ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ನುಜೂದ್, ವಯಸ್ಸು 10 ಹಾಗೂ ವಿಚ್ಛೇದಿತೆ!

By * ವಿಶ್ವೇಶ್ವರ ಭಟ್
|
Google Oneindia Kannada News

Nujood Ali (Pic : Digital Journal)
ಕಳೆದ ಒಂದು ವಾರದಿಂದ ಯಡಿಯೂರಪ್ಪನವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರಾ, ಇಲ್ಲವಾ ಎಂಬ ಪ್ರಶ್ನೆ ದೇಶದಾದ್ಯಂತ ಚರ್ಚೆಯಾಗುತ್ತಿದ್ದರೆ, ನಾನು ನನ್ನ ಐಪ್ಯಾಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡ ಒಂದು ಅದ್ಭುತ ಪುಸ್ತಕದೊಳಗೆ ತೂರಿಕೊಂಡಿದ್ದೆ. I am Nujood, Age 10 and Divorced! ಹಾಗಂತ ಪುಸ್ತಕದ ಹೆಸರು. ಪುಸ್ತಕವನ್ನು ಓದಿ ಮುಗಿಸುವ ಹೊತ್ತಿಗೆ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿತ್ತು. ಆದರೆ ಮನಸ್ಸಿನಲ್ಲಿ ನುಜೂದ್ ಎಂಬ ಬಾಲೆ ದೊಡ್ಡ ನಾಯಕಿಯಂತೆ ಕಂಗೊಳಿಸುತ್ತಿದ್ದಳು. ಅವಳ ಹೋರಾಟ ಸ್ಥಾಯಿಯಾಗಿ ನಿಂತಿತ್ತು. ಅವಳ ಹೋರಾಟ ಲಕ್ಷಾಂತರ ಅಪ್ರಾಪ್ತ, ಮುಗ್ಧ ಹೆಣ್ಣುಮಕ್ಕಳಿಗೆ ಭರವಸೆಯ ಜೀವಸೆಲೆಯಾಗಿತ್ತು. ಹತ್ತು ವರ್ಷದ ಬಾಲಕಿ, ಇನ್ನೂ ಜಗತ್ತನ್ನೇ ನೋಡದ ಅಮಾಯಕಿ ಅಂದು ತನ್ನ ದಿಟ್ಟತನ, ಕೆಚ್ಚು, ಕಿಚ್ಚಿನಿಂದ ಇಡೀ ವಿಶ್ವಕ್ಕೆ ಒಂದು ಅಮರ, ಅಮೋಘ ಸಂದೇಶ ಸಾರಿದ್ದಳು.

ನುಜೂದ್‌ಳ ಕರುಳು ಹಿಂಡುವ, ಕರುಣಾಜನಕ ಕತೆ ಹೀಗೆ ಸಾಗುತ್ತದೆ.

ಕೋರ್ಟ್ ದೃಶ್ಯ: ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ನನಗೆ ಅವಕಾಶ ಮಾಡಿಕೊಡಿ. ಕೈ ಮುಗೀತಿನಿ. ಯಾರೂ ಇಲ್ಲ ಎನ್ನಬೇಡಿ' ಎಂದು ಹತ್ತು ವರ್ಷದ ಬಾಲಕಿ ನುಜೂದ್ ಕಿರುಚುತ್ತಾ ಓಡಿ ಬಂದಾಗ ಇಡೀ ಕೋರ್ಟ್‌ಹಾಲ್ ದಂಗುಬಡಿದಿತ್ತು. ಆ ಪುಟ್ಟ ಮುದ್ದು ಹುಡುಗಿಯ ಕೂದಲು ಕೆದರಿದ್ದವು. ಕಣ್ಣಿನ ಗುಳಿಂಪು ನಿದ್ದೆಯಿಲ್ಲದೇ ಕಪ್ಪಾಗಿತ್ತು. ಯಾವುದೋ ಭಾರೀ ತೊಂದರೆಯಲ್ಲಿ ಆಕೆ ಸಿಲುಕಿಕೊಂಡಿದ್ದಾಳೆಂದು ಯಾರು ಬೇಕಾದರೂ ಹೇಳಬಹುದಿತ್ತು. ಆಕೆಯ ಕೂಗಿಗೆ ಎಲ್ಲರೂ ಅವಳತ್ತಲೇ ದಿಟ್ಟಿಸಿದರು. ಯಾವ ನ್ಯಾಯಾಧೀಶರು ಬೇಕು? ಏನಾಗಬೇಕು? ನಿನ್ನ ಸಂಕಷ್ಟಗಳೇನು? ಯಾಕೆ ಕಿರುಚುತ್ತಿದ್ದೀಯಾ?' ಎಂದು ಅಲ್ಲಿದ್ದ ಕೆಲವು ವಕೀಲರು ಆಕೆಯನ್ನು ಕೇಳಿದರು. ಅದಕ್ಕೆ ಆಕೆ ನಾನು ನ್ಯಾಯಾಧೀಶರನ್ನು ಭೇಟಿ ಮಾಡಬೇಕು. ದಯವಿಟ್ಟು ಸಹಾಯ ಮಾಡಿ' ಎಂದು ಹೇಳುತ್ತಾ ಅಳಲಾರಂಭಿಸಿದಳು. ಅಲ್ಲಿದ್ದವರೆಲ್ಲ ಕಕ್ಕಾಬಿಕ್ಕಿ. ಹತ್ತು ವರ್ಷದ ಬಾಲಕಿಗೆ ನ್ಯಾಯಾಧೀಶರನ್ನು ಭೇಟಿ ಮಾಡುವಂಥ ಜರೂರತ್ತೇನಿದೆ? ಅವಳ ಸಂಕಟವೇನೋ? ಏನೇ ಇರಲಿ, ನ್ಯಾಯಾಧೀಶರ ಬಳಿ ಕರೆದುಕೊಂಡು ಹೋದರು.

