ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರುತೊರೆಯಾಂದರ ಹಾಡು

By Staff
|
Google Oneindia Kannada News
M.R. Dattatri *ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಅಮೆರಿಕಾದ ಕಾವ್ಯಪ್ರಪಂಚಕ್ಕೆ ವಿಲ್ಲಿಯಂ ಸ್ಟಫಾರ್ಡ್‌ರು ಕನ್ನಡಕ್ಕೆ ಕೆ.ಎಸ್‌.ನರಸಿಂಹಸ್ವಾಮಿಗಳಿದ್ದಂತೆ. ನವ್ಯದ ಭರಾಟೆಯ ನಡುವೆಯೂ ಕೆ.ಎಸ್‌.ನ ತಮ್ಮದೇ ಆದ ಕಾವ್ಯಸತ್ವವನ್ನು ಉಳಿಸಿಕೊಂಡಂತೆ ಸ್ಟಫಾರ್ಡ್‌ರು ತಮ್ಮದೇ ಆದ ಕಾವ್ಯ ಮಾರ್ಗವನ್ನು ಕೊರೆದುಕೊಂಡವರು. ತಮ್ಮ ಕೊನೆಯ ವರ್ಷಗಳಲ್ಲಂತೂ ದಿನಕ್ಕೊಂದು ಕವಿತೆಯಂತೆ ಬರೆದವರು. ಆರೂವರೆ ಅಡಿ ಎತ್ತರ, ಬಿಳಿ ಹುಬ್ಬು ಮತ್ತು ಬೊಚ್ಚುಬಾಯಿಯ ದೇಹವನ್ನು ತ್ಯಜಿಸುವ ಮೊದಲು ಐವತ್ತೊಂದು ಕವಿತಾಸಂಕಲನಗಳನ್ನು ಪ್ರಕಟಿಸಿದ್ದಾರೆ!

ಸ್ಟಫಾರ್ಡ್‌ರ ‘ಈ ಜೀವನವೇ ಹೀಗೆ’ ಎನ್ನುವ ಕವಿತೆಯಲ್ಲಿ ನಮ್ಮದೇ ಆಶೋತ್ತರಗಳನ್ನು ಹೊತ್ತ ನಾವು ನೂಲಿನೆಳೆಯನ್ನು ಅನುಸರಿಸಿ ಹೊರಟಂತೆ ಎನ್ನುತ್ತಾರೆ. ನಾವು ಹಗಲೂ ರಾತ್ರಿ ಅನುಸರಿಸಿ ಹೊರಟ ಈ ಎಳೆ ಬೇರೆ ಯಾರಿಗೂ ಕಾಣುವುದಿಲ್ಲ . ನಾವೇಕೆ ಅದರ ಹಿಂದಿದ್ದೇವೆ ಎನ್ನುವುದನ್ನು ನಾವೆಷ್ಟು ವಿವರಿಸಿದರೂ ಬೇರೆಯವರಿಗೆ ಅರ್ಥವಾಗುವುದಿಲ್ಲ. ಸುಖ, ದುಃಖ, ಹುಟ್ಟು, ಸಾವುಗಳ ನಡುವೆಯೂ ದೇಹ ಹಣ್ಣಾಗಿ ಉದುರುವವರೆಗೂ ಈ ನೂಲಿನ ಹಾದಿಯಲ್ಲೇ ನಾವಿರುತ್ತೇವೆ. ದಿನದಿನಕ್ಕೂ ಇದನ್ನೇ ಗಟ್ಟಿಯಾಗಿ ತಬ್ಬಿಕೊಳ್ಳುತ್ತೇವೆ.

