• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಯಾಮಿ ಸೋದರಿಯರು ಹಾಗೂ ನಾಡಿಗರ ನಟರಾಜ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಮೊನ್ನೆ ಮೊನ್ನೆ ಸಿಂಗಪುರದ ಆಸ್ಪತ್ರೆಯಲ್ಲಿ ಸತ್ತರಲ್ಲ , ಅದೇ ಹುಡುಗಿಯರ ವಿಷಯ. ನನಗೆ ಗೊತ್ತು , ಅದು ಎಲ್ಲರೂ ಪತ್ರಿಕೆಗಳಲ್ಲಿ , ಸಿಎನ್‌ಎನ್‌/ಬಿಬಿಸಿ ನ್ಯೂಸ್‌ ಚಾನಲ್‌ಗಳಲ್ಲಿ , ಇಂಟರ್ನೆಟ್‌ನ ಪೋರ್ಟಲ್‌ಗಳಲ್ಲಿ ನೋಡಿದ್ದೇ, ಓದಿದ್ದೇ ಎಂದು. ಆ ಹುಡುಗಿಯರ ಆಶಯಕ್ಕೂ ನಮ್ಮ ಸುಮತೀಂದ್ರ ನಾಡಿಗರ ‘ನಟರಾಜ ಕಂಡ ಕಾಮನಬಿಲ್ಲು’ ಎಂಬ ಪದ್ಯಕ್ಕೂ ಬಹಳ ಸಾಮ್ಯತೆಗಳು ಕಂಡದ್ದರಿಂದ ಇರಾನಿನ ಆ ಹುಡುಗಿಯರ ಬಗ್ಗೆ ಸ್ವಲ್ಪ ವಿಷದವಾಗಿ ಬರೆಯುತ್ತಿದ್ದೇನೆ.

Ladan and Laleh Bijani, Iranian twinsತಲೆ ಭಾಗದಲ್ಲಿ ಅಂಟಿಕೊಂಡಿದ್ದ ಲಾಡನ್‌ ಮತ್ತು ಲೇಲಾ ತಮ್ಮ ಇಪ್ಪತ್ತೊಂಬತ್ತು ವರ್ಷಗಳ ಕಾಲ ಜೊತೆಯಾಗಿ ಬಾಳಿದವರು. ಜೊತೆಯಾಗಿ ಅಂದರೇನು-ಬಾತ್‌ರೂಮಿನಿಂದ ಹಿಡಿದು ಬಾಲ್‌ರೂಮಿನವರೆಗೆ ಜೊತೆ ಜೊತೆ. ದೇವರು ತಂದಿಟ್ಟ ಜೊತೆ. ಇಬ್ಬರಿಗೂ ಮನಸ್ಸಿನಾಳದಲ್ಲಿ ಆಸೆಯಾಂದು, ಬೇರೆ ಬೇರೆ ಬದುಕಬೇಕೆಂಬುದು. ಕನ್ನಡಿ ನೋಡಿಕೊಂಡರೆ ಪಕ್ಕದವಳ ಮುಖ ಕಾಣದೆ ಬರೀ ನನ್ನ ಮುಖ ಮಾತ್ರ ಕಾಣಬೇಕು ಎನ್ನುವ ಚಿಗುರೆಲೆಯಂತಹ ಸ್ವಾರ್ಥ. ಅವಳು ಓದಿದ್ದನ್ನೇ ನಾನೂ ಓದುವ ಬದಲು ಬೇರೆ ಕಾಲೇಜಿನಲ್ಲಿ ಕುಳಿತು, ಬೇರೆ ಪುಸ್ತಕಗಳನ್ನು ಯಾವ ಬಲವಂತವೂ ಇಲ್ಲದೆ ಸ್ವಆಯ್ಕೆಯಿಂದ ಓದುವ ಕನಸು. ತಿರುಗಿ ನಿಂತ ಮತ್ತೊಬ್ಬಳ ಮುಖವನ್ನು ಎದುರು ಬದುರು ನಿಂತು ನೋಡಿ ಹರ್ಷ ಪಟ್ಟುಕೊಳ್ಳಬಹುದೇನೋ ಎನ್ನುವ ಕಾಮನಬಿಲ್ಲಿನಂತಹ ಕನಸು. ‘ಬೇಡ ಮಕ್ಕಳೇ’ ಎಂದು ಅಪ್ಪ ಬೇಡಿಕೊಂಡ, ಅಮ್ಮ ತಬ್ಬಿಕೊಂಡಳು. ‘ಅತಿ ಅಪಾಯಕಾರಿಯಾದದ್ದು’ ಎಂದು ಜರ್ಮನ್‌ ಡಾಕ್ಟರರು ಹೆದರಿಸಿದರು. ಇವುಗಳು ಮಾತ್ರ ಕಾಮನಬಿಲ್ಲನ್ನು ಹಿಡಿಯಲೇ ಬೇಕೆಂದು ಹಠ ಮಾಡಿದವು. ಬೇಕಿದ್ದರೆ ಒಂದೋ ಅಥವಾ ಎರಡೂ ಜೀವ ಹೋದರೂ ಸರಿ!

