• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಮೆರಿಕದಲ್ಲಿರುವ ನನ್ನ ಮಗಳಿಗೆ ಗಂಡು ಹುಡುಕಿಕೊಡಿ'

By * ವಿಶ್ವೇಶ್ವರ ಭಟ್
|

ಮೊನ್ನೆ ಅಮೆರಿಕದಲ್ಲಿ ನಡೆದ ನಾವಿಕ ಸಮಾವೇಶದಲ್ಲಿ ಒಂದು ಅಪರೂಪದ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಅದರ ಹೆಸರು single's meet. ಅಂದ್ರೆ ನಾವು ಭಾವಿ ಅಥವಾ ಸಂಭಾವ್ಯ ವಧು-ವರರ ಮುಖಾಮುಖಿ ಅಂತೀವಲ್ಲ, ಅದು. ಬಹಳ ಅಚ್ಚುಕಟ್ಟಾಗಿ ನಿಯೋಜಿತವಾದ ಗೋಷ್ಠಿ ಅದು. ಸುಮಾರು ಎಂಬತ್ತು ಹುಡುಗ-ಹುಡುಗಿಯರ ತಂದೆ-ತಾಯಂದಿರು ಫೋಟೊ, ಜಾತಕ, ಕುಶಲೋಪರಿಗಳನ್ನು ವಿನಿಮಯ ಮಾಡಿಕೊಂಡರು. ಅವೆಲ್ಲ ಮದುವೆಯಲ್ಲಿ ಮುಕ್ತಾಯವಾಗುತ್ತವಾ ಎಂಬುದನ್ನು ಕಾದು ನೋಡಬೇಕಷ್ಟೆ.

ಈ ವಧು-ವರರ ಸಮಾಗಮ ಗೋಷ್ಠಿಯಲ್ಲಿ ಭಾಗವಹಿಸಿದ ತಂದೆ-ತಾಯಂದಿರು ಪರಸ್ಪರ ಮಾತಾಡಿಕೊಳ್ಳುವಾಗ ನನ್ನ ಕಿವಿಯ ಮೇಲೆ ಆ ಮಾತೊಂದು ಬೀಳದಿದ್ದರೆ ಬಹುಶಃ ಇದನ್ನು ಬರೆಯುತ್ತಿರಲಿಲ್ಲ. ಅವರ ಮಾತುಕತೆಯ ತಾತ್ಪರ್ಯ ಕೇಳಿದರೆ ಅವರು ಕಳೆದ 25-30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ ಹಾಗೂ ಅವರಿಗೆ ಮದುವೆಯಾಗದ ಮೂವತ್ತರ ಆಸುಪಾಸಿನ ಮಗಳೊಬ್ಬಳಿದ್ದಾಳೆ ಎಂಬುದನ್ನು ಊಹಿಸಬಹುದಿತ್ತು. ಹೆಂಡತಿ ಗಂಡನಿಗೆ ಹೇಳುತ್ತಿದ್ದಳು- ಆ ಭಗವಂತನ ಕೃಪೆಯಿಂದ ರೇವತಿಗೊಂದು ವರ ಸಿಕ್ಕಿದ್ರೆ ಸಾಕಪ್ಪಾ. ಇನ್ನು ಎಷ್ಟು ಅಂತ ನಾವು ಅವಳ ಮದ್ವೆಗೆ ಪ್ರಯತ್ನ ಪಡೋದ್ರಿ? ಕಳೆದ ಹತ್ತು ವರ್ಷಗಳಿಂದ ಎಲ್ಲ ದೇವ್ರಿಗೂ ಹರಕೆ ಹೊತ್ತೂ ಹೊತ್ತು ಸಾಕಾಗೋಯ್ತು. ಅವಳೇ ಹುಡುಕಿಕೊಂಡಿದ್ದರೆ ಎಂದೋ ಸಮಸ್ಯೆ ಬಗೆಹರಿಯುತ್ತಿತ್ತು. ಈ ವಯಸ್ಸಿನಲ್ಲಿ ಅದೂ ಅಮೆರಿಕದಲ್ಲಿ ಮಗಳಿಗೆ ಗಂಡು ಹುಡುಕುವ ಕಷ್ಟ ಯಾರಿಗೂ ಬೇಡವಪ್ಪ, ಅಮೆರಿಕದಲ್ಲಿ ನಮ್ಮಂಥವರಿಗೆ ಹೆಣ್ಣುಮಕ್ಕಳು ಹುಟ್ಟಬಾರದಪ್ಪಾ.'

