ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಪೋರ ತೋರಿದ ಕಾಳಜಿ ಪ್ರಧಾನಿ ತೋರಿದ್ದರೆ?

By * ವಿಶ್ವೇಶ್ವರ ಭಟ್
|
Google Oneindia Kannada News

Warren Anderson
ಕೆಲವೊಮ್ಮೆ ನಾವು ಅದೆಂಥ ದಯನೀಯ ಸ್ಥಿತಿಯಲ್ಲಿದ್ದರೂ ಕಣ್ಣೀರೂ ಬರೊಲ್ಲ. ದುಃಖವೂ ಉಡುಗಿ ಹೋಗುತ್ತದೆ. ಯಾಕೆಂದರೆ ಯಾರ ವಿರುದ್ಧ ಅಂತ ಪ್ರತಿಭಟಿಸೋಣ, ಯಾರ ವಿರುದ್ಧ ಅಂತ ಕ್ರುದ್ಧರಾಗೋಣ, ಆಕ್ರೋಶವನ್ನು ಉಗುಳೋಣ? ನಮ್ಮ ಬಗ್ಗೇ ಬೇಸರ, ಜುಗುಪ್ಸೆ, ಹೇಸಿಗೆಯಾಗುತ್ತದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ನಮ್ಮನ್ನೇ ಹಳಿದುಕೊಳ್ಳಬೇಕಷ್ಟೆ. ನಿಜಕ್ಕೂ ಮನಸ್ಸು ಮ್ಲಾನವಾಗಿದೆ. ದುರ್ಘಟನೆ ಸಂಭವಿಸಿದ ಕಾಲು ಶತಮಾನದ ನಂತರ ಭೋಪಾಲ್ ಅನಿಲ ದುರಂತ ಪ್ರಕರಣದ ತೀರ್ಪು ಹೊರಬಿದ್ದಾಗ ಅನಿಸಿದ್ದಿದು.

ಇದನ್ನು ನಾಚಿಕೆಗೇಡು ಅನ್ನೋಣವಾ, ನಮ್ಮ ಕರ್ಮ ಅನ್ನೋಣವಾ, ಈಗಲಾದರೂ ತೀರ್ಪು ಬಂದಿದ್ದು ನಮ್ಮ ಪುಣ್ಯ ಅನ್ನೋಣವಾ, ಗೊತ್ತಾಗುತ್ತಿಲ್ಲ. ನೋಡಿ, ಇದೆಂಥ ವಿಚಿತ್ರ ಅಂದ್ರೆ, ಸುಮಾರು ಇಪ್ಪತ್ತು ಸಾವಿರ ಮಂದಿ ಮಾರಣಹೋಮಕ್ಕೆ ಕಾರಣನಾದ ಪಾಪಿ ವಾರೆನ್ ಆಂಡರ್‌ಸನ್‌ಗೆ ಶಿಕ್ಷೆಯೇ ಆಗಿಲ್ಲ. ಆತ ಅಮೆರಿಕದಲ್ಲೆಲ್ಲೋ ಆರಾಮಾಗಿದ್ದಾನೆ. ಇಪ್ಪತ್ತೈದು ವರ್ಷಗಳ ವಿಚಾರಣೆ ನಡೆಸಿ ಸುಮಾರು 175 ಸಾಕ್ಷ್ಯಗಳನ್ನು ಪರಿಶೀಲಿಸಿ, ಮೂರೂವರೆ ಸಾವಿರ ದಾಖಲೆಗಳನ್ನು ಕೂಲಂಕಷವಾಗಿ ಪರಾಮರ್ಶಿಸಿದ ಬಳಿಕ ನ್ಯಾಯಾಲಯ ನೀಡಿದ ತೀರ್ಪಿನಂತೆ ಎರಡು ವರ್ಷ ಸಾದಾ ಜೈಲುವಾಸ ಹಾಗೂ ಲಕ್ಷ ರೂ. ದಂಡದ ಶಿಕ್ಷೆ ಪಡೆದ ಎಂಟು ಮಂದಿ ಈಗ ಜಾಮೀನು ಪಡೆದು ಆರಾಮಾಗಿದ್ದಾರೆ. ಈ ಅನಿಲ ದುರಂತದಲ್ಲಿ ಸಂತ್ರಸ್ತರಾದ ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ತಲಾ ಹದಿನೈದು ಸಾವಿರದಷ್ಟು ಪರಿಹಾರ ಪಡೆದು ಇಂದಿಗೂ ಅತ್ಯಂತ ದುರ್ಬರ ಹಾಗೂ ದಯನೀಯ ಬದುಕನ್ನು ಸಾಗಿಸುತ್ತಿದ್ದಾರೆ. ಇದೆಂಥ ಘೋರ ಅನ್ಯಾಯ? ಇದೆಂಥ ನಾಚಿಕೆಗೇಡಿನ ಸಂಗತಿ?

