ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರೆಲ್ಲರ ಇಷ್ಟು ದಿನಗಳ ಹತಾಶೆಗೆ ಒಂದು ಅಖಾಡ ಸಿಕ್ಕಿದೆ!

By * ವಿಶ್ವೇಶ್ವರ ಭಟ್
|
Google Oneindia Kannada News

Vishweshwar Bhat
ಇಂಟರ್‌ನೆಟ್ ಹಿಂದು! ಇವನ್ಯಾರಪ್ಪಾ ಹೊಸ ಕಟ್ಟರ್‌ಪಂಥೀಯವಾದಿ ಅಥವಾ ಸಂಘ ಪರಿವಾರದ ಹೊಸ ಹುರಿಯಾಳು ಎಂದು ಒಮ್ಮೆಲೇ ಹೌಹಾರಬೇಡಿ. ಇವನ ಕೈಯಲ್ಲಿ ತ್ರಿಶೂಲವೂ ಇಲ್ಲ, ಹಣೆಯ ಮೇಲೆ ತಿಲಕವೂ ಇಲ್ಲ, ಭುಜದ ಸುತ್ತ ಕೇಸರಿ ಶಾಲೂ ಇರುವುದಿಲ್ಲ, ಹೊಡಿ-ಕಡಿ ಎಂಬುದೂ ಇವನ ಭಾಷೆಯಲ್ಲ, ಈ ದೇಶವನ್ನು ಹಿಂದೂರಾಷ್ಟ್ರ ಮಾಡಬೇಕು ಎಂದು ಪ್ರತಿಪಾದಿಸುವವನೂ ಇವನಲ್ಲ. ಆದರೂ ಖ್ಯಾತನಾಮ ಹಾಗೂ ತಾರಾ ಪತ್ರಕರ್ತರೂ ಇವನಿಗೆ ಬೆಚ್ಚಿ ಬೀಳುತ್ತಿದ್ದಾರೆ, ಸಿಡಿಮಿಡಿಗೊಳ್ಳುತ್ತಿದ್ದಾರೆ.

ಇಷ್ಟಕ್ಕೂ, ಇಂಟರ್‌ನೆಟ್ ಹಿಂದು' ಯಾರು? ಹೀಗೊಂದು ಹೊಸ ಪರಿಕಲ್ಪನೆ ಅಂತರ್ಜಾಲದ ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ, ಚಾಟ್ ರೂಮ್‌ಗಳಲ್ಲಿ ಚರ್ಚೆಗೊಳಗಾಗುತ್ತಿದೆ. ಇಂಟರ್‌ನೆಟ್ ಹಿಂದು ಎಂಬ ಹೆಸರು ಹುಟ್ಟಿಕೊಂಡಿದ್ದು ಬಹುಶಃ ಸೆಕ್ಯುಲರ್' ಪಾಳಯದ ಪತ್ರಕರ್ತೆ ಸಿಎನ್‌ಎನ್-ಐಬಿಎನ್‌ನ ಸಾಗರಿಕಾ ಘೋಷ್ ಅವರಿಂದ. ಈ ಇಂಟರ್‌ನೆಟ್ ಹಿಂದುಗಳೆಲ್ಲ ಮೂಲಭೂತವಾದಿಗಳು. ಇವರನ್ನು ನಾನು ಬ್ಲಾಕ್ ಮಾಡುತ್ತೇನೆ ' ಎಂದು ಬುಸುಗುಡುತ್ತ ಸಾಗರಿಕಾ ಘೋಷ್ ಹತಾಶೆ ಹೊರಹಾಕಿದಾಗಲೇ ಹಾಗೊಂದು ಪರಿಕಲ್ಪನೆ ಬಲ ಪಡೆಯಿತು. ಈ ಅಸಹನೆಯ ಹಿಂದಿನ ಕತೆಯನ್ನೂ, ಒಂದು ಸಕಾರಾತ್ಮಕ ಐಡೆಂಟಿಟಿಯ ಬಯಕೆಯನ್ನೂ ಒಟ್ಟಿಗೆ ತೆರೆದಿಡುವ ವಿದ್ಯಮಾನ ಇಂಟರ್ನೆಟ್ ಹಿಂದು'.