ಯಾಕೋ ಕೊನೆಯ ಮಾತು ಕೇಳಿ ಬಹಳ ಪಿಚ್ಚೆನಿಸಿತು. ಅವರ ಸಂಕಟವೇನು ಎಂಬುದು ಯಾರಿಗಾದರೂ ಅರ್ಥವಾಗುವಂಥದ್ದೇ. ಇದು ಹೆಣ್ಣು ಹೆತ್ತವರೆಲ್ಲರ, ಅದರಲ್ಲೂ ಆಗಬೇಕಾದ ವಯಸ್ಸಿಗೆ ಮದುವೆಯಾಗದಿದ್ದರೆ, ಇದು ಹೆಣ್ಣುಹೆತ್ತ ಎಲ್ಲ ತಂದೆ-ತಾಯಂದಿರ ಗೋಳು. ಆದರೆ ಅಮೆರಿಕದಲ್ಲಿ ನೆಲೆಸಿರುವ ಕನ್ಯಾಪಿತೃ ಕನ್ನಡಿಗರ (ಕಪಿಕ) ಗೋಳಿದೆಯಲ್ಲ ಅದು ಇದಕ್ಕಿಂತ ಭಿನ್ನ ಹಾಗೂ ದಾರುಣ. ಆದ್ದರಿಂದ ಈ ಕಪಿಕರ ಸಮಸ್ಯೆಯನ್ನು ಪ್ರತ್ಯೇಕವಾಗಿಯೇ ನೋಡಬೇಕು. ಯಾಕೆಂದರೆ ಅವರ ಸಂಕಟ, ಬೇಗುದಿ, ತಳಮಳ, ತಲ್ಲಣಗಳೇ ಬೇರೆ. ಇದು ಕರ್ನಾಟಕದಲ್ಲಿರುವ ಕಪಿ'ಗಳಿಗಿಂತ ಭಿನ್ನ. ಹೀಗಾಗಿ ಕಪಿಕರ ಸಮಸ್ಯೆಯನ್ನು ಬೇರೊಂದು ಮಸೂರದಿಂದಲೇ ನೋಡಬೇಕಾಗುತ್ತದೆ.

ಅಮೆರಿಕದ ಜೀವನಶೈಲಿ, ಆಚರಣೆಗಳೇ ಹಾಗೆ. ಹೈಸ್ಕೂಲಿನಲ್ಲಿ ಓದು ಮುಗಿಸುವ ಹೊತ್ತಿಗೆ ಹುಡುಗಿಯರು ತಮ್ಮತಮ್ಮ ಅಭಿರುಚಿಗೆ ತಕ್ಕಂತೆ ಬಾಯ್‌ಫ್ರೆಂಡ್‌ಗಳನ್ನು ಆರಿಸಿಕೊಂಡುಬಿಡುತ್ತಾರೆ. ಅದು ಅಲ್ಲಿ ತೀರಾ ಸಹಜ. ಒಂದು ವೇಳೆ ಬಾಯ್‌ಫ್ರೆಂಡ್‌ನನ್ನು ಆರಿಸಿಕೊಳ್ಳಲಿಲ್ಲವೆನ್ನಿ ಅದು ತುಸು ಅಸಹಜ. ಹೈಸ್ಕೂಲಿನಲ್ಲಿದ್ದಾಗಲೇ ಡೇಟಿಂಗ್ ಶುರು. ಡೇಟಿಂಗ್ ಅಂದ್ರೆ ಏನೇನೋ ಅಪಾರ್ಥ ಕಲ್ಪಿಸಿಕೊಳ್ಳಬೇಕಿಲ್ಲ. ಹಾಗಂದ್ರೆ choose your partner ಅಂತ ಹಾಗೂ ಅಷ್ಟೇ. ಅದೊಂದು mutual responsibility ಹಾಗೂ mutual acceptance. ಅದು ಗಂಡ-ಹೆಂಡತಿಯಾಗಲು ತುಳಿಯಬೇಕಾದ ಸಪ್ತಪದಿ'ಯ ಮೊದಲ ಸುತ್ತು. ಹೈಸ್ಕೂಲಿನಲ್ಲಿದ್ದಾಗ ಈ ಮೊದಲ ಸುತ್ತನ್ನು ತುಳಿದುಬಿಟ್ಟರೆ ಮುಂದಿನದು ಸಲೀಸು. ಆದ್ದರಿಂದ ಡೇಟಿಂಗ್ ಬಗ್ಗೆ ಯಾರೂ ಅನ್ಯಥಾ ಭಾವಿಸಬೇಕಿಲ್ಲ.

