• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೀಗೊಂದು ಅನಾಥ ಶವ ಸಂಸ್ಕಾರ

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಮಳೆಬಿಲ್ಲನ್ನು ಕಾಂಕ್ರೀಟಿನಲ್ಲಿ ಮಾಡಿ ಕೊಂಡಿ ಕಳೆದುಕೊಂಡಂತೆ ಕಾಣುವ ಭೂಮಿಯ ಎರಡು ತುದಿಗಳಿಗೆ ಅಂಟಿಸಿದಂತೆ ಕಾಣುತ್ತದೆ ಆ ಸೇತುವೆ. ಸೇತುವೆಯ ಮೇಲೆ ಹಾಯುವ ವಾಹನಗಳಿಗೆಲ್ಲಾ ಎದುರು, ಅಕ್ಕ-ಪಕ್ಕ ನೋಡುವ ಜರೂರತ್ತು ಇರುತ್ತದೆಯೇ ಹೊರತು ಸೇತುವೆಯ ಕೆಳಗೇನು ಇದೆ ಎಂದು ನೋಡುವ ಚಪಲವೇಕಿರುತ್ತದೆ? ಸಮತಟ್ಟಾದ ರಸ್ತೆಯ ಮೇಲೆ ವೇಗವಾಗಿ ಬಂದು ಸೇತುವೆ ಹತ್ತಿದೊಡನೆಯೇ ವಾಹನ ಸಣ್ಣದಾಗಿ ನಡುಗಿ ಗಡ್‌ ಗಡ್‌ ಎಂದಾಗಲೇ ಕುಳಿತಿರುವವರ ಯೋಚನಾಲಹರಿಗಳು ಸಿಗ್ನಲ್‌ ಲೈಟಿನಲ್ಲಿ ಕೆಂಪು ಕಂಡಂತೆ ಈ ಲೋಕಕ್ಕೆ ಮರಳುತ್ತವೆ. ‘ಬಸ್ಸಿನಿಂದಿಳಿದೊಡನೆಯೇ ತರಕಾರಿ ಕೊಂಡು ಮನೆಗೆ ಹೋಗಬೇಕು’, ‘ಇವತ್ತು ಸಿನೆಮಾಕ್ಕೆ ಹೋಗೋಣ ಎಂದು ಹೇಳಿದ್ದೆ, ಲೇಟಾಯಿತೋ ಏನೋ’, ‘ಎಲ್ಲದರಲ್ಲೂ ಚುರುಕಾಗಿದ್ದಾಳೆ ಆದರೆ ಲೆಕ್ಕದಲ್ಲಿ ಹಿಂದುಳಿದುಬಿಟ್ಟಿದ್ದಾಳೆ. ಇವತ್ತಿನಿಂದ ಮನೆಯಲ್ಲಿ ಚೆನ್ನಾಗಿ ಕೋಚಿಂಗ್‌ ಕೊಡಬೇಕು’, ‘ಇಷ್ಟೊಂದು ದುಡ್ಡು ಜೇಬಿನಲ್ಲಿ ಉಳಿದಿದೆಯಲ್ಲಾ, ಬ್ಯಾಂಕಿಗೆ ಹೋಗಿ ಕಟ್ಟಿದ್ದರೂ ಆಗುತ್ತಿತ್ತು. ಈ ನಗರದಲ್ಲಿ ಹೀಗೆಲ್ಲಾ ಇಷ್ಟೊಂದು ಹಣವಿಟ್ಟುಕೊಂಡು ಓಡಾಡಬಾರದು’.

