• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾತ್ರಿ ನಿದ್ದೆ ಕೆಡಿಸುವ ಯಾವ ಕೆಲಸವನ್ನೂ ಮಾಡಬೇಡಿ!

By * ವಿಶ್ವೇಶ್ವರ ಭಟ್
|

ರಿಚರ್ಡ್ ಬ್ರಾನ್‌ಸನ್‌ನನ್ನು ನೋಡಿದಾಗಲೆಲ್ಲ ನನಗೆ ನಮ್ಮ ಡಾ. ವಿಜಯ ಮಲ್ಯ ನೆನಪಾಗುತ್ತಾರೆ. ಗುಣ, ಸ್ವಭಾವ, ವ್ಯಕ್ತಿತ್ವ, ಹವ್ಯಾಸದಲ್ಲಿ ಅವರಿಬ್ಬರೂ ಒಂದೇ. ಬಿಜಿನೆಸ್‌ನಲ್ಲಿ ಇಬ್ಬರೂ ಭಲೇ ಜಟ್ಟಿಗಳು. ಬ್ರಾನ್‌ಸನ್ ಮಾಡದ ಉದ್ಯೋಗವಿಲ್ಲ. ಪುಸ್ತಕ ಮಾರಾಟದಿಂದ ಏರ್‌ಲೈನ್ಸ್ ತನಕ ಎಲ್ಲ ದಂಧೆಯನ್ನೂ ಆತ ಯಶಸ್ವಿಯಾಗಿ ಮಾಡುತ್ತಿದ್ದಾನೆ. ಆತ ಯಾವುದೇ ಬಿಜಿನೆಸ್ ಮಾಡಲಿ, ಬ್ರ್ಯಾಂಡ್‌ನೇಮ್ ಮಾತ್ರ ವರ್ಜಿನ್! ಈ ಹೆಸರಿನಲ್ಲಿ ಬ್ರಾನ್‌ಸನ್ 360 ಕಂಪನಿಗಳನ್ನು ನಡೆಸುತ್ತಿದ್ದಾನೆ ಅಂದ್ರೆ ಅವನ ವ್ಯಾಪಾರದ ವಿಸ್ತಾರವನ್ನು ಊಹಿಸಬಹುದು.

ಮೂಲತಃ ಬ್ರಾನ್‌ಸನ್ ಅಪ್ಪಟ ಸಾಹಸಿ ಹಾಗೂ ಛಲಗಾರ. ಎಂಥಾ ಸನ್ನಿವೇಶವನ್ನಾದರೂ ತನ್ನ ಪರವಾಗಿ ಬದಲಿಸಿಕೊಳ್ಳುವ ಹೊಂಚುಗಾರ. ತನ್ನ ಹದಿನಾರನೆ ವಯಸ್ಸಿನಲ್ಲೇ ಬಿಜಿನೆಸ್‌ಗೆ ಇಳಿದವ. ಆಗಲೇ ಹಣ ಗಳಿಸಿದವ. ಅಂದು ಹತ್ತಿದ ರುಚಿ ಅವನನ್ನು ಇಲ್ಲಿತನಕ ಕರೆದುಕೊಂಡು ಬಂದಿದೆ. 2.6 ಶತಕೋಟಿ ಡಾಲರ್ ಆಸ್ತಿಗೆ ಒಡೆಯ. ವಿಶ್ವದ ಅತ್ಯಂತ ಶ್ರೀಮಂತರ ಪೈಕಿ 261ನೆಯವ. ಇವ್ಯಾವವೂ ನನ್ನನ್ನು ಆಕರ್ಷಿಸಿದ ಸಂಗತಿಗಳಲ್ಲ. ಬ್ರಾನ್‌ಸನ್ ಒಬ್ಬ ಬರಹಗಾರ ಕೂಡ. ಆತನ ಆತ್ಮಕತೆ Losing My Virginity ಓದಿ ಪ್ರಭಾವಿತನಾಗಿದ್ದೆ. ಬ್ರಾನ್‌ಸನ್ ಬಗ್ಗೆ ಕುತೂಹಲ ಹುಟ್ಟಿಕೊಂಡಿದ್ದೇ ಆವಾಗ. ಮೊನ್ನೆ ದುಬೈ ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಯಲ್ಲಿ ಅವನ ಇತ್ತೀಚಿನ ಪುಸ್ತಕ ಎತ್ತಿಕೊಂಡೆ. Screw it, Let's do it, Lessons in life ಅಂತ ಹೆಸರು. ದುಬೈನಿಂದ ಬೆಂಗಳೂರಿಗೆ ಬರುವ ಹೊತ್ತಿಗೆ ಪುಸ್ತಕದ ಕೊನೆ ಪುಟದ ತನಕ ಬಂದಿದ್ದೆ. ಈ ಪುಸ್ತಕದ ಒಂದು ಅಧ್ಯಾಯವನ್ನು ನಿಮಗೆ ಹೇಳಲೇಬೇಕು ಎನಿಸಿತು. ಇದರಲ್ಲಿ ಆತನ ಬಿಜಿನೆಸ್‌ನ ಇಡೀ ಸಿದ್ಧಾಂತವಿದೆ. ಇದು ಅವನ ಜೀವನಧರ್ಮವೂ ಹೌದು. ನಿಮಗೂ ಇದು ಹಿಡಿಸಬಹುದೆಂದು ಇಲ್ಲಿ ಕೊಡುತ್ತಿದ್ದೇನೆ. ಅವನ ಮಾತಿನಲ್ಲಿಯೇ ಓದಿಕೊಳ್ಳಿ.