ಅಮೆರಿಕಾದಲ್ಲಿ ಹೆಣ್ಣುಮಕ್ಕಳು ಡೇಟಿಂಗ್ ಹೋದರೂ ಕಷ್ಟ, ಹೋಗದಿದ್ದರೂ ಕಷ್ಟ!
ಆದರೆ ಗಾಂಧಿಬಜಾರಿನಲ್ಲೋ, ಶಂಕರಮಠ ರಸ್ತೆಯಲ್ಲೋ, ರಥಬೀದಿಯಲ್ಲೋ, ಅಗ್ರಹಾರದಲ್ಲೋ ಬೆಳೆದು ಅಮೆರಿಕಕ್ಕೆ ಹೋಗಿ ನೆಲೆಸಿ ಸಂಸಾರ ಹೂಡಿದ ನಮ್ಮ ಕನ್ನಡಿಗರು ತಮ್ಮ ಮಗಳು ಯಾವನೋ ಡೆವಿಡ್, ಜಾನ್, ವಿಲಿಯಮ್ಸ್‌ನ ಕೈಹಿಡಿದು ಡೇಟಿಂಗ್ ಹೋಗುವುದನ್ನು ಇಷ್ಟಪಡುವುದೇ ಇಲ್ಲ. ತಾಕಲಾಟ ಶುರುವಾಗುವುದೇ ಇಲ್ಲಿ. ಅವರ ಪಾಲಿಗೆ ಆಕೆ ಮುದ್ದುಮಗಳು. ಅವಳು ಭರತನಾಟ್ಯ ಕಲಿಯಬೇಕು, ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಬೇಕು, ರಂಗೋಲಿ ಹಾಕಬೇಕು, ಸೀರೆ ಉಡಬೇಕು, ಮನೆಯಲ್ಲಿ ಕನ್ನಡ ಮಾತಾಡಬೇಕು, ಅಲ್ಲಿಯೂ ಜಡೆಗೆ ಮೊಳ ಮಲ್ಲಿಗೆ ಮುಡಿದು ಕನ್ನಡದ ವಕ್ತಾರೆಯಂತೆ ಇರಬೇಕೆಂದು ಆಸೆಪಡುತ್ತಾರೆ. ತಪ್ಪೇನಿಲ್ಲ ಬಿಡಿ.