ಬಸ್ಸಿನ ಹಿಂದಿರುವ ಟೊಮ್ಯಾಟೋ ತುಂಬಿರುವ ಟ್ರಕ್ಕಿನವನಿಗೆ ಎಷ್ಟು ಹೊತ್ತಿಗೆ ಇದನ್ನು ಅನ್‌ಲೋಡ್‌ ಮಾಡುತ್ತೇನೋ ಎನ್ನುವ ಚಿಂತೆ. ಎಲ್ಲಾ ಕಡೆಗೆ ಹಣಕ್ಕೇ ಬರುತ್ತದೆ! ಅರ್ಧ ಗಂಟೆ ತಡವಾದರೂ ಅಬ್ಬಬ್ಬ! ಅದೆಷ್ಟು ದುಡ್ಡು ಹಿಡಿಯುತ್ತಾನೆ ಬೋ.. ಮಗ. ಅದರ ಹಿಂದಿನ ವ್ಯಾನಿನವನಿಗೆ ಅವಾಂತರವಿಲ್ಲ , ಆದರೆ ಹಿಂದಿನ ಸೀಟಿನಲ್ಲಿರುವವ ತನ್ನ ಬೆವರಿದ ಕೈಗಳಲ್ಲಿ ಸೂಟ್‌ಕೇಸಿನ ಹಿಡಿಯನ್ನು ಒತ್ತುತ್ತಾ ‘ಜಲ್ದಿ ಜಾವೋ ಯಾರ್‌, ದೇರ್‌ ಹೋಗಯಾ’ ಎಂದು ಬಾಲಸುಟ್ಟುಕೊಂಡ ಬೆಕ್ಕಿನಂತೆ ಮತ್ತೆ ಮತ್ತೆ ವಾಚು ನೋಡಿಕೊಳ್ಳುತ್ತಿದ್ದಾನೆ. ಇನ್ನು ಮುಕ್ಕಾಲು ಗಂಟೆಯಲ್ಲಿ ಅವನ ಫ್ಲೈಟ್‌ ಹೊರಡುತ್ತದೆ. ಮೋಟಾರ್‌ಬೈಕಿನಲ್ಲಿ ಹೆಲ್ಮೆಟ್ಟಿನ ಬಿಸಿಯಾಳಗೆ ತಲೆ ಅಡಗಿಸಿಕೊಂಡವನೊಬ್ಬ ಪದೇ ಪದೇ ತಲೆ ಎತ್ತಿ ಆಕಾಶವನ್ನು ನೋಡುತ್ತಾನೆ. ಇವತ್ತು ಮಳೆ ಬಂದರೆ ಆಟ ಕ್ಯಾನ್ಸಲ್‌ ಆಗುತ್ತದೆ. ಆಟ ಕ್ಯಾನ್ಸಲ್‌ ಆದರೆ ಇದ್ದುಬದ್ದಿದ್ದನ್ನೆಲ್ಲಾ ಬಿಟ್ಟು ಟಿವಿಯ ಮುಂದೆ ಕೂರಲು ಮನೆಗೆ ಓಡುತ್ತಿರುವುದಕ್ಕೇ ಅರ್ಥವಿಲ್ಲ. ರಾಘವೇಂದ್ರ ಸ್ವಾಮೀ, ಇವತ್ತೊಂದು ದಿನ ಮಳೆ ಬರಿಸಬೇಡ. ನಾಳೆಯಿಂದ ಏನನ್ನಾದರೂ ಮಾಡಿಕೋ, ನಾನು ಕೇಳುವುದಿಲ್ಲ.

ಮಾರ್ಚ್‌ಫಾಸ್ಟ್‌ನಲ್ಲಿ ಹೊರಟ ಸೈನಿಕರಂತೆ ವಾಹನಗಳು ಆ ಬ್ರಿಡ್ಜನ್ನು ದಾಟುತ್ತಲೇ ಇವೆ. ದೊಡ್ಡದು, ಚಿಕ್ಕದು, ಉದ್ದಬೆನ್ನಿನದು, ಗೋಣುಮೂತಿಯದು, ಹತ್ತು ವರ್ಷ ಹಿಂದಿನ ಮಾಡೆಲ್‌, ನೆನ್ನೆಯಷ್ಟೇ ಮಾರ್ಕೆಟ್‌ಗೆ ಬಂದು ಮಿಸ್‌ವರ್ಲ್ಡ್‌ನಂತೆ ಬಳುಕಾಡುತ್ತಿರುವ ಮಾಡೆಲ್‌, ಎರಡು ಚಕ್ರದ್ದು, ಮೂರು ಚಕ್ರದ್ದು, ನಾಲ್ಕು ಚಕ್ರದ್ದು.... ಯಾವುದೋ ಪ್ರಪಂಚದಿಂದ ಬಂದ ಬಗೆಬಗೆಯ ಜೀವಿಗಳಂತೆ ಕಾಣುತ್ತಾ ಬರೀ ವೇಗದ ಭಾಷೆಯನ್ನು ಮಾತನಾಡುವ ಚಲಿಸುವ ಯಂತ್ರಗಳ ಸಾಲು ಸಾಲು... ಬ್ರಿಡ್ಜ್‌ ಕೆಳಗೆ ನೋಡುವವರು ಯಾರು?

