ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೋಸದ ಮಸಾಲೆಯಂತಹ ಒಂದು ಭಾರತೋತ್ಸವ

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ನೆನ್ನೆಯ ತನಕ ಮಕ್ಕಳಾಟದ ಬಟ್ಟಾಬಯಲಾಗಿದ್ದ ಇಲ್ಲಿ ಇವತ್ತು ಎಷ್ಟೊಂದು ಜನರು ! ನಮ್ಮ ಊರ ಜಾತ್ರೆಯಂತೆಯೇ ಎಷ್ಟೊಂದು ಕಲರವ. ಬಯಲಲ್ಲಿ ಬೀಡು ಬಿಟ್ಟ ದೊಂಬರಾಟದವರಂತೆಯೇ ಎಷ್ಟೊಂದು ಬೂತುಗಳು ಸುತ್ತಾ. ದ್ವಾರದ ಎರಡೂ ಕಡೆ ಧ್ವಜಗಳು. ಒಂದು ಮಧ್ಯ ಚಕ್ರವಿರುವ ತ್ರಿವರ್ಣವಾದರೆ ಮತ್ತೊಂದು Star Spangled Banner. ಮೊನ್ನೆ ಮೊನ್ನೆ ಭಾರತ ಮತ್ತು ಅಮೆರಿಕಾದಲ್ಲಿ ಒಟ್ಟಿಗೇ ತೆರೆಕಂಡ ಹೃತಿಕ್‌ ರೋಷನ್‌ನ ಸಿನಿಮಾದ ಕಿವಿ ಕಿತ್ತು ಹೋಗುವಂತಹ ಹಾಡು. ನೀವು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಬದುಕುವವರಾದರೆ ಅಥವಾ, ಸೆಮಿನಾರ್‌ಗೋ ಕಾನ್ಫರೆನ್ಸ್‌ಗೋ ನ್ಯೂಯಾರ್ಕ್‌ನಿಂದ ಇಲ್ಲಿಗೆ ಬಂದಿದ್ದರೆ, ಮಗಳ ಬಾಣಂತನಕ್ಕೆ ಬಂದು ಪಾಶ್ಚಾತ್ಯ ಶೈಲಿಯ ಬಾಣಂತನಕ್ಕೆ ಸೋಜಿಗ ಪಟ್ಟು ಒಳಗೊಳಗೇ ಕೊರಗೂ ಇಟ್ಟು ಸುಮ್ಮನೇ ಬೇಸರವಾಗಿ ತಿರುಗಾಡಿ ಬರೋಣವೆಂದು ಬಂದಿದ್ದರೆ, ಸರಿಯಾದ ಜಾಗಕ್ಕೇ ಬಂದಿದ್ದೀರಿ. ಇದು ಫ್ರೀಮಾಂಟ್‌ನಲ್ಲಿ ನಡೆಯುವ ಭಾರತೋತ್ಸವ.

