• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂರೆಂಟು ಕಲರವಗಳ ನಡುವೆ ಹತ್ತೆಂಟು ಆಪ್ತಮಾತು

By * ವಿಶ್ವೇಶ್ವರ ಭಟ್
|

ಕೆಲವು ತಿಂಗಳುಗಳ ಹಿಂದೆ ನಿಮಗೊಂದು ಆಪ್ತ ಸಲಹೆ ನೀಡಿದ್ದೆ. ನೀವು ಓದುವಾಗ, ಬರೆಯುವಾಗ, ಬಸ್ಸು, ರೈಲಿನಲ್ಲಿ ಸಂಚರಿಸುವಾಗ ಒಂದು ಪುಟ್ಟ ನೋಟ್‌ಬುಕ್ (ಅದಕ್ಕೆ scrap book ಅಂತಾರೆ) ಇಟ್ಟುಕೊಳ್ಳಿ ಅಂತ. ಹೊಸ ಹೊಸ ಯೋಚನೆಗಳು ಬಂದಾಗ ಅವನ್ನು ತಟ್ಟನೆ ದಾಖಲಿಸಿಟ್ಟುಕೊಳ್ಳಿ ಅಂತ ಹೇಳಿದ್ದೆ. ನೆನಪಿರಬಹುದು. ನೀವು ಹಾಗೆ ಮಾಡಿದಿರೋ ಇಲ್ಲವೋ, ನಾನಂತೂ ನಿತ್ಯ ಅದನ್ನು ಮಾಡುತ್ತಿದ್ದೇನೆ. ಒಂದು ವರ್ಷ ಮುಗಿಯುವುದರೊಳಗೆ ನೂರು ಪುಟಗಳುಳ್ಳ ಎರಡು ನೋಟ್ ಬುಕ್ ಪೂರ್ತಿಯಾದವು.

ಈ ಮಧ್ಯೆ ಸ್ನೇಹಿತ ಓದುಗರೊಬ್ಬರು ಸಭ್ಯಸಾಚಿಗಳಾಗಿರಿ' ಮಾದರಿಯಲ್ಲಿ ಆಪ್ತ ಸಲಹೆ ಕೊಡಬಾರದೇ ಎಂದು ಕೇಳಿದರು. ಅಂದಿನಿಂದ ಮತ್ತೊಂದು scrap bookನ್ನು ಜತೆಯಲ್ಲಿಟ್ಟು ಕೊಂಡೆ. ನೆನಪಾದಾಗಲೆಲ್ಲ ಬರೆದು ಬರೆದು ಅದೂ ತುಂಬಿ ಹೋಯಿತು. ಆ ಪೈಕಿ ಕೆಲವನ್ನು ನಿಮಗೆ ಹೇಳೋಣ ಎನಿಸಿತು. ಅವನ್ನೆಲ್ಲ ನಿಮಗೆ ಕೊಡುತ್ತಿದ್ದೇನೆ. ನಿಮಗೆ ಹೊಳೆದ ಸಂಗತಿಗಳನ್ನು ತಿಳಿಸಿ, ನಮ್ಮ ಓದುಗರೊಂದಿಗೆ ಹಂಚಿಕೊಳ್ಳಿ. ಎಲ್ಲರೂ ಆ ಒಂದೇ ಸಲಹೆ ಅನುಸರಿಸಿದರೆ ಚೆನ್ನಾಗಿರುತ್ತದೆ ಅಲ್ಲವಾ?

ನಿಮ್ಮ ಮಗ, ಮಗಳ ಮದುವೆಗೆ ವಿಪರೀತ ಖರ್ಚು ಮಾಡಬೇಡಿ. ಆ ಹಣವನ್ನು ಅವರಿಗೇ ಕೊಟ್ಟುಬಿಡಿ. ಜೀವನವಿಡಿ ಅವರು ಸುಖದಿಂದ ಇರುತ್ತಾರೆ. ಮಕ್ಕಳ ಮದುವೆಯನ್ನೂ ನಿಮ್ಮ ಪ್ರತಿಷ್ಠೆ, ಸ್ಥಾನಮಾನ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಬೇಡಿ.

