ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಯ ಶ್ಯಾಮಲೇಂದು ಗಳಿಸಿದ್ದೇನು? ಕಳೆದದ್ದೇನು?

By Staff
|
Google Oneindia Kannada News

ಎಂ.ಆರ್‌. ದತ್ತಾತ್ರಿ,

ಎದುರಿನ ತೆರೆ ಹಾಳೆಯಂತೆ ಬೆಳ್ಳಗೆ ನಿಂತು ಒಂದೊಂದೇ ದೀಪಗಳು ಹತ್ತುವ ಮೂಲಕ ಸಿನೆಮಾ ಮುಗಿಯಿತು ಎನ್ನುವುದನ್ನು ಧೃಢವಾಗಿ ಸೂಚಿಸಿತು. ಜನ ಎದ್ದು ನಿಂತರು. ಒಂದು ಕ್ಷಣದ ಮೌನ. ಆಮೇಲೆ ಜೋರು ಚಪ್ಪಾಳೆ. ಚಪ್ಪಾಳೆಯ ಮುನ್ನದ ಆ ಒಂದು ಕ್ಷಣದ ಮೌನವಿದೆಯಲ್ಲಾ, ಅದು ಸಾಕು ಆ ದಿವಂಗತ ನಿರ್ದೇಶಕನಿಗೆ. ಅದೇ ಹೂವಿನ ಹಾರದಂತೆ ಅವನಿಗೆ. ಇದು ಸ್ಟಾನ್‌ಫರ್ಡ್‌ ಥೀಯೇಟರಿನ ದೃಶ್ಯ. 'ಟೈಂ ಪಾಸ್‌" ಮಾಡಲು ಸಿನೆಮಾಕ್ಕೆ ಬರುವ ಪ್ರೇಕ್ಷಕ ವರ್ಗವಲ್ಲ ಅದು. ಸ್ಟಾನ್‌ಫರ್ಡ್‌ ಸೇರಿದಂತೆ ಸುತ್ತಮುತ್ತಲ ವಿಶ್ವವಿದ್ಯಾಲಯಗಳ ಕಲಾ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೆಲ್ಲಾ ಅಲ್ಲಿದ್ದಾರೆ. ಸಿನೆಮಾ ನಡೆಯುತ್ತಿದ್ದಾಗಲೇ ಸಣ್ಣ ಫ್ಲಾಷ್‌ಲೈಟ್‌ನ ಸಹಾಯದಿಂದ ನೋಟ್ಸ್‌ ಮಾಡಿಕೊಂಡವರು ಇವರು. ಪ್ರತಿಯಾಂದು ಕ್ಯಾಮೆರಾ ಆ್ಯಂಗಲ್‌ನ್ನೂ, ಮ್ಯೂಸಿಕ್‌ನ ಟ್ಯೂನನ್ನೂ, ಮಾತಿನ ಭಾವಾರ್ಥಗಳನ್ನೂ, ಮುಖದ ಒಳಾರ್ಥಗಳನ್ನೂ ಜಪಸರದ ಹವಳದ ಮಣಿಗಳಂತೆ ಒಂದೊಂದನ್ನೇ ಸವರಿ ಗ್ರಹಿಸಿ ನಂತರ ಹೋಗಬಿಟ್ಟವರು. ಇಂತಹ 'ಕಲೆಯ ದ್ವಾರಪಾಲಕ"ರಿಂದ ಗಳಿಸಿಕೊಳ್ಳುವ ಮೌನ ಮತ್ತು ಚಪ್ಪಾಳೆಗಿಂತ ಮಿಗಿಲಾದ ಪಾರಿತೋಷಕ ಒಬ್ಬ ಕಲಾವಿದನಿಗೆ ಮತ್ತೆಲ್ಲಿ ಸಿಗುತ್ತದೆ?

ಮಹಾತ್ಮ ಗಾಂಧಿಯನ್ನು ಬಿಟ್ಟರೆ ವಿದೇಶೀನೆಲಗಳಲ್ಲಿ ಅತಿ ಪ್ರಸಿದ್ಧನಾದ ಭಾರತೀಯ ಆ ನಿರ್ದೇಶಕ . ಹೌದು, ನಿಮ್ಮ ಊಹೆ ಸರಿ, ಅದು ಸತ್ಯಜಿತ್‌ ರೇ ಬಿಟ್ಟರೆ ಮತ್ಯಾರೂ ಆಗಿರಲು ಸಾಧ್ಯವಿಲ್ಲ. ಮತ್ತು ಆ ಚಿತ್ರ 'ಸೀಮಾಬದ್ಧ" (Company Ltd.). ಜಗತ್ತೆಲ್ಲಾ 'ಪಥೇರ್‌ ಪಾಂಚಾಲಿ"ಗೆ ರೇಯನ್ನು ಕೊಂಡಾಡುತ್ತಿದ್ದರೆ 'ನನ್ನ ನಂಬರ್‌ ವನ್‌ ಚಿತ್ರವೆಂದರೆ ಸೀಮಾಬದ್ಧ" ಎಂದು ರೇ ಹೇಳಿಕೊಂಡಿದ್ದರಂತೆ. ಚಿತ್ರ ಪ್ರದರ್ಶನವಾದ ಸಂದರ್ಭ ಕ್ಯಾಲಿಫೋರ್ನಿಯಾದ ಸ್ಟಾನ್‌ಫರ್ಡ್‌ನಲ್ಲಿ ಸತ್ಯಜಿತ್‌ ರೇ ಫಿಲ್ಮ್‌ ಫೆಸ್ಟಿವಲ್‌.

