ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈವೇಯ ಮೇಲೆ ಸಾಹಿತ್ಯ, ಸಂವೇದನೆ, ಶರನ್‌ ಓಲ್ಡ್ಸ್‌ ಮತ್ತು ವೈದೇಹಿ

By Staff
|
Google Oneindia Kannada News
M.R. Dattatri ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯಾ
[email protected]

ರೇಡಿಯೋದಲ್ಲಿ ಶರನ್‌ ಓಲ್ಡ್ಸ್‌ ಮಾತನಾಡುತ್ತಿದ್ದಳು.

ಸನ್ನಿವೇಲ್‌ನಲ್ಲಿರುವ ನನ್ನ ಆಟೋ ಇನ್ಶುರೆನ್ಸ್‌ ಏಜೆಂಟ್‌ನ ಆಫೀಸಿಗೆ ಹೊರಟಿದ್ದೆ. ಗಡ್ಡಕ್ಕೆ ಬೆಂಕಿಬಿದ್ದಾಗ ಬಾವಿ ತೋಡುವ ಜನರ ಕಡೆಯವನು ನಾನು. ನನ್ನಂಥವರನ್ನು ತಿಳಿದುಕೊಂಡೇ ಈ ಇನ್ಶುರೆನ್ಸ್‌ ಮತ್ತು ಇತರ ಯುಟಿಲಿಟಿಯವರು ಒಂದು ತಿಂಗಳ ಮುಂಚೆಯೇ ‘ಅನ್ಯಾಯವಾಗಿ ದಂಡವನ್ನು ಕಟ್ಟಬೇಡಿ, ಈಗಲೇ ಹಣವನ್ನು ಪಾವತಿಸಿ’ ಎಂದು ಬಿಲ್ಲನ್ನು ಕಳುಹಿಸುತ್ತಾರೆ. ಅದಾಗಿ, ‘ಅಯ್ಯೋ ಮರೆತೇ ಬಿಟ್ಟಿರಾ, ಪರವಾಗಿಲ್ಲ, ಈಗಲೂ ಕಟ್ಟಿ’ ಎಂದು ಎರಡನೇ ನೋಟೀಸು ಬಂದು ನಾನು ಅದನ್ನೂ ಒಡೆಯದೇ ಇದ್ದಾಗ ಸ್ವಲ್ಪ ಹೆದರಿಸುವಂತಹ ಮೂರನೇ ಕಾಗದ ಬರುತ್ತದೆ. ನನಗೆ ಆಗ ಎಚ್ಚರವಾಗುತ್ತದೆ. ಕಾರ್‌ನ ಇನ್ಶುರೆನ್ಸ್‌ ಅವಧಿ ನಾಡಿದ್ದಿಗೆ ಮುಗಿಯುತ್ತದೆ ಎನ್ನುವಾಗ ಅವನ ಬಳಿಗೆ ಓಡುತ್ತೇನೆ. ನನ್ನಂತಹ ಬಹಳ ಜನರನ್ನು ಕಂಡ ಇವನಿಗೆ ಆಶ್ಚರ್ಯವಾಗುವುದಿಲ್ಲ. ನಗುನಗುತ್ತಲೇ ಹಣವನ್ನು ಕಟ್ಟಿಸಿಕೊಂಡು ರಶೀದಿಯನ್ನು ಕೈಗಿಡುತ್ತಾನೆ.

