• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವ-ಪಶ್ಚಿಮ: ಎತ್ತಣಿಂದೆತ್ತ ಸಂಬಂಧವಯ್ಯ

By Staff
|
  • ಎಂ.ಆರ್‌. ದತ್ತಾತ್ರಿ

dramanna@hotmail.com

M. R. Dattatri, CAದೆಹಲಿಯ ಐ.ಐ.ಟಿ ಯಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ ಆಗಿರುವ ಸಿ.ಪಿ.ರವಿಕುಮಾರ್‌ರ ‘ದಂತಪಂಕ್ತಿ’ ಎನ್ನುವ ಕವಿತಾಸಂಕಲನದರಲ್ಲಿರುವ ‘ಅಮೆರಿಕದ ಹೈವೇ ಮೇಲೆ’ ಎನ್ನುವ ಕವಿತೆಯ ಕೆಲವು ಸಾಲುಗಳು ಹೀಗಿವೆ:

ಹೈವೇಯ ಎರಡೂ ಕಡೆ

ತೆರೆತೆರೆ ತೆರೆ ಕಾಡು

ಕಾಡಿನಲ್ಲಿ ಉಕ್ಕಿ ಹರಿವ ಹೂರಾಶಿ

ಹೂವಿಗೆ ಹೆಸರಿಲ್ಲ.

ಇನಿಯನನ್ನು ಒಬ್ಬಳಾದರೂ

ಬಾಬ್‌ಗೂದಲ ಚೆಲುವೆ

ಹೂವಿಗಾಗಿ ಗೋಗರೆದು ಬೇಡಲಿಲ್ಲ.

ಒಬ್ಬನಾದರೂ ಕವಿ

ಈ ಚೆಲುವನ್ನು ಹಾಡಲಿಲ್ಲ.

ಭೌಗೋಳಿಕವಾಗಿ ಸೂರ್ಯ ಮೊದಲು ಪೂರ್ವಾರ್ಧ ಗೋಳಕ್ಕೆ ಕಾಣಿಸಿಕೊಳ್ಳುತ್ತಾನೆ ಎನ್ನುವಂತಹ ನೈಸರ್ಗಿಕ ವ್ಯತ್ಯಯಗಳನ್ನು ಬಿಟ್ಟರೆ ಪೂರ್ವ ಪಶ್ಚಿಮಗಳು ಬೇರೆಯಾಗಿ ನಿಲ್ಲುವುದು ಇಂತಹ ಸೂಕ್ಷ್ಮಗಳಿಗಾಗಿ. ಪೂರ್ವದಲ್ಲಿ ಹೂವು ಅರಳುವುದೇ ಪಟಲಗಳ ಹಿತವಾದ ಸ್ಪರ್ಶಕ್ಕೆ, ಗಾಳಿಗದುರುವ ದಟ್ಟ ಕಪ್ಪು ಕೂದಲುಗಳ ಜೊತೆಗೇ ಒಂದಾಗಿ ಮಾನಿನಿಯರ ಮುಖದಲ್ಲಿ ಮಂದಹಾಸವನ್ನು ಅರಳಿಸುವುದಕ್ಕೆ, ಸರಸ್ವತಿಯ ಪಾದಪೂಜೆಗೆ, ಲಕ್ಷ್ಮಿಯ ಅಲಂಕಾರಕ್ಕೆ. ಪಶ್ಚಿಮದಲ್ಲಾದರೋ, ಅದು ಅರಳುವುದು ಕಾಂಕ್ರೀಟ್‌ ಜಂಗಲಿನಲ್ಲಿ ಬಸವಳಿದ ಜನರ ಕಣ್ಣಿನ ಆರೋಗ್ಯಕ್ಕೆ, ಶರವೇಗದ ಕಾರು ಕಾಡನ್ನು ದಾಟುವಾಗ ಹಕ್ಕಲ್‌ಬರಿ ಬಳ್ಳಿಯ ಹೂವುಗಳನ್ನು ಕಂಡು, ಕಂಡೂ ಕಾಣದಂತೆ ಮುಗುಳ್ನಗುವುದಕ್ಕೆ.

