ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಕಿನ ವೇಗಕ್ಕೊಂದು ಸವಾಲು

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ಸ್ವಿಟ್ಜರ್‌ಲ್ಯಾಂಡ್‌ನ ಬೆರ್ನ್‌ ಎನ್ನುವ ಊರಿನ ಪೇಟೆಂಟ್‌ ಆಫೀಸಿನಲ್ಲಿ ಅಲ್ಬರ್ಟ್‌ ಐನ್‌ಸ್ಟೈನ್‌ ಎನ್ನುವ ಕಾರಕೂನನೊಬ್ಬ ತನ್ನ ಕೆಲಸದ ರಾಶಿ ರಾಶಿ ಕಾಗದದ ನಡುವೆ ಅವಕಾಶ ಸಿಕ್ಕಾಗಲೆಲ್ಲಾ ಯಾರಿಗೂ ಕಾಣದಂತೆ ಮಾಡಿಕೊಳ್ಳುತ್ತಿದ್ದ ಲೆಕ್ಕಾಚಾರಗಳು ಬರೆದುಕೊಳ್ಳುತ್ತಿದ್ದ ಟಿಪ್ಪಣಿಗಳು ಭೌತಶಾಸ್ತ್ರದ ನಮ್ಮ ನಂಬಿಕೆ ಮತ್ತು ಸಂಶೋಧನೆಗಳನ್ನೇ ಅಲುಗಾಡಿಸಿಬಿಟ್ಟವು.

ಪುಟಗಟ್ಟಲೆ ಹರಿಯುವ ವಿಜ್ಞಾನದ ದೊಡ್ಡ ದೊಡ್ಡ ಈಕ್ವೇಷನ್‌ಗಳ ಮಧ್ಯೆ E=mC2 ಎನ್ನುವ ಪುಟಾಣಿ ಫಾರ್ಮುಲಾ ಭಯಂಕರವಾದ ವಿಸ್ಫೋಟವನ್ನೇ ಮಾಡಿತು. ಅದೂ ಎಂತಹಾ ಸ್ಫೋಟ? ಒಂದು ಗ್ರಾಂ ಸಂಚಯದ ವಸ್ತು ಒಂದು 20,000 TNT ಸ್ಫೋಟಕ್ಕೆ ಸಮನಾದ ಚೈತನ್ಯವನ್ನು ಹೊಂದಿದೆ ಎಂದು !

Albert Einsteinಜನ ನಂಬಲಿಲ್ಲ. ನಗುನಗುತ್ತಲೇ ಐನ್‌ಸ್ಟೈನ್‌ ಸಾಮಾನ್ಯ ಜನಕ್ಕೊಂದು ಸಾಮಾನ್ಯ ಮಟ್ಟದ ಉದಾಹರಣೆಯನ್ನು ಕೊಟ್ಟ. ‘ಇದು ಒಂದು ರೀತಿಯಲ್ಲಿ ವಿಪರೀತ ಹಣವನ್ನು ಗುಪ್ತವಾಗಿ ಹೊಂದಿರುವ ಜಿಪುಣ ಶ್ರೀಮಂತನಂತೆ. ಅವನು ಅದನ್ನು ಖರ್ಚೇ ಮಾಡುತ್ತಿಲ್ಲ. ಹಾಗೆಂದು ಅವನ ಬಳಿ ಅದಿಲ್ಲ ಎಂದಲ್ಲ’.

ಸಾಕ್ಷಿ ಬೇಕೇ? ಜಿಪುಣ ಶ್ರೀಮಂತ ತನ್ನ ಕೋಠಿಯ ಬಾಗಿಲನ್ನು ಬಿಚ್ಚಿದ. ಆಗಸ್ಟ್‌ ಆರು 1945. ಹಿರೋಶಿಮಾ ಮತ್ತು ನಾಗಾಸಾಕಿಗಳಲ್ಲಿ ಸತ್ತ ಲಕ್ಷಾಂತರ ಮಂದಿಯ ಆತ್ಮಗಳು ಒಂದು ಸಣ್ಣ ಸೂತ್ರಕ್ಕೆ ಸಾಕ್ಷಿಗಳಾದವು. ಮತ್ತೊಮ್ಮೆ ಸಾಕ್ಷಿ ಕೇಳಬೇಡಿ ಮತ್ತೆ ! ಕೇಳಿದಿರಾದರೆ ನಮ್ಮ ನಿಮ್ಮ ಆತ್ಮಗಳೂ ಸೇರಿದಂತೆ ಇಡೀ ಭೂಮಂಡಲವೇ ಸಾಕ್ಷಿಯಾಗುತ್ತದೆ.