Satyajit Rayಶ್ಯಾಮಲೇಂದು ಚಟರ್ಜಿ (ನಟ - ಬರುಣ್‌ ಚಂದ್ರ) ಸೀಲಿಂಗ್‌ ಫ್ಯಾನ್‌ಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿಯಾಂದರಲ್ಲಿ ಸೇಲ್ಸ್‌ ಮ್ಯಾನೇಜರ್‌. ತನ್ನ ವೃತ್ತಿಯ ಬಗ್ಗೆ ಬಹಳ ambitious ಆದ ವ್ಯಕ್ತಿ. ಇಂಗ್ಲೆಂಡ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹಿಂದುಸ್ತಾನ್‌ ಪೀಟರ್ಸ್‌ ಲಿಮಿಟೆಡ್‌ನ ಡೈರೆಕ್ಟರ್‌ ಆಗಬೇಕೆಂಬ ಕನಸು ಕಾಣುವವ. ಹಾಗೆ ನೋಡಿದರೆ ಅವನೇನೂ ಚಿನ್ನದ ಚಮಚೆಯನ್ನು ಬಾಯಲ್ಲಿಟ್ಟುಕೊಂಡು ಜನಿಸಿದವನಲ್ಲ. ಕಷ್ಟಪಟ್ಟು ಯಾರಿಂದಲೋ ಸೂಟನ್ನು ಎರವಲು ಪಡೆದು ಬೈಸಿಕಲ್‌ನಲ್ಲಿ ಮೈಲುಗಟ್ಟಲೆ ಬಂದು ಕೆಲಸದ ಸಂದರ್ಶನವನ್ನು ನೀಡಿದವ. ಲಕ್ಷಾಂತರ ನಿರುದ್ಯೋಗಿಗಳನ್ನು ಹೊತ್ತ ಈ ಕಲ್ಕತ್ತ ನಗರದಲ್ಲಿ ಕೆಲಸ ಗಿಟ್ಟಿಸಿಕೊಂಡ ನಾನೇ ಮಹಾನ್‌ ಅದೃಷ್ಟಶಾಲಿ ಎಂದು ಬಗೆದೇ ವೃತ್ತಿಯನ್ನು ಪ್ರಾರಂಭಿಸಿದವ. ಆದರೆ ಮಹತ್ವಾಕಾಂಕ್ಷೆ ಎನ್ನುವುದು ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳಂತೆ. ಒಣಗಿ ಕೊರಡಾಗಿ ಸತ್ತಂತೆ ಬಿದ್ದಿದ್ದರೂ ನಾಲ್ಕು ಹನಿ ನೀರು ಸಿಂಪರಣೆಯಾದೊಡನೆಯೇ ಮತ್ತೆ ಚಿಗುರೊಡೆಯುತ್ತವೆ. ಶ್ಯಾಮಲೇಂದು ತಾನಂದುಕೊಂಡಂತೆ ತಾನಿದ್ದ ತನ್ನ 'ಕೆಳವರ್ಗ"ದ ಬದುಕನ್ನು ತ್ಯಜಿಸಿ 'ಉನ್ನತ ಬದುಕಿಗಾಗಿ" ಹೆಜ್ಜೆಹಾಕತೊಡಗಿದ, ದಾಪುಗಾಲು ಹಾಕಿದ, ಬಿರುಸುನಡಿಗೆಯಲ್ಲಿ ಹೊರಟ, ಓಟಕ್ಕೆ ಇಳಿದ, ಕೊನೆಯಲ್ಲಿ ಉಸಿರಾಟಕ್ಕೂ ಅವಕಾಶವಿಲ್ಲದ ಸ್ವಆಯ್ಕೆಯ ನಾಗಾಲೋಟವಾಯಿತು. ಕಂಪನಿಯ ಡೈರೆಕ್ಟರ್‌ ಆಗಬೇಕು, ಅಷ್ಟೆ , ಡೈರೆಕ್ಟರ್‌ ಆಗಿಬಿಡಬೇಕು. ಆಮೇಲೆ ಭೂಕಂಪವೇ ಆಗಲಿ, ನಿಂತ ನೆಲವೇ ಕುಸಿಯಲಿ, ಗ್ರಹ ನಕ್ಷತ್ರಗಳೆಲ್ಲಾ ಮೈಮೇಲೆ ಉದುರಿ ಬೀಳಲಿ ಯೋಚನೆ ಇಲ್ಲ! ಆದರದು ಅಷ್ಟು ಸುಲಭದ್ದಾಗಿ ಕಾಣುತ್ತಿಲ್ಲ. ಹತ್ತಿರದ ಮತ್ತೊಬ್ಬನ ನೇರ ಸ್ಪರ್ಧೆ ಇದೆ. ಇಬ್ಬರೂ ಎದುರು ಬದುರು ಬಂದಾಗ ಕೃತಕನಗೆಯನ್ನು ಬದಲಿಸಿಕೊಂಡರೂ ತನ್ಮೂಲಕ ಮತ್ತೊಬ್ಬನ ವೇಗವನ್ನು ಅಳೆಯುವ ಕಾರ್ಯದಲ್ಲಿ ಇಬ್ಬರೂ ಮಗ್ನ!