ಚಿಕ್ಕಮಗಳೂರ ಬುಧವಾರದ ಸಂತೆಯಲ್ಲೋ, ಬೆಂಗಳೂರಿನ ಡಿವಿಜಿ ರಸ್ತೆಯಲ್ಲೋ, ಪುಣೆಯ ಲಕ್ಷ್ಮೀ ರೋಡಿನಲ್ಲೋ, ಬಾಂಬೆಯ ವಿ.ಟಿ.ಯಲ್ಲೋ ಕಾಣುವಂತೆ ಐದು ಅಡಿ ದಾಟಿ ಆರು ಅಡಿ ಮುಟ್ಟದ, ಬೊಜ್ಜು ಇದೆಯೋ ಇಲ್ಲವೋ ಎಂದು ಹೇಳಲು ಕಷ್ಟವಾಗುವಂತ, ಕೈಯಲ್ಲಿ ಒಂದು-ಸ್ಟ್ರೋಲರ್‌ನಲ್ಲಿ ಇನ್ನೊಂದು ಕುಯ್ಯೋ ಮಿರ್ರೋ ಎನ್ನುವವನನ್ನು ಸಮಾಧಾನ ಮಾಡಿಕೊಂಡು ಎಳೆದುಕೊಂಡು ಹೋಗುವಂತ, ಪ್ರತಿಯಾಬ್ಬನೂ ಬೇರೆಬೇರೆ ಭಾಷೆಗಳಲ್ಲಿ ಮಾತನಾಡುವಂತ, ಬಿಳಿಯ ಬ್ರೆಡ್ಡಿನಂತೆಯೂ ಇಲ್ಲದೆ ಸೀದುಹೋದ ದೋಸೆಯಂತೆಯೂ ಕರಕಲಾಗದಂತ, ಅವೇ ಕಂದು ಬಣ್ಣದ ಮುಖಗಳು. ಎಷ್ಟೊಂದು ಜನ. ಸಮುದ್ರದ ಅಲೆಗಳಂತೆ ಬರುತ್ತಲೇ ಇದ್ದಾರೆ. ಇಷ್ಟೊಂದು ಭಾರತೀಯರಿದ್ದಾರೆಯೇ ಇಲ್ಲಿ ?

ಅದೇನದು ಮೆರವಣಿಗೆ ? ಅದೋ, ಪೆರೇಡ್‌ ಶುರುವಾದಂತಿದೆ. ಅದ್ಯಾರದು ತೆರೆದ ಜೀಪಿನಲ್ಲಿ ನಿಂತು ಜನರಿಗೆ ಕೈ ಬೀಸುತ್ತಿರುವುದು? ಧರ್ಮೇಂದ್ರ! ಭಾರತವನ್ನು ಪ್ರತಿನಿಧಿಸಲು ಬಂದ ಬಾಲಿವುಡ್‌ನ ಮಹಾಪ್ರಭು. ಅವನ ಸುತ್ತಲೂ ಪೋಲೀಸರ ಸರ್ಪಗಾವಲು. ಇಲ್ಲಿಯ ಹಾಲಿವುಡ್‌ ನಟ/ನಟಿಯರಿಗಿಲ್ಲದ ಸರ್ಪಗಾವಲು ಇವನಿಗ್ಯಾಕೆ? ಅದಕ್ಕೊಂದು ಇತಿಹಾಸವಿದೆ. ಒಂದು ವರ್ಷದ ಇತಿಹಾಸ.

ಹೋದವರ್ಷವೂ ಇದೇ ತರಹ ಆಗಸ್ಟ್‌ ಹದಿನೈದರಂದು ನೆನಪಾದ ಭಾರತದ ಸಮಸ್ತವನ್ನು ಆ ವೀಕೆಂಡ್‌ನಲ್ಲಿ ಸೆಲೆಬ್ರೇಟ್‌ ಮಾಡುತ್ತಿರುವಾಗ, ಜಮಾನಾದ ದಶಾವತಾರಗಳ ನಂತರ ವಿಷ್ಣುವಿನ ಇತ್ತೀಚಿನ ಅವತಾರವಾದ ಅಮಿತಾಭ್‌ ಬಚ್ಚನ್‌ ಬಿಳೀಸೂಟನ್ನು ತೊಟ್ಟು ಬಿಳೀಗಡ್ಡವನ್ನು ನೇವರಿಸಿಕೊಳ್ಳುತ್ತಾ ಭವ್ಯವಾಗಿ ಮೆರವಣಿಗೆಯಲ್ಲಿದ್ದರು. ಕರೀಕುದುರೆಯನ್ನು ಏರಿ ಥೇಟ್‌ ಸಮಸ್ತ ಲೋಕವನ್ನೂ ಪಾಲಿಸುವ ಶೋಲೆಯ ಬಾಬುವಿನಂತೆಯೇ ಕಂಡ ಬಚ್ಚನ್‌ ದೇವರು - ಸುತ್ತಾ ಪುಳಕಿತರಾಗುತ್ತಿದ್ದ ಭಕ್ತಕೋಟಿಗೆ ಆಶೀರ್ವಾದ ಮಾಡುವಂತೆ ಕೈ ಎತ್ತಿದಾಗ , ಭಕ್ತಿಯ ಪರವಶತೆಯಲ್ಲಿ ಜನಸಾಗರ ದೇವರನ್ನು ಮುಟ್ಟಿ ಪವಿತ್ರವಾಗಲು ಅಲೆಯೋಪಾದಿಯಲ್ಲಿ ನುಗ್ಗಿದ್ದೇ ತಡ .... ಅರ್ಜುನನಿಂದ ಜಯದ್ರಥನನ್ನು ಕುರುಸೈನ್ಯ ಹೊಂಚು ಹಾಕಿ ಅಡಗಿಸಿಕೊಂಡಂತೆ ಕೆಂಪುಮೀಸೆಯ, ಬಿಳೀ ಮುಖದ, ಆರೂವರೆ ಅಡಿಯ ಪೋಲೀಸರೆಲ್ಲಾ ಹೆಣಗಾಡಿ ತಮ್ಮಷ್ಟೇ ಎತ್ತರದ ಅವತಾರ ಪುರುಷನನ್ನು ಅಲ್ಲಿಂದ ಪಾರು ಮಾಡಿದರು.