ಐವತ್ತಮೂರು ಘಂಟೆಗಳ ಶಸ್ತ್ರಚಿಕಿತ್ಸೆ ಕೊನೆಗೂ ಬೇರ್ಪಡಿಸಿದ್ದು ಅವರ ಹೆಣಗಳನ್ನು. ನನ್ನ ಮಾತು ಕೇಳಲಿಲ್ಲ ನೀವು ಎಂದು ಅವರಪ್ಪ ಗೋಳಿಟ್ಟ.

ನಮ್ಮ ನಾಡಿಗರ ಕವಿತೆ ಹೀಗೆ ಓಡುತ್ತದೆ:

ಮೂವತ್ತು ದಾಟಿರುವ ಕಲೆಗಾರ ನಟರಾಜ

ಒಂದು ಕಾಮನಬಿಲ್ಲ ಕಂಡು ಓಡಿದ್ದ, ಮನೆಯ ತುದಿ ಏರಿದ್ದ,

ಅಲ್ಲಿಂದ ಜಾರಿದ್ದ,

ನೆಲದಲ್ಲಿ ಗುದ್ದುಬೀಳುವ ಹಾಗೆ ಕೆಳಗೆ ಬಿದ್ದಿದ್ದ,

ಎಳೆಯ ಸ್ನೇಹಿತನೊಬ್ಬ ಕಾಮನಬಿಲ್ಲ ಕಾಣುವುದಕ್ಕೆ

ಮನೆ ಏರಿ ತುದಿಯಿಂದ ಜಾರಿ, ಬಿದ್ದು ಕೈ ಮುರಿದಿದ್ದ ಕೇಳಿ ನೊಂದರು ಜೀವ

ಕಾಮನ ಬಿಲ್ಲ ಹಿಡಿವ ಸಾಹಸ ಕಂಡು ಹಾಡು ಎನ್ನುತ್ತೆ.

ಇಂತಹ ಕಾಮನಬಿಲ್ಲುಗಳು ಯಾರ ಜೀವನದಲ್ಲಿಲ್ಲ ಹೇಳಿ? ಕಾಮನಬಿಲ್ಲ ಕಂಡಾಗ ತಲೆ ಎತ್ತಿ ಕಣ್ಣರಳಿಸಿ ಚಿಕ್ಕಮಕ್ಕಳಂತೆ ನೋಡದಿದ್ದರೆ ಮಣ್ಣಿನ ಗುಪ್ಪೆಯಾದ ಗುಡ್ಡಕ್ಕೂ, ಮಾಂಸದ ಮುದ್ದೆಯಾದ ನಮಗೂ ಏನಿರುತ್ತಿತ್ತು ವ್ಯತ್ಯಾಸ ? ಕವಿಯು ಇದಕ್ಕೆ ಹೊರತಾಗಿ ನಿಲ್ಲುವವನೇನು?

Sumatheendra Nadigನಾನು ಕೂಡ ಆಗೀಗ ಕಾಮನಬಿಲ್ಲ ಹಿಡಿಯಲು ಹೊರಟು

ಕೆಳಗೆ ಬಿದ್ದವನು. ನನ್ನ ಬೇರು ಸಮೇತ ಕಿತ್ತು ಕೆತ್ತೆಸೆದರೂ

ತಿರುತಿರುಗಿ ಮಣ್ಣಲ್ಲಿ ಬೇರು ಬಿಟ್ಟವನು. ಇಂದಿಗೂ ಇನ್ನೊಂದು

ಮಳೆಬಿಲ್ಲು ಮೂಡಿದರೆ, ನಿಗುರಿ ಕೈ ಚಾಚಿ,

ಕಡಿದಾದ ಬೆಟ್ಟವನ್ನು ಏರಿ, ಅಲ್ಲಿಂದ ಬೀಳುವುದು

ಸಾಧ್ಯವಿದ್ದರು ಕೂಡ ತೆಕ್ಕೆ ಬೀಳುವುದಕ್ಕೆ ಸಿದ್ಧನಾದವನು.