*

ಯಾರದೇ ಮನೆಗೆ ಹೋದಾಗ ಡೋರ್‌ಮ್ಯಾಟ್ ಕ್ಲೀನಾಗಿದ್ದರೆ ಮಾತ್ರ ಕಾಲನ್ನು ಒರೆಸಿಕೊಳ್ಳಿ.

*

ಪ್ರತಿಯೊಬ್ಬ ಮಗುವಿನಿಂದಲೂ ನಾವು ಕಲಿಯುವುದು ಬಹಳ ಇರುತ್ತದೆ. ಮಗುವಿಗೆ ಏನೂ ಗೊತ್ತಿಲ್ಲ ಎಂದು ಭಾವಿಸಬೇಡಿ. ಏನೂ ಹೇಳಿಲ್ಲವೆಂದು ಅಂದುಕೊಳ್ಳಬೇಡಿ, tension-free ಆಗಿ ಇರುವುದು ಹೇಗೆ ಎಂದು ಮಗು ಸದಾ ನಮಗೆ ಹೇಳುತ್ತಿರುತ್ತದೆ.

*

ಅಗ್ನಿಶಾಮಕ ದಳದವರನ್ನು ಚೆನ್ನಾಗಿ ನೋಡಿಕೊಳ್ಳಿ. ಅವರ ಜತೆ ಪ್ರೀತಿ, ಗೌರವದಿಂದ ವರ್ತಿಸಿ. ಕಾರಣ ಅವರು ಮಾಡುವ ಕೆಲಸ ನಮ್ಮಿಂದ ಅಸಾಧ್ಯ.

*

ಸಾಧ್ಯವಾದರೆ ನಿಮ್ಮ ಹುಟ್ಟುಹಬ್ಬದ ದಿನದಂದು ಒಂದು ಗಿಡವನ್ನು ನೆಡಿ ಹಾಗೂ ಅದನ್ನು ಚೆನ್ನಾಗಿ ಬೆಳೆಸಿ.

*

ಕೇಕ್‌ನ ಕೊನೆಯ ಪೀಸ್‌ನ್ನು ಎಂದೂ ತಿನ್ನಬೇಡಿ. ಅದು ಚೆನ್ನಾಗಿರೊಲ್ಲ ಅಂತಲ್ಲ. ನಿಮ್ಮ ಬಗ್ಗೆ ಅಭಿಪ್ರಾಯ ಚೆನ್ನಾಗಿರೊಲ್ಲ ಅಷ್ಟೆ.

*

ನೋವು ಮತ್ತು ಬೇಸರ ಜೀವನದ ಅವಿಭಾಜ್ಯ ಅಂಗ. ಇವು ಪ್ರತಿದಿನದ ಅನುಭವ. ಆದ್ದರಿಂದ ಇವೆರಡನ್ನೂ ಚೆನ್ನಾಗಿ ನಿಭಾಯಿಸುವುದನ್ನು ಕಲಿತುಕೊಳ್ಳಿ.

*

ಫ್ರಿಜ್ ಇಲ್ಲದೇ ಬದುಕಲು ಸಾಧ್ಯವಾ? ಸಾಧ್ಯವಾಗುವುದಾದರೆ ಪ್ರಯತ್ನಿಸಿ. ಫ್ರಿಜ್ ಆಲಸ್ಯ ಹಾಗೂ ಅನಾರೋಗ್ಯದ ಸಂಕೇತವೇ ಹೊರತು ಪ್ರತಿಷ್ಠೆ, ಶ್ರೀಮಂತಿಕೆಯ ಸಂಕೇತ ಅಲ್ಲ.

*

ಪ್ರಜಾಪ್ರಭುತ್ವ ನಿಮಗೆ ನೀಡಿರುವ ಬಹುದೊಡ್ಡ ಜವಾಬ್ದಾರಿ ಅಂದ್ರೆ ಮತದಾನ. ತಪ್ಪದೇ ಮತದಾನ ಮಾಡಿ.

*

ಗೆದ್ದವರಿಗೂ ಸೋತವರಿಗೂ ಹೆಚ್ಚು ವ್ಯತ್ಯಾಸವಿಲ್ಲ. ಗೆದ್ದವರು ಮಾಡುತ್ತಾರೆ. ಸೋತವರು ಮಾಡುವುದಿಲ್ಲ.