William Staffordವೆಂಕಟೇಶ ಗುಂಡೂಭಟ್ಟರ ಹಿರಿಯ ಮಗ. ಮನೆಯ ಬಡತನ ಮತ್ತು ತಲೆಗೆ ಹತ್ತದ ಓದು ಜೊತೆ ಸೇರಿ ಬಹಳ ಬೇಗ ಅಪ್ಪನಂತೆಯೇ ಪಂಚಾಂಗವನ್ನು ಹಿಡಿಯುವಂತೆ ಮಾಡಿತು. ಗೌರಿ ಗಣೇಶನ ಹಬ್ಬಗಳಲ್ಲಿ ಗುಂಡೂಭಟ್ಟರು ಎರಡು ಮನೆಗಳಿಗೆ ಪೂಜೆಗೆ ಒಪ್ಪಿಕೊಂಡರೆ ವೆಂಕಣ್ಣನಿಗೆ ನಾಲ್ಕು ಮನೆ ಒಪ್ಪಿಸುತ್ತಾರೆ. ಈಶ್ವರನ ದೇವಸ್ಥಾನಕ್ಕೆ ಪ್ರತಿ ಬೆಳಗ್ಗೆ ಗುಂಡೂಭಟ್ಟರು ಅರ್ಚನೆ ಸಲ್ಲಿಸುವಾಗ ವೆಂಕಣ್ಣ ಅವರಿಗೆ ಸಹಾಯಕ.

ವೆಂಕಣ್ಣನಿಗೊಂದು ವಿಶೇಷವಿತ್ತು. ಬ್ರಾಹ್ಮಣರಿಗೆ, ಅದರಲ್ಲೂ ಅರ್ಚಕರಿಗೆ ವ್ಯತಿರಿಕ್ತವಾಗಿ ಎತ್ತರದ ಮತ್ತು ಕಟ್ಟುಮಸ್ತಿನ ದೇಹ ಅವನದ್ದು. ಮಲ್ಲಣ್ಣನ ಗರಡೀಮನೆಯಲ್ಲಿ ಪಳಗಿದ ಪಟು ಅವನು. ಮಲ್ಲಣ್ಣನ ಪ್ರೀತಿಯ ಶಿಷ್ಯ.

ಪಂಚಾಂಗ ನೋಡಿ ಮಹೂರ್ತ ಗೊತ್ತು ಮಾಡಿಕೊಡುವುದು, ಗಣಪತಿ ಹೋಮಕ್ಕೆ ಸಮಿತ್ತನ್ನು ಹೊಂದಿಸುವುದು, ಹೊಳೆಯಾಚೆಯ ಬಯಲಿನಿಂದ ಎಳೇ ಗರಿಕೆಯನ್ನು ಕಿತ್ತು ಇಪ್ಪತ್ತೊಂದರಂತೆ ಜೋಡಿಸಿಡುವುದರ ಹೊರತಾಗಿ ಬೇರೇನೋ ಉದ್ದೇಶ ವೆಂಕಣ್ಣನ ಜೀವನಕ್ಕೆ ಇತ್ತು. ತರಕಾರಿ ತುಂಬಿಕೊಂಡು ಹೋಗಲು ಬರುವ ವೀರಭದ್ರೇಶ್ವರ ಲಾರಿಯಲ್ಲಿ ರಾತ್ರಿಯೆಲ್ಲಾ ತೂಕಡಿಸಿ ಬೆಂಗಳೂರು ತಲುಪಿ ಕಂಟೋನ್ಮೆಂಟಿನ ಸೇನಾಭರ್ತಿಯ ಕಛೇರಿಯಲ್ಲಿ ಅವರು ಹೇಳಿದ್ದಕ್ಕಿಂತಾ ಹೆಚ್ಚು ಓಡಿ, ಅವರು ಕೇಳಿದ್ದಕ್ಕಿಂತಾ ಹೆಚ್ಚು ಹಾರಿ, ಅವರು ನಿರೀಕ್ಷಿಸಿದ್ದಕ್ಕಿಂತಾ ಹೆಚ್ಚು ವಿಧೇಯತೆಯನ್ನು ತೋರಿ ವಾಪಸ್ಸು ಹಳ್ಳಿಗೆ ಬಂದು ಗುಂಡೂಭಟ್ಟರಿಂದ ಬೈಯ್ಯಿಸಿಕೊಂಡು ಒಂದೆರಡು ತಿಂಗಳು ಕಳೆಯುವುದರೊಳಗೆ ಡೆಹ್ರಾಡೂನಿಗೆ ಬಂದು ಸೇರಿಕೋ ಎಂದು ಸೈನ್ಯದಿಂದ ಕಾಗದಬಂತು.

