• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆ ದಿನ ಏನಾಯಿತೆಂಬುದು ಗೊತ್ತಿದೆಯಲ್ಲ?

By * ವಿಶ್ವೇಶ್ವರ ಭಟ್
|

ತುಸು ನೆನಪಿಸಿಕೊಳ್ಳಿ. 1984ರ ಡಿಸೆಂಬರ್ ಮೂರರ ರಾತ್ರಿ ವಿಷಾನಿಲ ಭೋಪಾಲ್ ಮೇಲೆ ಆವರಿಸಿ 20 ಸಾವಿರ ಮಂದಿ ನಿದ್ದೆಯಲ್ಲೇ ಚಿರನಿದ್ದೆಗೆ ಜಾರಿದರು. ಮಧ್ಯಪ್ರದೇಶದ ಅಂದಿನ ಮುಖ್ಯಮಂತ್ರಿ ಅರ್ಜುನ್ ಸಿಂಗ್ ವಿಷಯ ತಿಳಿಯುತ್ತಿದ್ದಂತೆ ಪಲಾಯನ ಮಾಡಿಬಿಟ್ಟ. ಆತ ಮರುದಿನ ಹಾಜರ್ ಆಗಿದ್ದು ಪ್ರಧಾನಿ ರಾಜೀವ್‌ಗಾಂಧಿ ಮುಂದೆ. ಅಲ್ಲಿ ಆಂಡರ್‌ಸನ್‌ನನ್ನು ಬಚಾವ್ ಮಾಡುವುದು ಹೇಗೆ ಎಂಬ ಬಗ್ಗೆ ಸ್ಕೆಚ್ ರೆಡಿಯಾಗುತ್ತಿತ್ತು. ರಾಜೀವ್ ಆದೇಶದ ಮೇರೆಗೆ ಅರ್ಜುನ್ ಸಿಂಗ್ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಅಲ್ಲಿಂದಲೇ ಸೂಚನೆ ನೀಡುತ್ತಿದ್ದರು.

ಮುಂದೆ ನಡೆದಿದ್ದೆಲ್ಲ ಶುದ್ಧ ನಾಟಕ. ಮೂರು ದಿನಗಳ ಬಳಿಕ ಅಂದರೆ ಡಿಸೆಂಬರ್ ಏಳರಂದು ಆಂಡರ್‌ಸನ್ ಮುಂಬಯಿಯಿಂದ ಭೋಪಾಲ್‌ಗೆ ಬರುತ್ತಾನೆ. ಅವನನ್ನು ಬಂಧಿಸಿ ಜೈಲಿಗೆ ಅಟ್ಟಬೇಕಿತ್ತು ತಾನೆ? ಪೊಲೀಸರು ಅವನನ್ನು ಬಂಧಿಸುತ್ತಾರೆ. ಆದರೆ ಜೈಲಿಗೆ ಕರೆದೊಯ್ಯದೇ ಸ್ಟೇಟ್ ಗೆಸ್ಟ್‌ಹೌಸ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಅವನಿಗೆ ರಾಜಾತಿಥ್ಯ! ಅಲ್ಲಿಯೇ ಅವನಿಗೆ ಜಾಮೀನು ನೀಡಲಾಗುತ್ತದೆ. ಅಷ್ಟಕ್ಕೂ ಆಂಡರ್‌ಸನ್‌ನನ್ನು ಬಂಧಿಸಿದ್ದೇಕೆ ಎಂದು ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ಗದರುತ್ತಾನೆ. ಆತನಿಗೆ ಜಾಮೀನು ನೀಡಿದ್ದೇಕೆ ಎಂದು ಯಾರೂ ಪ್ರಶ್ನಿಸುವುದಿಲ್ಲ. ಆನಂತರ ಆಂಡರ್‌ಸನ್ ಭೋಪಾಲ್‌ನಿಂದ ಹೊಸದಿಲ್ಲಿಗೆ ಹೋಗಿ, ಅಲ್ಲಿಂದ ಅಮೆರಿಕಕ್ಕೆ ಪರಾರಿಯಾಗುತ್ತಾನೆ. ಹೋದವನು ತಿರುಗಿ ಇತ್ತ ಮುಖ ಕೂಡ ಹಾಕುವು ದಿಲ್ಲ ಹೇಗಿದೆ ನಾಟಕ?

