ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಅವರ ಮತ್ತೊಂದಿಷ್ಟು ಪತ್ರಗಳ ನಮೂನೆ

By * ವಿಶ್ವೇಶ್ವರ ಭಟ್
|
Google Oneindia Kannada News

J R D Tata
ಆಗಿನ ಬಾಂಬೆಯಿಂದ ಪ್ರಕಟಗೊಳ್ಳುತ್ತಿದ್ದ ಕರೆಂಟ್' ವಾರಪತ್ರಿಕೆಯ ಸಂಪಾದಕ ಡಿ.ಎಫ್. ಕಾರಕರಿಗೆ ಬರೆದ ಪತ್ರದಲ್ಲಿ ಭಾಷೆಗೆ ಸಂಬಂಧಿಸಿದಂತೆ ಕಾಯ್ದುಕೊಳ್ಳಬೇಕಾದ ಸಭ್ಯತೆಯ ಬಗ್ಗೆ ಟಾಟಾ ಅವರಿಗಿದ್ದ ಕಾಳಜಿ ವ್ಯಕ್ತವಾಗಿದೆ.

ಪ್ರಿಯ ದೊಸೋ,
ನೌ ಲೆಟ್ ದೆಮ್ ಡೈ' ಎಂಬ ಶೀರ್ಷಿಕೆ ಅಡಿ ಪ್ರಕಟವಾದ ಕರೆಂಟ್ ನಿಯತಕಾಲಿಕದ ಅಗ್ರ ಲೇಖನವನ್ನು ಓದಿ ನನಗೆ ಖೇದವುಂಟಾಯಿತು. ಬೇಸರವಾಗಿದ್ದು ನೀವು ಭಾರತ ಸರಕಾರದ ಆಹಾರ ನೀತಿಯನ್ನು ಟೀಕೆ ಮಾಡಿರುವುದಕ್ಕಲ್ಲ, ಬದಲಿಗೆ ಜವಹಾರ್‌ಲಾಲ್ ನೆಹರು ಅವರ ಬಗ್ಗೆ ನೀವು ಉಪಯೋಗಿಸಿದ ಭಾಷೆಯಿಂದ. ಪ್ರಜಾಪ್ರಭುತ್ವದಲ್ಲಿ ಸರಕಾರದ ನೀತಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಪತ್ರಿಕೆಗಳಿಗೆ ಇರುವುದು ಹೌದಾದರೂ ಅದನ್ನೇ ಸಭ್ಯ ಭಾಷೆಯಲ್ಲಿ, ವೈಯಕ್ತಿಕ ನಿಂದನೆಗಿಳಿಯದೇ ಮಾಡುವುದಕ್ಕೆ ಅಡ್ಡಿ ಏನಿದೆ...
ನಿಮ್ಮ ವಿಶ್ವಾಸಿ
ಜೇ

***

ಬ್ಲಿಟ್ಜ್' ಪತ್ರಿಕೆಯ ಸಂಪಾದಕ ರುಸ್ಸಿ ಕರಂಜಿಯಾ ಯಾವತ್ತೂ ಟಾಟಾ ವಿರುದ್ಧ ಕಟುವಾಗಿಯೇ ಬರೆದುಕೊಂಡು ಬಂದವರು. ಯಾವುದೋ ಹಂತದಲ್ಲಿ ರುಸ್ಸಿಗೆ ಕದನಕ್ಕೆ ಟಾಟಾ ಹೇಳಿ ಸ್ನೇಹ ಮಾಡಿಕೊಳ್ಳುವ ಬಯಕೆ ಬಂತೆನಿಸುತ್ತದೆ. ಅದಕ್ಕಾಗಿ ಟಾಟಾ ಅವರೊಂದಿಗೆ ಭೇಟಿ ಬಯಸಿ ಪತ್ರ ಬರೆದರು. ಅದನ್ನು ಟಾಟಾ ಸುಮ್ಮನೇ ಬದಿಗಿಡಲೂ ಇಲ್ಲ, ಹಾಗಂತ ರುಸ್ಸಿ ಆಸೆಗೆ ನೀರೆರೆಯಲೂ ಇಲ್ಲ. ಪ್ರತಿಕ್ರಿಯೆಯನ್ನಂತೂ ನೀಡಿದರು. ಟಾಟಾ ಅವರ ಖಡಕ್‌ತನದ ಝಲಕ್ ಆ ಮರು ಉತ್ತರದ ಪತ್ರದಲ್ಲಿ ಜಾಹೀರಾಗಿದೆ.

