• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕವಿತೇ, ಹೇಳು ನಿನ್ನ ಸ್ವರೂಪವೇನು?

By Staff
|
M.R. Dattatri ಎಂ.ಆರ್‌. ದತ್ತಾತ್ರಿ,

ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ

Dattathri_M_R@yahoo.com

ಕನ್ನಡದ ನವ್ಯಕವಿಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಡಾ. ಬಿ.ಸಿ. ರಾಮಚಂದ್ರಶರ್ಮರದು ಯಾವಾಗಲೂ ನೇರಮಾತು. ಸರಿ, ತಪ್ಪು, ಜಾಣ್ಮೆ, ನಯ ನಾಜೂಕುಗಳ ಜರಡಿಯಲ್ಲಿ ಸ್ವಂತ ಅಭಿಪ್ರಾಯ ಜಾರಿಹೋಗದಂತೆ ಕಾಪಾಡಿಕೊಂಡು ಅದನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವಲ್ಲಿ ಯಾವ ಸಂಕೋಚವನ್ನೂ ತೋರದವರು. ಈ ರೀತಿಯ ನೇರ ಮಾತುಗಳು ಒಮ್ಮೊಮ್ಮೆ ವಿವಾದದ ಸುಳಿಯಲ್ಲಿ ದೂಡುವವಾದರೂ ತನ್ನ ಆತ್ಮಚರ್ಯೆಗೆ ಅನುಗುಣವಾಗಿ ನಡೆಯುವ ಈ ವ್ಯಕ್ತಿತ್ವ ಸಮಾಜದೆಡೆಗೆ ಬಲು ಪ್ರಾಮಾಣಿಕವಾದದ್ದು ಎನ್ನುವಲ್ಲಿ ಎರಡು ಮಾತಿಲ್ಲ. ಬರೀ ಕನ್ನಡ ಕನ್ನಡ ಎಂದು ರಸ್ತೆ ಬದಿಯ ಹೋರಾಟವಾದರೆ ಸಾಲದು, ಬದಲಾಗಿ ಭಾಷೆಯ ಶ್ರೀಮಂತಿಕೆ ಹೊರಗಿನವರನ್ನು ಮುಟ್ಟಬೇಕೆಂದರೆ ಇಲ್ಲಿಯ ಅತ್ಯುತ್ತಮ ಸಾಹಿತ್ಯ ಭಾಷಾಂತರವಾಗಿ ಹೊರಗಿನವರನ್ನು ತಲುಪಬೇಕು ಎಂದು ಬಾಯಿಮಾತಿಗೆ ನಿಲ್ಲದೆ ಸ್ವತಃ ಆ ಕಾರ್ಯದಲ್ಲಿ ತೊಡಗಿಕೊಂಡವರು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅವರು ತಂದ ಅನುವಾದಗಳನ್ನು ಗಮನಿಸಿದರೆ, ಸಂಸ್ಕೃತಿ ಮತ್ತು ಪ್ರಾದೇಶೀಕತೆಗೆ ಅನುಗುಣವಾಗಿ ಮತ್ತು ಕಾಲ ಮತ್ತು ಪರಿಸರಕ್ಕೆ ತಕ್ಕನಾಗಿ ಕಂಡುಕೊಂಡ ಬದಲಾವಣೆಗಳ ಸೂಕ್ಷ್ಮತೆಗಳಿಂದಾಗಿ ಕನ್ನಡ ಕಾವ್ಯ ಪ್ರಪಂಚಕ್ಕೆ ಅಭಿವ್ಯಕ್ತಿಯ ಹೊಸದಾರಿಗಳನ್ನು ನಿರ್ಮಿಸಿಕೊಟ್ಟವು ಅವು.

ಶರ್ಮರ ಮತ್ತೊಂದು ವಿಶೇಷವೆಂದರೆ ಸಂಭಾಷಣೆಗೆ ನಿಲ್ಲಲು ಹಿರಿಯ ಕಿರಿಯ ಎಂಬ ಭೇದಭಾವವನ್ನು ತೋರದಿರುವುದು. ಈ-ಮೈಲ್‌ಗಳಿಗೆ ಉತ್ತರಿಸುವ ಕೆಲವೇ ಕೆಲವು ಹಿರಿಯ ಸಾಹಿತಿಗಳಲ್ಲಿ ಇವರೊಬ್ಬರು.