ಪಾತಕಿ ಆಂಡರ್‌ಸನ್ ರಕ್ಷಣೆಗೆ ದೇಶದ ಅಧಿಕಾರಿಗಳು, ಮುಖ್ಯ ಮಂತ್ರಿ ಹಾಗೂ ಪ್ರಧಾನಿಯೇ ಸುತ್ತುವರಿದು ನಿಂತರೆ ಯಾರು ತಾನೆ ಏನು ಮಾಡಿಯಾರು? ಪ್ರಧಾನಿ ರಾಜೀವ್ ಅವರ ಶ್ರೀರಕ್ಷೆ ಇಲ್ಲದಿದ್ದರೆ ಇಷ್ಟೆಲ್ಲ ಸಾಧ್ಯವಿತ್ತಾ? ಜೈಲಿನಲ್ಲಿರಬೇಕಾದ ವ್ಯಕ್ತಿ ಪ್ರಧಾನಿ ಹಾಗೂ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತಾನೆಂದರೆ ಈ ದೇಶದ ಕಾನೂನು ಕತ್ತೆಯಲ್ಲದೇ ಮತ್ತೇನು? ಯೂನಿಯನ್ ಕಾರ್ಬೈಡ್ ಕಂಪನಿ ಹೆಚ್ಚಿನ ಪರಿಹಾರ ಕೊಡಬೇಕೆಂದು ಅಮೆರಿಕ ಕೋರ್ಟಿನಲ್ಲಿ ಹೂಡಿದ್ದ ಮೊಕದ್ದಮೆಯನ್ನು ಭಾರತ ಸರಕಾರ ಹಿಂತೆಗೆದುಕೊಂಡಿತು. ಏಕೆ? ಜುಜುಬಿ 40-50 ಕೋಟಿ ಡಾಲರ್ ಪರಿಹಾರವನ್ನು ಒಪ್ಪಿಕೊಂಡಿದ್ದೇಕೆ? ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಕಾಲಕ್ರಮೇಣ ಖರೀದಿಸಿದ ಡೋವ್ ಕಂಪನಿ ಸಹ ಕೆಟ್ಟ ಇತಿಹಾಸವುಳ್ಳ ಕಂಪನಿಯೆಂಬುದು ಗೊತ್ತಿದ್ದರೂ ಅದಕ್ಕೆ ಅನುಮತಿ ನೀಡಿದ್ದೇಕೆ? ಡೋವ್ ಕಂಪನಿ ದೇಶದಲ್ಲಿ ಹೊಸ ಶಾಖೆಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಕೇಂದ್ರ ಸಂಪುಟದ ಸಚಿವರಾದ ಚಿದಂಬರಂ ಹಾಗೂ ಕಮಲ್‌ನಾಥ್ ಪ್ರಧಾನಿ ಮೇಲೆ ಪ್ರಭಾವ ಬೀರುತ್ತಾರೆಂದರೆ ಏನರ್ಥ?