Sharon Oldsಶರನ್‌ ಓಲ್ಡ್ಸ್‌ KQED ರೇಡಿಯೋದ ‘ಫೋರಂ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಳು. ಮೈಕಲ್‌ ಕ್ರಸ್ನಿ ಇದರ ನಿರ್ವಾಹಕ. ನಿರೀಕ್ಷಿಸಿದಂತೆಯೇ,‘ನಿನ್ನ ಕವಿತೆಗಳಲ್ಲಿ ಇಷ್ಟೊಂದು ಸೆಕ್ಸ್‌ ಮತ್ತು ಇತರೆ ಇಂಟಿಮೇಟ್‌ ವಿಷಯಗಳ ಬಗ್ಗೆ ಬರೆಯುತ್ತೀಯಲ್ಲ , ಪ್ರಪಂಚವನ್ನು ಹೇಗೆ ಎದುರಿಸುತ್ತೀಯಾ, ಹೆಲೆನ್‌ ವೆಂಡ್ಲರ್‌ ನಿನ್ನ ಪದ್ಯಗಳನ್ನು ಅವು ಪದ್ಯಗಳೇ ಅಲ್ಲ ಪೋರ್ನೋಗ್ರಫಿ ಎಂದುಬಿಟ್ಟಳಲ್ಲಾ ನಿನಗೆ ಬೇಸರವಾಯಿತೇ’ ಎನ್ನುವಂತಹ ಪ್ರಶ್ನೆಗಳು.

ಶರನ್‌ ಬಹಳ ಸೂಕ್ಷ್ಮಮತಿಯ ಕವಯಿತ್ರಿ. ಸಾಮಾನ್ಯ ಅನುಭವ ಜಗತ್ತು ನಿರ್ದೇಶಿಸುವ ರೀತಿಯಲ್ಲಲ್ಲದೆ ತನ್ನ ಸಾಮಾನ್ಯ ಸ್ವರೂಪದಲ್ಲಿಯೇ ಸಾಹಿತ್ಯದಲ್ಲಿ ಕಾಣಿಸಿಕೊಂಡರೆ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ನಂಬಿರುವವಳು. ಸೆಕ್ಸ್‌ ಇದಕ್ಕೆ ಹೊರತಲ್ಲ. ಗಂಡ ಹೆಂಡಿರ ಸಂಬಂಧ, ತಂದೆ ಮಕ್ಕಳ ಸಂಬಂಧ, ತಾಯಿ ಮಕ್ಕಳ ಸಂಬಂಧ, ಸ್ನೇಹಿತೆಯರ ನಡುವೆ, ಸ್ನೇಹಿತರ ನಡುವೆ ಹೀಗೆ ಯಾವುದೂ ಇದಕ್ಕೆ ಹೊರತಲ್ಲ ಎನ್ನುವುದು ಅವಳ ದೃಢ ನಿಲುವು.

ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಬರದಂತಹ ಮಡಿವಂತಿಕೆ ಸಾಹಿತ್ಯಕ್ಕೇಕೆ ಬಂತು? ಇವೆಲ್ಲಾ ಸಾಹಿತ್ಯಕ್ಕಿಂತಾ ಮೇಲಾಗಿ ದೃಶ್ಯ ಮಾಧ್ಯಮಗಳಲ್ಲವೆ? ಇಲ್ಲಿಲ್ಲದ ಮಡಿಸೀರೆಯನ್ನು ಸಾಹಿತ್ಯಕ್ಕೇಕೆ ಉಡಿಸಿದ್ದೇವೆ? ಶರನ್‌ ಓಲ್ಡ್ಸ್‌ಳ ‘ವೆಲ್‌ಸ್ಪ್ರಿಂಗ್‌’ ಎನ್ನುವ ಕವಿತೆಯಲ್ಲಿ ಬಿರುಸು ಮಳೆಯ ನಂತರದ ಭೂಮಿಯಂತೆ ಸೆಕ್ಸ್‌ನ ನಂತರ ಹೆಣ್ಣೊಬ್ಬಳ ಯೋಚನಾ ಲಹರಿಗಳಿವೆ. ಮತ್ತೊಂದು ಕವಿತೆಯಲ್ಲಿ , ಸುಭದ್ರವಾದ ಮನೆಯ ಕಿಟಕಿಯಿಂದ ನೋಡುತ್ತಲೇ ರಸ್ತೆಯ ಅಪಘಾತವೊಂದಕ್ಕೆ ಸಾಕ್ಷಿಯಾದ ಹೆಣ್ಣೊಬ್ಬಳಿಗೆ ಆ ಕ್ಷಣದಲ್ಲಾಗುವ ತಲ್ಲಣದ ಗರ್ಭಪಾತದ ಚಿತ್ರವಿದೆ. ಅವಳ ಬೆಳದಿಂಗಳಿನಂತಹ ನುಣ್ಣನೆಯ ತೊಡೆಯಿಂದ ಜಾರಿ ಮಂಡಿಯ ಮೇಲೆ ಹರಿಯುವ ಬೆಚ್ಚನೆಯ ಹನಿರಕ್ತ ಹಕ್ಕಿಯ ತತ್ತಿಯಂತೆ ಇನ್ನೂ ಮೂಡದ ಹುಟ್ಟು ಮತ್ತು ಎಲ್ಲೋ ದೂರದ ಅಪರಿಚಿತ ಸಾವಿನ ನಡುವೆ ನಮಗೆಷ್ಟು ವೈಯಕ್ತಿಕವಾಗುತ್ತದೆ ಎಂದರೆ ಅವಳಷ್ಟೇ ವಿಹ್ವಲರಾಗಿ ನಾವೂ ಆ ಕ್ಷಣಕ್ಕೆ freeze ಆಗಿರುತ್ತೇವೆ. ಈ ಕವಯಿತ್ರಿಗೆ ಹೆಣ್ಣು ಗಂಡುಗಳ ದೇಹ ಬರೀ ಭೋಗದ ಸಂಕೇತವಲ್ಲ , ಬದಲಾಗಿ ಬಿರುಸುಮಳೆಯ, ಸಮುದ್ರದ ಗಾಳಿಯ, ಬೆಟ್ಟದ ಬಂಡೆಯ, ಬಾವಿಯ ಆಳದ, ಸೂರ್ಯನ ಕಾವಿನ, ಹಿಮದ ತಂಪಿನ, ಮಗುವಿನ ಅಳುವಿನಷ್ಟೇ ನೈಸರ್ಗಿಕ, ಅಷ್ಟೇ ಪರಿಚಿತ, ಅಷ್ಟೇ ಗೂಢಾರ್ಥಗಳ ಗಣರಾಶಿಯಾಗಿ ಮನಸ್ಸಿನ ತಿಳಿಗೊಳದಲ್ಲಿ ಅಲೆಗಳನ್ನು ಮೂಡಿಸುವಂತಹ ವಸ್ತು.