ಸುಖವನ್ನು ಅರಸಿ ಹೋಗುವುದು ಪಶ್ಚಿಮದ ನಿಲುವು. ಬಾಯಿಬಿಟ್ಟು ಹೇಳದಿದ್ದರೂ ಅದೇ ಪೂರ್ವದ ಗುರಿಗಳಲ್ಲಿ ಒಂದು ಕೂಡ. ಸುಖದ ವ್ಯಾಖ್ಯಾನ ಬೇರೆಬೇರೆ. ಅರಸಿ ಹೋಗುವ ದಾರಿಗಳು ಬೇರೆ ಬೇರೆ. ನಾವು ಕುಬೇರನನ್ನು ಹುಡುಕಿ ತರಲು ಹೊರಟಿಲ್ಲ ಎಂದು ಪೌರಾತ್ಯರು ತಮಗೆ ತಾವೇ ಮೋಸ ಮಾಡಿಕೊಂಡಷ್ಟೇ ಸುಲಭವಾಗಿ ‘ಹಣ ಎಲ್ಲವನ್ನೂ ಕೊಳ್ಳಲಾಗದು’ ಎಂದು ಪಿಸುಗುಟ್ಟುತ್ತಾ ಅಮೆರಿಕನ್‌ ಎಲ್ಲವನ್ನೂ ಕೊಳ್ಳುತ್ತಿದ್ದಾನೆ. ಪ್ರಾಚೀನ ಸಂಸ್ಕೃತಿ ಭವ್ಯತೆ ಮುಂತಾದವೆಲ್ಲಾ ಬಡಾಯಿಯ ಮಾತುಗಳಾಗಿ ಪದಪಂಜರದಲ್ಲಿ ಗರ್ಭಗುಡಿಯ ನಿಶ್ಚಲವಾದ ವಿಗ್ರಹದಷ್ಟು ಸುಂದರವಾಗಿ ಪ್ರತಿಷ್ಠಾಪಿತವಾಗಿವೆ. ಕಮಲದಲ್ಲಿ ಕುಳಿತ ಲಕ್ಷ್ಮಿಯ ಕೈನಿಂದ ಸುರಿಯುತ್ತಿರುವ ನಾಣ್ಯಗಳು ಕ್ವಾರ್ಟರ್ಸ್‌, ಡೈಮ್‌, ನಿಕ್ಕಲ್‌ಗಳಾಗಿ ‘ಡಾಲರ್‌ ಒಂದೇ ಸತ್ಯ’ ಎಂದು ಸಾರಿ ಸಾರಿ ಹೇಳುತ್ತಿವೆ. ಅಮೆರಿಕಾದ ಕಾನ್ಸುಲೇಟ್‌ ಆಫೀಸುಗಳಿಗೆ ಟನ್ನುಗಟ್ಟಲೆ ವೀಸಾ ಅಪ್ಲಿಕೇಷನ್‌ಗಳು ಸುರಿಯುತ್ತವೆ. ನಮ್ಮಷ್ಟೇ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ್ದ ಮೆಕ್ಸಿಕನ್ನರು ಗಡಿಯಲ್ಲಿರುವ ಗೋಡೆಯನ್ನು ಹಾರಿ ಅಮೆರಿಕಾಕ್ಕೆ ನುಸುಳುವುದು ಹೇಗೆ ಎಂದು ಚಿಂತಿಸುತ್ತಾರೆ.

ಇರಬಹುದು. ಪೂರ್ವದ ಸಂಸ್ಕೃತಿ ಪಶ್ಚಿಮದ ಸಂಸ್ಕೃತಿ ಎಂದು ನಮಗೆ ನಾವೇ ವಿಂಗಡಿಸಿಕೊಂಡು ಖುಷಿಪಡುವ ಈ ಕಾಲದಲ್ಲಿ ಮಾನವ ನಿರ್ಮಿತವಾದ ಈ ಸಂಸ್ಕೃತಿಗಳ ಅನುಕ್ಷಣದ ಕೊಡು ಕೊಳ್ಳುವಿಕೆ ಎಷ್ಟರ ಮಟ್ಟಿಗೆ ನಮ್ಮ ಹತೋಟಿಯಲ್ಲಿ ನಡೆಯುತ್ತಿದೆ? ಇವತ್ತಿನ ಜಾಗತೀಕರಣದ ಹೊಳೆಯ ಉಬ್ಬರದಲ್ಲಿ ಕೊಚ್ಚಿಹೋಗಲೂ ಆಗದೆ ಈಜಿ ಬದುಕಲೂ ತಿಳಿಯದೆ ಕಣ್ಣು ಬಾಯಿ ಬಿಡುತ್ತಿರುವ ನಮಗೆ ಉತ್ತರ ಗೊತ್ತಿಲ್ಲದ, ‘ಗೊತ್ತಿದ್ದರೆ ಎಷ್ಟು ಸೊಗಸಿತ್ತು’ ಎಂದು ಹಂಬಲಿಸುವ ಪ್ರಶ್ನೆಯಿದು.