ಆದರೆ ಅಸಲಿಗೆ ಆಕೆ ಅಲ್ಲಿಯೇ ಹುಟ್ಟಿ, ಅಲ್ಲಿಯೇ ಬೆಳೆದವಳು. ಅವಳು ನಿಮ್ಮಂತೆ ಹೆಗ್ಗರಣೆ, ಗೋಳಿ, ಭೈರುಂಬೆ ಹೈಸ್ಕೂಲಿನಲ್ಲೋ, ಸಿದ್ದಾಪುರ ಕಾಲೇಜಿನಲ್ಲೋ ಓದಿ ಅಮೆರಿಕದಲ್ಲಿ ನೆಲೆಸಿದವಳಲ್ಲ. ಅವಳು ಹಂಡ್ರೆಡ್ ಪರ್ಸೆಂಟ್ ಅಮೆರಿಕನ್! ತಂದೆ-ತಾಯಿ ಅಮೆರಿಕದಲ್ಲಿದ್ದರೂ ಗಾಂಧಿಬಜಾರಿನ ಬೇರುಗಳನ್ನು ಗಟ್ಟಿಯಾಗಿಟ್ಟು ಕೊಂಡಿರುತ್ತಾರೆ. ಆದರೆ ಮಗಳು ಅಮೆರಿಕದಲ್ಲಿ ಬೇರುಗಳನ್ನು ಇಳಿಬಿಟ್ಟು ಅಲ್ಲಿನವಳೇ ಆಗಿಬಿಟ್ಟಿರುತ್ತಾಳೆ. ಅಪ್ಪ-ಅಮ್ಮ ಇನ್ನೂ ಕನ್ನಡದ ಕನ್ನಡಕದಿಂದ ಅಮೆರಿಕವನ್ನು ನೋಡುತ್ತಿದ್ದರೆ, ಆಕೆ ಅಮೆರಿಕ ಪ್ರಜೆಯಾಗಿ ವಿಶ್ವಮಾನವಳಾಗಿರುತ್ತಾಳೆ. ಅಮೆರಿಕದಲ್ಲಿ ಮಣ್ಣೇ ನೋಡದ ಆಕೆಗೆ ಕನ್ನಡದ ಮಣ್ಣಿನ ವಾಸನೆ ಅರ್ಥವಾಗುವುದೇ ಇಲ್ಲ. ಇದು ಆಕೆಯ ತಪ್ಪೂ ಅಲ್ಲ. ಇಲ್ಲಿಂದ ಹೋಗಿ ಬಹಳ ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ ಕನ್ನಡಿಗರು, ಅರ್ಧಂಬರ್ಧ ಕನ್ನಡಿಗರು ಹಾಗೂ ಅಷ್ಟೇಪಾಲು ಅಮೆರಿಕನ್ನರು. ಅವರು ಜಪ್ಪಯ್ಯ ಅಂದ್ರೂ ಪೂರ್ತಿ ಕನ್ನಡಿಗರಾಗಿರಲು ಅಥವಾ ಅಮೆರಿಕನ್ನರಾಗಲು ಸಾಧ್ಯವೇ ಇಲ್ಲ. ಆದರೆ ಮಗಳಿದ್ದಾಳಲ್ಲ, ಆಕೆ ಅಮೆರಿಕನ್. ಅವಳು ಕನ್ನಡಿಗರ ಮಗಳಾಗಿರಬಹುದು, ಆದರೆ ಕನ್ನಡದ ಮಗಳಾಗಲಿಕ್ಕಿಲ್ಲ. (ಇದಕ್ಕೆ ಅಪವಾದವಿದ್ದಿರಬಹುದು.)

ಈಗ ಸಂಘರ್ಷ, ಚಕಮಕಿ ಶುರುವಾಯ್ತು ಅಂತ ಅರ್ಥ. ಹೀಗಾಗಿ ಮೊದಲ ಬಾರಿಗೆ ಮಗಳು ತನ್ನ ಬಾಯ್‌ಫ್ರೆಂಡ್ ಜತೆಗೆ ನೆಟ್‌ನಲ್ಲಿ ಚಾಟ್ ಮಾಡಲಾರಂಭಿಸಿದಾಗ, ಕೈಕೈ ಹಿಡಿದು ಡೇಟಿಂಗ್ ಹೊರಟಾಗ ಕನ್ನಡದ ಹೆತ್ತ ಕರುಳು ಚುರ್ರ್' ಎನ್ನುತ್ತದೆ. ಊರಿನಿಂದ ಬರುವಾಗ ತಂದ ಲಂಗ, ದಾವಣಿ, ಸೀರೆ, ಕುಂಕುಮ ಗಳೆಲ್ಲ ವಾರ್ಡ್ ರೋಬ್‌ಗಳಲ್ಲಿಯೇ ಬಿದ್ದಿರುತ್ತವೆ. ರಂಗೋಲಿಗೆ ಆಗಲೇ ಗೋಲಿಮಾರೋ ಎಂದಿರುತ್ತಾಳೆ. ತಮ್ಮ ಮಗಳು ಸುಶೀಲೆ'ಯಾಗಬಹುದು ಅಂತ ಅಂದುಕೊಂಡರೆ, ಹೋಗಿ ಹೋಗಿ ಸೂಸಾನ್' ಆಗುತ್ತಿದ್ದಾಳಲ್ಲ ಎಂದು ಚಡಪಡಿಸಲಾರಂಭಿಸುತ್ತಾರೆ. ಆಗ ಮನೆ ನಿತ್ಯ ಕಾದಾಟದ ಕಾಶ್ಮೀರ, ಕಾಬೂಲು.