ಅವು ವರ್ಜಿನ್ ಮ್ಯೂಸಿಕ್‌ನ ಪ್ರಾರಂಭಿಕ ದಿನಗಳು. ಜಪಾನಿನ ಕೆಲ ಉದ್ಯಮಪ್ರಮುಖರೊಂದಿಗೆ ಮಾತನಾಡುವ ಅವಕಾಶ ಲಭಿಸಿತ್ತು. ಕೈಯಲ್ಲಿ ಕಾಸಿಲ್ಲದ ನನ್ನಂಥ ಒಬ್ಬ ಯುವಕನೊಂದಿಗೂ ಅನುನಯದಿಂದಲೇ ಮಾತಿಗಿಳಿದಿದ್ದು ಅವರ ದೊಡ್ಡತನ. ಅವರು ನನಗೆ ಹೇಳಿದ್ದು ಕೂಡ ಅಂಥದೇ ವಿನಯದ ಬಗ್ಗೆ. ಯಾವತ್ತೂ ಕಣ್ಣು-ಕಿವಿಗಳನ್ನು ತೆರೆದುಕೊಂಡಿರಬೇಕು. ವಿನಯವಂತಿಕೆ ಬಿಡಬೇಡ. ನಿನ್ನನ್ನು ಯಾರು ಗಮನಿಸುತ್ತಿದ್ದಾರೋ ಹೇಳಲಾಗುವುದಿಲ್ಲ. ಗಾಸಿಪ್ ಮಾಡುತ್ತ ಕುಳಿತುಕೊಂಡರೆ, ಯಾರ ಬಗ್ಗೆ ಗಾಸಿಪ್ ಮಾಡಿದ್ದೋ ಅವರಿಗೇ ಅದು ತಲುಪುವ ಸಾಧ್ಯತೆಗಳೇ ಹೆಚ್ಚು.

ಹೀಗೆ ಕಿವಿ ತುಂಬಿಕೊಂಡಿದ್ದ ಹಿತನುಡಿಗಳನ್ನು ಲಾಗೂ ಮಾಡಿಕೊಳ್ಳಬಹುದಾದ ಪ್ರಸಂಗ ಬೇಗನೇ ಬಂತು. ಅದೊಂದು ದಿನ ಮೀಟಿಂಗ್‌ಗೆ ಹೋಗಬೇಕಿದ್ದವ ತಡ ಮಾಡಿಕೊಂಡಿದ್ದೆ. ಧಾವಂತದಿಂದ ಕಾಗದ ಪತ್ರ ಎಳೆದುಕೊಂಡು ಲಗುಬಗೆಯಿಂದ ಟ್ಯಾಕ್ಸಿ ಒಳಗೆ ತೂರಿಕೊಂಡಿದ್ದಷ್ಟೆ ಗೊತ್ತು. ಉಸ್ಸಪ್ಪಾ ಎಂದು ಉಸಿರೆಳೆದುಕೊಳ್ಳುವುದರಲ್ಲಿ ಶುರುವಾಯ್ತು ನೋಡಿ ಡ್ರೈವರ್‌ನ ವರಾತ. ಅವನೊಬ್ಬ ಪರಮ ವಾಚಾಳಿ. ಅಷ್ಟೇ ಆಗಿದ್ದು ಹಲುಬಿಕೊಂಡಿದ್ದರೆ ಪರವಾಗಿರಲಿಲ್ಲ. ತಿರುಗಾ ಮುರುಗಾ ಮಕಮಕ ನೋಡಿದ ಮೇಲೆ ಆತ ಉದ್ಗಾರ ತೆಗೆದ. ಹೇ, ನೀವು ನಂಗೊತ್ತು. ಡಿಕ್ ಬ್ರಾನ್‌ಸನ್ ಅವರಲ್ಲವಾ? ನಿಮ್ಮ ಹೆಸರಲ್ಲೊಂದು ರೆಕಾರ್ಡಿಂಗ್ ಕಂಪನಿ ಇದೆಯಲ್ಲವಾ?' ನಾನದಕ್ಕೆ ಹೌದು ಎನ್ನುತ್ತಲೇ , ವಾವ್, ನನ್ ಕಾರಲ್ಲಿ ಬ್ರಾನ್‌ಸನ್. ಇವತ್ತು ನನ್ನ ಲಕ್ಕಿ ಡೇ' ಎಂದು ಮತ್ತೊಂದಿಷ್ಟು ಉತ್ಸಾಹದಲ್ಲಿ ಮಾತಿಗಿಳಿದ. ಅವನೇನಾದರೂ ಬಾಯಿ ಮುಚ್ಚಿಕೊಂಡರೆ ನನ್ನ ಪಾಡಿಗೆ ನಾನು ಕಾಗದ ಪತ್ರ ಪರಿಶೀಲಿಸಿಕೊಂಡು ಮೀಟಿಂಗ್ ತಯಾರಿ ಮಾಡಿಕೊಳ್ಳಬಹುದಲ್ಲ ಅನ್ನೋದು ನನ್ನಾಸೆಯಾಗಿತ್ತು. ಉಹುಂ. ಆತ ಇನ್ನೊಂದು ಭಯಾನಕ ಕಾರ್‍ಯಕ್ಕೆ ಮುನ್ನುಡಿ ಹಾಡಿದ. ಆತ ಹಗಲಿನ ವೇಳೆಯಲ್ಲಿ ಟ್ಯಾಕ್ಸಿ ಓಡಿಸುತ್ತಾನಂತೆ. ಉಳಿದಂತೆ ಆತನೂ ಒಂದು ಬ್ಯಾಂಡ್‌ನಲ್ಲಿ ಡ್ರಮ್ಮರ್ ಅಂತೆ. ತನ್ನದೂ ಒಂದಷ್ಟು ಟೇಪ್ ಇದೆ. ನೀವದನ್ನು ಕೇಳಿಸಿಕೊಳ್ಳಬೇಕು ಎಂದಾಗ ನನಗೆ ತಲೆ ಸಿಡಿಯುವಂತಾಯ್ತು. ಆ ಕ್ಷಣದಲ್ಲೂ ನಾನು ವಿನಯ ಕಳೆದುಕೊಳ್ಳಬಾರದು ಎಂದು ವಿವೇಕ ಎಚ್ಚರಿಸಿತು. ಹೌದಾ, ಇದೊಳ್ಳೆ ಚೆನ್ನಾಗಿರುತ್ತೆ' ಅಂತ ನಾನು ನಗುತ್ತಾ ತಲೆಯಾಡಿಸಿದೆ.