ದೋಲನ್‌ ಶ್ಯಾಮಲೇಂದುವಿನ ಹೆಂಡತಿ. ಕೆಳ ಮಧ್ಯಮವರ್ಗದಿಂದ ಬಂದು ಪೀಟರ್ಸ್‌ ಫ್ಯಾನ್‌ ಕಂಪನಿ ತೆರೆದ ಅದೃಷ್ಟದ ಬಾಗಿಲಿಗೆ ಚೆನ್ನಾಗಿ ಹೊಂದಿಕೊಂಡವಳು. ಕಲ್ಕತ್ತದ ಶ್ರೀಮಂತವರ್ಗದ ರೆಸ್ಟೊರೆಂಟ್‌ಗಳು, ಬ್ಯೂಟಿಪಾರ್ಲರ್‌ಗಳು ಮತ್ತು ವಿಲಾಸೀ ಕ್ಲಬ್‌ಗಳಲ್ಲಿ ಬದಲಾದ ತನ್ನ ನಸೀಬನ್ನು ಹುಡುಕುವವಳು. ಕಂಪನಿ ಕೊಟ್ಟ ಹೊಸ ಅಪಾರ್ಟ್‌ಮೆಂಟ್‌ ಅವಳ ಸ್ಥಾನಮಾನವನ್ನು ಏರಿಸಿದೆ. ಅಷ್ಟು ದೊಡ್ಡ ಅಪಾರ್ಟ್‌ಮೆಂಟ್‌ನಲ್ಲಿ ಕೋಣೆಯಿಂದ ಕೋಣೆಗೆ ಓಡಾಡುವುದೇ ಅವಳಿಗೊಂದು ಖುಷಿ. ಆ ಮನೆಯಲ್ಲಿ ಸದ್ಯಕ್ಕೆ ಇರುವುದು ಇವರಿಬ್ಬರೇ. ಏಳು ವರ್ಷದ ಮಗ ಇದ್ದಾನೆ ಆದರೆ ಅವನನ್ನು ಕಲ್ಕತ್ತದಲ್ಲಿ ಮೀರಿದಂತಹ ವಿದ್ಯಾಭ್ಯಾಸಕ್ಕಾಗಿ ಡಾರ್ಜಿಲಿಂಗ್‌ನ ಬೋರ್ಡಿಂಗ್‌ ಸ್ಕೂಲಿಗೆ ಸೇರಿಸಿದ್ದಾರೆ. ಶ್ಯಾಮಲೇಂದುವಿನ ಅಪ್ಪ ಅಮ್ಮ ಕಲ್ಕತ್ತಾದಲ್ಲೇ ಇದ್ದಾರೆ, ಆದರೆ ಬೇರೆ ಮನೆಯಲ್ಲಿ. ಬ್ರಿಟಿಷ್‌ ಕಂಪನಿಯ ರೂಲ್ಸ್‌ ಪ್ರಕಾರ ನೌಕರ ಮತ್ತು ಅವನ ಹೆಂಡತಿ ಮಕ್ಕಳನ್ನು ಬಿಟ್ಟರೆ ಬೇರೆಯವರು ಅಲ್ಲಿರುವಂತಿಲ್ಲ.

ಇರಾಕ್‌ನಿಂದ ಸಾವಿರಾರು ಫ್ಯಾನ್‌ಗಳಿಗೆ ಒಂದು ದೊಡ್ಡ ಆರ್ಡರ್‌ ಬಂದುಬಿಟ್ಟಿದೆ. ಶ್ಯಾಮಲೇಂದುವಿಗೆ ಸುವರ್ಣ ಅವಕಾಶ ಒದಗಿ ಬಂದಿದೆ. ಇಷ್ಟೊಂದು ಫ್ಯಾನ್‌ಗಳು ಎಕ್ಸ್‌ಪೋರ್ಟ್‌ ಆದರೆ ಕಂಪನಿ ಅವನನ್ನು ಖಂಡಿತಾ ಗುರುತಿಸುತ್ತದೆ. ಡೈರೆಕ್ಟರ್‌ ಆಗಬಹುದು. ಶ್ಯಾಮಲೇಂದು ಹಗಲು ರಾತ್ರಿ ದುಡಿಯುತ್ತಿದ್ದಾನೆ ಈ ಎಕ್ಸ್‌ಪೋರ್ಟ್‌ನ Success ಗೆ.