ತೀರ್ಪು ಹೊರಬಿದ್ದ ನಂತರ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹೇಳುತ್ತಿದ್ದಾರೆ-ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಆಂಡರ್‌ಸನ್‌ಗೆ ಪಲಾಯನಗೈಯಲು ಅವಕಾಶ ನೀಡಲಾಯಿತು.' ಅವರ ಪ್ರಕಾರ ಆಂಡರ್‌ಸನ್‌ನನ್ನು ಇಲ್ಲಿಯೇ ಇಟ್ಟುಕೊಂಡಿದ್ದರೆ ಜನ ಅವನನ್ನು ಸಾಯಿಸಿಬಿಡುತ್ತಿದ್ದರು. ನಮ್ಮ ದೇಶದ ಸಹಸ್ರಾರು ಮಂದಿ ಸತ್ತರೆ ಪರವಾಗಿಲ್ಲ. ಅವರ ಜೀವಕ್ಕೆ ಬೆಲೆಯಿಲ್ಲ. ಆದರೆ ಅಮೆರಿಕದ ಆಂಡರ್‌ಸನ್‌ಗೆ ಏನೂ ಆಗಕೂಡದು. ಹೇಗಿದೆ ಸಮರ್ಥನೆ? ದೇಶದ ಕಾನೂನು ಪಾಲಕರು, ಅದನ್ನು ರೂಪಿಸುವವರೇ ಅಪರಾಧಿಯ ರಕ್ಷಣೆಗೆ ಪ್ರತಿಜ್ಞೆ ಮಾಡಿ ಟೊಂಕಕಟ್ಟಿ ನಿಂತರೆ ಯಾರು ತಾನೆ ಏನು ಮಾಡಲು ಸಾಧ್ಯ? ತೀರ್ಪಿನ ಬಳಿಕ ಇಡೀ ದೇಶದ ತುಂಬೆಲ್ಲ ಪ್ರಕರಣದ ಕುರಿತು ಇಷ್ಟೆಲ್ಲ ಚರ್ಚೆಯಾಗುತ್ತಿದೆ. ಆಂಡರ್‌ಸನ್ ಬಿಡುಗಡೆಗೆ ಶತಾಯಗತಾಯ ಶ್ರಮಿಸಿದ ಅರ್ಜುನ್‌ಸಿಂಗ್, ಡೋವ್ ಕಂಪನಿಯಿಂದ ವಿದೇಶಿ ಬಂಡವಾಳ ಆಕರ್ಷಿಸಲು ಯತ್ನಿಸಿದ ಪ್ರಧಾನಿ ಡಾ.ಮನಮೋಹನ್ ಸಿಂಗ್, ಅನಿಲ ದುರಂತ ಕೇಸಿನಲ್ಲಿ ಶಿಕ್ಷೆಯ ಪ್ರಮಾಣವನ್ನು ಕುಗ್ಗಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅಹಮದಿ (ಇವರು ಮುಂದೆ ಡೋವ್ ಕಂಪನಿ ಆರಂಭಿಸಿದ ಆಸ್ಪತ್ರೆ ಟ್ರಸ್ಟಿನ ಮುಖ್ಯಸ್ಥರಾದರು), ಡೋವ್ ಕಂಪನಿಗಾಗಿ ಲಾಬಿ ಮಾಡಿದ ಚಿದಂಬರಂ ಹಾಗೂ ಕಮಲನಾಥ್ ಇವರೆಲ್ಲರ ಸುತ್ತ ಸಂಶಯದ ಮುಳ್ಳು ಗಿರಗಿಟ್ಲೆ ಹಾಕುತ್ತಿದೆ. ಕಾಂಗ್ರೆಸ್ ನಾಯಕರೆಲ್ಲ ಅರ್ಜುನ್ ಸಿಂಗ್ ಅವರನ್ನು ಬಲಿ' ಕೊಡಲು ಹೊಂಚು ಹಾಕುತ್ತಿದ್ದಾರೆ.

ಆದರೆ ಯಾವ ನಾಯಕನೂ ಅಪ್ಪಿತಪ್ಪಿಯೂ ರಾಜೀವ್ ಗಾಂಧಿ ಹೆಸರನ್ನು ಹೇಳುತ್ತಿಲ್ಲ. ರಾಜೀವ್ ಹೆಸರಿಗೆ ಕಳಂಕ ತಪ್ಪಿಸಲು ಯಾರನ್ನಾದರೂ ತ್ಯಾಗಮಾಡಲು ಕಾಂಗ್ರೆಸ್ ಸಿದ್ಧವಾಗಿದೆ. ರಾಜೀವ್ ಮಾತ್ರ ಆಂಡರ್‌ಸನ್‌ನನ್ನು ಬಚಾವ್ ಮಾಡಿದ್ದು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇಷ್ಟೇ ಅಲ್ಲ, ಯೂನಿಯನ್ ಕಾರ್ಬೈಡ್ ಕಂಪನಿ 33 ಶತಕೋಟಿ ಡಾಲರ್ ಪರಿಹಾರ ನೀಡಬೇಕೆಂಬ ಬೇಡಿಕೆಯನ್ನು ಅಂತಿಮವಾಗಿ ಚಿಕ್ಕಾಣಿ 47 ಕೋಟಿ ಡಾಲರ್‌ಗೆ ಒಪ್ಪಿದ್ದು ಸಹ ರಾಜೀವ್ ಸರಕಾರವೇ. ಈ ಪರಿಹಾರ ಹಣ ಅಂತಾರಾಷ್ಟ್ರೀಯ ಕಾನೂನು ರೀತ್ಯ ಕಡಿಮೆಯೇನಲ್ಲ ಎಂದು ಭಾರತ ಸರಕಾರವೇ ಮುಂದಾಗಿ ಸಮರ್ಥನೆ ನೀಡಿತು. ಇದಕ್ಕೇನೆನ್ನೋಣ?