*

ಪ್ರತಿದಿನ ಒಬ್ಬ ವ್ಯಕ್ತಿಯನ್ನಾದರೂ ಪರಿಚಯಿಸಿಕೊಳ್ಳಿ ಹಾಗೂ ಆ ಪರಿಚಯವನ್ನು ಸ್ನೇಹವಾಗಿ ಮುಂದುವರಿಸಿ.

*

ನೀವು ಪ್ರೀತಿಸುವ, ತುಂಬಾ ಇಷ್ಟಪಡುವ ಐದಾರು ಜನರ ಜತೆ ತೀರಾ ಉತ್ತಮ ಸಂಬಂಧ ಇಟ್ಟುಕೊಳ್ಳಿ.

*

ಯಾರಾದರೂ ಹಣದ ಸಹಾಯ ಬಯಸಿದರೆ ಇಲ್ಲವೆನ್ನಬೇಡಿ. ಹಣಕ್ಕಿಂತ ಸ್ನೇಹ ಮುಖ್ಯ.

*

ತಿಂಗಳಲ್ಲಿ ಒಂದು ದಿನವಾದರೂ ಏಕಾಂತದಲ್ಲಿ ಅರ್ಧಗಂಟೆ ಸಾಯಂಕಾಲ ಆಕಾಶವನ್ನು ನೋಡಿ. ನಿಮ್ಮ ಗಾತ್ರವೇನೆಂಬುದು ಗೊತ್ತಾಗುತ್ತದೆ.

*

ಯಾವುದಾದರೂ ಸಂದರ್ಭಕ್ಕೆ ಸರಿಹೊಂದುವ ಐದು ಉತ್ತಮ ಜೋಕುಗಳು ಗೊತ್ತಿರಲಿ. ಸಾಧ್ಯವಾದಷ್ಟರ ಮಟ್ಟಿಗೆ ಅವನ್ನು ಯಾರೂ ಕೇಳಿರಬಾರದು.

*

ಭಾಷಣವನ್ನು ಯಾವಾಗ ಮುಗಿಸಬೇಕು ಎಂಬುದನ್ನು ಪ್ರೇಕ್ಷಕರ ಹಾವಭಾವವೇ ತಿಳಿಸುತ್ತದೆ. ಇನ್ನೂ ತುಸು ಮಾತಾಡಬೇಕಿತ್ತು ಎಂದೆನಿಸುವಾಗಲೇ ಭಾಷಣ ಮುಗಿಸಿ.

*

ಇನ್ನೊಬ್ಬರ ಮುಂದೆ ಮೂಗಿನೊಳಗೆ, ಕಿವಿಯೊಳಗೆ, ಬಾಯೊಳಗೆ ಕೈಹಾಕಬೇಡಿ. ತಲೆಕೆರೆಯಬೇಡಿ.

*

ನಿಮಗೆ ಇಷ್ಟವಾದ ಸಾಲು, ವಾಕ್ಯ, ಉಕ್ತಿ, ಸ್ಲೋಗನ್ ಕಂಡರೆ ಬರೆದಿಟ್ಟುಕೊಳ್ಳಿ. ಅವು ನಿಮ್ಮವೇ ಆಗುತ್ತವೆ.

*

ನಿಮ್ಮ ಬಟ್ಟೆಯನ್ನು ಐದು ವರ್ಷ ಧರಿಸಿಲ್ಲ ಅಂದ್ರೆ ಅವುಗಳನ್ನು ಬಡವರಿಗೆ ಕೊಟ್ಟುಬಿಡಿ.

*

ನೀವು ಡಯಟ್ ಮಾಡುತ್ತಿದ್ದರೆ ಅದನ್ನು ಸಾರ್ವಜನಿಕಗೊಳಿಸಬೇಕಾದ ಅಗತ್ಯವಿಲ್ಲ.

*

ಕನ್ನಡಿಯ ಮುಂದೆ ನಿಂತಾಗ ನಿಮ್ಮ ದೇಹ ನಿಮಗೆ ಅಸಹ್ಯವೆನಿಸಿದರೆ ತಕ್ಷಣ ಬೊಜ್ಜನ್ನು ಇಳಿಸಲು ಕ್ರಮಕೈಗೊಳ್ಳಿ.