ಭಾರತಕ್ಕೆ ಸಂಬಂಧಪಟ್ಟ ಸಮಸ್ತ ಚಟುವಟಿಕೆಗಳನ್ನು ಗುತ್ತಿಗೆ ಹಿಡಿದಂತಿರುವ New York Lifeನ ದೊಡ್ಡ ಜಾಹೀರಾತನ್ನು ಹೊತ್ತ ವೇದಿಕೆಯ ಮೇಲೆ ಈಗಾಗಲೇ ಧರ್‌ಮೇಂದರ್‌ಜೀ ಆಸೀನರಾಗಿದ್ದಾರೆ. ಬಾಲಿವುಡ್‌ ಗುರುವಿಗೆ ತಮ್ಮ ನರ್ತನಾ ಚಾತುರ್ಯವನ್ನು ತೋರಲು ತಂಡೋಪತಂಡಗಳು ಸಾಲುಗಟ್ಟಿ ನಿಂತಿವೆ. ಇಂದಿನ, ನೆನ್ನೆಯ, ಮೊನ್ನೆಯ ಹಾಡುಗಳಿಗೆಲ್ಲಾ ಕುಣಿದದ್ದೇ ಕುಣಿದದ್ದು . ಸಿನಿಮಾದಲ್ಲಿ ಇರುವಂತೆಯೇ ಮತ್ತು ತಮ್ಮ ಚಾಲೂಕುತನವನ್ನು ತೋರಲು ಸಿನಿಮಾದಲ್ಲಿ ಇಲ್ಲದಂತೆಯೂ.

ಬಾಲಿವುಡ್‌ ಪ್ರಭುವಿಗೆ ಇಬ್ಬಂದಿ. ಅಲ್ಲಿಗಿಂತಾ ಚೆನ್ನಾಗಿ ಇಲ್ಲೇ ಡಾನ್ಸ್‌ ಮಾಡುತ್ತೀರಲ್ಲಾ ಎಂದು ಬೆರಗಾಗಿ ಅಂದುಬಿಟ್ಟರೆ ನಿವಾಳಿಸಿ ಎಸೆಯಿರಿ - ಅಲ್ಲಿ ಕುಳಿತು ನೀವೇನು ಮಾಡುತ್ತಿರುವುದು ಎಂದು ಕೇಳುವುದಕ್ಕೆ ಅವಕಾಶ, ಬಾಲಿವುಡ್‌ಗೆ ನೀವು ಹತ್ತಿರವಾಗಿಲ್ಲ ಎಂದರೆ ಅಲ್ಲಿಂದ ಟೀಕೇಟು ಕೊಟ್ಟು ಕರೆಯಿಸಿಕೊಂಡದ್ದು ಈ ಮಾತು ಕೇಳುವುದಕ್ಕೇ? ಎನ್ನುವ ಋಣದ ಪ್ರಶ್ನೆ.