ಅಷ್ಟಕ್ಕೆ ಮುಗಿಯಲಿಲ್ಲ. ನೀವು ತುಂಬಾ ಸುಸ್ತಾದಂತೆ ಕಾಣಿಸುತ್ತಿದ್ದೀರಿ ಸರ್. ಇಲ್ಲೇ ಮುರುಕಿಯಲ್ಲಿ ತಿರುಗಿಕೊಂಡರೆ ನಮ್ಮ ಮನೆ ಇದೆ. ಮನೆಯಲ್ಲಿ ನನ್ನಮ್ಮ ಇದ್ದಾಳೆ. ನಿಮ್ಮನ್ನು ಭೇಟಿ ಆದರೆ ತುಂಬಾ ಖುಷಿ ಪಡುತ್ತಾಳೆ. ಅಲ್ಲಿಗೆ ಹೋಗಿ ಒಂದು ಗರಂ ಚಾಯ್ ಕುಡಿದು ಮತ್ತೆ ಹೊರಟುಬಿಡೋಣ ಸರ್' ಎಂದ. ಇಲ್ಲಪ್ಪ ನಂಗೆ ಲೇಟ್ ಆಗಿದೆ ಎಂಬ ಅಲವರಿಕೆಯನ್ನು ಆತ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ನಾವು ಮನೆ ತಲುಪುತ್ತಿದ್ದಂತೆ ಡ್ರೈವರ್ ತನ್ನ ಟೇಪು ಹಾಕಿದ. ಅದರಲ್ಲಿ ಹಾಡು ತೇಲಿ ಬರುತ್ತಿದ್ದರೆ ಈತ ಮನೆಬಾಗಿಲು ತೆಗೆದು ನನ್ನನ್ನು ಸ್ವಾಗತಿಸಿದ ಪರಿ ನೋಡಬೇಕಿತ್ತು. ಉನ್ಮಾದದಿಂದ ಅಕ್ಷರಶಃ ಹುಚ್ಚನಂತೆಯೇ ನಗುತ್ತಿದ್ದ. ಇದು ಅವತ್ತು ನಡೆದುಹೋದ ಘಟನೆ.