ಕ್ಯಾನ್ಸರ್‌ನಿಂದ ಜರ್ಜರಿತನಾದ ಅಪ್ಪ ಮಗಳಿಗಾಗಿ ಕಾಯುತ್ತಿದ್ದಾನೆ ಆಸ್ಪತ್ರೆಯಲ್ಲಿ. ಎಷ್ಟೋ ದಿನಗಳ ಮೇಲೆ ಮಗಳನ್ನು ನೋಡುತ್ತಿದ್ದಾನೆ. ಆಲ್ಕೋಹಾಲಿಕ್‌ ಆಗಿ ಹೆಂಡತಿ, ಮಗಳನ್ನು ನಡೆಸಿಕೊಂಡ ಪಾಪಕರ್ಮ ಸ್ವಂತ ಕರುಣೆಯಾಗಿ ಎಷ್ಟೋ ದಿನ, ಕತ್ತಲೆಯಲ್ಲಿ ಪಿಳಪಿಳ ಕಣ್ಣುಗಳನ್ನು ಬಿಡುತ್ತಾ ಹೊಂಚುಹಾಕಿ ಕುಳಿತ ಬೆಕ್ಕಿನಂತೆ ಕಾಡಿ ಈಗ ಎಲ್ಲೋ ಆಳದಲ್ಲಿ , ಬೆಟ್ಟದಡಿಯಲ್ಲಿ ಉಳಿದ ಇಲಿದೊಗರದಂತೆ, ಅಳಿದುಳಿದ ಪ್ರೀತಿಯಾಡನೆ ಕರಗಿಹೋಗಿದೆ. ಆಸ್ಪತ್ರೆಯ ಕೋಣೆಯಾಳಗಿನ ಗಾಳಿಯಾಳಗೆ ಹೆಪ್ಪುಗಟ್ಟಿದ ನಿಶ್ಯಬ್ದ, ಎಲ್ಲೋ ದೂರದಲ್ಲಿ ನರ್ಸ್‌ ಒಬ್ಬಳು ಆಗ ತಾನೆ ಹುಟ್ಟಿದ ಮಗುವಿಗೆ ಮೈ ತೊಳೆಸುವಾಗ ಖುಷಿಯಿಂದ ಸಿಳ್ಳೆಹಾಕುತ್ತಿದ್ದ ಹಾಡು, ಹಾಸಿಗೆಯ ಪಕ್ಕದಲ್ಲಿ ಹಾರದಂತೆ ಕ್ಲಿಪ್ಪಿನಲ್ಲಿ ಬಂಧಿಗಳಾದ ಔಷಧಿಗಳ ಕಾಗದದ ಪಟಪಟಕ್ಕೆಲ್ಲಾ ಆಗಾಗ ಬೆಚ್ಚಿಬೀಳುತ್ತಲಿರುತ್ತದೆ. ಬದುಕುವ ಇಚ್ಛೆ ಇನ್ನು ಉಳಿದಿಲ್ಲ ಅವನಿಗೆ. ಮಗಳನ್ನು ನೋಡಬೇಕು, ಅಷ್ಟೇ. ಮಗಳನ್ನು ನೋಡಬೇಕು.

ಎದುರು ಬಂದು ಕುಳಿತ ಮಗಳ ಕಣ್ಣಲ್ಲಿ ಅವನು ಕೊಟ್ಟ ಕಷ್ಟಗಳ ಸ್ಮೃತಿ ಇಲ್ಲ. ಬದಲಾಗಿ ಬಾಳಿನ ಹೊರತಾಗಿ ರಕ್ತ ಸಂಬಂಧ ತಂದಿತ್ತ ಪ್ರೀತಿಯ ಕಣ್ಣೀರಿದೆ. ಅವನಿಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಎಲ್ಲಾ ಮಾತುಗಳೂ ಒಟ್ಟಿಗೇ ಬರುತ್ತಿವೆ ಅಥವಾ ಯಾವ ಮಾತುಗಳೂ ಬರುತ್ತಿಲ್ಲ. ‘ನೋಡು ಮಗಳೇ, ನನ್ನ ಕರ್ಮಗಳು ನನಗೆ ಸಂದಿತ್ತ ಸುಖ’ ಎಂದು ಆಸ್ಪತ್ರೆಯವರು ನೀಡಿದ್ದ ಗೀರುಗೀರಿನ ತಿಳಿನೀಲಿ ಬಣ್ಣದ ಅರ್ಧ ತೋಳಿನ ಶರಟನ್ನು ಬಿಚ್ಚಿ ತೋರಿಸಿದ. ಕೆಂಪು ಕೆಂಪು ಹುಣ್ಣುಗಳು ಸತ್ತ ಜಿಂಕೆಯ ಮರಿಯನ್ನು ಹುಲಿಯಾಂದು ಬಗೆದು ಬಗೆದು ಹಾಕಿದಂತೆ....ಅಷ್ಟಕ್ಕೇ ಸಮಾಧಾನವಾಗಲಿಲ್ಲ . ಇವೇನೂ ಅಲ್ಲ , ಈ ಹುಣ್ಣುಗಳನ್ನು ನೋಡು, ನನ್ನನ್ನು ಜೀವಂತವಾಗಿ ಕೊಳೆಯುವಂತೆ ಮಾಡುತ್ತಿವೆ ಎಂದು ತೊಟ್ಟ ಪೈಜಾಮವನ್ನೂ ಬಿಚ್ಚಿಹಾಕಿದ!

