ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಂತರು, ದೇವರು ಮತ್ತು ಮೂಕಜ್ಜಿ

By Oneindia Staff Writer
|
Google Oneindia Kannada News

ಎಂ.ಆರ್‌. ದತ್ತಾತ್ರಿ,
ಫಾಸ್ಟರ್‌ ಸಿಟಿ, ಕ್ಯಾಲಿಫೊರ್ನಿಯ

'ಏನು ಮೋಕ್ಷವೋ! ಯಾರ ಮೋಕ್ಷವೋ! ಒಂದೊಂದು ಸಾರಿ ನಗು ಬರುತ್ತದೆ - ಮಗು ನನಗೆ. ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು. ವಿಠಲನನ್ನು, ನಾರಾಯಣನನ್ನು ನಂಬಿ ಹಾಡಿದರು. ನಂಬಿದ್ದೇ ನಂಬಿದ್ದು; ಹಾಡಿದ್ದೇ ಹಾಡಿದ್ದು. ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು ಹೋದದ್ದು ನಿಜ. ಹಾಗೆ ಮಾಡಿ ಬೇಡಿದ್ದು ಯಾರನ್ನು ? ತಂತಮ್ಮ ಹೆಂಡಿರೊಡನೆ ಸುಖವಾಗಿ ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು, ಶಿವನನ್ನು. ಅವರೇನು ಕೊಟ್ಟಾರು? ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ ?"

'ಋಷಿಗಳೇಕೆ ಗುಹೆ ಸೇರುತ್ತಾರೆ ಗೊತ್ತೆ ? ನೀನು ಚೇರಟೆಹುಳ ಕಂಡಿದ್ದೀಯಲ್ಲ. ಅದನ್ನು ಮುಟ್ಟಿದರೆ ಏನು ಮಾಡುತ್ತದೆ? ಥಟ್ಟನೆ ಮುರುಟಿಕೊಂಡು ಮಲಗಿಬಿಡುತ್ತದೆ. ಹೊರಗಿನ ಭಯಕ್ಕೆ ತಾನು ಮುರುಟಿ ಮಲಗಿಕೊಂಡರೆ ಆಪತ್ತು ತಪ್ಪುತ್ತದೆ ಅಂತ ಅದರ ಯೋಚನೆ. ಈ ಋಷಿಗಳು ಗುಹೆ ಸೇರುವುದೂ ಅದಕ್ಕೆ. ಅವರಿಗೆ ಹುಲಿ ಸಿಂಹಗಳ ಭಯವಲ್ಲ. ಅವರಿಗಿರುವುದು ಸಂಸಾರದ ಭಯ. ಅವರನ್ನು ಹುಟ್ಟಿಸಿದ ದೇವರೇ ಸಂಸಾರದ ಒಳಗೆ ಹುಟ್ಟಿಸಿ 'ಇರು ಮಗುವೇ ಎಲ್ಲರೊಂದಿಗೆ ನೀನು" ಎಂದುಬಿಟ್ಟ . ಇಲ್ಲವಾದರೆ ಯಾಕೆ ಹುಟ್ಟಿಸಬೇಕಾಗಿತ್ತು ? ಇಲ್ಲಿ ಇರುವುದಕ್ಕಾಗಿಯೇ ಅವನು ಹುಟ್ಟಿಸಿದ. ಇವರಿಗೆ ಸಂಸಾರದಲ್ಲಿ ಇರುವುದಕ್ಕೇ ಭಯ. ಸಂಸಾರ ಜಗತ್ತು ಅಂದಮೇಲೆ ಸುಖ, ದುಃಖ, ನೋವು ಮತ್ತೊಂದು ಇದ್ದೇ ಇರುತ್ತದೆ. ಇವರಿಗೆ ಅಂಥ ನೋವು ಬೇಡ, ದುಃಖ ಬೇಡ, ಬರಿಯ ಸುಖ ಮಾತ್ರ ಬೇಕು. ಅದೂ ಎಂಥ ಸುಖ ? ಶಾಶ್ವತ ಸುಖ! ಅಂಥ ಸುಖ ಆ ಪರಮಾತ್ಮನಿಗೇ ಉಂಟೋ ಇಲ್ಲವೋ! ಅವನು ಸೃಷ್ಟಿಸಿದ ಜಗತ್ತು ಇರುವ ತನಕವೂ ಹೇಗೆ ಸಿಗಬೇಕು ಅವನಿಗೆ ಸುಖ?"