ನಾನು ರೆಬೆಲ್ ಬಿಲಿಯನೇರ್' ಮಾಡಿದಾಗ ಅದಕ್ಕೆ ಈ ಡ್ರೈವರ್‌ನೊಂದಿಗಿನ ಪ್ರಸಂಗವನ್ನೇ ಕಾಪಿ ಮಾಡಿದೆ. ವಯೋವೃದ್ಧ ಕ್ಯಾಬ್ ಡ್ರೈವರ್ ವೇಷದಲ್ಲಿ ಯುವ ಸ್ಪರ್ಧಿಗಳನ್ನು ಚಿತ್ರೀಕರಣ ನಡೆಯುತ್ತಿದ್ದ ಕಟ್ಟಡಕ್ಕೆ ಕರೆತರುವ ಪಾತ್ರ ವಹಿಸಿದ್ದೆ. ಆ ಹುಡುಗರು ಹಿನ್ನೆಲೆಯಲ್ಲಿ ಏನು ಹೇಳುತ್ತಿದ್ದರು ಎಂಬುದನ್ನೆಲ್ಲ ಕಿವಿಗೆ ಹಾಕಿಕೊಂಡೆ. ಮುದುಕನ ವೇಷದಲ್ಲಿದ್ದ ನನ್ನನ್ನು ಅವರು ನಡೆಸಿಕೊಂಡ ರೀತಿಯನ್ನೂ ಗಮನಿಸಿದೆ. ಅವರ ವರ್ತನೆಗಳಿಂದಲೂ ಒಂದು ಪಾಠ ಎತ್ತಿಟ್ಟುಕೊಂಡೆ. ಗೌರವ ಅನ್ನೋದು ನಾವು ಎಲ್ಲರ ಜತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬುದಾಗಿರುತ್ತದೆಯೇ ಹೊರತು ನಮಗೆ ಬೇಕಾದವರನ್ನು ಇಂಪ್ರೆಸ್ ಮಾಡುವುದೇ ಗೌರವ ನೀಡಿಕೆ ಅಲ್ಲ ಅನ್ನೋದು ಅರ್ಥವಾಯ್ತು.

ಈ ಜಪಾನಿಯರಿದ್ದಾರಲ್ಲ? ಅವರು ತಮ್ಮ ಕಂಪನಿಯ ದೀರ್ಘಾವಧಿ ಗುರಿ ಸಾಧನೆಗೆ ಆಸ್ಥೆಯಿಂದ ದುಡಿಯುತ್ತಾರೆ. ಆ ಕ್ಷಣದಲ್ಲಿ ಏನೋ ಮಾಡಿ ಬೀಗುವುದು ಅವರ ಜಾಯಮಾನವಲ್ಲ. ಅವರಿಗೆ ಒಂದು ದೃಢವಾದ ಬೆಳವಣಿಗೆ ಬೇಕು. ಒಂದು ಹಂತಕ್ಕೆ ವರ್ಜಿನ್ ಮ್ಯೂಸಿಕ್‌ಗೆ ಪಾಲುದಾರರು ಬೇಕು ಎಂಬ ಅನ್ವೇಷಣೆಯಲ್ಲಿ ನಾನಿದ್ದೆ. ಬಹಳಷ್ಟು ಅಮೆರಿಕನ್ನರೊಂದಿಗೆ ಮಾತುಕತೆಯಾಯಿತು. ಪಾಲುದಾರಿಕೆಗೆ ಮುಂದಾದವರೆಲ್ಲ ಉದ್ದಿಮೆಯಲ್ಲಿ ಸಕ್ರಿಯರಾಗಿರಲು ಬಯಸುತ್ತಿದ್ದರು. ಅಂದರೆ ಕಂಪನಿಯ ಚಟುವಟಿಕೆಯಲ್ಲಿ ಅವರೂ ತೊಡಗಿಸಿಕೊಳ್ಳುವುದಕ್ಕೆ ಆಸಕ್ತಿ ವಹಿಸಿದ್ದರು. ಆದರೆ ನನಗೆ ಹಣ ಹೂಡಿ, ನಂತರ ತಮ್ಮ ಪಾಡಿಗೆ ತಾವಿರುವ ಸೈಲೆಂಟ್ ಪಾರ್ಟ್‌ನರ್‌ಗಳು ಬೇಕಿತ್ತು. ಆ ಕ್ಷಣದಲ್ಲಿ ನೆನಪಾಗಿದ್ದು, ನನಗೆ ಈ ಹಿಂದೆ ಹಿತನುಡಿಗಳನ್ನು ಆಡಿದ್ದ ಜಪಾನಿನ ಉದ್ದಿಮೆದಾರರು.