ಇದೊಂದು ಶರನ್‌ಳ ಕವಿತೆ. ತಂದೆ ಮಗಳ ಸಂಬಂಧದ ಮೇಲೇ ಇರುವ ‘ಫಾದರ್‌’ ಪುಸ್ತಕದಲ್ಲಿ ಬರುತ್ತದೆ. ಏನೆಂದು ಹೇಳಬೇಕಿತ್ತು ಮಗಳು? ಅಪ್ಪಾ , ನಿನ್ನ ಗುಪ್ತಾಂಗಗಳನ್ನು ನಾನು ನೋಡಬಾರದು ಎಂದೇ ? ಅಪ್ಪನನ್ನು ನೋಡಿ ಮರುಕ ಪಟ್ಟು ಸೇಬುಹಣ್ಣುಗಳನ್ನು ಕೊಟ್ಟು , ಹುಣ್ಣಿನ ಮೇಲೆ ಹಚ್ಚುವ ಆಯ್‌ಂಟ್‌ಮೆಂಟಿನಂತಹ ಕರುಣೆಯ ಮಾತುಗಳಲ್ಲಿ ಕಳೆದು ಹೋಗಬೇಕಿತ್ತೆ ? ಕಲ್ಲಂಗಡಿ ಹಣ್ಣನ್ನು ಕೊಯ್ದಷ್ಟು ಸುಲಭವಾಗಿ ಶರನ್‌ ಸಮಾಜವನ್ನು ಬೇಧಿಸುತ್ತಾಳೆ. ಯಾವುದನ್ನು ಹೇಳಬಾರದು ಎಂದು ಸಮಾಜ ಮುಸುಕಿನಲ್ಲಿಡಲು ಬಯಸುತ್ತದೆಯೋ ಅಂತಹದನ್ನೇ ಹೇಳುತ್ತಾಳೆ. ಗಂಡು ಹೆಣ್ಣುಗಳ ಸಂಬಂಧವನ್ನು ಹೇಳುವಾಗ ‘ನೆನ್ನೆ ರಾತ್ರಿ ಹಾಸಿಗೆಯಲ್ಲಿ ಅವರಿಬ್ಬರ ನಡುವೆ ಏನು ನಡೆಯಿತು ಗೊತ್ತೆ’ ಎಂದೇ ಪ್ರಾರಂಭಿಸುತ್ತಾಳೆ. ಸಂವೇದನೆಗಳು ಮುಖ್ಯವಾಗುತ್ತವೆ.

ಹಾಗೆ ನೋಡಿದರೆ ಸಂವೇದನೆಗಳು ಮಾತ್ರ ಸಾಹಿತ್ಯವಾಗುತ್ತವೆ. ಅವಕ್ಕೆ ಗಡಿ ಇಲ್ಲ , ಜಾತಿ ಇಲ್ಲ , ಧರ್ಮವಿಲ್ಲ , ಊರಿಲ್ಲ , ಕೇರಿಯಿಲ್ಲ , ಗಂಡುಗಳಿಲ್ಲ , ಹೆಣ್ಣುಗಳಿಲ್ಲ . ಮನುಷ್ಯ ಮನುಷ್ಯನ ಸಂಬಂಧ, ಮೋಡಗಳೆರಡು ಡಿಕ್ಕಿ ಹೊಡೆದಂತೆ ಚೂಪಾದ ಮೊನಚು ಕೋಡುಗಳ ಅಹಂಕಾರ, ಹೊನ್ನ ಶೂಲವಾಗುವ ಮಮಕಾರ, ಸುತ್ತಲಿನ ಈ ಕಾರುಗಳಂತೆಯೇ ವೇಗ ವೇಗವೆಂದು ಹ್ಞೂಂಕರಿಸುವ ಗತಿಬಂಧನದ ಜೀವನ, ಕೊನೆಗೆ ಅಪ್ಪನ ಶಿಶ್ನದ ಮೇಲೆ ಎದ್ದಿರುವ ಹುಣ್ಣನ್ನು ನೋಡುವಾಗ ಮಗಳ ಮನಸ್ಸಿನಲ್ಲಿ ಹೆಣ್ಣು ಗಂಡುಗಳೆಂಬ ಕಾಂಪ್ಲೆಕ್ಸಿಟಿಯನ್ನು ಮೈಲುದೂರದಲ್ಲಿರಿಸಿ ನಿಂತ ಶುದ್ಧ ಕರುಣಾಭಾವ.