ಜನ ಬರೀ ವೇದಿಕೆಯನ್ನೇ ಗುರಾಯಿಸಿ ನೋಡುತ್ತಿಲ್ಲ . ಸುತ್ತಲೂ ಮಿಂಚಿನಂತೆ ಚುರುಕು ಕಣ್ಣನ್ನು ಹಾಯಿಸುತ್ತಿದ್ದಾರೆ. ಇಷ್ಟೊಂದು ಸೀರೆ, ಚೂಡೀದಾರ್‌, ಕಾಲ್ಗೆಜ್ಜೆಯ ಹೆಜ್ಜೆಗಳು, ಮೆಹಂದಿಯ ಕೈಗಳು ಇನ್ನೆಲ್ಲಿ ಸಿಗುತ್ತವೆ? ಗಗನದಲ್ಲಿ ಹಾರುವ ಗುಂಪು ಹಕ್ಕಿಗಳನ್ನು ಬೆಕ್ಕಸ ಬೆರಗಾಗಿ ನೋಡುವಂತೆ ಇಲ್ಲೊಬ್ಬ ಬಾಯ್ತೆರೆದು ನಿಂತಿದ್ದಾನೆ. ಅವನ ಕಿವಿಯಲ್ಲಿ ಸ್ನೇಹಿತನೊಬ್ಬ ಪಿಸುಗುಡುತ್ತಾನೆ - ‘ನೋಡು ಅಲ್ಲಿ ಬರುತ್ತಿದ್ದಾಳಲ್ಲಾ, ಅವಳೊಬ್ಬಳು ಫೇಮಸ್‌ ಹೆಡ್‌ ಹಂಟರ್‌’. ಅದೆಲ್ಲಿಟ್ಟಿದ್ದನೋ ಇವನು ಚರ್ಮದಡಿಯಲ್ಲಿ, ಇದ್ದಕ್ಕಿದ್ದಂತೆಯೇ Resume ಕೈಗೆ ಬರುತ್ತದೆ. ಹಣ್ಣುಕಾಯಿ ದೇವರಿಗೆ ಅರ್ಪಿಸುವಂತೆ ಅವಳಿಗೆ ಎರಡೂ ಕೈನಲ್ಲಿ ತನ್ನ ‘ಕೆಲಸದ ಜಾತಕ’ವನ್ನಿಡುತ್ತಾ ಹಲ್ಕಿರಿಯುತ್ತಾನೆ. ಅವಳು ಸೂಕ್ಷ್ಮವಾಗಿ ತನ್ನ ತಂಪು ಕನ್ನಡಕದೊಳಗಿಂದಲೇ ಇವನನ್ನು ಮೇಲಿನಿಂದ ಕೆಳಗಿನ ತನಕ ನೋಡುತ್ತಾಳೆ. ‘ಗ್ರೀನ್‌ ಕಾರ್ಡ್‌ ಇದೆಯಾ?’. ವೇದಿಕೆಯ ಮೇಲಿನ ಹಾಡಿನ ಅಬ್ಬರದಲ್ಲಿ ಈ ಪ್ರಶ್ನೆ ನಮ್ಮ ಅನಂತಪುರದ ಸಾಯಿ ಸತ್ಯ ಸೋಮಶೇಖರ ರಾವ್‌ ರಾವುಲಪಳ್ಳಿಗೆ ಸರಿಯಾಗಿ ಕೇಳುವುದಿಲ್ಲ. ‘ಮಾಡಿದ್ದೇನೆ ಮೇಡಂ. ಒರ್ಯಾಕಲ್‌, ಜಾವ, ನೆಟ್‌ವರ್ಕಿಂಗ್‌, ಡಿ.ಬಿ.ಎ ... NIITಯಿಂದ ಶುರುಮಾಡಿ ABC ಕನ್ಸಲ್ಟೆಂಟ್ಸ್‌ ಹತ್ತಿರ ಪ್ರಾಜೆಕ್ಟ್‌ ಮಾಡಿ .....’. ಅವಳು, ಇವತ್ತು ಯಾವ ರೆಸ್ಟೋರೆಂಟ್‌ಗೆ ಡಿನ್ನರ್‌ಗೆ ಹೋಗೋಣ ಡಿಯರ್‌ ಅನ್ನುವ ಮಾದರಿಯಲ್ಲೇ ಕಿವಿಯ ಹತ್ತಿರ ಬಾಗಿ ‘ಗ್ರೀನ್‌ ಕಾರ್ಡ್‌ ಇದೆಯಾ’ ಎಂದು ಪ್ರೀತಿಯಿಂದ ಕೇಳುತ್ತಾಳೆ. SSSSR ರಾವುಲಪಳ್ಳಿ ಪೆಚ್ಚುನಗೆ ನಕ್ಕು ‘ಇಲ್ಲ, ಮೇಡಂ. H1Bವೀಸಾ ಮೇಲಿದ್ದೇನೆ’ ಅನ್ನುತ್ತಾನೆ. ಅವಳ ಕಣ್ಣು ಸೂಕ್ಷ್ಮವಾಗಿ ಟ್ರಾಶ್‌ಕ್ಯಾನ್‌ಗೋಸ್ಕರ ಸುತ್ತಮುತ್ತಲ ಹುಡುಕುತ್ತದೆ.