ಭಾರತದಂಥ ದೇಶದಲ್ಲಿ ಮಾತ್ರ ಹೀಗಾಗಲು ಸಾಧ್ಯ! ಭೋಪಾಲ್ ಅನಿಲ ದುರಂತ ಇಡೀ ದೇಶದ ಬಂಡವಾಳವನ್ನೇ ಬೊಕ್ಕಬರಿದು ಮಾಡಿದೆ. ಇದು ಆ ದುರ್ಘಟನೆಯಲ್ಲಿ ಮಡಿದವರ ಹಾಗೂ ಸಂತ್ರಸ್ತರಾದವರಿಗಷ್ಟೇ ಅನ್ವಯವಾಗುವ ವಿಷಯವಲ್ಲ. ಇಡೀ ದೇಶದ ನೈತಿಕತೆಯ ಪ್ರಶ್ನೆ. ಭಾರತದಲ್ಲಿ ಏನೇ ಅವ್ಯವಹಾರ ಮಾಡಿ ಸುಲಭವಾಗಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡು ಬಚಾವ್ ಆಗಬಹುದೆಂಬುದನ್ನು ನಾವೇ ಇಡೀ ಜಗತ್ತಿಗೆ ಹೇಳಿದಂತಾಗಿದೆ. ಹಾಗೆ ನೋಡಿದರೆ ಇದು ಪ್ರತಿ ಪ್ರಜೆಯೂ ನೈತಿಕವಾಗಿ ದಿವಾಳಿಯಾದ ಕ್ಷಣವಿದು.