ಅವರೊಂದಿಗೆ ಪಾಲುದಾರಿಕೆ ಹೇಗಿರುತ್ತದೆ ಎಂಬ ಪ್ರಶ್ನೆಯನ್ನು ಜಪಾನಿ ಉದ್ದಿಮೆದಾರರೊಬ್ಬರ ಮುಂದಿಟ್ಟೆ. ಅವರು ತುಂಬಾ ಆಸಕ್ತಿಯಿಂದ ವಿವರಣೆ ನೀಡಿದರು. ನೋಡಿ, ಬ್ರಾನ್‌ಸನ್. ನೀವು ಅಮೆರಿಕ ಹುಡುಗಿಯನ್ನು ಮದುವೆಯಾಗಬಯಸುತ್ತೀರೊ? ಜಪಾನಿನ ಹುಡುಗಿಯನ್ನೋ? ಅಮೆರಿಕ ಮಡದಿ ಅಂತಂದ್ರೆ ವಿಚ್ಛೇದನ, ಪರಿಹಾರ ಧನ ಮುಂತಾದವೆಲ್ಲ ತಲೆಬಿಸಿ ಇರುತ್ತದೆ. ಜಪಾನಿ ಮಡದಿ ಅಂದರೆ ತಮ್ಮ ಪಾಡಿಗೆ ಮೌನದಿಂದಿರುವವರು.' ಒಳ್ಳೆಯವರಾಗಿರೋದು, ಮೌನದಿಂದಿರೋದು ಅಂದರೆ ದುರ್ಬಲರಾಗಿರೋದು ಎಂದರ್ಥವಲ್ಲ. ಅದು ಅರಿವಿಗೆ ಬರುತ್ತಲೇ ನಾನು ಆ ಕಂಪನಿಯೊಂದಿಗೆ ಪಾಲುದಾರಿಕೆಗೆ ಮುಂದಾದೆ. ಆದರೆ, ಇವೆಲ್ಲದಕ್ಕಿಂತ ಮಹಾನ್ ಪಾಠವೊಂದನ್ನು ಕಲಿತಿದ್ದು, ಜೀವನದಲ್ಲಿ ನಾನು ಹಲಾಲ್‌ಟೋಪಿ ಕೆಲಸ ಮಾಡಿ ಸಿಕ್ಕಿಬಿದ್ದಾಗ. ಭಂಡತನಕ್ಕೆ ಬಿದ್ದು ಮಾಡುವ ಬಹಳಷ್ಟು ಉಪದ್ವ್ಯಾಪಗಳು ಭಾರಿ ಬೆಲೆ ತೆರುವಂತೆ ಮಾಡಿಬಿಡುತ್ತವೆ. 1970ರ ದಶಕದಲ್ಲಿ ನಮ್ಮಲ್ಲಿ ಬಹಳಷ್ಟು ಜನರಿಗೆ ಹಿಪ್ಪಿ' ಪಾಳಯದಲ್ಲಿ ಗುರುತಿಸಿಕೊಳ್ಳುವ, ಕಾಯಿದೆ ಮುರಿಯುವುದರಲ್ಲಿ ಖುಷಿಪಡುವ ವಿಕ್ಷಿಪ್ತ ಮಾನಸಿಕತೆ ಬೆಳೆದಿತ್ತು. ರೇಡಿಯೊ ಸ್ಟೇಶನ್‌ಗಳು ಪರವಾನಗಿ ಇಲ್ಲದ ಪ್ರದೇಶಗಳಿಗೂ ತಮ್ಮ ತರಂಗಗಳನ್ನು ನುಗ್ಗಿಸುವುದು, ಜನರು ಅಫೀಮಿನ ಖುಷಿಯಲ್ಲಿ ತೇಲಾಡುವುದು ಇಂಥ ಉನ್ಮಾದಗಳ ಮಧ್ಯೆ ನನ್ನದು ಹೇಳಿಕೊಳ್ಳುವಂಥ ಹಗರಣವೇನೂ ಅಲ್ಲ ಅಂತ ಆ ಕ್ಷಣಕ್ಕೆ ಅನಿಸಿತ್ತು.

ವರ್ಜಿನ್ ಕಂಪನಿಯು ಕೈಗೆಟಕುವ ಬೆಲೆಯಲ್ಲಿ ಧ್ವನಿಸುರುಳಿಗಳನ್ನು ಮಾರುವುದರಲ್ಲಿ ಹೆಸರುವಾಸಿಯಾಗಿತ್ತು. 1971ರ ವೇಳೆ ಬೆಲ್ಜಿಯಂನಿಂದ ನಮಗೆ ಭಾರಿ ಪ್ರಮಾಣದ ಬೇಡಿಕೆ ಬಂತು. ಬೆಲ್ಜಿಯಂಗೆ ರೆಕಾರ್ಡ್‌ಗಳನ್ನು ರಫ್ತು ಮಾಡಿದರೆ ಅದಕ್ಕಾಗಿ ಅಲ್ಲಿ ತೆರಿಗೆ ಪಾವತಿಸಬೇಕಿರಲಿಲ್ಲ. ಈ ತೆರಿಗೆ ಮುಕ್ತ ರೆಕಾರ್ಡ್‌ಗಳನ್ನು ನಾನಾ ಕಂಪನಿಗಳಿಂದ ಖರೀದಿಸಿ ಅವನ್ನೆಲ್ಲ ವ್ಯಾನ್ ಒಂದಕ್ಕೆ ಹಾಕಿಕೊಂಡು ಸಾಗಿಸುವ ಕೆಲಸಕ್ಕೆ ನಾನು ಮುಂದಾದೆ. ಫ್ರಾನ್ಸ್‌ಗೆ ತಲುಪಿ ಅಲ್ಲಿಂದ ಮುಂದೆ ಬೆಲ್ಜಿಯಂ ಮುಟ್ಟುವುದು ನನ್ನ ಯೋಜನೆಯಾಗಿತ್ತು. ಆದರೆ, ಫ್ರಾನ್ಸ್‌ನಲ್ಲಿ ಇದಕ್ಕಾಗಿ ತೆರಿಗೆ ಪಾವತಿಸಬೇಕಾಗಿ ಬರುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ.