ಎಲ್ಲರ ಗಮನವೂ ಆ ಪುಟ್ಟ ಹುಡುಗಿಯ ಮೇಲೆ ಇತ್ತು. ನ್ಯಾಯಾಧೀಶರು ಪೀಠದಲ್ಲಿ ಆಸೀನರಾಗುತ್ತಿದ್ದಂತೆ ಇಡೀ ಹಾಲ್‌ನಲ್ಲಿ ಮೌನ. ನ್ಯಾಯಾಧೀಶರು ಏನಮ್ಮಾ, ಏನು ಬೇಕು ನಿನಗೆ?' ಎಂದು ಕೇಳಿದರು. ನುಜೂದ್ ಹೇಳಿದಳು- ಡೈವೋರ್ಸ್!' ನ್ಯಾಯಾಧೀಶರ ಬಾಯಿಂದ ಮಾತೇ ಹೊರಡಲಿಲ್ಲ. ಇಡೀ ಕೋರ್ಟ್ ಹಾಲ್ ಸ್ತಂಭೀಭೂತ. ಒಂದು ನಿಮಿಷ ಸಾವರಿಸಿಕೊಂಡ ನ್ಯಾಯಾಧೀಶರು, ಏನು ಡೈವೋರ್ಸಾ?' ಎಂದು ಕೇಳಿದ್ದಕ್ಕೆ ನುಜೂದ್ ಹೌದೆಂಬಂತೆ ತಲೆಯಾಡಿಸಿದಳು. ಅದಕ್ಕೆ ನ್ಯಾಯಾಧೀಶರು ಹಾಗಂದ್ರೆ ನಿನಗೆ ಮದುವೆ ಆಗಿದೆ ಅಂದಂತಾಯಿತು' ಎಂದರು ಅಚ್ಚರಿಯಿಂದ. ಆಗ ನುಜೂದ್ ಜೋರಾಗಿ ಅಳಲಾರಂಭಿಸಿದಳು. ನನ್ನ ಮದುವೆಯಾಗಿ ಮೂರು ತಿಂಗಳಾಯಿತು. ನಾನು ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ. ಈ ಮದುವೆ ನನಗೆ ಇಷ್ಟವಿಲ್ಲ. ನನಗೆ ಡೈವೋರ್ಸ್ ಕೊಡಿಸಿ' ಎಂದು ಗೋಳಿಡಲಾರಂಭಿಸಿದಳು.

ಕಲ್ಲವಿಲಗೊಂಡ ನ್ಯಾಯಾಧೀಶರು ಆಕೆಯನ್ನು ಸಂತೈಸಲು ಮುಂದಾದರು. ಆದರೆ ಅವರಿಗೆ ಕರ್ತವ್ಯಪ್ರಜ್ಞೆ ಕಟ್ಟಿಹಾಕಿತು. ನಿನ್ನ ವಕೀಲರ ಜತೆ ಬಾ. ನಿನ್ನ ಸಂಕಷ್ಟಗಳನ್ನು ಅವರು ವಿವರಿಸಲಿ. ಆಗ ನಿನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕೋಣ' ಎಂದರು ನ್ಯಾಯಾಧೀಶರು.