ದುರಂತಕ್ಕೆ ಕಾರಣನಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯಸ್ಥ ವಾರೆನ್ ಆಂಡರ್‌ಸನ್ ಯಾವಾಗ ಅಮೆರಿಕಕ್ಕೆ ಪರಾರಿಯಾದನೋ ಅಲ್ಲಿಗೇ ಈ ಪ್ರಕರಣ ಸತ್ತುಹೋಗಿತ್ತು. ಆಗಲೇ ಸತ್ತವರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತೆ ಆಗಿತ್ತು. ಆದರೂ ನಮ್ಮ ನ್ಯಾಯ ವ್ಯವಸ್ಥೆ ಏನೋ ಕಡಿದುಕಟ್ಟೆ ಹಾಕಿಬಿಡಬಹುದು ಎಂಬ ಭ್ರಮೆ ಕೆಲವರಿಗೆ ಇತ್ತು. ಈಗ ಅದೂ ಮಣ್ಣು ಪಾಲಾದಂತಾಗಿದೆ. ಅಷ್ಟರಮಟ್ಟಿಗೆ ಈಗಾಗಲೇ ಸತ್ತವರನ್ನು ಪುನಃ ಎಬ್ಬಿಸಿದಂತಾಗಿದೆ. ಪ್ರಾಯಶಃ ಈ ಪ್ರಕರಣದ ತೀರ್ಪು ಬರುವುದಕ್ಕೆ ಇನ್ನೂ ಇಪ್ಪತ್ತೈದೋ, ಐವತ್ತೋ ವರ್ಷ ಸಂದಿದ್ದರೆ, ಯಾರಿಗೂ ಬೇಸರವಾಗುತ್ತಿರಲಿಲ್ಲ. ಇಂದಲ್ಲ, ನಾಳೆ ಉತ್ತಮ ತೀರ್ಪು ಬರಬಹುದೆಂದು ಅಂದುಕೊಳ್ಳುತ್ತಲೇ ಇರಬಹುದಾಗಿತ್ತು. ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಕರಕರ ಮಾಡುತ್ತಿರಬಹುದಾಗಿತ್ತು. ಆದರೆ ಈಗ ಹೊರಬಿದ್ದಿರುವ ತೀರ್ಪು ಅನಿಲ ದುರಂತಕ್ಕಿಂತಲೂ ಭಯಂಕರವಾಗಿದೆ. ಲಂಕೆಗೆ ಬೆಂಕಿ ಬಿದ್ದಾಗ ಹನುಮಪ್ಪ ಹೊರಗೆ' ಎಂಬಂತೆ ಆಂಡರ್‌ಸನ್ ಈಗ ತನಗೇನೂ ಸಂಬಂಧವೇ ಇಲ್ಲ ಎಂಬಂತೆ ಆರಾಮಾಗಿದ್ದಾನೆ. ಇಪ್ಪತ್ತು ಸಾವಿರ ಮಂದಿಯನ್ನು ಬಲಿ ತೆಗೆದುಕೊಂಡರೂ ಆತನ ಕೂದಲು ಕೊಂಕಿಲ್ಲ. ಅವನ ರಟ್ಟೆ ಹಿಡಿದು ಭಾರತಕ್ಕೆ ಎಳೆದುಕೊಂಡು ಬರುವಂತೆ ಮಾಡಲು ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಾರೂ ಪ್ರಯತ್ನಿಸಲಿಲ್ಲ.

ಅದಕ್ಕೇ ಹೇಳಿದ್ದು ನಮಗೆ ನಾಚಿಕೆಯಾಗಬೇಕು ಎಂದು. ಈಗ ತೀರ್ಪು ಹೊರಬಿದ್ದಿದೆ. ಆಂಡರ್‌ಸನ್‌ನನ್ನು ಭಾರತಕ್ಕೆ ಕರೆತರುತ್ತೇವೆ, ನಮ್ಮ ಕಾನೂನಿನ ಕೈ ಅಮೆರಿಕದಲ್ಲಿರುವ ಅವನನ್ನು ಹಿಡಿದು ಎಳೆದು ತರುವಷ್ಟು ಉದ್ದ ಹಾಗೂ ಗಟ್ಟಿಯಾಗಿದೆಯೆಂದು ಕಾಂಗ್ರೆಸ್ ನಾಯಕರು, ಮಂತ್ರಿಗಳೆಲ್ಲ ಬೊಗಳೆ ಬಿಡುತ್ತಿದ್ದಾರೆ. ಇಷ್ಟು ವರ್ಷಗಳಲ್ಲಿ ಆಗದ ಕೆಲಸವನ್ನು ಈಗ ಮಾಡಬಹುದೆಂದು ನಂಬಲು ಯಾರಿಗೂ ತಲೆ ಕೆಟ್ಟಿಲ್ಲ. ಈಗ ಒಬ್ಬೊಬ್ಬರೂ ಹೇಳುತ್ತಿರುವುದನ್ನು ಕೇಳಿಸಿಕೊಂಡರೆ ಹೇಸಿಗೆಯಾಗುತ್ತದೆ, ಸಾವಿರ ಚೇಳು ಕಡಿದಂತಾಗುತ್ತದೆ.

ಆ ದಿನ ಏನಾಯಿತೆಂಬುದು ಗೊತ್ತಿದೆಯಲ್ಲ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X