ ಚುಕ್ಕೆಗಳು, ಅವುಗಳನ್ನು ಕಂಡಾಗ ನಿಮಗೆ ಏನನ್ನಿಸುತ್ತಿತ್ತೋ ಕಾಣೆ. ನನಗೆ ಮಾತ್ರ, ಈಜಿ ದಡಸೇರಿದ ಒಂದೊಂದು ಜೀವದ್ದೂ ಪ್ರತಿನಿಧಿಯಂತಿರುವ ಜ್ಯೋತಿಗಳವು ಎಂದನಿಸುತ್ತದೆ. ಒಂದು ದಿನ ನಾನೂ ಕೂಡ ಅಲ್ಲೆಲ್ಲೋ ಚುಕ್ಕಿಯಾಂದನ್ನು ಮೂಡಿಸುತ್ತೇನೆ ಬಲು ನಿಶ್ಯಬ್ದವಾಗಿ.

ನೀವು ಯಾವ ನೆನಪನ್ನೂ ಬಿಟ್ಟುಹೋಗಲಿಲ್ಲ ಎಂದುಬಿಟ್ಟೆ ಸಲೀಸಾಗಿ, ಈ ಪತ್ರದ ಮೊದಲು. ನಿಜವಾಗಿ ಯೋಚಿಸಿದರೆ ನೆನಪುಗಳನ್ನು ಯಾರೂ ಬಿಡುವುದಿಲ್ಲ. ನೆನಪುಗಳನ್ನು ನಾವೇ ಪಡೆಯಬೇಕು, ಕದಿಯಬೇಕು, ದೋಚಬೇಕು. ಹಾಗೆ ದೋಚಿದ್ದನ್ನು ಜೋಪಾನವಾಗಿಟ್ಟುಕೊಳ್ಳಬೇಕು ನಮ್ಮ ಪ್ರಯಾಣದ ಕಡೆಯತನಕ. Easy chairನಲ್ಲಿ ಕುಳಿತ ಅಜ್ಜನ ನೆನಪನ್ನು ಕದ್ದಂತೆಯೇ ಬೆರಳುಚೀಪುತ್ತಾ ಮಲಗುವ ಹಸುಗೂಸಿನ ನೆನಪನ್ನೂ ಕದಿಯುತ್ತೇನೆ, ಕದ್ದು ನನ್ನ ಅಲ್ಮೆರಾದಲ್ಲಿ ಭದ್ರವಾಗಿಡುತ್ತೇನೆ. ಕಣ್ಮುಚ್ಚಿ ನರನರಗಳಲ್ಲಿ ಹರಿಯುವ ರಕ್ತದ ಭಾಷೆಯನ್ನು ಕೇಳಿದರೆ ನಿಮ್ಮ ನೆನಪೂ ಕಣ್ಣಿಗೆ ಕಟ್ಟುತ್ತದೆ ಎಂದೋ ಯಾರೋ ಬರೆದ ಕಾಗದ ಇಂದು ಸಿಕ್ಕಂತೆ. ನನ್ನ ಕಿವಿ ಇಷ್ಟಕ್ಕೇ ನಿಲ್ಲುತ್ತದೆ, ಸ್ವಲ್ಪ ಮಂದ. ಇನ್ನೂ ಚುರುಕಾದವರಿಗೆ ಮುತ್ತಜ್ಜನ ಮುತ್ತಜ್ಜನ ಹಿಂದಿನ ಹತ್ತು ತಲೆಮಾರಿನ ಮಾತುಗಳು ಕೇಳಬಹುದು. ಹರಿವ ರಕ್ತಕ್ಕಿಂತಾ ಜೀವಂತವಾದದ್ದು ಮತ್ತೇನಿದೆ?

ನಮ್ಮ ಕಾಲದ, ನಮ್ಮ ಸಂವೇದನೆಗಳನ್ನು ಅರ್ಥೈಸುತ್ತಿರುವ ಮತ್ತು ನಮ್ಮ ಮಾತಿನ, ವರ್ತನೆಗಳ ಅರ್ಥವನ್ನು ಹುಡುಕುತ್ತಿರುವ ಕವಿ ಜಿ. ಎಸ್‌. ಶಿವರುದ್ರಪ್ಪನವರ ‘ನನ್ನ ಮರಿಮಗನ ಮಗನಿಗೆ’ ಎನ್ನುವ ಕವಿತೆಯಲ್ಲಿ ನಮ್ಮನಿಮ್ಮಂತಹ ಒಬ್ಬ ‘ಮೂಟೆ ಹೊತ್ತ ಪಯಣಿಗ’ ತನ್ನ ಮರಿಮಗನ ಮಗನಿಗೆ ‘ಯಾವ ನೆನಪನ್ನು ಬಿಟ್ಟುಹೋಗುತ್ತೇನೆ’ ಎಂದು ಚಿಂತಿಸುತ್ತಾನೆ :

ಇರುಳ ಕಣಿವೆಯ ತುದಿಗೆ ನೀನೊಬ್ಬನೇ ನಿಂತು ಮೂಕವಾಗಿ

ಆಳಪಾತಾಳದಲಿ ಹರಿವ ಜಲಮರ್ಮರಕೆ ಕಿವಿಗೊಟ್ಟು ಬಾಗಿ

ಬರಿದೆ ನಿಡುಸುಯ್ಯುವೆಯಾ, ನಾನರಿಯೆ ನಿನ್ನ ಪರಿಯ

ಯಾವ ನೆನಪನು ನಿನಗೆ ಬಿಟ್ಟುಹೋಗಲಿ ಎಂದು ತುಡಿಯುತಿದೆ

ನನ್ನ ಹೃದಯ.