ಈಕ್ವೇಷನ್‌ ಬಾಂಬಾಗಿ ಸಿಡಿದದ್ದನ್ನು ಬಲವಂತವಾಗಿ ಬದಿಗಿರಿಸಿ ಬೇರೆ ಕೋನಗಳಿಂದಲೂ ನೋಡಿದರೆ ಐನ್‌ಸ್ಟೈನ್‌ನ ಸಾಪೇಕ್ಷವಾದ (Theory of Relativity) ವಿಜ್ಞಾನದ ಮೇಲೆ ಮಾಡಿರುವ ಬಲವಾದ ಪ್ರಭಾವವನ್ನು ಖಂಡಿತ ಕಾಣಬಹುದು. ಅಣು ಒಂದರಲ್ಲಿ ಸುತ್ತುವ ಎಲೆಕ್ಟ್ರಾನ್‌ಗಳ ಚಲನೆಯಿಂದ ಹಿಡಿದು ದೂರದ ಮತ್ಯಾವುದೋ ಗ್ಯಾಲಕ್ಸಿಯಲ್ಲಿ ನಡೆಯುವ ಸೂಪರ್‌ನೋವಾ (ನಕ್ಷತ್ರ ಸಿಡಿಯುವ ಪ್ರಕ್ರಿಯೆ) ತನಕ ಪ್ರತಿಯಾಂದನ್ನೂ ಭೌತಶಾಸ್ತ್ರ ಮತ್ತು ಗಣಿತದ ಚೌಕಟ್ಟಿನಲ್ಲಿ ವಿವರಿಸಲು ಸಾಪೇಕ್ಷವಾದ ಬೇಕೇ ಬೇಕಾದೀತು.

ಐನ್‌ಸ್ಟೈನ್‌ನ ಸಾಪೇಕ್ಷವಾದದ ಮತ್ತೊಂದು ಮೈಲಿಗಲ್ಲು ಬೆಳಕಿನ ವೇಗವನ್ನು ಸ್ಥಿರಾಂಕವೆಂದು ಸಾರಿದ್ದು ಹಾಗೂ ಬೆಳಕಿನ ವೇಗವೇ ಗರಿಷ್ಠವೇಗವೆಂದು ಕಂಡುಹಿಡಿದದ್ದು. E=mC2 ನಲ್ಲಿರುವ C ಬೆಳಕಿನ ವೇಗದ ಸ್ಥಿರಾಂಕ (Constant).

ಅಲ್ಲಿಗೆ ನಮ್ಮಯ ವೇಗಕ್ಕೆ ಐನ್‌ಸ್ಟೈನ್‌ ಒಂದು ಗರಿಷ್ಠಮಿತಿಯನ್ನು ನಿರ್ಧರಿಸಿಬಿಟ್ಟ. ಯಾವ ತರಹದ ಇಂಜಿನನ್ನೇ ಮಾಡಿ, ಎಷ್ಟೇ ದಕ್ಷತೆಯ ಇಂಧನವನ್ನಾದರೂ ಕಂಡು ಹಿಡಿಯಿರಿ, ಗಾಳಿಗಿಂತಲೂ ಹಗುರವಾದ ಲೋಹವನ್ನೇ ಬಳಸಿ, ಇವತ್ತಿನ ತಂತ್ರಜ್ಞಾನವನ್ನು ಸಾವಿರ ಪಾಲು ವರ್ಧಿಸಿ, ವೇಗದಮಿತಿಯನ್ನು ತೀವ್ರಗೊಳಿಸುತ್ತಲೇ ಹೋಗಿ ... ಶೇಕಡಾ ನೂರು ಯಶಸ್ಸು ಎಂದರೆ ನೀವು ಮುಟ್ಟುವುದು ಬೆಳಕಿನ ವೇಗವನ್ನು! ಅದನ್ನು ದಾಟಲು ಸಾಧ್ಯವಿಲ್ಲ.