ಗುಂಡೂಭಟ್ಟರು ಹೌಹಾರಿದರು. ನಿನಗ್ಯಾಕೋ ಬಂತು ಈ ದುರ್ಬುದ್ಧಿ ಎಂದು ಮೂತಿಗೆ ತಿವಿದರು. ‘ಅನ್ನ ಬಟ್ಟೆ ಯಾವುದಕ್ಕೆ ಕಮ್ಮಿ ಮಾಡಿದ್ದೆ ಹೇಳು’. ಗೌರಮ್ಮ ದೇವರ ಕೋಣೆಯಲ್ಲಿ ಮುಸಿ ಮುಸಿ ಅತ್ತರು. ಗುಂಡೂಭಟ್ಟರಿಲ್ಲದಾಗ ಗೌರಮ್ಮ, ಗೌರಮ್ಮನಿಲ್ಲದಾಗ ಗುಂಡೂಭಟ್ಟರು - ಊಟದ ಹೊತ್ತಿಗೆ ಇಬ್ಬರೂ, ಇನ್ನಿಲ್ಲದಂತೆ ವೆಂಕಣ್ಣನಿಗೆ ಬುದ್ಧಿ ಹೇಳಿದರು. ಮಿಲ್ಟ್ರಿಯಲ್ಲಿ ಮಾಂಸ ಮಡ್ಡಿ ತಿಂದು ಬ್ರಾಹ್ಮಣಿಕೆ ಕಳೆದುಕೊಳ್ಳುತ್ತೀಯ ಎಂದು ಹೆದರಿಸಲು ನೋಡಿದರು. ಯಾವುದಕ್ಕೂ ಜಗ್ಗಲಿಲ್ಲ . ಅವರು ಸಾವಿರ ಹೇಳಿದರೆ ಇವನದ್ದೊಂದೇ ಮಾತು.

ಗುಂಡೂಭಟ್ಟರು ತಮ್ಮ ಆತ್ಮೀಯ ಸ್ನೇಹಿತ ಕೃಷ್ಣಸ್ವಾಮಿ ಅಯ್ಯಂಗಾರರ ಬಳಿ ತಮ್ಮ ಸಂಕಟವನ್ನು ತೋಡಿಕೊಂಡರು. ‘ಕತ್ತಿ ಹಿಡಿದು ಪರಶುರಾಮನಾಗಲು ಹೊರಟ್ಟಿದ್ದಾನೆ ನನ್ನ ಮಗ! ನೀವಾದರೂ ಬುದ್ಧಿ ಹೇಳಿ’ ಎಂದರು. ಊರ ಹೊರಗಿನ ಅಶ್ವತ್ಥ ಕಟ್ಟೆಯ ಮೇಲೆ ಕೃಷ್ಣಸ್ವಾಮಿ ಅಯ್ಯಂಗಾರರು ವೆಂಕಣ್ಣನನ್ನು ಕೂರಿಸಿಕೊಂಡು ಬುದ್ಧಿ ಹೇಳಿದರು. ‘ದರ್ಭೆ ಹಿಡಿಯಬೇಕಾದ ಕೈಗಳು ಕೋವಿ ಹಿಡಿಯಬಾರದು’ ಎಂದರು. ಯುದ್ಧಗಳಲ್ಲಿ ಇರುವೆಗಳಂತೆ ಸಾಯುವ ಸೈನಿಕರ ವ್ಯಥೆಯ ಕಥೆಗಳನ್ನು ಹೇಳಿದರು. ‘ಜೋಯಿಸಿಕೆ ಬೇಜಾರಾದರೆ ಎರಡೆಕರೆ ಜಮೀನು ಹಿಡಿದು ವ್ಯವಸಾಯ ಮಾಡು’ ಎಂದರು. ಅಯ್ಯಂಗಾರ್ಯರು ಮಾತನಾಡುತ್ತಲೇ ಇದ್ದರು. ವೆಂಕಣ್ಣ ಕಲ್ಲಿನಂತೆ ಕುಳಿತಿದ್ದ. ಹೂ ಅನ್ನಲೂ ಇಲ್ಲ ಉಹೂ ಅನ್ನಲೂ ಇಲ್ಲ. ಪೈಲ್ವಾನನ ದೇಹದ ಘನತೆಗೆ ಭಂಗಬಾರದಂತೆ ಬೆನ್ನಿನ ಹುರಿಯನ್ನು ನೇರವಾಗಿಟ್ಟುಕೊಂಡು, ಗುರಿಯಿಟ್ಟು ಕುಳಿತ ಸೈನಿಕನಂತೆ ನೇರವಾಗಿ ನೋಡುತ್ತಾ, ಮಿಸುಕಾಡದಂತೆ ಕುಳಿತಿದ್ದ.