ಹೂದೋಟದ ನಡುವೆ ಹಾದು ಹೋಗುವಾಗ ‘ಮಲ್ಲಿಗೆ ಚಂಪಕ ಪುನ್ನಾಗಗಳ’ ಸುಗಂಧವನ್ನು ಹಿತವಾಗಿ ಆಘ್ರಾಣಿಸುವಂತೆಯೇ ಅಸಹನೀಯ ದುರ್ಗಂಧದ ಪ್ರದೇಶದಲ್ಲಿ ಮುಖ ಸಿಂಡರಿಸುತ್ತೇವೆ. ಆದರೂ ಉಸಿರಾಟ ನಿರಂತರ. ಓಡಾಟ ನಿಲ್ಲದ ಹಾಡು. ಇಲ್ಲಿ ದುರ್ಗಂಧವಿದೆ ಎಂಬ ತಿಳುವಳಿಕೆಯೇ ಮೋಜಿಗೆ ಕಾರಣವಾಗಿ ಸಹ್ಯ ಶಕ್ತಿಯಾಗಿ ಪರಿಣಮಿಸುತ್ತದೆ. ಸುಖ ದುಃಖಗಳಲ್ಲಿ ನಮ್ಮನ್ನು ತೊಡಗಿಸಿ ಬದುಕೆಂಬ ಗಾಡಿಯ ಚಲನೆಯಲ್ಲಿ ಒಂದಾಗುತ್ತೇವೆ. ಅನಿವಾರ್ಯತೆಗಳು ದೈನಂದಿನ ಕ್ರಿಯೆಯನ್ನು ರೂಪಿಸುತ್ತವೆ. ದೈನಂದಿನ ಚಟುವಟಿಕೆಗಳು ಹಿಡಿದ ನೆಲವನ್ನು ಸವೆಸಿ ಸವೆಸಿ ರಸ್ತೆಯನ್ನು ನಿರ್ಮಿಸುತ್ತವೆ. ರಸ್ತೆಗಳು ಬದುಕಿಗಾಗಿ, ಸಂತೋಷಕ್ಕಾಗಿ, ಸಾಧನೆಗಾಗಿ, ಜ್ಞಾನಾನ್ವೇಷಣೆಗಾಗಿ ನಂಬಿಕೆಗಳಿಗಾಗಿ ಹಿಡಿದ ದಿಕ್ಕು ಮತ್ತು ಅರಳಿದ ಸಂಸ್ಕೃತಿಯ ಪ್ರತೀಕವಾಗಿ ನಿಲ್ಲುತ್ತವೆ. ಪೂರ್ವದಿಂದ ಬಂದದ್ದೋ ಅಥವಾ ಪಶ್ಚಿಮದಿಂದಲೋ ಎನ್ನುವುದು ಅರ್ಥವಂತಿಕೆಯುಳ್ಳ ಪ್ರಶ್ನೆ ಎಂದೇ ಅನ್ನಿಸಿಕೊಳ್ಳುವುದಿಲ್ಲ!