ಹಾಗೆಂದು ಗೋಣು ಕೆಳಗಿಳಿಸಬೇಕಾಗಿಲ್ಲ. ಬೆಳಕೇನು ಎತ್ತಿನಗಾಡಿಯ ವೇಗದಲ್ಲಿ ಚಲಿಸುವುದಿಲ್ಲ. ಬೆಳಕಿನ ವೇಗ ಸೆಕೆಂಡಿಗೆ 300,000 ಕಿಲೋಮೀಟರ್‌ಗಳು (ಅಮೆರಿಕನ್ನರ ಮಾತಿನಲ್ಲಿ ಸೆಕೆಂಡಿಗೆ 186,000 ಮೈಲಿಗಳು). ಅಂದರೆ, ಬೆಳಕಿನ ವೇಗದಲ್ಲಿ ನೀವು ಚಲಿಸಿದರೆ ಸ್ಯಾನ್‌ ಫ್ರಾನ್ಸಿಸ್ಕೋದಿಂದ ಬೆಂಗಳೂರನ್ನು ತಲುಪಲು 0.05 ಸೆಕಂಡ್‌ (ಒಂದು ಸೆಕಂಡಿನ ಹದಿನೆಂಟನೇ ಒಂದು ಭಾಗ) ಸಾಕು. ಬೆಂಗಳೂರಿನ ಏರ್‌ಪೋರ್ಟ್‌ನಿಂದ ಬಸವನಗುಡಿಗೆ ಟ್ಯಾಕ್ಸಿಯಲ್ಲಿ ಎರಡು ಗಂಟೆ ಬೇಕಾಗಬಹುದು. ಅದು ಯಾವ ರೀತಿಯಲ್ಲೂ ಬೆಳಕಿನ ವೇಗಕ್ಕೆ ಸಂಬಂಧಿಸಿದ್ದಲ್ಲ, ಬದಲಾಗಿ ಕರ್ನಾಟಕದ ಮಂತ್ರಿಗಳ ವೇಗಕ್ಕೆ (ಆಹಾ- ಹೊಸ ವಿಷಯ! ಮಂತ್ರಿಗಳಿಗೂ ವೇಗವಿದೆಯೇ?) ಸೇರಿದ್ದು.

ಬೆಳಕಿನ ವೇಗವನ್ನೇನಾದರೂ ನಾವು ಸಾಧಿಸಿಬಿಟ್ಟರೆ ಭೂಮಿಯ ಮೇಲೆ ನಾವು ರಾಜರು. ಆದರೆ ಖಗೋಳದಲ್ಲಿ? ನಮಗೆ ಹತ್ತಿರವಾದ ಮಂಗಳಗ್ರಹವನ್ನು ಅದು ನಮ್ಮಿಂದ ಅತಿ ದೂರದಲ್ಲಿದ್ದಾಗ ತಲುಪಲು ಬೆಳಕಿನ ವೇಗದಲ್ಲಿ 15 ನಿಮಿಷ ಪ್ರಯಾಣಮಾಡಬೇಕು. ಮಂಗಳ ಗ್ರಹದಿಂದ ಪ್ರಿಯಕರ ಭೂಮಿಯ ಮೇಲಿನ ಪ್ರಿಯತಮೆಗೆ ‘ನಿನ್ನನ್ನು ಬಹಳ ಪ್ರೀತಿಸುತ್ತೇನೆ. ನನ್ನನ್ನು ಮದುವೆಯಾಗುತ್ತೀಯಾ?’ ಎಂದು ಫೋನ್‌ ಮಾಡಿದರೆ ಅದು ಭೂಮಿಯ ಮೇಲಿನ ಪ್ರಿಯತಮೆಯನ್ನು ತಲುಪಲು 15 ನಿಮಿಷ ಬೇಕು. ಆ ಹದಿನೈದು ನಿಮಿಷದಲ್ಲಿ ಅವಳು ಬೇರೆ ಯಾರನ್ನೋ ಮದುವೆಯಾಗುವ ನಿರ್ಧಾರ ಮಾಡಿದ್ದರೆ ಅದು ಮಂಗಳಗ್ರಹವಾಸಿಗೆ ತಲುಪಿ ಅವನ ಹೃದಯವನ್ನು ಒಡೆಯಲು ಮತ್ತೆ ಹದಿನೈದು ನಿಮಿಷಗಳು ಬೇಕು!