Dr. Ramachandra Sharmaಕಾವ್ಯದ ಧರ್ಮವೇನು? ಕವಿತೆಯ ಲಕ್ಷಣಗಳೇನು ಎಂಬ ವಿಚಾರದಲ್ಲಿ ನನಗೂ ರಾಮಚಂದ್ರ ಶರ್ಮರಿಗೂ ನಡೆದ ಸಂಭಾಷಣೆಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ. ಹೀಗೆ ಮಾಡುವುದರಿಂದ ಸಾಹಿತ್ಯಾಸಕ್ತರ ಚರ್ಚೆಗೆ ಇದು ಗ್ರಾಸವಾಗಿ ಇನ್ನೂ ಅನೇಕ ಹೊಸ ವಿಷಯಗಳು, ಕೋನಗಳು ಕಾಣಿಸಿಕೊಳ್ಳಬಹುದು ಎನ್ನುವ ಶರ್ಮರ ಅಭಿಲಾಷೆಯ ಮೇರೆಗೇ ಇದನ್ನು ಇಲ್ಲಿ ಬರೆಯುತ್ತಿದ್ದೇನೆ. ಕವಿತೆಯ ಸ್ವರೂಪದ ಕುರಿತಾಗಿ ಶರ್ಮರ ಅಭಿಪ್ರಾಯವನ್ನು ನಾನು ಒಪ್ಪಲಿಲ್ಲ. ಒಮ್ಮೊಮ್ಮೆ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡಿರುವುದೂ ಅರೋಗ್ಯಕ್ಕೆ ಒಳಿತು ಎಂದು ಅವರೇ ನನ್ನನ್ನು ಸಮಾಧಾನ ಪಡಿಸಿದರು.

ಛಂದಸ್ಸು, ಪ್ರಾಸ ಮತ್ತು ಲಯಕ್ಕೆ ಪದ್ಯ ಎಷ್ಟು ಬದ್ಧವಾಗಿರಬೇಕು ಎನ್ನುವಲ್ಲಿ ಶರ್ಮರ ಅಭಿಪ್ರಾಯ ಹೀಗಿದೆ:

‘‘ರಾಯ್‌ ಫುಲರ್‌ (1912-1991) ಎನ್ನುವ ಇಂಗ್ಲಿಷ್‌ ಕವಿಯ Translation ಎನ್ನುವ ಕವಿತೆಯ ಸಾಲುಗಳು ಹೀಗಿವೆ:

ಕೈಲಾಸಕ್ಕೂ ಈಗ ಕಾಡುಜನಗಳ ಲಗ್ಗೆ,

ಪದ್ಯ ಗದ್ಯಗಳ ನಡುವಿನ ಭೇದ ಮಣ್ಣು ಪಾಲು

(ಅನುವಾದ:ರಾಮಚಂದ್ರ ಶರ್ಮ)

ನನ್ನ ಇವತ್ತಿನ ವಿಷಾದವೂ ಅದೇ. ಜೊತೆಗೆ ಪದ್ಯ-ಗದ್ಯಗಳ ವ್ಯತ್ಯಾಸವನ್ನು ಮೀರಿ ಕಾವ್ಯರಚನೆ ಮಾಡುತ್ತಿರುವ ಈ ಕಾಲದ ಕವಿಗಳ ನಡುವೆ ನಾನೊಬ್ಬ ಪಳೆಯುಳಿಕೆಯಾಗಿ, ಮಡಿವಂತನಾಗಿ, ಉಳಿದುಬಿಟ್ಟಿದ್ದೇನೋ ಅನ್ನುವ ಅನುಮಾನ.