‘ಹೋಗುವುದೇ ಸರಿ’ ಎಂದ ವೆಂಕಣ್ಣ. ‘ಹಾಳಾಗಿ ಹೋಗು’ ಎಂದು ಸಿಟ್ಟಿನಿಂದ ಶಲ್ಯವನ್ನು ಕೊಡವಿ ಸಾಯಂ ಸಂಧ್ಯಾವಂದನೆಗೆ ಹೊಳೆಯ ಕಡೆಗೆ ಬಿರಬಿರನೆ ನಡೆದರು ಗುಂಡೂಭಟ್ಟರು. ಗೌರಮ್ಮನಿಗೆ ಹೇಳಲು ಏನೂ ಉಳಿದಿರಲಿಲ್ಲ.

ಬೆಂಗಳೂರಿನಿಂದ ರೈಲು ಹತ್ತಿ, ಬರುವ ಸ್ಟೇಷನ್ನುಗಳನ್ನು, ಹಾಯುವ ಊರುಗಳನ್ನು, ಬಗೆಬಗೆಯ ವೇಷದ ಜನಗಳನ್ನು, ಕೇಳಿರದ ಭಾಷೆಗಳನ್ನು ಆಶ್ಚರ್ಯವಾಗಿ ನೋಡುತ್ತಾ ಕೇಳುತ್ತಾ ಡೆಹ್ರಾಡೂನ್‌ ಸೇರಿದ. ಬೆಳಗ್ಗೆ ನಾಲ್ಕೂವರೆಯಿಂದ ಕವಾಯಿತು, ಒಬ್ಬನ ತಪ್ಪಿಗೆ ತಂಡವೆಲ್ಲಾ ಕೋವಿಯನ್ನು ಹೆಗಲ ಮೇಲೆ ಹೊತ್ತು ಐದು ಮೈಲಿ ಓಡುವುದು, ಒರಟು ಚಪಾತಿಯನ್ನು ಗಬಗಬನೆ ತಿನ್ನುವುದು ಎಲ್ಲವನ್ನೂ ಅದಕ್ಕೋಸ್ಕರವೇ ಹುಟ್ಟಿದವನಂತೆ ಉತ್ಸಾಹದಲ್ಲಿ ತೆಗೆದುಕೊಂಡ. ತಡವರಿಸುತ್ತ ತಡವರಿಸುತ್ತಲೇ ಚೆನ್ನಾಗಿ ಹಿಂದಿ ಕಲಿತ.