ಈ ಮಾತುಗಳನ್ನಾಡುವ ವ್ಯಕ್ತಿ ದೊಡ್ಡ ತತ್ವಶಾಸ್ತ್ರಜ್ಞನಲ್ಲ, ಫ್ರಾಯ್ಡ್‌, ಟಾಲ್‌ಸ್ಟಾಯ್‌ ಅಥವಾ ಕಾರ್ಲ್‌ ಮಾರ್ಕ್ಸ್‌ರನ್ನು ಓದಿಕೊಂಡವರಲ್ಲ. ಬರಹಗಾರನ ಕಲ್ಪನೆಯಲ್ಲಿ ಹುಟ್ಟುವ ಪಶ್ಚಿಮಘಟ್ಟಗಳ ತಪ್ಪಲಲ್ಲಿ ಅಡಗಿಹೋದ ಕುಗ್ರಾಮ ಒಂದನ್ನು ಬಿಟ್ಟು ಬೇರೆಡೆಗೆ ಹೆಜ್ಜೆ ಇಟ್ಟವಳಲ್ಲ. ಬಾಲವಿಧವೆಯಾಗಿ ಮನೆ ಸೇರಿದವಳು. ಕೊಲ್ಲೂರ ಮೂಕಾಂಬಿಕೆಯಂತೆಯೇ ಅನೇಕ ವರ್ಷ ಮೂಕಿಯಾಗಿದ್ದವಳು. ಕೈಗೆ ಸಿಕ್ಕಿದ್ದನ್ನು ಹಿಡಿದು ಏಕಾಗ್ರತೆಯಿಂದ ಕಣ್ಣುಮುಚ್ಚಿ ಪಿಟಿ ಪಿಟಿ ಮಂತ್ರ ಹೇಳಿದಂತೆ... ತನಗೊಲ್ಲದ ಬಟ್ಟೆಯನ್ನು ತೊಟ್ಟ ಇತಿಹಾಸವನ್ನು ನಗ್ನಗೊಳಿಸಿ ಮುಕ್ತಗೊಳಿಸುವವಳೋ ಅಥವಾ ಸತ್ಯದ ಅರಿವೆಯನ್ನು ಕಳೆದುಕೊಂಡು ನಗ್ನವಾಗಿ ನಿಂತ ಇತಿಹಾಸಕ್ಕೆ ಮತ್ತೆ ಬಟ್ಟೆ ತೊಡಿಸುವವಳೋ? ಇಡೀ ಸಂಸಾರವನ್ನು ಕಾಣದೆಯೂ ಕಂಡವಳೋ? ಗಂಡು ಹೆಣ್ಣುಗಳನ್ನೊಡಗೂಡಿದ ಸೃಷ್ಟಿಯ ವೈಚಿತ್ರ್ಯವನ್ನು ಅನುಭವಿಸದೆಯೂ ಅರ್ಥ ಮಾಡಿಕೊಂಡವಳೋ ? ದೇವರನ್ನೇ ಪ್ರಶ್ನಿಸುತ್ತ ಅವನಿಗೊಂದು ಅರ್ಥವನ್ನು ಕೊಟ್ಟವಳೋ? ನಮ್ಮ ನಂಬಿಕೆಗಳ ಪಂಜರದಿಂದ ಅವನನ್ನು ಬಿಡುಗಡೆ ಮಾಡಲು ನೋಡಿದವಳೋ?

ದೇವರಿಗೂ ಸೃಷ್ಟಿ ಮಾಡಲಾಗಲಿಲ್ಲ ಇಂತಹ ಮೂಕಜ್ಜಿಯನ್ನು. ಕಾರಂತರು ಸೃಷ್ಟಿ ಮಾಡಿದರು. ದೇವರಿಗೇ ಕೊಡಲಾಗದ ಕನಸುಗಳನ್ನು ಆಕೆಗೆ ಕಾರಂತರು ಕೊಟ್ಟರು.