ಮಂಗಳ ನಮ್ಮ ಪಕ್ಕದ ಮನೆ. ಇನ್ನೂ ಸ್ವಲ್ಪ ಹೊರಚಾಚೋಣವೆಂದುಕೊಂಡರೆ ನಮ್ಮ ಸೂರ್ಯ ಭಗವಾನನನ್ನು ಬಿಟ್ಟು ಮುಂದಿನ ಹತ್ತಿರದ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟರಿಯನ್ನು ತಲುಪಲು 4.2 ಜ್ಯೋತಿವರ್ಷಗಳು ಬೇಕು! ಬೆಳಕು ಒಂದು ವರ್ಷದಲ್ಲಿ ಹೋಗುವ ದೂರಕ್ಕೆ ಜ್ಯೋತಿವರ್ಷ (Light Year) ಎನ್ನುತ್ತಾರೆ. ಒಂದು ವರ್ಷಕ್ಕೆ ಬೆಳಕು 9,463,700,000,000 ಕಿಲೋಮೀಟರು ಹೋಗುತ್ತದೆ. ಅಲ್ಲಿಗೆ ಪ್ರಾಕ್ಸಿಮಾ ಸೆಂಟರಿಯ ಯಾವುದಾದರೂ ಗ್ರಹ ಉಪಗ್ರಹಗಳನ್ನು ಮುಟ್ಟಿ ಬರಲು 8.4 ಜ್ಯೋತಿವರ್ಷಗಳು ಬೇಕು. ಮತ್ತೊಂದು ವಿಷಯ- ಐನ್‌ಸ್ಟೈನ್‌ನ ರಿಲೆಟಿವಿಟಿಯ ಟೈಮ್‌ ಡೈಲೇಷನ್‌ ಥಿಯರಿ ನೆನಪಿನಲ್ಲಿದೆಯೇ? ಬೆಳಕಿನ ವೇಗದಲ್ಲಿ ಚಲಿಸುವ ವಸ್ತುವಿಗೆ ಕಾಲ ಹೆಚ್ಚು ಕಡಿಮೆ ಸ್ಥಿರವಾಗುತ್ತದೆ. ನೀವು ನಿಮ್ಮ ಇಪ್ಪತ್ತೈದನೇ ವಯಸ್ಸಿಗೆ ಪ್ರಾಕ್ಸಿಮಾ ಸೆಂಟರಿಗೆ ಹೋಗಿ ಆ ಕ್ಷಣವೇ ತಿರುಗಿ ಬಂದರೆ ನಿಮ್ಮ ವಯಸ್ಸು ಇಪ್ಪತ್ತೈದೇ ಇರುತ್ತದೆ. ಆದರೆ ನಿಮ್ಮ ಪ್ರಿಯತಮೆ/ಪ್ರಿಯಕರ ತಮ್ಮ ವಯಸ್ಸಿಗೆ ಎಂಟೂವರೆ ವರ್ಷಗಳನ್ನು ಸೇರಿಸಿಕೊಂಡು ನಿಮಗಿಂತಲೂ ದೊಡ್ಡವರಾಗಿರಬಹುದು. ಬೆಳಕಿನ ವೇಗದಲ್ಲಿ ಚಲಿಸುವವರಿಗೆ ಮುಪ್ಪೇ ಇಲ್ಲ. ತಮ್ಮ ವಯಸ್ಸನ್ನು ಕಡಿಮೆ ಹೇಳಿಕೊಳ್ಳಬಯಸುವ ಹೆಂಗಸರು ‘ನನಗಿನ್ನೂ ಹದಿನೆಂಟೇ. ಈಚಿನ ಹತ್ತು ವರ್ಷ ಬೆಳಕಿನ ವೇಗದಲ್ಲಿದ್ದೆ, ಹಾಗಾಗಿ ಆ ವರ್ಷಗಳನ್ನು ನಾನು ಲೆಕ್ಕ ಹಾಕುವುದಿಲ್ಲ’ ಎಂದು ಹೇಳಿಕೊಳ್ಳಬಹುದು.