ಸಾಮಾನ್ಯ ಮನುಷ್ಯನಲ್ಲಿ ಹುಟ್ಟುವ ಬದುಕಿನ ಮೇಲಿನ ಪ್ರೀತಿ ತತ್ವಶಾಸ್ತ್ರಕ್ಕಿಂತಾ ಹೆಚ್ಚಾಗಿ ಆ ಕ್ಷಣದ ಸುಪ್ರಿಯತೆಯಲ್ಲಿ ಗಾಢವಾಗಿರುತ್ತದೆ. ಹಾಗಾಗಿ ಯಂತ್ರ ನಿರ್ಮಿತವಾದ, ಹಕ್ಕಿಯ ಪುಕ್ಕವನ್ನು ಸವರಿದಷ್ಟು ನಯವಾದ ‘ಪಶ್ಚಿಮದಿಂದ ಬಂದ’ ಬಟ್ಟೆಯನ್ನು ತಿರಸ್ಕರಿಸಿ ಶುದ್ಧ ಶ್ವೇತವರ್ಣದ ತ್ಯಾಗಗಳ ಸಂಕೇತದಂತೆ ನಿಲ್ಲುವ ನೂಲಿನ ದಾರದ ಖಾದಿ ಬಟ್ಟೆಯನ್ನು ಧರಿಸಲು ಗಾಂಧೀಜಿಯಷ್ಟೇ ಆತ್ಮಸ್ಥೈರ್ಯ ಮತ್ತು ತ್ಯಾಗ ಮನೋಭಾವಗಳು ಬೇಕು. ಅದು ಸಾಮಾನ್ಯನಿಗೆ ಅಷ್ಟು ಸುಲಭವಾಗಿ ಸಿದ್ಧಿಸುವುದಿಲ್ಲ. ಅವನಿಗೆ ಪಶ್ಚಿಮದಿಂದ ಬಂದದ್ದೋ ಅಥವಾ ಪೂರ್ವದಿಂದಲೋ ಎನ್ನುವುದು ಮುಖ್ಯವಲ್ಲ. ಅನಿವಾರ್ಯತೆಗಳು ಬದಲಾವಣೆಗಳಿಗೆ ಕರ್ತೃಗಳಾಗುತ್ತವೆ. ಕನ್ನಡ ಮಾತನಾಡುವ ಅನಿವಾರ್ಯತೆ ಇದ್ದಷ್ಟು ದಿನ ಕನ್ನಡ ಉಳಿಯುತ್ತದೆ. ಯಾರು ಎಷ್ಟೇ ಚಳುವಳಿಗಳನ್ನು ರೂಪಿಸಿದರೂ ಎಮ್‌.ಎನ್‌.ಸಿ.ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿದರೂ ಅನಿವಾರ್ಯತೆ ಕಳೆದ ದಿನ ಆ ವಸ್ತು ನೇಪಥ್ಯಕ್ಕೆ ಸರಿಯುತ್ತದೆ. ಭಾಷೆಯೇ ಆಗಿರಬಹುದು, ಧರ್ಮವೇ ಆಗಿರಬಹುದು, ಅನಿವಾರ್ಯತೆಯ ನಿಯಮದಿಂದ ಅತೀತವಲ್ಲ.

ಇದು ಬಹಳ ಸೂಕ್ಷ್ಮವಾದ ವಿಚಾರ. ನಾವೆಷ್ಟೇ ವಿಜ್ಞಾನದಲ್ಲಿ ಮುಂದುವರೆದಿದ್ದೇವೆಂದು ಹೆಮ್ಮೆ ಪಟ್ಟುಕೊಂಡರೂ, ಆಧುನಿಕ ವಿಜ್ಞಾನ ಬಹುತೇಕವಾಗಿ ಪಾಶ್ಚಾತ್ಯರಿಂದ ಬಂದದ್ದು. ಕಾರಣಗಳು ಹಲವಾರು- ಮುಖ್ಯವಾಗಿ ಪಾಶ್ಚಾತ್ಯರ ವಸ್ತು ಜಗತ್ತಿನ ತುಡಿತ. ವಿಜ್ಞಾನದಲ್ಲಿ ನಮ್ಮದು ಬಹುಪಾಲು ಪಾಶ್ಚಿಮಾತ್ಯರನ್ನು ಹಿಂಬಾಲಿಸುವುದರಲ್ಲೇ ಸಂದಿತು. ಪೂರ್ವದ ವಿಶೇಷತೆಯೇ ಬೇರೆ. ವಸ್ತು ಜಗತ್ತಿಗೆ ಹೊಂದಿಕೊಂಡಂತೆಯೇ ಅದರಿಂದ ದೂರ ನಿಲ್ಲಬಲ್ಲ ಚಿತ್ತಶುದ್ಧಿ ಅದಕ್ಕೆ ಸಂದಿದೆ. ವಸ್ತುಗಳ ಬೇಟೆಗೆ ಹೋಗದೇ ಸುಖವಾಗಿರುವ ಮಂತ್ರಸಿದ್ಧಿಯನ್ನು ಭಾರತೀಯರು ಸ್ವಲ್ಪ ಮಟ್ಟಿಗಾದರೂ ಸಿದ್ಧಿಸಿಕೊಂಡಿದ್ದಾರೆ. ಹಾಗಾಗಿ ಹಣ ಕೊಳ್ಳಲಾಗದ ಶಾಂತಿಯನ್ನು ಕಿಂಚಿತ್ತಾದರೂ ನಾವು ದಕ್ಕಿಸಿಕೊಂಡಿದ್ದೇವೆ.