ತಮ್ಮ ಮಗಳನ್ನು ನೆಂಟರಿಷ್ಟರ ಮಧ್ಯದಲ್ಲೋ, ಪ್ರತಿಷ್ಠಿತರ ಕೂಟದಲ್ಲೆಲ್ಲೋ ಮದುವೆ ಮಾಡಿಕೊಡಬೇಕೆಂದು ತೊಟ್ಟಿಲಿಗೆ ಹಾಕುವಾಗಲೇ ಹುಟ್ಟಿದ ಕನಸನ್ನು ಸಾಕಿಕೊಂಡು ಬಂದ ತಂದೆ-ತಾಯಿಗಳಿಗೆ ಇದೊಂದು ಆಘಾತ. ತಮ್ಮ ಮಗಳು ಯಾವನೋ ಬಿಳಿತೊಗಲಿನವನನ್ನು ಕಟ್ಟಿಕೊಳ್ಳುವುದನ್ನು, ಆತನಿಗೆ ಅತ್ತೆ-ಮಾವ ಆಗುವುದನ್ನು ಕನ್ನಡದ ಮನಸ್ಸುಗಳು ಒಪ್ಪುವುದೇ ಇಲ್ಲ. ಛಿ, ಛೀ ಎಲ್ಲಾದ್ರೂ ಉಂಟಾ? ಅವನ್ಯಾವನೋ? ಅವನ ಕುಲ ಗೋತ್ರ ಯಾವುದೋ? ಅಪ್ಪ-ಅಮ್ಮ ಯಾರೋ? ಅವನ ಸಂಸ್ಕಾರ ಎಂಥದೋ? ಸಭ್ಯನೋ, ಕುಡುಕನೋ? ಗಿಣಿ ಹಾಗೆ ಸಾಕಿದ ಮಗಳನ್ನು ಗಿಡುಗನಿಗೆ ಒಪ್ಪಿಸಿಬಿಡುವುದಾದರೂ ಹೇಗೆ? ಸುತರಾಂ ಸಾಧ್ಯವೇ ಇಲ್ಲ ಎಂದೆಲ್ಲ ಯೋಚಿಸುತ್ತಾರೆ. ಆದರೆ ಅಮೆರಿಕದ ಗಾಳಿ, ನೀರು, ಸಂಸ್ಕೃತಿ ಹಾಗೂ ಜೀವನ ಪದ್ಧತಿಯ ಮುಂದೆ ಇವೆಲ್ಲ ಪುಗಸಟ್ಟೆ ಉದುರುಗಳೆಂಬುದು ನಮ್ಮ ಕನ್ನಡಿಗರಿಗೆ ಅರ್ಥವಾದರೂ ಅದನ್ನು ಒಪ್ಪಿಕೊಳ್ಳಲು ಮನಸ್ಸಾಗುವುದೇ ಇಲ್ಲ.

ಮುಂದಿನ ಭಾಗ : ಡೇಟಿಂಗ್ ಹೋದರೂ ಕಷ್ಟ ಹೋಗದಿದ್ದರೂ ಕಷ್ಟ! »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more