ಈ ನಡುವೆ ಕೆಲ ದಿನಗಳ ಮಟ್ಟಿಗೆ ದೋಲನ್‌ಳ ತಂಗಿ ಟೂಟೂಳ್‌ (ನಟಿ ಶರ್ಮಿಳಾ ಟಾಗೋರ್‌) ಬರುತ್ತಾಳೆ. ಭಾವನ ಮೇಲೆ ಬಹಳ ಅಭಿಮಾನವನ್ನು ಬೆಳೆಸಿಕೊಂಡ ಹುಡುಗಿ. ಬಿಳಿಯ ಕಾಟನ್‌ ಪೈಜಾಮದಲ್ಲಿ ಬೈಸಿಕಲ್‌ ಹೊಡೆದುಕೊಂಡು ಬಂದು ಗೇಟಿನ ಬಳಿ ಅದನ್ನು ಬೀಳಿಸಿದಂತೆ ಒರಗಿ ನಿಲ್ಲಿಸಿ ಅಕ್ಕನನ್ನು ಮೊದಲ ಬಾರಿಗೆ ನೋಡಲು ಬಂದು ಅಪ್ಪನೊಡನೆ ಶೇಕ್ಸ್‌ಪಿಯರ್‌ ನಾಟಕಗಳ ಬಗ್ಗೆ ಮಾತನಾಡಿದ್ದ ಭಾವ ಹೀಗಾಗಿದ್ದಾನಾ ಎನ್ನುವ ಹೆಮ್ಮೆ ತುಂಬಿದ ಕುತೂಹಲ. ಮೇಲಾಗಿ, ಸಣ್ಣ ಊರಿನಲ್ಲೇ ಬೆಳೆದವಳು ಕಲ್ಕತ್ತ ನಗರಕ್ಕೆ ಬಂದಾಗ ಏಳುವ ನೂರೆಂಟು ಪ್ರಶ್ನೆಗಳನ್ನು ಮುಚ್ಚಿಡದೇ ಕೇಳುವಂತಹ ಮುಗ್ಧೆ. ಅಕ್ಕ ಭಾವನ ಸಂಬಳವನ್ನು ಹೇಳಿದಾಗ 'ಅಯ್ಯೋ, ರವೀಂದ್ರನಾಥ ಟಾಗೋರರಿಗೆ ನೋಬಲ್‌ ಬಂದಾಗಲೂ ಅಷ್ಟೊಂದು ಹಣವನ್ನು ಕೊಡಲಿಲ್ಲವೆನಿಸುತ್ತದೆ" ಎಂದವಳು. ಹಾಗೆಂದು ದಡ್ಡಿಯಲ್ಲ. ಸೈಕಾಲಜಿಯಲ್ಲಿ ಎಂ. ಎ ಮಾಡಿದವಳು. ಅಕ್ಕ-ಭಾವನ ಜೀವನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲು ಬಂದವಳು!

ಅಕ್ಕ ಮತ್ತು ಭಾವನನ್ನು ಹತ್ತಿರದಿಂದ ನೋಡಿದಷ್ಟೂ ಟೂಟೂಳ್‌ಗೆ ನಗರ ಬದುಕಿನ ಹೊಸ ಹೊಸ ಮಗ್ಗುಲುಗಳು ಕಾಣುತ್ತವೆ. ಅಕ್ಕನ ಬ್ಯೂಟಿಪಾರ್ಲರ್‌ ನೋಡುತ್ತಾಳೆ, ಅಕ್ಕ-ಭಾವನೊಡನೆ ಪಾಷ್‌ ರೆಸ್ಟೋರೆಂಟ್‌ಗಳಿಗೆ ಹೋಗುತ್ತಾಳೆ. ಭಾವನ ಸ್ನೇಹಿತ ಬಳಗವನ್ನು ಭೇಟಿ ಮಾಡುತ್ತಾಳೆ. ಒಂದು ದಿನ ಭಾವನೊಡನೆ ರೇಸ್‌ಕೋರ್ಸ್‌ಗೂ ಹೋಗಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಾಳೆ. ಮತ್ತೊಂದು ದಿನ ಭಾವನ ಆಫೀಸನ್ನೂ ನೋಡುತ್ತಾಳೆ. ಶ್ಯಾಮಲೇಂದು ಲಗುಬುಗೆಯಲ್ಲಿ ಅವಳಿಗೆ ಡೈರೆಕ್ಟರ್‌ಗಳ ಮೀಟಿಂಗ್‌ ರೂಮನ್ನು ತೋರಿಸುತ್ತಾನೆ. 'ಇದು ಬಹಳ ಸಾಧಾರಣವಾಗಿದೆಯಲ್ಲಾ, ಇಲ್ಲಿಗೆ ಬರಬೇಕೆಂದು ಏಕೆ ಅಷ್ಟೊಂದು ಹಂಬಲಿಸುತ್ತಿದ್ದಿ?" ಎನ್ನುವ ಅವಳ ಮುಗ್ಧ ಪ್ರಶ್ನೆಗೆ 'ನಿನಗೆ ಅರ್ಥವಾಗುವುದಿಲ್ಲ ಅದು. ಈ ಕೋಣೆಯ ಗಾಳಿಯನ್ನು ಉಸಿರಾಡಿದಾಗಲೆಲ್ಲಾ ನನಗೆ ಅದು ಮಾನವ ಲೋಕವನ್ನು ಮೀರಿದ್ದು ಎನಿಸುತ್ತದೆ. ಇಲ್ಲಿಗೆ ತಲುಪದ ಜೀವನ ವ್ಯರ್ಥ ಎನ್ನುವ ಭಾವನೆ ಕಾಡುತ್ತದೆ".