ಅದೇನದು ಅಷ್ಟೊಂದು ಜನ ಸಾಲುಗಟ್ಟಿ ನಿಂತಿದ್ದಾರಲ್ಲಾ ? ಇಂಡಿಯಾ ಫೆಸ್ಟಿವಲ್‌ ನಡೆಯುವುದೇ ಇದಕ್ಕೆ. ನಮಗೆ ಸ್ವಾತಂತ್ರ್ಯ ಬಂದದ್ದೇ ಇದಕ್ಕೆ. ಸಮೋಸಾ, ಮಸಾಲೆ ದೋಸೆ, ಇಡ್ಲಿ, ವಡಾ, ಪೂರಿ, ಪಕೋಡ, ಚೋಲೆ ಬಟೂರೆ, ಮ್ಯಾಂಗೋ ಕುಲ್ಫಿ, ಕೇಸರ್‌ ಕುಲ್ಫಿ, ಪಾನಿಪುರಿ, ಮಸಾಲೆ ಪುರಿ....ಒಂದೇ ಎರಡೇ? ಸುತ್ತಮುತ್ತಲ ಭಾರತೀಯ ರೆಸ್ಟೋರೆಂಟ್‌ಗಳೆಲ್ಲಾ ಇವತ್ತಿನ ಈ ಬೂತುಗಳೊಳಗೆ ಸೇರಿ ಹೋಗಿವೆ.