ಶತಮಾನಗಳಿಂದ ಅಬಾಧಿತವಾದ ನಂಬಿಕೆಯ ಬುಡವನ್ನು ಹಿಡಿದು ಅಲುಗಿಸಬೇಕೆಂದರೆ ತಾನು ಕಂಡುಕೊಂಡಿದ್ದರಲ್ಲಿ ಅಷ್ಟೇ ಆತ್ಮವಿಶ್ವಾಸವಿರಬೇಕು, ಸರಿ ತಪ್ಪುಗಳ ವಿವೇಚನೆಯ ಮೊದಲು ಎರಡೂ ಬಗೆಯ ಮನಸ್ಸುಗಳನ್ನು ಹಾಯುವ ಪರಕಾಯ ಪ್ರವೇಶದ ಶಕ್ತಿಯಿರಬೇಕು. ಸಮಾಜದ ಯಾವ ಪ್ರಲೋಭನೆಗಾದರೂ ಬುದ್ಧಿಯನ್ನು ಕೊಡದ ನಿಷ್ಠುರತೆ ಇರಬೇಕು. ಎಂದಿಗೂ ಆರದಂತಹ ಜ್ಞಾನದಾಹವಿರಬೇಕು. ಇವೆಲ್ಲಕ್ಕೂ ಪೂರಕವಾಗಿ ಅನುಭವದ ದ್ರವ್ಯವಿರಬೇಕು.

ಹಾಗಾಗಿಯೇ ಮೂಕಜ್ಜಿಯನ್ನು ಕಾರಂತರಿಗೆ ಸೃಷ್ಟಿ ಮಾಡಲು ಸಾಧ್ಯವಾಯಿತು. ದೇವರಿಗೆ ಆಗಲಿಲ್ಲ.

ಅಸಹನೆ, ದುರ್ವರ್ತನೆ, ಡಂಬಾಚಾರಗಳನ್ನು ಕಂಡಾಗ ಕಾರಂತರಿಗೆ ಸಿಟ್ಟು ಬರುತ್ತಿತ್ತು. ಅದೆಂತಹ ಸಿಟ್ಟು ಎನ್ನುತ್ತೀರಾ, ಮೂಕಜ್ಜಿಗೆ ಮೊಮ್ಮೊಗ ಸುಬ್ಬರಾಯನ ಮೇಲೆ ಕೋಪ ಬಂದು 'ಮಾಣಿ, ಎಷ್ಟೆಲ್ಲಾ ಅಧಿಕಪ್ರಸಂಗ ನಿನ್ನದು" ಎಂದು ಬಯ್ಯುತ್ತದಲ್ಲ , ಅಂತಹ ಸಿಟ್ಟು , ಮೇಷ್ಟ್ರಿಗೆ ವಿದ್ಯಾರ್ಥಿಗಳ ಮೇಲೆ ಬರುತ್ತದಲ್ಲ ಅಂತಹ ಸಾತ್ವಿಕ ಕೋಪ. ಆದರೆ ನೋಡಿ, ನಾವು ಅವರ ಸಹನೆಯನ್ನು ಬಹಳ ಪರೀಕ್ಷಿಸಿಬಿಟ್ಟೆವು. ತಮ್ಮ ತೊಂಭತ್ತರ ವಯಸ್ಸಿನಲ್ಲಿ ಚುನಾವಣೆಗೆ ನಿಲ್ಲುವಂತೆ ಮಾಡಿದೆವು. ತಮ್ಮ ತೊಂಭತ್ತಮೂರನೇ ವಯಸ್ಸಿನಲ್ಲಿ ತಮ್ಮೆಲ್ಲಾ ಪಠ್ಯಪುಸ್ತಕಗಳನ್ನು ರದ್ದುಪಡಿಸಿದ ಆಜ್ಞೆಯನ್ನು ವಿರೋಧಿಸಿ 'ಓಟಿನ ಆಸೆಗಾಗಿಯೇ ಅಲ್ಪಸಂಖ್ಯಾತರ ವರ್ಗಗಳನ್ನು ತುಷ್ಟಿಪಡಿಸುವಲ್ಲಿ ಮಗ್ನರಾಗಿರುವ ನಮ್ಮ ರಾಜಕಾರಣಿಗಳ ದುರಾಲೋಚನೆಯಿಂದ ಒಂದು ದಿನ ನಮ್ಮ ರಾಷ್ಟ್ರವನ್ನು ಒತ್ತೆ ಇಡಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ" ಎಂದು ಆಗ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರಿಗೆ ನೊಂದು ಪತ್ರ ಬರೆಯುವಷ್ಟು ಅವರನ್ನು ಗೋಳಾಡಿಸಿದೆವು.