ಮೂರ್ನಾಲ್ಕು ತಿಂಗಳಿಗೆ ಒಂದರಂತೆ ವೆಂಕಣ್ಣನ ಪತ್ರ ಊರಿಗೆ ಬರುತ್ತಿತ್ತು. ಎರಡೇ ಸಾಲು. ಪ್ರತಿ ಪತ್ರದಲ್ಲೂ ಮಲ್ಲಣ್ಣನಿಗೆ ನಮಸ್ಕಾರ ತಿಳಿಸಿ ಎಂದಿರುತ್ತಿತ್ತು. ಮಿಲಿಟರಿ ಸೇರಿದವನಿಗೆ ಹೆಣ್ಣು ಕೊಡುವವರು ಯಾರು? ಗುಂಡೂರಾಯರು ಕಾಲಾಂತರದಲ್ಲಿ ವೆಂಕಣ್ಣನ ಯೋಚನೆಯನ್ನು ಬಿಟ್ಟರು.

ಸಾವಿರದೊಂಭೈನೂರ ಎಪ್ಪತ್ತೊಂದರ ಡಿಸೆಂಬರ್‌ ಹೊತ್ತಿಗೆ ಭಾರತದ ಪೂರ್ವಭಾಗವೆಲ್ಲಾ ಅಶಾಂತ. ಶ್ರೀಮತಿ ಇಂದಿರಾಗಾಂಧಿಯವರು ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿದರು. ಬಾಂಗ್ಲಾ ಮುಕ್ತಿ ವಾಹಿನಿಗೆ ವೆಂಕಣ್ಣನ ಪಡೆ ಒತ್ತೊಟ್ಟಿಗೆ ನಿಂತಿತು. ಹದಿಮೂರು ದಿನಗಳ ಭೀಕರ ಯುದ್ಧದಲ್ಲಿ ಪಾಕಿಸ್ತಾನದ ತೊಂಭತ್ತಮೂರು ಸಾವಿರ ಸೈನಿಕರು ಶರಣಾಗತರಾದರು. ವೆಂಕಣ್ಣ ಮಾತ್ರ ತೊಡೆಗೆ ಬಿದ್ದ ಗುಂಡಿನ ಗಾಯಕ್ಕೆ ಚಿಟ್ಟಗಾಂಗ್‌ ಆಸ್ಪತ್ರೆ ಸೇರಿದ್ದ.

ಬಾಂಗ್ಲಾ ದೇಶವಾಗಿ ಮುಜೀಬುರ್‌ ರೆಹಮಾನರು ಅಧಿಕಾರ ವಹಿಸಿಕೊಳ್ಳುವ ಸಂಭ್ರಮ ಮತ್ತು ವಿಜಯೋತ್ಸವದಲ್ಲಿರುವಾಗ ಗುಂಡೂಭಟ್ಟರ ಮನೆಗೆ ವೆಂಕಣ್ಣನ ಕೊನೆಯ ಕಾಗದ ಬಂತು. ಹಿಂದಿನ ತರವೇ, ಎರಡೇ ಸಾಲು. ಗುಣವಾಗುವ ಆಸೆ ದಿನದಿನಕ್ಕೂ ಕಮರುತ್ತಿದೆ. ಬದುಕುಳಿದರೆ ಬಂದು ಕಾಣುತ್ತೇನೆ. ಮಾಮೂಲಾಗಿ, ಮಲ್ಲಣ್ಣನಿಗೂ ನಮಸ್ಕಾರಗಳಿತ್ತು.

ಮತ್ತೆ ನಾಲ್ಕು ತಿಂಗಳಲ್ಲಿ ಸೇನೆಯ ದೆಹಲಿಯ ಕಛೇರಿಯಿಂದ ಶೋಕಸಂದೇಶವನ್ನು ಹೊತ್ತ ಕಾಗದ ಬಂತು. ಗುಂಡೂಭಟ್ಟರು ಮನೆಯ ಅಂಗಳದಲ್ಲಿ ಕುಸಿದರು. ಗೌರಮ್ಮ ಉಸಿರುಗಟ್ಟಿ ಅತ್ತರು.