ನುಜೂದ್ ಕುಟುಂಬದ ದೃಶ್ಯ: ಯಮನ್ ದೇಶದ ಸಾನಾ ಎಂಬ ನಗರದ ಕೊಳೆಗೇರಿಯಂಥ ಪ್ರದೇಶದಲ್ಲಿ ಅಲಿ ಮಹಮದ್ ಅಲ್ ಅಹ್ದೇಲ್ ಒಬ್ಬ ಬೇಜವಾಬ್ದಾರಿ ಮನುಷ್ಯನಿದ್ದ. ಅವನಿಗೆ ಒಂದು ನೌಕರಿಯಿತ್ತಾದರೂ ಸರಿಯಾಗಿ ಅದನ್ನು ಮಾಡದ್ದರಿಂದ ಕೆಲಸದಿಂದ ಕಿತ್ತು ಹಾಕಿದ್ದರು. ಮನೆಯಲ್ಲಿ ಸದಾ ಕುಡಿಯುವುದು, ತಿನ್ನುವುದೇ ಅವನ ಕೆಲಸ. ಆತ ಶೋಯಾ ಎಂಬುವವಳನ್ನು ಮದುವೆಯಾದಾಗ ಅವನಿಗೆ ಇಪ್ಪತ್ತೆಂಟು ವರ್ಷ. ಶೋಯಾಗೆ ಹದಿನಾರು ವರ್ಷ. ನಾಲ್ಕು ವರ್ಷಗಳ ಬಳಿಕ ಅಹ್ದೇಲ್ ಎರಡನೆಯ ಮದುವೆಯಾದ. ಮದುವೆಯಾದ ಹದಿನೆಂಟು ವರ್ಷಗಳಲ್ಲಿ ಶೋಯಾ ಹದಿನಾರು ಮಕ್ಕಳಿಗೆ ಜನ್ಮ ನೀಡಿದಳು! ಆ ಪೈಕಿ ಒಬ್ಬಳು ನುಜೂದ್. ಈ ಅವಧಿಯಲ್ಲಿ ಶೋಯಾಗೆ ಎರಡು ಸಲ ಗರ್ಭಪಾತವಾಯಿತು. ಒಂದು ಮಗು ಹುಟ್ಟುವಾಗಲೇ ಸತ್ತು ಹೋಯಿತು. ನುಜೂದ್ ಹುಟ್ಟಿದಾಗ ಮನೆಯಲ್ಲಿ ಅದೆಂಥ ಬಡತನವೆಂದರೆ ಅವಳ ತಾಯಿಗೆ ಎರಡು ಹೊತ್ತು ತಿನ್ನಲು ಗತಿಯಿರಲಿಲ್ಲ. ಶೀತದ ಹೊಡೆತಕ್ಕೆ ನುಜೂದ್ ನಡುಗುತ್ತಿದ್ದರೆ ತಂದೆ ಅಹ್ದೇಲ್ ಗಡಂಗಿನಲ್ಲಿ ಕುಳಿತು ಕುಡಿಯುತ್ತಿದ್ದ. ಕೊನೆಕೊನೆಗೆ ಆತನಿಗೆ ಮಾಡಲು ಬೇರೇನೂ ಕೆಲಸವಿಲ್ಲದೇ ಎಂಟು ಕುರಿ ಹಾಗೂ ನಾಲ್ಕು ದನ ಕರುಗಳನ್ನು ಮೇಯಿಸಿಕೊಂಡಿರುತ್ತಿದ್ದ. ಅವುಗಳ ಹಾಲು ಹಿಂಡಿ ಮಾರಿದ ಹಣದಿಂದ ಇಪ್ಪತ್ನಾಲ್ಕು ಮಂದಿಯ ಕುಟುಂಬ ಸಾಗಬೇಕಿತ್ತು ಅಂದ್ರೆ ಆ ಕುಟುಂಬದ ದಾರಿದ್ರ್ಯವೇನೆಂಬುದನ್ನು ಊಹಿಸಬಹುದು.

ಮಕ್ಕಳಿಗೆ ಏಳು ವರ್ಷ ತುಂಬಿದರೆ ಸಾಕು, ಅಹ್ದೇಲ್ ಅವರನ್ನೆಲ್ಲ ಕೆಲಸಕ್ಕೆ ಅಟ್ಟುತ್ತಿದ್ದ. ತನ್ನ ಮಕ್ಕಳನ್ನೇ ಜೀತಕ್ಕಿಟ್ಟುಕೊಂಡವರಂತೆ ಗೇಯಿಸುತ್ತಿದ್ದ. ಮಕ್ಕಳು ದುಡಿದು ಹಣ ಕೊಡದಿದ್ದರೆ ಬಡಿಯುತ್ತಿದ್ದ. ಶಾಲೆಗೆ ಹೋಗುವ ಮಾತಾಡಿದರೆ ಲತ್ತೆ ಗ್ಯಾರಂಟಿ. ಗಂಡನ ಕ್ರೌರ್ಯಕ್ಕೆ ಹೆಂಡತಿಯರಿಬ್ಬರು ಗುಮ್ಮನಗುಸುಕನಂತಿರುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳ ಅಪಹರಣವಾದಾಗ ಅವರನ್ನು ಹುಡುಕುವ ಗೋಜಿಗೂ ಹೋಗದ ನಿರ್ದಯಿ ತಂದೆ ಆತ.