ಪ್ರತಿಯಾಂದು ಸಾಹಿತ್ಯಪ್ರಕಾರಕ್ಕೂ ಅದರದೇ ಒಂದು ಧರ್ಮವಿದೆ. ಗದ್ಯ ಸೊಗಸಾಗಿ ಮಾಡಬಹುದಾದ ಕೆಲಸವನ್ನು ಪದ್ಯ ಮಾಡುವ ಪ್ರಯತ್ನ ಮಾಡಬಾರದು ಅನ್ನುವುದು ನನ್ನ ನಂಬಿಕೆ. ಒಳ್ಳೆಯ ಗದ್ಯಕ್ಕೆ ಅದರದೇ ಆದ ಒಂದು ಲಯವಿದೆ ಅನ್ನುವ ಮಾತನ್ನೂ ನಾನು ಒಪ್ಪುವೆನಾದರೂ, ಆ ಲಯ ಪದ್ಯದ ಲಯಕ್ಕಿಂತಾ ಭಿನ್ನ ಅನ್ನುವುದು ನನ್ನ ವಾದ. ಲಯಬದ್ಧವಾದ ಕವನಗಳನ್ನು ಹಾಡಾಗಿಸುವುದು ಸಮ್ಮತವಾದರೂ ಹಾಡಾಗಲೆಂದೇ ಕವನಗಳನ್ನು ಕಟ್ಟುವ ಬಗ್ಗೆ ಅಥವಾ ಸಂಗೀತ ನಿರ್ದೇಶಕ ಕೊಟ್ಟ ಮಟ್ಟಿಗೆ ಅನುವಾಗುವಂತೆ ಪದಗಳನ್ನು ಜೋಡಿಸಿ ಅದನ್ನು ಕಾವ್ಯವೆಂದು ಕರೆಯುವುದರ ಬಗ್ಗೆ ಇರುವ ನನ್ನ ನಿಲುವಿನಿಂದ ನನ್ನ ಕೆಲವು ಕವಿಮಿತ್ರರ ನಡುವೆ ಬಹಿಷ್ಕೃತನಾಗಿರುವ ನಾನು ಈಗ ಪದ್ಯ ಗದ್ಯಗಳ ನಡುವೆ ಇರಬೇಕಾದ ವ್ಯತ್ಯಾಸದ ಬಗ್ಗೆ ಮಾತನಾಡಿ ಇನ್ನಷ್ಟು ಅಪ್ರಿಯನಾಗುವ ಖೇದವಿದೆ’’.

ರಾಮಚಂದ್ರ ಶರ್ಮರೊಡನೆ ನನ್ನ ಭಿನ್ನಾಭಿಪ್ರಾಯವಿರುವುದು ಈ ಸಾಹಿತ್ಯ ಪ್ರಕಾರದ ಧರ್ಮದಲ್ಲಿಯೇ. ಪ್ರತಿಯಾಂದು ಸಾಹಿತ್ಯಪ್ರಕಾರಕ್ಕೂ ಅದರದೇ ಧರ್ಮವಿದೆ ಎನ್ನುವುದನ್ನು ನಾನು ಖಂಡಿತಾ ಒಪ್ಪುತ್ತೇನೆ. ಆದರೆ ಧರ್ಮದ ಗುಣಲಕ್ಷಣಗಳು ಮಾತ್ರಾ ವಿವಾದಾಸ್ಪದ. ನವ್ಯದ ಉತ್ಕೃಮಣದ ದಿನಗಳಲ್ಲಿ ಅದು ಪ್ರಾಸ ಛಂದಸ್ಸು ಪದ ಬಳಕೆಯಿಂದ ಹಿಡಿದು ಪದ್ಯದ ಉದ್ದಳತೆ ಆಳ ಅಗಲ ಮತ್ತು ಅತಿ ಮುಖ್ಯವಾಗಿ ವಸ್ತುವಿನಲ್ಲೂ ಹೊಸತನವನ್ನು ಕಂಡುಕೊಳ್ಳುವಾಗ ನವ್ಯಕ್ಕಿನ್ನೂ ಚಾಚಿಕೊಳ್ಳದ ಅನೇಕ ಹಿರಿಯ ಕವಿಗಳಿಗೂ ಇದು ‘ಕೈಲಾಸಕ್ಕೆ ಲಗ್ಗೆ ಹಾಕಿದ ಕಾಡುಜನರ’ ಸಮಾಚಾರದಂತೇ ಕಂಡಿರಬೇಕು. ಆದರೀಗ, ನವ್ಯ ಮತ್ತು ನವ್ಯದ ಕಾವ್ಯದ ಪರಿಯನ್ನು ಕನ್ನಡ ಸಾಹಿತ್ಯ ಒಪ್ಪಿಕೊಂಡ ಮೇಲೆ ‘ಈ ಕಾಡುಜನರೇ’ ದೈವತ್ವವನ್ನು ಪಡೆಯಲಿಲ್ಲವೇ?