ನಾವಿನ್ನೂ ಬರೀ ಹತ್ತಿರದ ವಸ್ತುಗಳ ಬಗ್ಗೆಯೇ ಮಾತನಾಡುತ್ತಿದ್ದೇವೆ. ಪ್ರಾಕ್ಸಿಮಾ ಸೆಂಟರಿ, ಆಲ್ಫಾ ಸೆಂಟರಿಗಳೆಲ್ಲಾ ಮುಂದಿನ ಬೀದಿಯ ನಕ್ಷತ್ರಗಳು. ಬಹುಶಃ ನಮ್ಮ ಸೂರ್ಯನಿಗಿಂತಲೂ ಚೆನ್ನಾಗಿಯೇ ಚಿಕ್ಕವು. ಸ್ವಲ್ಪ ಮುಂದು ಹೋಗೋಣ, ನಮ್ಮ ಗ್ಯಾಲಕ್ಸಿ ಕ್ಷೀರಪಥದ(ಮಿಲ್ಕೀ ವೇ) ಅಂಚನ್ನು ಮುಟ್ಟಿಬರೋಣವೆಂದರೆ 1000 ಜ್ಯೋತಿವರ್ಷಗಳ ಪ್ರಯಾಣ ಮಾಡಬೇಕು! ನಮಗೆ ಬಹಳ ಪ್ರಿಯವಾದ, ಉತ್ತರದ ಆಕಾಶದಲ್ಲಿ ಸದಾ ಕಂಗೊಳಿಸುವ ಸುನೀತಿಯ ಮಗ ಧ್ರುವನನ್ನು (Polar Star) ಮಾತನಾಡಿಸಿ ಬರೋಣವೆಂದರೆ ಹೋಗಲು 430 ಮತ್ತು ಬರಲು 430, ಒಟ್ಟು 860 ಜ್ಯೋತಿವರ್ಷಗಳು ಬೇಕು! ವಾಪಸ್ಸು ಬಂದವರಿಗೆ ಹೆಚ್ಚು ಕಡಿಮೆ ಹೊರಟಾಗ ಇದ್ದ ತಾರುಣ್ಯವೇ ಇರುತ್ತದೆ. ಆದರೆ ಭೂಮಿಯ ಮೇಲೆ ಹಲವು ತಲೆಮಾರುಗಳೇ ಕಳೆದುಹೋಗಿರುತ್ತವೆ. ದೇಶ ಗಡಿಗಳು ಚಂಚಲವಾಗುವ ರೀತಿಯನ್ನು ನೋಡಿದರೆ ವಾಪಸ್ಸು ಬಂದವನು ತೋರಿಸುವ ಪಾಸ್‌ಪೋರ್ಟ್‌ನ್ನು ನೀಡಿದ ದೇಶವೇ ಈ ಭೂಮಿಯ ಮೇಲಿಲ್ಲ ಎಂದು ಅವನನ್ನು ಜೈಲಿಗೆ ಹಾಕಬಹುದು!

ಅಲ್ಲಿಗೆ ತಿಳಿದದ್ದೇನೆಂದರೆ, ವೇಗದ ಗರಿಷ್ಠ ಮಿತಿಯನ್ನು ಮುಟ್ಟಿದರೂ ಕೂಡ ಬೇರೆ ಗ್ರಹ ನಕ್ಷತ್ರಗಳಲ್ಲಿ ವಾಸಸ್ಥಾನವನ್ನು ಹುಡುಕುವಲ್ಲಿ ನಾವು ಬಹಳಷ್ಟರ ಮಟ್ಟಿಗೆ ನಿರಾಶರಾಗೇ ಇರಬೇಕು. ಐನ್‌ಸ್ಟೈನ್‌ ಮಹಾನುಭಾವ ಸುಮಾರು ನೂರುವರ್ಷಗಳ ಹಿಂದೆ ‘ಬೆಳಕಿನ ವೇಗವೇ ಗರಿಷ್ಠ ವೇಗ’ ಎಂದದ್ದು ‘ಮನುಷ್ಯರು ಭೂಮಿಗೆ ಮಾತ್ರವೇ’ ಎಂದಂತೆ ನಮಗೆ ಮುಗಿದ ರಸ್ತೆಯನ್ನು ಹೇಗೆ ತೋರಿಸಿತು ನೋಡಿ!