*

ಚಪ್ಪಲಿಯನ್ನು ಕಳಚಿದಾಗ ಅಕ್ಕಪಕ್ಕದಲ್ಲಿಯೇ ಇಡಿ. ಯಾಕೆಂದರೆ ನಿಮ್ಮ ಕಾಲು ಒಂದರ ಪಕ್ಕದಲ್ಲಿಯೇ ಒಂದು ಇದೆ ತಾನೆ?

*

ನಿಮಗೆ ಬೇಕಾದವರ ಜನ್ಮದಿನವನ್ನು ನೆನಪಿಟ್ಟುಕೊಳ್ಳಿ. ಆ ದಿನದಂದು ಶುಭಾಶಯ ಹೇಳುವವರಲ್ಲಿ ನೀವೇ ಮೊದಲಿಗರಾಗಿ.

*

ಯಾರ ಹೆಸರನ್ನೇ ಕೇಳಿದಾಗ, ಪರಿಚಯ ಮಾಡಿಕೊಂಡಾಗ ಇನಿಷಿಯಲ್‌ನ ಪೂರ್ಣ ಅರ್ಥವನ್ನು ತಿಳಿದುಕೊಳ್ಳಿ.

*

ಈಗಾಗಲೇ ಪರಿಚಿತರಾದವರ ಹೆಸರನ್ನು ಪುನಃ ಕೇಳಬೇಡಿ. ಒಮ್ಮೆ ಪರಿಚಿತರಾದವರ ಹೆಸರನ್ನು ಯಾವತ್ತೂ ಮರೆಯಬೇಡಿ.

*

ಮನೆಯಲ್ಲಿ ನಾಯಿ ಅಥವಾ ಬೆಕ್ಕನ್ನು ಸಾಕಿ. ಪ್ರಾಣಿಗಳು ಸಹ ಪ್ರೀತಿಯ ಅಗಾಧತೆಯನ್ನು ಮನವರಿಕೆ ಮಾಡಿಕೊಡುತ್ತವೆ.

*

ಬೇರೆಯವರ ಮನೆಗೆ ಹೋಗುವಾಗ ಅವರಿಗೆ ತಿಳಿಸಿ ಹೋಗಿ. ಏಕಾಏಕಿ ಹೋಗುವುದನ್ನು ಎಲ್ಲರೂ ಇಷ್ಟಪಡಲಿಕ್ಕಿಲ್ಲ.

*

ಸದಾ ಏನಾದರೂ ಹೊಸತನ್ನು ಕಲಿಯುತ್ತಿರಿ. ಕೊಳಲು ನುಡಿಸುವುದಿರಬಹುದು, ರಂಗೋಲಿ ಹಾಕುವುದಿರಬಹುದು.

*

ಐದು ವರ್ಷಕ್ಕೊಮ್ಮೆಯಾದರೂ ಶಾಲಾ-ಕಾಲೇಜಿನ ಸ್ನೇಹಿತರ ಜತೆ ಅರ್ಧದಿನವನ್ನಾದರೂ ಕಳೆಯಿರಿ.

*

ನಿಮ್ಮ ಪ್ರತಿ ಫೋಟೊವನ್ನೂ ಜೋಪಾನವಾಗಿ ಕಾದಿಡಿ. ಅಂಥ ಪ್ರತಿ ಫೋಟೊವೂ ನಿಮ್ಮ ಜೀವನದ ಅಮೂಲ್ಯ ಕ್ಷಣದ ತುಣುಕು.

*

ಒಂದು ಕೈಗೆ ಹೆಚ್ಚೆಂದರೆ ಎರಡು ಉಂಗುರಗಳಿಗಿಂತ ಜಾಸ್ತಿ ಉಂಗುರಗಳನ್ನು ಧರಿಸಬೇಡಿ, ಹತ್ತೂ ಬೆರಳುಗಳಿಗೆ ಧರಿಸುವಷ್ಟು ಸಾಮರ್ಥ್ಯ ನಿಮಗಿರಬಹುದು.