ವಾಲ್ಟ್‌ ವ್ಹಿಟ್‌ಮನ್‌ನ ಮುಕ್ತ ಛಂದಸ್ಸಿನ ಪದ್ಯಗಳನ್ನು ಕುರಿತು ಇಂಗ್ಲಿಷ್‌ನ ಹೆಸರಾಂತ ಕವಿ ರಾಬರ್ಟ್‌ ಫ್ರಾಸ್ಟ್‌ ಇವು ‘ನೆಟ್‌ ಇಲ್ಲದೇ ಟೆನ್ನಿಸ್‌ ಆಡಿದಂತೆ’ ಎಂದು ಟೀಕಿಸಿದ್ದ. ಈ ಒಂದು ಹೇಳಿಕೆಯಲ್ಲಿ ಎಷ್ಟೊಂದು assumptionsಗಳಿವೆ ನೋಡಿ:

1. ವ್ಹಿಟ್‌ಮನ್‌ನ ‘ಆಟ’ವನ್ನು ಪೂರ್ವಗ್ರಹಪೀಡಿತವಾಗಿ ಟೆನ್ನಿಸ್‌ಗೆ ಸೇರಿಸಿದ್ದು.

2. ನೆಟ್‌ ಇಲ್ಲದೇ ಆಡುವ, ಉದಾಹರಣೆಗೆ ಕ್ರಿಕೆಟ್‌, ಹಾಕಿ, ಕಬ್ಬಡಿಯಂತಹ ಆಟ ಅದು ಆಗುವ ಸಾಧ್ಯತೆ ಇದೆ ಎಂಬುದನ್ನು ನಿರ್ಲಕ್ಷಿಸಿದ್ದು.

3. ಆಟಕ್ಕಿಂತಾ ಅದರ setupಗೆ, ಅಂಕಣಕ್ಕೆ, ಅಂಕಣದ ಅಲಂಕಾರಕ್ಕೆ ಅತಿ ಮಹತ್ವವನ್ನು ನೀಡಿದ್ದು.

ಇವೆಲ್ಲದರ ಮಧ್ಯೆ ರಾಬರ್ಟ್‌ ಫ್ರಾಸ್ಟ್‌ನ ಈ ಹೇಳಿಕೆ ಪರ್ಯಾಯ ಅರ್ಥವಾಗಿ ನಮಗೆ ಸಾಹಿತ್ಯದ ವಿಶಾಲತೆಯನ್ನು ತೋರಿಸುತ್ತದೆ. ಒಂದು ಸಮುದ್ರದಲ್ಲಿ ಇರಬಹುದಾದ ಅಸಂಖ್ಯಾತ ಜಲಚರಗಳ ಬಗೆಯಂತೆ ಸಾಹಿತ್ಯ ತನ್ನ ಚೂರು ಪಾರು ಬದಲಾವಣೆಗಳೊಂದಿಗೇ ಒಂದು ಬೇರೇ ಥರದ ಬೇರೇ ಪ್ರಬೇಧದ ಬೇರೇ ಜೀವಿಯಂತೆ ನಿಲ್ಲಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದೆ. ಸುಂದರವಾದ ನಕ್ಷತ್ರಮೀನೇ ಜಲಚರಗಳ ಪ್ರಾಥಮಿಕ ಗುಣಧರ್ಮ ಮತ್ತು ನಕ್ಷತ್ರಮೀನಿನ ಹೊರತಾಗಿ ಸ್ವಲ್ಪ ಬದಲಾವಣೆಗಳನ್ನು ಒಪ್ಪಬಹುದಾದರೂ ‘ಅತಿ ವಿಕಾರ’ವಾಗಿ ಕಾಣುವ ಶಾರ್ಕ್‌ಗಳು ಯಾವುದೇ ತರದಲ್ಲೂ ನಕ್ಷತ್ರಮೀನಿಗೆ ಹೊಂದುವುದಿಲ್ಲ , ಹಾಗಾಗಿ ಜಲಚರದ ಲಕ್ಷಣಗಳೇ ಅದಕ್ಕಿಲ್ಲ ಎನ್ನಲಾದೀತೇ?