ಮಗಳ ಬಾಣಂತನಕ್ಕೆ ಬಂದ ಅಯ್ಯಂಗಾರರು ಇನ್ನೇನು ಪಕೋಡವನ್ನು ಬಾಯಿಗಿಡಬೇಕು ಅನ್ನುವಾಗ ತಮ್ಮ ಸೋಡಾಗಾಜಿನ ಕನ್ನಡಕದಿಂದ ಪಕ್ಕದವನ ತಟ್ಟೆಯನ್ನು ನೋಡುತ್ತಾರೆ. ಕೋಳಿಯ ಕಾಲನ್ನು ಅವನು ಆಲೆಮನೆಯಲ್ಲಿ ಕಬ್ಬಿನ ಜಲ್ಲೆಗೆ ಸುತ್ತಿದ ಅಂಟು ಬೆಲ್ಲವನ್ನು ತಿನ್ನುವಂತೆ ಕಿತ್ತು ತಿನ್ನುತ್ತಿದ್ದಾನೆ. ‘ಪದ್ಮಿನೀ, ಇದೆ ಪಾತುಕುಂಡು ಇಂಗೆ ಯೆಡೆತಿಲ್ಲೇ ನಾ ಎಪ್ಡಿ ಪಕೋಡ ಸಾಪಡಟು ?’ ಎಂದು ಎಳೇಮಗುವನ್ನು ಎತ್ತಿಕೊಂಡ, ಬಲಗಡೆಗೆ ಮೂಗನ್ನು ಚುಚ್ಚಿಕೊಂಡ ಮಗಳನ್ನು ದೈನ್ಯವಾಗಿ ಕೇಳುತ್ತಾರೆ. ‘ಅವನ ಕಡೆ ಬೆನ್ನುಮಾಡಿ ನಿಲ್ಲಪ್ಪ ಸಾಕು’ ಎಂದು ಅಪ್ಪನನ್ನು 180 ಡಿಗ್ರಿ ಕೋನಕ್ಕೆ ತಿರುಗಿಸುತ್ತಾಳೆ ಪದ್ಮಿನಿ. ಅಯ್ಯಂಗಾರರು ನಿಶ್ಚಿಂತೆಯಿಂದ ಪಕೋಡ ತಿನ್ನುತ್ತಾರೆ. ಪಕ್ಕದವನು ನಿಶ್ಚಿಂತೆಯಿಂದ ಕೋಳಿಯ ಕಾಲನ್ನು ಮುಗಿಸುತ್ತಾನೆ. ರಾಮಜನ್ಮಭೂಮಿಯಷ್ಟೇ ಗಂಭೀರವಾದ ವಿವಾದವೊಂದು ಕಂಚಿ ಕಾಮಕೋಟಿಗಳಿಗಿಂತಾ ಬುದ್ಧಿವಂತಳಾದ ಪದ್ಮಿನಿಯ ಪರಿಹಾರ ಸೂತ್ರದಿಂದ ಕ್ಷಣಾರ್ಧದಲ್ಲಿ ಬಗೆಹರಿಯುತ್ತದೆ.

ಅನೇಕ ತಿಂಗಳುಗಳ ಹಿಂದಿನಿಂದಲೇ Anti-Muslim, Anti-Hindu, Anti-Sikh ಎಂದು ಎಲ್ಲಾ ಪರ್ಮುಟೇಷನ್‌ ಮತ್ತು ಕಾಂಬಿನೇಷನ್‌ಗಳಲ್ಲಿ ಜಗಳವಾಡಿದರೂ, ಹತ್ತು ಸಾವಿರ ಮೈಲಿಯಾಚೆ ಯಾರೋ ಕುಡಿದ ಹುಳಿ ಹೆಂಡಕ್ಕೆ ಇಲ್ಲಿ ಕೆಲವರಿಗೆ ಮತ್ತೇರಿ ಜಗಳಗಳೇ ನಡೆದರೂ, ಇಲ್ಲೆಲ್ಲೋ ಸಿಖ್ಖರ ಹಬ್ಬವೇ ನಡೆದಿದೆ. ದಲೇರ್‌ ಮೆಹಂದಿಯ ಬಾಂಗ್ರಾ ನಮ್ಮ ಯೋಚನೆಗಳೂ ನಮಗೆ ಕೇಳದಷ್ಟು ಜೋರಾಗಿ ಅಬ್ಬರಿಸುತ್ತಿದೆ:

ಮೈ ದರದಿ ರಬ್‌ ರಬ್‌ ಕರದಿ
ಕೆ ಲೋಕಿ ಕೆಹನಾ ಚೂಯಿ ಮುಯಿ ಚೂಯಿ ಮುಯಿ
ಚೂಯಿ ಮುಯಿ

ಮೊನ್ನೆ ಮೊನ್ನೆಯ ತನಕ ಚಾಕೊಲೆಟ್‌ ಮಿಲ್ಕ್‌ ಚಾಕೊಲೆಟ್‌ ಕೌ ನಿಂದ ಬರುತ್ತದೆ ಅನ್ನುತ್ತಾ ಇತ್ತೀಚೆಗಷ್ಟೇ ಟರ್ಬನ್‌ ತೊಡುವುದ ಬಿಟ್ಟು ಮಷ್‌ರೂಂ ಕಟ್ಟಿಂಗ್‌ ಮಾಡಿಸಿಕೊಂಡ ಹುಡುಗರೆಲ್ಲಾ ಮೈ ಮರೆತು ಕುಣಿಯುತ್ತಿದ್ದಾರೆ. ಶಾಲೆಯಿಂದ ಹೊರಹಾಕಿದ ಪ್ರಿನ್ಸಿಪಾಲರನ್ನು ತುಳಿದು ಹಾಕುವಂತೆ, ಡ್ರಗ್ಸ್‌ ತೆಗೆದುಕೊಂಡರೆ ಪಂಜಾಬ್‌ಗೆ ಕಳಿಸಿಬಿಡುತ್ತೇನೆ ಅನ್ನುವ ಅಪ್ಪನ ಹೊಟ್ಟೆಯನ್ನು ಬಗೆದಂತೆ, ಗುರುದ್ವಾರದಲ್ಲಿ ಸಿಕ್ಕಿ ಆಸೆ ಹುಟ್ಟಿಸಿ ಈಗ ಸ್ಟಾನ್‌ಫರ್ಡ್‌ನಲ್ಲಿ ಸೀಟು ಗಿಟ್ಟಿಸಿಕೊಂಡ ‘ಮೇಧಾವಿ’ಯಾಬ್ಬನೊಡನೆ ಡೇಟಿಂಗ್‌ ಮಾಡುತ್ತಿರುವ ಹುಡುಗಿಯನ್ನು ಗಿರಗಿರನೆ ತಿರುಗಿಸಿ ‘ಡಬಕ್‌’ ಎತ್ತಿಹಾಕಿದಂತೆ. ಮೂರು ಲೋಕಕ್ಕೂ ಕೇಳುವಂತೆ ದಲೇರ್‌ ಮೆಹಂದಿ ಹಾಡುತ್ತಲೇ ಇದ್ದಾನೆ, ಇವು ಮತ್ತೇರಿದಂತೆ ಕುಣಿಯುತ್ತಲೇ ಇವೆ.

ಸಮೋಸಾದ ಹಸುರು ಮೆಣಸಿನಕಾಯಿಯನ್ನು ಅಗಿದು ಗದ್ಗದಿತನಾದವನೊಬ್ಬ ಆಕಾಶದೆಡೆಗೆ ಮುಖ ಮಾಡಿ ಭಾವುಕನಾಗಿ ಹೇಳುತ್ತಾನೆ - ಇಷ್ಟೊಂದು ಜನರನ್ನು ಇಷ್ಟೊಂದು ರೀತಿಯಲ್ಲಿ ಇಷ್ಟೊಂದು ಚಟುವಟಿಕೆಗಳಿಗೆ ಈ ವಿದೇಶೀನೆಲದಲ್ಲಿ ಪ್ರೇರೇಪಿಸುತ್ತಿರುವ ‘ಮಾ! ತುಜೇ ಸಲಾಂ’.