‘ವಾದ’ಗಳಿಂದ ಅಂತ್ಯವಾಗುವ ಪದಗಳೆಲ್ಲಾ , ವಿಶೇಷವಾಗಿ ಸ್ತ್ರೀವಾದ, ಸಮಾನತಾವಾದ, ಜಾತಿ-ವಿಜಾತಿಗಳ ವಾದ ನನ್ನಲ್ಲಿ ಗೊಂದಲಗಳನ್ನು ಮೂಡಿಸುತ್ತವೆ. ಹೆಸರಿಗೆ ತಕ್ಕಂತೆ ‘ವಾದ’ ವಾಕ್ಚಾತುರ್ಯದಲ್ಲಿ ಮತ್ತನ್ನೇರಿಸಿಕೊಳ್ಳುತ್ತಾ ಪ್ರತಿವಾದವನ್ನೂ ಹುಟ್ಟುಹಾಕಿ ಕೋರ್ಟಿನ ಸೀನಿನಂತೆಯೇ ಅಸಹನೀಯವಾಗುತ್ತಾ ಸಾಗುತ್ತದೆ. ಸಾಹಿತ್ಯವೆಂಬ ನಿರರ್ಗಳತೆಗೆ ನಮ್ಮ ವಾದಗಳ ಮತ್ತು ‘ಇಸಂ’ಗಳ ಫ್ರೇಮ್‌ವರ್ಕ್‌ನ್ನು ರೂಪಿಸುವ ಪ್ರಯತ್ನದ ಮೂಲದಲ್ಲಿಯೇ ಅದರ ಜೊಳ್ಳುತನದ ಮತ್ತು ಬಾವಿಕಪ್ಪೆಯ ನೋಟದ ಐರನಿ ಅಡಗಿದೆ. ನಾವು ಕಲ್ಪಿಸಿಕೊಳ್ಳುವ ಸಾಧ್ಯತೆಗಳಿಗಿಂತಾ ಅಗಾಧವಾದುದು ಸಾಹಿತ್ಯ. ಸಾಹಿತ್ಯದ ಕಲ್ಪಿತ ಸಾಧ್ಯತೆಗಳಿಗಿಂತ ಅಗಾಧವಾದುದು ಜೀವನ. ಹೆಂಡತಿಗೋಸ್ಕರ ಪ್ರಾಣಕೊಡುವವನ ಪಕ್ಕದ ಮನೆಯಲ್ಲೇ ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಯ ಜೀವತೆಗೆಯುವವನೂ ಇರುತ್ತಾನೆ. ಹಾಗಾಗಿ, ಸಮಾಜದ ಯಾವ ಮುಖವೂ ಸಾಹಿತ್ಯದ ಬಿಂಬದಲ್ಲಿ ವ್ಯರ್ಥವಲ್ಲ , ಅಸಹನೀಯವಲ್ಲ , ಅವಿವೇಕವಲ್ಲ. ಸಿಗುರಿನ ಬುಟ್ಟಿಯಂತೆ ಬಾಳಿನ ಎಳೆಗಳನ್ನು ಹೆಣೆದುಕೊಂಡ ಅವೇ ಮುಖಗಳು ಕಾಣುತ್ತಿರಬೇಕು. ಬಿಂಬಕ್ಕೆ ಸರಿಯೂ ಇಲ್ಲ , ತಪ್ಪೂ ಇಲ್ಲ . ಇರಲೂಬಾರದು. ಕನ್ನಡಿಯಲ್ಲಿ ನಮ್ಮ ಬಿಂಬದ ಹೊರತಾಗಿ ಬೇರೆ ಮುಖವನ್ನು ನಿರೀಕ್ಷಿಸುವುದು ಎಷ್ಟರ ಮಟ್ಟಿನ ನ್ಯಾಯ?