ಸುಮಾರು ಮೂವತ್ತರ ಹರೆಯದ ಜ್ವಾವ್‌ ಮೊಗ್ಯೂಯೋ (Joao Magueijo) ಎಂಬ ಲಂಡನ್ನಿನ ವಿಜ್ಞಾನಿ ಮತ್ತು ಇಂಪೀರಿಯಲ್‌ ಕಾಲೇಜಿನ ಪ್ರೊಫೆಸರ್‌ ಒಬ್ಬರು ‘ಬೆಳಕಿನ ವೇಗ ಸ್ಥಿರವಲ್ಲ, ಅದು ಬದಲಾಗುತ್ತದೆ’ ಎಂದು ಸಾರಿದ್ದಾರೆ. ಅವರ Faster than the speed of light ಎಂಬ ಪುಸ್ತಕ 2003ರಲ್ಲಿ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಸೃಷ್ಟಿಸುತ್ತಿದೆ. ಸ್ಟೀವನ್‌ ಹಾಕಿಂಗ್‌ನ ‘ಎ ಬ್ರೀಫ್‌ ಹಿಸ್ಟರಿ ಆಫ್‌ ಟೈಮ್‌’ ಓದಿದವರಿಗೆ ಜ್ವಾವ್‌ನ ಈ ಪುಸ್ತಕವೂ ಬಹಳ ಹಿಡಿಸುತ್ತದೆ.

ವಿಶ್ವದ ಪ್ರಾರಂಭದ ಬಿಂದುವಾದ Big Bangನ ಆರಂಭಿಕ ದಿನಗಳಲ್ಲಿ ಬೆಳಕು ಇವತ್ತಿನ ವೇಗಕ್ಕಿಂತಾ ಲಕ್ಷಾಂತರ ಪಟ್ಟು ವೇಗವಾಗಿ ಚಲಿಸಿದ್ದರಿಂದಲೇ ಆರಂಭದಲ್ಲಿ ವಿಶ್ವ ಇವತ್ತಿನ ಗತಿಗಿಂತಾ ಬಹಳ ವೇಗವಾಗಿ ವಿಸ್ತಾರಗೊಂಡಿತು ಎನ್ನುವ ವಾದವನ್ನು ಇವರು ಮುಂದಿಡುತ್ತಾರೆ. ಐನ್‌ಸ್ಟೈನ್‌ ನಂಬಿದ್ದ ‘ವಿಶ್ವ ಹಿಗ್ಗುತ್ತಿಲ್ಲ, ಸ್ಥಿರವಾಗಿದೆ’ ಎನ್ನುವ ವಾದವನ್ನು ಅಲ್ಲಗಳೆಯಲು ‘ಬೆಳಕಿನ ವೇಗ ಅಸ್ಥಿರಾಂಕ’ (Vairable speed of Light) ಎನ್ನುವ ಥಿಯರಿಯನ್ನು ಮಂಡಿಸಿದ್ದಾರೆ. ಇವರ ಪ್ರಕಾರ, ಬೆಳಕಿನ ವೇಗ ಸ್ಥಳೀಯವಾಗಿ ಸ್ಥಿರಾಂಕ (Local Constant) ಅಷ್ಟೇ. ಕೃಷ್ಣಕುಳಿ (Black Holes) ಗಳ ಅಂಚಿನಲ್ಲಿ ಬೆಳಕು ನಿಧಾನವಾಗುತ್ತಾ ನಡೆದು ಅವುಗಳ ಆಳದಲ್ಲಿ ಬೆಳಕಿನ ವೇಗ ಸೊನ್ನೆಯನ್ನೂ ಮುಟ್ಟುತ್ತದೆ! ಕೃಷ್ಣಕುಳಿಗಳಂತೆಯೇ ನಮ್ಮ ವೀಕ್ಷಣೆಗೆ ಸಿಕ್ಕದೆ ಬರೀ ಗಣಿತ ಮತ್ತು Speculations ಗಳಲ್ಲಿ ನಿಂತಿರುವ ಖಗೋಳ ಎಳೆಗಳಲ್ಲಿ (Cosmological Strings) ಬೆಳಕು ಭೂಮಿಯಲ್ಲಿ ಚಲಿಸುವುದಕ್ಕಿಂತಾ ಅನೇಕ ಅನೇಕ ಪಟ್ಟು ವೇಗವಾಗಿ ಚಲಿಸುತ್ತದೆ. ಒಬ್ಬ ಖಗೋಳಯಾತ್ರಿ ಈ ತರಹದ ಖಗೋಳ ಎಳೆಗಳಲ್ಲಿ ಅಲ್ಲಲ್ಲಿಯ ಬೆಳಕಿನ ಗರಿಷ್ಠ ವೇಗದಲ್ಲಿ ಸಂಚರಿಸುತ್ತಾ ಸಾವಿರ ಜ್ಯೋತಿವರ್ಷಗಳ ದೂರವನ್ನು ಕ್ರಮಿಸಿ ಭೂಮಿಯಲ್ಲಿ ತನ್ನ ಜೊತೆಯವರ ಜೀವಿತಾವಧಿಯಲ್ಲೇ ಅಥವಾ ಭೂಮಿಯಿಂದ ಹೊರಟ ಒಂದೆರಡು ವರ್ಷಗಳಲ್ಲಿಯೇ ವಾಪಸ್ಸು ಬರಬಹುದು!