ಡೋವರ್‌ನಲ್ಲಿ ಕಸ್ಟಮ್ ಅಧಿಕಾರಿಗಳು ನಾನು ಹೊಂದಿದ್ದ ರೆಕಾರ್ಡ್‌ಗಳ ಸಂಖ್ಯೆಯನ್ನು ನಮೂದಿಸಿದ ದಾಖಲೆ ಪತ್ರದ ಮೇಲೆ ಮೊಹರು ಒತ್ತಿದರು. ಆದರೆ ಫ್ರಾನ್ಸ್‌ನಲ್ಲಿ ಕಾಲಿರಿಸುತ್ತಲೇ ಅಲ್ಲಿನ ಅಧಿಕಾರಿಗಳು ನಾನದನ್ನು ಫ್ರಾನ್ಸ್‌ನಲ್ಲಿ ಮಾರುವುದಿಲ್ಲ ಎಂಬುದಕ್ಕೆ ಸಾಕ್ಷಿ ತೋರಿಸುವಂತೆ ಕೇಳಿದರು. ನಾನು ಬೆಲ್ಜಿಯಂನಿಂದ ನನಗೆ ಬಂದ ಬೇಡಿಕೆ ಪತ್ರವನ್ನು ತೋರಿಸಿದೆನಾದರೂ ಅವರಿಗದು ಸಾಕಾಗಲಿಲ್ಲ. ಹೊಂದಿರುವ ಸ್ಟಾಕ್‌ಗೆ ತೆರಿಗೆ ಪಾವತಿಸಬೇಕು ಎಂಬುದು ಅವರ ವಾದ. ಅದಕ್ಕೊಪ್ಪದ ನಾನು ಹಾಗೆಯೇ ಹಿಂತಿರುಗುವುದಾಗಿ ಹೇಳಿದೆ. ರೆಕಾರ್ಡ್‌ಗಳೊಂದಿಗೆ ಡೋವರ್‌ಗೆ ಹಿಂತಿರುಗುತ್ತಿದ್ದಾಗ ಒಂದು ಭಾನಗಡಿ ಐಡಿಯಾ ತಲೆಗೆ ಬಂತು. ನನ್ನ ಬಳಿ ಈಗ ಕಸ್ಟಮ್ ಅಧಿಕಾರಿಗಳು ಮೊಹರು ಒತ್ತಿದ ತೆರಿಗೆಮುಕ್ತ ರೆಕಾರ್ಡ್‌ಗಳಿದ್ದವು. ಅದನ್ನು ಉಪಯೋಗಿಸಿಕೊಂಡು ಅಂಚೆ ಮೂಲಕ ಹಾಗೂ ವರ್ಜಿನ್ ಶಾಪ್‌ಗಳ ಮೂಲಕ ತೆರಿಗೆ ಕಟ್ಟದೆ ಮಾರಾಟ ಮಾಡಿಬಿಡಬಹುದು ಎಂಬುದು ಹೊಳೆಯಿತು. ಅದು ಕಾನೂನಿಗೆ ವಿರುದ್ಧವಾದ ಕೃತ್ಯವಾಗಿದ್ದರೂ ಅದರಿಂದ 5 ಸಾವಿರ ಪೌಂಡ್‌ಗಳಷ್ಟು ಲಾಭವಾಗುತ್ತಿದ್ದರಿಂದ ಹಾಗೊಂದು ಅಕ್ರಮಕ್ಕೆ ನಾನು ಮುಂದಾದೆ. ಅಲ್ಲದೇ ಆ ಸಮಯಕ್ಕೆ ವರ್ಜಿನ್ ಕಂಪನಿಯ ಬ್ಯಾಂಕ್ ಸಾಲವೂ 15 ಸಾವಿರ ಪೌಂಡ್ ಇತ್ತು. ದುರಾಸೆಗೆ ಬೀಳದೇ ಅಷ್ಟಕ್ಕೆ ಸುಮ್ಮನಾಗಿದ್ದರೆ ಏನಾಗುತ್ತಿರಲಿಲ್ಲವೇನೋ? ಆದರೆ ಇದನ್ನೇ ಉಪಯೋಗಿಸಿಕೊಂಡು ರಫ್ತು ಮಾಡಲು ಹೊರಟಿರುವುದಾಗಿ ಹೇಳುತ್ತ ನಾಲ್ಕು ಬಾರಿ ಫ್ರಾನ್ಸ್‌ವರೆಗೆ ಹೋಗಿ ಸೀಲು ಹಾಕಿಸಿಕೊಂಡು ವಾಪಾಸ್ ಬಂದೆ. ಆ ಸೀಲು ಹೊತ್ತ ರೆಕಾರ್ಡ್‌ಗಳನ್ನು ಮಾರಾಟ ಮಾಡಿ ಕಮಾಯಿಸತೊಡಗಿದೆ.