ಅಂತದ್ದೇನಿದೆ ಅಲ್ಲಿ ? ನಿಮ್ಮ ಕಾರನ್ನೋ ಮೊಟಾರು ಬೈಕನ್ನೋ ನಿಲ್ಲಿಸಿ ಹಿಂದಿನವರಿಂದ ಹಿಗ್ಗಾಮುಗ್ಗಾ ಬಯ್ಯಿಸಿಕೊಂಡು ಸೇತುವೆಗೆ ಸರಪಣಿ ಹಾಕಿದಂತೆ ನಿಂತಿರುವ ವಾಹನಗಳನ್ನೆಲ್ಲಾ ಹಾರಿ ದಾಟಿ ಸರ್ಕಸ್‌ ಮಾಡಿಕೊಂಡು ನಿಲ್ಲಲಾರದೇ ನಿಂತು ಬ್ರಿಡ್ಜ್‌ನ ಅಂಚಿಗೆ ಹಾಕಿದ ಕಬ್ಬಿಣದ ಜಾಲರಿಯನ್ನು ಬಲವಾಗಿ ತಬ್ಬಿಕೊಂಡು ಕಾಲ ಹೆಬ್ಬೆರಳ ಮೇಲೆ ದೇಹದ ಭಾರವನ್ನೆಲ್ಲಾ ಹಾಕಿ ಇಣುಕಿದರೆ ಏನು ಕಾಣುತ್ತದೆ?

ಅಲ್ಲೊಂದು ಸೂತಕದ ಮನೆ!

ಕಾಲುವೆಯ ಪಕ್ಕದಲ್ಲಿ ಕುರಿಯ ತುಪ್ಪಟದಂತೆ ಒತ್ತಾಗಿ ಬೆಳೆದಿರುವ ಜೊಂಡಿನ ಮೇಲೆ ಕಂದುಬಣ್ಣದಲ್ಲಿ ಗೆರೆ ಎಳೆದಂತೆ ಕಾಣುತ್ತಿರುವುದು ಏನು? ದಿನದ ವ್ಯವಹಾರಕ್ಕೆ ಬೇಗ ಅಂಜಿ ಹೋಗುವ ಈ ಚಳಿಗಾಲದ ಮುಸ್ಸಂಜೆಯಲ್ಲಿ ಏನದು ಎಂದು ಸ್ಪಷ್ಟವಾಗಿ ಕಾಣುತ್ತಿಲ್ಲವಲ್ಲ? ಕಣ್ಣು ಕಿರಿದಾಗಿಸಿದರೆ ಹೆಚ್ಚು ಬೆಳಕು ನುಗ್ಗಿ ಸ್ಪಲ್ಪ ಸ್ಪಷ್ಟವಾಗುತ್ತದೆ. ಕಿಸೆಯಲ್ಲಿ ಕನ್ನಡಕವಿದ್ದರೆ ಹಾಕಿಕೊಂಡು ನೋಡಬಹುದು. ಏನದು? ಅರೆರೆ! ಹೆಣದಂತೆ ಕಾಣುತ್ತಿದೆಯಲ್ಲಪ್ಪ. ಹೌದು ಹೆಣವೇ!