ಇರಾಕ್‌ಗೆ ಹೋಗಬೇಕಾದ ಫ್ಯಾನ್‌ಗಳು ಪೋರ್ಟ್‌ನ್ನು ತಲುಪಿವೆ. ಇನ್ನೊಂದು ವಾರದಲ್ಲಿ ಅವು ಅಲ್ಲಿರಬೇಕು. ಎಲ್ಲವೂ ಸರಿಯಾಯಿತು ಅಂದುಕೊಳ್ಳುವಾಗ ಒಮ್ಮೆಗೇ ಒಂದು ಆಘಾತಕಾರಿ ಸುದ್ದಿ - ಫ್ಯಾನ್‌ನ ಮಧ್ಯಭಾಗಕ್ಕೆ ಅಲಂಕಾರಕ್ಕಾಗಿ ಹಚ್ಚಿದ ಪೈಂಟ್‌ನಲ್ಲಿ ಒಳ್ಳೆಯ ಕೆಲಸ ನಡೆದಿಲ್ಲ. ಹಾಗಾಗಿ ಅಲ್ಲಿ ಕೆಲವು ಸುಕ್ಕುಗಳಿವೆ! ಈ ಫ್ಯಾನ್‌ಗಳು ಎಕ್ಸ್‌ಪೋರ್ಟ್‌ ಆಗುವಂತಿಲ್ಲ. ಹಾಗೇನಾದರೂ ಆದರೆ ಅವು ಅಲ್ಲಿ ತಿರಸ್ಕೃತವಾಗಿ ಕಂಪನಿಗೆ ಬಹಳ ಕೆಟ್ಟ ಹೆಸರು ಬರುತ್ತದೆ. ಆ ಫ್ಯಾನ್‌ಗಳನ್ನು ವಾಪಸ್ಸು ಶಾಪ್‌ಫ್ಲೋರಿಗೆ ತಂದು ಸರಿ ಮಾಡಬಹುದು. ಆದರೆ ಅದಕ್ಕೆ ಸ್ವಲ್ಪ ಸಮಯ ಬೇಕು. ಒಂದು ವಾರದಲ್ಲಿ ಅವು ಇರಾಕ್‌ ತಲುಪದಿದ್ದರೆ Export Regulations ಪ್ರಕಾರ ಕಂಪನಿ ದೊಡ್ಡ ಮೊತ್ತದ ಪೆನಾಲ್ಟಿ ಕಟ್ಟಬೇಕು.

ಶ್ಯಾಮಲೇಂದುವಿನ ಮೇಲೆ ಬೆಟ್ಟ ಕುಸಿದುಬೀಳುತ್ತದೆ. ಎಕ್ಸ್‌ಪೋರ್ಟ್‌ ಇಲ್ಲ ಎಂದರೆ ಪ್ರಮೋಷನ್‌ ಇಲ್ಲ. ಪ್ರಮೋಷನ್‌ ಇಲ್ಲ ಎಂದರೆ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ ಕೋಣೆಗೆ ಪ್ರವೇಶವಿಲ್ಲ. ಬಹುಶಃ ತನ್ನ ಪ್ರತಿಸ್ಪರ್ಧಿಯಾಗಿ ನಿಂತಿರುವ ಸ್ನೇಹಿತನಿಗೆ ಎಲ್ಲಾ ಅವಕಾಶಗಳು. ಪರಿಹಾರವೇ ಕಾಣದ ಸಮಸ್ಯೆಗಳು.ತಾನೇಕೆ ತಡವಾಗಿ ಮನೆಗೆ ಬಂದೆ ಎಂದು ಕುತೂಹಲ ತೋರಿದ ನಾದಿನಿ ಟೂಟೂಳ್‌ಳೊಡನೆ ತನ್ನ ಸಮಸ್ಯೆಯನ್ನು ತೋಡಿಕೊಳ್ಳುತ್ತಾನೆ. ಈ ಎಕ್ಸ್‌ಪೋರ್ಟ್‌ ಉಳಿದು ಕಂಪನಿ ಪೆನಾಲ್ಟಿ ಕಟ್ಟದಂತೆ ತಡೆಯಬೇಕಾದರೆ ಒಂದು, ದೇವರು ಭೂಕಂಪ, ಪ್ರವಾಹದಂತಹ ವಿಪತ್ತನ್ನು ತಂದೊಡ್ಡಬೇಕು, ಅದು ನನ್ನ ಕೈಲಿ ಇಲ್ಲ ಅಥವಾ ಕಂಪನಿಯಲ್ಲಿ ಮುಷ್ಕರ ನಡೆಯಬೇಕು, ಅದೂ ನನ್ನ ಕೈಲಿ ಇಲ್ಲ. ಮುಗ್ಧೆ ಟೂಟೂಳ್‌ 'ನೀನು ಮುಷ್ಕರ ಮಾಡಿಸಬಹುದಲ್ಲ, ಅದು ನಿನ್ನ ಕೈಲಿದೆ" ಎಂದು ಹಾಸ್ಯಮಾಡಿ ನಗುತ್ತಾಳೆ. ಭಾವನೊಡನೆಯ ಆ ಸಂಭಾಷಣೆಯ ಸನ್ನಿವೇಶವನ್ನು ತಿಳಿಗೊಳಿಸಲೆಂದು ಅವಳು ಮಾಡಿದ ಜೋಕ್‌ ಅದು. ಶ್ಯಾಮಲೇಂದುವಿನ ಮನಸ್ಸು ಈಗ ಗಟ್ಟಿಯಾಗುತ್ತದೆ! ಹೌದು, ಕಂಪನಿಯಲ್ಲಿ ಮುಷ್ಕರವಾಗಬೇಕು. ಆಗ ಪೆನಾಲ್ಟಿಯೂ ಇಲ್ಲ, ಎಕ್ಸ್‌ಪೋರ್ಟ್‌ಗೆ ಹೊರಟ ಫ್ಯಾನ್‌ಗಳ ರಿಪೇರಿಗೆ ಸಮಯವೂ ಸಿಗುತ್ತದೆ. ತನ್ಮೂಲಕ ತನ್ನ ಪ್ರಮೋಷನ್‌ ಗ್ಯಾರೆಂಟಿ.