ಆದರೆ ಇವನ್ನೆಲ್ಲ ಗಮನಿಸುವ ಕಣ್ಣುಗಳಿರುತ್ತವೆ ಎಂಬುದನ್ನು ನಾನು ಮರೆತೇಬಿಟ್ಟಿದ್ದೆ. ನಮ್ಮ ದಾಸ್ತಾನಿನ ಮೇಲೆ ದಾಳಿ ನಡೆಯಲಿದೆ ಎಂಬ ವರ್ತಮಾನ ಬಂತು. ತಕ್ಷಣವೇ ಕಾರ್‍ಯಪ್ರವೃತ್ತರಾಗಿ ಅಲ್ಲಿದ್ದ ತೆರಿಗೆಮುಕ್ತ ಸೀಲು ಹೊತ್ತಿದ್ದ ರೆಕಾರ್ಡ್‌ಗಳನ್ನೆಲ್ಲ ಬೇರೆಡೆ ಸ್ಥಳಾಂತರಿಸಲಾಯಿತು. ದಾಳಿಗೆ ಬಂದವರಿಗೆ ದಾಸ್ತಾನು ಮಳಿಗೆಯಲ್ಲೇನೂ ಸಿಗಲಿಲ್ಲ. ಆದರೆ, ಅನಿರೀಕ್ಷಿತವಾಗಿ ಅವರು ಅಂಗಡಿಗಳ ಮೇಲೂ ದಾಳಿ ಮಾಡಿ ಅಲ್ಲಿದ್ದ ರೆಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು. ನಾನು ಜೈಲು ಕಂಬಿಗಳ ಹಿಂದಿದ್ದೆ!

ನನ್ನ ತಂದೆ-ತಾಯಿ ಪದೇ ಪದೆ ಹೇಳುತ್ತಿದ್ದರು. ನಮ್ಮ ಇಡೀ ಜೀವನದಲ್ಲಿ ನಾವು ಕಾಪಾಡಿಕೊಂಡು ಬಂದಿರುವುದು ಒಳ್ಳೆ ಹೆಸರನ್ನು. ನೀನು ಯಾವತ್ತಾದರೊಮ್ಮೆ ಶ್ರೀಮಂತನಾಗಬಹುದು. ಆದರೆ, ಜನರಿಗೆ ನಿನ್ನ ಮೇಲೆ ವಿಶ್ವಾಸ ಬಿದ್ದು ಹೋಯಿತು ಎಂದಾದರೆ ಶ್ರೀಮಂತನಾಗಿದ್ದು ಯಾವ ಸಾರ್ಥಕತೆಯೂ ಇಲ್ಲ ಎಂದವರು ಹೇಳುತ್ತಿದ್ದುದು ಕಿವಿಯಲ್ಲಿ ಗುಂಯ್‌ಗುಟ್ಟಿತು. ಪ್ಲಾಸ್ಟಿಕ್ ಮ್ಯಾಟ್‌ನ ಮೇಲೆ ಹಳೇ ಕಂಬಳಿ ಹೊದ್ದು ಮಲಗಿದ್ದ ಆ ಕ್ಷಣದಲ್ಲೇ ನಿರ್ಧರಿಸಿಬಿಟ್ಟೆ, ಜೀವನದಲ್ಲಿ ಇನ್ನೇನೇ ಮಾಡಿದರೂ ಸರಿದಾರಿಯಲ್ಲಿ ಸಾಗುತ್ತೇನೆ. ಮೋಸದ ದಂಧೆಗೆ ಕೈಹಾಕಲಾರೆ 'ಅಂತ.