ಮದುವೆಯ ದೃಶ್ಯ: ಅಹ್ದೇಲ್‌ಗೆ ಅವನ ಮಕ್ಕಳೇ ಭಾರವಾಗಿದ್ದರು. ಒಂದು ದಿನವೂ ಆತ ಅವರನ್ನು ಪ್ರೀತಿ ಮಾಡಿದ್ದಿಲ್ಲ, ಅಪ್ಪಿ ಮುದ್ದಾಡಿದ್ದಿಲ್ಲ. ಅಂಥ ಮನೆಯಲ್ಲಿ ಬೆಳೆಯುವ ಮಕ್ಕಳು ಹೇಗಿದ್ದಾರು? ಆದರೆ ನುಜೂದ್ ಮಾತ್ರ ಭಿನ್ನವಾಗಿದ್ದಳು. ಆಕೆ ತಂದೆಯ ಕಣ್ತಪ್ಪಿಸಿ, ಕೆಲಸಕ್ಕೆ ಹೋಗುವ ನೆಪದಲ್ಲಿ ಸ್ಕೂಲ್‌ಗೆ ಹೋಗುತ್ತಿದ್ದಳು. ತಂದೆಯ ಎರಡನೆ ಹೆಂಡತಿ ಆಕೆ ಸ್ಕೂಲಿಗೆ ಹೋಗಲು ಪರೋಕ್ಷ ನೆರವಾಗಿದ್ದಳು. ಒಂದು ದಿನ ಅದು ಹೇಗೋ ಅಹ್ದೇಲ್‌ಗೆ ಈ ಸಂಗತಿ ಗೊತ್ತಾಯಿತು. ಆ ದಿನ ಅವಳನ್ನು ಆತ ಜೀವಸಹಿತ ಬಿಟ್ಟಿದ್ದೇ ದೊಡ್ಡದು. ಅಂದೇ ಅವನಿಗೆ ಅನಿಸಿತು ಇವಳನ್ನು ಮದುವೆ ಮಾಡಬೇಕು ಎಂದು. ಅದೇ ಸಮಯಕ್ಕೆ ಒಬ್ಬ ಬಂದ. ಅವನ ಹೆಸರು ಫೈಯಜ್ ಅಲಿ ತಾಮೆರ್. ಆತ ಮೋಟರ್‌ಸೈಕಲ್ ಇಟ್ಟುಕೊಂಡಿದ್ದ. ಅದರ ಮೇಲೆ ಪಾರ್ಸೆಲ್, ಪೊಟ್ಟಣಗಳನ್ನು ಇಟ್ಟುಕೊಂಡು ಮನೆಮನೆಗೆ ಬಟವಾಡೆ ಮಾಡುವ ಕೆಲಸ. ಆತನಿಗೆ ನುಜೂದ್‌ಗಿಂತ ಮೂರು ಪಟ್ಟು ಜಾಸ್ತಿ ವರ್ಷ. ಮೂವತ್ತರ ಹರೆಯದ ಹಲ್ಲುಗೊಗ್ಗ. ಆತ ಹುಡುಗಿಯನ್ನು ನೋಡಿದವನೇ ಮದುವೆಗೆ ಒಪ್ಪಿದ. ಯಮನ್ ದೇಶದ ಕಾನೂನಿನ ಪ್ರಕಾರ, ಒಂಬತ್ತು ವರ್ಷವಾದ ಬಳಿಕ ಹೆಣ್ಣು ಮಕ್ಕಳನ್ನು ಮದುವೆಯಾಗಬಹುದು. ಆದರೆ ಅವರ ಜತೆ ಲೈಂಗಿಕ ಸಂಬಂಧ ಹೊಂದುವಂತಿಲ್ಲ, ಆಕೆ ಋತುಮತಿಯಾಗುವ ತನಕ. ಆದರೆ ಈ ಫೈಯಜ್ ಅಲಿ ತಾಮೆರ್ ನುಜೂದ್‌ಳನ್ನು ಮದುವೆಯಾದ ದಿನವೇ ತನ್ನ ಲೈಂಗಿಕ ವಾಂಛೆಯನ್ನು ಪ್ರದರ್ಶಿಸಿದ. ಮದುವೆ, ಗಂಡ, ಸಂಸಾರ, ಸೆಕ್ಸ್ ಅಂದ್ರೆ ಎನೇನೂ ಗೊತ್ತಿಲ್ಲದ ಆಕೆಯ ಪಾಡು ಹೇಗಿದ್ದಿರಬಹುದು?