*

ನಿಮ್ಮ ಪರಿಚಿತರ ಮದುವೆಯಲ್ಲಿ ಪಾಲ್ಗೊಳ್ಳಿ. ಹಾಗೆಯೇ ಅವರ ಮನೆಯಲ್ಲಿನ ಶೋಕದಲ್ಲೂ ಭಾಗವಹಿಸಿ.

*

ಪ್ರತಿದಿನ ಕನಿಷ್ಠ ಎರಡಾದರೂ ಹೊಸ ಪದಗಳನ್ನು ಕಲಿಯಿರಿ.

*

ಒಳ್ಳೆಯ ಅತ್ತರು (perfume) ಬಳಸಿ. ನಿಮ್ಮ ಸನಿಹ ಬಂದವರಿಗೆ ಒಂದಷ್ಟು ಆಹ್ಲಾದಕ್ಕೆ ಕಾರಣವಾಗಬಹುದು.

*

ಸದಾ ಉತ್ತಮವಾಗಿ ಡ್ರೆಸ್ ಮಾಡಿ. ಜನರಿಗೆ ನಿಮ್ಮ ಮನಸ್ಸು, ಸ್ವಭಾವ ಗೊತ್ತಿರುವುದಿಲ್ಲ. ನಿಮ್ಮ ಡ್ರೆಸ್‌ನಿಂದ ಅವರು ಮೊದಲು ನಿಮ್ಮನ್ನು ಅಳೆಯುತ್ತಾರೆ.

*

ಜ್ಯೋತಿಷ್ಯವನ್ನು ಕೇಳಿ, ತಪ್ಪಿಲ್ಲ. ಆದರೆ ಜ್ಯೋತಿಷಿಗಳಿಗೇ ನಿಮ್ಮನ್ನು ಒಪ್ಪಿಸಿಕೊಳ್ಳಬೇಡಿ.

*

ಬೇರೆಯವರು ಎತ್ತಿ ತೋರಿಸುವ ಮುನ್ನವೇ, ನಿಮಗೆ ಖಾತ್ರಿಯಾದರೆ ನಿಮ್ಮ ತಪ್ಪನ್ನು ಒಪ್ಪಿಕೊಂಡುಬಿಡಿ.

*

ನಿಮ್ಮ ಸ್ನೇಹಿತರಿಗೆ ಆಗಾಗ ಏನಾದರೂ ಉಡುಗೊರೆ ಕೊಡುತ್ತಿರಿ. ಅದು ಪುಸ್ತಕವಾಗಿದ್ದರೆ ಒಳ್ಳೆಯದು.

*

ಜನರು ವಿಶೇಷ ಕಾರಣಗಳಿಗಾಗಿ ನಿಮ್ಮನ್ನು ಗುರುತಿಸುವಂಥ ಹವ್ಯಾಸ ಬೆಳೆಸಿಕೊಳ್ಳಿ.

*

ಜನರು ನಿಮ್ಮನ್ನು ಹೇಗೆ ಆದರಿಸಬೇಕೆಂದು ಬಯಸುತ್ತೀರೋ, ಅದೇ ರೀತಿಯಲ್ಲಿ ಇತರರನ್ನೂ ಆದರಿಸಿ ಬರಮಾಡಿಕೊಳ್ಳಿ.

*

ಕಂಡಿದ್ದೆಲ್ಲವನ್ನೂ ಖರೀದಿಸುವ ಬದಲು, ಉತ್ತಮವಾದ ಕೆಲವೇ ಸಾಮಾನುಗಳನ್ನು ಖರೀದಿಸಿ, ನಿಮ್ಮಲ್ಲಿರುವ ಎಲ್ಲ ಸಾಮಾನುಗಳೂ ಉತ್ಕೃಷ್ಟವಾಗಿರಲಿ.

*

ವರ್ಷದಲ್ಲಿ ಕನಿಷ್ಠ ಒಂದು ದೇಶಕ್ಕಾದರೂ ಹೋಗಿ. ನಮ್ಮ ದೇಶದ ಎರಡು ರಾಜ್ಯಗಳಿಗಾದರೂ ಹೋಗಿ ಬನ್ನಿ.