ಆಧುನಿಕ ವಿಜ್ಞಾನವನ್ನು ದಕ್ಕಿಸಿಕೊಳ್ಳುವುದಕ್ಕೆ ಪೂರ್ವ ಪಶ್ಚಿಮದ ಹಿಂದೆ ಬಿದ್ದಂತೆಯೇ ಮನಃಶ್ಶಾಂತಿಯ ಹುಡುಕಾಟದಲ್ಲಿ ಪಶ್ಚಿಮ ಪೂರ್ವದೆಡೆಗೆ ನೋಡುತ್ತಿದೆ. ವಿಜ್ಞಾನವನ್ನು ಪಡೆಯುವ ನೆಪದಲ್ಲಿ ನ್ಯೂಕ್ಲಿಯರ್‌ ಬಾಂಬುಗಳನ್ನು ತಯಾರಿಸಿದಂತೆ ಶಾಂತಿ ನಿರ್ವಾಣಗಳ ಹಂಬಲದಲ್ಲಿ ಪಾಶ್ಚಿಮಾತ್ಯರು ಗೊಂದಲಕ್ಕೆ ಬಿದ್ದಿದ್ದಾರೆ. ಕಂಪನಿಯ ಸಿ.ಇ.ಒ ಗಳಿಗೆ ಮಾತ್ರ ಶಾಂತಿಯನ್ನು ಬೋಧಿಸುವ ಸ್ವಾಮಿಗಳಿದ್ದಾರೆ. ಒಬ್ಬ ಗುರೂಜಿ, ಅವರ ಹೆಸರನ್ನು ನಾನು ಹೇಳಲು ಇಚ್ಛಿಸುವುದಿಲ್ಲ , ಏಕೆಂದರೆ ಪ್ರಪಂಚದಾದ್ಯಂತ ಅವರ ಶಿಷ್ಯ ಕೋಟಿ ಇದೆ, ಬುದ್ಧ ಮತ್ತು ಜಗತ್ತಿನ ಶಾಂತಿಯ ವಿಚಾರವಾಗಿ ಮಾತನಾಡಲು ತಲಾ ಇಪ್ಪತ್ತೈದು ಡಾಲರಿನಂತೆ ಹಣ ಸಂಗ್ರಹಿಸಿದರು. ರಾತೋರಾತ್ರಿ ಅರಮನೆಯನ್ನು ತ್ಯಜಿಸಿ, ಜ್ಞಾನೋದಯವನ್ನು ಕಂಡು, ಮರದ ಕೆಳಗೆ ಕುಳಿತು ಸಾಮಾನ್ಯ ಜನರಿಗೆ ಶಾಂತಿಯನ್ನು ಬೋಧಿಸಿದವನು ಬುದ್ಧ !

ಪೂರ್ವ ಪಶ್ಚಿಮಗಳು ಹೀಗೆಯೇ ಇರಬೇಕೆ? ಪಶ್ಚಿಮದ ವಸ್ತು ಪ್ರಪಂಚವನ್ನು ತನ್ನದಾಗಿಸಿಕೊಂಡೇ ಪೂರ್ವ, ವಸ್ತು ಪ್ರಪಂಚಕ್ಕೆ ದಾಸನಾಗದೆ ಉಳಿದೀತೆ? ಯೋಗವನ್ನು ಕೇವಲ ‘ಸ್ಟ್ರೆಚ್‌ ಎಕ್ಸರ್‌ಸೈಜ್‌’ ಆಗಿ ನೋಡದೆ ಯೋಗಿಯ ಕಣ್ಣಲ್ಲಿ ಹೊಳೆಯುವ ವೈರಾಗ್ಯದ ಬೆಳಕನ್ನೂ ಪಶ್ಚಿಮ ಕಂಡೀತೇ?

ಸಾರ್ಥಕವಾದ ಜೀವನ ಯಾವುದು?

ನಿಮ್ಮಷ್ಟೆಯೇ ನಾನೂ ಗೊಂದಲದಲ್ಲಿದ್ದೇನೆ.

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more