ಇಲ್ಲೊಂದು ಪ್ರಕರಣವನ್ನು ಗಮನಿಸಬೇಕು. ಅದೇ ವರ್ಷ (1989) ಎಕ್ಸಾನ್‌ವಾಲ್ಡೇಜ್ ಕಂಪನಿ ದೆಸೆಯಿಂದಾಗಿ ಅಮೆರಿಕದ ಅಲಾಸ್ಕಾದಲ್ಲಿ 108 ದಶಲಕ್ಷ ಗ್ಯಾಲನ್ ಕಚ್ಚಾ ತೈಲ ನೀರಿನಲ್ಲಿ ಸೋರಿ ಭಾರೀ ದುರಂತ ಸಂಭವಿಸಿತು. ಈ ದುರ್ಘಟನೆಯಲ್ಲಿ ಒಬ್ಬೇ ಒಬ್ಬ ಸಾಯಲಿಲ್ಲ. ಆದರೆ ಅಸಂಖ್ಯ ಜಲಚರಗಳು ಸತ್ತು ನಿಸರ್ಗಕ್ಕೆ ಅಗಣಿತ ಹಾನಿಯಾಯಿತು. ಭಾರತದಲ್ಲಾಗಿದ್ದರೆ ಎಕ್ಸಾನ್‌ವಾಲ್ಡೇಜ್ ಕಂಪನಿ ನಿರಾಳವಾಗಿ ಕೈಬೀಸಿಕೊಂಡು ಬಚಾವ್ ಆಗಿಬಿಡುತ್ತಿತ್ತು. ಆದರೆ ಅಮೆರಿಕದಲ್ಲಿ ಇಂಥ ದುರಂತಕ್ಕೆ ಕಾರಣರಾದವರು ತಪ್ಪಿಸಿಕೊಳ್ಳುವ ಛಾನ್ಸೇ ಇಲ್ಲ. ಐನೂರು ಕೋಟಿ ಡಾಲರ್ ಪರಿಹಾರ ನೀಡಬೇಕೆಂದು ಕೋರ್ಟ್ ತೀರ್ಪು ನೀಡಿತು. ಎಕ್ಸಾನ್ ವಾಲ್ಡೇಜ್ ಬೇರೆ ದಾರಿಯಿಲ್ಲದೇ, ಮರುಮಾತಾಡದೇ ಅಷ್ಟು ಹಣವನ್ನು ಪೀಕಿತು.

ಭೋಪಾಲ್ ದುರಂತದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿ 33 ಶತಕೋಟಿ ಡಾಲರ್ ಹಣ ನೀಡಬೇಕಾಗಿತ್ತು. ಆದರೆ ಅಂತಿಮವಾಗಿ ನಿರ್ಧರಿತವಾಗಿದ್ದು ಕೇವಲ 47 ದಶಲಕ್ಷ ಡಾಲರ್! ಭೋಪಾಲ್ ದುರಂತಕ್ಕೆ ಕೇವಲ ರಾಜೀವ್ ಗಾಂಧಿಯವರನ್ನೋ, ಅರ್ಜುನ್ ಸಿಂಗ್ ಅವರನ್ನೋ ಅಥವಾ ಕೆಲವು ಅಧಿಕಾರಿಗಳನ್ನೋ ದೂಷಿಸಿ ಫಲವಿಲ್ಲ. ಇಡೀ ವ್ಯವಸ್ಥೆಯೇ ಭ್ರಷ್ಟವಾಗಿರುವಾಗಿದೆ. ನಮ್ಮ ಸರಕಾರ ದೇಶವನ್ನು-ದೇಶವಾಸಿಗಳ ಮಾನ ಹರಾಜು ಹಾಕಿದೆ. ಹೀಗೆ ನೋಡಿದಾಗ ಇದು ಕೇವಲ ವಿಷಾನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. ಇದು ದೇಶದ ಮಾನ-ಮರ್‍ಯಾದೆ, ಸ್ವಾಭಿಮಾನದ ಪ್ರಶ್ನೆ. ಯಾವುದೇ ಮಾನವಂತ ದೇಶದ ಸರಕಾರ ತನ್ನ ಪ್ರಜೆಗಳ ವಿರುದ್ಧ ಅನ್ಯಾಯವಾದರೆ ಸಹಿಸುವುದಿಲ್ಲ. ಅದನ್ನು ದೇಶದ ಸಾರ್ವಭೌಮತ್ವಕ್ಕೆ ಒದಗಿದ ಅಪಾಯ ಎಂದೇ ಭಾವಿಸುತ್ತದೆ. ತನ್ನೆಲ್ಲ ಶಕ್ತಿ ಬಳಸಿ ಖಡಾಖಡಿ ಅಂಥ ಪ್ರಯತ್ನವನ್ನು ಹೊಸಕಿ ಹಾಕುತ್ತದೆ.