ಗಂಡನ ಮನೆಯ ದೃಶ್ಯ: ನುಜೂದ್‌ಗೆ ಗಂಡನೆಂದರೆ ಒಂಥರಾ ತಿರಸ್ಕಾರ. ಆತ ಕರೆದರೆ ಸಾಕು ಷಾಕ್ ಹೊಡೆದ ಅನುಭವ. ತಾನೇಕೆ ಅವನ ಜತೆಗಿರಬೇಕು ಎಂದು ಕೇಳಿದ ಪ್ರಶ್ನೆಗೇ ಉತ್ತರ ಸಿಕ್ಕಿರಲಿಲ್ಲ. ಈ ಮಧ್ಯೆ ತಾಮೆರ್ ರಾತ್ರಿಯಾಗುತ್ತಿದ್ದಂತೆ ನುಜೂದ್ ಮೇಲೆ ಎರಗುತ್ತಿದ್ದ. ಗಂಡನ ಕಾಮತೃಷೆ ಅರ್ಥವಾಗದೇ ಜೋರಾಗಿ ಕಿರುಚಿಕೊಂಡರೆ ಬಾಯಿಗೆ ಬಟ್ಟೆ ತುರುಕುತ್ತಿದ್ದ. ತಾನು ಹೇಳಿದಂತೆ ಕೇಳದಿದ್ದರೆ ಹೊಡೆಯುತ್ತಿದ್ದ. ಸಿಗರೇಟಿನ ತುದಿಯಿಂದ ಸುಡುತ್ತಿದ್ದ. ನುಜೂದ್ ರೌದ್ರಾವತಾರದಿಂದ ಕಿರುಚಿದರೆ ಅದನ್ನು ನೋಡಿ ಸಂಭ್ರಮಿಸುತ್ತಿದ್ದ. ಅತ್ತೆಯ ಕಾಟವೂ ಸಹಿಸಲು ಅಸಾಧ್ಯವಾಗಿತ್ತು. ಮಾತೆತ್ತಿದರೆ ನಿನ್ನನ್ನು ನನ್ನ ಮಗ ಸುಮ್ಮನೆ ಮದುವೆಯಾಗಿಲ್ಲ, ನಿನ್ನ ಅಪ್ಪನಿಗೆ ಹಣಕೊಟ್ಟು ಮದುವೆಯಾಗಿದ್ದಾನೆ. ಆತ ಹೇಳಿದಂತೆ ಕೇಳದಿದ್ದರೆ ಬಡಿಯುತ್ತೇನೆ '. ಎಂದು ಗದರುತ್ತಿದ್ದಳು. ಮದವೆಯಾದ ಎರಡು ತಿಂಗಳೊಳಗೆ ನುಜೂದ್ ಮಾನಸಿಕವಾಗಿ ಜರ್ಝರಿತಳಾಗಿ ಹೋದಳು. ಈ ಅವಧಿಯಲ್ಲಿ ಹತ್ತಾರು ಬಾರಿ ಅತ್ಯಾಚಾರಕ್ಕೊಳಗಾದಳು. ಗಂಡನೆಂದರೆ ರಾಕ್ಷಸನ ಪ್ರತಿರೂಪ ಅವಳ ಕಣ್ಣೆದುರು ಧುತ್ತೆಂದು ಪ್ರತ್ಯಕ್ಷವಾಗಿ ಕುಂತಲ್ಲಿ ನಿಂತಲ್ಲಿ ಕಿಟಾರನೆ ಕಿರುಚುತ್ತಿದ್ದಳು. ರಾತ್ರಿಯಾಗುತ್ತಿದ್ದಂತೆ ಭಯ, ನಡುಕ. ಗಂಡ ಹತ್ತಿರ ಬಂದರೆ ಹಾವು ಸಮೀಪಿಸಿದ ಅನುಭವ.

ತವರಿನ ದೃಶ್ಯ: ತವರಿಗೆ ಬಂದು ತಾಯಿಯ ಮುಂದೆ ತನ್ನ ಗೋಳನ್ನೆಲ್ಲ ತೋಡಿಕೊಂಡರೆ, ಅಪ್ಪನಿಗೆ ಗೊತ್ತಾದರೆ ನಿನಗೇ ಬಡಿಯುತ್ತಾನೆ. ಸಂಸಾರವೆಂದ ಮೇಲೆ ಗಂಡ ಹೇಳಿದಂತೆ ಕೇಳಬೇಕಾದುದು ಹೆಂಡತಿ ಕರ್ತವ್ಯ. ಮದುವೆ ಆರಂಭದಲ್ಲಿ ಇವೆಲ್ಲ ಸಾಮಾನ್ಯ. ಕ್ರಮೇಣ ಎಲ್ಲ ಸರಿಹೋಗುತ್ತದೆ. ಅಲ್ಲಿ ತನಕ ಗಂಡನ ಜತೆಗೆ ಹೊಂದಿಕೊಂಡು ಹೋಗಬೇಕು' ಎಂದು ಮಗಳಿಗೇ ಬುದ್ಧಿಮಾತು ಹೇಳಿ ಕಳಿಸಿದಳು. ಗಂಡನ ಮನೆಗೆ ಹೋದರೆ ಅದೇ ಪೈಶಾಚಿಕ ವರ್ತನೆ. ತವರಿಗೆ ಬಂದರೆ ತಂದೆ-ತಾಯಿ ಬೆದರಿಕೆ.