ಆದ್ದರಿಂದಲೇ ಇಂದು ನಟರಾಜ ಕಂಡಂಥ

ಇಂದ್ರಛಾಪವ ಕುರಿತು ಹಾಡಹೊರಟೆ.

ನನ್ನ ಸ್ನೇಹಿತನೊಬ್ಬ ಭಾರತದಲ್ಲೂ, ಅಮೆರಿಕಾದಲ್ಲೂ ವಿಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವನು- ತಂತ್ರಜ್ಞಾನ, ಹೆಚ್ಚಿನ ಸಂಬಳ, ಸ್ಟಾಕ್‌ ಆಪ್ಷನ್ಸ್‌ ಅಂತ ಸಾವಿರಕ್ಕೆ ಮರುಳಾಗಿ ಒಂದು ಸಣ್ಣ ಡಾಟ್‌.ಕಾಮ್‌ ಕಂಪನಿಗೆ ಹನುಮಂತ ಲಂಕೆಗೆ ಹಾರಿದ ಮಾದರಿಯಲ್ಲೇ ಹಾರಿಕೊಂಡ. ಆಗಿನ್ನೂ ಪ್ರಾರಂಭವಾಗುತ್ತಿದ್ದ ಆ ಕಂಪನಿ ದಿನಕ್ಕೆ ಹದಿನಾಲ್ಕು ಗಂಟೆಗಳಂತೆ ಇವನಿಂದ ಕೆಲಸ ಮಾಡಿಸಿ, ಶನಿವಾರ, ಭಾನುವಾರವೂ ಬಿಡದಂತೆ ಕಂಪ್ಯೂಟರ್‌ನ ಮುಂದೆ ಜಪಮಾಡಿಸಿ, ಈಗ ಕೊನೆಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಿ ಬಾಗಿಲು ಹಾಕಿಕೊಂಡಿದೆ. ಏನೇನೋ ಮಾಡಲು ಹೋಗಿ ಏನೋ ಮಾಡಿಕೊಂಡೆನಲ್ಲಾ ಎಂದು ಪರಿತಪಿಸುವ ಅವನನ್ನು ಸಮಾಧಾನ ಮಾಡುವುದು ಎಂತು ? ಕನಸುಗಳನ್ನು ತಂದಿತ್ತ ಕಾಮನಬಿಲ್ಲು ಈಗ ನಗೆಪಾಟಲಾಗುವಂತೆ ಮಾಡಿದೆಯಲ್ಲಾ ಎನ್ನುವ ಕೊರಗು. ಕನಸ್ಸಿದ್ದರೇ ಕೊರಗು, ಹಾಗೆಂದು ಕನಸುಗಳನ್ನು ಬಿಡಲಾಗುವುದೇನು? ಕನಸುಗಳನ್ನು ಬಿಟ್ಟ ಬುದ್ಧನಂತೆ ಅರೆಜೀವಂತ ಕಣ್ಣುಗಳಿಂದ ಎಷ್ಟು ಹೊತ್ತು ಈ ಜಗತ್ತನ್ನು ನೋಡಲು ಸಾಧ್ಯ? ಸೂರ್ಯನಿಂದ ಬೆಳಕು ಬರುವುದೇ, ಮೋಡಗಳಿಂದ ತುಂತುರು ಉದುರುವುದೇ, ಕೊನೆಯಲ್ಲಿ ತಲೆ ಎತ್ತಿ ನೋಡಿದಾಗ ಕವಲೊಡೆದ ಎರಡು ಕೊಂಬೆಗಳ ನಡುವೆ ವಿಶಾಲ ಬಾನಂಚು ಹೊಳೆಯುವುದೇ ಈ ಕಾಮನಬಿಲ್ಲಿಗಾಗಿ, ಅದನ್ನು ಮೂಡಿಸುವುದಕ್ಕಾಗಿ, ಬಣ್ಣ ಬಣ್ಣಗಳನ್ನು ಬಗ್ಗಿಸಿ, ‘ಅಯ್ಯೋ ಈಗಷ್ಟೇ ನೋಡಿದ್ದೆ’ ಎಂಬ ಹುಡುಕಾಟಕ್ಕಾಗಿ. ಅಂತಹ ಕಾಮನಬಿಲ್ಲನ್ನು ನೋಡದಿರುವುದು ಎಂತು?