ಆದರೆ ನಮ್ಮ ಮಹಾನ್ ಭಾರತದಲ್ಲಿ ಆಗಿದ್ದೇನು? ಇದಕ್ಕೆ ಸರಿ ಉಲ್ಟಾ. ಕಾಯಲು ನೇಮಕವಾದವರೇ ಕೊಂದರೆ ಏನಾದೀತು? ನಮ್ಮ ಸಂಕಷ್ಟಗಳನ್ನು ಯಾರ ಮುಂದೆ ತೋಡಿಕೊಳ್ಳುವುದು? ಅದು ಯಾರೇ ಆಗಿರಲಿ, ಭೋಪಾಲ್ ದುರಂತ ಇಡೀ ದೇಶಕ್ಕೇ ಎಸಗಿದ ಮಹಾಮೋಸ! ಕನಿಷ್ಠ ಮಾನ, ಮಾನವೀಯತೆಯನ್ನು ಗಾಳಿಗೆ ತೂರಿದ ಅತ್ಯಂತ ಹೇಯ ಕೃತ್ಯ.

ಇಷ್ಟೆಲ್ಲ ಆದಮೇಲೆ ಡಾ. ಮನಮೋಹನ್ ಸಿಂಗ್ ಜೋಕ್ ಸಿಡಿಸಿದ್ದಾರೆ. ಭೋಪಾಲ್ ಅನಿಲ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡುತ್ತೇವೆ' ಎಂದು ಹೇಳಿದ್ದಾರೆ. ಕಾನೂನು ಮಂತ್ರಿ ವೀರಪ್ಪ ಮೊಯ್ಲಿಯವರೂ ಇದೇ ಧಾಟಿಯಲ್ಲಿ ಪುಂಗಿ ಊದಿದ್ದಾರೆ. ಯಾವುದನ್ನು ಜನ ನಿರೀಕ್ಷಿಸಿರಲಿಲ್ಲವೋ ಅವೆಲ್ಲ ಕಣ್ಮುಂದೆಯೇ ಆದಮೇಲೆ ಯಾರನ್ನಂತ ನಂಬೋದು? ಅದಕ್ಕೇ ಹೇಳಿದ್ದು ಇವೆಲ್ಲ ನೋಡಿದರೆ ಕಣ್ಣೀರೂ ಬರೊಲ್ಲ, ದುಃಖವೂ ಆಗಿಲ್ಲ. ಹೃದಯ ಬಂಡೆಯಂತಾಗಿದೆ, ಈ ಎಲ್ಲ ಭಂಡರನ್ನು ನೋಡಿ.