ಒಂದು ಸಲ ಗಂಡನ ಮನೆಯಿಂದ ತವರಿಗೆ ಬಂದಾಗ, ಎರಡು ದಿನ ಸಹ ಆಗಿರಲಿಲ್ಲ, ತಂದೆ ಜಬರ್‌ದಸ್ತಿ ಮಾಡಿ ಮಗಳನ್ನು ಗಂಡನ ಮನೆ ತನಕ ಹೋಗಿ ಬಿಟ್ಟು ಬಂದಿದ್ದ. ಮದುವೆ ಮಾಡಿಕೊಟ್ಟ ಬಳಿಕ ತವರಿಗೇಕೆ ಬರುತ್ತೀಯಾ? ಎಂದು ಗದರಿದ್ದ. ಇನ್ನೊಂದು ಸಲ ಬಂದರೆ ಹುಷಾರ್ ಎಂದು ಗದರಿದ್ದ. ಕೊನೆಗೆ ಬೇರೆ ದಾರಿ ಕಾಣದೇ ನುಜೂದ್ ತನ್ನೆಲ್ಲ ತಾಪತ್ರಯಗಳ ಕಟ್ಟನ್ನು ತನ್ನ ಮಲತಾಯಿ (ಅಪ್ಪನ ಎರಡನೇ ಹೆಂಡತಿ) ಮುಂದೆ ಬಿಚ್ಚಿಟ್ಟಳು. ನುಜೂದ್ ಮೈಮೇಲೆ ಕಂಡ ಸುಟ್ಟ ಗಾಯ, ಬಾಸುಂಡೆ, ಕನ್ನೆತ್ತರಗಟ್ಟಿದ ಹುಬ್ಬುಗಳು, ಹರಿದಬಟ್ಟೆಯನ್ನು ನೋಡಿದ ಮಲ ತಾಯಿಗೆ ಆಕೆಯ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೆಂಬುದು ಗೊತ್ತಾಯಿತು. ಗಂಡನ ಮನೆಯಿಂದ ಓಡಿ ಬರಲು ಸೂಚಿಸಿದಳು. ಹಾಗೆಂದು ತವರಿನಲ್ಲಿ ಇರುವಂತಿರಲಿಲ್ಲ. ಹತ್ತು ವರ್ಷದ ಬಾಲೆ ಎಲ್ಲಿಗೆ ಹೋದಾಳು?

ಆದರೆ ನುಜೂದ್ ಒಂದು ಗಟ್ಟಿ ನಿರ್ಧಾರಕ್ಕೆ ಬಂದಿದ್ದಳು. ಏನೇ ಆದರೂ ಗಂಡನ ಮನೆಗೆ ಪುನಃ ಹೋಗದಿರುವಂತೆ ತೀರ್‍ಮಾನಿಸಿದಳು. ಆದರೆ ಗಂಡ ಬಿಡಬೇಕಲ್ಲ. ನುಜೂದ್ ಹುಡುಕಿಕೊಂಡು ಬಂದ. ಬಿಲ್‌ಕುಲ್ ಬರುವುದಿಲ್ಲ ಎಂದು ಬಿಟ್ಟಳು. ಚೋಟುದ್ದ ಹುಡುಗಿ ತನಗೆ ತಿರುಗೇಟು ಕೊಡುವಷ್ಟರ ಮಟ್ಟಿಗೆ ಬೆಳೆದಳಾ ಎಂದ ಗಂಡ, ಹೆಂಡತಿಗೆ ಹೊಡೆಯಲು ಕೈಯೆತ್ತಿದ. ಅದೇ ಬಾಲೆ ಗಂಡನ ವಿರುದ್ಧ ತಿರುಗಿ ಬಿದ್ದಳು. ಹೆಂಡತಿಯ ಆಟಾಟೋಪಕ್ಕೆ ಆತ ಒಂದು ಕ್ಷಣ ಪೆಕರನಂತಾಗಿ ಹೋದ. ಬಲಾತ್ಕಾರವಾಗಿ ತನ್ನ ಮನೆಗೆ ಕೆರೆದೊಯ್ಯಲು ಪ್ರಯತ್ನಿಸಿದ. ಆ ಹೊತ್ತಿಗೆ ನುಜೂದ್ ಕಲ್ಲಿನಂತಾಗಿ ಹೋಗಿದ್ದಳು. ಗಂಡ ಅವಳಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿ ಎಳೆದುಕೊಂಡು ಹೋಗಲು ಹುನ್ನಾರ ನಡೆಸಿದಾಗ...... ಆಕೆ ಡೈವೋರ್ಸ್ ಭಿಕ್ಷೆ ಬೇಡಿ ನ್ಯಾಯಾಧೀಶರ ಮುಂದೆ ನಿಂತಿದ್ದಳು!