ಪ್ರೀತಿಯ ರುಸ್ಸಿ,
ಜುಲೈ 28ರ ಪತ್ರಕ್ಕೆ ಧನ್ಯವಾದ. ನಮ್ಮ ಹಳೆಯ ಬಾಂಧವ್ಯವನ್ನು ಮತ್ತೆ ಸ್ಥಾಪಿಸಿಕೊಳ್ಳೋಣ ಎಂದು ನೀವು ಹೇಳಿರುವುದೇನೋ ಚೆನ್ನಾಗಿದೆಯಾದರೂ ನಮ್ಮಿಬ್ಬರ ಭೇಟಿ ಯಾವ ಉದ್ದೇಶವನ್ನು ಈಡೇರಿಸಲಿದೆ ಎಂಬುದು ನನಗರ್ಥವಾಗುತ್ತಿಲ್ಲ. ನಾವಿಬ್ಬರೂ ನಂಬುವ ಸಂಗತಿಗಳು ಹಾಗೂ ಜೀವನದ ಆದ್ಯತೆಗಳ ವಿಷಯದಲ್ಲಿ ಇಬ್ಬರ ನಡುವೆ ಅದೆಂಥ ಕಂದಕ ಇದೆ ಎಂದರೆ ಮನಸುಗಳ ಬೆಸುಗೆ' ಇಲ್ಲಿ ಸಾಧ್ಯವೇ ಇಲ್ಲ. ಕಮ್ಯುನಿಸ್ಟ್ ತತ್ತ್ವವನ್ನು ಬೆಂಬಲಿಸುತ್ತಲೇ ಪ್ರಜಾಪ್ರಭುತ್ವದ ಆದರ್ಶಗಳನ್ನು ಕಾಪಾಡುವ ಬಗೆಗಿನ ನಿಮ್ಮ ರೀತಿ ರಿವಾಜುಗಳು ನಿಮಗೆ ಹಾಗೂ ನಿಮ್ಮ ಅಂತಃಸಾಕ್ಷಿಗೆ ಬಿಟ್ಟ ವಿಚಾರ. ಪ್ರಕಾಶಕ ಹಾಗೂ ಸಂಪಾದಕರಾಗಿ ನಿಮ್ಮ ಜವಾಬ್ದಾರಿ ಹಾಗೂ ರೂಢಿಸಿಕೊಂಡಿರುವ ಮೌಲ್ಯಗಳೂ ನಿಮಗೆ ಬಿಟ್ಟಿದ್ದು. ಇವೆಲ್ಲ ವಿಷಯಗಳ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯಗಳಿವೆ ಹಾಗೂ ನನ್ನನ್ನು ಭೇಟಿ ಮಾಡಿ ಇದನ್ನೆಲ್ಲ ಬದಲಿಸುವ ನಿರೀಕ್ಷೆ ನಿಮಗೆ ಬೇಡ.

ನನಗಂತೂ ನಿಮ್ಮ ಅಭಿಪ್ರಾಯಗಳನ್ನು ಬದಲಿಸುವ ಅಪೇಕ್ಷೆಯೂ ಇಲ್ಲ, ಆ ಬಗ್ಗೆ ಯಾವ ಪ್ರಯತ್ನಕ್ಕೂ ಇಳಿಯುವುದಿಲ್ಲ. ಹೀಗಾಗಿ ನಾವಿಬ್ಬರು ಪರಸ್ಪರರ ಸಮಯವನ್ನು ವ್ಯರ್ಥ ಮಾಡಿದಂತಾಗುತ್ತದೆ ಅಷ್ಟೆ. ಬದುಕು ಚಿಕ್ಕದು ಹಾಗೂ ದುಸ್ತರ ಸಹ. ವ್ಯಕ್ತಿಗಳು, ಜನರ ನಡುವೆ ಈಗಾಗಲೇ ಸಾಕಷ್ಟು ಆತಂಕದ ವಾತಾವರಣ ಮನೆ ಮಾಡಿದೆ. ಅದನ್ನು ಇನ್ನಷ್ಟು ಹೆಚ್ಚು ಮಾಡುವ ಸಂದರ್ಭವನ್ನು ಸೃಷ್ಟಿಸುವ ಅಗತ್ಯವಿಲ್ಲ...
ನಿಮ್ಮ ವಿಶ್ವಾಸಿ,
ಜೇ

***

ಜೆಆರ್‌ಡಿ ಟಾಟಾ ಅವರಂತೆ ಯಶಸ್ವಿ ಕೈಗಾರಿಕೋದ್ಯಮಿ ಆಗಬೇಕು ಎಂದು ಕನಸು ಕಾಣುವವರಿಗೆ ಬರವೇ? ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯುತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೇಗಿದೆ ಓದಿ.

ಪ್ರಿಯ ಪ್ರವೀಣ್ ದಯಾಳ್,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ. ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!

ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್‍ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.

ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X