ಕೀಟ್ಸ್‌ನ ಪದ್ಯದಲ್ಲಿ ಹೇಳುತ್ತಾನಲ್ಲ, ಸೇತುವೆಯ ಕೆಳಗೆ ನದಿಯ ದಂಡೆಯಲ್ಲಿ ಮಲಗಿ ದಿನಗಟ್ಟಲೇ ಅದರ ಜುಳುಜುಳುನಾದವನ್ನು ಕೇಳುವಾಸೆ ಎಂದು, ಹಾಗೆ ಯಾರೋ ಮುಂಜಾನೆಯ ಮಂಜಿನಲ್ಲೇ ಬಂದು ಆಕಾಶಕ್ಕೆ ಮುಖಮಾಡಿ ಮಲಗಿ ಈ ಕಾಲುವೆಯ ಜೋಗುಳವನ್ನು, ಹಕ್ಕಿಪಿಕ್ಕಿಗಳ ಕಿಚಿಪಿಚಿಯನ್ನು ಕೇಳುತ್ತಾ ಚಿತ್ರವಿಚಿತ್ರದ ಹತ್ತಿಯ ಹಾರವಾಗುವ ಮೋಡಗಳ ವೈಖರಿಯನ್ನು ನೋಡುತ್ತಾ ಮಲಗಿರುವ ಸುಖಪುರುಷನೇ? ಅಲ್ಲ, ಅಲ್ಲ, ಅದು ಹೆಣ ಎಂದು ಸುತ್ತ ಮುತ್ತಲ ಹಕ್ಕಿಗಳು, ಮರಗಳ ಮೇಲಿನ ಕೋತಿಗಳು, ಮರಕ್ಕೂ ನೆಲಕ್ಕೂ ನಡುವಿನ ಅಳಿಲುಗಳು, ಪಟ್‌ ಪಟ್‌ ಎಂದು ಒಂದು ಗರಿಕೆಯಿಂದ ಇನ್ನೊಂದಕ್ಕೆ ಹಾರುವ ಮಿಡತೆಗಳು ಎಲ್ಲಾ ಕೂಗಿ ಹೇಳಿವೆ. ‘‘ಇದು ಹೆಣ, ಇದು ಹೆಣ. ಚಂದದ್ದಲ್ಲ. ನಮ್ಮ ಜಾಗ ಸತ್ತವರ ಮನೆಯಾಗಿದೆ. ಸೂತಕದ ಮನೆಯಲ್ಲಿ ಉಣ್ಣಬಾರದು. ನಾವೆಲ್ಲಾ ಬಾಡಿ ಹೋಗಿದ್ದೇವೆ. ಮಕ್ಕಳು ಮರಿಗಳೆಲ್ಲಾ ಬಾಡಿ ಹೋಗಿವೆ. ಆ ದೇಹದ ಕುತ್ತಿಗೆಯನ್ನು ಸೀಳಿರುವ ಚಾಕು ಮಧ್ಯಾಹ್ನವೆಲ್ಲಾ ಸೂರ್ಯನಂತೆಯೇ ಪಳಪಳನೆ ಕೋರೈಸಿ ನಮ್ಮ ಕಣ್ಣನ್ನೆಲ್ಲಾ ಕುರುಡು ಮಾಡಿದೆ. ಬೇಗ ತೆಗೆಯಿರಿ ಇದನ್ನು ಇಲ್ಲಿಂದ’’.