ಕೋರ್ಟ್ ದೃಶ್ಯ: ನ್ಯಾಯಾಧೀಶರ ಕೋರಿಕೆಯಂತೆ ನುಜೂದ್ ವಕೀಲರ ಹುಡುಕಾಟದಲ್ಲಿದ್ದಾಗ ಆಕೆಗೆ ಆಕಸ್ಮಿಕವಾಗಿ ಸಿಕ್ಕವಳು ಶಾದಾನಸೀರ್. ಅಪ್ರಾಪ್ತವಯಸ್ಸಿನ ಹುಡುಗಿಯರು ವೃದ್ಧ ಶ್ರೀಮಂತರ ಕಾಮದಾಹಕ್ಕೆ ಬಲಿಯಾಗುವುದರ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ದಿಟ್ಟ ಕಾನೂನು ಹೋರಾಟಗಾರ್ತಿ. ಡೈವೋರ್ಸ್ ಬಯಸಿ ಜಡ್ಜ್ ಮುಂದೆ ಅಂಗಲಾಚಿದ ನುಜೂದ್‌ಳ ದೈನೇಸಿ ಸ್ಥಿತಿ ಶಾದಾ ಗಮನಕ್ಕೆ ಬಂತು. ಅವಳು ತಕ್ಷಣ ನುಜೂದ್‌ಳನ್ನು ಸಂಪರ್ಕಿಸಿ ತಾನು ನಿನ್ನ ಪರವಾಗಿ ಕೋರ್ಟಿನಲ್ಲಿ ವಾದಿಸುವುದಾಗಿ ಹೇಳಿದಳು. ಈ ಹೊತ್ತಿಗೆ ನುಜೂದ್‌ಳಲ್ಲಿ ಅದೆಂಥ ದಿಟ್ಟತನ ಮನೆಮಾಡಿತ್ತೆಂದರೆ ತಾನು ಕೈಹಿಡಿದ ಗಂಡನ ವಿರುದ್ಧವೇ ಕಾನೂನು ಹೋರಾಟಕ್ಕೆ ನಿಂತಳು.

ಹೇಳಿಕೇಳಿ ಹತ್ತು ವರ್ಷದ, ಜಗತ್ತಿನ ಕ್ರೂರತನ, ಕರಾಮತ್ತು ಗೊತ್ತಿಲ್ಲದ ಬಾಲಕಿ! ಯೆಮೆನಿ ಕಾನೂನು ಪ್ರಕಾರ ಮದುವೆ ಆಗಿದ್ದರೂ, ಮೈನೆರೆಯುವ ಮುನ್ನವೇ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಶಾದಾ ವಾದಿಸಿದಳು. ಋತುಮತಿಯಾದ ಬಳಿಕ ಗಂಡನ ಮನೆಗೆ ಹೋಗಬಹುದು, ಅಲ್ಲಿಯ ತನಕ ತವರಿನಲ್ಲಿರಬಹುದು' ಎಂದು ನ್ಯಾಯಾಧೀಶರು ಸಮಾಧಾನಪಡಿಸಿದರೆ, ಸಾಧ್ಯವೇ ಇಲ್ಲ. ನನಗೆ ಡೈವೋರ್ಸ್ ಬೇಕೇ ಬೇಕು' ಎಂದು ಹಟ ಹಿಡಿದಳು. 2008ರ ಏಪ್ರಿಲ್ 15 ರಂದು, ಅಂದರೆ ಮದುವೆಯಾದ ಸುಮಾರು ಮೂರು ತಿಂಗಳ ಬಳಿಕ ನ್ಯಾಯಾಲಯ ಅವಳಿಗೆ ಡೈವೋರ್ಸ್ ನೀಡಿತು.