ಆದರೆ ಹೇಗೆ ಮುಷ್ಕರ ? ಇವನಂತೆಯೇ ಮನ್ನಣೆಗಾಗಿ ಹಾತೊರೆಯುತ್ತಿದ್ದ ಲೇಬರ್‌ ಆಫೀಸರ್‌ ಸಹಾಯಕ್ಕೆ ಬರುತ್ತಾನೆ. ಫ್ಯಾಕ್ಟರಿಯ ಕೆಫೆಯಲ್ಲಿ ಊಟದ ಹಾಲಿನಲ್ಲಿ ಊಟದ ಕ್ವಾಲಿಟಿಯ ಬಗ್ಗೆ ಸಣ್ಣ ಒಂದು ಕಿಡಿ ಹೊತ್ತುಕೊಂಡದ್ದು ನಿಧಾನವಾಗಿ ಎಲ್ಲವನ್ನೂ ಕಬಳಿಸಿ ಧಗಧಗನೆ ಉರಿಯುತ್ತದೆ. ತೀವ್ರತೆಯನ್ನು ಹೆಚ್ಚಿಸಲೋಸುಗ ಒಂದು ಬಾಂಬ್‌ ಕೂಡ ಸಿಡಿದು ಒಬ್ಬ ವಾಚ್‌ಮನ್‌ ಜೀವನ್ಮರಣ ಹೋರಾಟಕ್ಕೆ ಇಳಿಯುತ್ತಾನೆ. ಪೆನಾಲ್ಟಿ ಕಟ್ಟದಿರುವುದಕ್ಕೆ ಎಷ್ಟು ತೀವ್ರವಾಗಿರಬೇಕಿತ್ತೋ ಅಷ್ಟರ ಮಟ್ಟಿಗೆ ಮುಷ್ಕರ ನಡೆಯುತ್ತದೆ.

ಇನ್ನು ಎಲ್ಲಾ ಹತೋಟಿಯ ಗಡಿಯಲ್ಲಿರುವ ಕ್ರಿಯೆಗಳೇ. ಕಂಪನಿಯಲ್ಲಿ ಮುಷ್ಕರ ನಡೆಯುತ್ತಿರುವ ವಿಚಾರವನ್ನು ಶ್ಯಾಮಲೇಂದು ಮನೆಯಲ್ಲಿ ತಿಳಿಸಿಯೇ ಇರುವುದಿಲ್ಲ ! ಅವನಿಗೆ ಅದನ್ನು ಖುದ್ದು ಹೇಳುವ ಮುಖವಿಲ್ಲ.

ರೆಸ್ಟೊರೆಂಟ್‌ ಒಂದರಲ್ಲಿ ಮೂವರೂ ಕುಳಿತಿರುವಾಗ ಅಲ್ಲಿಗೆ ಬಂದ ಶ್ಯಾಮಲೇಂದುವಿನ ಸ್ನೇಹಿತನಿಂದ ಟೂಟೂಳ್‌ಗೆ ಫ್ಯಾಕ್ಟರಿಯ ಮುಷ್ಕರದ ವಿಷಯ ತಿಳಿಯುತ್ತದೆ. ಭಾವನ ಮೇಲಿದ್ದ ಅಭಿಮಾನ ಒಳಗೊಳಗೇ ಮೇಣದಂತೆ ಕರಗಲು ಪ್ರಾರಂಭಿಸುತ್ತದೆ. ಪ್ರಮೋಷನ್‌ಗಾಗಿ ಜೀವಗಳ ಜೊತೆ ಆಟವಾಡುವ ಮಟ್ಟದವನೇ ಇವನು?