ನನ್ನ ಅಭಿಪ್ರಾಯದಲ್ಲಿ ಪದ್ಯ ಗದ್ಯದಿಂದ ಬೇರೆಯಾಗುವ ಒಂದು ಮಾರ್ಗವೆಂದರೆ ಅದು ಓದುಗನನ್ನು ಮುಟ್ಟುವ ಬಗೆ. ತೀವ್ರವಾದ ಭಾವನೆಗಳು ಮಿಂಚಿನ ವೇಗದ ಪ್ರಭಾವಕ್ಕಾಗಿ ಗದ್ಯಕ್ಕಿಂತಾ ಹೆಚ್ಚಾಗಿ ಪದ್ಯವನ್ನು ಆಶ್ರಯಿಸುತ್ತವೆ. ಕೆಲವೇ ಕೆಲವು ಪದಪುಂಜಗಳು ಏನೆಲ್ಲಾ ಮಾಡಿ ಮುಗಿಸುತ್ತವೆ! ಪದ್ಯ ಒಂದು ರೀತಿಯಲ್ಲಿ ಸ್ಟ್ರಾಂಗ್‌ ಆದ ಆಸಿಡ್‌ನಂತೆ. ಒಂದು ಹನಿ ಸಾಕು ಆಳವಾಗಿ ಕೊರೆಯಲು. ಗದ್ಯ ನಿಂಬೆಯ ರಸದಂತೆ. ಅದೇ ಆಸಿಡ್‌ನ ಒಂದು ಅವತಾರವಾದರೂ ಪರಿಣಾಮ ನಿಧಾನ. ಪದ್ಯದ ಈ ‘ಆಸಿಡ್‌ ಪರಿಣಾಮ’ ಯಾವುದರಿಂದ ಅದಕ್ಕೆ ಸಾಧ್ಯವಾಯಿತು? ಪದಗಳೇ, ಸಾಲುಗಳೇ, ಛಂದಸ್ಸೇ, ಪ್ರಾಸಸಹಿತವೇ, ಪ್ರಾಸರಹಿತವೇ, ಲಯಬದ್ಧತೆಯೇ...ಯಾವುದು? ಇವುಗಳಲ್ಲಿ ಅನೇಕ ಲಕ್ಷಣಗಳನ್ನು ಕಳೆದುಕೊಂಡವೂ ಕೂಡ ಅನೇಕ ಭಾರಿ ನಮ್ಮನ್ನು ಹಿಡಿದು ನಿಲ್ಲಿಸಿಲ್ಲವೇನು? ಯಾವುದೋ ಒಂದು ‘ಪ್ರಾಣ’ವು ಪದ್ಯದಲ್ಲಿ ಕುಳಿತು ಓದುಗನ ಎದೆಯನ್ನು ತಟ್ಟುತ್ತದೆ. ಅದ್ಯಾವುದು?

ಇಂಗ್ಲಿಷ್‌ನಲ್ಲಿ Prose-Poetry ಎನ್ನುವ ಒಂದು ಪ್ರಭೇದವಿದೆ. ಭಾರತೀಯ ಭಾಷೆಗಳಲ್ಲಿ ಬೆಂಗಾಲಿ ಇದನ್ನು ಬಹಳ ಚೆನ್ನಾಗಿ ತನ್ನದಾಗಿಸಿಕೊಂಡಿದೆ. ಉದಾಹರಣೆಗೆ ಅರುಣ್‌ ಮಿತ್ರರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿತಾಸಂಕಲನದಿಂದ ಆಯ್ದ ಈ ಕೆಳಗಿನ ‘ಪದ್ಯ’ವನ್ನು ನೋಡಿ:

The Rain

Fine grains of rain drizzle through the window, come, I was terribly trapped by a wall, my hefty and stout body reached the roof through the layers of words. Mothionless, I sat on the chair, my monstrous fingers were scraping through the letters and my thoughts were dangling from the beams. How far is the odour of the soil? Where is that furrowed, active and uneven pairs of hands, how far is it? There was the furniture; the books, the calender, the lamp, the cigarette and the matches all in a perfect array. My past, present and the future were all in those slots, in these lines or in those, what an indelible mark. All is hazy now, with the spray of water on them, on my body, too, the dry chalk lines on my body disappear, come, melt me, O Rain.