ಇಂಟರ್ನೆಟ್ ಹಿಂದು ಅನ್ನೋದು ಒಂದು ನಿರ್ದಿಷ್ಟ ವೆಬ್‌ಸೈಟ್ ಹೆಸರೇನಲ್ಲ. ತಮ್ಮ ಹಿಂದು ಐಡೆಂಟಿಟಿಯನ್ನು ಅಭಿಮಾನದಿಂದಲೇ ಗುರುತಿಸಿಕೊಳ್ಳುವ, ಟ್ವಿಟ್ಟರ್- ಫೇಸ್‌ಬುಕ್ ಮುಂತಾದೆಡೆಗಳಲ್ಲಿ ಇಂಥದೊಂದು ಐಡೆಂಟಿಟಿಯನ್ನು ಹೆಮ್ಮೆಯಿಂದಲೇ ಪ್ರಸ್ತಾವಿಸಿಕೊಳ್ಳುವ ಕಂಪ್ಯೂಟರ್ ಸಾಕ್ಷರರ ಗುಂಪೆಲ್ಲ ಇಂಟರ್ನೆಟ್ ಹಿಂದು ಎಂಬ ಶಾಮಿಯಾನದ ಅಡಿ ಬರುತ್ತದೆ. ನೆಟ್‌ಲೋಕದ ಹೆಚ್ಚಿನ ವ್ಯಾಪ್ತಿಯನ್ನು ಇವರೇ ಆವರಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಇಂಟರ್ನೆಟ್ ಹಿಂದು ಸಮೂಹ ಸುದ್ದಿಯಾಗುತ್ತಿದೆ. ಇವರೆಲ್ಲ ಧರ್ಮಾಂಧರು ಎನ್ನುವ ಸಾಗರಿಕಾ ಅವರಂಥ ಹೈ ಫೈ ಪತ್ರಕರ್ತರ ಬೊಬ್ಬೆಗೆ ಪಕ್ಕಾಗುವುದಕ್ಕೂ ಮುಂಚೆ ಕೆಲ ಅಂಶಗಳನ್ನು ಗಮನಿಸುವುದು ಸೂಕ್ತ.

ಇಂಟರ್ನೆಟ್ ಹಿಂದುಗಳೆಂದು ಗುರುತಿಸಿಕೊಳ್ಳುತ್ತಿರುವವರು ಸುಶಿಕ್ಷಿತರು. ಪ್ರಾದೇಶಿಕ ಹಾಗೂ ಜಾತೀಯ ಭಾವನೆಗಳನ್ನು ವಿರೋಧಿಸುವವರು. ಇವರಿಗೆ ಹಿಂದುಗಳೆಂದು ಗುರುತಿಸಿಕೊಳ್ಳುವುದಕ್ಕೆ ಹಾಗೂ ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿದೆ. ಅದರರ್ಥ, ನಮ್ಮದು ಕಳಂಕವೇ ಇಲ್ಲದ ಧರ್ಮ; ಬೇರೆ ಪಥಗಳು ಕೀಳು ಎಂಬ ವಾದದವರು ಇವರಲ್ಲ. ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದೇ ಎಂಬ ಆನ್‌ಲೈನ್ ಸಮೀಕ್ಷೆಗೆ ಇಲ್ಲ' ಎಂಬ ಒಕ್ಕೊರಲಿನ ದನಿ ಮೊಳಗಿಸಿದವರು ಇವರು. ಭಾರತದ ಹಿತ ಇವರ ಕಾಳಜಿ. ನಮ್ಮ ಪರಂಪರೆಯ ಹಲವು ಅಂಶಗಳಲ್ಲಿ ಪ್ರಮಾದಗಳಿದ್ದಿರಬಹುದು. ಆದರೆ ಅವನ್ನು ಸರಿಪಡಿಸಿಕೊಂಡು ಮುಂದುವರಿಯಬೇಕಲ್ಲದೇ ನಮ್ಮ ಗುರುತಿನ ಬಗ್ಗೆ ನಾಚಿಕೆಪಟ್ಟುಕೊಳ್ಳುವ ಅಭಿಮಾನಶೂನ್ಯತೆ ಖಂಡಿತ ಬೇಕಿಲ್ಲ ಎಂಬುದು ಇವರ ದೃಢ ನಿಲುವು. ಈ ಹಿಂದುಗಳು ಕಟ್ಟರ್' ಚಹರೆಯಿಂದ ಆಚೆ. ಫ್ಯಾಷನ್ ಟಿವಿ ಚಾನಲ್ ಬಂದ್ ಮಾಡಬೇಕು ಎಂದು ಬೊಬ್ಬಿರಿಯುವವರು ಇವರಲ್ಲ. ಅದು ನಿಜಕ್ಕೂ ಸಿಲ್ಲಿ ವಿಷಯ ಎಂದು ನಗೆ ತೇಲಿಸುವವರಿವರು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಪುಂಡಾಟಿಕೆಗಳಿಗೆ ಸಾಫ್ಟ್' ನಿಲುವು ತೋರುವ ಮಾಧ್ಯಮ, ಹಿಂದು ಆಕ್ರೋಶವನ್ನು ಮಾತ್ರ ಗೂಂಡಾಗಿರಿಯಂತೆ ಚಿತ್ರಿಸುವುದನ್ನು ಇವರು ಅಂತರ್ಜಾಲದ ಎಲ್ಲ ವೇದಿಕೆಗಳಲ್ಲಿ ವಿರೋಧಿಸುತ್ತಾರೆ. ಹೀಗಾಗಿಯೇ ಬರ್ಕಾ ದತ್ ಅವರಂಥವರು ಸಾನಿಯಾ-ಶೊಯೆಬ್ ವಿವಾಹದಿಂದ ಪಾಕ್ -ಭಾರತ ಬಾಂಧವ್ಯ ಸುಧಾರಿಸಲಿದೆ ಎಂದೆಲ್ಲ ಬುರುಡೆ ಬಿಡುತ್ತ ಕುಳಿತಾಗ ನಿರ್ಭಿಡೆಯಿಂದ ಜಾಲತಾಣಗಳಲ್ಲಿ ಜಾಡಿಸುತ್ತಾರೆ. ಅದೇ ವೇಳೆ, ಸಾನಿಯಾ- ಶೊಯೆಬ್ ಮದುವೆ ಒಂದು ವೈಯಕ್ತಿಕ ವಿಷಯ ಎನ್ನುತ್ತ ಹಿಂದು ಸಂಘಟನೆಗಳ ವಿರೋಧದ ಕೂಗನ್ನೂ ಟೀಕಿಸುತ್ತಾರೆ. ಬಿಜೆಪಿಯೂ ಸೇರಿದಂತೆ ಎಲ್ಲ ಪಕ್ಷಗಳ ತುಷ್ಟೀಕರಣ ನೀತಿಯನ್ನು ಹಾಗೂ ಮತಬ್ಯಾಂಕ್ ರಾಜಕಾರಣವನ್ನು ಪ್ರಶ್ನಿಸುತ್ತಿರುವವರು ಇವರು.