ಶ್ಯಾಮಲೇಂದು ಕಾಯುತ್ತಿದ್ದ ಅಮೃತಗಳಿಗೆ ಬಂದೇ ಬಿಟ್ಟಿತು. ಶ್ಯಾಮಲೇಂದುವೇ ಮುಷ್ಕರ ನಡೆಸಿದ್ದು, ಹಾಗಾಗಿ ಪೆನಾಲ್ಟಿ ತಪ್ಪಿಸಿದ್ದು ಎನ್ನುವುದು Top Management ಗೆ ಗೊತ್ತಿದೆ. ಅವನ ಈ 'ಉಪಕಾರ"ಕ್ಕೆ ಬದಲಾಗಿ ಅವನನ್ನು ಡೈರೆಕ್ಟರ್‌ ಮಾಡುತ್ತಿದೆ. ಶ್ಯಾಮಲೇಂದು ಖುಷಿಯಾಗಿ ಡೋಲನ್‌ಳಿಗೆ ಫೋನ್‌ ಮಾಡುತ್ತಾನೆ. ಅವಳ ಖುಷಿಯಂತೂ ಹೇಳತೀರದು. ಮನೆಯಲ್ಲಿ ಸಂಭ್ರಮದ ಆಚರಣೆಯ ತರಾತುರಿ! ಇನ್ನೇನು ಆಫೀಸಿನಲ್ಲಿ... ಬೇಗ ಬಂದುಬಿಡಿ.

ಅವತ್ತು ಅಪಾರ್ಟ್‌ಮೆಂಟಿನಲ್ಲಿ ಎಲಿವೇಟರ್‌ ಬೇರೆ out of order ಆಗಿದೆ. ಒಂದೊಂದೇ ಮೆಟ್ಟಿಲನ್ನು ಹತ್ತಿ ತನ್ನ 9ನೆ ಫ್ಲೋರಿನ ಮನೆಗೆ ಹೋಗಬೇಕು. ಶ್ಯಾಮಲೇಂದು ದಣಿಯುತ್ತಾನೆ. ದಣಿಸುವುದು ಬರೀ ಮೆಟ್ಟಿಲುಗಳಷ್ಟೇ ಅಲ್ಲ. ಟೂಟೂಳ್‌ನ್ನು ಹೇಗೆ ಎದುರಿಸಲಿ ಎಂಬ ಪ್ರಶ್ನೆ.

ಸಂಭ್ರಮದಲ್ಲಿದ್ದ ಹೆಂಡತಿಯಾಡನೆ ಎರಡು ಕ್ಷಣ ಕಳೆದ ಮೇಲೆ ಡೋಲನ್‌ ಅಡುಗೆಯ ಸಿದ್ಧತೆಗೆ ತೆರಳಿ ಭಾವನಿಗೆ ಅಭಿನಂದನೆ ತಿಳಿಸಲು ಟೂಟೂಳ್‌ಳನ್ನು ಕಳಿಸುತ್ತಾಳೆ. ಶ್ಯಾಮಲೇಂದು ಕುಳಿತ ಸೋಫಾಕ್ಕೆ ಎದುರಿನ ಸೋಫಾದಲ್ಲಿ ಟೂಟೂಳ್‌ ಕುಳಿತಿದ್ದಾಳೆ. ಶ್ಯಾಮಲೇಂದು ಬೆವತುಹೋಗುತ್ತಾನೆ ನಾದಿನಿಯನ್ನು ಎದುರಿಸಲಾರದೆ. ಏನು ಮಾಡಿದರೂ ಅವನಿಗೆ ಅವಳ ಮುಖವನ್ನು ನೋಡಲಾಗುವುದಿಲ್ಲ. ಮುಂದಿನ ಕೆಲವು ಮೌನದ ಕ್ಷಣಗಳ ನಂತರ ಶ್ರೀಮಂತಿಕೆಯ ಎಲ್ಲಾ ಲಕ್ಷಣಗಳ ಆ ಕೋಣೆಯಲ್ಲಿ ಶ್ಯಾಮಲೇಂದು ಒಂಟಿಯಾಗಿ ಕುಳಿತಿರುತ್ತಾನೆ. ಮೇಲೆ ಪೀಟರ್ಸ್‌ ಕಂಪನಿಯ ಫ್ಯಾನ್‌ ತನ್ನ ಬಲವನ್ನೆಲ್ಲಾ ಬಿಟ್ಟು ತಂಪುಗಾಳಿ ಬೀಸುತ್ತಿದೆ. ಆದರೂ ಶ್ಯಾಮಲೇಂದುವಿನ ಮುಖದ ಬೆವರನ್ನು ಅದಕ್ಕೆ ಅಳಿಸಲಾಗುವುದಿಲ್ಲ.