ಆದರೆ ಕಾರಂತರ ಪ್ರಾಮಾಣಿಕತೆ ದೊಡ್ಡದು. ಆ ಪ್ರಾಮಾಣಿಕತೆ ಅವರಲ್ಲಿ ಮೂಡಿಸಿದ್ದ ತತ್ವನಿಷ್ಠೆ ದೊಡ್ಡದು. ಅಂತಹ ತತ್ವನಿಷ್ಠೆಗೆ ಬೆಂಬಲವಾಗಿದ್ದ ಅವರ ಪ್ರತಿಭೆ ದೊಡ್ಡದು. ಹಾಗಾಗಿಯೇ ಕಾರಂತರು ಕಲ್ಲು, ಮುಳ್ಳು, ಹುಳು, ಹುಪ್ಪಟೆ, ಹಾವು, ಹಲ್ಲಿಗಳ ವಿಕೃತನಾಡಿದು ಎಂದು ಕೈಕಟ್ಟಿ ಕೂರಲಿಲ್ಲ. ಇಂಚಿಂಚನ್ನು ಶುದ್ಧಮಾಡುವ ಕೈಂಕರ್ಯವನ್ನು ತೊಟ್ಟರು. ಇತರ ಬುದ್ಧಿವಂತರೆಲ್ಲಾ ಹಾವು ಚೇಳುಗಳಿಗೆ ಹುಲಿ ಸಿಂಹಗಳ ಮುಖವಾಡವಿಟ್ಟು ಸಮಾಜದ ಶೂರತ್ವದ ಸಂಕೇತವಿದು ಎಂದೋ, ಕಾಮಧೇನುವಿನ ಮುಖವನ್ನು ತೊಡಿಸಿ ಇವರಿಂದಲೇ ಬದುಕುತ್ತಿರುವವರು ನಾವು-ನೀವು ಎಂದು ತಮ್ಮ ಬುದ್ಧಿವಂತಿಕೆಯಿಂದ ನಯ ನಾಜೂಕಿನಿಂದ ಭ್ರಾಮಕತೆಯನ್ನು ಹುಟ್ಟಿಸಿ ತಮ್ಮ ಬೇಳೆಯನ್ನು ಬೇಯಿಸಿಕೊಂಡು ಪ್ರಶಸ್ತಿ ಮತ್ತೊಂದಕ್ಕೆ ಭಾಜನರಾಗಿ 'ಸುಖವಾಗಿರುವಾಗ" ಕಾರಂತರು ಮಾತ್ರ ಈ ಹಾವು ಚೇಳುಗಳಿಗೆ 'ಕ್ಷುದ್ರಜಂತುಗಳೇ" ಎಂದು ಕರೆದರು. ಅವು ಕಚ್ಚಲು ಬಂದಾಗ ತಿರುಗೇಟು ಹೊಡೆದರು. ಅನೇಕ ಭಾರಿ ಕಚ್ಚಿಸಿಕೊಂಡರು ಕೂಡ.