ಸೇತುವೆಯ ತುದಿಯಿಂದ ಇಣುಕು ನೋಡುವ ಜೀವಕ್ಕೆ ಕುತೂಹಲ. ಬಟ್ಟೆಯಿಲ್ಲದೇ ಬಿದ್ದಿರುವ ಅದು ಗಂಡೋ, ಹೆಣ್ಣೋ? ಸರಿಯಲ್ಲ ಬಿಡಿ ಇದು. ಹೆಣಕ್ಕೆ ಯಾಕೆ ಲಿಂಗ? ಗಂಡಾದರೆ ಏನು, ಹೆಣ್ಣಾದರೆ ಏನು? ಅದು ಅಲ್ಲಿ ಮಲಗಿದೆ ಎನ್ನುವುದಷ್ಟೇ ಅಗತ್ಯದ ಸತ್ಯ. ಹೆಣ್ಣಿನ ನೂರಾರು ಭಂಗಿಗಳಂತೆ ಆಕೆಯ ಹೆಣವೂ ಕೆಲವರಲ್ಲಿ ಕಾಮನೆಗಳನ್ನು ಕೆರಳಿಸುತ್ತದಂತೆ! ಶಕ್ತಿಯನ್ನು ಒಲಿಸಲೋಸ್ಕರ ಕೆಲವು ತಾಂತ್ರಿಕರು ಸ್ಮಶಾಣದಲ್ಲಿ ಹೆಣದೊಡನೆಯೇ....ಬಿಡಿ, ಬಿಡಿ. ಅಷ್ಟೊಂದು ಕ್ರೂರವಾಗಿ ಮಾತನಾಡುವ ಅಗತ್ಯವಿಲ್ಲ. ಇಣುಕು ನೋಡುತ್ತಿರುವವನದು ಕೆಟ್ಟ ಕುತೂಹಲ ಅಷ್ಟೆ. ಶತ್ರು ಸೈನಿಕರು ಹತ್ತು ಜನ ನಮ್ಮವರನ್ನು ಅಪಹರಿಸಿ ಕಿವಿ, ಮೂಗು, ಬೆರಳುಗಳು ಮತ್ತು ಶಿಶ್ನವನ್ನು ಕತ್ತರಿಸಿ ಕೊಂದರಂತೆ ಎನ್ನುವಲ್ಲಿ ಶಿಶ್ನದ ಮೇಲೆ ಬೀಳುವ ಒತ್ತಿನಂತಹ ಕುತೂಹಲ. ಮೊದಲು ಕುತೂಹಲ, ಆಮೇಲೆ ಜವಾಬ್ದಾರಿ! ಹೆಣ, ಅಬ್ಬಬ್ಬ ಹೆಣ! ಪೋಲೀಸಿಗೆ ಹೇಳಿ. ಅದೂ ಕೊಲೆ! ಇದೇನು ಬಂತು ಈ ಊರಿಗೆ!

ಭೂಮಂಡಲದ ಸಮಸ್ತ ಮೌನವನ್ನೂ ಕೆಣಕುವಂತೆ ‘ಟ್ರಿಣ್‌ ಟ್ರಿಣ್‌ ಟ್ರಿಣ್‌’ ಎಂದು ಒಂದೇ ಸಮನೆ ಕಿರುಗುಟ್ಟುತ್ತದೆ ಪೋಲೀಸ್‌ ಸ್ಟೇಷನ್ನಿನ ಕರೀಬಣ್ಣದ ಟೆಲಿಫೋನ್‌. ಮೈಮೇಲೆ ಕಾಮಾಲೆ ಹತ್ತಿದವನಂತೆ ಕಾಮಣ್ಣನಾಗಿ ನಾಲ್ಕು ಹೆಣ್ಣುಗಳನ್ನು ಕಿಚಾಯಿಸಿ ಒದೆ ತಿಂದು ಲಾಕಪ್‌ನಲ್ಲಿರುವವ ಸಿಡಿಮಿಡಿಗೊಳ್ಳುತ್ತಾನೆ. ‘ಪೋಲಿಸ್‌ ನಾಯಿಗಳು ಮತ್ತು ಇಲ್ಲಿಯ ತಿಗಣೆಗಳಿಗಿಂತಲೂ ಹೆಚ್ಚು ಕಾಡುವುದು ಈ ದರಿದ್ರದ ಫೋನು. ಮಲಗಕ್ಕೇ ಬಿಡಲ್ಲ’. ರಾತ್ರಿ ಒಂದು ಪೆಗ್‌ ವಿಸ್ಕಿ ಹಾಕಿ ಕರೀ ಬಣ್ಣದ ಟೇಬಲ್ಲಿನ ಮೇಲೆ ಕಾಲುಗಳನ್ನು ಚಾಚಿಕೊಂಡು ಕುರ್ಚಿಯಲ್ಲೇ ನಿದ್ದೆಹೋದ ದಪ್ಪಹೊಟ್ಟೆಯ ಕುಂಬಳಕಾಯಿ ಮುಖದ ಕಾನ್ಸ್‌ಟೇಬಲ್‌ ಗೊಣಗಿಕೊಳ್ಳುತ್ತಾ ಫೋನೆತ್ತಿ ‘ಅಲೋ’ ಎನ್ನುತ್ತಾನೆ. ‘ಏನು? ಎಲ್ಲಿ? ಯೆಣ್ಣೋ, ಗಂಡೋ? ನೀನ್ಯಾಕೆ ಅಲ್ಲಿಗೆಲ್ಲಾ ಓಗಿದ್ದೆ?’ ಕಂದು ಬಣ್ಣದ ಮಾಸಿದ ಪುಸ್ತಕದಲ್ಲಿ ಎಂಟ್ರಿ ಆಗುತ್ತದೆ.