ಶ್ಯಾಮಲೇಂದು ನಾದಿನಿ ಟೂಟೂಳ್‌ಳನ್ನು ಕಳೆದುಕೊಳ್ಳುತ್ತಾನೆ! ದೇಹಗಳ ನಡುವೆ ಕೆಲವೇ ಅಡಿಗಳಷ್ಟು ದೂರವಿದ್ದರೂ ನಕ್ಷತ್ರಗಳನ್ನು ಮೀರಿ ಹೋಗುವಷ್ಟು ಅಂತರ!

ಇದು ಅಂತ್ಯವಿಲ್ಲದ ಕಥೆ ಎನ್ನುತ್ತಾರೆ ರೇ. ಕಳೆದು ಕೊಳ್ಳುವುದಕ್ಕೆ ಅಂತ್ಯವಿಲ್ಲ. ಟೂಟೂಳ್‌ ಶ್ಯಾಮಲೇಂದುವಿಗೆ ನಾದಿನಿಯಾಗಿ ಬಂದು ಕಳೆದುಹೋದರೆ ಮತ್ಯಾರಿಗೋ ತಾಯಿಯಾಗಿ, ತಂಗಿಯಾಗಿ, ಮಗನಾಗಿ, ಮಗಳಾಗಿ, ಸ್ನೇಹಿತೆಯಾಗಿ, ಹೀಗೆ ನಾನಾರೂಪಗಳಲ್ಲಿ ಕಾಣಿಸಿಕೊಂಡು ಕಳೆದುಹೋಗಿರುತ್ತಾಳೆ. ಕಳೆದುಕೊಂಡವರು ಹುಡುಕುತ್ತಲೇ ಇರುತ್ತೇವೆ.

ಫ್ರಿಡ್ಜಿನ ಗುಯ್‌ ಶಬ್ದವನ್ನು ದಾಟಿ, ರೆಕಾರ್ಡ್‌ಪ್ಲೇಯರ್‌ ರೇಡಿಯೋ ವಾಕ್‌ಮನ್‌ಗಳನ್ನು ಬಂದ್‌ ಮಾಡಿ ಕೆಲವು ಮನೆಗಳಲ್ಲಿ ಆಫ್‌ ಸ್ವಿಚ್ಚನ್ನೇ ಮರೆತ ಟಿವಿಯನ್ನು ಬದಿಗೆ ಸರಿಸಿ ರಸ್ತೆಗೆ ಇಳಿಯಿರಿ. ಸೋಡಿಯಂ ಲ್ಯಾಂಪ್‌ಗಳ ನಗರ ಭದ್ರತೆಗೆ ಮರುಳಾಗದೆ ಕಾರ್ಗತ್ತಲ ಕಾಡಿನ ಹಾದಿ ಹಿಡಿದು ಛತ್ರಿಯಂತೆ ಹರಡಿನಿಂತ ಮರದ ಕಾಂಡಕ್ಕೆ ಒರಗಿ ಮೆಲ್ಲನೆ ಕೇಳಿ- 'ಕಲಸುಮೇಲೋಗರವಾದ ಈ ಜೀವನದಲ್ಲಿ ನೀನು ಗಳಿಸಿದ್ದೇನು, ಕಳೆದದ್ದೇನು, ಹೇಳು ಮನಸೇ". ಒಂದು ಕ್ಷಣದ ನೀರವ ಮೌನ ಕತ್ತಲೆಯನ್ನು ಬೆಸೆಯುತ್ತದೆ. ಪ್ರಶ್ನೆಯ ಮೆಲುದನಿಗೇ ಬೆಚ್ಚಿಬಿದ್ದಂತೆ ನಿದ್ರಾಭಂಗವಾಗಿ ಮೇಲಿನ ಹಕ್ಕಿಯಾಂದು ನೋವಿನಿಂದ ಉಲಿದು ಪಟಪಟನೆ ರೆಕ್ಕೆ ಬಡಿಯುತ್ತದೆ. ನಕ್ಷತ್ರಗಳು ಮಿಣುಗುವುದ ಬಿಟ್ಟು ಕುತೂಹಲದಿಂದ ನಿಮ್ಮೆಡೆಗೇ ನೋಡುತ್ತಿರುತ್ತವೆ. ಇದ್ಯಾವ ಪರಿಯ ಆಟ?

ಮನಸ್ಸು ಬಿಕ್ಕುತ್ತದೆ. ಜಾತ್ರೆಯಲ್ಲಿ ಅಮ್ಮನನ್ನು ಕಳೆದುಕೊಂಡ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳುತ್ತದೆ.

ಬಿಕ್ಕಲಿ ಬಿಡಿ. ಏಕೆಂದರೆ ಪ್ರತಿಯಾಬ್ಬರಲ್ಲೂ ರೇಯ ಶ್ಯಾಮಲೇಂದು ಚಟರ್ಜಿಯೇ ಇರುತ್ತಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X