*

ನಿಮ್ಮ ಮನೆ-ಮಂದಿ ಜತೆ ಹೆಚ್ಚು ಸಮಯ ಕಳೆಯಿರಿ.

*

ಪತ್ರ, ಶುಭಾಶಯ ಪತ್ರ ಕಳಿಸಿದಾಗ ಥ್ಯಾಂಕ್ಯು' ಪತ್ರ ಕಳಿಸಲು ಮರೆಯಬೇಡಿ.

*

ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಿ. ನಿಮ್ಮರಕ್ತ ಬೇರೆಯವರಲ್ಲೂ ಹರಿಯಲಿ.

*

ಪತ್ರಿಕೆಗಳಿಗೆ ಬರೆಯಿರಿ. ಕನಿಷ್ಠ ಸಂಪಾದಕರ ಪತ್ರ' ವಿಭಾಗಕ್ಕಾದರೂ ಬರೆಯಿರಿ.

*

ಬೇರೆಯವರ ಗೆಲುವು, ಯಶಸ್ಸು ಕಂಡು ಸಂತಸಪಡುವ, ಅದನ್ನು ನಾಲ್ಕು ಜನರ ಮುಂದೆ ಹೇಳುವ ಗುಣವನ್ನು ಬೆಳೆಸಿಕೊಳ್ಳಿ.

*

ನಿಮ್ಮ ಕೈಗಡಿಯಾರವನ್ನು ಹತ್ತು ನಿಮಿಷ ಮುಂದಕ್ಕಿಟ್ಟುಕೊಳ್ಳಿ. ನೀವು ಸದಾ ಸಮಯ ಪಾಲನೆ ಮಾಡುತ್ತೀರಿ.

*

ಪುಸ್ತಕ ಓದುವ ಮೊದಲು ಬೈಂಡ್ ಹಾಕಿಕೊಳ್ಳಿ. ಪುಸ್ತಕ ಕೊಳೆಯಾಗುವುದಿಲ್ಲ.

*

ಪತ್ರಿಕೆಯಲ್ಲಿ ನಿಮಗೆ ಇಷ್ಟವಾದ ಲೇಖನವನ್ನು ಕಟ್ ಮಾಡಿ ಇಟ್ಟುಕೊಳ್ಳಿ.

*

ಯಾವುದೇ ಫೋಟೊವಿರಲಿ ಅದನ್ನು ಎಸೆಯುವಷ್ಟು ನಿಕೃಷ್ಟವಾಗಿರುವುದಿಲ್ಲ. ಪ್ರತಿ ಫೋಟೊವನ್ನು ಎತ್ತಿಟ್ಟುಕೊಳ್ಳಿ. ಅದು ಮುಂದೆ ಉಪಯೋಗಕ್ಕೆ ಬಂದೀತು.

*

ನಿಮಗೆ ಇಷ್ಟವಾದ ಫೋಟೊಗಳನ್ನು ಎತ್ತಿಟ್ಟುಕೊಳ್ಳಿ. ಸಾಧ್ಯವಾದರೆ ಅವುಗಳಿಗೆ ಫ್ರೇಮ್ ಹಾಕಿಸಿ.

*

ಜನರು ನಿಮ್ಮ ಪ್ರತಿ ನಡೆ- ನುಡಿಯನ್ನು ಗಮನಿಸುತ್ತಾರೆ. ಈ ಎಚ್ಚರದಿಂದಲೇ ವರ್ತಿಸಿ. ಎಚ್ಚರ ತಪ್ಪಬೇಡಿ.

*

ನಿಮಗೆ ಯಾರೇ ಫೋನ್ ಮಾಡಲಿ, ಕಾಲ್‌ನ್ನು ರಿಟರ್ನ್ ಮಾಡಿ. ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡುತ್ತದೆ.

*

ಬಹುವಚನ ಬಳಸುವುದರಿಂದ ನಿಮಗೇನೂ ಖರ್ಚಾಗುವುದಿಲ್ಲ. ಏಕವಚನ ಬಳಸಿದಷ್ಟೇ ಖರ್ಚಾಗುತ್ತದೆ. ಆದ್ದರಿಂದ ಬಹುವಚನವನ್ನೇ ಬಳಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more