(ಬೆಂಗಾಲಿಯಿಂದ ಇಂಗ್ಲಿಷ್‌ಗೆ ಅನುವಾದ - ಸುರಭಿ ಬ್ಯಾನರ್ಜಿ, ಪುಸ್ತಕ The quest goes on)

ಮಳೆಯನ್ನು ಪ್ರತೀಕವಾಗಿರಿಸಿ ಬದುಕನ್ನು ನಾನಾ ಕೋನಗಳಲ್ಲಿ ಶೋಧಿಸುವ ಅನೇಕ ಉತ್ತಮ ಬರಹಗಳಲ್ಲಿ ಒಂದು ಇದು. ಗದ್ಯದಂತೆಯೇ ಬರೆಸಿಕೊಳ್ಳುವ ಇದು ಪದ್ಯದಷ್ಟೇ ಪರಿಣಾಮಕಾರಿ. ಹಾಗಾಗಿ ಯಾರೂ ಇದನ್ನು ಗದ್ಯದ ಸಾಲಿಗೆ ಸೇರಿಸಲಾರರು. ಇಲ್ಲಿ ಇದನ್ನು ಪದ್ಯವಾಗಿಸಲು ಕೆಲಸ ಮಾಡಿದ್ದಾದರೂ ಏನು?

ಸಂಗೀತಕ್ಕಾಗಿ ಬರೆದದ್ದೇ ಅಥವಾ ಬರೆದದ್ದು ಸಂಗೀತವಾಯಿತೋ ಅನ್ನುವುದು ಮುಖ್ಯವಲ್ಲ. ಸಂಗೀತದ ನೆಲೆಯಲ್ಲಿ ಸಾಹಿತ್ಯವನ್ನು ಹುಡುಕುವವರನ್ನೋ, ಸಾಹಿತ್ಯದ ನೆಲೆಯಲ್ಲಿ ಸಂಗೀತವನ್ನು ಅರಸುವವರನ್ನೋ ಅದು ಮುಟ್ಟಿದರೆ ಬರೆದವನ ಉದ್ದೇಶ (ಹಾಗೇನಾದರೂ ಇದ್ದರೆ) ಅದು ಸಾರ್ಥಕವಾದಂತೆ, ಅಲ್ಲವೇ? ಪ್ರಪಂಚವನ್ನೇ ಮೆಚ್ಚಿಸುವ universal ಸಾಹಿತ್ಯವೇನಾದರೂ ಇದೆಯೇ?

‘ಕವಿತೆಯ ಸ್ವರೂಪವೇನು? ಯಾವುದು ಕವಿತೆ, ಯಾವುದಲ್ಲ’ ಎನ್ನುವ ಪ್ರಶ್ನೆ , ‘ಈ ಲೋಕವನ್ನು ಹೊರತಾಗಿ ಜೀವಿಗಳಿವೆಯೇ? ಇದ್ದರೆ ಎಷ್ಟು ಲೋಕಗಳಲ್ಲಿವೆ?’ ಎಂದು ಕೇಳಿದಷ್ಟೇ ವೈಶಾಲ್ಯತೆಯನ್ನು ಹೊಂದಿರುವ ಪ್ರಶ್ನೆ. ಯಾವುದೂ ಸಂಪೂರ್ಣ ಸರಿ ಉತ್ತರವಲ್ಲ , ಯಾವುದೂ ಸಂಪೂರ್ಣ ತಪ್ಪಲ್ಲ. ಹಾಗಾಗಿ, ನನ್ನ ಅಭಿಪ್ರಾಯವನ್ನು ನಾನು ಎಷ್ಟು ಗೌರವಿಸುತ್ತೇನೋ ಹಾಗೆಯೇ ಕಾವ್ಯದ ಸ್ವರೂಪದ ಬಗ್ಗೆ ರಾಮಚಂದ್ರ ಶರ್ಮರ ಅಭಿಪ್ರಾಯವೂ ನನಗೆ ಅಷ್ಟೇ ಗೌರವಾನ್ವಿತವಾದದ್ದು.

ಆತಂಕ ಕೂಡ ನನಗಿದೆ. ಸಾಹಿತ್ಯದ ಇಷ್ಟು ಅನಂತ ಸ್ವರೂಪದಲ್ಲಿ , ನಮ್ಮ ಕಲ್ಪನೆಯ ಮಿತಿಯಲ್ಲೇ ನಡೆಯುವ ಅದರ ಮೇಲಿನ ಚರ್ಚೆಗಳು ಕುರುಡನೊಬ್ಬ ಆನೆಯ ಕಾಲನ್ನು ತಬ್ಬಿ ‘ಇದು ಕಂಬವಲ್ಲದೇ ಮತ್ತೇನೂ ಅಲ್ಲ’ ಎಂದು ದಿಗಂತಗಳನ್ನು ಮುಟ್ಟುವಂತೆ ಕೂಗುವ ವ್ಯರ್ಥ ಪ್ರಜ್ಞೆಯೇ ಎಂದು.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more