ಮುಂದೆ ಇವರಷ್ಟೇ ಸಮರ್ಥನಾದ ಹಾಗು ಇವರಷ್ಟೇ ಕಲ್ಪನಾಶಕ್ತಿಯುಳ್ಳ ಒಬ್ಬ ಮಹಾನ್‌ ಕಾದಂಬರಿಗಾರ ಬರಬಹುದು, ಇವರಷ್ಟೇ ಕಳಕಳಿಯಿರುವ ಒಬ್ಬ ಮಹಾನ್‌ ಪರಿಸರವಾದಿ ಬರಬಹುದು, ಯಕ್ಷಗಾನದ ದೈವತ್ವವನ್ನು ದೇವರ ತನಕ ತೆಗೆದುಕೊಂಡು ಹೋಗುವ ಕಲೋಪಾಸಕ ಬರಬಹುದು, ಖುದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿಯೂ 'ಸ್ವಾತಂತ್ರ್ಯ ಕೇವಲ ಭಾರತೀಯರ ಆತ್ಮಬಲದಿಂದಲೋ ಭುಜಬಲಪರಾಕ್ರಮದಿಂದಲೋ ಬಂದಿದ್ದಲ್ಲ . ಅಂಥಾ ಆತ್ಮಬಲವುಳ್ಳವರು ಗಾಂಧೀಜಿ ನಿಜವಾದರೂ, ಅವರ ಹಿಂದೆ ಸುಳಿದಾಡುತ್ತಾ ಮೇಲಕ್ಕೆ ಬಂದ, ಉಳಿದ ಬಹುಮಂದಿಗಳಂತೂ ಅಲ್ಲ . ಎರಡನೇ ಮಹಾಯುದ್ಧದ ನಂತರ ದೂರ ಸಾಮ್ರಾಜ್ಯದ ನೆಲವನ್ನು ಉಳಿಸುಕೊಳ್ಳುವ ಕೆಲಸ ಅಸಾಧ್ಯವಾದುದರಿಂದ ಬ್ರಿಟೀಷರೇ ಕೈಬಿಟ್ಟರು" ಎನ್ನುವ ಪ್ರಾಮಾಣಿಕತನದ, ನೇರಮಾತಿನ ವ್ಯಕ್ತಿ ಬರಬಹುದು, ರಾಷ್ಟ್ರ ಒಬ್ಬ ವ್ಯಕ್ತಿಯ ಕೈಯಾಳಾಗಿ ತುರ್ತುಪರಿಸ್ಥಿತಿಯನ್ನು ಹೇರಿಸಿಕೊಂಡಂತಹಾ ರಾಜಕೀಯ ವಿಭ್ರಮೆಯ ಸನ್ನಿವೇಶದಲ್ಲಿ ಅದೇ ಸರಕಾರ ತಮಗಿತ್ತ 'ಪದ್ಮಭೂಷಣ"ವನ್ನು ಹಿಂತಿರುಗಿಸುವಂತಹ ನಿಷ್ಠುರ ಮತ್ತು ಜಾಗ್ರತ ಮನಸ್ಸಿನವರು ಬರಬಹುದು, 'ನಮ್ಮ ಬೆರಳುಗಳಲ್ಲಿ ಏಕೆ ನೆಟ್ಟುಗೆ ಬರುತ್ತದೆ, ಅಜ್ಜ", 'ನನ್ನ ತಲೆಯ ಮೇಲೇಕೆ ಕೂದಲು ಬೆಳೆಯುತ್ತದೆ?" ಎಂಬ ಮುಗ್ಧ ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಕುಳಿತು, ಓದಿ, ಅವುಗಳಿಗೆ ಅರ್ಥವಾಗುವಂತೆ ಉತ್ತರಿಸುವ ಜಾಣ ಅಜ್ಜನೊಬ್ಬ ಬರಬಹುದು. ಆದರೆ ಅಷ್ಟೆಲ್ಲವೂ ಒಬ್ಬನೇ ಆಗಿರುವ ಶಿವರಾಮ ಕಾರಂತರಂತವರು ಬರುವ ಸಾಧ್ಯತೆ ಬಹಳ ದೂರದ್ದೇನೋ.

ಇಷ್ಟು ಪ್ರಯೋಗಶೀಲ ಮನಸ್ಸಿದ್ದುದರಿಂದಲೇ ಕಾರಂತರಿಂದ ಮೂಕಜ್ಜಿಯ ಸೃಷ್ಟಿಯಾಯಿತು, ದೇವರಿಂದಲ್ಲ.

ದೇವರೂ ನಿರಾಶನಾಗುವ ಅವಶ್ಯಕತೆಯಿಲ್ಲ . ಅವನ ಮನಸ್ಸೂ ಪ್ರಯೋಗಶೀಲವೇ. ಇಲ್ಲದಿದ್ದರೆ, ಅವನು ಕಾರಂತರಂತವರನ್ನು ಸೃಷ್ಟಿಸುತ್ತಿರಲಿಲ್ಲ , ಅಲ್ಲವೇ?

English summary
A fortnightly column by M.R.Dattathri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X