ಹೆಸರಾಂತ ಜ್ಯೂಯಿಷ್‌ ಕಥೆಗಾರ ಶೋಲಂ ಅಲೈಕಮ್‌ನ ‘ದ ಪಾಸ್‌ಓವರ್‌ ಗೆಸ್ಟ್‌’ ಕಥೆಯಲ್ಲೂ ಹೀಗೇ ಆಗುತ್ತದೆ. ಟರ್ಕಿಯಲ್ಲಿ ಬೇಸತ್ತಿದ್ದ ಒಂದು ಸಾಂಪ್ರದಾಯಿಕ ಯಹೂದಿ ಕುಟುಂಬಕ್ಕೆ ಜರೂಸಲೇಮಿನವನೆಂದು ಹೇಳಿಕೊಂಡ ಒಬ್ಬ ಗುರುಗಳೋಪಾದಿಯ ವ್ಯಕ್ತಿಯ ಆಗಮನವಾಗುತ್ತದೆ. ಯಹೂದಿಗಳ ಸಡಗರದ ಪಾಸ್‌ಓವರ್‌ ಹಬ್ಬದ ಸಮಯ ಬೇರೆ. ಮನೆಗೆ ಮನೆಯೇ ಅವನಿಂದ ಸಂಭ್ರಮಗೊಳ್ಳುತ್ತದೆ. ಯಹೂದಿಗಳ ಕೇಂದ್ರವಾದ ಜರೂಸಲೇಮಿನಲ್ಲಿ ನಡೆಯುತ್ತಿರುವುದು ಏನು, ಅಲ್ಲಿಯ ದೇವಾಲಯಗಳಲ್ಲಿ ನಡೆಯುವ ಪೂಜೆಯ ವೈಭವ, ಜನರ ಧಾರ್ಮಿಕ ಮಟ್ಟ, ಹೀಗೆ ಇಡೀ ಸಂಸಾರಕ್ಕೆ ಸಾವಿರ ವಿಷಯಗಳು ಅವನಿಂದ ತಿಳಿಯುತ್ತವೆ. ಊಟಕ್ಕೆ ಮೊದಲು ಅವನು ಉಚ್ಛರಿಸುವ ಮಂತ್ರ ಎಲ್ಲೋ ಪುಸ್ತಕದಲ್ಲಿ ಓದಿದ್ದಂತಹ ಅವನ ಸಾಂಪ್ರದಾಯಿಕ ನಡೆನುಡಿ ಎಲ್ಲವೂ ಗೌರವ ಬರಿಸುವಂತಹವೇ. ಆ ಮನೆಯ ಚಿಕ್ಕಹುಡುಗನಿಗೆ ಏನಾದರೂ ಮಾಡಿ ಇವನ ಜೊತೆಗೇ ಜರೂಸಲೇಮಿಗೆ ಹೋಗಿಬಿಡಬೇಕು ಅನ್ನುವ ಹಂಬಲ. ಅದಕ್ಕೆ ರಾತ್ರಿಯೆಲ್ಲಾ ಅದೇ ಕನಸು. ಅವನ ಸೇವೆ ಮಾಡಿದ್ದೇ ಮಾಡಿದ್ದು. ಇಷ್ಟು ಸಂಭಾವಿತ ಕರೆದುಕೊಂಡು ಹೋಗುವುದಿಲ್ಲ ಎನ್ನುತ್ತಾನೆಯೇ?