ಈ ದನಿ ಹೊಸದೆನಿಸುವುದೇಕೆ? ಮುಖ್ಯವಾಹಿನಿ ಅದರಲ್ಲೂ ಇಂಗ್ಲೀಷ್ ಮಾಧ್ಯಮಕ್ಕೆ ಮೊದಲಿನಿಂದಲೂ ಹಿಂದು' ಎಂಬ ಪದವೇ ಅಲರ್ಜಿ. ಹಿಂದು ಎಂದರೆ ಪ್ರತಿಗಾಮಿ, ಸಂಪ್ರದಾಯಗಳಲ್ಲಿ ಸಿಲುಕಿಕೊಂಡಿರುವ ಎಂದೇ ವ್ಯಾಖ್ಯಾನಿಸುವುದರಲ್ಲಿ ಉತ್ಸಾಹ ತೋರಿದೆ. ಇದರ ವಿರುದ್ಧ ದನಿ ಎತ್ತಲು ಹಿಂದುವಿಗೆ ಜಾಗವೇ ದೊರೆಯುತ್ತಿರಲಿಲ್ಲ. ಏಕೆಂದರೆ ಬಹುತೇಕ ಮಾಧ್ಯಮ ಸಂಸ್ಥೆಗಳೆಲ್ಲ ಎಡಪಂಥೀಯ ಉದಾರವಾದಿಗಳ ಹಿಡಿತ ಹಾಗೂ ಪ್ರಭಾವಕ್ಕೆ ಒಳಗಾದಂಥವು. ಇಲ್ಲಿನ ಪೂರ್ವಗ್ರಹ ಪೀಡಿತ ವರದಿ- ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುವ ಅವಕಾಶವೇ ಸಿಗುತ್ತಿರಲಿಲ್ಲ. ಆದರೆ ಇಂಟರ್‌ನೆಟ್ ಬಂದು ಎಲ್ಲ ಲೆಕ್ಕಾಚಾರ ತಲೆಕೆಳಗಾಗಿಸಿದೆ. ಮಾಧ್ಯಮದಲ್ಲಿ ಅಭಿಪ್ರಾಯ ನಿರೂಪಕ ಸ್ಥಾನಗಳಲ್ಲಿ ನಿಂತು ಷರಾ ಬರೆಯುತ್ತಿರುವವರನ್ನು ತಾರ್ಕಿಕ ನೆಲೆಗಟ್ಟಿನಲ್ಲಿ ಪ್ರಶ್ನಿಸುವುದು ಸಾಧ್ಯವಾಗುತ್ತಿದೆ. ಟ್ವಿಟರ್ ನಂಥ ಸಾಧನಗಳಿಂದ ಆ ಕ್ಷಣಕ್ಕೆ ಪ್ರತಿ ಪ್ರಶ್ನೆ ಎಸೆಯುವುದು ಸಾಧ್ಯವಾಗುತ್ತಿದೆ ' ಎಂಬುದು ಇಂಟರ್‌ನೆಟ್ ಹಿಂದುಗಳೆಂದು ಗುರುತಿಸಿ ಕೊಳ್ಳುತ್ತಿರುವವರ ಒಟ್ಟಾರೆ ಅಭಿಪ್ರಾಯ.

ಇಂಟರ್ನೆಟ್ ಹಿಂದು : ಮುಖ್ಯವಾಹಿನಿಗೇಕೆ ಸಿಡಿಮಿಡಿ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X