ಹೆಲೆನ್‌ ವೆಂಡ್ಲರ್‌ಗೆ ಶರನ್‌ಳ ಸಾಹಿತ್ಯ ಅಶ್ಲೀಲವಾಗಿ ಹೇಗೆ ಕಂಡಿತು? ಊರು ಊರುಗಳಲ್ಲಿ ಹತ್ತತ್ತು ಸ್ಟ್ರಿಪ್‌ ಕ್ಲಬ್‌ಗಳಿದ್ದು ಹೆಣ್ಣಿನ ದೇಹದ ಇಂಚಿಂಚನ್ನೂ ಹರಾಜು ಹಾಕುವ ದೇಶದಲ್ಲಿ ಶರನ್‌ಳ ಸಾಹಿತ್ಯ ಮಾತ್ರ ಹೇಗೆ ಸ್ತ್ರೀ ವಿರೋಧಿಯಾಯಿತು, ಹೇಗೆ ಪೋರ್ನೋಗ್ರಫಿಯಾಯಿತು ? ಹೀಗೇ ಬರೆಯಬೇಕೆಂದು ಹೆಣ್ಣಿಗೆ ಹೆಣ್ಣೇ ವಿಧಿಗಳನ್ನು ರೂಪಿಸುತ್ತದಲ್ಲಾ ?

Vaidehiವೈದೇಹಿಯ ‘ನಮ್ಮ ಲೋಕದ ಗೀತೆ’ ಎನ್ನುವ ಪ್ರಬಂಧ ನನಗೆ ಬಹಳ ಇಷ್ಟ . ಹಾಗೆಂದಂತೆ, ಈಚೆನ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ವೈದೇಹಿಯ ಸಾಹಿತ್ಯದ ಬಗ್ಗೆ ಹೆಚ್ಚಿನ ಚರ್ಚೆಯಾದಂತೆ ಕಾಣಲಿಲ್ಲ . ವೈದೇಹಿ ಹೇಳುತ್ತಾರೆ:

‘ಪುರುಷರಿಗೆ ನಾವು ಎಂದಿಗೂ ಸಮರಲ್ಲ. ಅದಕ್ಕಿಂತಾ ಮುಖ್ಯವಾಗಿ ನಮ್ಮ ಸಮಕ್ಕೆ ಪುರುಷರು ಎಂದೂ ಬಂದು ನಿಲ್ಲಲಾರರು. ಎಲ್ಲಿ ಸಮಾನ ಅವಕಾಶಗಳನ್ನು ಪಡೆಯಲಾರೆವೋ ಅಲ್ಲಿ ಹೋರಾಡಿಯಾದರೂ ಒಂದಲ್ಲ ಒಂದು ದಿನ ಸಮಾನ ಅವಕಾಶ ಗಳಿಸಿಕೊಂಡೇವು. ಆದರೆ ತಂತಾನೆ ಲಭ್ಯವಾಗುವ ನಮ್ಮದೇ ಆದ ಅನುಭವಗಳನ್ನು ಗುರುತಿಸುತ್ತಾ ಗೌರವಿಸುವುದನ್ನು ಬಿಟ್ಟು ಧಿಕ್ಕರಿಸುವುದರಲ್ಲಿ , ಹೀಯಾಳಿಸುವುದರಲ್ಲಿ ಏನು ಬಂತು? ನಾವೇಕೆ ಪುರುಷದನಿಯಲ್ಲಿ ಮಾತಾಡಬೇಕು? ನಾವು ನಮ್ಮ ಕಂಠದಲ್ಲಿ ಹಾಡೋಣ. ಅದು ಜೋ ರಾಗವಿರಲಿ, ಪ್ರೇಮರಾಗವಿರಲಿ, ಇನ್ಯಾವ ಬಗೆಯ ರಾಗ-ವಿರಾಗಗಳೇ ಇರಲಿ, ನಮ್ಮದೇ ದನಿ ಅಲ್ಲಿರಲಿ.’