ಭೋಪಾಲ್ ದುರಂತವೂ ನೋಡನೋಡುತ್ತಾ ನಮ್ಮ ಮುಂದೆಯೇ ಅನಿಲವಾಗಿ ಹಾರಿಹೋಗಲಿದೆ. ನಾವು ಇನ್ನು ಕೆಲದಿನ ವಟಗುಟ್ಟಿ ಸುಮ್ಮನಾಗುತ್ತೇವೆ. ನಮ್ಮದು ನಾಲ್ಕು ದಿನಗಳ ಆಕ್ರೋಶ. ಅದು ಆವಿಯಾಗುತ್ತಿದ್ದಂತೆ ಬದುಕು ಮಗ್ಗುಲು ಬದಲಿಸಿ ಎಂದಿನಂತೆ ಸಾಗುತ್ತದೆ. ಭೋಪಾಲ್ ದುರಂತಕ್ಕಿಂತ ಮೊದಲಿನ ಅನ್ಯಾಯಗಳಿಗೂ ನಮ್ಮ ಪ್ರತಿಕ್ರಿಯೆ ಹಾಗೇ ಇತ್ತು. ದೇಶದ ಮಾನ ಹೀಗೆ ಮೂರಾಬಟ್ಟೆಯಾದಾಗ ಯಾತನೆಯಾಗುತ್ತದೆ, ಕರುಳು ಕಿತ್ತುಬರುತ್ತದೆ. ಭೋಪಾಲ್‌ನಲ್ಲಿ ಇಂದಿಗೂ ಅನಿಲ ದುರಂತದಲ್ಲಿ ಕಣ್ಣು ಕಳೆದುಕೊಂಡವರು ಇಡೀ ವ್ಯವಸ್ಥೆಯ ಕ್ರೂರ ಅಣಕದಂತೆ ಗೋಚರಿಸುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ, ಸಂದೇಹ ಬೇಡ, ಕೇಂದ್ರ ಸರಕಾರ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಹೂತುಹಾಕುತ್ತಿದೆ, ನಮ್ಮೆಲ್ಲರ ಸಹಕಾರದೊಂದಿಗೆ.

ಇಡೀ ಪ್ರಕರಣವನ್ನು ಸಾಕ್ಷಾತ್ ಗಮನಿಸಿಯೂ ಇಡೀ ಭಾರತ ದಿವ್ಯ ಮೌನ ಧರಿಸಿರುವಾಗಲೇ ಭಾರತೀಯ ಮೂಲದ ಹನ್ನೆರಡು ವರ್ಷದ ಪೋರ ಆಕಾಶ್ ವಿಶ್ವನಾಥ್ ಮೆಹ್ತಾ ವಿಶಿಷ್ಟ ರೀತಿಯಲ್ಲಿ ಅಮೆರಿ ಕದಲ್ಲಿ ಪ್ರತಿಭಟನೆ ಮಾಡಿ ಆಂಡರ್‌ಸನ್‌ಗೆ ಸಮನ್ಸ್ ಜಾರಿ ಗೊಳಿಸಿದ್ದಾನೆ. ಭಾರತೀಯರು ಬಡವರೆಂದು ಭಾವಿಸಿ ಕಾನೂನಿನ ಕಣ್ಣಿಗೆ ಮಣ್ಣನ್ನೆರಚಬೇಡಿ. ಅಮೆರಿಕದಲ್ಲಿ ಮಾನವ ಸಂಕುಲ ದಮನಕ್ಕೆ ಸಮಾನವಾದ ಅಪರಾಧವನ್ನು ಆಂಡರ್‌ಸನ್ ಎಸಗಿದ್ದಾನೆ. ಆತ ಭಾರತದ ನ್ಯಾಯಾಲಯದ ಮುಂದೆ ಹಾಜರಾಗಬೇಕು' ಎಂದು ಮೆಹ್ತಾ ಅಣಕು ಸಮನ್ಸ್ ಜಾರಿಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಭಾರತದ ಪ್ರಧಾನಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದರಿಂದಲೇ ಇಷ್ಟೆಲ್ಲ ಆಯಿತು ಎಂದು ನೇರವಾಗಿ ಆರೋಪಿಸಿದ್ದಾನೆ. ಒಬ್ಬ ಹನ್ನೆರಡು ವರ್ಷದ ಪೋರ ತೋರಿದ ಕಾಳಜಿ, ಕಳಕಳಿಯನ್ನು ನಮ್ಮ ಪ್ರಧಾನಿ ತೋರಿದ್ದರೆ ದೇಶದ ಮಾನ ಉಳಿಯುತ್ತಿತ್ತು! ಛೇ !

« ಆ ಪೋರ ತೋರಿದ ಕಾಳಜಿ ಪ್ರಧಾನಿ ತೋರಿದ್ದರೆ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more