‘‘ನಮ್ಮ ಕಡೆಯಿಂದ ಇಂತವರ್ರು ಸತ್ತಿದರೆ ಇಂತವರ್ರು ಕಾಣೆಯಾಗಿದರೆ ಅಂತ ಎಲ್ಲಿಂದ್ಲೂ ಕಂಪ್ಲೆಂಟ್‌ ಬಂದಿಲ್ಲ. ಯಾರೋ ಬ್ರಿಡ್ಜಿನ್‌ ತುದೀಲಿ ನಿಂತು, ಅಲ್ಯಾಕ್‌ ನಿಂತ್ರಂತೆ ಅವರು? ಎಣ್ಣೆ ಆಕಿದ್ರಂತಾ? ಯೆಣ್ಣೋ ಗಂಡೋ ಸತ್ತಿದೆ ಇಲ್ಲಿ ಅಂದ್ರೆ ಯಾರು ಸತ್ರು ಅಂತ ಬರ್ಕಳದು? ಯಾರು ಸಾಯ್ಸಿದ್ದು ಅಂತ ಬರ್ಕಳದು, ಕಂಪ್ಲೆಂಟ್‌ ಕೊಟ್ರೆ ಸರಿಯಾಗಿ ಕೊಡಬೇಕ್ರಿ, ಎಲಾ ಇವ್ರ, ನಿಮ್ಮ ಎಸರು ಏಳ್ರಿ ಅಂದ್ರೆ ಆಮೇಲೆ ತೊಂದ್ರೆ ಕೊಡ್ತಿರ ಅಂತೀರಲ್ರೀ, ತೊಂದ್ರೆ ಕೊಡಕ್ಕೇನ್ರೀ ನಾವಿಲ್ಲಿರದು? ತಿರುಪತಿಲಿ ನನ್ನ ಗಂಡ ಕಳ್ದೋಗವ್ನೆ ಐದಡಿ ಉದ್ದ ಕಪ್ಪಗವ್ನೆ ಜಲ್ದಿ ಉಡುಕ್ಕೊಡಿ ಅಂದಂಗಾತು ನಿಮ್ದು’’.

ಹೆಂಗಸರ ಸೆರಗೆಳೆದು ಜೈಲು ಸೇರಿರುವವ ಒಮ್ಮೆ ನರಳಿ ‘‘ಈಗ ಸುಮ್ಕೆ ಮಂಕಳ್ರೀ, ಬೆಳಗ್ಗೆ ನೋಡ್ಕಂಡ್ರಾತು’’ ಎಂದು ಬಿಟ್ಟಿ ಉಪದೇಶಾಮೃತವನ್ನು ಸುರಿಸುತ್ತಾನೆ. ಪೋಲೀಸನ ಅಹಂಕಾರವನ್ನು ಚೂರಿಯಲ್ಲಿ ಚುಚ್ಚಿದಂತಾಗುತ್ತದೆ. ‘‘ಬಾಯ್ಮುಚ್ಕಂಡಿರಲೇ ಅಲ್ಕಾ ಸುವರ್‌. ಇನ್ನೊಂದಪಾ ಕಮ್‌ಕಿಮ್‌ ಅಂದ್ರೆ ತೂತಕ್ಕೆಲ್ಲಾ ಮೆಣಸಿನ್‌ ಪುಡಿ ತುಂಬಿ ಏರೋಪ್ಲೇನ್‌ ಅತ್ತುಸ್ತೀನಿ, ನೋಡು ಮಗನೇ’’. ಸ್ತ್ರೀಲೋಲ ಕೈದಿ ಗೊಣಗಿಕೊಳ್ಳುತ್ತಾ ತಿರುಗಿ ಮಲಗಿಕೊಳ್ಳುತ್ತಾನೆ. ಬರೀ ಎಣ ದಪನ್‌ ಮಾಡುಕ್ಕೇ ಲಾಯಕ್ಕು ನೀನು ಎಂದು ಪೋಲೀಸಿನವನಿಗೆ ಕೇಳದಂತೆ ಗೊಣಗಿಕೊಳ್ಳುತ್ತಾನೆ.