ಗಣಿತಶಾಸ್ತ್ರೀಯವಾಗಿ ಸಿದ್ಧವಾಗಿರುವ ಈ ವಾದಕ್ಕೆ ಪುರಾವೆ ಇನ್ನೂ ಸಿಕ್ಕಿಲ್ಲ. ಖಗೋಲಶಾಸ್ತ್ರದಲ್ಲಿ ಯಾವುದೇ ನಿಯಮವು ಪುರಾವೆಗಳಿಂದ ಸಿದ್ಧವಾಗಲು ಹಲವು ದಶಕಗಳು ಅಥವಾ ಶತಮಾನಗಳೇ ಕಳೆಯಬಹುದು. ಏನೇ ಆಗಲಿ, ಐನ್‌ಸ್ಟೈನ್‌ನ ಸಾಪೇಕ್ಷವಾದದ ಗಟ್ಟಿ ಮತ್ತು ಜೊಂಡುಗಳ ನಡುವೆ ಮನುಷ್ಯಕುಲದ ವೇಗದ ಮಿತಿಗಳು ಅಡಗಿವೆ.

ಕೊನೆಯಲ್ಲಿ ಒಂದು ಪ್ರಶ್ನೆ:

ಇರುವುದೊಂದೇ ಭೂಮಿಯನ್ನು ಗೆದ್ದಲುಹುಳಗಳಂತೆ ತಿಂದು, ಆಕಾಶ ಭೂಮಿ ಸಮುದ್ರಗಳನ್ನು ಮಾಲಿನ್ಯಗೊಳಿಸಿ, ನಮ್ಮೊಡನೆ ಬದುಕಲು ಬಂದ ಪ್ರಾಣಿಸಂಕುಲಗಳನ್ನೆಲ್ಲಾ ವಿನಾಶದ ಅಂಚಿಗೆ ತಳ್ಳಿ, ಈಗ ಭೂಮಿಯನ್ನೇ ಸಿಡಿಸುವಷ್ಟು ನ್ಯೂಕ್ಲಿಯರ್‌ ಅಸ್ತ್ರಗಳನ್ನು ಅಂಗೈನಲ್ಲಿ ಹಿಡಿದು ಕುಳಿತಿರುವ ನಾವು ಬೇರೆ ಗ್ರಹ ನಕ್ಷತ್ರಗಳಿಗೆ ಹೋಗಿ ಮಾಡುವುದೇನಿದೆ?

ಅವುಗಳನ್ನೂ ಕುಲಗೆಡಿಸುವುದ ಬಿಟ್ಟು!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X