ಆದರೆ ಒಂದು ಬೆಳಗು ಭೂಮಿಯನ್ನು ತೊಳೆದು ಹಕ್ಕಿ ಪಿಕ್ಕಿಗಳನ್ನೆಲ್ಲಾ ಹಾರಿಸಿ ಈ ಮುಗ್ಧ ಮಗುವನ್ನು ಎಬ್ಬಿಸಿದ ಮೇಲೆ ಕಂಡ ದೃಶ್ಯವೇ ಬೇರೆ. ಆ ಅತಿಥಿ ಹೊರಟು ಹೋಗಿದ್ದಾನೆ! ಬರೀ ಹಾಗೆಯೇ ಹೋಗಿಲ್ಲ , ತಂದೆ ತಾಯಿಯರನ್ನು ಕಟ್ಟಿಹಾಕಿ ಮನೆಯನ್ನು ಲೂಟಿಮಾಡಿಕೊಂಡು ಹೋಗಿದ್ದಾನೆ! ಮಗುವಿಗೆ ಈಗ ಕೊರಗು. ಕಂಡದ್ದನ್ನು ನಂಬಬೇಕೋ ಅಥವಾ ಕನಸಿನಲ್ಲಿ ರಂಗೀಲಿಯಾಡಿದ ಕಾಮನಬಿಲ್ಲನ್ನೋ?

ಸಾಹಸಿಗಳು ಅಪಾಯಗಳ ಲೆಕ್ಕಿಸುವುದಿಲ್ಲ.

ಅಪಾಯ ಊಹಿಗಳು ಶಿಖರಾಗ್ರವನ್ನು ಮೆಟ್ಟಿನಿಲ್ಲುವುದಿಲ್ಲ.

ಸೂರ್ಯನನ್ನು ಹಿಡಿವುದಕೆ ಹನುಮಂತ ಹೋದಂತೆ

ಏಳು ಬಣ್ಣದ ಬಿಲ್ಲು ಕೈಗೆ ಸಿಕ್ಕೀತೆಂದು

ನಟರಾಜ ಮನೆಮೇಲೆ ಹತ್ತಿದ್ದನೆ?

ತುಂಬ ಹತ್ತಿರದಿಂದ ಬಣ್ಣಗಳ ಅಭ್ಯಾಸ

ಸಾಧ್ಯವಾಗುವುದೆಂದು ಕನಸಿದ್ದನೆ?

ಎಷ್ಟು ಜನರಿದ್ದಾರೆ ಕಾಮನಬಿಲ್ಲ ಹುಚ್ಚಿನವರು?

ಅಂತರಂಗದೊಳಿರುವ ತುದಿಗಾಲ ಮಗುವನ್ನು

ಕಾಮನಬಿಲ್ಲ ನೋಡುವುದಕ್ಕೆ ತಡೆಯದೇ ಇದ್ದವರು

ಎಷ್ಟು ಜನರಿದ್ದಾರೆ ಕಾಮನಬಿಲ್ಲ ಹುಚ್ಚಿನವರು?

ಒಂದು ಕವಿತೆ ಈ ರೀತಿಯಾಗಿ ಬಯಲಲ್ಲಿ ನಿಲ್ಲಿಸಿ ಇಂದ್ರಛಾಪವನ್ನು ತೋರಿಸಿದ ಮೇಲೆ ಹೇಳಲು ಇನ್ನೇನಿದೆ?

ಬಾಳಿನಲ್ಲೊಮ್ಮೊಮ್ಮೆ ಅಂಥ ಕಾಮನಬಿಲ್ಲು

ಪ್ರತಿಯಾಂದು ಜೀವಕ್ಕು ಮೂಡುತ್ತದೆ.

ತುದಿಗಾಲ ಮಗುವನ್ನು ತಡೆಯದಿದ್ದರೆ ನೀವು,

ಅಂಥ ಕಾಮನಬಿಲ್ಲು ಕಾಣುತ್ತದೆ.

ಸೀತೆಗೆ ಮಾಯಾಮೃಗವು ಕಂಡದ್ದು, ದ್ರೌಪದಿಗೆ ಸೌಗಂಧಿಕಾ ಪುಷ್ಪವು ನಕ್ಕಿದ್ದು , ಲೇಲಾ ಮತ್ತು ಲಾಡನ್‌ರಿಗೆ ಬೇರೆಯಾದಂತೆ ಕನಸು ಮೂಡಿದ್ದು ಎಲ್ಲವೂ ಇದೇ ಕಾಮನಬಿಲ್ಲಿನ ಬೇರೆ ಬೇರೆ ದೃಶ್ಯಗಳು.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more