ಪೋಲೀಸಿನವನಿಗೆ ‘ದಪನ್‌’ ಮಾಡಲು ಅವಕಾಶ ಕೊಡದಂತೆ ನದಿ ತುಂಬಿ ಹರಿದು ಹೆಣವನ್ನು ಕೊಚ್ಚಿಕೊಂಡು ಹೋಗುತ್ತದೆ. ಭಾರ ತಾಳಲಾರದೆ ಘಟ್ಟದಲ್ಲೆಲ್ಲೋ ಕುಸಿದ ಮೋಡಗಳು ನದಿಯನ್ನು ಹುಚ್ಚೆಬ್ಬಿಸಿ ಹರಿಸಿವೆ. ಪೊಟರೆಯಾಳಗಿಂದ ಇಣುಕಿನೋಡುವ ಹಕ್ಕಿಯ ಮರಿಯಂತೆ ಮಂಗಗಳೆಲ್ಲಾ ಮರದ ತುದಿಗೊಂಬೆಯನ್ನೇರಿ ಮತ್ತೇರಿದ ಹೊಳೆಯ ಅಟ್ಟಹಾಸವನ್ನು ನೋಡುನೋಡುತ್ತಲೇ ಹೆಣಕ್ಕೆ ಒದಗಿದ ಸಂಸ್ಕಾರಕ್ಕೆ ನಿಟ್ಟುಸಿರುಬಿಡುತ್ತವೆ.

ನದಿಯ ಸುಳಿಯ ಗಿರಿಗಿಟ್ಟಲೆಗೆ ಸಿಕ್ಕದ್ದು ಹರಿಸಿದಂತೆ ಹರಿದು, ಓಲಾಡಿಸಿದಂತೆ ಓಲಾಡಿ, ತುಳುಕಿಸಿದಂತೆ ತುಳುಕಾಡಿ ಸ್ಥಿರತೆಯಿಂದ ನಿರಂತರ ಚಲನೆಯನ್ನು ಪಡೆಯುತ್ತದೆ, ಗ್ರಹ ಉಪಗ್ರಹ ಧೂಮಕೇತುಗಳಂತೆ. ಬಗ್ಗಡ ನೀರಿನಲ್ಲಿ ಬಿದ್ದು ಹಸುರು ನೀರಿನಲ್ಲಿ ತೇಲಿ ಊರಿನ ಸಮಸ್ತ ಕೊಳಚೆಯಂತೆ ಕೊನೆಯಲ್ಲಿ ನೀಲಿ ನೀರಿನಲ್ಲಿ ತೇಯ್ದು ಹೋಗುತ್ತದೆ. ಯಾವುದೋ ನಕ್ಷತ್ರ ಮೀನಿಗೆ, ಯಾವುದೋ ಆಕ್ಟೋಪಸ್‌ಗೆ, ಯಾವುದೋ ಶಾರ್ಕ್‌ಗೆ ಕೈ ಕಾಲು, ಕರುಳು, ಜಠರ, ಮೆದುಳ ಮೆತ್ತಗಿನ ನರಗಳನ್ನೆಲ್ಲಾ ಕೊಟ್ಟು ಹಗುರಾಗಿ ಆಹಾರವಾಗಿ ಅವುಗಳ ಮಲವಾಗಿ ಮೂತ್ರವಾಗಿ ಸಿಂಬಳವಾಗಿ ತತ್ತಿಯಾಗಿ ತತ್ತಿಯಾಳಗಿನ ಲೋಳೆಯಾಗಿ ಲೋಳೆಯಾಳಗಿನ ಹಳದಿಯಾಗಿ ಹಳದಿಯಾಳಗಿನ ಜೀವವಾಗಿ ನೀರಲ್ಲಿ ನೀರಾಗಿ ಸೂರ್ಯನೆದುರಿಗೆ ಆವಿಯಾಗಿ ಆವಿಗೆ ಆವಿ ಸೇರಿ ಆನೆಯಂತಹಾ ಮೋಡವಾಗಿ ...