ಅವತ್ತು ಬೆಳ್ಳಂಬೆಳಗ್ಗೆ ಕೋರ್ಟ್‌ಗೆ ಬಂದು ನನ್ನ ಬೆಂಬಲಕ್ಕೆ ಆತುಕೊಂಡವರು ಯಾರು ಅಂದುಕೊಂಡಿರಿ? ನನ್ನಮ್ಮ! ಕಾನೂನಿನ ಸಮರ ಎದುರಿಸುವುದಕ್ಕೆ ಲಾಯರ್‌ಗೆ ಹಣ ಕೊಡಲೂ ನನ್ನ ಬಳಿ ಏನೂ ಇರಲಿಲ್ಲ. ಜಾಮೀನು ಪಡೆಯಲು ಬರೋಬ್ಬರಿ 30 ಸಾವಿರ ಪೌಂಡ್ ನಿಗದಿಪಡಿಸಿಬಿಟ್ಟಿದ್ದರು ಜಡ್ಜ್ ಸಾಹೇಬರು. ಅಮ್ಮ ಆ ಹಣದ ಬದಲಾಗಿ ಮನೆಯನ್ನೇ ಅಡವಿಟ್ಟಳು. ನ್ಯಾಯಾಲಯದಲ್ಲಿ ಆಕೆ ನನಗೆದುರಾದಾಗ ಇಬ್ಬರೂ ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆವು. ಲಂಡನ್‌ಗೆ ಟ್ರೇನ್‌ನಲ್ಲಿ ವಾಪಸಾಗುತ್ತಿರುವಾಗ ಅಮ್ಮ ಹೇಳಿದಳು- ರಿಕಿ, ಈಗ ನೀನೊಂದು ಪಾಠ ಕಲಿತ ಹಾಗಾಯ್ತು. ಇನ್ನು ಅಳುತ್ತಾ ಕೂರಬೇಡ. ಮತ್ತೆ ಮೊದಲಿನಂತೆ ಮೇಲೇಳು'.

ಆನಂತರ ನ್ಯಾಯಾಲಯದ ಹೊರಗೆ ಕೇಸು ಇತ್ಯರ್ಥಗೊಳಿಸಿಕೊಳ್ಳಲಾಯಿತು. ಕ್ರಮವಾಗಿ ನಾನು ಗಳಿಸಿದ ಲಾಭದ ಮೂರು ಪಟ್ಟು ಹಣವನ್ನು ಕಕ್ಕಬೇಕಾಯಿತು. ಆಗ ಸಿಟ್ಟು ಬರಲಿಲ್ಲ. ಕಾನೂನಿಗೆ ಅವಿಧೇಯತೆ ತೋರಿದ್ದಕ್ಕೆ ನಾನು ತೆರಬೇಕಾದ ಬೆಲೆ ಇದು ಎಂದುಕೊಂಡೆ. ಅದೆಲ್ಲ ಆದ ನಂತರವೂ ಜೀವನದಲ್ಲಿ ಹಣ ಮಾಡುವುದು ಎಂಬ ಗುರಿಯಿಂದ ನಾನೇನೂ ವಿಚಲಿತನಾಗಲಿಲ್ಲ. ಆದರೆ, ಎಲ್ಲವನ್ನೂ ಕಾನೂನುಬದ್ಧವಾಗಿಯೇ ಸಾಧಿಸಬೇಕು ಎಂಬುದು ಮಾತ್ರ ಅಚಲ ನಿರ್ಧಾರವಾಗಿತ್ತು. ಆ ಕನಸಿನ ಬೆನ್ನಬಿದ್ದು ನನ್ನ ಇಡೀ ತಂಡ ಕೆಲಸ ಮಾಡಿತು. ವರ್ಜಿನ್ ಕಂಪನಿಯ ಹೊಸ ಹೊಸ ಅಂಗಡಿಗಳನ್ನು ತೆರೆಯುತ್ತ ನಮ್ಮ ವ್ಯಾಪಾರ ವೃದ್ಧಿಗೊಳ್ಳತೊಡಗಿತು. ಹಣ ಮಾಡಬೇಕು, ಆದರೆ ಗೌರವ ಕಾಪಿಟ್ಟುಕೊಳ್ಳುವುದು ಎಲ್ಲಕ್ಕಿಂತ ಮುಖ್ಯ ಎಂಬ ಪಾಲಿಸಿಯನ್ನು ಅಂದಿನಿಂದಲೇ ಪಾಲಿಸಿಕೊಂಡು ಬರತೊಡಗಿದೆ.

ಬಿಜಿನೆಸ್ ಆರಂಭಿಸಬೇಕು ಎಂದು ನನ್ನೆದುರು ಸಲಹೆಗಾಗಿ ನಿಂತ ಯಾರಿಗಾದರೂ ನಾನು ಹೇಳುವುದಿಷ್ಟೆ- ನಿಮ್ಮ ಎಲ್ಲ ವ್ಯವಹಾರಗಳಲ್ಲಿ ನೇರವಂತಿಕೆ ಇರಲಿ. ದುಡ್ಡು ಮಾಡಿ, ಆದರೆ ದಗಾ ಹಾಕಲು ಹೋಗಬೇಡಿ. ನಿಯತ್ತಿನಿಂದ ಗಳಿಸಿದ್ದನ್ನು ಯಾರೂ ಕಿತ್ತುಕೊಳ್ಳಲಾರರು'. ಇದೇ ನಿಯಮವನ್ನು ಖಾಸಗಿ ಬದುಕಿಗೂ ಅನ್ವಯಿಸಿಕೊಳ್ಳಬೇಕು. ರಾತ್ರಿ ನಿದ್ರೆ ಬಾರದಂತೆ ಮಾಡುವ ಯಾವ ಕೆಲಸಕ್ಕೂ ಮುಂದಾಗಬಾರದು' ಎಂಬುದು ಬದುಕಿನ ಸೂತ್ರ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more