ಬಾಂಗ್ಲಾದೇಶವಾಗಿ ಮುಜೀಬುರ್‌ ರೆಹಮಾನರು ಪ್ರಧಾನಿಗಳಾಗಿ ಅವರ ಕೊಲೆಯೂ ಆಗಿ ಮೂವತ್ತು ವರ್ಷಗಳು ಕಳೆದಿವೆ. ಗುಂಡೂಭಟ್ಟರು ಮತ್ತು ಗೌರಮ್ಮನವರು ಬೆಂಗಳೂರಿನಲ್ಲಿ ಕೊನೆಯ ಮಗನ ಮನೆಯಲ್ಲಿ ಕೊನೆಯ ದಿನಗಳನ್ನು ಕಳೆದು ಹರಿಶ್ಚಂದ್ರ ಘಾಟಿನಲ್ಲಿ ಬೂದಿಯಾಗಿದ್ದಾರೆ. ವೆಂಕಣ್ಣ ವೀರಭದ್ರೇಶ್ವರ ಲಾರಿಯನ್ನು ಹತ್ತುವಾಗ ಲಾರಿಯ ಸಮಕ್ಕೂ ಓಡಿಬರುತ್ತಿದ್ದ ಊರಿನ ಚಿಳ್ಳೆಪಿಳ್ಳೆಗಳೆಲ್ಲಾ ಏನೇನೋ ಮಾಡಿ ಯಾವುದೋ ಏಣಿ ಹತ್ತಿ, ಯಾವುದೋ ಹಗ್ಗಕ್ಕೆ ಜೋತು ಬಿದ್ದು ಬೆಂಗಳೂರು ಸೇರಿಯಾಗಿದೆ. ಮಲ್ಲಣ್ಣನ ಗರಡಿಮನೆ ಇದ್ದಕಡೆ ಒಂದು ಹಿಟ್ಟಿನ ಗಿರಣಿ ದಿನಪೂರ್ತಿ ಶಬ್ದ ಮಾಡುತ್ತ ನಿಂತಿದೆ.

ಇನ್ನೂ ಗಿರಿನಗರ, ಬಸವನಗುಡಿ, ಬನಶಂಕರಿ, ಕೆಂಗೇರಿ ಎಂದು ತಲೆ ಮರೆಸಿಕೊಳ್ಳದೆ ಹಳ್ಳಿಯಲ್ಲೇ ಉಳಿದಿರುವ ಕೆಲವು ಹಳೆಯ ತಲೆಗಳು ಅಶ್ವತ್ಥಕಟ್ಟೆಯ ಮೇಲೆ ಕುಳಿತು ಹಳೆಯ ನೆನಪುಗಳನ್ನು ಕೆದಕುತ್ತವೆ. ಮಾತಿಗೆ ಗುಂಡೂರಾಯರ ವಿಷಯವೂ ಬರುತ್ತದೆ. ಅವರ ಹಿರಿಯ ಮಗ ವೆಂಕಣ್ಣ ಅನ್ಯಾಯವಾಗಿ ಎಲ್ಲೋ ಹೋಗಿ ಯಾರಿಗೋ ತಲೆ ಒಪ್ಪಿಸಿದ, ಇಲ್ಲೇ ಇದ್ದಿದ್ದರೆ ಮದುವೆಯೋ, ಮುಂಜಿಯೋ, ದೇವಸ್ಥಾನದ ಅರ್ಚನೆಯೋ ಮಾಡಿಕೊಂಡು ನೆಮ್ಮದಿಯಾಗಿರಬಹುದಾಗಿತ್ತು , ಪೆದ್ದ ಮುಂಡೇದು ಎಂದು ಲೊಚಗುಟ್ಟುತ್ತಾರೆ. ವೆಂಕಣ್ಣನನ್ನು, ಅವರಪ್ಪ ಗುಂಡೂಭಟ್ಟರನ್ನು, ಅವರಪ್ಪ, ಅವರಜ್ಜಂದಿರನ್ನೆಲ್ಲಾ ಕಂಡ ಅಶ್ವತ್ಥ ವೃಕ್ಷ ಮತ್ತು ಅದರ ಬುಡದ ಕಲ್ಲಿನಕಟ್ಟೆ ಮೌನವಾಗಿ ಇವರ ಮಾತುಗಳನ್ನು ಕೇಳುತ್ತವೆ.