***

ಕುರುಚಲು ಗಡ್ಡ ಜುಂಗಿನಂತಾ ಕೂದಲು ಹರಕು ಶರ್ಟಿನವ ಕಾಕನ ಹೋಟೆಲ್‌ನಲ್ಲಿ ಚಾ ಕುಡಿದು ‘ನಾಳೆ ಕೊಡ್ತೀನಿ, ಬರ್ಕಂಡಿರು’ ಎಂದಂದು ಗಲ್ಲದಲ್ಲಿ ಕುಳಿತವನಿಂದ ಹೀನಾಮಾನ ಬೈಯಿಸಿಕೊಂಡು ಅದೇನೂ ತನಗೆ ತಟ್ಟಲೇ ಇಲ್ಲವೆನ್ನುವಂತೆ ಮೆಲ್ಲಗೆ ಹೊರಗೆ ಹೆಜ್ಜೆ ಹಾಕುತ್ತಾನೆ. ಇದೆಂತಹ ಮೋಡ! ಈಗಲೋ ಆಗಲೋ ಸುರಿಯುತ್ತದೆ. ಮೊನ್ನೆ ಬ್ರಿಡ್ಜಿನ ಕೆಳಗೆ ಸತ್ತ ‘ಅದರ’ ನೆನಪಾಗುತ್ತದೆ. ಯಾರಿವನು? ‘ಅದಕ್ಕೆ’ ಏನಾಗಬೇಕಿವನು? ಸ್ನೇಹಿತನೋ, ಗಂಡನೋ, ಒಂದೇ ಸಿಗರೇಟನ್ನು ಒಟ್ಟಿಗೇ ಸೇದಿದವರೋ, ಒಂದೇ ಹಾಸಿಗೆಯನ್ನು ಒಟ್ಟಿಗೆ ಕ್ರಮಿಸಿದವರೋ? ಅಥವಾ ‘ಅದನ್ನು’ ಕೊಂದವನೋ? ಸಿಗರೇಟಿನಿಂದ ಅದರ ಕತ್ತಿನ ಸುತ್ತಾ ಸುಟ್ಟವನೋ? ಯಾರು ಯಾರೋ? ಕಾನೂನು ರೀತ್ಯಾ ಸತ್ಯವಾಗದ್ದನ್ನು ಮಾತನಾಡಬಾರದು ನಾವು.

ಸಿಗರೇಟಿಗೆ ಕಿಡಿ ತಾಗಿಸುತ್ತಾನೆ. ಹೊಗೆ ಉಂಗುರದಂತೆ ಗಾಳಿಯಲ್ಲಿ ಮೇಲೇರುತ್ತದೆ. ಪ್ರತಿಕ್ರಿಯೆ ಎಂಬಂತೆ ಪಟ್‌ ಪಟ್‌ ಎಂದು ಎರಡು ಹನಿ ಮೇಲಿನಿಂದ ಉದುರುತ್ತದೆ. ಟಪ್‌ ಟಪ್‌ ಟಪ್‌ ದಪ್ಪ ದಪ್ಪ ಹನಿಗಳು. ಒಂದು ಹನಿ ಸಿಗರೇಟಿನ ಕಿಡಿಯನ್ನು ಆರಿಸುತ್ತದೆ. ನೋಡು ನೋಡುತ್ತಲೇ ಕಾಲರಿನ ಮೇಲೆ, ಕುತ್ತಿಗೆಯ ಮೇಲೆ, ತಲೆಯ ಮೇಲೆ, ಬೆನ್ನಿನ ಮೇಲೆ ‘ಟಪ್‌ ಟಪ್‌ ಟಪ್‌ ಟಪ್‌ ಟಪ್‌’ ಧಾರಾಕಾರ ಮಳೆ!

ಸುರಿದ ಮಳೆ ನದಿಯನ್ನು ಮತ್ತೂ ಹುಚ್ಚೆಬ್ಬಿಸುತ್ತದೆ. ಮತ್ತೊಂದಿಷ್ಟು ಅನಾಥ ದೇಹಗಳಿಗೆ ಸಂಸ್ಕಾರ ಕಾಣಿಸುತ್ತದೆ.

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more