ಆನಂತರದ ದೃಶ್ಯಗಳು: ರಾತ್ರಿ ಬೇಳಗಾಗುವುದರೊಳಗೆ ನುಜೂದ್ ವಿಶ್ವದ ಗಮನಸೆಳೆದಳು. ನಿನ್ನ ಮುಂದಿನ ಹೆಜ್ಜೆಯೇನು ಎಂದು ಪತ್ರಕರ್ತರು ಕೇಳಿದಾಗ ನಾನು ಸ್ವಂತ ದುಡಿದು, ವಿದ್ಯಾಭ್ಯಾಸ ಮುಗಿಸಿ ಲಾಯರ್ ಆಗುತ್ತೇನೆ. ನನ್ನ ತಂದೆ-ತಾಯಿಯನ್ನು ಸಾಕುತ್ತೇನೆ' ಎಂದಳು. ಆ ಕಂದಮ್ಮನ ಮಾತು, ಕೇಳಿ ಇಡೀ ವಿಶ್ವವೇ ನಿಬ್ಬೆರಗಾಯಿತು. ಯೆಮನ್‌ನಲ್ಲಿ ಆಚರಣೆಯಲ್ಲಿರುವ ಅಮಾನವೀಯ ಕಾನೂನಿನ ವಿರುದ್ಧ ವಿಶ್ವವ್ಯಾಪಿ ವ್ಯಾಪಕ ಟೀಕೆ ವ್ಯಕ್ತವಾಯಿತು. 2009ರ ಫೆಬ್ರವರಿಯಲ್ಲಿ ಅಲ್ಲಿನ ಪಾರ್ಲಿಮೆಂಟ್ ಸಭೆ ಸೇರಿ ವಿವಾಹಕಾಯ್ದೆಗೆ ತಿದ್ದುಪಡಿ ತಂದಿತು. ಹುಡುಗ-ಹುಡುಗಿಗೆ ಹದಿನೇಳು ತುಂಬಿದ ನಂತರವೇ ಮದುವೆಯಾಗತಕ್ಕದ್ದು ಎಂದು ಹೇಳಿತು. ತಾನು ಸಾಕಷ್ಟು ಆರ್ಥಿಕವಾಗಿ ಸಬಲನಾಗಿದ್ದೇನೆ ಎಂಬುದನ್ನು ಖಾತ್ರಿಪಡಿಸಿದ ನಂತರ ಎರಡನೇ ಮದುವೆಯಾಗಬಹುದು ಎಂಬ ಕಾನೂನು ಸಹ ಜಾರಿಗೆ ಬಂತು. ಒಬ್ಬ ನುಜೂದ್, ಅಫಘಾನಿಸ್ತಾನ, ಇರಾನ್, ಇರಾಕ್, ಈಜಿಪ್ತ್, ಪಾಕಿಸ್ತಾನ ಮುಂತಾದ ದೇಶಗಳಲ್ಲಿ ನುಜೂದ್‌ಳ ಹಾಗೆ ಬದುಕುತ್ತಿರುವ ಅಸಂಖ್ಯ ಹೆಣ್ಣು ಮಕ್ಕಳಿಗೆ ಆಶಾಕಿರಣವಾಗಿ ಗೋಚರಿಸಿದಳು. ನುಜೂದ್ ಪ್ರದರ್ಶಿಸಿದ ಅಸಾಧಾರಣ ಧೈರ್ಯ, ಸಾಹಸ ಹಾಗೂ ಹೋರಾಟ ಮನೋಭಾವ ಕಂಡು ಅದೇ ವರ್ಷದ (2008) ನವೆಂಬರ್‌ನಲ್ಲಿ ಅಮೆರಿಕದ ಗ್ಲಾಮರ್ ' ಪತ್ರಿಕೆ ವರ್ಷದ ಮಹಿಳೆ' ಪ್ರಶಸ್ತಿ ನೀಡಿತು. ಸ್ವತಃ ಹಿಲರಿ ಕ್ಲಿಂಟನ್, ಕಾಂಡೊಲಿಸಾರೈಸ್ ಅವಳ ದಿಟ್ಟತನವನ್ನು ಕೊಂಡಾಡಿದರು. ನುಜೂದ್‌ಳ ವಿದ್ಯಾಭ್ಯಾಸಕ್ಕಾಗಿ ಜಗತ್ತಿನೆಲ್ಲೆಡೆಯಿಂದ ಹಣ ಹರಿದುಬಂತು.

ಸದ್ಯದ ದೃಶ್ಯ: ಗಂಡನಿಂದ ಎಲ್ಲ ಸಂಪರ್ಕ ಕಡಿದುಕೊಂಡ ನುಜೂದ್, ಆತ್ಮಕತೆ ಬರೆದಿದ್ದರಿಂದ ಬಂದ ಹಣದಿಂದ ಒಂದು ಅಪಾರ್ಟಮೆಂಟ್ ನಲ್ಲಿ ತನ್ನ ತಂದೆ-ತಾಯಿಯೊಂದಿಗೆ ನೆಮ್ಮದಿ ಬದುಕು ಸಾಗಿಸುತ್ತಿದ್ದಾಳೆ. ಅಣ್ಣ, ತಮ್ಮ, ಅಕ್ಕಂದಿರನ್ನೆಲ್ಲ ಓದಿಸುತ್ತಿದ್ದಾಳೆ. ತಾನೂ ಹೆಗಲಿಗೆ ಬ್ಯಾಗನ್ನೇರಿಸಿಕೊಂಡು ನಿತ್ಯ ಶಾಲೆಗೆ ಹೋಗುತ್ತಿದ್ದಾಳೆ. ದಿಟ್ಟೆ! ಕ್ಷಮಿಸಿ, ರಾಜ್ಯ ರಾಜಕೀಯಕ್ಕಿಂತ ಈಕೆಯ ಕತೆಯೇ ಹೆಚ್ಚು ಸ್ಫೂರ್ತಿ ನೀಡಬಹುದೆಂದು ಇವನ್ನೆಲ್ಲ ಬರೆಯಬೇಕಾಯಿತು.

English summary
I am Nujood, Age 10 and Divorced! A heart squeezing story of a minor girl, fought against husband and got divorce on her own. She was awarded Woman of the Year by Glamour magazine in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X