ಹಸಿರುಗದ್ದೆಯ ತುದಿಯಲ್ಲಿ ನಿಂತು ಆ ತುದಿಯವರೆಗೂ ದೃಷ್ಟಿ ಹಾಯಿಸುತ್ತಾ ಅಥವಾ ಯಗಚಿಗೆ ಸೇರುವ ಊರ ಹೊಳೆಯಲ್ಲಿ ಕುತ್ತಿಗೆಯ ತನಕ ಬರುವ ಹಾಯುನೀರಿನಲ್ಲಿ ಸಣ್ಣ ಅಲೆಗಳನ್ನೇ ನೋಡುತ್ತಾ ನೀವೂ ಯೋಚಿಸಿರಬಹುದು ಎಂದೋ ಒಂದು ದಿನ, ಯಾವ ನೆನಪನ್ನು ಬಿಟ್ಟು ಹೋಗಲಿ ಎಂದು. ನೀವು ಬಿಟ್ಟುಹೋದದ್ದೆಲ್ಲಾ ಅವೇ ಬಯಲುಗಳಲ್ಲಿ ಅವೇ ಸೂರ್ಯಾಸ್ತಗಳಲ್ಲಿ ಯಕ್ಷನ ಸಂದೇಶಗಳನ್ನು ಹೊತ್ತ ಅವೇ ಮೇಘಗಳಲ್ಲಿ ಈಗಲೂ ಹಾಗೆಯೇ ಇರುವ ಅದೇ ಹೊಳೆಯಲ್ಲಿ ನನಗೆ ಸಿಕ್ಕಿದೆ.

ಬರೀ ದೇಹಕ್ಕಷ್ಟೇ ಹೊರತು ಆತ್ಮಕ್ಕೆ ಹುಟ್ಟಿಲ್ಲ ಸಾವಿಲ್ಲ ಕಾಲವಿಲ್ಲ ಎನ್ನುವ ತತ್ವಶಾಸ್ತ್ರದ ಸರಕನ್ನು ಈ ಕ್ಷಣದ ನಮ್ಮ ಅನುಕೂಲಕ್ಕಾಗಿ ನಂಬುವಿರಾದರೆ ನಾನು ನೀವು ಒಂದೇ ಕಾಲಬಿಂದುವಿಗೆ ಸೇರಿದವರಾಗುತ್ತೇವೆ. ಅಷ್ಟೆಲ್ಲಾ ಯಾಕೆ? ನಮ್ಮ ನಿಮ್ಮ ಪೂರ್ವಜರು ಕಳೆದರೆನ್ನಲಾದ ಈ ಭೂಮಿಯ ನಾಲ್ಕೂವರೆ ಬಿಲಿಯನ್‌ ವರ್ಷಗಳನ್ನು ಒಂದು ಗ್ರಾಫಿನಲ್ಲಿ ಎಳೆದರೆ ಕೇವಲ ನೂರುವರ್ಷಗಳ ನಡುವಿನ ನಾವುನೀವು ಯಾವ ವ್ಯತ್ಯಾಸವೂ ಇಲ್ಲದೆ ಒಂದೇ ಬಿಂದುವಿನಲ್ಲಿ ಸಂಧಿಸುವವರಾಗುತ್ತೇವೆ. ಜೊತೆಜೊತೆಗೆ ನಿಂತ ಸ್ನೇಹಿತರಂತೆ ತೀರಾ ಅಕ್ಕಪಕ್ಕದಲ್ಲೇ ನಿಲ್ಲುತ್ತೇವೆ. ಕಚ್ಚೆಪಂಚೆ ಉಟ್ಟ ನೀವು ಜೀನ್ಸ್‌ ಪ್ಯಾಂಟ್‌ ಹಾಕಿದ ನಾನು! ಜುಟ್ಟು ಬಿಟ್ಟ ನೀವು ಕ್ರಾಪು ಬಿಟ್ಟ ನಾನು! ಎಂತಹಾ ಒಳ್ಳೆಯ ಕಾಂಬಿನೇಷನ್‌! ಹಾಗೆಯೇ ನಿಮ್ಮ ಬಲಕ್ಕೆ ತಿರುಗಿ ನೋಡಿ, ನಿಮಗೆ ಅಂಟಿಕೊಂಡಂತೆಯೇ ನಿಮ್ಮ ಮುತ್ತಜ್ಜ ನಿಂತಿದ್ದಾರೆ ಅವರಿಗೆ ಅಂಟಿಕೊಂಡಂತೆ ಅವರ ಮುತ್ತಜ್ಜ... ಚೀನಾ ಗೋಡೆ ನಾಚಿನಿಲ್ಲುತ್ತದೆ ನಮ್ಮ ಮುಂದೆ.

ನಮ್ಮ ಮಧ್ಯದ ಕಾಲವ್ಯತ್ಯಯ ಯಾರಿಗೆ ಬೇಕು? ಕವಿ ಕೆ.ಎಸ್‌.ನರಸಿಂಹಸ್ವಾಮಿ ಕೇಳಿಲ್ಲವೇ ‘ಗಡಿಯಾರದಂಕಿ ಯಾರಿಗೆ ಪಾವನ?’

ಇಂತಿ,

ನಿಮ್ಮ ಮರಿಮಗ ಮತ್ತು ಶತಮಾನದಾಚೆಯ ಸ್ನೇಹಿತ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more