ಬೆಂಗಾಲಿ ಗೊತ್ತಿಲ್ಲದವರು ಸೇರಿಸಿದ ತಪ್ಪುಗಳನ್ನು ತಿದ್ದುವಂತೆ ಬೆಂಗಾಲೀ ಹುಡುಗಿಯಾಬ್ಬಳು ಸ್ವಚ್ಛವಾಗಿ ಮೆಲುದನಿಯಲ್ಲಿ ‘ವಂದೇ ಮಾತರಂ’ ಹಾಡುತ್ತಾಳೆ. ತೊಂಭತೈದು ಡಿಗ್ರಿ ಫ್ಯಾರನ್‌ಹೀಟಿನ ಟೆಂಪರೇಚರ್‌ನಲ್ಲೂ ಎಲ್ಲೋ ಸಣ್ಣ ತಿಳಿಗಾಳಿ ಬೀಸಿ ಧ್ವಜವೊಂದು ಪಟಪಟನೆ ಹಾರುತ್ತದೆ.

ದಲೇರ್‌ ಮೆಹಂದಿಯ ಅಬ್ಬರ, ದೋಸೆಯ ಕಾವಲಿಯಿಂದ ಕರುಕನ್ನು ತೆಗೆಯುವಾಗಿನ ಕರಕರ, ನೀರಿನ ಬಾಟಲ್‌ಗಳು ತುಂಬಿದ ಐಸ್‌ಕ್ಯೂಬ್‌ಗಳನ್ನು ಬೇಧಿಸಿಕೊಂಡು ಐಸ್‌ಚೆಸ್ಟ್‌ನಿಂದ ಹೊರಬರುವಾಗಿನ ಪರಪರ, ಒಲಂಪಿಕ್ಸ್‌ನಲ್ಲಿ ಮೆಡಲ್‌ ಗೆದ್ದವನಂತೆ ಹತ್ತು ಡಾಲರನ್ನು ಮೇಲೆತ್ತಿ ಹಿಡಿದು ‘ಇದರ್‌ ಪಾಂಚ್‌ ಸಮೋಸ ದೆದೋ ಭಾಯ್‌’ ಕೂಗಾಟ, ದಪ್ಪ ಕುಂಡೆಯ ಹುಡುಗಿಯರೆಲ್ಲಾ ವೇದಿಕೆಯ ಮೇಲೆ ಯದ್ವಾತದ್ವ ಹೆಜ್ಜೆ ಹಾಕುತ್ತಾ ತಮ್ಮ ನರ್ತನಾ ಚಾತುರ್ಯವನ್ನು ತೋರುವುದಕ್ಕೆ ಮಾಡುವ ಭೂಮಿ ನಡುಗಿದಂತಹ ಗಢ ಗಢ - ಇವುಗಳ ನಡುವೆ ಹುಡುಗಿಯ ವಂದೇ ಮಾತರಂ ಮತ್ತು ಧ್ವಜದ ಪಟಪಟ ಯಾರಿಗೂ ಕೇಳದೆ ಹೀಲಿಯಂ ಬಲೂನಿನಂತೆ ಗಾಳಿಗೂ ಹಗುರಾಗಿ ಮೇಲೆ ಮೇಲೆ ಹಾರಿ ಬೆಳ್ಳಿ ಮೋಡಗಳೊಂದಿಗೆ ಲೀನವಾಗುತ್ತವೆ.

ಯಾವ ರಾಷ್ಟ್ರದ ಧ್ವಜ ಪಟಗುಟ್ಟಿದ್ದೋ ಗೊತ್ತಿಲ್ಲ. ಯಾವ ದೇಶದ ರಾಷ್ಟ್ರಗೀತೆಯೂ ಆಗದ, ಯಾವ ಧ್ವಜವು ತಂಗಾಳಿಗೆ ಉತ್ಸಾಹದಿಂದ ಅಲುಗಿದರೂ ಜಗನ್ಮಾತೆಯ ಪ್ರೀತಿಯಿಂದ ಅಪ್ಪಿ ಹಿಡಿಯುವ, ವಂದೇ ಮಾತರಂಗೂ ದೇಶವಿಲ್ಲ.

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X