ದಬ್ಬಾಳಿಕೆಗಳಿಗೆ ಅಡಗದ ದನಿ ಸ್ತ್ರೀಯರಿಗಿರಲಿ, ಪ್ರಲೋಭನೆಗಳಿಗೆ ಕರಗದ ದನಿ ಪುರುಷನಿಗಿರಲಿ, ಚಳುವಳಿಗಳಿಗೆ ಹಂಚಿ ಹೋಗದ ದನಿ ದಲಿತನಿಗಿರಲಿ, ಸ್ವಂತಿಕೆಯ ದನಿ ಬ್ರಾಹ್ಮಣನಿಗೆ ಉಳಿಯಲಿ, ವಾಹನ ಸಮುದ್ರದ ಸಾಂದ್ರತೆಯ ನಡುವೆ ಬೆಂಗಳೂರಿಗನ ದನಿ ಬತ್ತಿ ಹೋಗದಿರಲಿ, ಕೆಂಡಮಂಡಲ ಬೇಸಿಗೆಯ ನಡುವೆಯೂ ರಾಯಚೂರಿಗನ ದನಿ ಆರದಿರಲಿ, ಡಾಲರಿನ ಝಣಝಣದ ಹೊರತಾಗಿ ಅನಿವಾಸಿ ಕನ್ನಡಿಗನ ದನಿ ಬೇರೆ ಕೇಳಲಿ.

ಇನ್ಶೂರೆನ್ಸ್‌ ಏಜೆಂಟ್‌ ಆಫೀಸು ಮುಚ್ಚಿಕೊಂಡು ಹೋಗಿದ್ದಾನೆ. ಫೋನ್‌ ಮಾಡಿ ಬರುವ ಸಾಮಾನ್ಯಜ್ಞಾನವನ್ನು ನಾನು ಉಪಯೋಗಿಸಲಿಲ್ಲವಲ್ಲ ಎಂದು ಬೇಸರವಾಗುತ್ತದೆ. ಪರವಾಗಿಲ್ಲ , ನಾಳೆ ಒಂದು ದಿನವಿದೆ. ನಾಳೆಯೂ ಸಿಗದಿದ್ದರೆ ಇನ್ಶೂರೆನ್ಸ್‌ ಇಲ್ಲದೆ ನಾಡಿದ್ದಿನಿಂದ ಕಾರು ಓಡಿಸುವಂತಿಲ್ಲ . ಚಿಂತೆಯಿಲ್ಲ, ಮನೆಯಲ್ಲೊಂದು ಬೈಸಿಕಲ್‌ ಇದೆ, ಅದನ್ನು ಓಡಿಸಿದರೆ ಆಯ್ತು.

ಶರನ್‌ಳ ಸಂದರ್ಶನ ಮುಗಿದಿರುತ್ತದೆ. ಬೇರೇ ಸ್ಟೇಷನ್‌ ಟ್ಯೂನ್‌ ಮಾಡುತ್ತೇನೆ. ಲೈಟ್‌ ರಾಕ್‌ ಮ್ಯೂಸಿಕ್‌ ಬರುತ್ತದೆ. ಇನ್ನು ಇಪ್ಪತ್ತೈದು ಮೈಲಿ ವಾಪಸ್ಸು ಡ್ರೈವ್‌ ಮಾಡಬೇಕು.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X