ಸ್ಟಫಾರ್ಡರು ಕವಿತೆಯನ್ನು ಮುಗಿಸುತ್ತಾರೆ:

ಪ್ರಪಂಚ ಘಟಿಸುವುದು ಎರಡು ಬಾರಿ
ಒಂದು ನಾವೇನು ಕಾಣುತ್ತೇವೋ ಅದು
ನೇರ, ಸರಳ ಮತ್ತು ನಮ್ಮ ಬುದ್ಧಿಯದು.
ಎರಡು, ಪ್ರಪಂಚ ಪ್ರಪಂಚಕ್ಕಾಗಿ ಆಳದಲ್ಲಿ
ತನ್ನ ತೃಪ್ತಿಗಾಗಿ, ತನಗಾಗಿ, ತನ್ನದೇ ಅರ್ಥಕ್ಕಾಗಿ!

ರಾತ್ರಿ ಮಲಗುವ ಮುನ್ನ ಕಿಟಕಿಯ ಪರದೆಯನ್ನು ಸರಿಸುವಾಗ ಮೋಡಗಳ ಮರೆಯಿಂದ ಬಂದ ಚಂದ್ರನ ಬೆಳಕಲ್ಲಿ ಬರೆಯುವ ಟೇಬಲ್ಲಿನ ಮೇಲೆ ಸ್ಟಫಾರ್ಡರ ‘ಈ ಜೀವನವೇ ಹೀಗೆ’ ಕವಿತಾ ಸಂಕಲನ ಕಾಣುತ್ತದೆ. ನಗುಮುಖದ, ಎಂಭತ್ತರ ತನಕದ ತುಂಬುಜೀವನ ನಡೆಸಿದ ಸ್ಟಫಾರ್ಡರ ಮೇಲೆ ಅಕ್ಕರೆ ಬೆಳೆದು ಪುಸ್ತಕವನ್ನು ತಿರುವುತ್ತೇನೆ. ನೇರ ಮೂಗಿನ, ಅಗಲವಾದ ಮತ್ತು ತೀಕ್ಷ ಕಣ್ಣುಗಳ, ಮೇಲೆತ್ತಿ ಬಾಚಿದ, ಇಪ್ಪತ್ತೆಂಟಕ್ಕೇ ಜೀವ ಅರ್ಪಿಸಿದ, ನಾನು ಕಾಣದ ವೆಂಕಣ್ಣನ ಮುಖ ಪುಟಗಳಲ್ಲಿ ಉದ್ಭವವಾಗುತ್ತದೆ.

ನೀರ ಹನಿಯಾಂದು ಸಾರ್ಥಕವಾಗಲು ನಯಾಗರ ಅಥವಾ ಜೋಗದಿಂದಲೇ ಧುಮುಕಬೇಕೇನು? ಕಾಡಿನ ಸಣ್ಣ ತೊರೆಯಾಂದೇ ಸಾಕು. ಧುಮ್ಮಿಕ್ಕುವ ಶಬ್ದ ಸುತ್ತಾ ಸಾವಿರ ಜನಕ್ಕೆ ಕೇಳಲೇಬೇಕೇನು? ತನ್ನ ಒಳಗಿವಿಗಳನ್ನು ಮುಟ್ಟಿದರೂ ಸಾಕು.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X